ಜಮ್ಮು- ಕಾಶ್ಮೀರ ಡಿ.ಡಿ.ಸಿ. ಚುನಾವಣೆಗಳು ಬಿಜೆಪಿಯ ಕನಸು ಮತ್ತು ಮಿಥ್ಯೆಗಳಿಗೆ ಸೋಲು

ಜಮ್ಮು & ಕಾಶ್ಮೀರ : ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸದಾಗಿ ರಚಿಸಿದ ‘ಜಿಲ್ಲಾ ಅಭಿವೃದ್ಧಿ ಮಂಡಳಿ’ (ಡಿ.ಡಿ.ಸಿ.) ಚುನಾವಣೆಗಳಲ್ಲಿ ತನ್ನ ಧೋರಣೆಗಳಿಗೆ ಜಯ ಸಿಕ್ಕಿದೆ ಎಂದು ಬಿಜೆಪಿ ಹೇಳುತ್ತಿದೆ, ಮುಖ್ಯಧಾರೆಯ ಮಾಧ್ಯಮಗಳು ಅದರ ತುತ್ತೂರಿ ಊದುತ್ತಿವೆ  ಆದರೆ ಈ ಫಲಿತಾಂಶಗಳನ್ನು ಪರಿಶೀಲಿಸಿದಾಗ ಬಿಜೆಪಿಯ ಕಾಶ್ಮೀರ ಅಜೆಂಡಾಕ್ಕೆ ಭಾರೀ ಹಿನ್ನಡೆಯಾಗಿರುವುದು ಕಂಡು ಬರುತ್ತದೆ, ಕಾಶ್ಮೀರ ಕಣಿವೆಯ ಮತದಾರರು ಅದರ ಕ್ರಮಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದರೆ, ಜಮ್ಮು ಪ್ರದೇಶದ ಮತದಾರರೂ ಅವನ್ನು ಪೂರ್ಣವಾಗಿ ಒಪ್ಪಿಕೊಂಡಿಲ್ಲ ಎಂಬುದನ್ನು ಕಾಣಬಹುದು.

ಒಟ್ಟು 280 ಸ್ಥಾನಗಳಲ್ಲಿ, 278 ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ‘ಗುಪ್ಕರ್ ಘೋಷಣೆಯ ಜನತಾ ಮೈತ್ರಿಕೂಟ’(ಪಿ.ಎ.ಜಿ.ಡಿ.) 110 ಸ್ಥಾನಗಳನ್ನು ಪಡೆದಿದೆ, ಬಿಜೆಪಿ 75 ಸ್ಥಾನಗಳನ್ನು ಪಡೆದಿದೆ, ಈ ಮೂಲಕ ಎಲ್ಲ ಜಿಲ್ಲಾ ಮಂಡಳಿಗಳಲ್ಲಿ ರಾರಾಜಿಸಬಹುದು ಎಂಬ ಅದರ ಕನಸು ಹುಸಿಯಾಗಿ ಬಿಟ್ಟಿದೆ. ಪಿ.ಎ.ಜಿ.ಡಿ.ಯ ಭಾಗವಾಗಿರುವ ಸಿಪಿಐ(ಎಂ) ಸ್ಪರ್ಧಿಸಿದ್ದ 7 ರಲ್ಲಿ 5 ಸ್ಥಾನಗಳಲ್ಲಿ ಗೆದ್ದಿದೆ. ಪಿ.ಎ.ಜಿ.ಡಿ.ಯ ಭಾಗವಾಗಿ ಸ್ಪರ್ಧಿಸಲು ಹಿಂದೇಟು ಹೊಡೆದು ಪ್ರತ್ಯೇಕವಾಗಿ 118 ಸ್ಥಾನಗಳಲ್ಲಿ ಸ್ಪರ್ಧಿಸಿದ ಕಾಂಗ್ರೆಸ್ 26 ರಲ್ಲಿ ಗೆದ್ದಿದೆ. ಹೊಸದಾಗಿ ರಚನೆಗೊಂಡಿರುವ ಜಮ್ಮು ಕಾಶ್ಮೀರ ಅಪ್ನಿ ಪಾರ್ಟಿ(ಜೆಕೆಎಪಿ) 134 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 12 ರಲ್ಲಿ ಗೆದ್ದಿದೆ. ಇದು ಬಿಜೆಪಿ ಬೆಂಬಲಿತ ಪಕ್ಷ ಎನ್ನಲಾಗಿದೆ. 20 ಡಿ.ಡಿ.ಸಿ.ಗಳಲ್ಲಿ ಪಕ್ಷಗಳ ಬಲಾಬಲ ಹೀಗಿದೆ:

ಎನ್‌ಸಿ            67
ಪಿಡಿಪಿ           27
ಜೆಕೆಪಿಸಿ           8
ಸಿಪಿಐ(ಎಂ)       5
ಜೆಕೆಪಿಎಂ          3
ಪಿಎಜಿಡಿ          110
ಬಿಜೆಪಿ            75
ಪಕ್ಷೇತರರು         50
ಕಾಂಗ್ರೆಸ್          26
ಜೆಕೆಎಪಿ           12
ಇತರರು           5

ಜಮ್ಮು ಪ್ರದೇಶದಲ್ಲಿ ಮತ್ತು ಕಾಶ್ಮೀರ ಕಣಿವೆಯಲ್ಲಿ ಪಡೆದ ಸೀಟುಗಳ ವಿವರವನ್ನು ಈ ಕೆಳಗಿನ ನಕ್ಷೆಯಲ್ಲಿ ನೋಡಬಹುದು.

(ಕೃಪೆ: ನ್ಯೂಸ್‌ಕ್ಲಿಕ್)

ಈ ಎರಡು ಪ್ರದೇಶಗಳಲ್ಲಿ ಮತಗಳಿಕೆಯ ಪ್ರಮಾಣವನ್ನು ಈ ಕೆಳಗಿನ ನಕ್ಷೆ ಕೊಡುತ್ತದೆ.

(ಕೃಪೆ: ನ್ಯೂಸ್‌ಕ್ಲಿಕ್)

ಪಿ.ಎ.ಜಿ.ಡಿ. ಒಟ್ಟು 20 ಜಿಲ್ಲೆಗಳಲ್ಲಿ 9 ರಲ್ಲಿ ಸ್ಪಷ್ಟ ಬಹುಮತ ಪಡೆದಿದೆ. ಬಿಜೆಪಿಗೆ 5 ಜಿಲ್ಲೆಗಳಲ್ಲಿ ಮಾತ್ರ ಸ್ಪಷ್ಟ ಬಹುಮತ ಸಿಕ್ಕಿದೆ. ಉಳಿದ 6 ಜಿಲ್ಲೆಗಳಲ್ಲಿ ಯಾವುದೇ ಪಕ್ಷ ಅಥವ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದಿಲ್ಲ. ಇವುಗಳಲ್ಲಿ ಕನಿಷ್ಟ ಮೂರರಲ್ಲಿ ಪಿ.ಎ.ಜಿ.ಡಿ. ಕಾಂಗ್ರೆಸ್ ಬೆಂಬಲದಿಂದ ಆಡಳಿತ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಿತ್ತುಕೊಂಡು ಅದನ್ನು ಕೇಂದ್ರಾಡಳಿತ ಪ್ರದೇಶಗಳ ಮಟ್ಟಕ್ಕೆ ಇಳಿಸಿದ ನಂತರ, ಒಂದು ವರ್ಷಕ್ಕೂ ಮೀರಿದ ರಾಜಕೀಯ ಲಾಕ್‌ಡೌನಿನ ನಂತರ ಈ ಜಿಲ್ಲಾ ಮಟ್ಟದ ‘ಅಭಿವೃದ್ಧಿ’ ಮಂಡಳಿಗಳನ್ನು ರಚಿಸಿ, ಇವು ರಾಜಕೀಯಾತೀತ ಸಂಸ್ಥೆಗಳು ಎಂದು ಬಿಂಬಿಸಿ ಅವಕ್ಕೆ ತರಾತುರಿಯಲ್ಲಿ ಚುನಾವಣೆಗಳನ್ನು ನಡೆಸಲು ಮುಂದಾಯಿತು. ಬಿಜೆಪಿ ಬಿಟ್ಟು ಬೇರೆ ಪಕ್ಷಗಳಿಗೆ ಸಿದ್ಧತೆಗಳಿಗೂ ಅವಕಾಶವಿಲ್ಲದಂತೆ ಮಾಡುವ ಮೂಲಕ ಅಲ್ಲಿನ ರಾಜಕೀಯ ಪಕ್ಷಗಳು ಈಗ ಅಪ್ರಸ್ತುತವಾಗಿ ಬಿಟ್ಟಿವೆ ಎಂದು ತೋರಿಸಬಹುದು, ಕಾಶ್ಮೀರ ಕಣಿವೆಯಲ್ಲೂ ಕೇಂದ್ರ ಸರಕಾರದ ಈ ಕ್ರಮಗಳನ್ನು ನಿಜವಾದ ಆಭಿವೃದ್ಧಿ ಪರ ಕ್ರಮಗಳು ಎಂದು ಜನಗಳು ಸ್ವೀಕರಿಸಿದ್ದಾರೆ ಎಂದೂ ತೋರಿಸಬಹುದು ಎಂದು ಅದು ನಿರೀಕ್ಷಿಸಿತ್ತು.

ಆದರೆ ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ), ಪಿಡಿಪಿ, ಸಿಪಿಐ(ಎಂ) ಮತ್ತಿತರ 370ನೇ ಕಲಮನ್ನು ಕಾಯ್ದುಕೊಳ್ಳಬೇಕೆಂಬ ಗುಪ್ಕರ್ ಘೋಷಣೆಗೆ ಸಹಿ ಹಾಕಿದ ಪಕ್ಷಗಳು ಈ ಚುನಾವಣೆಗಳಲ್ಲಿ ಒಟ್ಟಾಗಿ ಸ್ಪರ್ಧಿಸಲು ನಿರ್ಧರಿಸಿದ್ದು ಬಿಜೆಪಿಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿತು. ಕೇಂದ್ರ ಗೃಹಮಂತ್ರಿಗಳು ಇದನ್ನು ‘ಗುಪ್ಕರ್ ಗ್ಯಾಂಗ್’ ಎಂದು ಕರೆದು ತನ್ನ ಕೋಪವನ್ನು ಪ್ರದರ್ಶಿಸಿದರು. ಆದರೆ ಚುನಾವಣೆಗಳನ್ನು ಮುಂದೂಡಲು ಸಾಧ್ಯವಾಗದ ಪರಿಸ್ಥಿತಿ ಇದ್ದುದರಿಂದ ಮೈತ್ರಿಕೂಟದ ಅಭ್ಯರ್ಥಿಗಳು, ಅದರ ಹಿರಿಯ ಮುಖಂಡರೂ ಮುಕ್ತವಾಗಿ ಚುನಾವಣಾ ಪ್ರಚಾರ ನಡೆಸಲಾಗದಂತಹ ವಾತಾವರಣವನ್ನು ಅಭ್ಯರ್ಥಿಗಳ ಭದ್ರತೆಯ ನೆಪದಲ್ಲಿ ಜಮ್ಮು ಮತ್ತು ಕಾಶ್ಮೀರ ಆಡಳಿತ ಸೃಷ್ಟಿಸಿತು. ಬಿಜೆಪಿಯ ಅಭ್ಯರ್ಥಿಗಳು ಮಾತ್ರ ಆರಾಮವಾಗಿ ಪ್ರಚಾರ ನಡೆಸಲು ಬಿಡಲಾಯಿತು. ಅವರ ಕೆಲವು ಹಿರಿಯ ಮುಖಂಡರಂತೂ ಈ ಚುನಾವಣಾ ಪ್ರಚಾರದ ವೇಳೆಗೆ ಇಲ್ಲಿಯೇ ಕ್ಯಾಂಪ್ ಹೂಡಿದ್ದರು.

ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ, ಕಲಮು 370 ಮತ್ತು 35ಎ ಮರುಸ್ಥಾಪನೆಗೊಳ್ಳಬೇಕು, ಮತ್ತೆ ರಾಜ್ಯದ ಸ್ಥಾನಮಾನ ಸಿಗಬೇಕು ಎಂದು ಮತ್ತೆ ಸಾರಿದ ಗುಪ್ಕರ್ ಘೋಷಣೆಯ ಮೈತ್ರಿಕೂಟ ಮೇಲುಗೈ ಪಡೆದಿರುವುದು ಜಮ್ಮು ಮತ್ತು ಕಾಶ್ಮೀರದ ಜನತೆ ಆಗಸ್ಟ್ 5, 2019ರ ಮೋದಿ ಸರಕಾರದ ಕ್ರಮಗಳನ್ನು ಒಪ್ಪಿಲ್ಲ ಎಂಬುದನ್ನು ತೋರಿಸಿರುವುದಾಗಿ ರಾಜಕೀಯ ವೀಕ್ಷಕರು ಹೇಳುತ್ತಿದ್ದಾರೆ.

ಆದರೂ ಬಿಜೆಪಿ ತಾನು ಅತ್ಯಂತ ದೊಡ್ಡ ಪಕ್ಷವಾಗಿ ಮೂಡಿ ಬಂದಿರುವುದಾಗಿ ಹೇಳಿಕೊಂಡಿದೆ. ತನ್ನ ಮತಗಳಿಕೆಯೂ ಪಿಎ.ಜಿ.ಡಿ. ಮೈತ್ರಿಕೂಟಕ್ಕಿಂತಲೂ ಹೆಚ್ಚು ಎಂದೂ ಅದು ಹೇಳಿಕೊಂಡಿದೆ. ಆದರೆ ಈ ಮೂಲಕ ಅದು ತನ್ನ ವಿಫಲತೆಯನ್ನು ಮುಚ್ಚಿಕೊಳ್ಳಲು ಸಾಧ್ಯವಿಲ್ಲ ಎಂದು ಪರಿಣಿತರು ಹೇಳುತ್ತಾರೆ. ಅದು ಉಳಿದೆಲ್ಲ ಪಕ್ಷಗಳಿಗಿಂತ ಅತೀ ಹೆಚ್ಚು ಸಂಖ್ಯೆಯಲ್ಲಿ ಸ್ಪರ್ಧಿಸಿರುವುದರಿಂದ ಮತ್ತು ಕಾಶ್ಮೀರ ಕಣಿವೆಯಲ್ಲಿ ಮತದಾನದ ಪ್ರಮಾಣ ಜಮ್ಮು ಪ್ರದೇಶದ ಸುಮಾರು ಅರ್ಧದಷ್ಟು ಮಾತ್ರವಾದ್ದರಿಂದ ಇದು ಸಾಧ್ಯವಾಗಿರುವುದು ಎಂಬುದನ್ನು ಅಂಕಿ-ಅಂಶಗಳು ಹೇಳುತ್ತವೆ.

ಈ ಕೆಳಗಿನ ಅಂಕಿ-ಅಂಶಗಳನ್ನು ನೋಡಿ:

* ಬಿಜೆಪಿ 278ರಲ್ಲಿ 183 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಅದರಲ್ಲಿ ಗೆದ್ದದ್ದು 75 ರಲ್ಲಿ, ಅಂದರೆ ಗೆಲುವಿನ ದರ 41%

* ಮೈತ್ರಿಕೂಟದ ಭಾಗವಾಗಿ ನ್ಯಾಷನಲ್ ಕಾನ್ಫರೆನ್ಸ್ ಸ್ಪರ್ಧಿಸಿದ್ದು 132ರಲ್ಲಿ, ಗೆದ್ದಿರುವುದು 67ರಲ್ಲಿ ಅಂದರೆ ಗೆಲುವಿನ ದರ 51%

* 2014ರ ವಿಧಾನಸಭಾ ಚುನಾವಣೆಗಳಲ್ಲಿ ಒಟ್ಟು 83 ಸೀಟುಗಳಲ್ಲಿ ಜಮ್ಮು ಪ್ರದೇಶದಲ್ಲಿ 37 ಸೀಟುಗಳಿದ್ದರೆ, ಕಾಶ್ಮೀರ ಕಣಿವೆಯಲ್ಲಿ 46 ಇದ್ದವು, ಆಗ ಬಿಜೆಪಿ ಗೆದ್ದದ್ದು 25ರಲ್ಲಿ, ಅಂದರೆ 30% ಸೀಟುಗಳಲ್ಲಿ.

* ಡಿಡಿಸಿ ಚುನಾವಣೆಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಕಣಿವೆ ಎರಡರಲ್ಲೂ ತಲಾ 140 ಸೀಟುಗಳು, ಒಟ್ಟು 280. ಬಿಜೆಪಿ ಹೆಚ್ಚಿನ ನೆಲೆ ಹೊಂದಿರುವ ಜಮ್ಮು ಪ್ರದೇಶದಲ್ಲಿ ಸೀಟುಗಳನ್ನು ಹೆಚ್ಚಿಸಿದರೂ ಬಿಜೆಪಿ ಈಗ ಗೆದ್ದಿರುವುದು 75, ಅಂದರೆ 26.7% ಸೀಟುಗಳಲ್ಲಿ.

* ಬಿಜೆಪಿ ಗೆದ್ದಿರುವ 75 ರಲ್ಲಿ 72 ಜಮ್ಮು ಪ್ರದೇಶದಲ್ಲಿ, ಕಾಶ್ಮಿರ ಕಣಿವೆಯಲ್ಲಿ ಅದು ಗೆದ್ದಿರುವುದು 3 ಮಾತ್ರ.

* ತದ್ವಿರುದ್ಧವಾಗಿ ಪಿ.ಎ.ಜಿ.ಡಿ. ಜಮ್ಮು ಪ್ರದೇಶದಲ್ಲೂ 26 ಸೀಟುಗಳನ್ನು ಗೆದ್ದಿದೆ. ಕಾಂಗ್ರೆಸ್ ಕೂಡ 26ರಲ್ಲಿ 17ನ್ನು ಗೆದ್ದಿರುವುದು ಜಮ್ಮು ಪ್ರದೇಶದಲ್ಲಿ.

* ಈ ಚುನಾವಣೆಗಳಲ್ಲಿ ಒಟ್ಟು ಮತದಾನ 51%, ಇದರಲ್ಲಿ ಜಮ್ಮು ಪ್ರದೇಶದಲ್ಲಿ 68% ಮತದಾನವಾಗಿದ್ದರೆ, ಕಣಿವೆಯಲ್ಲಿ ಆಗಿರುವುದು 34% ಮಾತ್ರ. ಅಂದರೆ ಕಾಶ್ಮೀರ ಕಣಿವೆಯಲ್ಲಿ ಜನಗಳ ವಿಶ್ವಾಸ ಗೆಲ್ಲುವುದು ಬಿಜೆಪಿಗೆ ಎಳ್ಳಷ್ಟೂ ಸಾಧ್ಯವಾಗಿಲ್ಲ.

ಈಗ ಈ ಜಿಲ್ಲಾ ಅಭಿವೃದ್ಧಿ ಮಂಡಳಿಗಳ ಅಧ್ಯಕ್ಷರನ್ನು ಆರಿಸುವ ಪ್ರಕ್ರಿಯೆ ಆರಂಭವಾಗಲಿದೆ. ಈ ಮೇಲೆ ಹೇಳಿರುವಂತೆ ಒಟ್ಟು 20 ಜಿಲ್ಲೆಗಳಲ್ಲಿ 12 ರಲ್ಲಿ ಪಿ.ಎ.ಜಿ.ಡಿ. ಅಧ್ಯಕ್ಷರು ಆರಿಸಿ ಬರುವ ಸಾಧ್ಯತೆಗಳಿವೆ. ಇನ್ನೊಂದೆಡೆಯಲ್ಲಿ 5 ಜಿಲ್ಲೆಗಳಲ್ಲಿ ಮಾತ್ರ ಬಿಜೆಪಿ ಅಧ್ಯಕ್ಷ ಸ್ಥಾನಗಳನ್ನು ಪಡೆಯಬಹುದು ಎಂದು ‘ಕಾಶ್ಮೀರ್ ಇಮೇಜಸ್’ ವೆಬ್ ಪತ್ರಿಕೆ ಹೇಳಿದೆ.

ಈ ನಡುವೆ ಗಮನಾರ್ಹ ಸಂಖ್ಯೆಯಲ್ಲಿ ಆರಿಸಿ ಬಂದಿರುವ ಪಕ್ಷೇತರರನ್ನು (ಒಟ್ಟು 50) ಸೆಳೆದುಕೊಳ್ಳಲು ಬಿಜೆಪಿ ಎಲ್ಲ ಮಾರ್ಗಗಳನ್ನೂ ಅನುಸರಿಸುತ್ತಿದೆ ಎಂದು ಪಿ.ಎ.ಜಿ.ಡಿ. ವಕ್ತಾರರು ಹೇಳಿದ್ದಾರೆ. ಈ ಹಿಂದೆ ಹಲವು ಬಾರಿ ಆದಂತೆ ಈ ಬಾರಿಯೂ ಇಂತಹ ಜನಾದೇಶವನ್ನು ಹುಸಿಗೊಳಿಸುವ ಪ್ರಯತ್ನಗಳು ವಿನಾಶಕಾರಿಯಾಗಲಿವೆ ಎಂದು ಅವರು ಎಚ್ಚರಿಸಿದ್ದಾರೆ.

ಡಿಡಿಸಿ ಚುನಾವಣೆಗಳು ಬಿಜೆಪಿಯ ‘ದಿಟ್ಟ’ ಕಾಶ್ಮೀರ ಧೋರಣೆಯ ಬಗ್ಗೆ ಜನಮತ ಸಂಗ್ರಹ ಎಂದು ಕಾಣಲಾಗಿತ್ತು. ನಿಜವಾದ ಜನಮತ ಏನು ಎಂಬುದನ್ನು ಮೇಲಿನ ಅಂಕಿ-ಅಂಶಗಳು ಹೇಳುತ್ತವೆ. ಆರಂಭದಲ್ಲೇ ಹೇಳಿದಂತೆ ಕಾಶ್ಮೀರ ಕಣಿವೆಯ ಮತದಾರರು ಹಿಂದಿನಂತೆ ಈಗಲೂ ಬಿಜೆಪಿಯ ಧೋರಣೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಅತ್ತ ಜಮ್ಮ ಪ್ರದೇಶದಲ್ಲೂ ಈ ‘ದಿಟ್ಟ’ ಧೋರಣೆಗಳಿಗೆ ಹೆಚ್ಚಿನ ಬೆಂಬಲವೇನೂ ಸಿಕ್ಕಿಲ್ಲ. ಹೆಚ್ಚೆಂದರೆ ಈ ಒಟ್ಟು ಪ್ರದೇಶದ ವಿಶೇಷ ಸ್ಥಾನಮಾನವನ್ನು ಮತ್ತು ರಾಜ್ಯದ ದರ್ಜೆಯನ್ನೂ ತೆಗೆಯುವ ಮೊದಲಿದ್ದ, ಸ್ವತಃ ಬಿಜೆಪಿಯೇ ಉಂಟು ಮಾಡಿದ್ದ ಸಮುದಾಯವಾರು ಧ್ರುವೀಕರಣ ಮುಂದುವರೆದಿದೆಯಷ್ಟೇ. ಮೋದಿ-ಷಾ ‘ದಿಟ್ಟ’ಕ್ರಮಗಳಿಂದ ಇಲ್ಲಿ ಶಾಂತಿ-ಸಮೃದ್ಧಿ ನೆಲೆಸಲಾರಂಭಿಸಿದೆ ಎಂಬುದು ಕೇವಲ ಬಿಜೆಪಿ-ಪರ ಮಾಧ್ಯಮಗಳು ಹರಡಿಸುತ್ತಿರುವ ಮಿಥ್ಯೆ ಎಂಬುದು ಸ್ಪಷ್ಟಗೊಂಡಿದೆ.

Donate Janashakthi Media

Leave a Reply

Your email address will not be published. Required fields are marked *