ಬೆಂಗಳೂರು: ಬಿಬಿಎಂಪಿಗೆ ಜನಪ್ರತಿನಿಗಳಿಲ್ಲದೆ ವರ್ಷಗಳೇ ಕಳೆದಿವೆ. ಕ್ಷೇತ್ರಗಳ ಪುನರ್‌ವಿಂಗಡಣೆ ನೆಪದಲ್ಲಿ ಚುನಾವಣೆಯನ್ನು ಒಂದು ವರ್ಷ ಮುಂದೂಡಲಾಗಿದೆ. ನಗರದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದು, ಜನಪ್ರತಿನಿಗಳು ಇಲ್ಲದಿದ್ದರೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುತ್ತಿದೆ.
ಇವೆಲ್ಲದರ ಮಧ್ಯೆ ವರ್ಷಾಂತ್ಯದೊಳಗೆ ಬಿಬಿಎಂಪಿ ಚುನಾವಣೆ ನಡೆಸಬೇಕೆಂದು ಮುಖ್ಯಮಂತ್ರಿಗಳ ಮೇಲೆ ನಗರ ಶಾಸಕರು ಒತ್ತಡ ಹಾಕಿದ್ದಾರೆ. ಬೆಂಗಳೂರು ಪ್ರತಿನಿಸುವ ಬಿಜೆಪಿಯ ಸಚಿವರು ಮತ್ತು ಶಾಸಕರು ಗುಪ್ತವಾಗಿ ಸಭೆ ನಡೆಸಿ ಬಿಬಿಎಂಪಿ ಚುನಾವಣೆಯನ್ನು ಡಿಸೆಂಬರ್ ತಿಂಗಳೊಳಗೆ ನಡೆಸಲೇಬೇಕೆಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳಿಲ್ಲ: ಇನ್ನೂ ಒಂದೂವರೆ ವರ್ಷ ಚುನಾವಣೆ ಇಲ್ಲ
ನಗರ ಭಾಗದ ಸಚಿವರಾದ ವಿ.ಸೋಮಣ್ಣ, ಅಶ್ವಥ್ ನಾರಾಯಣ, ಎಸ್.ಟಿ.ಸೋಮಶೇಖರ್, ಶಾಸಕರು ಮತ್ತು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಗಳು ಸಭೆಯಲ್ಲಿ ಭಾಗಿಯಾಗಿ ಚುನಾವಣೆ ನಡೆಸುವ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಬೇಕೆಂಬ ಒಮ್ಮತದ ನಿರ್ಣಯಕ್ಕೆ ಬಂದಿದ್ದಾರೆ.
ಬೆಂಗಳೂರು ಮಹಾನಗರದಲ್ಲಿ ಪ್ರತಿದಿನ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಪ್ರತಿಯೊಂದಕ್ಕೂ ಅಕಾರಿಗಳು ಸ್ಪಂದಿಸುವುದಿಲ್ಲ. ಪಾಲಿಕೆ ಸದಸ್ಯರಿದ್ದರೆ ಕೆಲಸಕಾರ್ಯಗಳು ಸುಲಭವಾಗಿ ನಡೆಯುತ್ತವೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: ಬಿಬಿಎಂಪಿ ಕಾಯ್ದೆ2020 ಕ್ಕೆ ರಾಜ್ಯಪಾಲರ ಅಂಕಿತ
ವಾರ್ಡ್ ಗಳ ಪುನರ್ ವಿಂಗಡಣೆ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ಬಿಬಿಎಂಪಿ ಗಡಿ ಗುರುತಿಸುವಿಕೆ, ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಚುನಾವಣೆಗೆ ಬೇಕಾದ ಸಿದ್ದತೆಗಳು ಮುಕ್ತಾಯ ಹಂತದಲ್ಲಿವೆ. ತಕ್ಷಣವೇ ಚುನಾವಣೆ ನಡೆಸಲು ಮುಖ್ಯಮಂತ್ರಿಗೆ ಮನವಿ ಮಾಡಬೇಕು. ಇನ್ನಷ್ಟು ವಿಳಂಬ ಮಾಡಿದರೆ ಬಿಜೆಪಿ ಪಕ್ಷಕ್ಕೆ ಹಿನ್ನಡೆಯಾಗಬಹುದೆಂಬ ಆತಂಕವನ್ನು ಹೊರಹಾಕಿದ್ದಾರೆ ಎನ್ನಲಾಗಿದೆ.
ಆರ್ ಅಶೋಕ್ ವಿರುದ್ಧ ಅಸಮಾಧಾನ:
ಸಭೆಯಲ್ಲಿ ಪದ್ಮನಾಭನಗರ ವಿಧಾನಸಭೆ ಶಾಸಕ ಹಾಗೂ ಸಚಿವ ಆರ್.ಅಶೋಕ್ ನಡೆಗೆ ಅನೇಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅವರ ನಡೆ ಏಕಪಕ್ಷೀಯವಾಗಿದೆ. ಅಲ್ಲದೆ ಬಿಬಿಎಂಪಿ ಮತ್ತು ಬಿಡಿಎ ಸೇರಿದಂತೆ ಮತ್ತಿತರ ಇಲಾಖೆಗಳ ವಿಚಾರದಲ್ಲೂ ಹಸ್ತಕ್ಷೇಪ ಮಾಡುತ್ತಾರೆ ಎಂದು ಕೆಲವರು ಅಸಮಾಧಾನ ಹೊರಹಾಕಿದ್ದಾರೆ.
ಕೃಷ್ಣಪ್ಪ ಬದಲಾವಣೆಗೆ ಒತ್ತಡ
ಕೆಂಪೇಗೌಡ ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಅವರನ್ನು ಬದಲಾಯಿಸಿ ಬೇರೊಬ್ಬರಿಗೆ ನೀಡಬೇಕೆಂಬ ಒತ್ತಾಯವು ಕೇಳಿಬಂದಿದೆ. ಅಧ್ಯಕ್ಷರಾದ ನಂತರ ಅವರು ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿಲ್ಲ ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.
ಚುನಾವಣೆ ಮುಂದೂಡಿಕೆ ವಿಚಾರ ನ.8ರ ಬಳಿಕ ಅಂತಿಮ ತೀರ್ಪು?
ಬಿಬಿಎಂಪಿ ಚುನಾವಣೆ ಮುಂದೂಡಿದ್ದನ್ನು ಪ್ರಶ್ನಿಸಿ ಮಾಜಿ ಪಾಲಿಕೆ ಸದಸ್ಯರಾದ ಕಾಂಗ್ರೆಸ್ ಪಕ್ಷದ ಎಂ.ಶಿವರಾಜು ಹಾಗೂ ಅಬ್ದುಲ್ ವಾಜೀದ್ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಭಾಗೀಯ ಪೀಠವು 1976ರ ಕೆಎಂಸಿ ಕಾಯಿದೆಗೆ ತಿದ್ದುಪಡಿ ತಂದು ಪಾಲಿಕೆಯ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಲು ಸರಕಾರ ಕ್ರಮ ಕೈಗೊಂಡಿದ್ದರೂ, 198 ವಾರ್ಡ್‌ಗಳಿಗೆ ಚುನಾವಣೆ ನಡೆಸುವಂತೆ 2020ರ ಡಿಸೆಂಬರ್ 4ರಂದು ಆದೇಶಿಸಿತು. ರಾಜ್ಯ ಸರಕಾರವು ಈ ಆದೇಶ ಪ್ರಶ್ನಿಸಿ ಡಿಸೆಂಬರ್ 10ರಂದು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ನವೆಂಬರ್ 8ರ ಬಳಿಕ ಅಂತಿಮ ತೀರ್ಪು ಪ್ರಕಟಿಸಲಿದೆ. ಸುಪ್ರೀಂ ತೀರ್ಪಿನ ಬಳಿಕೆ ಬಿಬಿಎಂಪಿ ಚುನಾವಣೆ ನಡೆಸುವ ಬಗ್ಗೆ ಸ್ಪಷ್ಟತೆ ತಿಳಿದು ಬರಲಿದೆ.