ಜನರಿಗೆ ‘ಕರೆಂಟ್ ಶಾಕ್’ ನೀಡಿದ ಸರಕಾರ

ಕೊರೊನಾ, ಲಾಕ್ಡೌನ್ ಹಾಗೂ ಅತೀವೃಷ್ಟಿ ಮಳೆಹಾನಿಯಿಂದ ಸಂಕಷ್ಟ ಎದುರಿಸುತ್ತಿದ್ದ ಜನರಿಗೆ ಈಗ ವಿದ್ಯುತ್ ದರ ಏರಿಕೆಯ ಸಂಕಷ್ಟವನ್ನು ಎದುರಿಸುವಂತಾಗಿದೆ. ರಾಜ್ಯ ಸರಕಾರ ಸಾರ್ವಜನಿಕರಿಗೆ ಒಂದಿಲ್ಲೊಂದರಂತೆ ಬರೆಗಳನ್ನು  ಹಾಕುತ್ತಿದೆ. ಸರಕಾರದ ವಿದ್ಯತ್ ದರ ಏರಿಕೆಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.

ಕರ್ನಾಟಕ ವಿದ್ಯಚ್ಛಕ್ತಿ ನಿಯಂತ್ರಣ ನಿಯೋಗ ಕೆ.ಇ.ಆರ್.ಸಿ ಏನಿದೆ ಅದು 2020- 21 ನೇ ಸಾಲಿನ ವಿದ್ಯುತ್ ದರವನ್ನು ಪರಿಷ್ಕರಿಸಿ ಆದೇಶವನ್ನು ಹೊರಡಿಸಿದೆ. ಪ್ರತಿ ಯುನಿಟ್ ಗೆ 40 ಪೈಸೆಯಷ್ಟು ದರ ಹೆಚ್ಚಳವಾಗಿದೆ. ದರ ನಿಗದಿಗೆ ಮೊದಲ ಸ್ವಾಬ್ ನ್ನು 30 ಯುನಿಟ್ಗೆ ನಿಗದಿ ಪಡಿಸಲಾಗಿದೆ.  ಗೃಹ ಬಳಕೆ, ಕೈಗಾರಿಕಾ ಬಳಕೆ, ವಾಣಿಜ್ಯ ವಹಿವಾಟು ಎಂದು ವಿಭಾಗಿಸಿ ಪ್ರತ್ಯೇಕ ದರ ನಿಗದಿ ಪಡಿಸಲಾಗಿದೆ.

ಗೃಹ ಬಳಕೆಯಡಿ ಬೆಸ್ಕಾಂ ವ್ಯಾಪ್ತಿಯ ಬಿಬಿಎಂಪಿ ಹಾಗೂ ಇತರ ಪೌರಸಂಸ್ಥೆಗಳಲ್ಲಿ ಸರಕಾರಿ/ಧರ್ಮಾರ್ಥ ಸಂಸ್ಥೆಗಳು ನಡೆಸುವ ವಿದ್ಯಾಸಂಸ್ಥೆ/ಆಸ್ಪತ್ರೆಗಳಿಗೆ ಪ್ರತಿ ವಿದ್ಯುತ್‌ ಯೂನಿಟ್‌ಗೆ 25 ಪೈಸೆ ಹೆಚ್ಚಿಸಲಾಗಿದೆ. ಮಾಸಿಕ ವಿದ್ಯುತ್‌ ಬಳಕೆಯಡಿ 30 ಯೂನಿಟ್‌ವರೆಗೆ ದರವನ್ನು 3.75 ರೂ.ನಿಂದ 4 ರೂ., 31-100ರ ವರೆಗಿನ ಯೂನಿಟ್‌ಗೆ 5.20 ರೂ.ನಿಂದ 5.45 ರೂ.ಗೆ, 101-200 ಯೂನಿಟ್‌ವರೆಗೆ 6.75 ರೂ.ನಿಂದ 7 ರೂ.ಗೆ ಹಾಗೂ 200 ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್‌ಗೆ ವಿಧಿಸುತ್ತಿರುವ ದರ 7.80ರಿಂದ 8.05 ರೂ.ಗೆ ಏರಿಸಲಾಗಿದೆ. ಬೆಸ್ಕಾಂ ವ್ಯಾಪ್ತಿಯ ಗ್ರಾಮೀಣ ಗೃಹ ಬಳಕೆದಾರರಿಗೆ ಮೊದಲ 30 ಯೂನಿಟ್‌ವರೆಗಿನ ದರ 3.65 ರೂ.ನಿಂದ 3.90ಕ್ಕೆ ಏರಿಸಲಾಗಿದೆ. 31-100 ಯೂನಿಟ್‌ವರೆಗೆ 4.90 ರೂ.ನಿಂದ 5.15 ರೂ., 101-200 ಯೂನಿಟ್‌ವರೆಗೆ 6.45 ರೂ.ನಿಂದ 6.70 ಹಾಗೂ 200 ಮೇಲ್ಪಟ್ಟ ಬಳಕೆಗೆ 7.30 ರೂ.ನಿಂದ 7.55 ರೂ.ಗೆ ಏರಿಸಲಾಗಿದೆ.

ಬೆಸ್ಕಾಂ ಹೊರತುಪಡಿಸಿ ಉಳಿದ ಎಸ್ಕಾಂಗಳ ನಗರಪಾಲಿಕೆ/ ಪೌರ ಸಂಸ್ಥೆಗಳ ಗೃಹ ಬಳಕೆಯ ಮೊದಲ 30 ಯೂನಿಟ್‌ವರೆಗೆ 3.70 ರೂ.ನಿಂದ 3.95 ರೂ.ಗೆ ಏರಿಸಲಾಗಿದೆ. 31-100 ಯೂನಿಟ್‌ವರೆಗೆ 5.20 ರೂ.ನಿಂದ 5.45 ರೂ.ಗೆ, 101-200 ಯೂನಿಟ್‌ಗೆ 6.75 ರೂ.ನಿಂದ 7 ರೂ. ಹಾಗೂ 200 ಮೇಲ್ಪಟ್ಟ ಯೂನಿಟ್‌ ಬಳಕೆಗೆ 7.80 ರೂ.ನಿಂದ 8.05ಕ್ಕೆ ಹೆಚ್ಚಿಸಲಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಈ ದರಗಳು ಸ್ಲಾಬ್‌ವಾರು ಕ್ರಮವಾಗಿ 3.60 ರೂ.ನಿಂದ 3.85 ರೂ.ಗೆ, 4.90 ರೂ.ನಿಂದ 5.15 ರೂ.ಗೆ, 6.45 ರೂ.ನಿಂದ 6.70 ರೂ.ಗೆ ಹಾಗೂ 7.30 ರೂ.ನಿಂದ 7.55 ರೂ.ಗೆ ಹೆಚ್ಚಿಸಲಾಗಿದೆ.

ರಾಜ್ಯದ ಎಲ್ಲಾ ಎಲ್‌ಟಿ ಕೈಗಾರಿಕೆ ಬಳಕೆದಾರರಿಗೆ ದರ ಹೆಚ್ಚಳ ಪ್ರತಿ ಯೂನಿಟ್‌ಗೆ 25 ಪೈಸೆ ಇರಲಿದೆ. ಬೆಸ್ಕಾಂ ವ್ಯಾಪ್ತಿಯ ಬಿಬಿಎಂಪಿ/ಪೌರಸಂಸ್ಥೆಗಳ ಪ್ರದೇಶಗಳಲ್ಲಿ ಮೊದಲ 500 ಯೂನಿಟ್‌ಗೆ ಪ್ರತಿ ಯೂನಿಟ್‌ಗೆ 5.65 ರೂ.ನಿಂದ 5.90 ರೂ. ಹಾಗೂ 500 ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್‌ ದರ 6.95 ರೂ.ನಿಂದ 7.20 ರೂ.ಗೆ ಏರಿಕೆಯಾಗಿದೆ. ಬಿಬಿಎಂಪಿ ಹೊರಗಿನ ಪ್ರದೇಶಗಳಿಗೆ ಮೊದಲ 500 ಯೂನಿಟ್‌ವರೆಗೆ ಪ್ರತಿ ಯೂನಿಟ್‌ಗೆ 5.35 ರೂ.ನಿಂದ 5.60 ರೂ., 501-1000 ಯೂನಿಟ್‌ವರೆಗೆ 6.30 ರೂ.ನಿಂದ 6.55 ರೂ. ಹಾಗೂ 1000 ಯೂನಿಟ್‌ ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್‌ಗೆ 6.60 ರೂ.ನಿಂದ 6.85 ರೂ.ಗೆ ಏರಿಸಲಾಗಿದೆ.

ಎಚ್‌.ಟಿ. ಕೈಗಾರಿಕೆ ಬಳಕೆದಾರರಿಗೆ ಬಿಬಿಎಂಪಿ/ಪೌರಸಂಸ್ಥೆ ವ್ಯಾಪ್ತಿಯಲ್ಲಿ ಮೊದಲ ಒಂದು ಲಕ್ಷ ಯೂನಿಟ್‌ ಬಳಕೆಗೆ ಪ್ರತಿ ಯೂನಿಟ್‌ಗೆ 7.10 ರೂ.ನಿಂದ 7.35 ರೂ. ಹಾಗೂ ಒಂದು ಲಕ್ಷ ಯೂನಿಟ್‌ ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್‌ಗೆ 7.40 ರೂ.ನಿಂದ 7.65 ರೂ.ಗೆ ಹೆಚ್ಚಿಸಲಾಗಿದೆ. ಎಲ್‌ಟಿ ವಾಣಿಜ್ಯ ಬಳಕೆಗೆ ಬಿಬಿಎಂಪಿ/ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮೊದಲ 50 ಯೂನಿಟ್‌ ಬಳಕೆಗೆ ಪ್ರತಿ ಯೂನಿಟ್‌ಗೆ 8 ರೂ.ನಿಂದ 8.25 ರೂ. ಹಾಗೂ 50 ಯೂನಿಟ್‌ ಮೇಲ್ಪಟ್ಟ ಬಳಕೆಗೆ 9 ರೂ.ನಿಂದ 9.25 ರೂ.ಗೆ ಹೆಚ್ಚಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಈ ದರಗಳು ಕ್ರಮವಾಗಿ ಪ್ರತಿ ಯೂನಿಟ್‌ಗೆ 7.50 ರೂ.ನಿಂದ 7.75 ರೂ. ಹಾಗೂ 8.50 ರೂ.ನಿಂದ 8.75 ರೂ.ಗೆ ಏರಿಸಲಾಗಿದೆ.

ಸರಕಾರ ವಿದ್ಯುತ್ ದರ ಹೆಚ್ಚಳ ಮಾಡಲು ಕಾರಣವೇನೆಂದರೆ, ರಾಜ್ಯದ ಉಷ್ಣ ಸ್ಥಾವರದ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಮೂಲದ ಖರೀದಿ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಾರ್ಯಾಚರಣೆ ಮತ್ತು ನಿರ್ವಹಣೆ ಹಾಗೂ ಬಂಡವಾಳ ವೆಚ್ಚಕ್ಕಾಗಿ ಪಡೆಯುವ ಸಾಲದ ವೆಚ್ಚಗಳು ಕೂಡಾ ಹೆಚ್ಚಾಗುತ್ತಿವೆ. ಸಿಬ್ಬಂದಿ ವೇತನ, ನಿರ್ವಹಣೆ, ಮೇಲ್ವಿಚಾರಣೆ ಇತ್ಯಾದಿ ಸಾಲಗಳ ಮೇಲಿನ ಬಡ್ಡಿಯಿಂದಾಗಿ ವಿದ್ಯುತ್ ದರ ಹೆಚ್ಚಳ ಮಾಡುತ್ತಿರುವುದಾಗಿ ಸರಕಾರ ಹೇಳುತ್ತಿದೆ.  ರಾಜ್ಯ ಸರಕಾರ ವಿದ್ಯತ್ ದರ ಏರಿಸಿರುವುದರಿಂದ ಸಣ್ಣ ಮಧ್ಯಮ ಕೈಗಾರಿಕೆಗಳಿಗೆ  ಭಾರಿ ಹೊಡೆತ ಬೀಳಲಿದೆ ಎಂದು ಎಫ್.ಕೆ.ಸಿ.ಸಿ ಅಧ್ಯಕ್ಷರಾದ ಪೆರಿಕಲ್ ಸುಂದರ್ ರವರು ಪ್ರತಿಕ್ರೀಯಿಸಿದ್ದಾರೆ.

ದೇಶ ಮತ್ತು ರಾಜ್ಯಗಳು  ಆರ್ಥಿಕ ಸಂಕಷ್ಟದಲ್ಲಿವೆ ಇಂತಹ ಸಂದರ್ಭದಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿದ್ದು ಸರಿಯಾ ಕ್ರಮವಲ್ಲ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿದಿ ಡಿಕೆಶಿ ಒಂದು ವಾರದೊಳಗೆ ಆದೇಶವನ್ನು ವಿತ್ ಡ್ರಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ವಿದ್ಯುತ್ ದರ ಹೆಚ್ಚಳ ಮಾಡುವ ಮೂಲಕ ರಾಜ್ಯ ಬಿಜೆಪಿ ಸರಕಾರ ಜನತೆಯ ಮೇಲೆ ಹೊರೆ ಹೊರಸಿದೆ ಎಂದು ಸಿಪಿಐಎಂ ಆರೋಪಿಸಿದೆ.  ಲಾಕ್ಡೌನ್ ನಿಂದಾಗಿ ಆರ್ಥಿಕ ಪುನಶ್ಚೇತನ ಪೂರ್ಣ ಪ್ರಮಾಣದಲ್ಲಿ ಸುಧಾರಣೆ ಆಗದೆ ಇರುವಾಗ ಮತ್ತು ಜನತೆ ಉದ್ಯೋಗ ಇಲ್ಲದೆ ಸಂಕಷ್ಟುಗಳನ್ನು ಎದುರಿಸುತ್ತಿರುವ ಬೆನ್ನಲ್ಲೆ ಸರಕಾರ ಇಂತಹ ಜನವಿರೋಧಿ ನೀತಿಗೆ ಮುಂದಾಗಿದ್ದನ್ನು ವಿರೋಧಿಸುವುದಾಗಿ ಸಿಪಿಐಎಂ ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಕೆ.ಎನ್. ಉಮೇಶ್ ಪ್ರತಿಕ್ರೀಯಿಸಿದ್ದಾರೆ.

ರಾಜ್ಯ ಸರಕರಾದ ಖಾಸಗೀಕರಣದ ನೀತಿಗಳಿಂದಾಗಿ ಇಂದು ವಿದ್ಯುತ್ ದರ ಹೆಚ್ಚಾಗಲು ಕಾರಣವಾಗಿದೆ. ರೈತರು, ಸಣ್ಣ ಕೈಗಾರಿಕೆಗಳು, ಬಡಜನರಿಗೆ ಇನ್ನಷ್ಟು ಸಂಕಷ್ಟಗಳು ಎದುರಾಗಲಿವೆ. ಸರಕಾರ ಸಾರ್ವಜನಿಕರ ವಿರೊಧವನ್ನು ಪರಿಗಣಿಸಿ ವಿದ್ಯತ್ ದರ ಏರಿಸುವ ಪ್ರಸ್ತಾಪವನ್ನು ಕೈ ಬಿಡಬೇಕಿದೆ.

 

 

Donate Janashakthi Media

Leave a Reply

Your email address will not be published. Required fields are marked *