ಬೆಳಗಾವಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯು ಇನ್ನೇನು ಕೆಲವೆ ದಿನಗಳಲ್ಲಿ ನಡೆಯಲಿದ್ದು ಮತದಾರರನ್ನು ತಮ್ಮತ್ತ ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ. ಈ ಸಂಬಂಧ ಇಂದು ಜಿಲ್ಲೆಯ ರಾಮದುರ್ಗದಲ್ಲಿ ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ1.50 ಕೋಟಿ ಹಣವನ್ನ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.
ನಿನ್ನೆ ದಿನ ತಾಲೂಕಿನ ತುರನೂರು ಬಳಿ ಬಿಜೆಪಿ ಅಭ್ಯರ್ಥಿ ಚಿಕ್ಕರೇವಣ್ಣ ಬೆಂಬಲಿಗರಿಂದ ಹಣ ಹಂಚಿಕೆ ಆರೋಪ ಕೇಳಿಬಂದಿದ್ದು, ಹಣ ಹಂಚಿಕೆ ಮಾಡುತ್ತಿದ್ದ ದೃಶ್ಯ ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿತ್ತು. ಇದನ್ನ ನೋಡಿದ ಬಳಿಕ ಅಲರ್ಟ್ ಆಗಿದ್ದ ರಾಮದುರ್ಗ ಠಾಣೆ ಪೊಲೀಸರು, ಖಚಿತ ಮಾಹಿತಿ ಮೇರೆಗೆ ತಡರಾತ್ರಿ ದಾಳಿ ನಡೆಸಿ, ಕಾರಿನಲ್ಲಿ ಸಾಗಿಸುತ್ತಿದ್ದ ಅಕ್ರಮ ಹಣವನ್ನ ವಶಕ್ಕೆ ಪಡೆದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಹಣವನ್ನ ಹಸ್ತಾಂತರ ಮಾಡಿದ್ದಾರೆ. ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಈ ಹಿಂದೆ ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ₹ 47.43 ಕೋಟಿ ಮೌಲ್ಯದ ನಗದು, ಮದ್ಯ, ಮತದಾರರಿಗೆ ಆಮಿಷ ಒಡ್ಡಲು ಬಳಸುವ ವಸ್ತುಗಳು, ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಮದ್ಯ – ₹ 16.02 ಕೋಟಿ ಮೌಲ್ಯದ 2.78 ಲಕ್ಷ ಲೀಟರ್, ಚಿನ್ನ – ₹ 6.72 ಕೋಟಿ ಮೌಲ್ಯದ 13.5 ಕೆ.ಜಿ, ಬೆಳ್ಳಿ – ₹ 63.98 ಲಕ್ಷ ಮೌಲ್ಯದ 88.7 ಕೆ.ಜಿ, ಮಾದಕವಸ್ತುಗಳು – ₹ 41.26 ಲಕ್ಷ ಮೌಲ್ಯದ 79.44 ಕೆ.ಜಿ ಸೇರಿ ಮತದಾರರಿಗೆ ಆಮಿಷ ಒಡ್ಡಲು ಇದ್ದ ವಿವಿಧ ವಸ್ತುಗಳು – ₹ 10.79 ಕೋಟಿ ಮೌಲ್ಯದ್ದಾಗಿದ್ದು. ಒಟ್ಟು ನಗದು – ₹ 12.82 ಕೋಟಿಗಳಾಗಿತ್ತು.
ಇದನ್ನೂ ಓದಿ : ಚುನಾವಣಾ ಅಕ್ರಮ : 174 ಕೋಟಿ ರೂ ಮೌಲ್ಯದ ನಗದು, ಮಾದಕ ವಸ್ತುಗಳ ವಶ