ಜನರ ವಿಶ್ವಾಸದಿಂದ ಮತ್ತೆ ಎಲ್‌ಡಿಎಫ್‌ ಅಧಿಕಾರಕ್ಕೆ : ಡಾ. ವಿ.ಸಿವದಾಸನ್‌

ಬೆಂಗಳೂರು: ಕೇರಳದಲ್ಲಿ ಅಧಿಕಾರದಲ್ಲಿರುವ ಎಲ್‌ಡಿಎಫ್‌ ಸರಕಾರದಿಂದ ಜನಪರವಾದ ಆಡಳಿತದಿಂದಾಗಿ ಜನರ ವಿಶ್ವಾಸವನ್ನು ಗಳಿಸಿದ್ದು ಜನತೆ ಮತ್ತೆ ಅಧಿಕಾರವನ್ನು ನೀಡಲಿದ್ದಾರೆ ಎಂದು ಸಿಪಿಐ(ಎಂ) ಪಕ್ಷದ ಕೇರಳ ರಾಜ್ಯ ಸಮಿತಿ ಸದಸ್ಯರಾದ ಡಾ. ವಿ.ಸಿವದಾಸನ್‌ ಅವರು ಹೇಳಿದರು.

ಕೇರಳ ವಿಧಾನಸಭೆಗೆ ನಡೆಯಲಿರುವ ಚುನಾವಣೆ ಅಂಗವಾಗಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಬೆಂಗಳೂರು ಉತ್ತರ ಜಿಲ್ಲಾ ಸಮಿತಿಯು ಹಮ್ಮಿಕೊಂಡಿದ್ದ ʻʻಎಲ್‌ಡಿಎಫ್‌ ಬೆಂಬಲಿಸಿ ರಾಜಕೀಯ ಸಮಾವೇಶʼʼವನ್ನು  ಉದ್ಘಾಟಿಸಿ ಮಾತನಾಡುತ್ತಾ,  ʻʻಸ್ವಾತಂತ್ರ್ಯ ಪೂರ್ವದಿಂದ 1930 ರಿಂದಲೂ ಆರಂಭವಾದ ರೈತ ಕಾರ್ಮಿಕರ ಚಳುವಳಿಯಿಂದಾಗಿ ಭಾರತಕ್ಕೆ ಸ್ವಾತಂತ್ರ್ಯ ತರುವುದರಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದ ಬ್ರಿಟಿಷರು ಸೇರಿದಂತೆ ಪಾಳೇಗಾರಿ, ಜಮೀನ್ದಾರಿ ವ್ಯವಸ್ಥೆಯ ವಿರುದ್ಧ ರೈತ ಕಾರ್ಮಿಕರ ದೃಢವಾದ ಹೋರಾಟ ನಡೆದಿದೆ. ಇದರ ಪರಿಣಾಮವಾಗಿ 1957ರಲ್ಲಿ ಕೇರಳದಲ್ಲಿ ಮೊಟ್ಟಮೊದಲ ಚುನಾಯಿತ ಕಮ್ಯೂನಿಸ್ಟ್‌ ಸರಕಾರ ಅಧಿಕಾರಕ್ಕೆ ಬಂದಿತು. ಇ.ಎಂ.ಎಸ್‌. ನಂಬೂದಿರಿಪಾಡ್‌ ಅವರು ಮುಖ್ಯಮಂತ್ರಿಯಾಗಿ ಅಧಿಕಾರವನ್ನು ನಡೆಸಿದರು. ಅಂದಿನ ಸರಕಾರ ಪ್ರಮುಖವಾಗಿ ಎಲ್ಲಾ ಬಡವರು, ದಲಿತರು ಹಿಂದುಳಿದ ವರ್ಗದವರಿಗೆ ಭೂ ಹಂಚಿಕೆ ಮಾಡುವ ಮೂಲಕ ಎಲ್ಲರಿಗೂ ಭೂಮಿ ಸಿಗುವಂತೆ ಮಾಡಿದರು.

ಇದನ್ನೂ ಓದಿ : ಕೇರಳದ ಸಾಕ್ಷರರ ಮುಂದೆ ಬಿಜೆಪಿ ಆಟ ನಡೆಯಲಿಲ್ಲ – ಬಿಜೆಪಿ ಶಾಸಕ !

ನಂತರದಲ್ಲಿ ಸಾಕ್ಷರತೆಯಲ್ಲಿ ಹಮ್ಮಿಕೊಂಡ ಯೋಜನೆಗಳಿಂದಾಗಿ 1987ರ ಹೊತ್ತಿಗೆ ಇಡೀ ಕೇರಳ ಸಾಕ್ಷರತೆಯಲ್ಲಿ ಗರಿಷ್ಠ ಗುರಿಯನ್ನು ಸಾಧಿಸಲು ಸಾಧ್ಯವಾಯಿತು. ಇಂದಿಗೂ ದೇಶದಲ್ಲಿ ಕೇರಳವು ಸಾಕ್ಷರತೆಯಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದೆ.

ಕಳೆದ ಐದು ವರ್ಷದ ಅಧಿಕಾರವಧಿಯಲ್ಲಿ ಖಾಸಗಿ ಶಾಲೆಗಳಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ 6,80,000 ಮಕ್ಕಳು ಸರಕಾರಿ ಶಾಲೆಗಳಿಗೆ ಸೇರ್ಪಡೆಯಾದರು. ಕೇರಳದ ಎಲ್‌ಡಿಎಫ್‌ ಸರಕಾರವು ಸರಕಾರಿ ಶಾಲೆಗಳನ್ನು ಆಧುನೀಕರಣ, ಮೂಲಸೌಲಭ್ಯಗಳು ಒಳಗೊಂಡು ತಂತ್ರಜ್ಞಾನಗಳಲ್ಲಿ ಉನ್ನತೀಕರಣ ಮಾಡಿದರ ಪರಿಣಾಮವಾಗಿ ಖಾಸಗಿ ಶಾಲೆಯಿಂದ ಸರಕಾರಿ ಶಾಲೆಗಳಿಗೆ ಮಕ್ಕಳು ಬರುವಂತಾಯಿತು ಎಂದರು.

ಆರೋಗ್ಯ ಕ್ಷೇತ್ರದಲ್ಲಿ ಸಾಧಿಸಿದ ಉನ್ನತೀಕರಣದಿಂದಾಗಿ ಸರಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿರುವ ಸೇವೆಗಳು ಬಡವರಿಗೂ ಕಡಿಮೆ ಖರ್ಚಿನಲ್ಲಿ ಉತ್ತಮ ಆರೋಗ್ಯವನ್ನು ನೀಡಲು ಸಾಧ್ಯವಾಗಿದೆ.

ಕೋವಿಡ್‌ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಸರಕಾರ ಅತ್ಯಂತ ಮುಂಜಾಗ್ರತೆಯನ್ನು ವಹಿಸಿತು. ರಾಜ್ಯದ ಜನತೆಗೆ ಯಾವುದೇ ತೊಂದರೆಗಳು ಆಗದಂತೆ ಕ್ರಮವಹಿಸಲಾಗಿದೆ. ಕೋವಿಡ್‌ ಪರೀಕ್ಷೆಯನ್ನು ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ ಎಲ್ಲಿಯೂ ಲೋಪಗೊಳ್ಳದಂತೆ ನಿಭಾಯಿಸಲಾಗಿದೆ.

ಇದನ್ನೂ ಓದು : ಕೇರಳ ಚುನಾವಣೆ ಹೇಗಿದೆ? ಎಲ್.ಡಿ.ಎಫ್‌ ಯುಡಿಎಫ್‌ ನಡುವೆ ನಡೆದಿದೆ ನೇರ ಹಣಾಹಣಿ

ಕೋವಿಡ್‌ ಪರಿಣಾಮದಿಂದ ಸಂಕಷ್ಟದಲ್ಲಿರುವ ಜನರಿಗಾಗಿ ರಾಜ್ಯದ ಎಲ್ಲಾ ಕುಟುಂಬಗಳಿಗೆ ಕಳೆದ 2020ರ ಮಾರ್ಚ್‌ ನಿಂದ ಪ್ರಸಕ್ತ 2021ರ ಏಪ್ರಿಲ್‌ ವರೆಗೂ ಉಚಿತವಾದ ರೇಷನ್‌ ಕಿಟ್‌ ಗಳನ್ನು ವಿತರಣೆ ಮಾಡಲಾಗಿದೆ.

ಕೇರಳಕ್ಕೆ ಬರುವ ಹೊರ ರಾಜ್ಯಗಳಿಂದ, ಬೇರೆ ಪ್ರದೇಶಗಳಿಂದ ಭಾಗವಹಿಸುವ ಜನರನ್ನು ಅತಿಥಿಗಳೆಂದು ಪರಿಗಣಿಸುವ ರಾಜ್ಯ ಸರಕಾರ ಅವರಿಗೆ ರಾಜ್ಯದ ಜನತೆಗೆ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಸುಮಾರು 59 ಲಕ್ಷ ಜನತೆಗೆ ರಾಜ್ಯ ಸರಕಾರವು ತಿಂಗಳಿಗೆ 1,600 ರೂ.ಗಳಂತೆ ಪ್ರತಿ ತಿಂಗಳು ಪಿಂಚಣಿಯನ್ನು ನೀಡುತ್ತಿದೆ ಮತ್ತು ಅವರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಹಿಂದಿನ ಕಾಂಗ್ರೆಸ್‌ ಸರಕಾರದಲ್ಲಿ ಪಿಂಚಣಿ ಕೇವಲ ರೂ.600 ಇದ್ದಿತು.  ರಾಜ್ಯದಲ್ಲಿ ವಿದ್ಯುತ್‌ ಅಡಚಣೆಯಾಗದಂತೆ ನಿರಂತರವಾಗಿ ವಿದ್ಯುತ್‌ ನೀಡಲು ಪ್ರಯತ್ನಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಕೋಮುಗಲಭೆಗಳನ್ನು ಸಂಭವಿಸದಂತೆ ಕ್ರಮವಹಿಸಲಾಗಿದೆ.

ವಿ.ಸಿವದಾಸನ್‌ ಅವರು ಚುನಾವಣೆಯ ಹಿನ್ನೆಲೆಯಲ್ಲಿ ಕೇರಳ ಎಡರಂಗ ಸರಕಾರದ ಸಾಧನೆಗಳು ಮತ್ತು ಜನಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ವಿಸ್ತಾರವಾಗಿ ವಿವರಿಸಿದರು.

ಕೇಂದ್ರ ಸರಕಾರ ತಮ್ಮ ಆಡಳಿತ ವ್ಯಾಪ್ತಿಯನ್ನು ಮೀರಿ ತನಿಖಾ ಸಂಸ್ಥೆಗಳ ಮೂಲಕ ಕೇರಳ ಸರಕಾರದ ಮೇಲೆ ಧಾಳಿಯನ್ನು ಮುಂದುವರೆಸುತ್ತಿರುವ ಬಗ್ಗೆ ಹಾಗೂ ಕೋಮುವಾದವನ್ನು ಹರಡಲು ಪ್ರಯತ್ನಿಸುತ್ತಿರುವ ಬಿಜೆಪಿ ಪ್ರಯತ್ನಿಸುತ್ತಿರುವ ಬಗ್ಗೆ ಕೇರಳದಲ್ಲಿ ಪ್ರತಿಪಕ್ಷಗಳು ಮತ್ತು ಬಿಜೆಪಿ ಆರೋಪಗಳನ್ನು ಜನತೆ ಅಂತಹ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದರು.

ಕೇರಳದಲ್ಲಿ ಯುವ ಕಾರ್ಯಕರ್ತರು ಅತ್ಯಂತ ಹುರುಪಿನಿಂದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಸಿವದಾಸನ್‌ ಹೇಳಿದರು.

ಸಮಾವೇಶದಲ್ಲಿ ಪಕ್ಷದ ಬೆಂಗಳೂರು ಉತ್ತರ ವಲಯ ಕಾರ್ಯದರ್ಶಿ ಹುಳ್ಳಿ ಉಮೇಶ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಪಿಐ(ಎಂ) ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಪ್ರತಾಪ್ ಸಿಂಹ ವಹಿಸಿದ್ದರು. ಪಕ್ಷದ ಮುಖಂಡರಾದ ಟಿ.ಲೀಲಾವತಿ, ಹೆಚ್‌.ಆರ್.ಹವಲ್ದಾರ್ ವೇದಿಕೆಯಲ್ಲಿದ್ದರು. ಜಯೆಶ್, ಗೋಪಕುಮಾರ್, ಜೇಕಬ್, ಶಾಜಿ ಕೊಟ್ಯಾನ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು. ಅದೇ ರೀತಿ ಸಿಪಿಐ(ಎಂ) ಪಕ್ಷದ ಕೆ.ಆರ್‌.ಪುರ ವಲಯ ಸಮಿತಿ ಹಾಗೂ ಇಂದಿರಾನಗರದಲ್ಲಿರುವ ಕಾರುಣ್ಯ ಸಂಸ್ಥೆಯಲ್ಲಿಯೂ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *