ಬಳ್ಳಾರಿ : ಆಂಧ್ರಪ್ರದೇಶ – ಕರ್ನಾಟಕ ಗಡಿ ಒತ್ತುವರಿ ಪ್ರಕರಣಕ್ಕೆ ಮರು ಜೀವ ಬಂದಿದ್ದು ಸರ್ವೆ ನಡೆಸಿ ಮಾಹಿತಿ ನೀಡುವಂತೆ ಪ್ರಧಾನಿ ಕಾರ್ಯಾಲಯ ಸೂಚಿಸಿದೆ. ಈ ಆರೋಪ ರುಜುವಾತಾದರೇ ಜನಾರ್ಧನ್ ರೆಡ್ಡಿ ಬಂಧನ ಗ್ಯಾರಂಟಿ ಎಂದು ಹೇಳಲಾಗುತ್ತಿದೆ.
14 ವರ್ಷದಿಂದ ತಾರ್ಕೀಕ ಅಂತ್ಯ ಕಾಣದ ಪ್ರಕರಣ ಇದಾಗಿದೆ. ಗಣಿಗಾರಿಕೆ ಹಿನ್ನೆಲೆ ಕರ್ನಾಟಕ ಹಾಗೂ ಆಂಧ್ರ ರಾಜ್ಯದ ಗಡಿ ಗುರುತು ಧ್ವಂಸ ಮತ್ತು ಒತ್ತುವರಿ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ- 2006 ರಲ್ಲಿ ಸಂಡೂರು ತಾಲೂಕಿನ ತುಮಟಿ ಮತ್ತು ಆಂಧ್ರದ ಓಬಳಾಪುರಂ ವ್ಯಾಪ್ತಿಯಲ್ಲಿ ಗಡಿ ಗುರುತು ನಾಶ ಪಡಿಸಲಾಗಿತ್ತು. ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರೋ ರೆಡ್ಡಿ ಗಡಿನಾಶ ಮಾಡಿದ್ದಾರೆಂದು ಆರೋಪಿಸಲಾಗಿತ್ತು. ಸದ್ಯ ಜನಾರ್ದನ ರೆಡ್ಡಿ ಷರತ್ತು ಬದ್ಧ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು.
ಗಡಿ ಒತ್ತುವರಿ ಪ್ರಕರಣ ಸಾಭಿತಾದ್ರೇ ಮತ್ತೆ ಜೈಲಿಗೆ ಹೋಗುವ ಬೀತಿ ಈಗ ಜನಾರ್ಧನ್ ರೆಡ್ಡಿಗೆ ಎದುರಾಗಿದೆ. ಕಳೆದ ಹದಿನಾಲ್ಕು ವರ್ಷದ ಹಿಂದಿನ ಪ್ರಕರಣ ಇದಾಗಿದ್ದು ಈ ಬಾರಿ ಕೊನೆಗಾಣಲಿದೆ ಎಂದು ಹೇಳಲಾಗುತ್ತಿದೆ. ಸರ್ವೇ ಆಫ್ ಇಂಡಿಯಾ ಮತ್ತು ಎರಡು ರಾಜ್ಯದ ಸರ್ವೇ, ಕಂದಾಯ ಇಲಾಖೆ ಅಧಿಕಾರಿಗಳು ಗಡಿಗುರುತು ಹಚ್ಚೋ ಕೆಲಸ ಮಾಡುತ್ತಿದ್ದಾರೆ.
ಗಣಿ ಉದ್ಯಮಿ ಟಪಾಲ್ ಗಣೇಶ, ಆನ್‌ಲೈನ್ ಮುಖಾಂತರ ಪ್ರಧಾನಿ ಕಾರ್ಯಾಲಯಕ್ಕೆ ಸದರಿ ಪ್ರಕ್ರರಣದ ಸಮಸ್ಯೆ ಬಗೆಹರಿಸುವಂತೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಸ್ಪಂದಿಸಿರುವ ಪ್ರಧಾನಿ ಕಚೇರಿ ಆಂಧ್ರ ಮತ್ತು ಕರ್ನಾಟಕ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣದ ಕುರಿತು ಮಾಹಿತಿ ಪಡೆದು ಸರ್ವೇ ನಡೆಸಿ ಗಡಿ ಗುರುತಿಸುವಂತೆ ಸೂಚಿಸಿದೆ.
ಈ ಹಿನ್ನೆಲೆ ಕಳೆದ ಎರಡು ದಿನಗಳಿಂದ ಸರ್ವೇ ಕಾರ್ಯ ನಡೆಯುತ್ತಿದೆ. ಈ ಪ್ರಕರಣದಲ್ಲಿ ಜನಾರ್ಧನ್ ರೆಡ್ಡಿಗೆ ಜೈಲು ಗ್ಯಾರಂಟಿ ಎಂದು ಬಳ್ಳಾರಿ ಜನ ಮಾತನಾಡಿಕೊಳ್ಳುತ್ತಿದ್ದಾರೆ