370ನೇ ವಿಧಿಯನ್ನು ಮರುಸ್ಥಾಪಿಸಲು ಕೋರಿ ಜಮ್ಮು-ಕಾಶ್ಮೀರ ವಿಧಾನಸಭೆ ನಿರ್ಣಯ; ಮೋದಿ-ಶಾ ರ ಮತ್ತದೇ ತಂತ್ರಗಳು

-ಸಿ.ಸಿದ್ದಯ್ಯ

ಆರ್ಟಿಕಲ್ 370ರ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸಲು ಕೋರಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಆ ದಿನ ಮತ್ತು ನಂತರದ ದಿನಗಳಲ್ಲಿಯೂ ನಿರ್ಣಯವನ್ನು ಹಿಂಪಡೆಯುವಂತೆ ಒತ್ತಾಯಿಸಿ ಸದನದಲ್ಲಿ ಬಿಜೆಪಿ ಶಾಸಕರು ಮಾಡುತ್ತಿರುವ ಗದ್ದಲಗಳು ಇಡೀ ದೇಶವೇ ಬೆರಗಾಗಿ ನೋಡುವಂತೆ ಮಾಡಿದೆ. “ಜೀವಂತವಾಗಿರುವವರೆಗೆ 370 ನೇ ವಿಧಿ ತಿದ್ದುಪಡಿ ಆಗುವುದಿಲ್ಲ” ಎಂದು ಪ್ರಧಾನಿ ಮೋದಿ ಹೇಳುತ್ತಾರೆ. “ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರು ಸ್ವರ್ಗದಿಂದ ಕೆಳಗಿಳಿದಿದ್ದರೂ ಮರುಸ್ಥಾಪಿಸಲು ಸಾಧ್ಯವಿಲ್ಲ” ಎಂದು ಅಮಿತ್ ಶಾ ಹೇಳಿದ್ದಾರೆ.

ಇದೇನು ಪ್ರಜಾಪ್ರಭುತ್ವವೋ ಅಥವಾ ಸರ್ವಾಧಿಕಾರಿ ಆಡಳಿತವೊ ಎಂಬ ಪ್ರಶ್ನೆ ಮೂಡುತ್ತದೆ. ಆರ್ಟಿಕಲ್ 370ರ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸಲು ಕೋರಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ನವೆಂಬರ್ 6ರಂದು ನಿರ್ಣಯ ತೆಗೆದುಕೊಳ್ಳಲಾಗಿದೆ. ನಿರ್ಣಯದ ಪರವಾಗಿ ಆಡಳಿತ ಪಕ್ಷದ ಸದಸ್ಯರು ಫಲಕಗಳನ್ನು ಪ್ರದರ್ಶಿಸಿದರು. ಇದು ಅಲ್ಲಿನ ಬಿಜೆಪಿ ಶಾಸಕರನ್ನು ಕೆರಳಿಸಿದೆ. ನಿರ್ಣಯವನ್ನು ಹಿಂಪಡೆಯುವಂತೆ ಒತ್ತಾಯಿಸಿ ಬಿಜೆಪಿ ಶಾಸಕರು ಸದನದಲ್ಲಿ ಗದ್ದಲ ನಡೆಸಿದರು. ಮೂರನೇ ದಿನವೂ ಬಿಜೆಪಿ ಶಾಸಕರು ಪಿಡಿಪಿ ಶಾಸಕರ ಜತೆಗೆ ಗುದ್ದಾಟ ನಡೆಸಿದರು. ಟೇಬಲ್‌ ಮೇಲೆ ನೆಗೆದಾಡುತ್ತಾ ಕೋಲಾಹಲ ಎಬ್ಬಿಸಿದರು. ವಿಧಾನಸಭೆ ಅಂಗೀಕರಿಸಿ ನಿರ್ಣಯವನ್ನು “ಪಾಕಿಸ್ತಾನ ಅಜೆಂಡಾ” ಎಂದು ಕರೆದರು.

ಪ್ರಜಾಪ್ರಭುತ್ವವೋ ಅಥವಾ ಸರ್ವಾಧಿಕಾರಿ ಆಡಳಿತವೊ?

”ಜೀವಂತವಾಗಿರುವವರೆಗೆ 370 ನೇ ವಿಧಿ ತಿದ್ದುಪಡಿ ಆಗುವುದಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. “370 ನೇ ವಿಧಿ ಅದೊಂದು ಇತಿಹಾಸ”, “ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ 370 ನೇ ವಿಧಿಯನ್ನು ಕಾಂಗ್ರೆಸ್ ಧೀಮಂತ ಮತ್ತು ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರು ಸ್ವರ್ಗದಿಂದ ಕೆಳಗಿಳಿದಿದ್ದರೂ ಮರುಸ್ಥಾಪಿಸಲು ಸಾಧ್ಯವಿಲ್ಲ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ? ಪ್ರಧಾನಿ ಮತ್ತು ಗೃಹ ಸಚಿವರ ಇಂತಹ ಮಾತುಗಳನ್ನು ಕೇಳಿದವರಿಗೆ ಇದೇನು ಪ್ರಜಾಪ್ರಭುತ್ವವೋ ಅಥವಾ ಸರ್ವಾಧಿಕಾರಿ ಆಡಳಿತವೊ ಎಂಬ ಪ್ರಶ್ನೆ ಮೂಡುತ್ತದೆ.

ಇದನ್ನೂ ಓದಿ: ಸಹಕಾರಿ ಸಾಲದ ಕಡಿತ ಮತ್ತು ಬಡ್ಡಿ ಹೆಚ್ಚಳ, ರೈತಾಪಿ ಕೃಷಿ ನಾಶದ ಮತ್ತೊಂದು ಹೆಜ್ಜೆ – ಸಿಪಿಐಎಂ

‘ನೀವು ಕಸಿದುಕೊಂಡಿರುವ ನಮ್ಮ ರಾಜ್ಯದ ಹಕ್ಕು ಮತ್ತು ಸವಲತ್ತುಗಳನ್ನು ವಾಪಸ್ ಕೊಡಿ’ಎಂಬ ಫಲಕಗಳನ್ನು ಪ್ರದರ್ಶಿಸಿದರೆ ಇದರಲ್ಲಿ ತಪ್ಪೇನಿದೆ? ಸದನದ ಸದಸ್ಯನಿಗೆ ಅಂತಹ ಹಕ್ಕೂ ಸಹಾ ಇಲ್ಲವೇ? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಜನರಿಂದ ಆಯ್ಕೆಯಾದ ಸರ್ಕಾರ ಜನರಿಗೆ ಅವಶ್ಯಕವಾದ ವಿಷಯದಲ್ಲಿ ನಿರ್ಣಯವನ್ನು ಅಂಗೀಕರಿಸದಂತೆ ತಡೆಯಲು ಮುಂದಾಗುವ ಬಿಜೆಪಿಗೆ ತಾವು ಶಾಸಕಾಂಗ ಮತ್ತು ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದ್ದೇವೆ ಎನಿಸುತ್ತಿಲ್ಲವೇ? ಆರ್ಟಿಕಲ್ 370ರ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸಲು ರಾಜ್ಯದ ಎಲ್ಲಾ ಸಾರ್ವಜನಿಕ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಲು ವಿಧಾನಸಭೆಯ ಮೂಲಕ ಕೇಂದ್ರವನ್ನು ಕೇಳುವುದೇ ಒಂದು ದೊಡ್ಡ ಅಪರಾಧ ಎಂದು ಬಿಜೆಪಿ ಪರಿಗಣಿಸಿದೆ.

ಚುನಾವಣೆಗಳಲ್ಲಿಯೂ ಬಳಸಿಕೊಳ್ಳತೊಡಗಿದ್ದಾರೆ

ಎಲ್ಲಿ ಚುನಾವಣೆ ಶುರುವಾಗುತ್ತದೆಯೊ ಅಲ್ಲಿ, ಅವರ ಆಡಳಿತಕ್ಕೆ ಎಲ್ಲಿ ವಿರೋಧವಿರುತ್ತದೆಯೋ ಅಲ್ಲಿ ಬಿಜೆಪಿಯಿಂದ ಧಾರ್ಮಿಕ ದ್ವೇಷದ ಅಸ್ತ್ರ ಬಳಕೆ ಖಂಡಿತ ಇರುತ್ತದೆ. ಅಲ್ಲೆಲ್ಲಾ ಧಾರ್ಮಿಕ ಉನ್ಮಾದವನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತದೆ. ಇದನ್ನು ಅಕ್ಷರಶಃ ಕೇಸರಿ ಪರಿವಾರದವರು ಪ್ರಯೋಗ ಮಾಡುತ್ತಾರೆ. ಹಲವು ದಶಕಗಳಿಂದ ಆರೆಸ್ಸೆಸ್ ಮತ್ತು ಬಿಜೆಪಿ ರಾಜಕೀಯವಾಗಿ ಬಳಸುತ್ತಿರುವ 370 ನೇ ವಿಧಿಯನ್ನು ಇತ್ತೀಚಿನ ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಗಳಲ್ಲಿಯೂ ಬಳಸಿಕೊಳ್ಳತೊಡಗಿದೆ.

ನರೇಂದ್ರ ಮೋದಿ, ಅಮಿತ್ ಶಾ ಆದಿಯಾಗಿ ಸಂಘಪರಿವಾರದ ಎಲ್ಲರೂ ಜಮ್ಮು ಕಾಶ್ಮೀರ ವಿಧಾನಸಭೆ ತೆಗೆದುಕೊಂಡಿರುವ ಈ ನಿರ್ಣಯವನ್ನೇ ಈ ಚುನಾವಣೆಗಳಲ್ಲಿಯೂ ಬಳಸಿಕೊಳ್ಳತೊಡಗಿದ್ದಾರೆ. ಮಹಾರಾಷ್ಟ್ರದಲ್ಲಿ ಸುತ್ತಾಡುತ್ತಿರುವ ಪ್ರಧಾನಿ ಅವರು ಭಾಗವಹಿಸಿದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ 370ನೇ ವಿಧಿಯ ಬಗ್ಗೆ ಬಹಳಷ್ಟು ಮಾತನಾಡುತ್ತಿದ್ದಾರೆ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ಕೆಸರು ಎರಚುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಜಾರ್ಖಂಡ್ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಇದನ್ನೇ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿದ್ದಾರೆ.

ಏಕಪಕ್ಷೀಯವಾಗಿ ಅಳಿಸಿ ಹಾಕಿತು

ಕಾಶ್ಮೀರ ರಾಜ್ಯವು ಭಾರತೀಯ ಒಕ್ಕೂಟಕ್ಕೆ ಸೇರ್ಪಡೆಯಾದ ಐತಿಹಾಸಿಕ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿ ಸಂವಿಧಾನದಲ್ಲಿ 370ನೇ ವಿಧಿಯನ್ನು ಸೇರಿಸಲಾಯಿತು. ಪರಸ್ಪರ ಒಪ್ಪಿಗೆಯಿಂದ ಅಲ್ಲಿನ ಜನರಿಗೆ ಸಾಂವಿಧಾನಿಕ ಖಾತರಿ ನೀಡಲಾಯಿತು. ಕೇಂದ್ರದಲ್ಲಿ ಬಿಜೆಪಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ, ಅದು ಏಕಪಕ್ಷೀಯವಾಗಿ 370 ನೇ ವಿಧಿ ಮತ್ತು ಅದಕ್ಕೆ ಅನುಗುಣವಾಗಿ 35 (ಎ) ಅನ್ನು ಅಳಿಸಿ ಹಾಕಿತು.

ಇದನ್ನೂ ನೋಡಿ: ಮರಕುಂಬಿ ಪ್ರಕರಣ ; 97 ಮಂದಿಗೆ ಜಾಮೀನು | ಜಾಮೀನನ್ನು ಸಂಭ್ರಮಸಲು ಸಿದ್ದತೆ ನಡೆದಿತ್ತು – ಮರಕುಂಬಿ ಬಸವರಾಜ

ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಯಾವುದೇ ರಾಜ್ಯ ವಿಭಜನೆಗೆ ಮುನ್ನ ಆ ರಾಜ್ಯದ ವಿಧಾನಸಭೆಯ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ, ಸಂವಿಧಾನವನ್ನೇ ನಾಶ ಮಾಡಲು ಬಯಸುವ ಕೇಸರಿ ಪಕ್ಷ ಆ ಮೌಲ್ಯಗಳನ್ನು ಗೌರವಿಸುತ್ತದೆ ಎಂದು ಭಾವಿಸುವುದು ಮೂರ್ಖತನ. ಬಹುಶಃ 370 ನೇ ವಿಧಿ ಇತಿಹಾಸ ಎಂದು ಮೋದಿ-ಶಾ ಅವರ ಘೋಷಣೆಯು ದೇಶದ್ರೋಹದ ಮಟ್ಟದಲ್ಲಿ ಬಿಜೆಪಿಯ ದಾಳಿಗೆ ಕಾರಣವಾಗುತ್ತದೆ.

370ನೇ ವಿಧಿಯ ಹಿನ್ನೆಲೆ

ಸ್ವಾತಂತ್ರ್ಯ ಪೂರ್ವದ ರಾಜರ ಆಡಳಿತದ ಜಮ್ಮು ಮತ್ತು ಕಾಶ್ಮೀರ ಭಾರತದ ಭಾಗವಾದ ಪ್ರಸಕ್ತ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗವನ್ನು ಒಳಗೊಂಡಿತ್ತು. ಅಂದಿನ ಮಹಾರಾಜ ಹರಿಸಿಂಗ್ ಗೆ ಭಾರತಕ್ಕೆ ಅಥವಾ ಪಾಕಿಸ್ತಾನಕ್ಕೆ ಸೇರುವ ಮನಸ್ಸಿರಲಿಲ್ಲ. ಜಮ್ಮು ಮತ್ತು ಕಾಶ್ಮೀರವನ್ನು ಒಂದು ಪ್ರತ್ಯೇಕ ರಾಷ್ಟ್ರವನ್ನಾಗಿ ಇರಿಸುವುದು ಅವರ ಬಯಕೆಯಾಗಿತ್ತು. ಈ ಕಾರಣದಿಂದ ಹರಿಸಿಂಗ್ 1947 ಆಗಸ್ಟ್ 15 ರ ವೇಳೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿರಲಿಲ್ಲ.

ಷೇಕ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಅಲ್ಲಿನ ಪಾಳೇಗಾರಿ ಆಳ್ವಿಕೆಯ ವಿರುದ್ಧ ಹೋರಾಡುತ್ತಿತ್ತು. ಇದು ರಾಜರ ಸಂಸ್ಥಾನಗಳಲ್ಲಿ ಪಾಳೇಗಾರಿ-ವಿರೋಧಿ, ಸಾಮ್ರಾಜ್ಯಶಾಹಿ-ವಿರೋಧಿ ಚಳವಳಿಯ ಭಾಗವಾಗಿತ್ತು. ವಾಯುವ್ಯ ಪ್ರಾಂತ್ಯದ ಪಠಾಣರನ್ನೊಳಗೊಂಡ ಪಾಕಿಸ್ತಾನದ ದಾಳಿಕೋರರು ಆಕ್ರಮಣ ನಡೆಸಿ, ಶ್ರೀನಗರದ ಹೊರವಲಯವನ್ನು ತಲುಪಿದಾಗಲಷ್ಟೆ ಭಾರತಕ್ಕೆ ಸೇರ್ಪಡೆಯ ಒಡಂಬಡಿಕೆಗೆ ಸಹಿ ಹಾಕಲು ಮಹಾರಾಜ ಹರಿಸಿಂಗ್ ಒಪ್ಪಿದರು. 1947 ಅಕ್ಟೋಬರ್ 26 ರಂದು ಅದಕ್ಕೆ ಸಹಿ ಹಾಕಲಾಯಿತು. ನ್ಯಾಷನಲ್ ಕಾನ್ಫರೆನ್ಸ್ ಜೊತೆಗಿದ್ದ ಕಾಶ್ಮೀರ ಕಣಿವೆಯ ಜನರು ಪಾಕಿಸ್ತಾನಿ ಆಕ್ರಮಣಕಾರರ ವಿರುದ್ಧ ಹೋರಾಡಿದರು. ಭಾರತ ಸರ್ಕಾರ ತನ್ನ ಸೇನೆಯನ್ನು ವಿಮಾನದ ಮೂಲಕ ಶ್ರೀನಗರಕ್ಕೆ ಕಳುಹಿಸಿತು. ಈ ಸೈನ್ಯ ಆಕ್ರಮಣಕಾರರನ್ನು ಹಿಮ್ಮೆಟ್ಟಿಸಿತು.

ಇದನ್ನೂ ಓದಿ: ಶಿಕ್ಷಕಿಯ ಕುರ್ಚಿಯ ಕೆಳಗೆ ಬಾಂಬ್ ಫಿಕ್ಸ್​ ಮಾಡಿದ ವಿದ್ಯಾರ್ಥಿಗಳು

 

ಈ ಸನ್ನಿವೇಶದಲ್ಲಿ ಸಂವಿಧಾನವನ್ನು ರಚಿಸುತ್ತಿದ್ದ ಸಂವಿಧಾನ ರಚನಾ ಸಭೆಯು ಸಂವಿಧಾನದಲ್ಲಿ 370 ನೇ ವಿಧಿಯನ್ನು ಸೇರಿಸಿತು. ಭಾರತದ ಪ್ರಭುತ್ವ ಮತ್ತು ಕಾಶ್ಮೀರಿ ಜನರ ಪ್ರತಿನಿಧಿಗಳ ನಡುವೆ ಆದ ಒಪ್ಪಂದವನ್ನು 370 ನೇ ವಿಧಿ ಪ್ರತಿನಿಧಿಸುತ್ತದೆ. ತಮ್ಮ ಅಸ್ಮಿತೆ ಮತ್ತು *ಕಶ್ಮೀರಿಯತ್* ಎಂದು ಹೇಳಲಾಗುವ ಅವರದೇ ಆದ ಜೀವನಶೈಲಿಯನ್ನು ಉಳಿಸಿಕೊಳ್ಳುವ ಕಾಶ್ಮೀರಿ ಜನತೆಯ ಆಶೋತ್ತರಗಳನ್ನು ಅದು ಒಳಗೊಂಡಿತ್ತು. ದೇಶವು ಧರ್ಮಗಳ ಆಧಾರದಲ್ಲಿ ಒಡೆಯುತ್ತಿದ್ದಾಗ ಹಾಗೂ ದ್ವಿರಾಷ್ಟ್ರ ಸಿದ್ಧಾಂತ ಅಸ್ತಿತ್ವದಲ್ಲಿದ್ದಾಗ, ಮುಸ್ಲಿಂ ಬಹುಸಂಖ್ಯಾಕರಾಗಿರುವ ರಾಜ್ಯವೊಂದರ ಜನರು ಜಾತ್ಯತೀತವಾದ ಭಾರತೀಯ ಪ್ರಭುತ್ವಕ್ಕೆ ಬೆಂಬಲ ನೀಡಿದ್ದು ಭಾರತದ ಪ್ರಭುತ್ವಕ್ಕೆ ಮಹತ್ವದ ವಿಚಾರವಾಗಿತ್ತು. ದೇಶ ವಿಭಜನೆಯ ಸಂದರ್ಭದಲ್ಲಿ ವಾಯವ್ಯ ಭಾರತವನ್ನು ದೊಂಬಿಗಳ ಕೆನ್ನಾಲಗೆ ಆವರಿಸಿಕೊಂಡಿದ್ದಾಗ ಕಾಶ್ಮೀರ ಕಣಿವೆಯು ಶಾಂತಿ ಮತ್ತು ಕೋಮು ಸೌಹಾರ್ದದ ಸ್ವರ್ಗವಾಗಿತ್ತು.

ಅದ್ಭುತ ಅವಕಾಶಗಳನ್ನು ತೆರೆದಿದೆಯೇ?

 

370 ನೇ ವಿಧಿಯನ್ನು ರದ್ದುಗೊಳಿಸಿದ ದಿನಗಳಲ್ಲಿ, ನಾಗರಿಕ ಹಕ್ಕುಗಳ ಉಲ್ಲಂಘನೆ ಮಾಡಲಾಯಿತು. ವಿರೋಧ ಪಕ್ಷಗಳ ನಾಯಕರನ್ನು ಭದ್ರತಾ ಪಡೆಗಳ ಕಣ್ಗಾವಲಿನಲ್ಲಿ ಅಕ್ರಮ ಬಂಧನದಲ್ಲಿರಿಸಲಾಯಿತು. ಪತ್ರಿಕಾ ಸ್ವಾತಂತ್ರ್ಯ ಮೃಗವಾಗಿ ಪರಿಣಮಿಸಿತು. ರಾಜ್ಯಾದ್ಯಂತ ಇಂಟರ್ನೆಟ್ ಸ್ಥಗಿತಗೊಳಿಸಲಾಯಿತು. ಈ ಅವಧಿಯಲ್ಲಿ ಬಿಜೆಪಿ ದೇಶದೆಲ್ಲೆಡೆಯೂ ಕೋಮುದ್ವೇಷ ಮತ್ತು ಉದ್ವಿಗ್ನತೆ ಹುಟ್ಟುಹಾಕಿತು. 370 ನೇ ವಿಧಿಯನ್ನು ರದ್ದುಗೊಳಸಿದರೆ ಜಮ್ಮು-ಕಾಶ್ಮೀರಕ್ಕೆ ಅದ್ಭುತ ಅವಕಾಶಗಳು ತೆರೆಯುತ್ತವೆ, ಅಲ್ಲಿ ಉದ್ಯಮಗಳ ಸ್ಥಾಪನೆಯಾಗುತ್ತವೆ, ಜನರಿಗೆ ಉದ್ಯೋಗ ದೊರಕುತ್ತದೆ, ಭಯೋತ್ಪಾಧನೆ ಇಲ್ಲದಂತಾಗುತ್ತದೆ ಎಂದೆಲ್ಲಾ ಹೇಳಿದರು.

ಆದರೆ, 5 ವರ್ಷಗಳ ನಂತರವೂ ಆ ರಾಜ್ಯದಲ್ಲಿ ಅಂತಹ ಅವಕಾಶಗಳು ಕಾಣುತ್ತಿಲ್ಲ. ಆದರೂ, ಅಲ್ಲಿ ಅದ್ಭುತ ಅವಕಾಶಗಳನ್ನು ತೆರೆದಿದೆ ಎಂದು ಬಿಜೆಪಿಯವರು ಬಿಂಬಿಸುತ್ತಿದ್ದಾರೆ. ಆದರೆ, ಅಲ್ಲಿನ ಪರಿಸ್ಥಿತಿಗಳು ವೇಗವಾಗಿ ಹದಗೆಡತೊಡಗಿದವು. ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳ ಬಿಕ್ಕಟ್ಟು ಮಾತ್ರವಲ್ಲದೆ ಮಾನವ ಹಕ್ಕುಗಳೂ ಬಿಗಡಾಯಿಸುವ ಆತಂಕದಲ್ಲಿ ಪ್ರಜಾಪ್ರಭುತ್ವವಾದಿಗಳು ಆತಂಕ ವ್ಯಕ್ತಪಡಿಸಿದರು. ಇನ್ನೊಂದೆಡೆ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಕೇಂದ್ರ ಹಾಗೂ ಸೇನೆಯ ನಿಗ್ರಹ ಕ್ರಮಗಳು ತೀವ್ರಗೊಂಡಿದ್ದು, ಕಳೆದ ಕೆಲ ತಿಂಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶೇಷ ಉನ್ನತ ಮಟ್ಟದ ಸಭೆ ನಡೆಸಿ ಪರಾಮರ್ಶೆ ನಡೆಸಿ ಸುಧಾರಿತ ಸೇನಾ ಪಡೆಗಳನ್ನು ಆ ರಾಜ್ಯಕ್ಕೆ ಕಳುಹಿಸಲು ನಿರ್ಧರಿಸಿದರು. ಈ ವರ್ಷದ ಆರಂಭದಲ್ಲಿ ಕಾಶ್ಮೀರಕ್ಕೆ ಭೇಟಿ ನೀಡಿ ಎಲ್ಲವೂ ಅದ್ಭುತವಾಗಿದೆ ಎಂದು ಕೂಗಿದ ಮೋದಿ ಅವರೇ 6 ತಿಂಗಳ ನಂತರ ತುರ್ತು ಕ್ರಮಗಳನ್ನು ಘೋಷಿಸಿದರು. ಜೊತೆಗೆ ಪರಿಸ್ಥಿತಿಯ ತೀವ್ರತೆಯನ್ನು ಘೋಷಿಸಿದರು. ಭಯೋತ್ಪಾದಕ ಚಟುವಟಿಕೆಗಳ ನೆಲೆಯಾಗಿರುವ ಸ್ಥಳಗಳಿಗೆ ಸಶಸ್ತ್ರ ಪಡೆಗಳನ್ನು ನಿಯೋಜಿಸಲು ಮತ್ತು ಕಣ್ಗಾವಲು ಕಾರ್ಯಕ್ರಮಗಳನ್ನು ತೀವ್ರಗೊಳಿಸಲು ಆದೇಶಿಸಲಾಯಿತು.

ಈ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 500 ಕಮಾಂಡೋಗಳು ಮತ್ತು 2000 ಇತರ ಪಡೆಗಳು ಭಾಗವಹಿಸುತ್ತಿವೆ ಎಂದು ವರದಿಯಾಗಿದೆ. ರಾಜ್ಯ ಪೊಲೀಸರೊಂದಿಗೆ ಭದ್ರತಾ ಪಡೆಗಳು ಈಗಾಗಲೇ ದಾಳಿಯನ್ನು ಹೆಚ್ಚಿಸಲಾಯಿತು. ಹೆಚ್ಚಿನ ಸಂಖ್ಯೆಯ ಶಂಕಿತರನ್ನು ಬಂಧಿಸಲಾಗುತ್ತಿದೆ. ಕಾಶ್ಮೀರ ಕಣಿವೆಯಿಂದ ಜಮ್ಮು ಪ್ರದೇಶಕ್ಕೆ ಭಯೋತ್ಪಾದಕ ಚಟುವಟಿಕೆಗಳು ಹರಡುತ್ತಿವೆ ಎಂದು ಕೇಂದ್ರ ಹೇಳಿದೆ. ಜನರು ಬಿಜೆಪಿಯನ್ನು ತಿರಸ್ಕರಿಸಿದರೂ. . . ಈ ಕಾರಣದಿಂದಾಗಿಯೇ ಚುನಾವಣೆಯಲ್ಲಿ ಆ ಪಕ್ಷವನ್ನು ಜಮ್ಮು-ಕಾಶ್ಮೀರದ ತಿರಸ್ಕರಿಸಿದ್ದಾರೆ. ವಿಶೇಷ ಸ್ಥಾನಮಾನದ ಆಕಾಂಕ್ಷೆಯನ್ನು ಜಮ್ಮು-ಕಾಶ್ಮೀರದ ಜನರು ಮತದ ಮೂಲಕ ತಿಳಿಸಿದ್ದಾರೆ. ಆದರೂ ಬಿಜೆಪಿ ದ್ವೇಷದ ರಾಜಕಾರಣವನ್ನು ಮುಂದುವರಿಸುತ್ತಿದೆ. ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಹೇಯ ವರ್ತನೆಯು ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಬಿಜೆಪಿಯ ಕೇಂದ್ರ ನಾಯಕತ್ವದ ನಿರ್ದೇಶನದಂತೆ ನಡೆದಿರುವುದು ಸತ್ಯ. ಸೂಕ್ಷ್ಮ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸುವುದು ಅಲ್ಲಿನ ಜನರ ಆಶೋತ್ತರಗಳನ್ನು ಈಡೇರಿಸುತ್ತದೆ. ಅವರಿಗೆ ಸಂವಿಧಾನದ ಮೇಲೆ ನಂಬಿಕೆ ಬರುವಂತೆ ಮಾಡುತ್ತದೆ.

ಇದು ದೇಶದ ನಾಗರಿಕರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ರಾಜಕೀಯ ಪಕ್ಷಗಳು ಮತ್ತು ಎಲ್ಲರೊಂದಿಗೆ ವಿವರವಾದ ಸಮಾಲೋಚನೆಯ ನಂತರವೇ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಸ್ಥಾಪಿಸಲು ಸಾಧ್ಯ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದರಾದರೂ ಅದೇ ದ್ವೇಷವನ್ನು ಕೆರಳಿಸಿ ಚುನಾವಣೆಯಲ್ಲಿ ಲಾಭ ಪಡೆಯಲು ಯೋಜನೆ ರೂಪಿಸುತ್ತಿರುವ ಬಿಜೆಪಿಯ ನಡೆಯ ವಿರುದ್ಧ ಜನ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದರೆ, ಅವರ ತಂತ್ರಗಳು ಮತ್ತು ದೇಶದಲ್ಲಿ ಹರಡುವ ದ್ವೇಷದ ಜ್ವಾಲೆಯಿಂದ ಜನಾಂಗೀಯ ಏಕತೆಗೆ ಅಪಾಯವಿದೆ.

ಇದನ್ನೂ ಓದಿ: ಒಳಮೀಸಲಾತಿಗಾಗಿ ಏಕ ಸದಸ್ಯ ಆಯೋಗ ನೇಮಕ – ಸಿಪಿಐಎಂ ಸ್ವಾಗತ

Donate Janashakthi Media

Leave a Reply

Your email address will not be published. Required fields are marked *