ಅಕ್ರಮ ಗಣಿಗಾರಿಕೆ: ಭಾಗಿಯಾದ ಎಲ್ಲರ ಮೇಲೂ ಕ್ರಮ, ನಷ್ಟ ವಸೂಲಿ ಅಗತ್ಯ

ಎಸ್‍.ವೈ.ಗುರುಶಾಂತ್

ಅಕ್ರಮ ಗಣಿಗಾರಿಕೆಯ ಮೊಕದ್ದಮೆಯಲ್ಲಿ ಆರೋಪಿಯಾಗಿದ್ದ ಮಾಜಿ ಸಚಿವ, ಶಾಸಕ ಗಾಲಿ ಜನಾರ್ದನರೆಡ್ಡಿ ಮತ್ತು ಇತರೆ ಮೂವರನ್ನು ತಪ್ಪಿಸ್ಥರು ಎಂದು ಸಿ.ಬಿ.ಐ.ನ ವಿಶೇಷ ನ್ಯಾಯಾಲಯ ತೀರ್ಪು ನೀಡಿ ಶಿಕ್ಷೆ ಕೊಟ್ಟಿರುವುದು ಸ್ವಾಗತಾರ್ಹ. ಗಣಿ ಹಗರಣ ಎನ್ನುವುದು ಕೇವಲ ಗಾಲಿ ಜನಾರ್ದನ ರೆಡ್ಡಿಯಿಂದ ಮಾತ್ರವೇ ನಡೆದಿತ್ತು ಎನ್ನುವುದು ಸೀಮಿತ ದೃಷ್ಟಿ ಮತ್ತು ಸತ್ಯಕ್ಕೆ ಮಾಡುವ ಅಪಚಾರ. ಈ ಒಟ್ಟಾರೆ ಗಣಿ ಹಗರಣದಲ್ಲಿ ಒಂದು ಲಕ್ಷ ಕೋಟಿ ರೂಪಾಯಿಗಳಿಗೂ ಮೀರಿದ ಲೂಟಿ ನಡೆದಿದೆ .  ಇದರಲ್ಲಿ ಗಾಲಿ ಜನಾರ್ಧನ ರೆಡ್ಡಿ, ಶ್ರೀರಾಮುಲು, ಅಂದಿನ ಕಂದಾಯ ಖಾತೆಯನ್ನೇ ಹಿಡಿದು ಕೂತಿದ್ದ ಕರುಣಾಕರ ರೆಡ್ಡಿ ಗ್ಯಾಂಗಿಗೆ ಪಾಲು ಇರುವಂತೆ ಬಹುದೊಡ್ಡ ಪಾಲು ಇವರಿಗೆ ಎಲ್ಲ ರೀತಿಯಿಂದಲೂ ಆಶ್ರಯ ನೀಡಿದ್ದ ಬಿಜೆಪಿಯ ನಾಯಕರಿಗೂ ಸಂದಿದೆ ಎನ್ನುವುದು ಗಮನಿಸಬೇಕು.  ಗಣಿ ಲೂಟಿಯಿಂದ ಗಳಿಸಿದ ಅಕ್ರಮ ಹಣದಿಂದಲೇ, ಚುನಾವಣೆಯಲ್ಲಿ ದುಡ್ಡು ಚೆಲ್ಲಿ, ಕರ್ನಾಟಕ ರಾಜಕೀಯದಲ್ಲಿ ಬೇರೆ ಪಕ್ಷಗಳ ಶಾಸಕರುಗಳನ್ನುಖರೀದಿ ಮಾಡಿ, ಬಿಜೆಪಿ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ‘ಅಪರೇಷನ್ ಕಮಲ’ ಎನ್ನುವ ಅನೈತಿಕ ಅಕ್ರಮರಾಜಕಾರಣವನ್ನು ಆರಂಭಿಸಿದ್ದೆ ಜನಾರ್ಧನ ರೆಡ್ಡಿ ಕೂಟ ಎನ್ನುವುದನ್ನು ದೇಶ ಮರೆಯುವಂತಿಲ್ಲ. ಜನಾರ್ಧನ ರೆಡ್ಡಿ ಗಣಿಗಳ್ಳರ ಗ್ಯಾಂಗ್ ಅಕ್ರಮ-ದೌರ್ಜನ್ಯಗಳ ಮೂಲಕವಾಗಿ ಗಳಿಸಿರುವ ಅಪಾರ ಸಂಪತ್ತನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸಹ ಅತ್ಯಗತ್ಯ. ಏಕೆಂದರೆ ಇದು ಸಮಾಜದ ಸಾರ್ವಜನಿಕ ಸಂಪತ್ತಾಗಿದೆ. ಈ ದಿಕ್ಕಿನಲ್ಲಿ ದಿಟ್ಟವಾದ ನಿಲುವನ್ನು ಸರ್ಕಾರಗಳು ತೋರಬೇಕು. ನ್ಯಾಯಾಲಯಗಳು ಕೂಡ ಕ್ರಮಕ್ಕೆ ಮುಂದಾಗಬೇಕು.

ಅಕ್ರಮ ಗಣಿಗಾರಿಕೆಯ ಮೊಕದ್ದಮೆಯಲ್ಲಿ ಆರೋಪಿಯಾಗಿದ್ದ ಮಾಜಿ ಸಚಿವ, ಶಾಸಕ ಗಾಲಿ ಜನಾರ್ದನರೆಡ್ಡಿ ಮತ್ತು ಇತರೆ ಮೂವರನ್ನು ತಪ್ಪಿಸ್ಥರು ಎಂದು ಸಿ.ಬಿ.ಐ.ನ ವಿಶೇಷ ನ್ಯಾಯಾಲಯ ತೀರ್ಪು ನೀಡಿ ಶಿಕ್ಷೆ ಕೊಟ್ಟಿರುವುದು ಸ್ವಾಗತಾರ್ಹ. ನ್ಯಾಯಾಲಯವು ಗಾಲಿ ಜನಾರ್ದನ ರೆಡ್ಡಿಗೆ ಏಳು ವರ್ಷಗಳ ಕಾರಾಗೃಹದ ಶಿಕ್ಷೆ ಮತ್ತು 10 ಸಾವಿರ ರೂ.ಗಳ ದಂಡ ವಿಧಿಸಿದೆ ಮತ್ತು ಕಠಿಣ ಶಬ್ದಗಳಲ್ಲಿ ಕೃತ್ಯವನ್ನು ಟೀಕಿಸಿದೆ. ನ್ಯಾಯಾಲಯದ ತೀರ್ಪನ್ನು ಅನುಸರಿಸಿ ಭಾರತದ ಸಂವಿಧಾನದ 191 (1)(ಇ) ಯನ್ವಯ ವಿಧಾನಸಭೆಯ ಸಭಾದ್ಯಕ್ಷ ಯು.ಟಿ.ಖಾದರ್ ಅವರು ಶಾಸನ ಸಭೆಯ ಸದಸ್ಯತ್ವವನ್ನು ರದ್ದುಗೊಳಿಸಿ ಆದೇಶವನ್ನು ಹೊರಡಿಸಿದ್ದಾರೆ. 13 ವರ್ಷಗಳಷ್ಟು ದೀರ್ಘಾವಧಿಯನ್ನು ತೆಗೆದುಕೊಂಡ ಬಳಿಕವಾದರೂ ಇಂತಹ ತೀರ್ಪು ನೀಡಿ ಶಿಕ್ಷೆ ವಿಧಿಸಿದ್ದು, 884 ಕೋಟಿ ರೂ.ಗಳನ್ನು ಸರ್ಕಾರಕ್ಕೆ ವಂಚಿಸಲಾಗಿರುವುದನ್ನು ಸಾಬೀತು ಮಾಡಿರುವುದು ಮಹತ್ವದ್ದಾಗಿದೆ. ಇದು ಗಣಿ ಉದ್ಯಮಗಳು, ಅಧಿಕಾರಶಾಹಿ ಮತ್ತು ರಾಜಕಾರಣಿಗಳಿಗೆ ಇರಬೇಕಾದ ಉತ್ತರದಾಯಿತ್ವವನ್ನು ಎತ್ತಿ ಹಿಡಿದು ವಂಚನೆಗಳಿಗೆ ಪೆಟ್ಟು ಕೊಟ್ಟಿದೆ. ಈ ತೀರ್ಪು ನ್ಯಾಯಾಂಗದ ಮೇಲಿನ ವಿಶ್ವಾಸವನ್ನು ಒಂದಿಷ್ಟು ಹೆಚ್ಚಿಸಿದೆ. ಹೀಗಿರುವಾಗಲೂ ಈತೀರ್ಪಿನ ಸುತ್ತ ಹಲವು ಪ್ರಶ್ನೆಗಳಿವೆ.

ಗಣಿ ಹಗರಣ ಎನ್ನುವುದು ಕೇವಲ ಗಾಲಿ ಜನಾರ್ದನ ರೆಡ್ಡಿಯಿಂದ ಮಾತ್ರವೇ ನಡೆದಿತ್ತು ಎನ್ನುವುದು ಸೀಮಿತ ದೃಷ್ಟಿ ಮತ್ತು ಸತ್ಯಕ್ಕೆ ಮಾಡುವ ಅಪಚಾರ. ಈಗಲೂ ಸಿಬಿಐ ನ್ಯಾಯಾಲಯ ಎರಡನೆಯ ಅಪರಾಧಿ ಜನಾರ್ದನ ರೆಡ್ಡಿ ಜೊತೆಗೆ ಅವರ ಓಬಳಾಪುರಂ ಮೈನಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಆಂಧ್ರದ ಇಬ್ಬರು ಅಧಿಕಾರಿಗಳಿಗೆ ಶಿಕ್ಷೆ ವಿಧಿಸಿದೆ. ಕಂಪನಿಗೆ ಒಂದು ಲಕ್ಷ ದಂಡ ಹಾಕಿದೆ. ಆದರೆ ಗಣಿ ಹಗರಣ ಇಷ್ಟಕ್ಕೆ ಸೀಮಿತ ಅಲ್ಲ ಎನ್ನುವುದನ್ನು ಬೇಲಿಕೇರಿ ಬಂದರಿನಲ್ಲಿ ಅದಿರು ‘ಮಾಯ’ವಾದ ಹಗರಣ ಒಳಗೊಂಡ ಘಟನೆಗಳು, ಅಂದಿನ ಕಾನೂನುಗಳ ನಗ್ನ ಉಲ್ಲಂಘನೆಯ ಪ್ರಕರಣಗಳು, ಪ್ರಶ್ನಿಸುವವರ, ವಿರೋಧಿಗಳ ಮೇಲಿನ ಹಲ್ಲೆ, ದೌರ್ಜನ್ಯ, ದಬಾವಣೆ ಮುಂತಾದ
ವಿದ್ಯಾಮಾನಗಳು ನಿಚ್ಚಳ ಸತ್ಯವನ್ನು ಸಾರುತ್ತಿವೆ. ವಿಶೇಷವಾಗಿ ಗಣಿ ಹಗರಣ ತನಿಖೆ ನಡೆಸಿದ ಅಂದಿನ ಲೋಕಾಯುಕ್ತ ನ್ಯಾ.ಎನ್.ಸಂತೋಷ ಹೆಗಡೆ ಅವರ 466 ಪುಟಗಳ ಗಣಿ ಅಕ್ರಮಗಳ ಕುರಿತ ವರದಿ (2011) ಕಟು ವಾಸ್ತವವನ್ನು ಜಗಜ್ಜಾಹೀರುಗೊಳಿಸಿದೆ.

ಬಿಜೆಪಿ ನಾಯಕರಿಂದಲೇ ರಾಜೀನಾಮೆಗೆ ಒತ್ತಡ

ಲೋಕಾಯುಕ್ತರ ವರದಿ ಬಹಿರಂಗವಾದ ಹಿನ್ನೆಲೆಯಲ್ಲೇ ಅಂದಿನ ಬಿಜೆಪಿ ಪಕ್ಷದ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ, ಸಚಿವರಾಗಿದ್ದ ಗಾಲಿ ಜನಾರ್ಧನ ರೆಡ್ಡಿಯವರು ರಾಜಿನಾಮೆ ಸಲ್ಲಿಸಬೇಕಾಗಿ ಬಂದಿತ್ತು. ಅನುಕೂಲ ಪಡೆದ ಮೈನಿಂಗ್ ಕಂಪನಿಯೊಂದರಿಂದ ಹತ್ತು ಕೋಟಿ ಹಣವನ್ನು ಕುಟುಂಬದ ಟ್ರಸ್ಟ್ ಗೆ ಲಂಚವಾಗಿ ಪಡೆದ ಬಗ್ಗೆ ಮೊಕದ್ದಮೆಯಲ್ಲಿ ಯಡ್ಯೂರಪ್ಪ ಜೈಲು ಪಾಲು ಆಗಬೇಕಾಗಿ ಬಂತು. ಈ ಎಲ್ಲ ಅಕ್ರಮಗಳಿಗೂ ಹುರಿದುಂಬಿಸಿ ಫಲಾನುಭವಿಗಳಾಗಿದ್ದ ಬಿಜೆಪಿ ನಾಯಕರೇ ಮುಖ ಉಳಿಸಿಕೊಳ್ಳಲು ಇವರ ರಾಜೀನಾಮೆಗೆ ಒತ್ತಡ ತಂದಿದ್ದರು. ಲೋಕಾಯುಕ್ತರ ವರದಿಯಲ್ಲಿ ಇದೇ ಸಂಪುಟದ ಇನ್ನಿಬ್ಬರು ಸಚಿವರ ಮೇಲೂ ಆರೋಪಗಳಿದ್ದವು. ಲೋಕಾಯುಕ್ತರ ವರದಿಯು ಅಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ, ಲಕ್ಷಾಂತರ ಕೋಟಿ ಮೌಲ್ಯದ ಸಂಪತ್ತಿನ ಲೂಟಿ, ಪರಿಸರದ ಮೇಲಾದ ಅಘಾತಕರ ಆಕ್ರಮಣ-ಹಾನಿ, ಜನರ ಆರೋಗ್ಯದ ಮೇಲಾದ ದುಷ್ಪರಿಣಾಮಗಳು, ಹರಿದಾಡಿದ ಅಕ್ರಮ ಹಣದಿಂದಾಗಿ ಸಮಾಜ ಕಲುಷಿತವಾದುದು ಮುಖ್ಯವಾಗಿ ಯುವಜನರ ಮೇಲೆ ಉಂಟು ಮಾಡಿದ ಅಧಃಪತನದ ಸಂಸ್ಕೃತಿ-ಅದರ ಅಪಾಯಕಾರಿ ಮೌಲ್ಯಗಳು, ಅಪರಾಧೀಕರಣದ ಪ್ರಕ್ರಿಯೆಗಳು ಮುಂತಾಗಿ ವಿಶದವಾಗಿ ದಾಖಲಿಸಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಕಬ್ಬಿಣದ ಅದಿರಿಗೆ ಭಾರಿ ಬೇಡಿಕೆ ಮತ್ತು ಬೆಲೆ ಇರುವಾಗ ಸರ್ಕಾರಿ ಸ್ವಾಮ್ಯದ ಮೈಸೂರ್ ಮಿನರಲ್ಸ್ ಲಿಮಿಟೆಡ್ (ಎಂ.ಎಂ.ಎಲ್) ಕಂಪನಿ ನಷ್ಟ ಅನುಭವಿಸಿದ್ದು ಹೇಗೆ ಎನ್ನುವ ಪ್ರಶ್ನೆಗೆ ಖಾಸಗಿ ಉದ್ದಿಮೆದಾರರು, ಗಣಿಗಳ್ಳರು, ಅಧಿಕಾರಸ್ಥ ರಾಜಕಾರಣಿಗಳು, ಅಧಿಕಾರಶಾಹಿಗಳ ಕೂಟದ ಲೂಟಿಯನ್ನು ಲೋಕಾಯುಕ್ತರು ಆ ವರದಿಯಲ್ಲಿ ಬಯಲಿಗಿಟ್ಟಿದ್ದಾರೆ. ಬಿಜೆಪಿ ಪಕ್ಷದ ಮುಖಂಡರೂ ಹಾಗೂ ಶಾಸಕ-ಸಚಿವರೂ ಆಗಿದ್ದ ಜನಾರ್ಧನ ರೆಡ್ಡಿ ಮತ್ತು ಸಹೋದರರು ತಮ್ಮ ಅಧಿಕಾರ ಬಳಸಿ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ನಡೆಸಿದ ಅಕ್ರಮಗಳು ಲೋಕಾಯುಕ್ತ ವರದಿಯಲ್ಲಿವೆ. ಇಂತಹ ವ್ಯವಸ್ಥಿತ ಲೂಟಿ ಆಂಧ್ರದ ಓಬಳಾಪುರಂ ಪ್ರದೇಶದಲ್ಲೂ ನಡೆದಿದೆ. ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ರವರನ್ನು ಒಳಗೊಂಡಿದ್ದ ‘ಗಾಲಿ ಗ್ಯಾಂಗ್’ ಕರ್ನಾಟಕ-ಆಂಧ್ರದ ಗಡಿಯ ಮೂಲ ಮೇರೆ ಕಲ್ಲುಗಳನ್ನೇ ಕಿತ್ತೆಸೆದು ಅಲ್ಲಿದ್ದ ಸುಂಕ್ಲಮ್ಮನ ದೇವಸ್ಥಾನ ಕಿತ್ತೆಸೆದು ಗಡಿ ಗುರುತು ಅಳಿಸಿ ಹಾಕಿದ್ದರು. ಹೀಗೆ ಮಾಡುವ ಮೂಲಕ ತಮ್ಮ ಲೂಟಿಗಾಗಿ ಕರ್ನಾಟಕದ ನೆಲವನ್ನು ಆಂಧ್ರದ ಭಾಗವನ್ನಾಗಿ ಮಾಡಿ ರಾಜ್ಯಕ್ಕೆ ಘೋರ ಅನ್ಯಾಯವನ್ನು ಎಸಗಿದ್ದರು. ಆಗ ಸಚಿವ ಜನಾರ್ಧನ ರೆಡ್ಡಿ ಅವರ ಸಹೋದರ ಕರುಣಾಕರ ರೆಡ್ಡಿ ಕಂದಾಯ ಸಚಿವರಾಗಿ ಇದ್ದರು ಎನ್ನುವುದು ಗಮನಿಸಬೇಕಾದ ಅಂಶ. ಈ ‘ಗಾಲಿ ಗ್ಯಾಂಗ್’ ಕರ್ನಾಟಕದಲ್ಲಿ ಬಿಜೆಪಿಯಾಗಿ ಆಂಧ್ರದಲ್ಲಿ ಅಂದಿನ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಅವರೊಂದಿಗೆ ಕಾಂಗ್ರೆಸ್ಸಾಗಿ ವೇಷ ಬದಲಿಸಿ ಆಟ ಆಡುತ್ತಿತ್ತು. ಈ ಪ್ರದೇಶಗಳಲ್ಲಿ 29 ಲಕ್ಷ ಮೆಟ್ರಿಕ್ ಟನ್ ಅದಿರು ವಿದೇಶಕ್ಕೆ ಸಾಗಾಣಿಕೆ ಮಾಡಲಾಗಿದೆ ಎಂದೂ, ರಾಜ್ಯ ಬೊಕ್ಕಸಕ್ಕೆ ಆದ ನಷ್ಟ 884 ಕೋಟಿ ರೂ.ಗಳು ಎಂದು ಸಿಬಿಐ ನ್ಯಾಯಾಲಯ ಹೇಳಿದೆ. ಲೋಕಾಯುಕ್ತರ ವರದಿ ರೂ.12,228 ಕೋಟಿ (ಇನ್ನೊಂದು ಅಂದಾಜಿನಂತೆ ರೂ.16,085 ಕೋಟಿ) ಎಂದು ಅಂದಾಜಿದೆ.

‘ಅಪರೇಷನ್ ಕಮಲ’ ಎನ್ನುವ ಅನೈತಿಕ ರಾಜಕಾರಣ

ವ್ಯಂಗ್ಯಚಿತ್ರ ಕೃಪೆ: ಪಿ.ಮಹಮ್ಮದ್, ವಾರ್ತಾಭಾರತಿ

ಈ ಒಟ್ಟಾರೆ ಗಣಿ ಹಗರಣದಲ್ಲಿ ಒಂದು ಲಕ್ಷ ಕೋಟಿ ರೂಪಾಯಿಗಳಿಗೂ ಮೀರಿದ ಲೂಟಿ ನಡೆದಿದೆ ಎನ್ನುವುದನ್ನು ಲೋಕಾಯುಕ್ತರ ವರದಿ ಮತ್ತು ಇತರೆ ಸಂಸ್ಥೆಗಳ ವರದಿಗಳು ಸ್ಪಷ್ಟವಾಗಿ ಹೇಳುತ್ತವೆ. (ಲೋಕಾಯುಕ್ತ ನ್ಯಾ. ಸಂತೋಷ ಹೆಗಡೆ ನೇತೃತ್ವದ ಸಮಿತಿ ವರದಿ ಪ್ರಕಾರ2006-07 ಮತ್ತು 2010-11 ರ ನಡುವೆ 77.74 ಲಕ್ಷ ಟನ್ ಅದಿರನ್ನು ಅಕ್ರಮವಾಗಿ ರಫ್ತು ನಡೆದಿದೆ) ಇದರಲ್ಲಿ ಗಾಲಿ ಜನಾರ್ಧನ ರೆಡ್ಡಿ, ಶ್ರೀರಾಮುಲು, ಅಂದಿನ ಕಂದಾಯ ಖಾತೆಯನ್ನೇ ಹಿಡಿದು ಕೂತಿದ್ದ ಕರುಣಾಕರ ರೆಡ್ಡಿ ಗ್ಯಾಂಗಿಗೆ ಪಾಲು ಇರುವಂತೆ ಬಹುದೊಡ್ಡ ಪಾಲು ಇವರಿಗೆ ಎಲ್ಲ ರೀತಿಯಿಂದಲೂ ಆಶ್ರಯ ನೀಡಿದ್ದ ಬಿಜೆಪಿಯ ನಾಯಕರಿಗೂ ಸಂದಿದೆ ಎನ್ನುವುದು ಗಮನಿಸಬೇಕು. ಬಹಳ ಮುಖ್ಯವಾಗಿ, ಅಂದಿನ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಅಭಯಹಸ್ತ ಬಹು ದೊಡ್ಡದಿತ್ತು. ಕಾಂಗ್ರೆಸ್ಸಿನ ಭ್ರಷ್ಟಾಚಾರದ ವಿರುದ್ಧ ಸಮರ ಘೋಷಿಸಿದ್ದೇವೆ ಎಂದು ಸಾರುತ್ತಿದ್ದ ಬಿಜೆಪಿ ರಾಷ್ಟ್ರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿಯವರಿಗೆ ಗಣಿ ಹಗರಣಗಳ ಬಗೆಗೆ ತಿಳಿದಿರಲಿಲ್ಲವೆಂದು ಯಾರಾದರೂಭಾವಿಸಿದರೆ ಅದು ಹಾಸ್ಯಾಸ್ಪದ ವಿಚಾರವಾಗುತ್ತದೆ. ಹೀಗೆ ಬಂದ ಟೀಕೆಗಳಿಗೆ ಮುಖ ಕೊಡಲು ಆ ನಾಯಕರಿಗೆ ಆಗಿರಲಿಲ್ಲ! ಈ ಎಲ್ಲರಆಶ್ರಯದಲ್ಲೇ ರೆಡ್ಡಿ ಗ್ಯಾಂಗ್ ಬಲಿತು ಬೆಳೆದು, ಉಕ್ಕು ಉದ್ಯಮಿಗಳಾಗಲು, ರಾಷ್ಟ್ರ ರಾಜಕಾರಣಕ್ಕೂ, ಏಣಿ ಹಾಕಲು ಯತ್ನಿಸಿದ್ದರು. ಗಣಿ ಲೂಟಿಯಿಂದ ಗಳಿಸಿದ ಅಕ್ರಮ ಹಣದಿಂದಲೇ, ಚುನಾವಣೆಯಲ್ಲಿ ದುಡ್ಡು ಚೆಲ್ಲಿ, ಕರ್ನಾಟಕ ರಾಜಕೀಯದಲ್ಲಿ ಬೇರೆ ಪಕ್ಷಗಳ ಶಾಸಕರುಗಳನ್ನುಖರೀದಿ ಮಾಡಿ, ಬಿಜೆಪಿ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ‘ಅಪರೇಷನ್ ಕಮಲ’ ಎನ್ನುವ ಅನೈತಿಕ ಅಕ್ರಮರಾಜಕಾರಣವನ್ನು ಆರಂಭಿಸಿದ್ದೆ ಜನಾರ್ಧನ ರೆಡ್ಡಿ ಕೂಟ ಎನ್ನುವುದನ್ನು ದೇಶ ಮರೆಯುವಂತಿಲ್ಲ.

ಜನಾರ್ದನ ರೆಡ್ಡಿ ಮತ್ತು ಅವರ ಗ್ಯಾಂಗನ್ನು ನಿರ್ಲಕ್ಷಿಸಿ ಅಧಿಕಾರ ನಡೆಸುವುದು ಅಸಾಧ್ಯ ಎನ್ನುವ ಹಂತವನ್ನು ಅಧಿಕಾರದಾಹಿ ಬಿಜೆಪಿ ತಲುಪಿತ್ತು ಮತ್ತು ಬಹುದೊಡ್ಡ ರೀತಿಯಲ್ಲಿ ರೆಡ್ಡಿಸಹೋದರರ ಮೇಲೆ ಬಿಜೆಪಿ-ಸಂಘ ಪರಿವಾರ ಅವಲಂಬಿತವಾಗಿತ್ತು. ಬಿಜೆಪಿ ಸರಕಾರವನ್ನು ಜನಾರ್ಧನ ರೆಡ್ಡಿ-ಶ್ರೀರಾಮುಲು ಗ್ಯಾಂಗ್ ಕೀಲುಬೊಂಬೆಯಂತೆ ಕುಣಿಸಲು ನೋಡುತ್ತಿತ್ತು. ಈ ಅಕ್ರಮ ಗಣಿಗಾರಿಕೆ ಲೂಟಿಯ ಪ್ರಕರಣದಲ್ಲಿ ಬಿಜೆಪಿ ಸಂಘಪರಿವಾರದ ಎಲ್ಲರೂ ಕೂಡ ಅಷ್ಟೇ ಸಮಾನ ಭಾಗಿಗಳು ಮತ್ತು ಫಲಾನುಭವಿಗಳು ಎಂಬುದನ್ನು ಮರೆಯಲಾಗದು. ಲೋಕಾಯುಕ್ತ ವರದಿ ಸಲ್ಲಿಕೆಯಾಗಿ, ಜನಾರ್ಧನ ರೆಡ್ಡಿ ಜೈಲುಪಾಲಾಗುವುದು ಖಚಿತ ಎಂದು ಲೋಕವೆಲ್ಲಾ ಮಾತನಾಡುತ್ತಿರುವ ಕೊನೆ-ಕೊನೆಗಾಲದಲ್ಲೂ ಬಿಜೆಪಿ ರಾಷ್ಟ್ರೀಯ ನಾಯಕ ವೆಂಕಯ್ಯ ನಾಯ್ಡು ಕರ್ನಾಟಕ್ಕೆ ಬಂದು ಬಹಿರಂಗ ಸಭೆಯಲ್ಲಿ ಜನಾರ್ಧನ ರೆಡ್ಡಿಯನ್ನು ಕೊಂಡಾಡಿ ಅವರು ನೀಡಿದ ಚಿನ್ನದ ಖಡ್ಗವನ್ನು ತೆಗೆದುಕೊಂಡು ಹೋಗಿದ್ದರು. ಹಾಗಾಗಿ ಈ ಅಕ್ರಮದಲ್ಲಿ ಭಾಗಿಯಾದ ರಾಜಕೀಯ ಮುಖಂಡರ ಮೇಲೆ ಏನೊಂದು ಕ್ರಮ ಜರುಗಿಸದೇ ಕೇವಲ ಗಾಲಿ ಜನಾರ್ಧನ ರೆಡ್ಡಿ ಅವರನ್ನು ಮಾತ್ರವೇ ಅಪರಾಧಿಯನ್ನಾಗಿಸುವುದು ಒಂದುಭಾಗಶಃವಾದ ಕ್ರಮವಾಗುತ್ತದೆ. ಆದ್ದರಿಂದ ರಾಜ್ಯದಿಂದ ಕೇಂದ್ರದವರೆಗೂ ಭಾಗಿಯಾದ ಎಲ್ಲ ನಾಯಕರುಗಳ ಮೇಲೆ ಸೂಕ್ತವಾದ ಕಠಿಣ
ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ.

ಎಲ್ಲಾ ಅಕ್ರಮಗಳ ಬಗ್ಗೆ ಇನ್ನಷ್ಟು ನಿಷ್ಠುರ ಕ್ರಮಗಳು ಬೇಕು

ಗಾಲಿ ಜನಾರ್ಧನರೆಡ್ಡಿಯನ್ನು ಕೇವಲ ಜೈಲಿಗೆ ಕಳಿಸಿದರೆ ಅಷ್ಟೇ ಸಾಕಾಗುವುದಿಲ್ಲ. ಜೈಲಿನಲ್ಲಿ ಆತ ಅಕ್ರಮ ಸುಖ-ಸೌಲಭ್ಯಗಳನ್ನು ಪಡೆಯದಂತೆ, ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಂಚು ಹೂಡಿ, ಹೊರಗೆ ಯಾವುದೇ ಪ್ರಭಾವ ಬೀರದಂತೆ ಕಟ್ಟೆಚ್ಚರ ವಹಿಸುವುದೂ ಮುಖ್ಯ. ಹಿಂದೆ ನ್ಯಾಯಾಧೀಶರಿಗೆ ಲಂಚ ಕೊಟ್ಟು ಜಾಮೀನು ಪಡೆದುಕೊಳ್ಳುವ ಹಗರಣದಲ್ಲಿ ಸಿಕ್ಕಿಬಿದ್ದ ಲಜ್ಜೆಗೇಡಿಗಳು ಇವರು. ಜನಾರ್ಧನ ರೆಡ್ಡಿ ಗಣಿಗಳ್ಳರ ಗ್ಯಾಂಗ್ ಅಕ್ರಮ-ದೌರ್ಜನ್ಯಗಳ ಮೂಲಕವಾಗಿ ಗಳಿಸಿರುವ ಅಪಾರ ಸಂಪತ್ತನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸಹ ಅತ್ಯಗತ್ಯ. ಏಕೆಂದರೆ ಇದು ಸಮಾಜದ ಸಾರ್ವಜನಿಕ ಸಂಪತ್ತಾಗಿದೆ. ಈ ದಿಕ್ಕಿನಲ್ಲಿ ದಿಟ್ಟವಾದ ನಿಲುವನ್ನು ಸರ್ಕಾರಗಳು ತೋರಬೇಕು. ನ್ಯಾಯಾಲಯಗಳು ಕೂಡ ಕ್ರಮಕ್ಕೆ ಮುಂದಾಗಬೇಕು.

ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಇಂತಹುದೇ ಅದಿರು ಲೂಟಿ ಅಕ್ರಮಗಳನ್ನು ನಡೆಸಿದ ಹಲವು ಉದ್ಯಮಿ ರಾಜಕಾರಣಿಗಳು ಇದ್ದಾರೆ. ಬೇಲಿಕೇರಿ ಅದಿರು ಅಕ್ರಮ ಸಾಗಾಣಿಕೆಯ ಕ್ರಿಮಿನಲ್ ಕೇಸ್ ನಲ್ಲಿ ಮಾಜಿ ಸಚಿವ ಆನಂದ್ ಸಿಂಗ್ ರವರ ಪಾತ್ರವು ದೊಡ್ಡದಿದೆ. ಜೊತೆಯಲ್ಲಿ ಅದಿರು ಸಾಗಾಣಿಕೆ ಮಾಡುವ ಹಲವು ಕಂಪನಿಗಳು ಇಂದಿಗೂ ತಮ್ಮ ದಂಧೆಯನ್ನು ನಡೆಸುತ್ತಿವೆ. ಇನ್ನೊಂದು ಬದಿಯಲ್ಲಿ ಸರ್ಕಾರಿ ಸ್ವಾಮ್ಯದ ಎನ್‌ಎಂಡಿಸಿಯನ್ನು ಮೀರಿಸಿ ಇಂದು ಜಿಂದಾಲ್ ಸ್ಟೀಲ್ಸ್ ಲಿಮಿಟೆಡ್ ಕಂಪನಿಯು ಅಧಿಕೃತತೆಯ ಹೆಸರಿನಲ್ಲಿ ಸಂಡೂರು-ಹೊಸಪೇಟೆ ಭಾಗದ ಸುಮಾರು 36 ಗಣಿಗಳಲ್ಲಿ ಗಣಿಗಾರಿಕೆಯನ್ನು ಮಾಡಲು ಪರವಾನಿಗೆಯನ್ನು ಪಡೆದಿದೆ, ಗಣಿಗಾರಿಕೆ ನಡೆಸುತ್ತಿದೆ. ಬಲ್ಡೋಟ ಕಂಪನಿಯು ಈ
ಗಣಿಗಾರಿಕೆಯ ವ್ಯವಹಾರದಲ್ಲಿ ಮತ್ತೊಂದು ದೊಡ್ಡ ಪಾತ್ರ ವಹಿಸುತ್ತಿದೆ. ಖಾಸಗಿ ಕಂಪನಿಗಳಿಗೆ ಗಣಿಗಾರಿಕೆ ನಡೆಸಲು ಮುಕ್ತ ಅವಕಾಶ ನೀಡಿದ್ದೇ ಎಲ್ಲ ಹಗರಣಗಳಿಗೆ ಮೂಲ ಎಂಬುದನ್ನು ಅರ್ಥ ಮಾಡಿಕೊಳ್ಳ ಬೇಕು. ಒಟ್ಟಾರೆಯಾಗಿ, ರಾಷ್ಟ್ರೀಯ ಸಂಪತ್ತಾಗಿರುವ ಖನಿಜ ನಿಕ್ಷೇಪದ ಗಣಿಗಾರಿಕೆಯ ಮೇಲೆ ಸರ್ಕಾರದ ಸಂಪೂರ್ಣ ನಿಯಂತ್ರಣ ಅತ್ಯಂತ ಅವಶ್ಯಕವಾಗಿದೆ. ಜನಾರ್ದನ ರೆಡ್ಡಿ ಮತ್ತು ಅವರ ಗ್ಯಾಂಗ್ ನಡೆಸಿರುವ ಎಲ್ಲಾ ಅಕ್ರಮಗಳ ಬಗ್ಗೆ ಇನ್ನಷ್ಟು ನಿಷ್ಠುರವಾಗಿ ತನಿಖೆ ಆಗಬೇಕು. ನ್ಯಾಯ ಸಿಗಬೇಕು. ಪರಿಸರ ಮತ್ತು ನಮ್ಮದೇ ಸಂಪನ್ಮೂಲ ಉಳಿಸುವುದರತ್ತ ಕಾಳಜಿ, ಕ್ರಮ ಬೇಕಾಗಿದೆ.

ಇವೆಲ್ಲದರ ಜೊತೆಗೆ ಜಾಗತೀಕರಣ-ಖಾಸಗೀಕರಣ ನೀತಿಗಳ ಹಿಂದೆ ಹೇಗೆ ದೇಶದ ಸಂಪನ್ಮೂಲವನ್ನು ಕೊಳ್ಳೆ ಹೊಡೆಯುವ ಹುನ್ನಾರಗಳಿವೆ, ಈ ನೀತಿಗಳ ಅಡಿಯಲ್ಲಿ ಬಿಜೆಪಿ ಹೇಗೆ ಕಾಂಗ್ರೆಸ್ ಅನ್ನು ಮೀರಿಸಿ ದರೋಡೆಯ ಅಪ್ರತಿಮ ಚಾಣಾಕ್ಷತೆ-ಭಂಡತನಗಳನ್ನು ಮೈಗೂಡಿಸಿಕೊಂಡಿದೆ ಎಂಬುದನ್ನು ರಾಜ್ಯದ ಮತ್ತು ದೇಶದ ಜನರು ಅರಿಯುವುದು ತಡೆಯಲು ಮುನ್ನೆಜ್ಜೆಗಳೂ ಬಹಳ ಮುಖ್ಯ.

Donate Janashakthi Media

Leave a Reply

Your email address will not be published. Required fields are marked *