ಬೆಂಗಳೂರು: ದೇಶದ ಘಟಾನುಘಟಿ ನಾಯಕರ ಎದುರು ಚುನಾವಣೆಗೆ ಸ್ಪರ್ಧಿಸಿದ್ದ ವ್ಯಕ್ತಿಯೊಬ್ಬರು ಈ ಬಾರಿ ಹಾವೇರಿಯ ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಇದು ಆ ವ್ಯಕ್ತಿಯ 234ನೇ ಚುನಾವಣೆ ಎಂದರೇ ನೀವು ನಂಬಲೇಬೇಕು. ಈ ಬಾರಿ ಸಿಎಂ ಬಸವರಾಜ ಬೊಮ್ಮಾಯಿ ಎದುರು ಸ್ಪರ್ಧಿಸುತ್ತಿದ್ದು, ಗುರುವಾರ ನಾಮಪತ್ರ ಕೂಡ ಸಲ್ಲಿಸಿದ್ದಾರೆ. ಯಾರಪ್ಪ ಆ ವ್ಯಕ್ತಿ ಅಂದ್ರೇ ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರು ಮೂಲದ ಕೆ ಪದ್ಮರಾಜನ್.
1988ರಿಂದಲೂ ಚುನಾವಣೆಗೆ ನಿಲ್ಲುವುದನ್ನೇ ಹವ್ಯಾಸ ಮಾಡಿಕೊಂಡಿರುವ ಪದ್ಮರಾಜನ್ ಇದುವರೆಗೂ 234 ಚುನಾವಣೆಗಳನ್ನು ಎದುರಿಸಿದ್ದಾರೆ. ಭಾಗಶಃ ಎಲ್ಲ ಸಾರ್ವತ್ರಿಕ ಚುನಾವಣೆಗಳಲ್ಲಿ ಪದ್ಮರಾಜನ್ ಸ್ಪರ್ಧಿಸಿದ್ದಾರೆ. ಅದು ವಿಧಾನಸಭಾ ಚುನಾವಣೆ ಇರಲಿ, ಲೋಕಸಭಾ ಚುನಾವಣೆ ಇರಲಿ, ರಾಜ್ಯಸಭಾ ಚುನಾವಣೆ ಇರಲಿ ಯಾವುದೇ ಘಟಾನುಘಟಿ ನಾಯಕರ ವಿರುದ್ಧ ಪದ್ಮರಾಜನ್ ಅವರು ಸ್ಪರ್ಧಿಸದೇ ಬಿಟ್ಟಿಲ್ಲ. ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಹಾಗೂ ತಮಿಳುನಾಡಿನ ಮಾಜಿ ಸಿಎಂಗಳಾದ ಕರುಣಾನಿಧಿ, ಜೆ ಜಯಲಲಿತಾ ವಿರುದ್ಧವೂ ಸ್ಪರ್ಧಿಸಿದ್ದಾರೆ. ಆದರೆ, ಯಾವೊಂದು ಚುನಾವಣೆಯಲ್ಲಿಯೂ ಇವರು ಯಶ ಕಂಡಿಲ್ಲ. 223 ಚುನಾವಣೆಗಳಲ್ಲಿಯೂ ಸೋಲು ಅನುಭವಿಸಿದ್ದು, ಠೇವಣಿಯನ್ನು ಕೂಡ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ : ಜನಮತ 2023 : ಏ.19ರಂದು ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ
ಮೆಟ್ಟೂರಿನಲ್ಲಿ ಟಯರ್ ವ್ಯಾಪಾರ ಮಾಡುವ ಪದ್ಮರಾಜನ್ ಹೋಮಿಯೋಪತಿ ವೈದ್ಯ ಕೂಡ ಅಂತೆ. ಭಾರತದ ಪ್ರಜಾಪ್ರಭುತ್ವದ ಅತ್ಯಂತ ವಿಫಲ ಅಭ್ಯರ್ಥಿ ಎಂಬ ಕುಖ್ಯಾತಿ ಕೂಡ ಇವರದ್ದು. ಅದಲ್ಲದೇ ಪದ್ಮರಾಜನ್ ಚುನಾವಣೆಗೆ ಸ್ಪರ್ಧಿಸುವ ವಿಚಾರದಲ್ಲಿಯೇ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿ ದಾಖಲೆ ನಿರ್ಮಿಸಿದ್ದಾರೆ. ಇವರು ಮೂಲತಃ ಕೇರಳದವರಾಗಿದ್ದು, ಮೆಟ್ಟೂರಿನಲ್ಲಿ ವಾಸವಾಗಿದ್ದೀನಿ ಎಂದು ಹೇಳಿಕೊಂಡಿದ್ದರು.
ಪದ್ಮರಾಜನ್ ಅವರಿಗೆ ಹೆಂಡತಿ ಮತ್ತು ಮಗ ಇದ್ದು, ಮಗ ಎಂಬಿಎ ಪದವೀಧರನಾಗಿದ್ದಾನೆ. ಮೆಟ್ಟೂರಿನಲ್ಲಿಯೇ ಡಿಜಿಟಲ್ ಸೇವಾ ಕೇಂದ್ರವನ್ನು ಸ್ಥಾಪಿಸಿ ಅವರ ಪುತ್ರ ಕೆಲಸ ಮಾಡುತ್ತಿದ್ದಾರೆ.