ಜನ ಪರ್ಯಾಯ ಬಜೆಟ್‌ ಅಧಿವೇಶನ: ಜನಪರವಾದ ಹಲವು ನಿರ್ಣಯಗಳು ಅಂಗೀಕಾರ

ಬೆಂಗಳೂರು: ಕಳೆದ ಮೂರು ದಿನಗಳಿಂದ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಜನ ಪರ್ಯಾಯ ಬಜೆಟ್‌ ಅಧಿವೇಶನದಲ್ಲಿ ಬೃಹತ್‌ ಪ್ರಮಾಣದಲ್ಲಿ ಸೇರಿದ್ಧ ಜನಸ್ತೋಮದ ಸರ್ವಾನುಮದಿಂದ ಹಲವು ನಿರ್ಣಯಗಳನ್ನು ಅಂಗೀಕರಿಸಲಾಗಿದೆ.

ಸಂಯುಕ್ತ ಹೋರಾಟ – ಕರ್ನಾಟಕ ವತಿಯಿಂದ 2022 ಮಾರ್ಚ್‌ 21, 22, 23ರಂದು ಹಮ್ಮಿಕೊಂಡಿದ್ದ ಜನ ಪರ್ಯಾಯ ಬಜೆಟ್‌ ಅಧಿವೇಶನದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ರಣಕಹಳೆಯನ್ನು ಮೊಳಗಿಸಿದರು.

ರಾಜ್ಯದ ಪ್ರಸಕ್ತ ಬಜೆಟ್ ಅಧಿವೇಶನದಲ್ಲಿ ಹಾಗೂ ಬಜೆಟ್ ಪ್ರಸ್ತಾಪದಲ್ಲಿ ಆರ್ಥಿಕ ಬಿಕ್ಕಟ್ಟು ಹಾಗೂ ಕೋವಿಡ್ ಬಿಕ್ಕಟ್ಟಿನ ಜೊತೆ ಬೆಲೆ ಏರಿಕೆ, ನಿರುದ್ಯೋಗ, ಬಡತನ, ವಲಸೆ, ಆತ್ಮಹತ್ಯೆ ಮುಂತಾದ ಹಲವಾರು ಜ್ವಲಂತ ಸಮಸ್ಯೆಗಳಿಂದ ತೊಂದರೆಗೆ ಸಿಲುಕಿರುವ ರಾಜ್ಯದ ರೈತರು, ಕೃಷಿ ಕೂಲಿಕಾರರು, ಕಾರ್ಮಿಕರು, ದಲಿತರು, ಮಹಿಳೆಯರು ಹಾಗೂ ವಿದ್ಯಾರ್ಥಿ-ಯುವಜನರಿಗೆ ಯಾವುದೇ ಪರಿಹಾರ ಕ್ರಮಗಳನ್ನು ಒದಗಿಸಿಲ್ಲ ಬದಲಿಗೆ ಮತ್ತಷ್ಟು ಹೊರೆಗಳನ್ನು ಹೇರಲಾಗಿದೆ ಎಂದು ಆರೋಪಿಸಲಾಗಿದೆ.

ರಾಜ್ಯದ ದಲಿತರು ಹಾಗೂ ಮಹಿಳೆಯರು ವಿಶೇಷವಾಗಿ ಹೆಚ್ಚುಹೆಚ್ಚು ದೌರ್ಜನ್ಯಕ್ಕೆ ತುತ್ತಾಗುತ್ತಾ ಸಾಮಾಜಿಕ ದಮನ ಹಾಗೂ ಅಪಮಾನಗಳನ್ನು ಅನುಭವಿಸುತ್ತಾ ಇದ್ದರೂ ಬಜೆಟ್‌ನಲ್ಲಿ ಸೂಕ್ತ ಪರಿಹಾರ ಕ್ರಮಗಳನ್ನು ಒದಗಿಸದೇ ಭಾರಿ ದೊಡ್ಡ ಸಾಮಾಜಿಕ ಅನ್ಯಾಯಕ್ಕೆ ಗುರಿಪಡಿಸಲಾಗಿದೆ.

ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೆಸರಾಗಿರುವ ಕರ್ನಾಟಕದ ಸೌಹಾರ್ದ-ಶಾಂತಿ ಪರಂಪರೆಗೆ, ಧಾರ್ಮಿಕ ಸಾಮರಸ್ಯಕ್ಕೆ ದಕ್ಕೆ ಉಂಟು ಮಾಡುವ ಉದ್ದೇಶದಿಂದ ಸಮಾಜದಲ್ಲಿ ಕೋಮು ವಿಭಜನೆಯ ದಾಳವಾಗಿ ಸ್ವತಃ ರಾಜ್ಯ ಸರ್ಕಾರವೇ ಕೆಲಸ ಮಾಡುತ್ತಿದೆ. ಇದು ಅತ್ಯಂತ ಕಳವಳಕಾರಿಯಾದ ವಿದ್ಯಮಾನವಾಗಿದ್ದು ಈ ವಿದ್ಯಮಾನಗಳು ಈಗಾಗಲೇ ಹಲವು ರೀತಿಯ ತಾರತಮ್ಯಗಳಿಗೆ ಗುರಿಯಾಗಿರುವ ಅಲ್ಪ ಸಂಖ್ಯಾತ ಸಾಮಾಜಿಕ ಜನಸಮೂಹಗಳನ್ನು ಸಮಾಜದ ಮುಖ್ಯ ವಾಹಿನಿಯಿಂದ ದೂರ ಸರಿಸುವ ಕೋಮು ಶಕ್ತಿಗಳ ಹೀನ ಪ್ರಯತ್ನಕ್ಕೆ ಬೆಂಬಲವಾಗಿ ನಿಂತಿವೆ.

ಈ ಹಿನ್ನೆಲೆಯ ಸತತ ಮೂರು ದಿನಗಳು ನಡೆದ “ಜನ ಪರ್ಯಾಯ ಬಜೆಟ್ ಅಧಿವೇಶನ”ವು ರಾಜ್ಯದ ಎಲ್ಲಾ ಪ್ರಮುಖ ವಿಷಯಗಳನ್ನು ಅಮೂಲಾಗ್ರವಾಗಿ ಚರ್ಚಿಸಿ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದ್ದು ಈ ನಿರ್ಣಯಗಳನ್ನು ಅನುಷ್ಠಾನಕ್ಕೆ ಬರಲು ಬಲಿಷ್ಠವಾದ ಜನ ಚಳುವಳಿಗೆ ಸಿದ್ಧರಾಗಲು ರಾಜ್ಯದ ರೈತರು, ಕಾರ್ಮಿಕರು, ದಲಿತರು, ಮಹಿಳೆಯರು, ವಿದ್ಯಾರ್ಥಿ-ಯುವಜನ ಸಮೂಹಕ್ಕೆ ಈ ಮೂಲಕ ಕರೆ ನೀಡಿದೆ.

ತಮ್ಮ ಹಕ್ಕೋತ್ತಾಯಗಳನ್ನು ಆದಷ್ಟು ಬೇಗ ಈಡೇರಿಸಿ ತನ್ನ ಸಂವಿಧಾನಾತ್ಮಕ ಕರ್ತವ್ಯಗಳನ್ನು ಪಾಲಿಸಬೇಕೆಂದು ಸರ್ಕಾರಗಳನ್ನು ಮತ್ತು ಪ್ರತಿಪಕ್ಷಗಳು ಈ ದಿಶೆಯಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಸಂಯುಕ್ತ ಹೋರಾಟ – ಕರ್ನಾಟಕ ಆಗ್ರಹಿಸಿದೆ.

 

ಜನ ಪರ್ಯಾಯ ಬಜೆಟ್‌ ಅಧಿವೇಶನದ ಪ್ರಮುಖ ನಿರ್ಣಯಗಳು

  • ದೆಹಲಿ ಗಡಿಗಳಲ್ಲಿ ನಡೆದ ಐತಿಹಾಸಿಕ ರೈತ ಹೋರಾಟಕ್ಕೆ ಮಣಿದು ಲಿಖಿತ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ತನ್ನ ಭರವಸೆಯಂತೆ ನಡೆದುಕೊಳ್ಳದೇ ದೇಶದ ರೈತರಿಗೆ “ವಿಶ್ವಾಸದ್ರೋಹ” ಎಸಗಿರುವ ಹಿನ್ನೆಲೆಯಲ್ಲಿ ಏಪ್ರಿಲ್ 11 ರಿಂದ 17ರ ವರೆಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಕಾನೂನು ಖಾತರಿ ವಾರಾಚರಣೆ ಪ್ರತಿಭಟನಾ ಪ್ರಚಾರಾಂದೋಲನದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ದ ಕರೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಹಾಗೂ ರಾಜ್ಯದಲ್ಲಿ ಈ ಕರೆಯನ್ನು ಜಾರಿಗೊಳಿಸಲು ಅಭೂತಪೂರ್ವವಾಗಿ ಶ್ರಮಿಸಲು “ಜನ ರ‍್ಯಾಯ ಬಜೆಟ್ ಅಧಿವೇಶ”ನ ಮನವಿ ಮಾಡಿದೆ.
  • ಬೆಲೆ ಏರಿಕೆ, ನಿರುದ್ಯೋಗ, ಖಾಸಗೀಕರಣ ವಿರೋಧಿಸಿ ಹಾಗೂ ರೈತ ವಿರೋಧಿ, ಕಾರ್ಮಿಕ ವಿರೋಧಿ ಧೋರಣೆಗಳನ್ನು ಖಂಡಿಸಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ಸಂಯುಕ್ತ ಕಿಸಾನ್ ಮೋರ್ಚ್ ಜಂಟಿಯಾಗಿ ಕರೆ ನೀಡಿರುವ ಮಾರ್ಚ್ 28-29ರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು “ಜನ ಪರ‍್ಯಾಯ ಬಜೆಟ್ ಅಧಿವೇಶನ” ಸಂಪೂರ್ಣವಾಗಿ ಬೆಂಬಲಿಸುತ್ತದೆ. ಕರ್ನಾಟಕದಲ್ಲೂ ಸಾರ್ವತ್ರಿಕ ಮುಷ್ಕರ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಪೂರ್ಣ ಹರತಾಳವಾಗಿ ಯಶಸ್ವಿಗೊಳಿಸಲು ಕರೆ ನೀಡಿದೆ.
  • ರೈತರ ಮಹಾನ್ ಹೋರಾಟಕ್ಕೆ ಮಣಿದು ಕ್ಷಮೆಯಾಚಿಸಿ ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕಾನೂನಿನ ತದ್ರೂಪವಾಗಿರುವ ರಾಜ್ಯ ಕೃಷಿ ಕಾಯ್ದೆಗಳಾದ ಕರ್ನಾಟಕ ರಾಜ್ಯ ಭೂ ಸುಧಾರಣಾ ಕಾನೂನು-2020, ಕರ್ನಾಟಕ ಎಪಿಎಂಸಿ ಕಾನೂನು-2020, ಹೈನುಗಾರಿಕೆ ಹಾಗೂ ಕೃಷಿಗೆ ಮಾರಕವಾಗಿರುವ ಕರ್ನಾಟಕ ಜಾನುವಾರು ಹತ್ಯೆ ನಿಷೇದ ಕಾಯ್ದೆ-2020 ಅನ್ನು ಈ ಕೂಡಲೇ ರದ್ದು ಪಡಿಸುವುದು ಸೇರಿದಂತೆ ಹಲವು ಹಕ್ಕೋತ್ತಾಯಗಳನ್ನು ಒಳಗೊಂಡ ಏಪ್ರಿಲ್ 23ರ ಒಳಗೆ ಈಡೇರಿಸಲು `ಜನ ಪರ್ಯಾಯ ಬಜೆಟ್ ಅಧಿವೇಶನ’ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

“ಜನ ಪರ‍್ಯಾಯ ಬಜೆಟ್ ಅಧಿವೇಶನ”ದ ಹಕ್ಕೊತ್ತಾಯಗಳು

  1. ರೈತ ವಿರೋಧಿ ರಾಜ್ಯ ಸರ್ಕಾರದ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗಳು ರದ್ದಾಗಬೇಕು. ದಲಿತರು, ರೈತರಿಗೆ ಭೂಮಿ, ನಿವೇಶನ ಹಂಚಿಕೆಯಾಗಬೇಕು.
  • ರೈತರು ಅಲ್ಲದವರು ಕೃಷಿ ಭೂಮಿಯನ್ನು ಖರೀದಿ ಮಾಡಬಹುದೆನ್ನುವ ಹಾಗು ಭೂಮಿತಿಯನ್ನು ಸಡಿಲಗೊಳಿಸಿರುವ ರಾಜ್ಯದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗಳು ರದ್ದಾಗಬೇಕು.
  • ಗೋಮಾಳ, ಗೈರಾಣು ಇತ್ಯಾದಿ ಸರ್ಕಾರಿ ಭೂಮಿಗಳನ್ನು ಬಂಡವಾಳಶಾಹಿ ಭೂ ಮಾಲಕರು, ಕಾರ್ಪೋರೇಟ್ ಕಂಪನಿಗಳಿಗೆ ಮೂರು ಕಾಸಿಗೆ ಮಾರಾಟ ಮಾಡಿ, ಸಾವಿರಾರು ಕೋಟಿ ರೂಗಳ ಭ್ರಷ್ಟಾಚಾರ ನಡೆಸುವ ಉದ್ದೇಶದಿಂದ ಇತ್ತೀಚೆಗೆ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ “ಸಚಿವ ಸಂಪುಟದ ಉಪ ಸಮಿತಿ”ಯನ್ನು ರಾಜ್ಯ ಸರ್ಕಾರ ಕೂಡಲೇ ರದ್ದು ಮಾಡಬೇಕು.
  • ಬಗರ್‌ಹುಕ್ಕಂ ಸಾಗುವಳಿಯ ಭೂಮಿಗಳು ಸಕ್ರಮವಾಗಬೇಕು. ಗ್ರಾಮಗಳಿಗೆ ಹೊಂದಿಕೊಂಡಿರುವ ಸರ್ಕಾರಿ ಭೂಮಿಗಳು ಬಡವರ ನಿವೇಶನಕ್ಕಾಗಿ ಸಿಗಬೇಕು. ಗ್ರಾಮಾಂತರ ಪ್ರದೇಶದಲ್ಲಿಯೂ `ಬಿಡಿಎ’ ಮಾದರಿಯಲ್ಲಿ ಭೂಸ್ವಾಧೀನ ಮಾಡಿ ಉಚಿತವಾಗಿ ನಿವೇಶನಗಳನ್ನು ಹಂಚಿಕೆ ಮಾಡಬೇಕು.
  • ಬೆಂಗಳೂರು ಮಹಾನಗರವೂ ಸೇರಿದಂತೆ ಎಲ್ಲಾ ನಗರ ವ್ಯಾಪ್ತಿಯ ಬಗರ್ ಹುಕ್ಕಂ ಭೂಮಿಗಳ ಸಕ್ರಮಕ್ಕಾಗಿ, “ಅರಣ್ಯ ಭೂಮಿ” ಎನ್ನಲಾಗುತ್ತಿರುವ ಬಗರ್‌ಹುಕ್ಕುಂ ಭೂಮಿಗಳ ಸಕ್ರಮಕ್ಕಾಗಿ ಅಗತ್ಯವಿರುವ “ಕಾನೂನು”ಗಳನ್ನು ರಾಜ್ಯ ಸರ್ಕಾರ ರೂಪಿಸಬೇಕು.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಡವರಿಗೆ ಕೃಷಿ ಭೂಮಿಗಳ ಖರೀದಿಗಾಗಿ ಮುಂಬರುವ ಬಜೆಟ್‌ನಲ್ಲಿ ಕನಿಷ್ಠ 2000 ಕೋಟಿ ರೂ.ಗಳನ್ನು ಮೀಸಲಿಡಬೇಕು. ಈ ಯೋಜನೆಯು ಸಕ್ರಮವಾಗಿ ಜಾರಿಯಾಗಲು ಅಗತ್ಯವಿರುವ ಕಟ್ಟು ನಿಟ್ಟಿನ ಕ್ರಮಗಳನ್ನು ರೂಪಿಸಬೇಕು.
  • ಆದಿವಾಸಿಗಳ ಸ್ವಾಧೀನದಲ್ಲಿರುವ ಕೃಷಿ ಭೂಮಿ ಮತ್ತು ಮನೆ ಜಾಗಗಳನ್ನು ಸಕ್ರಮ ಮಾಡಲು “ಅರಣ್ಯ ಕಾಯ್ದೆ-2006”ನ್ನು ಸಮರ್ಪಕವಾಗಿ ಜಾರಿ ಮಾಡಬೇಕು. `ಇತರೆ ಪಾರಂಪರಿಕ ಅರಣ್ಯವಾಸಿಗಳ’ ಕೃಷಿ ಭೂಮಿ ಮತ್ತು ಮನೆ ಜಾಗಗಳನ್ನು ಸಕ್ರಮಗೊಳಿಸಲು ಅನುಕೂಲವಾಗುವಂತೆ ಕಾಯ್ದೆಯಲ್ಲಿನ “75 ವರ್ಷಗಳ ಸ್ವಾಧೀನದ ದಾಖಲಾತಿ”ಗಳನ್ನು ನೀಡಬೇಕೆನ್ನುವ ಅಂಶವನ್ನು ತೆಗೆದು ಹಾಕಬೇಕು. ಅರಣ್ಯವಲ್ಲದ ಭೂಮಿಗಳನ್ನು ಕಂದಾಯ ಇಲಾಖೆಗೆ ಮರಳಿ ಪಡೆದು ಬಡಜನರ ಬಳಕೆಗಾಗಿ ವಿತರಿಸಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ಕಂದಾಯ ಮತ್ತು ಅರಣ್ಯ ಇಲಾಖೆಗಳ ಗೊಂದಲದಿಂದ ಸಕ್ರಮಗೊಳಿಸದೆ ಇರುವ ಬಹಳ ವರ್ಷಗಳಿಂದ ಸ್ವಾಧೀನವಿರುವ ಬಗರ್ ಹುಕ್ಕುಂ ಸಾಗುವಳಿಯನ್ನು ಸಕ್ರಮಗೊಳಿಸಬೇಕು.
  • ಕೇಂದ್ರ ಸರ್ಕಾರದ ಭೂ ಸ್ವಾಧೀನ ಕಾಯ್ದೆ-2013 ರ ಅಶಯಗಳಿಗೆ ವಿರುದ್ಧವಾಗಿ ಹಿಂದಿನ ರಾಜ್ಯ ಸರ್ಕಾರಗಳು ತಂದಿರುವ ಭೂ ಸ್ವಾಧೀನ ಕಾಯ್ದೆಯ ತಿದ್ದುಪಡಿಗಳು ರದ್ದಾಗಬೇಕು.
  • ರಾಜ್ಯದಾದ್ಯಂತ ಭೂಮಿ-ವಸತಿ ವಂಚಿತ ಬಡ ಜನರಿಗೆ ಜಮೀನು-ಮನೆ ನಿವೇಶನ ದೊರೆಯಬೇಕು. ಎಲ್ಲಾ ಬಗರ್ ಹುಕ್ಕುಂ ಭೂಮಿ ಮತ್ತು ಮನೆಗಳನ್ನು ಸಕ್ರಮಗೊಳಿಸಿ ಹಕ್ಕು ಪತ್ರಗಳನ್ನು ತಡಮಾಡದೆ ನೀಡಬೇಕು. ಸಕ್ರಮ ಕೋರಿ ಅರ್ಜಿ ಹಾಕದೇ ಉಳಿದಿರುವ ಲಕ್ಷಾಂತರ ರೈತರಿದ್ದು ಅರ್ಜಿ ಸಲ್ಲಿಸಲು ಮತ್ತೋಂದು ಅವಕಾಶವನ್ನು ಬಡ ರೈತರಿಗೆ ನೀಡಬೇಕು. ಯಾವುದೇ ಕಾರಣಕ್ಕೂ ಬಡ ಜನರನ್ನು ಪರ್ಯಾಯ ಒದಗಿಸದೆ ಒಕ್ಕಲೆಬ್ಬಿಸಬಾರದು.

  1. ರಾಜ್ಯದ ಎಪಿಎಂಸಿ ಕಾಯ್ದೆಯ ತಿದ್ದುಪಡಿಗಳು ರದ್ದಾಗಬೇಕು, ಎಪಿಎಂಸಿ ಗಳನ್ನು ರೈತ ಸ್ನೇಹಿಯಾಗಿ ಮಾರ್ಪಡಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು.
  • ರೈತರ ಕೃಷಿ ಉತ್ಪನ್ನಗಳನ್ನು ಎಂಪಿಎಂಸಿ ಮಾರುಕಟ್ಟೆಗಳ ಹೊರಗೂ ಮಾರಾಟ ಮಾಡುವ, ಖರೀದಿ ಮಾಡಬಹುದೆನ್ನುವ ಇತ್ತೀಚಿನ ತಿದ್ದುಪಡಿಯು ಸೇರಿದಂತೆ ರೈತ ವಿರೋಧಿ ಎಲ್ಲಾ ಎಪಿಎಂಸಿ ಕಾಯ್ದೆಯ ತಿದ್ದುಪಡಿಗಳು ರದ್ದಾಗಬೇಕು.
  • ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತಹ ವಾತಾವರಣದ ನಿರ್ಮಾಣವೂ ಸೇರಿದಂತೆ ಸದ್ಯ ಇರುವ ಕಮಿಷನ್ ದಂದೆ ಸಂಪೂರ್ಣವಾಗಿ ನಿಲ್ಲಬೇಕು. ಮಾರುಕಟ್ಟೆಗೆ ಬರುವ ರೈತರಿಗೆ ಅಗತ್ಯವಿರುವ ಊಟ, ವಸತಿ, ಶೈತ್ಯಗಾರ ಸೌಲಭ್ಯಗಳು ಇತ್ಯಾದಿಗಳನ್ನು ಸಬ್ಸಿಡಿಯಲ್ಲಿ ನೀಡಬೇಕು.
  • ಎಪಿಎಂಸಿ ಮತ್ತು ಸರ್ಕಾರಿ ಗೋದಾಮುಗಳಲ್ಲಿ ದಾಸ್ತಾನು ಮಾಡುವ ರೈತರ ಕೃಷಿ ಉತ್ಪನ್ನಗಳ ಮೇಲೆ ಹೆಚ್ಚಿನ ಪ್ರಮಾಣದ ಬ್ಯಾಂಕ್ ಸಾಲಗಳನ್ನು ಬಡ್ಡಿ ರಹಿತವಾಗಿ ನೀಡಬೇಕು.
  • ಬೆಳಗಾವಿಯ ಜೈ ಕಿಸಾನ್ ಖಾಸಗಿ ಕೃಷಿ ಮಾರುಕಟ್ಟೆ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಆರಂಭ ವಾಗಿರುವ ಖಾಸಗೀ ರೇಷ್ಮೆ ಗೂಡಿನ ಮಾರುಕಟ್ಟೆ ಹಾಗೂ ಚಿತ್ರದುರ್ಗದಲ್ಲಿ ಆರಂಭವಾಗಲಿರುವ ಖಾಸಗಿ ಈರುಳ್ಳಿ ಮಾರುಕಟ್ಟೆಗಳನ್ನು ಕೂಡಲೇ ಬಂದ್ ಮಾಡಬೇಕು.

  1. ರಾಜ್ಯದ ಜಾನುವಾರು ಹತ್ಯೆ ನಿಷೇದ ಕಾಯ್ದೆ ತಿದ್ದುಪಡಿಗಳು ರದ್ದಾಗಬೇಕು ಹಾಗೂ ಕೋಳಿ, ಕುರಿ ಸಾಕಾಣಿಕೆ, ಹೈನುಗಾರಿಕೆಯ ರೈತರ ಬೇಡಿಕೆಗಳನ್ನು ಈಡೇರಿಸಬೇಕು.
  • ಹೈನುಗಾರಿಕೆ ಮತ್ತು ದನಗಳ ಸಾಕಾಣಿಕೆಗೆ ಮಾರಕವಾಗಿರುವ ರೈತ ವಿರೋಧಿ ಜಾನುವಾರು ಹತ್ಯೆ ನಿಷೇದ ಕಾಯ್ದೆಯ ತಿದ್ದುಪಡಿಗಳು ರದ್ದಾಗಬೇಕು.
  • ಕೋಳಿ ಸಾಕಾಣಿಕೆಯನ್ನು “ಕೃಷಿ” ಎಂದು ಘೋಷಣೆ ಮಾಡಬೇಕು. ವೈಜ್ಞಾನಿಕವಾದ “ಸಾಕಾಣಿಕೆ ದರ” ನಿಗದಿಯಾಗಬೇಕು. ರೋಗ ಇತ್ಯಾದಿ ಕಾರಣಗಳಿಂದ ಸಾವನ್ನಪ್ಪುವ ಕುರಿಗಳಿಗೆ ನೀಡುತ್ತಿರುವ ಪರಿಹಾರವನ್ನು ಷರತ್ತು ರಹಿತವಾಗಿ ಸಾಯುವ ಎಲ್ಲಾ ಕುರಿಗಳಿಗೆ ಸಿಗಬೇಕು.
  • ಹಾಲಿನ ಉತ್ಪಾದನಾ ವೆಚ್ಚ ಪ್ರತಿ ಲೀಟರಿಗೆ 35-00 ರೂ. ಮೀರುತ್ತಿರುವ ಈ ಸಂದರ್ಭದಲ್ಲಿ ಜಿಲ್ಲಾ ಹಾಲು ಒಕ್ಕೂಟಗಳು ರೈತರ ಹಾಲಿನ ದರಗಳನ್ನು ಕಡಿತ ಮಾಡುತ್ತಿರುವುದು ಖಂಡನೀಯ. ಸಂಕಷ್ಟದಲ್ಲಿ ಇರುವ ಹಾಲು ಉತ್ಪಾದಕ ರೈತರನ್ನು ರಕ್ಷಿಸಲು ರಾಜ್ಯ ಸರ್ಕಾರ ಸದ್ಯ ನೀಡುತ್ತಿರುವ ಪ್ರೋತ್ಸಹ ಧನವನ್ನು 5-00 ರೂ. ಗಳಿಂದ 15-00 ರೂ. ಗೆ ಏರಿಸಬೇಕು. ಜಾನುವಾರು ಹತ್ಯೆ ಕಾಯ್ದೆಯನ್ನು ವಾಪಸ್ಸು ಪಡೆಯುವವರಿಗೆ ವಯಸ್ಸಾದ ಮತ್ತು ಹೈನುಗಾರಿಕೆ, ಕೃಷಿ ಕೆಲಸಗಳಿಗೆ ಯೋಗ್ಯವಲ್ಲದ ಜಾನುವಾರುಗಳನ್ನು ಮಾರುಕಟ್ಟೆಯ ದರದಲ್ಲಿ ರಾಜ್ಯ ಸರ್ಕಾರವೇ ಖರೀದಿ ಮಾಡಬೇಕು.
  • ಹಾಲು ನೀಡುವ ಹಸು, ಕರುಗಳು ಹಾಗೂ ಕೃಷಿ ಕೆಲಸಗಳಲ್ಲಿ ತೊಡಗಿರುವ ದನ, ಕರುಗಳಿಗೆ ಜೀವ ವಿಮೆಯನ್ನು ಕಡ್ಡಾಯ ಮಾಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರ ಜಾನುವಾರುಗಳಿಗೆ ಶೇ. 100 ರಷ್ಟು ವಿಮೆ ಕಂತಿನ ಹಣವನ್ನು ಪಾವತಿಸಬೇಕು. ಅಲ್ಲದೆ ಇತರೆ ರೈತರು ಮತ್ತು ಕೃಷಿ ಕೂಲಿಕಾರರಿಗೂ ಶೇ. 90 ರಷ್ಟು ವಿಮೆ ಕಂತಿನ ಹಣವನ್ನು ರಾಜ್ಯ ಸರ್ಕಾರವೇ ಭರಿಸಬೇಕು.
  1. ರೈತರ ಆತ್ಮಹತ್ಯೆಗಳನ್ನು ನಿಲ್ಲಿಸಲು, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿ ಮಾಡುವ “ಕಾನೂನು”ನನ್ನು ಜಾರಿ ಮಾಡಬೇಕು:
  • ಕೃಷಿ ಉತ್ಪಾದನಾ ವೆಚ್ಚದ ಜೊತೆಗೆ ಶೇ. 50 ರಷ್ಟು ಲಾಭವನ್ನು (ಸಿ2+50%) ಸೇರಿಸಿ ಎಲ್ಲಾ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವ “ಕೇಂದ್ರೀಯ ಕಾನೂನು”ನ್ನು ಜಾರಿ ಮಾಡಬೇಕು. ಹಾಲಿ ಬೆಂಬಲ ಬೆಲೆ ನೀಡುವ 23 ಬೆಳೆಗಳ ಜೊತೆಗೆ ರಾಜ್ಯದ ಎಲ್ಲಾ ಬೆಳೆಗಳನ್ನು ಸೇರಿಸಬೇಕು. ರೈತರಿಗೆ “ಆದಾಯ ಖಾತ್ರಿ ಗೊಳಿಸುವ ಕಾಯ್ದೆಯನ್ನು ಜಾರಿಗೆ ತರಬೇಕು. ಅಲ್ಲದೆ ರಾಜ್ಯದ ಭತ್ತ, ರಾಗಿ, ಜೋಳ, ತೊಗರಿ, ಸಿರಿಧಾನ್ಯ ಮತ್ತು ಇತರೆ ಧಾನ್ಯಗಳನ್ನು ಸರ್ಕಾರವೆ ರೈತರಿಂದ ನೇರವಾಗಿ ಖರೀದಿಸಿ ಪಡಿತರ ವ್ಯವಸ್ಥೆ ಮೂಲಕ ವಿತರಿಸಬೇಕು.”
  • ಕೇಂದ್ರ ಸರ್ಕಾರದ ಘೋಷಿತ ಕನಿಷ್ಠ ಬೆಂಬಲ ಬೆಲೆಯ ಜೊತೆಗೆ ಇಂದಿನ ರಾಜ್ಯ ಸರ್ಕಾರಗಳು ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಮುಂದುವರಿಸಬೇಕು.
  1. ವಿದ್ಯುತ್ ಮಸೂದೆ-2022 ವಾಪಸ್ಸು ಪಡೆಯಬೇಕು; ವಿದ್ಯುತ್ ಖಾಸಗೀಕರಣ ನಿಲ್ಲಬೇಕು.
  • ರೈತರ ಕೃಷಿ ನೀರಾವರಿ ಪಂಪಸೆಟ್‌ಗಳು, ಬಡವರ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ವಿದ್ಯುತ್ ಸಂಪರ್ಕಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್‌ನ್ನು ನಿಲ್ಲಿಸುವ, ಬಡ, ಮಧ್ಯಮ ವರ್ಗಗಳ ಗೃಹಬಳಕೆ ವಿದ್ಯುತ್ ದರಗಳ ಹೆಚ್ಚಳಕ್ಕೆ ಕಾರಣವಾಗುವ ಹಾಗು ಲಕ್ಷ ಲಕ್ಷ ಕೋಟಿ ರೂ. ಗಳ ಮೌಲ್ಯದ ಸಾರ್ವಜನಿಕ ಒಡೆತನದ ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕಾಗಿ ಪಾರ್ಲಿಮೆಂಟ್‌ನಲ್ಲಿ ಮಂಡಿಸಿರುವ “ವಿದ್ಯುತ್ ಮಸೂದೆ-2022” ವಾಪಸ್ಸು ಪಡೆಯಬೇಕು.
  1. ಅಗತ್ಯಕ್ಕೆ ತಕ್ಕಂತೆ ರೈತರು, ಕೃಷಿ ಕೂಲಿಕಾರರಿಗೆ ಬ್ಯಾಂಕ್ ಸಾಲ ನೀಡಿಕೆ, ವಿಶೇಷ ಸಂದರ್ಭಗಳಲ್ಲಿ ಸಾಲ ಮನ್ನಾ ಮಾಡುವಂತಹ “ಋಣ ಮುಕ್ತ ಕಾಯ್ದೆ” ಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು:
  • ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಇತ್ಯಾದಿ ಎಲ್ಲಾ ಕೃಷಿ ಲಾಗುವಡಿಗಳ ಬೆಲೆಗಳು ವಿಪರೀತವಾಗುತ್ತಿರುವ ಹಿನ್ನೆಲೆಯಲ್ಲಿ ರೈತರು, ಕೃಷಿ ಕೂಲಿಕಾರರು, ಗ್ರಾಮೀಣ ಕಸಬುದಾರರು, ಸ್ತಿçà ಶಕ್ತಿ ಗುಂಪುಗಳಿಗೆ ಅಗತ್ಯವಿರುವವರಿಗೆ ಶೂನ್ಯ ಬಡ್ಡಿ, ಕಡಿಮೆ ಬಡ್ಡಿಯ ಬ್ಯಾಂಕ್ ಸಾಲಗಳನ್ನು ನೀಡಬೇಕು. ಪ್ರಕೃತಿ ವಿಕೋಪ, ದೀಡಿರ್ ದರ ಕುಸಿತ ಇತ್ಯಾದಿ ವಿಶೇಷ ಸಂದರ್ಭಗಳಲ್ಲಿ ಬಡ್ಡಿ ಮನ್ನಾ, ಸಂಪೂಣ ಸಾಲಮನ್ನಾ ಮಾಡುವ `ಋಣಮುಕ್ತ ಕಾಯ್ದೆ’ಯನ್ನು ಸರ್ಕಾರಗಳು ಜಾರಿಗೆ ತರಬೇಕು.
  • ಕಳೆದ ಮೂವತ್ತು ವರ್ಷಗಳ ಜಾಗತೀಕರಣದ ನೀತಿಗಳ ಪರಿಣಾಮವಾಗಿ ತೀವ್ರಗೊಂಡಿರುವ ಕೃಷಿ ಬಿಕ್ಕಟ್ಟಿನ ಫಲವಾಗಿ ನಡೆದಿರುವ ನಾಲ್ಕು ಲಕ್ಷ ರೈತರ ಆತ್ಮಹತ್ಯೆಗಳು ಮುಂದುವರಿಯದಂತೆ ತಡೆಯಲು ರೈತರು, ಕೃಷಿ ಕೂಲಿಕಾರರು, ಗ್ರಾಮೀಣಾ ಮಹಿಳೆಯರ ಮತ್ತು ಕಸಬುದಾರರ ಎಲ್ಲಾ ಸಾಲಗಳನ್ನು ಒಂದು ಹಂತದ ಕ್ರಮವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ಮನ್ನಾ ಮಾಡಬೇಕು.
  • ಕೃಷಿ ಬಿಕ್ಕಟ್ಟಿನ ಪರಿಣಾಮವಾಗಿ ಬ್ಯಾಂಕ್ ಸಾಲವನ್ನು ಕಟ್ಟಲಾಗದ ರೈತರು, ಕೃಷಿ ಕೂಲಿಕಾರರು ಮತ್ತು ಗ್ರಾಮೀಣ ಕಸುಬುದಾರರಿಗೆ ಬ್ಯಾಂಕ್‌ಗಳು ನೀಡುತ್ತಿರುವ “ಒಂದು ಬಾರಿ ಪರಿಹಾರ” ವ್ಯವಸ್ಥೆಗೆ ಸಮಗ್ರ ಮತ್ತು ಪಾರದರ್ಶಕ ನೀತಿಯೊಂದನ್ನು ರೂಪಿಸಬೇಕು. “ಒಂದು ಬಾರಿ ಪರಿಹಾರವಾಗಿ ಇತ್ಯಾರ್ಥವಾಗುತ್ತಿರುವ ಪ್ರಕರಣಗಳಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿಯೂ ಈಗ ಸದ್ಯ ಎಸ್.ಬಿ.ಐ. ಮತ್ತಿತ್ತರೆ ಬ್ಯಾಂಕುಗಳಲ್ಲಿ ನೀಡುತ್ತಿರುವ ರೀತಿಯ ರಿಯಾಯಿತಿಗಳನ್ನು ನೀಡಬೇಕು. ಕೋರ್ಟ್ ಆದೇಶದ ಅನ್ವಯ ರೈತರ ಕೃಷಿ ಭೂಮಿಗಳ ಆನ್‌ಲೈನ್ ಹರಾಜಿನ ಹೆಸರಿನಲ್ಲಿ ನಡೆಯುತ್ತಿರುವ ರೈತರ ಮೇಲಿನ ದಬ್ಬಾಳಿಕೆಯನ್ನು ಬ್ಯಾಂಕುಗಳು ನಿಲ್ಲಿಸಬೇಕು.

  1. ಆಹಾರ ಧಾನ್ಯ ಬೆಳೆಗಳು ಎಕರೆಗೆ ಕನಿಷ್ಠ 25,000 ರೂ, ತರಕಾರಿ, ತೋಟಗಾರಿಕೆ ಬೆಳೆಗಳ ಎಕರೆಗೆ ಕನಿಷ್ಠ ಒಂದು ಲಕ್ಷ ರೂ. ಬೆಳೆ ನಷ್ಟ ಪರಿಹಾರ ನೀಡಲು ಆಗ್ರಹ, ಓಬಿರಾಯನ ಕಾಲದ “ರಾಷ್ಟ್ರೀಯ ವಿಪತ್ತ್ ಪರಿಹಾರ ನಿಧಿ (ಎನ್.ಡಿ.ಆರ್.ಎಫ್) ಯ ಅವೈಜ್ಞಾನಿಕ ಮಾನದಂಡಗಳನ್ನು ಪರಿಷ್ಕರಿಸಲು ಒತ್ತಾಯ:
  • ಕಳೆದ ಎರಡು ತಿಂಗಳಿಂದ ಸತತ ಮಳೆಯಿಂದ ಬೆಳೆ ನಷ್ಟಕ್ಕೆ ಗುರಿಯಾಗಿ ರೈತರು ಕನಿಷ್ಠ ಮಾಡಿರುವ ಖರ್ಚಾನ್ನಾದರೂ ನೀಡಲು ಆಹಾರ ಧಾನ್ಯ ಬೆಳೆಗಳ ಎಕರೆಗೆ 25,000 ರೂ. ತರಕಾರಿ, ತೋಟಗಾರಿಕೆ ಬೆಳೆಗಳ ಎಕರೆಗೆ 1,00,000 ರೂ. ಬೆಳೆ ನಷ್ಠ ಪರಿಹಾರವನ್ನು ಸರ್ಕಾರಗಳು ನೀಡಬೇಕು.
  • ಮಳೆಯಿಂದ ಪೂರ್ಣ ಮನೆಗಳನ್ನು ಕಳೆದುಕೊಂಡವರಿಗೆ ಕನಿಷ್ಠ 10 ಲಕ್ಷ ರೂ., ಭಾಗಶಃ ಮನೆಗಳನ್ನು ಕಳೆದುಕೊಂಡವರಿಗೆ ಕನಿಷ್ಠ 5 ಲಕ್ಷ ಪರಿಹಾರ ನೀಡಬೇಕು.
  • ಒಣ ಬೇಸಾಯದ ಹೆಕ್ಟೇರಿಗೆ 6800 ರೂ., ನೀರಾವರಿ ಬೇಸಾಯದ ಹೆಕ್ಟೇರಿಗೆ 13,500 ರೂ. ಹಾಗು ತೋಟಗಾರಿಕೆ ಬೆಳೆಗಳ ಹೆಕ್ಟೇರ್‌ಗೆ 15,000 ರೂ. ಬೆಳೆ ನಷ್ಟ ಪರಿಹಾರ ಎನ್ನುವ ಕೇಂದ್ರ ಸರ್ಕಾರದ “ರಾಷ್ಟ್ರೀಯ ವಿಪತ್ತ ಪರಿಹಾರ ನಿಧಿ (ಎನ್.ಡಿ.ಆರ್.ಎಫ್) ನೀತಿಯು ತೀರ ಅನಾಗರೀಕವಾದುದ್ದು, ಇದನ್ನು ವೈಜ್ಞಾನಿಕವಾಗಿ ಪರಿಷ್ಕರಿಸಿ ಕನಿಷ್ಠ ರೈತರು ಹಾಕಿರುವ ಬಂಡವಾಳವನ್ನಾದರೂ ಪರಿಹಾರವಾಗಿ ನೀಡುವ ವ್ಯವಸ್ಥೆಯನ್ನು ರೂಪಿಸಬೇಕು.
  • 2021-22 ರ ಸಾಲಿನ ಅತಿವೃಷ್ಠಿಗೆ ಗುರಿಯಾದ ಎಲ್ಲಾ ರೈತರು ಮತ್ತು ಕೃಷಿ ಕೂಲಿಕಾರರಿಗೆ ನೀಡಬೇಕಿರುವ ಬೆಳೆ ನಷ್ಟ ಪರಿಹಾರ ಮತ್ತಿತ್ತರೆ ಪರಿಹಾರಗಳನ್ನು ಕೂಡಲೇ ಸಂದಾಯ ಮಾಡಬೇಕು. ಹಿಂದೆ ಘೋಷಿಸಿದಂತೆ ಕಳೇದ ನಾಲ್ಕೆöÊದು ವರ್ಷಗಳ ಅತಿವೃಷ್ಠಿ ಹಾಗೂ ಅನಾವೃಷ್ಠಿಯ “ಪರಿಹಾರ” ನೀಡಿಕೆಯ ಬಗ್ಗೆ ಶ್ವೇತ ಪತ್ರವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು.
  • ರೈತ ಪರವಾದ ವೈಜ್ಞಾನಿಕ ಬೆಳೆ ವಿಮೆ ಪದ್ಧತಿಯನ್ನು ಜಾರಿಗೆ ತರಬೇಕು. ಬೆಳೆ ನಷ್ಟ ಸಂದರ್ಭದಲ್ಲಿ ಪ್ರತಿಯೋಬ್ಬ ರೈತನಿಗೂ ವಿಮೆ ಸಿಗುವಂತೆ ನಿಯಮಗಳನ್ನು ರೂಪಿಸಬೇಕು. ಬೆಳೆ ವಿಮೆ ಕ್ಷೇತ್ರದಿಂದ ಖಾಸಗಿ ಕಂಪನಿಗಳನ್ನು ಹೊರಗಿಡಬೇಕು.
  1. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ:
  • ಗ್ರಾಮೀಣ ನಿರುದ್ಯೋಗ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕೂಲಿಯ ದಿನಗಳನ್ನು 200 ಕ್ಕೆ ಏರಿಸಬೇಕು, ಕೂಲಿಯನ್ನು ಕನಿಷ್ಠ 600 ರೂ. ಗೆ ಏರಿಸಬೇಕು. ಮತ್ತು ಇನ್ನಷ್ಟು ಕೃಷಿ ಕೆಲಸಗಳನ್ನು ಈ ಯೋಜನೆಯ ಅಡಿಯಲ್ಲಿ ತರಬೇಕು. ಸದ್ಯ ಬಾಕಿ ಇರುವ ಕೂಲಿ ಹಣವನ್ನು ಕೂಡಲೇ ಪಾವತಿ ಮಾಡಬೇಕು. ಈ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಣೆಯನ್ನು ಮಾಡಬೇಕು.

  1. ರಾಜ್ಯದಲ್ಲಿ ನೀರಾವರಿ ಯೋಜನೆಗಳ ಜಾರಿಗೆ ಕೂಡಲೇ ಆದ್ಯತೆ ಸಿಗಬೇಕು.
  • ರಾಜ್ಯದಲ್ಲಿ ಮಹಾದಾಯಿ ನೀರಾವರಿ ಯೋಜನೆ, ಕೃಷ್ಣ ಮೇಲ್ದಂಡೆ ಯೋಜನೆ, ಕೃಷ್ಣ ನೀರಾವರಿ ಯೋಜನೆ, ಎತ್ತಿನ ಹೊಳೆ ಯೋಜನೆ, ಕೆ.ಸಿ. ವ್ಯಾಲಿ, ಹೆಚ್.ಎನ್. ವ್ಯಾಲಿ ಮತ್ತಿತರೇ ಘೋಷಿತ ಯೋಜನೆಗಳನ್ನು ಕೂಡಲೇ ಪೂರ್ಣಗೊಳಿಸಬೇಕು. ಅಲ್ಲದೇ ಮೇಕೆದಾಟು, ಹೆಚ್ಚುವರಿ ಜಲ ಸಂಪನ್ಮೂಲಗಳನ್ನು ಆಧರಿಸಿದ ಹೊಸ ಯೋಜನೆಗಳನ್ನು ರೂಪಿಸಲು ಮತ್ತು ಜಾರಿಗೊಳಿಸಲು ರಾಜ್ಯ ಸರ್ಕಾರ ಶ್ರೀಘ್ರವಾಗಿ ಕಾರ್ಯಪ್ರವೃತ್ತವಾಗಬೇಕು. ರಾಷ್ಟç ಮಟ್ಟದಲ್ಲಿ ನದಿ ಜೋಡಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಪಾಲಿನ ನೀರನ್ನು ಬಳಸಿಕೊಳ್ಳುವ ಸಮಗ್ರ ನೀತಿಯೊಂದನ್ನು ರೂಪಿಸಬೇಕು. ಕೃಷ್ಣ, ಕಾವೇರಿ, ಕಬಿನಿ ಸೇರಿದಂತೆ ಬಾಕಿ ಉಳಿದಿರುವ ಎಲ್ಲಾ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಮುಗಿಸಬೇಕು.
  1. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಅಭಿವೃದ್ಧಿಗೆ ಆದ್ಯತೆ ಸಿಗಬೇಕು.
  • ಸರ್ಕಾರಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಯ ಅನುಗುಣವಾಗಿ ಬಜೆಟ್‌ನಲ್ಲಿ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆಗಳಿಗೆ ಹಣವನ್ನು ತೆಗೆದಿಡಬೇಕು. ನಿಗದಿತ ಉದ್ದೇಶಗಳಿಗಾಗಿ ಮಾತ್ರ ಈ ಹಣವನ್ನು ವ್ಯಯ ಮಾಡಬೇಕು. ಈ ಅಭಿವೃದ್ಧಿ ನಿಧಿಯ ದುರ್ಬಳಕೆಯನ್ನು ತಡೆಗಟ್ಟಬೇಕು.
  • ಎಲ್ಲಾ ಇಲಾಖೆಗಳಲ್ಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಖಾಸಗೀ ಕ್ಷೇತ್ರದಲ್ಲಿಯೂ ಮೀಸಲಾತಿಯನ್ನು ಜಾರಿ ಮಾಡಬೇಕು.
  1. ಕಾರ್ಮಿಕ ಕಾಯ್ದೆಗಳ ತಿದ್ದುಪಡಿಗಳು ರದ್ದಾಗಬೇಕು, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಬೇಕು, ಕನಿಷ್ಠ ವೇತನ ಜಾರಿಯಾಗಬೇಕು:
  • ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿಗಳನ್ನು ತಂದು ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ರದ್ದಾಗಬೇಕು, ನಗದೀಕರಣದ ಹೆಸರಿನಲ್ಲಿ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳ ಮಾರಾಟ ನಿಲ್ಲಬೇಕು. ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಎಲ್ಲಾ ನೌಕರರು, ಕಾರ್ಮಿಕರಿಗೆ ಮಾಸಿಕ 26,000 ರೂ. ಕನಿಷ್ಠ ವೇತನವನ್ನು ಖಾತರಿ ಮಾಡಬೇಕು.
  • ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಬೇಕು. ಎಲ್ಲಾ ರೀತಿಯ ಗುತ್ತಿಗೆ/ಹೊರಗುತ್ತಿಗೆ ಉದ್ಯೋಗ ಪದ್ಧತಿಯನ್ನು ಕೊನೆಗಾಣಿಸಬೇಕು.
  1. ದಲಿತ-ಹಿಂದುಳಿದ, ಗ್ರಾಮೀಣ ಪ್ರದೇಶದ ಹಾಗೂ ಬಡ ವರ್ಗಗಳ ವಿದ್ಯಾರ್ಥಿಗಳಿಗೆ ಮಾರಕವಾಗಿರುವ ಹೊಸ ಶಿಕ್ಷಣ ನೀತಿ (ಎನ್‌ಇಪಿ) ವಾಪಸ್ಸು ಪಡೆಯಬೇಕು, ಸರ್ಕಾರಿ, ಅರೇ ಸರ್ಕಾರಿ ಇಲಾಖೆ/ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ನಾನಾ ನೆಪಗಳನ್ನೊಡ್ಡಿ ದಲಿತ-ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನಗಳಿಗೆ ಮತ್ತು ಹಾಸ್ಟೆಲ್ ಸೌಲಭ್ಯಗಳಿಗೆ ಪದೆ ಪದೆ ಅಡಚಣೆ ಒಡ್ಡುವುದನ್ನು ನಿಲ್ಲಿಸಬೇಕು. ಪ್ರಗತಿಪರ ವೈಜ್ಞಾನಿಕ ಶಿಕ್ಷಣ ಕ್ರಮಕ್ಕೆ ಒತ್ತು ನೀಡಬೇಕು. ಉದ್ಯೋಗ ಸೃಷ್ಠಿಗಾಗಿ ಸಮಗ್ರ ಯೋಜನೆಯೊಂದನ್ನು ರೂಪಿಸಬೇಕು.
  2. ಅಡುಗೆ ಎಣ್ಣೆ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಬೇಕು, ರೇಷನ್ ಪದ್ಧತಿಯನ್ನು ಬಲಪಡಿಸಬೇಕು, ಮತ್ತಷ್ಟು ಗ್ರಾಹಕ ಸ್ನೇಹಿಯಾಗಿ ಅಗತ್ಯ ವಸ್ತುಗಳ ಕಾಯ್ದೆಯನ್ನು ಮತ್ತೇ ಜಾರಿಮಾಡಬೇಕು.
  • ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸೇರಿದಂತೆ ಜನಸಾಮಾನ್ಯರು ಬಳಸುವ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು. “ಕೇರಳ ಮಾದರಿ”ಯಲ್ಲಿ ರಾಗಿ, ಅಕ್ಕಿ, ಬೇಳೆ, ಅಡಿಗೆ ಎಣ್ಣೆ, ಸಕ್ಕರೆ, ಟೀ ಪುಡಿ, ಉಪ್ಪು, ಮೆಣಸಿನ ಕಾಯಿಪುಡಿ ಇತ್ಯಾದಿ ವಸ್ತುಗಳನ್ನು ರೇಷನ್ ಮೂಲಕ ವಿತರಣೆ ಮಾಡಬೇಕು.
  • ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ಭಾಗವಾಗಿ ತಿದ್ದುಪಡಿ ಮಾಡಲಾಗಿದ್ದ ಅಗತ್ಯ ವಸ್ತುಗಳ ಕಾಯ್ದೆ-1955 ನ್ನು ಮತ್ತಷ್ಟು ಗ್ರಾಹಕ ಸ್ನೇಹಿ ತಿದ್ದುಪಡಿಗಳೊಂದಿಗೆ ಮತ್ತೆ ಜಾರಿ ಮಾಡಬೇಕು.

 

  1. ರಾಜ್ಯಾದ್ಯಂತ ಕಬ್ಬು ಬೆಳೆಗಾರರ ಸಮಸ್ಯೆ ಹಲವು ದಶಕಗಳಿಂದಲೂ ಮುಂದುವರಿಯುತ್ತಿದೆ, ಬಲಿಷ್ಠ ‘ಸಕ್ಕರೆ ಲಾಬಿ’ಯು ಬೆಳೆಗಾರರ ಬದುಕನ್ನು ಕಬ್ಬಿನಂತೆಯೇ ಹಿಂಡಿ ಹಿಪ್ಪೆ ಮಾಡುತ್ತಿದೆ. ಸಿಹಿ ಬೆಳೆವವರ ಬದುಕು ಕಹಿಯಾಗಿ ಮಾರ್ಪಟ್ಟಿದೆ. ಲಕ್ಷಾಂತರ ಕೋಟಿ ಲಾಭ ಗಳಿಸುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಸಕಾಲಕ್ಕೆ ಪಾವ್ತಿ ಮಾಡದೆ ಸಾವಿರಾರು ಕೋಟಿ ರೂ. ಬಾಕಿ ಮಾಡಿ ವಂಚಿಸುತ್ತಿವೆ. ತೂಕದಲ್ಲಿ ನಿರಂತರ ಮೋಸ ಮುಂದುವರಿದಿದೆ. ಈ ‘ಸಕ್ಕರೆ ಲಾಬಿ’ಯನ್ನು ನಿಯಂತ್ರಿಸಿ, ಕಬ್ಬು ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಕಾರ್ಖಾನೆಗಳ ಅಕ್ರಮ-ಅವ್ಯವಹಾರಗಳನ್ನು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಒಳಪಡಿಸಬೇಕು. ಕಬ್ಬಿನ ಉಪ ಉತ್ಪನಗಳ ಆದಾಯವನ್ನು ಪರಿಗಣಿಸಿ ಕಬ್ಬಿನ ಬೆಲೆ ನಿರ್ಧರಿಸಬೇಕು.
  2. ಸರ್ಕಾರ ಅಥವಾ ಸಂಬಂಧಿತ ಇಲಾಖೆಗಳೊಂದಿಗಿನ ರೈತರ ವಿವಾದಗಳ ಪರಿಹಾರಕ್ಕಾಗಿ ಪ್ರತ್ಯೇಕ ‘ಕಂದಾಯ ನ್ಯಾಯಾಲಯ’ಗಳನ್ನೂ, ಸಹಕಾರ ಸಂಘಗಳ ವ್ಯಾಜ್ಯ ಪರಿಹಾರಕ್ಕೆ ‘ಸಹಕಾರ ನ್ಯಾಯಾಲಯ’ಗಳನ್ನೂ ಸ್ಥಾಪಿಸಬೇಕು.
  3. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ, ಕೃಷಿ ಕೂಲಿಕಾರರ ಹಾಗೂ ಗ್ರಾಮೀಣ ಕಸಬುದಾರರ ಎಲ್ಲಾ ಸಾಲಗಳನ್ನು ಒಂದು ಸಲದ ಕ್ರಮವಾಗಿ ಸಂಪೂರ್ಣ ಮನ್ನಾ ಮಾಡಬೇಕು. ಸಾಲ ನೀಡಿಕೆಯಲ್ಲಿ ಇವರುಗಳನ್ನು ‘ಆದ್ಯತಾ ವಲಯ’ವೆಂದು ಪರಿಗಣಿಸಬೇಕು, ಹಾಗೂ ವಿಶೇಷ ಸಂದರ್ಭಗಳಲ್ಲಿ ಸಾಲ ಮನ್ನಾ ಮಾಡುವಂತಹ “ಋಣಮುಕ್ತ ಕಾಯ್ದೆ”ಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು.
  4. ಕೃಷಿಯಲ್ಲಿ ತೊಡಗಿರುವ ಮಹಿಳೆಯರನ್ನು ಮಹಿಳಾ ರೈತರೆಂದು ಪರಿಗಣಿಸಿ ಸಾಲ ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಅನುಕೂಲವಾಗುವಂತೆ ಪುರುಷ ಮತ್ತು ಮಹಿಳೆಯರ ಹೆಸರಿನಲ್ಲಿ ಜಂಟಿ ಪಟ್ಟಾ ನೀಡಬೇಕು.
  5. ಅಡಿಕೆಯ ‘ಕನಿಷ್ಠ ಆಮದು ಬೆಲೆ’ಯನ್ನು ರೂ. 250ರಿಂದ 400ಕ್ಕೆ ಹೆಚ್ಚಿಸಬೇಕು; ‘ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ’ ಎಂಬ ವರದಿಗಳನ್ನು ಅಫಿಡವಿಟ್ ಮೂಲಕ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿನ ಮುಂದೆ ತರುವಂತೆ ಒತ್ತಡ ಹಾಕಬೇಕು. ಅಡಿಕೆ ಬೆಳೆಗೆ ದಶಕಗಳಿಂದ ಬಾಧಿಸುತ್ತಿರುವ ‘ಹಳದಿ ಎಲೆ ರೋಗ’ ಮತ್ತು ‘ತೊಂಡೆ ರೋಗ’ಕ್ಕೆ ಶೀಘ್ರ ಪರಿಹಾರ ಕಂಡುಹಿಡಿಯಬೇಕು. ಅಡಿಕೆ ಬೆಳೆ ಮತ್ತು ಬೆಳೆಗಾರರ ಸಮಸ್ಯೆಗಳ ಸಮಗ್ರ ಪರಿಹಾರಕ್ಕಾಗಿ ‘ಅಡಿಕೆ ಅಭಿವೃದ್ಧಿ ಮಂಡಳಿ’ ರಚಿಸಬೇಕು. ತೆಂಗು ಉಪ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ `ತೆಂಗು ಅಭಿವೃದ್ಧಿ ಮಂಡಳಿ’ ಸ್ಥಾಪಿಸಬೇಕು.
  6. ರಸಗೊಬ್ಬರ, ಕೀಟನಾಶಕ, ಬಾಡಿಗೆ ಯಂತ್ರಗಳು ಮುಂತಾದ ಕೃಷಿ ಲಾಗುವಾಡುಗಳ ಮೇಲಿನ ಜಿ.ಎಸ್.ಟಿ. ರದ್ದಾಗಬೇಕು.
  7. ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಹೆಚ್ಚಾಗುತ್ತಿದ್ದು ಖಾಸಗೀ ಆಸ್ಪತ್ರೆಗಳ ಸುಲಿಗೆ ಮಿತಿಮೀರಿ ಬೆಳೆದಿದೆ. ಇದು ಗ್ರಾಮೀಣ ಹಾಗೂ ಬಡಜನರ ಬದುಕನ್ನು ದುಸ್ತರಗೊಳಿಸಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಗೊಳಿಸಲು ಹೆಚ್ಚಿನ ಬಜೆಟ್ ಅನ್ನು ಮೀಸಲಿಡಬೇಕು.
  8. ಸಾರ್ವಜನಿಕ ಆಹಾರ ಭದ್ರತಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಮತ್ತು ಪಡಿತರದಲ್ಲಿ ಎಲ್ಲಾ ಜೀವನವಶ್ಯಕ ವಸ್ತುಗಳು ಲಭ್ಯವಾಗುವಂತೆ ಮಾಡಬೇಕು. ಮದ್ಯಾಹ್ನದ ಬಿಸಿಯೂಟದ ಜೊತೆ ಮೊಟ್ಟೆ ಮತ್ತು ಹಣ್ಣು ವಿತರಣೆಗೆ ಕ್ರಮಕೈಗೊಳ್ಳಬೇಕು. ಈ ಮೂಲಕ ಕೃಷಿ ಉತ್ಪನ್ನಗಳಿಗೂ ಪ್ರೋತ್ಸಾಹ ನೀಡುವಂತಾಗಬೇಕು.
  9. ಮಹಿಳೆಯರು ಮತ್ತು ದಲಿತರ ಮೇಲಿನ ಹಿಂಸೆಗಳನ್ನು ತಡೆಗಟ್ಟಬೇಕು ಹಾಗೂ ಎಸ್‌ಸಿಪಿ-ಟಿಎಸ್‌ಪಿ ಅಭಿವೃದ್ಧಿ ನಿಧಿಯನ್ನು ದುರ್ಬಳಕೆಯನ್ನು ನಿಲ್ಲಿಸಲು ಕ್ರಮ ವಹಿಸಬೇಕು.

ಸಂಕಲ್ಪ ನಿರ್ಣಯ

ಕರ್ನಾಟಕದ ಸಮಸ್ತ ರೈತಾಪಿ ದುಡಿವ ಜನರು ಮೇಲ್ಕಂಡ ಹಕ್ಕೊತ್ತಾಯಗಳನ್ನು ರಾಜ್ಯ-ಕೇಂದ್ರ ಸರ್ಕಾರಗಳು ಈಗಲೂ ಕಡೆಗಣಿಸಿದ್ದೇ ಆದಲ್ಲಿ, ದೆಹಲಿ ಹೋರಾಟದಿಂದ ಸ್ಫೂರ್ತಿ, ಮಾರ್ಗದರ್ಶನ ಪಡೆದಿರುವ ಕರ್ನಾಟಕದ ರೈತ-ದಲಿತ-ಕಾರ್ಮಿಕ-ಮಹಿಳಾ-ವಿದ್ಯಾರ್ಥಿ-ಯುವಜನರ ಸಂಘಟನೆಗಳೆಲ್ಲವೂ ಒಗ್ಗೂಡಿ, ಈ ಎಲ್ಲ ಸಮಸ್ಯೆಗಳೂ ಪರಿಹಾರವಾಗಿ ಈಡೇರುವವರೆಗೂ ದೆಹಲಿಯಂತೆಯೇ ರಾಜ್ಯದಲ್ಲೂ ಅನಿರ್ದಿಷ್ಟಾವಧಿ ಹೋರಾಟವನ್ನು ಆರಂಭಿಸುವುದಾಗಿ ಸಂಯುಕ್ತ ಹೋರಾಟ – ಕರ್ನಾಟಕ ಸಂಕಲ್ಪ ಮಾಡಿವೆ.

Donate Janashakthi Media

One thought on “ಜನ ಪರ್ಯಾಯ ಬಜೆಟ್‌ ಅಧಿವೇಶನ: ಜನಪರವಾದ ಹಲವು ನಿರ್ಣಯಗಳು ಅಂಗೀಕಾರ

  1. ಜನ ಪರ್ಯಾಯ ಬಜೆಟ ,ಉದ್ದೇಶವು ಸ್ಪಷ್ಟವಾಗಿದೆ ಆದರೆ ರಾಜ್ಯ ಬಜೆಟ ನoತರ ಇದರ ಚರ್ಚೆ ಎಷ್ಟು ಪ್ರಸ್ತುತ ?

    ಚನಪರ ಬಜೆಟ ವಿವರಗಳು ಎಲ್ಲ ಅoಶಗಳನ್ನು ಒಳಗೊoಡಿದೆ,ಆದರೆ ಈ ಸರಕಾರ ಅದನ್ನು ಜಾರಿಗೆ ತರುವುದಿಲ್ಲ .

    ಕಮ್ಯುನಿಷ್ಟ ಪಕ್ಷಗಳು ಅಧಿಕಾರಕ್ಕೆ ಬoದಾಗ ಮಾತ್ರ ಇದನ್ನು ಚಾರಿಗೆ ತರಲು ಸಾಧ್ಯ.ಆದ್ದರಿoದ ನೀವು ಮೊದಲು ಈಗಿರುವ ಕಳೆ ಕಿತ್ತುಹಾಕಿ,ಬಲಿಷ್ಟ ಪಕ್ಷಕಟ್ಟಿ,ಅಧಿಕಾರ ಹಿಡಿಯಿರಿ,ನoತರ ಜನಪರ ಬಜೆಟಗೆ ಮಹತ್ವ ಬರಬಹುದು.

    ಈಗ ನೀವು ಬಿದ್ದುಹೋದ ಪಕ್ಷ,ನಿಮ್ಮಿoದ ಏನು ಸಾಧ್ಯವಿಲ್ಲ !

Leave a Reply

Your email address will not be published. Required fields are marked *