- ಜ.1ರಂದು ಘೋಷ ಮೈಸೂರಿನಲ್ಲಿ ಡಾ.ಸುಧಾಕರ್ ಹೇಳಿಕೆ
ಮೈಸೂರು: ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ತನಕ ಎಲ್ಲ ಕಡೆ ಪರೀಕ್ಷೆಗಳನ್ನು ಒಂದು ರೂ. ಶುಲ್ಕ ಪಡೆಯದೇ ಉಚಿತವಾಗಿ ಮಾಡಲಾಗುತ್ತದೆ. ಈ ವ್ಯವಸ್ಥೆಯನ್ನು ಜ.1ರಂದು ಘೋಷಿಸಲಾಗುವುದು ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾಲಯದ ಡೀನ್ ಕಚೇರಿಯಲ್ಲಿ ಬುಧವಾರ ಕಾಲೇಜು ಮತ್ತು ಅಂಗ ಆಸ್ಪತ್ರೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಈ ಮಹತ್ವದ ವಿಚಾರವನ್ನು ಹೇಳಿದರು. ಸರಕಾರಿ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆ ಸೇರಿ ಕೆಲ ಪರೀಕ್ಷೆಗಳನ್ನು ಮಾಡದೆ ಖಾಸಗಿ ಲ್ಯಾಬ್‌ಗೆ ಕಳುಹಿಸಲಾಗುತ್ತಿದೆ. ಕೆಲ ಲ್ಯಾಬ್‌ಗಳಿಗೆ ಸರ್ಕಾರಿ ವೈದ್ಯರೇ ಪಾಲುದಾರರಾಗಿದ್ದಾರೆ. ಹಾಗಾಗಿ, ಇದನ್ನು ತಪ್ಪಿಸಲು ಜ.1ರಿಂದ ರಕ್ತಪರೀಕ್ಷೆ, ಎಂಆರ್‌ಐ, ಸಿಟಿ ಸ್ಕ್ಯಾನ್ ಸೇರಿ ಯಾವುದೇ ತರಹದ ಪರೀಕ್ಷೆಗಳಿಗೂ ಶುಲ್ಕ ಪಡೆಯುವಂತಿಲ್ಲ ಎಂದು ಹೇಳಿದರು.
ಸರಕಾರಿ ಆಸ್ಪತ್ರೆಗಳ ನೂರು ಮೀಟರ್ ದೂರದ ಒಳಗೆ ಯಾವುದೇ ಖಾಸಗಿ ಮೆಡಿಕಲ್ ಶಾಪ್ ಇರಬಾರದು. ಸರಕಾರ ನೀಡುವ ಔಷಧ, ವೈದ್ಯಕೀಯ ಉಪಕರಣಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಕೊಡಲು ಹಾಗೂ ಮಾನಿಟರಿಂಗ್ ಮಾಡಲು ಸಮಿತಿಗಳನ್ನು ರಚಿಸಲಾಗುವುದು ಎಂದು ಹೇಳಿದರು.
ಮೈಸೂರಿನಲ್ಲಿ ನಿರ್ಮಿಸಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ತಕ್ಷಣವೇ ವೈದ್ಯಕೀಯ ಅಧೀಕ್ಷಕರನ್ನು ನೇಮಿಸಲಾಗುವುದು. ಕಟ್ಟಡಕ್ಕೆ ಬೇಕಾದ ಉಪಕರಣಗಳ ಖರೀದಿಗೆ ಟೆಂಡರ್ ಕರೆದಿರುವ ಹಿನ್ನೆಲೆಯಲ್ಲಿ ಅದಷ್ಟು ಶೀಘ್ರ ಸೇವೆ ಆರಂಭಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೆಂಗಳೂರು ಮೆಡಿಕಲ್ ಕಾಲೇಜು ಮಾದರಿಯಲ್ಲೇ ಸ್ಕಿಲ್ ಲ್ಯಾಬ್‌ನ್ನು ಎಂಎಂಸಿಯಲ್ಲಿ ಆರೋಗ್ಯ ವಿವಿ ಮೂಲಕ ಸ್ಥಾಪಿಸಲಾಗುವುದು. ಇಲ್ಲಿನ 4 ಆಸ್ಪತ್ರೆಗಳ ಮೇಲುಸ್ತುವಾರಿಗೆ ವಿಶೇಷ ಸಮಿತಿಗಳನ್ನು ರಚಿಸಲಾಗುವುದು ಎಂದರು.