ದಲಿತ ಸಾಂಸ್ಕೃತಿಕ ಪ್ರತಿರೋಧ; ಜನರ ಸಮಸ್ಯೆಗಳಿಗೆ ಜನಪರ ಹೋರಾಟಗಳೇ ಮದ್ದು: ನ್ಯಾ.ನಾಗಮೋಹನ ದಾಸ್

ಬೆಂಗಳೂರು: ಡಾ. ಅಂಬೇಡ್ಕರ್ 140 ಕೋಟಿ ಜನರ ನಾಯಕ. ಅವರು ವಕೀಲರಾಗಿ ಕಾರ್ಮಿಕರನ್ನು ಸಂಘಟಿಸಿ ಕಾರ್ಮಿಕರ ಹಕ್ಕುಗಳ ಜೊತೆ  ದೇಶದ ಜನರಿಗೆ ಹಕಗಕುಗಳನ್ನು ನೀಡಿದರು. ಜನರ ಸಮಸ್ಯೆಗಳಿಗೆ ಜನಪರ ಹೋರಾಟಗಳೇ ಮದ್ದು ಹಾಗಾಗಿ ಎಲ್ಲ ದಲಿತ ಸಂಘಟನೆಗಳು ಒಗ್ಗಟ್ಟಾಗಿದ್ದು ಸಂವಿಧಾನ ಉಳಿಸುವ ಹೋರಾಟಕ್ಕೆ ಬಲ ಬಂದಿದೆ ಎಂದು ನಿವೃತ್ತ ನ್ಯಾಯಮೂರ್ತಿ. ಎಚ್‌.ಎನ್.ನಾಗಮೋಹನದಾಸ್‌ ಹೇಳಿದರು.

ಸಮಾನ ಮನಸ್ಕ ದಲಿತ ಸಂಘಟನೆಗಳೆಲ್ಲಾ ಒಟ್ಟುಗೂಡಿ ಡಾ.ಬಿ.ಆರ್‌.ಅಂಬೇಡ್ಕರ್‍ ಅವರ 66ನೇ ಮಹಾ ಪರಿನಿರ್ವಾಣ ದಿನವಾದ ಇಂದು ‘ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ’ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಆಶಯಗಳನ್ನು ನಾಶಗೊಳಿಸುತ್ತಿರುವ ವಿರುದ್ಧ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ “ದಲಿತ ಸಾಂಸ್ಕೃತಿಕ ಪ್ರತಿರೋಧ ಹಾಗೂ ಬೃಹತ್ ಪ್ರತಿಭಟನಾ ಸಮಾವೇಶ”ವನ್ನು ಹಮ್ಮಿಕೊಂಡಿತು. ಸಮಾವೇಶವನ್ನು ರಮಾಬಾಯಿ ಅಂಬೇಡ್ಕರ್‌ ಅವರು, ಡೋಲು ಬಾರಿಸುವ ಮೂಲಕ ಚಾಲನೆ ನೀಡಿದರು.

 

ಸಮಾವೇಶದಲ್ಲಿ ಮಾತನಾಡಿದ ನ್ಯಾ.ಎಚ್‌.ಎನ್.ನಾಗಮೋಹನದಾಸ್‌ ಅವರು, ಸಂವಿಧಾನವನ್ನು ಓದಿಕೊಂಡು, ಅರ್ಥೈಸಿಕೊಂಡು, ಉಳಿಸುವ ಬೆಳಸುವ ಮೂಲಕ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಬೇಕು. ಭಾರತೀಯರ ಮಹಾನ್ ಗ್ರಂಥ ಭಾರತದ ಸಂವಿಧಾನ. ಆದರೆ ಸರಕಾರಗಳು ಸಂವಿಧಾನದ ಹಕ್ಕುಗಳನ್ನು ದಮನ ಮಾಡುತ್ತಿದೆ. ಶೇ. 20ರಷ್ಟು ಅನಕ್ಷರತೆ ಇದೆ. ದೌರ್ಜನ್ಯ ಹೆಚ್ಚಾಗಿದೆ, ಅತ್ಯಾಚಾರ ಹೆಚ್ಚಾಗಿದೆ. ಶಿಕ್ಷಣ ಸಿಗದಂತೆ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ದೇಶದ್ರೋಹದ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸುತ್ತಾರೆ ಎಂದರು.

ಮೀಸಲಾತಿ ಹೆಚ್ಚಳ ಮಾಡುವಂತೆ ನನ್ನ ಅಧ್ಯಕ್ಷತೆಯಲ್ಲಿ ಕೊಟ್ಟ ವರದಿಯನ್ನು ಸರಕಾರ ಒಪ್ಪಿದ್ದು ಖುಷಿಯ ವಿಚಾರ. ಆದರೆ ಅನೇಕ ಬ್ಯಾಕ್‌ಲಾಗ್ ಹುದ್ದೆಗಳು ಖಾಲಿ ಬಿದ್ದಿವೆ. ಇದರ ವಿರುದ್ಧ ಧ್ವನಿ ಎತ್ತಬೇಕಿದೆ. ಉಪನ್ಯಾಸಕರಿಲ್ಲದೆ ಶಿಕ್ಷಣ ಸಂಸ್ಥೆಗಳು ಸೊರಗುತ್ತಿವೆ. ಗುತ್ತಿಗೆ ಹೆಸರಲ್ಲಿ ಹಿಂಸಿಸುತ್ತಿದ್ದಾರೆ, ಇದರ ವಿರುದ್ಧವೂ ಸಂಘರ್ಷಕ್ಕೆ ಇಳಿಯಬೇಕು ಎಂದು ಕರೆ ನೀಡಿದರು.

ನಾವು ಸಂವಿಧಾನವನ್ನು ಕಳೆದುಕೊಂಡರೆ ಅರಾಜಕತೆ ಉಂಟಾಗುತ್ತೆ. ಇದರಿಂದ ಕೋಮು ಘರ್ಷಣೆ ಹೆಚ್ಚಗಾಲಿದೆ. ಗುಲಾಮರಂತೆ ಬಾಳುವ ಸ್ಥಿತಿ ನಿರ್ಮಟಣವಾಗುತ್ತೆ. ಹೀಗಾಗಬಾರದು ಎಂದರೆ ಹೋರಾಟ ಬಲಗೊಳ್ಳಬೇಕು ಎಂದರು.

ಡಾ||ಬಿ.ಆರ್‌.ಅಂಬೇಡ್ಕರ್‌ ಅವರ ಮೊಮ್ಮಗಳು, ಶ್ರೀಮತಿ ರಮಾಬಾಯಿ ಅಂಬೇಡ್ಕರ್ ಮಾತನಾಡಿ, ನಮ್ಮ ಸಮಾಜವನ್ನು ಒಗ್ಗೂಡಿಸುವ ಸಂಘಟನೆ ಬೇಕಿದೆ. ದಲಿತರ ಮೇಲಿನ ದೌರ್ಜನ್ಯ, ಮಹಿಳೆಯರ ಮೇಲೆನ ಅತ್ಯಾಚಾರಗಳ ವಿರುದ್ಧ ಹೋರಾಟಗಳು ಬಲಗೊಳ್ಳಬೇಕಿದೆ ಎಂದು ಹೇಳಿದರು.

ಸಂಘರ್ಷದ ಮೂಲಕ ನಮ್ಮ ಹಕ್ಕುಗಳಿಗಾಗಿ ಹೋರಾಟವನ್ನು ನಡೆಸಬೇಕಿದೆ. ಮಹಿಳೆಯರು ಶಿಕ್ಷಣವನ್ನು ಪಡೆಯುವಂತಾಗಬೇಕು  ಆ ಮೂಲಕ ಅವರು ಅವರು ಕುಟುಂಬವನ್ನು ಬಲಗೊಳಿಸುತ್ತಾರೆ ಎಂದು ಅಂಬೇಡ್ಕರ್ ಹೇಳಿದ್ದರು. ನಾವೆಲ್ಲ ಶಿಕ್ಷಣವನ್ನು ಪಡೆದು ಜಾಗೃತರಾಗುವುದು ಅಂಬೇಡ್ಕರ್ ಗೆ ಸಲ್ಲುಸುವ ಗೌರವವಾಗಿದೆ. ಸರಕಾರ ದಲಿತರ ಶಿಕ್ಷಣಕ್ಕೆ ಕೊಡಲುಪೆಟ್ಟು ನೀಡುತ್ತಿದೆ. ಶಿಷ್ಯ ವೇತನ ಕಡಿತ ಮಾಡಿದೆ. ಶುಲ್ಕ ಹೆಚ್ಚಳ ಮಾಡುತ್ತಿದೆ. ಹಂತಹಂತವಾಗಿ ಸಂವಿಧಾನದ ಹಕ್ಕುಗಳನ್ನು ನಮ್ಮಿಂದ ಕಸಿದುಕೊಳ್ಳುತ್ತಿದೆ. ನಮ್ಮ ಹಕ್ಕುಗಳ ಉಳಿವಿಗಾಗಿ ಸಂಘರ್ಷದ ಹೋರಾಟ ಅಗತ್ಯವಿದೆ ಎಂದು ಕರೆ ನೀಡಿದರು.

ಹೋರಾಟಗಾರ ಆನಂದ ತೇಲ್ತುಂಬ್ಡೆಯವರ ಜೊತೆ ನಿಲ್ಲುವ ಮೂಲಕ ಬಲ ತಂದಿದ್ದೀರಿ. ದಲಿತ ಸಂಘಟನೆಗಳು ಒಗ್ಗೂಡುತ್ತಿರುವುದು ಸಂತಸದ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನು ದಲಿತ ಮುಖಂಡ ಇಂದೂಧರ ಹೊನ್ನಾಪುರ ಮಾಡಿದರು. ಅವರು ಮಾತನಾಡಿ, 70ರ ದಶಕದಿಂದ ಆರಂಭವಾದ ದಲಿತ ಚಳುವಳಿ ದಲಿತರ ಏಳಿಗೆಗಾಗಿ ದುಡಿದಿದೆ. ದಲಿತ ಚಳುವಳಿ ಲಕ್ಷಾಂತರ ದಲಿತರ ಬಾಳಿಗೆ ಬೆಳಕಾಗಿದೆ.  ದಲಿತ ಚಳುವಳಿ ಕೇವಲ ದಲಿತರಿಗಷ್ಟೆ ಸೀಮಿತವಾಗಿಲ್ಲ. ಅದು ನಾಡಿನ ಜನರ ಅಭಿವೃದ್ಧಿಗಾಗಿ ದುಡಿದಿದೆ. ದಲಿತ ಚಳುವಳಿ ಸೊರಗಿದೆ ಎನ್ನುವವರಿಗೆ ಇವತ್ತಿನ ಕಾರ್ಯಕ್ರಮ ಉತ್ತರ ನೀಡಿದೆ. ಬಹುತ್ವದ ಸಂಸ್ಕೃತಿಯ ಭಾರತವನ್ನು ರಕ್ಷಿಸಲು ನಾವೆಲ್ಲ ಹೊರಾಡಬೇಕಿದೆ ಎಂದು ಹೇಳಿದರು.

ಸಂವಿಧಾನದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರಕಾರ ದಲಿತರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ. ದಲಿತರ ಮಕ್ಕಳ ಶಿಷ್ಯ ವೇತನ, ಸಬ್ಸಿಡಿ ಹಣ ನಿಲ್ಲಿಸಿದ್ದಾರೆ. ಕಾರ್ಪೊರೇಟ್ ಗಳ ಸಾಲವನ್ನು ಸರಕಾರ ಮನ್ನಾ ಮಾಡಿದ್ದು ದುರಂತ. ನಾವೆಲ್ಲ ಒಗ್ಗೂಡಿದ್ದೇವೆ, ದಲಿತರ ಮೇಲೆ ದೌರ್ಜನ್ಯ ನಡೆಸುವವರ ವಿರುದ್ದ ರಣಕಹಳೆ ಮೊಳಗಿಸಲಿದ್ದೇವೆ. ನಮ್ಮ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಕರೆ ನೀಡಿದರು.

ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ದಲಿತರ ಸಾಂಸ್ಕೃತಿಕ ಪ್ರತಿರೋಧ ಹೆಸರಿನಲ್ಲಿ ಸಮಾವೇಶದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು. ರಾಜ್ಯದ ಮೂಲೆ ಮೂಲೆಯಿಂದಲೂ ಜನರು ಸಮಾವೇಶಕ್ಕೆ ಆಗಮಿಸಿದ್ದರು. ಸಮಾವೇಶದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅನೇಕ ಕಲಾತಂಡಗಳು ತಮ್ಮ ಕಲಾ ಪ್ರದರ್ಶನವನ್ನು ಪ್ರಸ್ತುತಪಡಿಸಿದರು.

ಸಮಾವೇಶದಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ಭಾರೀ ಕರತಾಡನ ಮೊಳಗಿತು. ‘ಜೈ ಭೀಮ್… ಜೈ ಭೀಮ್’ ಎಂದು ಘೋಷಣೆ ಕೂಗುತ್ತಾ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬುದ್ಧಿ ಕಲಿಸಬೇಕು ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *