ಶ್ರೀನಗರ : ಜಮ್ಮು ಮತ್ತು ಕಾಶ್ಮೀರ ಚುನಾವಣಾ ಕ್ಷೇತ್ರ ಮರುವಿಂಗಡಣೆ ಆಯೋಗದ ಶಿಫಾರಸುಗಳು ಖಂಡಿತಾ ನ್ಯಾಯಸಮ್ಮತವಲ್ಲದ ಮತ್ತು ತರ್ಕಬದ್ಧವಲ್ಲದ ಶಿಫಾರಸುಗಳು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಟಿಪ್ಪಣಿ ಮಾಡಿದೆ.
2011 ರ ಜನಗಣತಿಯ ಪ್ರಕಾರ, ಕಾಶ್ಮೀರದ ಜನಸಂಖ್ಯೆ 68.8 ಲಕ್ಷ, ಜಮ್ಮುವಿನದ್ದು 53.5 ಲಕ್ಷ. ಆಯೋಗದ ಪ್ರಸ್ತಾವನೆಯ ಪ್ರಕಾರ, ಕಾಶ್ಮೀರಕ್ಕೆ 47 ಅಸೆಂಬ್ಲಿ ಸ್ಥಾನಗಳು ಮತ್ತು ಜಮ್ಮುವಿಗೆ 43. ಒಂದು ನ್ಯಾಯಯುತವಾದ ಮರುವಿಂಗಡಣೆ ಕಾಶ್ಮೀರಕ್ಕೆ 90 ರಲ್ಲಿ 51 ಸ್ಥಾನಗಳನ್ನು ನೀಡಬೇಕಾಗಿತ್ತು ಎಂದು ಅದು ಹೇಳಿದೆ.
ಇದಲ್ಲದೆ, ಕ್ಷೇತ್ರ ಮರುವಿಂಗಡಣೆ ಆಯೋಗವನ್ನು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ 2019 ರ ಅಡಿಯಲ್ಲಿ ರಚಿಸಿರುವುದೇ ಪ್ರಶ್ನಾರ್ಹ, ಏಕೆಂದರೆ ಮರುಸಂಘಟನೆ ಕಾಯ್ದೆಗೆ ಸುಪ್ರೀಂ ಕೋರ್ಟ್‌ನಲ್ಲಿ ಸವಾಲು ಹಾಕಲಾಗಿದೆ. ಇದು ಇನ್ನೂ ಇತ್ಯರ್ಥವಾಗದೆ ಬಾಕಿ ಉಳಿದಿರುವ ವಿಷಯವಾದ್ದರಿಂದ, ವಿಚಾರಾಣಾಧೀನವಾಗಿದೆ.
ಜಮ್ಮುವಿಗೆ ಆರು ಮತ್ತು ಕಾಶ್ಮೀರ ಕಣಿವೆಗೆ ಒಂದು ಹೆಚ್ಚುವರಿ ಸ್ಥಾನಗಳನ್ನು ನೀಡುವ ಪ್ರಸ್ತಾವನೆಯನ್ನು ಮರುಪರಿಶೀಲಿಸಬೇಕು ಮತ್ತು ನ್ಯಾಯಯುತವಾದ ಕ್ಷೇತ್ರ ಮರುವಿಂಗಡಣೆ ಮಾಡಬೇಕು ಎಂದು ಆಗ್ರಹಿಸಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಪ್ರಸ್ತುತ ಪ್ರಸ್ತಾವನೆ ಜಮ್ಮು ಮತ್ತು ಕಾಶ್ಮೀರದ ಜನಸಂಖ್ಯಾ ಸ್ವರೂಪವನ್ನು ಬದಲಾಯಿಸುವ ಗುರಿಯನ್ನು ಹೊಂದಿರುವ ರಾಜಕೀಯ ದುರುದ್ದೇಶದ ವಾಸನೆಯನ್ನು ಸೂಸುತ್ತಿದೆ ಎಂದಿದೆ.