ಜನರಿಂದ ಆಯ್ಕೆ ಆಗುವವರೆಗೆ ಸಚಿವರಾಗುವಂತಿಲ್ಲ

ಎಚ್ ವಿಶ್ವನಾಥ್ ಅವರಿಗೆ ಭಾರಿ ಆಘಾತ ನೀಡಿದ ಹೈಕೋರ್ಟ್

ಮರುಆಯ್ಕೆ ಆಗುವವರೆಗೂ ಸಚಿವರಾಗಲು ಅರ್ಹರಲ್ಲ

– ಸಚಿವ ಸ್ಥಾನಕ್ಕೆ ನಾಮನಿರ್ದೇಶನ ಮಾಡುವ ಮುನ್ನ ಅನರ್ಹತೆ ಪರಿಗಣಿಸಿ: ಹೈಕೋರ್ಟ್ ಶಿಫಾರಸು

 

ಬೆಂಗಳೂರು: ವಿಧಾನ ಪರಿಷತ್ ಸದಸ್ಯನಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ಸಂಪುಟ ಸೇರುವ ಆಸೆ ಹೊಂದಿದ್ದ ಎಚ್ ವಿಶ್ವನಾಥ್ ಅವರಿಗೆ ಭಾರಿ ಆಘಾತ ಎದುರಾಗಿದೆ.

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಚಿವರಾಗುವ ನಿರೀಕ್ಷೆ ಹೊಂದಿದ್ದ ಎಚ್. ವಿಶ್ವನಾಥ್ ಅವರು ಸಚಿವರಾಗಲು ಅನರ್ಹರೆಂದು ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿದೆ. ಸಂವಿಧಾನದಡಿಯಲ್ಲಿ ಮರು ಆಯ್ಕೆಯಾಗುವವರೆಗೂ ಅವರು ಸಚಿವರಾಗಲು ಅರ್ಹತೆ ಪಡೆಯುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಸಂವಿಧಾನದ 164 (1ಬಿ) ಮತ್ತು 361 (b) ವಿಧಿಗಳ ಅಡಿ ಮುಂದೆ ಅವರು ವಿಧಾನಸಭೆಗೆ ಆಯ್ಕೆಯಾಗುವವರೆಗೂ ಸಚಿವರಾಗಲು ಎಚ್ ವಿಶ್ವನಾಥ್ ಅವರಿಗೆ ಅರ್ಹತೆ ಇಲ್ಲ ಎಂದು ಅದು ಹೇಳಿದೆ.

ಆರ್. ಶಂಕರ್ ಮತ್ತು ಎಂಟಿಬಿ ನಾಗರಾಜ್ ಅವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಇವರಿಬ್ಬರೂ ವಿಧಾನಸಭೆಯಿಂದ ಎಂಎಲ್‌ಸಿಗಳಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಅವರು ಸಚಿವರಾಗಲು ಅನರ್ಹರಾಗುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಎಂಟಿಬಿ ನಾಗರಾಜ್ ಮತ್ತು ಎಚ್ ವಿಶ್ವನಾಥ್ ಇಬ್ಬರೂ ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಆದರೆ ಆರ್ ಶಂಕರ್ ಅವರು ರಾಣೆಬೆನ್ನೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಬದಲಾಗಿ ಅವರನ್ನು ಬಿಜೆಪಿ ವಿಧಾನಪರಿಷತ್‌ಗೆ ಆಯ್ಕೆ ಮಾಡಿತ್ತು.

ಮರು ಆಯ್ಕೆಯಾದ ಬಳಿಕವಷ್ಟೇ ಸಾಧ್ಯ
ವಿಶ್ವನಾಥ್ ಅವರನ್ನು ವಿಧಾನಪರಿಷತ್‌ಗೆ ನಾಮನಿರ್ದೇಶನ ಮಾಡಲಾಗಿದೆ. ಅನರ್ಹ ಶಾಸಕರು ಚುನಾವಣೆಯಲ್ಲಿ ಮರು ಆಯ್ಕೆಯಾದ ಬಳಿಕವಷ್ಟೇ ಸಚಿವರಾಗಲು ಅರ್ಹತೆ ಪಡೆಯಲಿದ್ದಾರೆ. ಹಿಂಬಾಗಿಲಿನಿಂದ ಸಚಿವರಾಗಲು ಅವಕಾಶ ನೀಡಬಾರದು ಎಂದು ಮೂವರು ಅನರ್ಹ ಶಾಸಕರನ್ನು ಸಚಿವರನ್ನಾಗಿ ಮಾಡುವಂತಿಲ್ಲ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ವಿಶ್ವನಾಥ್ ನಾಮನಿರ್ದೇಶಿತ ಎಂಎಲ್‌ಸಿ
ವಿಶ್ವನಾಥ್ ಅವರು ಸಾಹಿತ್ಯ ಕ್ಷೇತ್ರದ ವಿಭಾಗದಿಂದ ವಿಧಾನಪರಿಷತ್‌ಗೆ ನಾಮನಿರ್ದೇಶನಗೊಂಡಿದ್ದಾರೆ. ಹೀಗಾಗಿ ಅವರು ಸಚಿವ ಸಂಪುಟ ಸೇರ್ಪಡೆಯಾಗಲು ಅರ್ಹರಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ಹೈಕೋರ್ಟ್‌ನಿಂದ ತಮ್ಮ ಪರವಾಗಿ ಆದೇಶ ನಿರೀಕ್ಷಿಸಿದ್ದ ಎಚ್ ವಿಶ್ವನಾಥ್ ತೀವ್ರ ನಿರಾಶೆಗೊಂಡಿದ್ದಾರೆ. ಹೀಗಾಗಿ ಅವರು ಯಾರ ಫೋನ್ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದೆ.

ವಿಶ್ವನಾಥ್ ಅನರ್ಹತೆ ಪರಿಗಣಿಸಿ
ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಸಚಿವ ಸ್ಥಾನಕ್ಕೆ ಹೆಸರು ನಾಮನಿರ್ದೇಶನ ಮಾಡುವ ಮುನ್ನ ವಿಶ್ವನಾಥ್ ಅವರ ಅನರ್ಹತೆ ಪರಿಗಣಿಸುವಂತೆ ನ್ಯಾಯಾಲಯ ಶಿಫಾರಸು ಮಾಡಿದೆ.

ವಕೀಲ ಪ್ರಶಾಂತ್ ಭೂಷಣ್ ವಾದ

ಮೂವರು ನೂತನ ಎಂಎಲ್‌ಸಿಗಳಾದ ಎಚ್‌. ವಿಶ್ವನಾಥ್‌, ಆರ್‌. ಶಂಕರ್‌ ಹಾಗೂ ಎಂ.ಟಿ.ಬಿ. ನಾಗರಾಜ್‌ ಅವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಕೋರಿ ವಕೀಲ ಎ.ಎಸ್‌. ಹರೀಶ್‌ ಕುಮಾರ್‌ ಮತ್ತಿತರರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದರು. ಅರ್ಜಿದಾರರ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದಿಸಿದ್ದರು. ಈ ಮೂವರೂ ಶಾಸಕರು ಜನರಿಂದ ನೇರವಾಗಿ ಆಯ್ಕೆಯಾಗಿಲ್ಲ. ಇವರು ಉಪ ಚುನಾವಣೆಯಲ್ಲಿ ಸೋತಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಅನರ್ಹರಾದವರು ಜನರಿಂದ ಮರು ಆಯ್ಕೆಯಾಗದೆ ಅವರು ಸಚಿವರಾಗುವಂತಿಲ್ಲ ಎಂದು ಅವರು ಹೇಳಿದ್ದರು.ಪಿಐಎಲ್‌ ಬಗ್ಗೆ ಶುಕ್ರವಾರ ವಿಚಾರಣೆ ಪೂರ್ಣಗೊಳಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ‌ ನೇತೃತ್ವದ ವಿಭಾಗೀಯ ಪೀಠ ಸೋಮವಾರಕ್ಕೆ ಆದೇಶ ಕಾಯ್ದಿರಿಸಿತ್ತು.

ಆರ್ಟಿಕಲ್ 164 (1ಬಿ) ಏನು ಹೇಳುತ್ತದೆ?

ಸರಳವಾಗಿ ಹೇಳುವುದಾದರೆ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ವ್ಯಕ್ತಿಯೊಬ್ಬರು ರಾಜ್ಯದ ವಿಧಾನಸಭೆ ಅಥವಾ ಪರಿಷತ್‌ ಸದಸ್ಯರಾಗಿರುವಾಗ 10ನೇ ಪರಿಚ್ಛೇದದ 2ನೇ ಕಲಂ ಅಡಿಯಲ್ಲಿ ಅನರ್ಹರಾದಲ್ಲಿ, ಅಂತಹ ಸದಸ್ಯರು, ಅವರು ಅನರ್ಹವಾದ ದಿನದಿಂದ ಸದಸ್ಯತ್ವ ಅವಧಿ ಮುಕ್ತಾಯವಾಗುವವರೆಗೆ ಅಥವಾ ವಿಧಾನ ಸಭೆ/ಪರಿಷತ್‌ ಚುನಾವಣೆಗೆ ಮತ್ತೊಮ್ಮೆ ‘ಸ್ಪರ್ಧಿಸಿ ಜಯಶಾಲಿ ಎಂದು ಘೋಷಿತರಾಗುವವರೆಗೆ’ ಅವರು ಮತ್ತೆ ಸಚಿವರಾಗುವಂತಿಲ್ಲ. ಈ ಷರತ್ತುಗಳಲ್ಲಿ ಯಾವುದು ಮೊದಲು ಮುಕ್ತಾಯವಾಗುತ್ತದೋ ಅಂದಿನಿಂದ ಅವರು ಮತ್ತೆ ಸಚಿವರಾಗಬಹುದು.

Donate Janashakthi Media

One thought on “ಜನರಿಂದ ಆಯ್ಕೆ ಆಗುವವರೆಗೆ ಸಚಿವರಾಗುವಂತಿಲ್ಲ

Leave a Reply

Your email address will not be published. Required fields are marked *