ಜನಗಣಮನ ಹಾಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದ ಚಾಮರಾಜನಗರ ಡಿವೈಎಸ್ಪಿ!

 – ಸೋಜುಗಾದ ಸೂಜು ಮಲ್ಲಿಗೆ ಹಾಡು ಹಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದ  ಡಿವೈಎಸ್ಪಿ ಪ್ರಿಯದರ್ಶನಿ

ಚಾಮರಾಜನಗರ:  ಪ್ರತಿಭಟನೆ, ಹೋರಾಟಗಳ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡುವುದು, ಅಶ್ರುವಾಯು ಸಿಡಿಸುವುದು, ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಳ್ಳುವುದು ಹೀಗೆ ನಾನಾ ರೀತಿಯ ಕ್ರಮಗಳನ್ನು  ಅನುಸರಿಸುತ್ತಾರೆಆದರೆ ಚಾಮರಾಜನಗರದಲ್ಲಿ  ಪ್ರತಿಭಟನೆಯೊಂದರ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಅರಿತ ಡಿವೈಎಸ್ಪಿ ಒಬ್ಬರು ಜನಗಣಮನ ಹಾಡುವ ಮೂಲಕ ಪರಿಸ್ಥಿತಿಯನ್ನು ತಹಬದಿಗೆ ತಂದ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಅಲ್ಲಲ್ಲಿ ನಡೆಯುತ್ತಿರುವ  ಮತಾಂತರವನ್ನು ವಿರೋಧಿಸಿ ಮತಾಂತರ ವಿರೋಧಿ ಹೋರಾಟ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಹಿಂದೂಪರ ಸಂಘಟನೆಗಳ 500ಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಗರದ ಹಳೇ ಖಾಸಗಿ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಜಿಲ್ಲಾಡಳಿತ ಭವನದ ಗೇಟ್ ಮುಂಭಾಗದ ಜೋಡಿರಸ್ತೆಯಲ್ಲಿ ಜಮಾಯಿಸಿದರು.

ಬಳಿಕ ಗೇಟ್ ಮೂಲಕ ಜಿಲ್ಲಾಡಳಿತ ಭವನದ ಆವರಣಕ್ಕೆ ಪ್ರತಿಭಟನಾಕಾರರು ಪ್ರವೇಶಿಸಿದರು. ನಂತರ ಅವರನ್ನು ಹಿಂಬಾಲಿಸಿ ಮೈಕ್ ಇರುವ ವಾಹನವೂ ಪ್ರವೇಶ ಮಾಡಲು  ಯತ್ನಿಸಿತು. ಆದರೆ ಈ ವಾಹನ ಪ್ರವೇಶಕ್ಕೆ ಅವಕಾಶ ನೀಡದ ಪೊಲೀಸರು ವಾಹನ ಅಡ್ಡಗಟ್ಟಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾನಿರತರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆಯಿತು. ತಳ್ಳಾಟ ನೂಕಾಟ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಡಿವೈಎಸ್ಪಿ ಪ್ರಿಯದರ್ಶನಿ ಸಾಣೆಕೊಪ್ಪ ಅವರು ತಮ್ಮ ವಾಹನದಲ್ಲಿದ್ದ ಮೈಕ್ ಹಿಡಿದು ರಾಷ್ಟ್ರಗೀತೆ ಹಾಡಲು ಶುರು ಮಾಡಿದರು. ರಾಷ್ಟ್ರಗೀತೆ ಕೇಳುತ್ತಿದ್ದಂತೆ ಪ್ರತಿಭಟನಾಕಾರರು ತಾವೂ ಸಹ ರಾಷ್ಟ್ರಗೀತೆ ಹಾಡುತ್ತಾ ವಾಗ್ವಾದ, ತಳ್ಳಾಟ ನೂಕಾಟ, ನಿಲ್ಲಿಸಿದರು. ಈ ವೇಳೆ ಪರಿಸ್ಥಿತಿ ತಣ್ಣಗಾಯ್ತು. ಡಿವೈಎಸ್ಪಿ ಪ್ರಿಯದರ್ಶನಿ ಸಾಣೆಕೊಪ್ಪ ಮಾಡಿದ ಪ್ಲಾನ್ ಸಕ್ಸಸ್ ಆಯಿತು.
 
ಕಳೆದ ಹದಿನೈದು ದಿನಗಳ ಹಿಂದಷ್ಟೇ  ಚಾಮರಾಜನಗರ ಡಿವೈಎಸ್ಪಿಯಾಗಿ ವರ್ಗಾವಣೆಯಾಗಿ ಬಂದಿರುವ ಪ್ರಿಯದರ್ಶನಿ ಸಾಣೆಕೊಪ್ಪ ಕೆಲದಿನಗಳ ಹಿಂದೆ ಮಹದೇಶ್ವರನ ಮೇಲೆ ಸೋಜುಗಾದ ಸೂಜು ಮಲ್ಲಿಗೆ ಎಂಬ ಹಾಡು ಹಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇದು ಸಾಮಾಜಿಕ  ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.

ಇದೇ ತಿಂಗಳು  25 ರಂದು ಸಿಎಂ ಯಡಿಯೂರಪ್ಪ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಬಂದೋಬಸ್ತ್ ಪರಿಶೀಲನೆಗೆ ಕೆಲ ದಿನಗಳ ಹಿಂದೆ  ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದ ಚಾಮರಾಜನಗರ ಡಿವೈಎಸ್ಪಿ ಪ್ರಿಯದರ್ಶನಿ ಸಾಣೆಕೊಪ್ಪ ಮಹದೇಶ್ವರನ ದರ್ಶನ ಪಡೆದ ನಂತರ ದೇಗುಲದ ಆವರಣದಲ್ಲಿ ಹಾಡಿದ ಸೋಜುಗಾದ ಸೂಜು ಮಲ್ಲಿಗೆ ಹಾಡು ಎಲ್ಲರನ್ನು ತಲೆ ತೂಗುವಂತೆ ಮಾಡಿತ್ತು.

Donate Janashakthi Media

Leave a Reply

Your email address will not be published. Required fields are marked *