ಜಲ ಸಂಕಷ್ಠದಿಂದ ಜಲ ಸಮೃದ್ಧಿಯೆಡೆಗೆ…..

ಅಹಮದ್ ಹಗರೆ (ಬಿಜಿವಿಎಸ್ ಹಾಸನ)

ಮಾರ್ಚ್-22 ವಿಶ್ವ ಜಲದಿನ ಆನಂತರ ಸರಿ ಸುಮಾರು 30ದಿನಗಳ ನಂತರ, ಅಂದರೆ ಏಪ್ರಿಲ್ 22 ವಿಶ್ವ ಭೂದಿನ…. ಈ ಜಲದಿನಕ್ಕೂ ಭೂ ದಿನಕ್ಕೂ ಏನಾದರೂ ಸಂಬಂಧ ಇದೆಯಾ? ಮುಂದೆ ಓದಿ.

ಹೌದು… ಜಗತ್ತು ಬಾಯಾರಿದೆ, ಈ ಭೂಮಿ ಬಿಸಿಯೇರಿಸಿಕೊಂಡು ತನ್ನ ಹವಾಮಾನವನ್ನೆಲ್ಲಾ ಬದಲಾಯಿಸಿಕೊಂಡಿದೆ. ಆ ಕಾರಣಕ್ಕೆ ಭೂಮಿಯ ಮೇಲಿನ ನೀರಿನ ಆಗರಗಳು ಕಣ್ಮರೆಯಾಗಿ ಕುಡಿವ ನೀರಿಗಾಗಿ ಜನ ಪರಿತಪಿಸುತ್ತಿದ್ದಾರೆ. ಜಗತ್ತಿನ ಅರ್ಧಕ್ಕೂ ಹೆಚ್ಚಿನ ಜನ ಶುದ್ಧ ಕುಡಿಯುವ ನೀರಿನಿಂದ ಬಳಲುತ್ತಿದ್ದಾರೆ. ಆ ಕಾರಣಕ್ಕೆ ಜಗತ್ತಿನಲ್ಲಿ ಖಾಯಿಲೆಗಳ ಆಗರಗಳೆ ತುಂಬಿಕೊಂಡು ಪ್ರತಿನಿತ್ಯ ಸಾವಿನ ಸರಮಾಲೆಗಳನ್ನೇ ಈ ಪೃಥ್ವಿ ತುಂಬಿಕೊಳ್ಳುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಡಿಸೀಸ್ ಕಂಟ್ರೋಲ್ ಒಂದು ಸೆನ್ಸ್‌ ನಡೆಸುತ್ತದೆ. ಅದು ಮಾರ್ಚ್-9, 2020ರ ವರದಿ ಬಿಡುಗಡೆ ಮಾಡುತ್ತದೆ. ಇದರ ಪ್ರಕಾರ ಪ್ರತಿದಿನ ನ್ಯೂಮೋನಿಯಾದಿಂದ ಸುಮಾರು 2216 ಜನ, ಮಲೇರಿಯಾದಿಂದ, 2002ಜನ, ಕಾಲರಾದಿಂದ 392 ಜನ, ಡೈಯೇರಿಯಾ(ಅತಿಸಾರ ಬೇದಿ)ದಿಂದ 1664ಜನ, ಡೆಂಗ್ಯುನಿಂದ 50ಜನ, ಪ್ರಾಣ ಬಿಡುತ್ತಿದ್ದಾರೆ. ಈ ಖಾಯಿಲೆಗಳ ಮುಂದೆ ಕೋವಿಡ್-19 ಏನೇನು ಅಲ್ಲ, ಅದೇ ವರದಿ ಹೇಳುತ್ತೆ… ಕೋವಿಡ್-19 ರಿಂದ ಪ್ರತಿದಿನ ಸಾಯುತ್ತಿರುವುದು ಕೇವಲ 56 ಎಂದು. ಇದು ಔಷದಿ ಇಲ್ಲದ ಖಾಯಿಲೆ ಆದರೆ ಮೇಲೆ ಸೂಚಿಸಿದ ಎಲ್ಲ ಖಾಯಿಲೆಗಳಿಗೂ ಔಷದಿ ಇದೆಯಲ್ಲ? ಆದರೂ ಏಕೆ ಸಾಯುತ್ತಿದ್ದಾರೆ? ಮೂಲ ಕಾರಣ ನೀರಿನ ಅಲಭ್ಯತೆ, ಅಶುದ್ಧತೆ ಎಂಬುದನ್ನ ತೋರಿಸುತ್ತದೆ. ಬಹುತೇಕ ಖಾಯಿಲೆಗಳಿಗೆ ನೀರೇ ಮದ್ದು ಎಂದು ವೈದ್ಯರು ಹೇಳುತ್ತಾರೆ. ಮಾತ್ರ ಅಲ್ಲ ಕೋಪಗೊಂಡ ಅಪ್ಪನಿಗೆ, ದುಖಿಃತ ಮಗನಿಗೆ, ಭಯಗ್ರಸ್ಥ ಮಗಳಿಗೆ ಅಮ್ಮ ಮೊದಲು ನೀರು ಕೊಡುತ್ತಾಳೆ ಕುಡಿ ಎಂದು, ದೇಹದ ಅಂಗಾಂಗ ಸಮಸ್ಥತಿಗೆ ಬರಲಿ ಎಂದು, ಬರುತ್ತದೆ ಕೂಡ. ಮಾನಸಿಕ ಖಾಯಿಲೆಯನ್ನು ತಹಬದಿಗೆ ತರಲು ನೀರು ದೊಡ್ಡಮದ್ದು… ಹಾಗಾಗಿ ಈ ಜಲಧಿಯನ್ನ ಎಂದೆಂದಿಗೂ ನಮ್ಮ ಜೊತೆಯಲ್ಲೇ ಇರುವಂತೆ ಮಾಡಿಕೊಳ್ಳಬೇಕಿದೆ.

ನೀರಿಗಾಗಿ ಹಾಹಾಕಾರ ಇದ್ದಲ್ಲೆಲ್ಲ ನಮ್ಮ ರಾಜಕಾರಣಿಗಳು ತುರ್ತಾಗಿ ಕೊಳವೆಬಾವಿ ಕೊರೆಯಲು ಯಂತ್ರಗಳನ್ನು ರವಾನಿಸುತ್ತಾರೆ, ಪರಿಸರ ವಿಜ್ಞಾನಿಗಳು ಬೇಕಾಬಿಟ್ಟಿ ಕೊಳವೆಬಾವಿ ಕೊರೆಯಲು ಅವಕಾಶ ಕೊಡಬಾರದು ಎಂದು ಆಗ್ರಹಿಸುತ್ತಲೇ ಇದ್ದಾರೆ, ಬೋರ್ವೆಲ್ ಯಂತ್ರಗಳಿಗೆ ನಿಯಂತ್ರಣ ಇರಬೇಕೆಂಬ 1996ರ ಮಸೂದೆಗೆ ಪುನಃ ಗಟ್ಟಿ ಜೀವ ತುಂಬಬೇಕಿದೆ.

ಇದನ್ನು ಓದಿ: ಡಾರ್ವಿನ್ ವಿಕಾಸವಾದದ ಪಿತಾಮಹ

ಇಳೆಗೆ ಬಂದಿರುವ ಜಲ ಬರವನ್ನು ನೀಗಿಸಲು ನಮ್ಮ ಮಧ್ಯೆ ಇರುವುದೊಂದೇ ದಾರಿ ಅದು ದುಬಾರಿ ಹಣ ಪೋಲು ಮಾಡಿ ಅಮೆರಿಕದಿಂದ ತಂತ್ರಜ್ಞರನ್ನು ಕರೆಸಿ ಪಾತಾಳದಲ್ಲಿ ಬಚ್ಚಿಟ್ಟ ಕಪ್ಪು ನೀರನ್ನು ಬಿಳಿ ಮಾಡಿ ಹೊರ ತರುವುದಲ್ಲ, ಕೆರೆಯ ದಡದಲ್ಲಿ ಜ್ಯೋತಿಷಿಗಳನ್ನು, ಪೂಜಾರಿಗಳನ್ನ ಕರೆದು ಕೂರಿಸಿ ಹೋಮಕುಂಡ ಹಾಕಿಸಿ, ಮಂತ್ರೋಚ್ಚಾರ ಮಾಡಿ ಮಳೆ ಮಂತ್ರ ಉದುರಿಸಿ ನೀರಿಗೋಸ್ಕರ ಗೋಗರೆಯುವುದೂ ಅಲ್ಲ, ಸಾವಿರಾರು ಸಂಗೀತಗಾರರನ್ನ ಒಂದೆಡೆ ಕಲೆಹಾಕಿ ಅಮೃತವರ್ಷಿಣಿ ರಾಗ ಹಾಡಿ ಮಳೆಗಾಗಿ ಕಚೇರಿ ನಡೆಸುವುದೂ ಅಲ್ಲ, ಕೋಟ್ಯಾಂತರ ರೂ.ಗಳನ್ನು ಖರ್ಚು ಮಾಡಿ ಮೋಡಗಳನ್ನು ತಾಡಿಸಿ ಮೋಡ ಬಿತ್ತನೆ ಮಾಡುವ ಅಪ್ರಯೋಜಕ ಕೆಲಸವೂ ಅಲ್ಲ. ಅತ್ಯಂತ ಸರಳ, ಸುಲಭ ಮತ್ತು ಕಡಿಮೆ ಖರ್ಚಿನಲ್ಲಿ ಜನಸಮುದಾಯವನ್ನು ಒಳಗೊಳಿಸುತ್ತ್ತಾ ಹೂಳು ಮುಚ್ಚಿ ಒಣಗಿ ನಿಂತ ಕೆರೆಗಳ ಬಾಯನ್ನು ತೆರೆಯಿಸುವುದು ಇದಕ್ಕಾಗಿ ಕೆರೆ ಹೊಳೆತ್ತಿ ಜಲದ ಕಣ್ಣು ತೆರೆಯಿಸುವುದು ಬಿದ್ದ ಮಳೆ ನೀರನ್ನು ಕೆರೆ ಎಂಬ ಹೂಜಿಯೊಳಗೆ ಬಂಧಿಸಿಡುವುದು. ಇಂದು ಬಿದ್ದ ಮಳೆಯ ನೀರನ್ನು ಕೆರೆಯಲ್ಲಿ ಬಂಧಿಸಿಟ್ಟರೆ ನಾಳೆ ಅದು ಬೋರ್ವೆಲ್ ಮೂಲಕ ನಮ್ಮ ಮನೆಯ ನಲ್ಲಿಯಲ್ಲಿ ತುಂಬಿ ಹರಿಯುತ್ತದೆ.

ಈಗ ನಮ್ಮ ದೇಶದಲ್ಲಿ ನೀರಿಗೋಸ್ಕರ ಎರಡು ಮೂರು ಕಿಲೋಮೀಟರ್ ಹೋಗುವ ಪರಿಸ್ಥಿತಿ ಇಲ್ಲ ಅಂದುಕೊಂಡಿದ್ದರೆ ಅದು ತಪ್ಪಾದೀತು. ಈಗಲೂ ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶದ ಗುಡ್ಡಗಾಡುಗಳಲ್ಲಿ, ನಮ್ಮ ಉತ್ತರ ಕನಾಟಕದ ಹಲವಾರು ಹಳ್ಳಿಗಳಲ್ಲಿ ಬಿಂದಿಗೆ ಹಿಡ್ಕೊಂಡು ಹೋಗ್ತಾರೆ, ಎರಡನೇದು ನಲ್ಲಿ ಮುಂದೆ, ಟ್ಯಾಂಕರ್ ಗಳ ಮುಂದೆ ಬಿಂದಿಗೆ ಹಿಡಿದು ಜನ ಸಾಲುಗಟ್ಟಿ ನಗರ ಪ್ರದೇಶದ ವಾರ್ಡ್‌ಗಳಲ್ಲಿ, ಬಡಜನತೆ ವಾಸ ಮಾಡುವ ಬಡಾವಣೆಗಳಲ್ಲಿ ದಿನನಿತ್ಯ ನೋಡುತ್ತಿದ್ದೇವೆ.

ನಾವು ಹಾಸನದ ಜನ ನಮಗೊಂದಿಷ್ಟು ಅಹಂಕಾರ ಇತ್ತು. ನಮಗೆ ಹೇರಳವಾಗಿ ನೀರು ಸಿಗ್ತದೆ, ಪ್ರಾಕೃತಿಕ ವಿಕೋಪಗಳು ನಡೆಯೋದಿಲ್ಲ ಅಂತ ಬೀಗುತ್ತಿದ್ದೆವು. ಆದರೆ ಕಳೆದ ಮೂರು ವರ್ಷಗಳಿಂದ 250ಕ್ಕೂ ಹೆಚ್ಚು ರೈತರು ಹಾಸನದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ದಾಖಲೆ ಆಗಿದೆ, ಹಾಸನ ನಗರದ ತುಂಬಾ ಟ್ಯಾಂಕರ್ ಓಡಾಟ ಹೆಚ್ಚಾಗಿದೆ, (2014, 2015 ಅಂತೂ ವಿಪರೀತ ಜಲಬರ) ಕೇಂದ್ರದ ಬರ ಅಧ್ಯಯನ ವರದಿ ಪ್ರಕಾರ ಶಾಶ್ವತ ಬರಪೀಡಿತ ಜಿಲ್ಲೆಗಳ 16ರಲ್ಲಿ ಹಾಸನ ಕೂಡ ಒಂದು ಎಂದು 2016-17ರಲ್ಲಿ ಘೋಷಣೆಯಾಗಿತ್ತು!

ಇದಕ್ಕೆಲ್ಲ ಕಾರಣವೇನು?

ʻಗ್ಲೋಬಲ್ ವಾರ್ಮಿಂಗ್‌ʼ ಭೂಮಿ ಬಿಸಿಯಾಗುತ್ತಿರುವ ಕಾರಣ ಅದು ತನ್ನ ವಾತಾವರಣವನ್ನು ಬದಲಾಯಿಸಿಕೊಂಡಿದೆ. ಈ ಹವಾಮಾನ ವೈಫರೀತ್ಯದಿಂದಾಗಿ ನೀರಿನ ಸೆಲೆಗಳು ನಾಶ ಆಗುತ್ತಿದೆ ಎನ್ನುವುದು ಒಂದಾದರೆ. ಎರಡನೇದು ಗಣನೀಯ ಪ್ರಮಾಣದಲ್ಲಿ ಅರಣ್ಯ ನಾಶ ಆಗುತ್ತಿರುವುದರಿಂದ ನಿಯಮಿತವಾಗಿ ಮಳೆ ಭೂಮಿಗೆ ಬೀಳುತ್ತಿಲ್ಲ ಅನ್ನೋದು ಇನ್ನೊಂದು ವಾದ. ಪರಿಸರ ವಿಜ್ಞಾನ ಹೇಳುತ್ತೆ ಭೂಮಂಡಲದ ಸಮತೋಲನಕ್ಕೆ ಕನಿಷ್ಠ ಪಕ್ಷ 33 ಪರ್ಸೆಂಟ್ ಅರಣ್ಯ ಇರಬೇಕು ಎಂದು. ಆದರೆ ಬಹುತೇಕ ಸಂಶೋಧನಾ ವರದಿಗಳು ಏನು ಹೇಳುತ್ತವೆ ಎಂದರೆ ಈಗ ಭುವಿಯ ಮೇಲೆ 20% ಗಿಂತಲೂ ಕಡಿಮೆ ಕಾಡು ಇದೆ ಎಂದು ಹೇಳುತ್ತದೆ. ಅರಣ್ಯನಾಶ ಜಾಗತಿಕ ತಾಪಮಾನ ಏರಿಕೆಯಲ್ಲಿ ದೊಡ್ಡಕೊಡುಗೆ ನೀಡಿದೆ. ಇವರೆಡೂ ರಾಜತಾಂತ್ರಿಕ ಸಮಸ್ಯೆ. ಮೂರನೆಯದಾಗಿ ಲಭ್ಯ ನೀರನ್ನು ಬಳಸಿಕೊಳ್ಳಲು ಬೇಕಾದ ಕನಿಷ್ಠ ಸಾಕ್ಷರತೆಯ ಕೊರತೆ. ಇದನ್ನ ನಮ್ಮ ಶಾಲೆಗಳು ಪಠ್ಯದಲ್ಲಿ ಅಳವಡಿಸಿಕೊಂಡಿಲ್ಲ!, ಸರ್ಕಾರ ಜನತೆಗೆ ಇದನ್ನು ಹೇಳಿಕೊಟ್ಟಿಲ್ಲ!. ಹಾಲೆಂಡಿನ ಸ್ವಯಂ ಸೇವಾ ಸಂಸ್ಥೆಯೊಂದು ಅಲ್ಲಿನ ಪ್ರತಿಷ್ಠಿತ ವಿವಿಯ ಜೊತೆಗೂಡಿ ಕಳೆದ 10ವರ್ಷಗಳಿಂದ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿರುವ ನೀರಿನ ಲಭ್ಯತೆ, ನೀರಿನ ಬಳಕೆಯ ದಕ್ಷತೆ, ನೀರಿನ ಮೂಲಗಳ ಸ್ವರೂಪ ಏನಾಗಿದೆ ಮತ್ತು ಏನಾಗುತ್ತಿದೆ ಎನ್ನುವ ಅಂಶಗಳನ್ನು ಇಟ್ಟುಕೊಂಡು ನೀರಿನ ಬಡತನ ಸೂಚ್ಯಂಕವನ್ನು ತಯಾರು ಮಾಡುತ್ತಾರೆ 2017-18 ರಲ್ಲಿ ವಿಶ್ವದ 148 ದೇಶಗಳ ನೀರಿನ ಬಡತನ ಸೂಚ್ಯಂಕ (ವಾಟರ್ ಪಾವರ್ಟಿ ಇಂಡೆಕ್ಸ್) ಸಿದ್ಧಪಡಿಸಿದೆ. 148 ದೇಶಗಳ ಪೈಕಿ ಭಾರತ ಸ್ಥಾನ 100ರಲ್ಲಿದೆ. ಅಂದರೆ ಭಾರತದಲ್ಲಿ ನೀರಿನ ಸೆಲೆ ಬಹಳ ಕಡಿಮೆ ಇದೆ, ಸಿಕ್ಕಷ್ಟು ನೀರನ್ನು ಇತಿ-ಮಿತಿಯಲ್ಲಿ ಬಳಸುವ ಜ್ಞಾನ ಇಲ್ಲ, ಹಾಗೂ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ದಕ್ಷತೆಯೂ ಕ್ಷೀಣವಾಗಿದೆ ಮತ್ತು ಜಲಮೂಲಗಳನ್ನ ಮಾಲಿನ್ಯದಿಂದ ರಕ್ಷಿಸಿಕೊಳ್ಳುವ ಕ್ರಿಯೆ ದುರ್ಬಲವಾಗಿದೆ ಎಂದು ಅರ್ಥ. ಇದಕ್ಕೆ ಪೂರಕವೆಂಬಂತೆ ಭಾರತ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ವರದಿ ಹೇಳುತ್ತದೆ. ಭಾರತದ 54% ಜನತೆ ಕುಡಿಯುವ ನೀರಿನ ಅಲಭ್ಯತೆಯಿಂದ ಬಳಲುತ್ತಿದ್ದಾರೆ ಎಂದು.

ನೀರಿನ ಕುರಿತು ಮಾತಾಡುವಾಗ ಈ ನಾಲ್ಕು ಸ್ಥರಗಳು ಮುಖ್ಯವಾಗಿರುತ್ತದೆ. ಮೊದಲನೆಯದಾಗಿ ʻಜಲ ಸಾಕ್ಷರತೆʼ ಎರಡನೆಯದು ಇರುವ ಜಲವನ್ನು ಸಂರಕ್ಷಣೆ ಮಾಡುವ ʻಜಲಸಂರಕ್ಷಣೆʼ ಮೂರನೇಯದು ರಕ್ಷಣೆಗೆ ಒಂದು ದೊಡ್ಡ ಮಾದರಿಯ ʻಜಲಾಂದೋಲನʼ ಹಮ್ಮಿಕೊಳ್ಳುವುದು ಹಾಗೂ ಈ ಜಲಾಂದೊಲನಕ್ಕೆ ಬೇಕಾಗುವ ʻಜಲ ಸೇನೆʼಯನ್ನು ನಿರ್ಮಾಣ ಮಾಡುವುದು.

ಇದನ್ನು ಓದಿ: ಇಂದು ಬಾನಂಗಳದಲಿ ಗುರು-ಶನಿಗಳ ಸಮಾಗಮ

ಸರಳವಾಗಿ ಜಲ ಸಾಕ್ಷರತೆಯ ಬಗ್ಗೆ ಯೋಚನೆ ಮಾಡುವುದಾದರೆ ಯಾವಾಗಲೂ ನಮಗೊಂದು ಪ್ರಶ್ನೆ ಮಕ್ಕಳು ಕೇಳುತ್ತಿರುತ್ತಾರೆ, ಸಾರ್ ನೀರಿಲ್ಲ, ನೀರಿಗೆ ಬರ ಬಂದಿದೆ ಅಂತ ಹೇಳ್ತೀರಿ ಆದರೆ ಭೂಮಿ ಮೇಲೆ ಎಲ್ಲೆಲ್ಲೂ ನೀರೆ ಇದೆಯಲ್ಲ ಸರ್ ಎಂದು. ನಿಜ ಭೂಮಿ ಮೇಲೆ ಶೇಕಡಾ 70 ರಿಂದ 75 ಭಾಗ ನೀರೇ ಇದೆ. ಆದರೆ ನಮ್ಮ ಬಳಿ ಇರೋದು 97 ಪ್ರಸೆಂಟ್ ಉಪ್ಪುನೀರು ಇದು ಅಡಿಗೆ ಮಾಡಲು ಬರಲ್ಲ, ಕುಡಿಯಲು ಬರಲ್ಲ, ಜಾನುವಾರಗಳಿಗೆ ಕೊಡಲಿಕ್ಕೆ ಬರಲ್ಲ, ಹೊಲಗಳಿಗೆ ಹರಿಸಲು ಬರಲ್ಲ, ಗೌರಿಗೆ ಬಾಗಿನ ಕೊಡಲಿಕ್ಕೆ ಬರಲ್ಲ….. ನಿಜವಾಗಲೂ ನಮ್ಮ ಬಳಿ ಇರುವ ಶುದ್ಧ ನೀರು ಕೇವಲ 3 ಪರ್ಸೆಂಟ್ ಮಾತ್ರ. ಈ 3 ಪರ್ಸೆಂಟ್‌ನಲ್ಲೂ ಎರಡು ಪರ್ಸೆಂಟ್ ನೀರು ಅಂದರೆ ಮೂರನೆ ಎರಡು ಭಾಗದಷ್ಟು ನೀರು ಭೂಮಿಯ ಧ್ರುವದ ಹಿಮದ ಹೊದಿಕೆಗಳಲ್ಲಿ ಬಚ್ಚಿಟ್ಟುಕೊಂಡಿದೆ. ನಮ್ಮ ಕೈಗಂತು ಎಟುಕುವುದೇ ಇಲ್ಲ. ನಿಜವಾಗಿಯೂ ನಮ್ಮೆಲ್ಲರ ದಾಹ ತೀರಿಸಲಿಕ್ಕೆ ಭೂಮಿ ಮೇಲೆ ಇರುವುದು ತೆಳ್ಳಗಿನ 1% ಮಾತ್ರ ನೀರು. ಈ ಒಂದು ಪರ್ಸೆಂಟ್ ಸಿಹಿನೀರಿನಲ್ಲಿ 97% ಭೂತಳದಲ್ಲಿದೆ, ಇನ್ನುಳಿದ 3 ಪರ್ಸೆಂಟ್ ಮಾತ್ರ ಕೆರೆ ನದಿ ಹಳ್ಳ್ಳಗಳಲ್ಲಿದೆ. ಕಣ್ಣಿಗೆ ಕಾಣುವ ಒಂದು ಪರ್ಸೆಂಟಿನ 87 ಪರ್ಸೆಂಟ್ ನೀರು ಕೆರೆ ಕಟ್ಟೆಗಳಲ್ಲಿ ಸಂಗ್ರಹ ಅಗತ್ತೆ. ಇದು ಬಹಳ ಮುಖ್ಯ, ಇಲ್ಲಿ ನೀರು ಹೆಚ್ಚು ಸಂಗ್ರಹವಾದರೆ ಅಂತರ್ಜಲ ಹೆಚ್ಚು ಸಂಗ್ರಹವಾಗುತ್ತದೆ.

ಜಗದ ಇವತ್ತಿನ ಜನಸಂಖ್ಯೆ 700 ಕೋಟಿ 2025 ಇದರ ವೇಳೆಗೆ ಸುಮಾರು 800 ಕೋಟಿ ಆಗುತ್ತೆ. ನೂರು ಕೋಟಿಗೂ ಹೆಚ್ಚಿನ ಜನ ಈಗ ನೀರಿಗಾಗಿ ಪರದಾಡುತ್ತಿದ್ದಾರೆ 2025ರ ವೇಳೆಗೆ 54ಪರ್ಸೆಂಟ್ ಅಂದರೆ 431 ಕೋಟಿ ಜನ ಕುಡಿಯುವ ನೀರಿಗಾಗಿ ಪರದಾಡುತ್ತಾರೆ. ಈಗಾಗಲೇ ದಕ್ಷಿಣ ಆಫ್ರಿಕಾ, ಸೋಮಾಲಿಯಾ, ಸಿರಿಯಾಗಳು ನೀರಿಗಾಗಿ ಹಪಹಪಿಸುತ್ತಿವೆ.

1989ನೇ ಇಸವಿಯಲ್ಲಿ ಒಬ್ಬ ಮನುಷ್ಯನಿಗೆ ಕುಡಿಯುವ ನೀರಿನ ಲಭ್ಯತೆ 9000 ಕ್ಯೂಬಿಕ್ ಮೀಟರ್ ಇತ್ತು, 2000ದ ವೇಳೆಗೆ 7800 ಕ್ಯೂಬಿಕ್ ಮೀಟರ್‌ಗೆ ಇಳಿಯಿತು, 2025ರ ವೇಳೆಗೆ ಇದು 5100 ಕ್ಯೂಬಿಕ್ ಮೀಟರ್‌ಗೆ ಇಳಿಯುತ್ತೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಹೀಗೆ ಮುಂದುವರೆದರೆ 2050ರ ವೇಳೆಗೆ ಭೂಮಿ ಮೇಲಿನ ಜನಸಂಖ್ಯೆ 12 ಬಿಲಿಯನ್ 1200 ಕೋಟಿ) ಆಗಲಿದೆ. ಆ ವೇಳೆಗೆ 90 ಪರ್ಸೆಂಟ್ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಾರೆ.

ಮಳೆ ಬರುತ್ತಿಲ್ಲವೇ? ಆಕಾಶದಲ್ಲಿ ನೀರಿಲ್ಲವೆ?

ಡಿವಿಜಿವರ ಜಲಚಕ್ರ ಕವನ ಹೀಗೆ ಹೇಳುತ್ತದೆ

ʻʻಭೂ ವಿಷಯದಲ್ಲಿ ಪುದಿದ ರಸವಾಸನೆಗಳೆಲ್ಲ
ಆವಿಯಾಗೇಳ್ದು ಮುಗಿಲಾಗಿ ಮಳೆಗರೆದು
ಬಾವಿಗೂಟೆಯನಿತ್ತು ನರರೊಡಲ ಸೇರುವುದು
ದೈವ ರಸ ತಂತ್ರವಿದು? ಮಂಕುತಿಮ್ಮ.ʼʼ

ನೀರನ್ನು ತಪಸ್ಸು ಮಾಡಿ ಸೃಷ್ಠಿಲಾಗದು, ಅಥವ ಶೂನ್ಯದಿಂದಲೂ ಮ್ಯಾಜಿಕ್ ಮಾಡಿ ಸೃಷ್ಠಿಸಲಾಗದು. ಭೂಮಿ ಉಗಮಿಸಿದಾಗಲೇ ರಾಸಾಯನಿಕ ಪರಿಣಾಮದ ಕಾರಣ ನೀರೂ ಕೂಡ ಉಗಮಿಸಿ ಭೂಮಿಯಾವರಿಸಿದೆ. ಆವಿಕರಣಹೊಂದಿ, ಭಾಷ್ಪೀಕರಣಹೊಂದಿ, ಸೋಸೀಕರಣಹೊಂದಿ, ಘನೀಕರಣಹೊಂದಿ, ಭೂಮಂಡಲದಲ್ಲಿ ಚಕ್ರದಂತೆ ತಿರು ತಿರುಗಿ ಜಲಧಾರೆಯಾಗಿ ಭುಮಿಗಿಳಿಯುತ್ತದೆ. ಹಾಗಾಗಿ ನೀರಿಗೆ ಬರ ಬರಲು ಸಾಧ್ಯವೇ ಇಲ್ಲ!

ಸೋರ್ಸ್ ಕಂಟ್ರೋಲ್ ವಾಟರ್ ಕನ್ಸರ್ವೇಷನ್ ಆಫ್ ಇಂಡಿಯಾ ಮತ್ತು ಐ.ಐ.ಟಿ. ಖರಗ್‌ಪುರ್ ಒಂದು ವರದಿಯನ್ನು ಸಿದ್ಧಪಡಿಸಿದೆ. ಭಾರತದಲ್ಲಿ ಪ್ರತಿವರ್ಷ ಸುಮಾರು 4500 ಚದುರ ಕಿಲೋಮೀಟರ್ ನಷ್ಟು ಸಿಹಿನೀರು ಮಳೆ ರೂಪದಲ್ಲಿ ಭೂಮಿಗೆ ಬೀಳುತ್ತದೆ, ಬಿದ್ದ ಈ ನೀರಿನಲ್ಲಿ 250 ಚದರ ಕಿಲೋಮೀಟರ್ ಅಂದ್ರೆ 5.6%, ಕೆರೆ-ಕಟ್ಟೆಗಳಲ್ಲಿ ಬಂದಿಯಾಗುತ್ತದೆ, 440 ಚದರ ಕಿಲೋಮೀಟರ್ ಅಂದರೆ 9.8  ಪರ್ಸೆಂಟ್ ನದಿ-ಕೊಳ್ಳಗಳಲ್ಲಿ ಹರಿದಾಡುತ್ತದೆ, 432 ಚದರ ಕಿಲೋಮೀಟರ್ ಅಂದರೆ 9.6% ನೀರು ಅಂತರ್ಜಲ ಸೇರುತ್ತದೆ ಇಳಿದ 75% ಅಂದರೆ 3378 ಚದರ ಕಿಲೋಮೀಟರ್ ನೀರು ಸುಮ್ಮನೆ ಸಮುದ್ರ ಸೇರುತ್ತದೆ.

ಇದನ್ನು ಓದಿ: ವಿಜ್ಞಾನ ಸಾಹಿತಿ, ಹೋರಾಟಗಾರ ಮತ್ತು ಪ್ರಖರ ವಿಜ್ಞಾನ ಸಂವಹನಕಾರ- ನಾಗೇಶ ಹೆಗಡೆ

ಅಂದರೆ 4,500 ಚದುರ ಕಿಲೋಮೀಟರ್ ನಷ್ಟು ನೀರು ಮಳೆ ಮೂಲಕ ಬಂದರೆ ಅದರ 25% ನಂತೆ ಪ್ರತಿವರ್ಷ ಕನಿಷ್ಠ ಸಾವಿರದ 1122 ಚದುರ ಕಿಲೋಮೀಟರ್ ನಷ್ಟು ಶುದ್ಧ ನೀರು ಲಭ್ಯ ಆಗುತ್ತೆ. ಈ ನೀರನ್ನು ವೈಜ್ಞಾನಿಕವಾಗಿ ಬಳಸಿಕೊಳ್ಳುವ ವಿಧಾನವನ್ನು ಕಲಿತುಕೊಂಡರೆ ಭೂಮಿಗಂಟಿರುವ ನೀರ ಬರವನ್ನು ನೀಗಿಸಬಹುದು.

ಎರಡನೇ ಅಂಶ ಸುಮ್ಮನೆ ಹರಿದು ಹೋಗುತ್ತಾ ಸಾಗರ ಸೇರುತ್ತಿರುವ 75 ಪರ್ಸೆಂಟ್ ನೀರಿನಲ್ಲಿ ಕೇವಲ 5 ರಿಂದ 10% ಪರ್ಸೆಂಟ್‌ನಷ್ಟು ನೀರನ್ನು ಭೂಮಿ ಒಳಗಡೆ ಸಂಗ್ರಹಿಸಿಟ್ಟುಕೊಳ್ಳಲಿಕೆ ಸಾಧ್ಯವಾಗುವುದಾದರೆ ಈ ದೇಶ ನೀರಿಗಾಗಿ ಜಗಳವಾಡ ಬೇಕಿಲ್ಲ, ಜನ-ಜಾನುವಾರುಗಳು ರೋಗಗಲಿಂದ ಆವೃತವಾಗಬೇಕಿಲ್ಲ.

ಇವತ್ತು ನಾವು ನೀರನ್ನು ರಕ್ಷಿಸಿದರೆ ನಾಳೆ ನೀರು ನಮ್ಮನ್ನು ರಕ್ಷಿಸುತ್ತದೆ.

ನೀರಿನ ಉಳಿತಾಯ ಮತ್ತು ಸಂರಕ್ಷಣೆಗೆ ಐದು ಮಾರ್ಗಗಳು ನಮ್ಮ ನಡುವೆ ಇದೆ ಒಂದು ನೀರನ್ನ ಮಿತವಾಗಿ ಬಳಸೋದು, ಬಳಸಿ ಉಳಿದಿದ್ದನ್ನ ಪೋಲಾಗದಂತೆ ಪುನರ್ ಬಳಕೆ ಮಾಡುವ ಯೋಜನೆಯನ್ನು ರೂಪಿಸುವುದು, ಜಲ ಸಂಗ್ರಹಗಾರಗಳನ್ನ ಅಭಿವೃದ್ಧಿಯನ್ನು ಮಾಡುವುದು, ಮಳೆ ನೀರು ಕೊಯ್ಲು ಮಾಡಿಕೊಳ್ಳುವುದು ಮತ್ತು ಮಾಲಿನ್ಯದಿಂದ ಜಲಮೂಲಗಳನ್ನು ರಕ್ಷಣೆ ಮಾಡುವುದು.

ನಾವೀಗ ಚಿಂತೆ ಮಾಡಬೇಕಾಗಿದೆ

ಒಂದು ದೇವಸ್ಥಾನ ಕಟ್ಟುವ ಮುತುವರ್ಜಿ, ಒಂದು ಹಬ್ಬಹರಿದಿನ ಆಚರಿಸುವ ಹುಮ್ಮಸ್ಸು ಪರಿಸರ ನೆಲ ಜಲಕ್ಕಾಗಿ ಕೆಲಸ ಮಾಡುವಾಗಲೂ ಇದ್ದರೆ ಎಷ್ಟು ಚೆಂದ ಈ ಕೆಲಸ ಹೊಸದೇನಲ್ಲ ರಾಜಸ್ಥಾನದಲ್ಲಿ ರಾಜೇಂದ್ರ ಸಿಂಗ್ ಜನಸಮುದಾಯದ ಜೊತೆ ಹತ್ತುಸಾವಿರಕ್ಕೂ ಅಧಿಕ ಕೆರೆ ಕಟ್ಟಿಸಿ ಆಳ್ವಾರ್ ಜಿಲ್ಲೆಯನ್ನು ಬರಮುಕ್ತಗೊಳಿಸಿ ಬತ್ತಿಹೋದ ಐದು ನದಿಗಳಿಗೆ ಜೀವ ತುಂಬಿದ್ದಾರೆ, ಮಹಾರಾಷ್ಟ್ರದ ಅಣ್ಣಾ ಹಝಾರೆ ರಾಣೆಗಾಂವ್ ಸಿದ್ಧಿ ಮತ್ತು ಸುತ್ತಮುತ್ತಲ ಪಂಚಾಯತ್ ಅನ್ನು ಜಲಸಮೃದ್ಧಗೊಳಿಸಿದ್ಧಾರೆ. ಅಮೀರ್‌ಖಾನ್ ನೇತೃತ್ವದ ಪಾನಿ ಫೌಂಡೇಶನ್ ಮಹಾರಾಷ್ಟ್ರದ 100ಕ್ಕೂ ಅಧಿಕ ಗ್ರಾಮಗಳಲ್ಲಿ ವಾಟರ್ ಕಪ್‌ ಮೂಲಕ ಜಲಸಂಧಾರಣೆ ಮಾಡಿದ್ದಾರೆ (ಯೂಟೂಬಿನಲ್ಲಿ ಸಾಕ್ಷ್ಯಚಿತ್ರ ಲಭ್ಯವಿದೆ) ಮಧ್ಯಪ್ರದೇಶದ ಝಬೂವ ಜಿಲ್ಲೆಯ ಹಾತಿಪಾವ ಗುಡ್ಡಗಾಡಿನ ಜನ ಪ್ರತಿವರ್ಷ ಮಾರ್ಚ್1ನೇ ತಾರೀಕು ಭೂಮಾತೆಯ ಗರ್ಭದಲ್ಲಿ ನೀರನ್ನು ಸೇರಿಸುವ ʻʻಹಲಮಾʼʼ ಸೇವೆಯನ್ನ ಕಳೆದ 22ವರ್ಷಗಳಿಂದಲೂ ಮಾಡುತ್ತಿದ್ದಾರೆ. ನಮ್ಮ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ 75ರ ಹರೆಯದ ಕುರಿಗಾಹಿ ಕಾಮೇಗೌಡ ತನ್ನೆಲ್ಲಾ ಕುರಿಗಳನ್ನ ಮಾರಿ 8ಕೆರೆಯನ್ನ ಊರಿಗೆ ಕಟ್ಟಿಕೊಟ್ಟಿದ್ದಾರೆ. ಇಂತಹ ಪಟ್ಟಿ ನೂರಾರು ಸಿಗುತ್ತದೆ. ಹಾಸನದಲ್ಲಿಯೂ ಕೂಡ ಹಸಿರುಭೂಮಿ ಪ್ರತಿಷ್ಠಾನ ಎಂಬ ಪರಿಸರಪ್ರಿಯರ ಸಂಘಟನೆ ಜನಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ಪ್ರೇರಣೆಯಿಂದ 207ರಿಂದ ಸುಮಾರು 14ಕೆರೆಗಳ, 85 ಕಲ್ಯಾಣಿಗಳ ಹೂಳೆತ್ತಿ ಜಲಸಂರಕ್ಷಣೆ ಮಾಡಿವೆ, ಮಾತ್ರವಲ್ಲ ಕಲ್ಯಾಣಿಗಳು ನಗಣ್ಯವಾಗಿರುವ ಕಾಲದಲ್ಲಿ ಹಾಸನ ನಗರದೊಳಗೆ(ಚನ್ನಪಟ್ಟಣ ಹೌಸಿಂಗ್ ಬಡಾವಣೆಯೊಳಗೆ) ಬಹುಸುಂದರವಾಗಿ ಕಲ್ಯಾಣಿಯೊಂದನ್ನು ನಿರ್ಮಿಸಿ ನೀರಬರಕ್ಕೆ ಜಲಸಂಗ್ರಾಹಗಾರಗಳನ್ನ ನಿರ್ಮಿಸುವುದೇ ಪರಿಹಾರ ಎಂದು ಮಾಡಿತೋರಿಸಿದೆ. ಎಲ್ಲೆಲ್ಲಿ ಜಲಸಂಧಾರಣ ಕೆಲಸವಾಗಿದೆಯೋ ಅದರ ಸುತ್ತ-ಮುತ್ತ 5ಕಿಲೋಮೀಟರ್ ವ್ಯಾಪ್ತಿಯಲ್ಲಿ ಬತ್ತಿದ ಕೊಳವೆ ಬಾವಿಗಳು ಜೀವಕಂಡಿವೆ. ಇದುವೆ ನಾವು ನೀವು ಎಲ್ಲರೂ ಒಟ್ಟಿಗೆ ಸೇರಿ ಜಲ ದೇವಿಯನ್ನು ನಮ್ಮೂರ ಭೂಮಿಯೊಳಗೆ ಬಚ್ಚಿಟ್ಟು ಕಾಪಾಡುವ ವಿಶ್ವ ಜಲದಿನ. ಇಲ್ಲಿವರೆಗೂ ಹಸಿರಿಗಾಗಿ, ನೀರಿಗಾಗಿ, ಭೂಮಿಗಾಗಿ ಭಾಷಣಗಳನ್ನ ಬಿಗಿದದ್ದಾಯಿತು, ಪುಟಗಟ್ಟಲೆ ಲೇಖನ ಬರೆದದ್ದಾಯಿತು ಇನ್ನು ಈ ಧರೆಗೆ ಹಸಿರಾಗಿಸುವ ಜಲ ಕೈಂಕರ್ಯದ ಕೆಲಸ ಆಗಬೇಕು.

ನೀರಿನ ಬಿಕ್ಕಟ್ಟಿನ ಕಾರಣ ನೈರ್ಮಲ್ಯದ ಬಿಕ್ಕಟ್ಟೂ ಮನುಕುಲವನ್ನ ಬರ್ಬರಗೊಳಿಸುತ್ತಾ ಸಾಗುತ್ತಿದೆ ಹಾಗಾಗಿ ಕಳೆದ ವರ್ಷ ವಿಶ್ವಸಂಸ್ಥೆ ಘಂಟಾಘೋಷವಾಘಿ ಎಚ್ಚರಿಸಿತ್ತು ʻʻಈ ಭೂಮಿಯ ಮೇಲೆ ನೀನು ಬದುಕಬೇಕಾದರೆ ನೀನು ಬದಲಾಗುʼʼ (Be the change if you want to see in the world)

ಈ ವರ್ಷ ಇನ್ನಷ್ಟು ಎತ್ತರಿಸಿ ಹೇಳಿದೆ ʻʻನೀರು ಮತ್ತು ನೈರ್ಮಲ್ಯದ ಬಿಕ್ಕಟ್ಟನ್ನು ಪರಿಹರಿಸಲು ನಿನ್ನ ಜೀವನಶೈಲಿಯನ್ನ ವೇಗವಾಗಿ ಬದಲಾಯಿಸಿಕೊʼʼ (Accelarating the change to solve the water and sanitation crisis) ಎಂದು.

ಈ ಮಾತನ್ನ ಕಿವಿಯಾಗಿಸಿ, ದನಿಯಾಗಿಸಿ ಎದೆ ಮತ್ತು ಮೆದುಳಿಗೆ ಕೆಲಸಕೊಡೋಣವೆ? ಈಗ ಬೇಸಿಗೆ ಶುರುವಾಗುತ್ತಿದೆ, ಬೇಸಗೆ ಮುಗಿದ ನಂತರ ಮಳೆ ಬಿದ್ದೇ ಬೀಳುತ್ತದೆ, ನಮ್ಮೂರಿಗೆ ಬಿದ್ದ ಮಳೆಯನ್ನ ನಮ್ಮೂರ ಭೂತಳದಲ್ಲಿ ಸೇರಿಸಲಿಕ್ಕಾಗಿ ನಾವು ಹೋರಾಟ ನಡೆಸಬೇಕಿದೆ. ಓಡುವ ನೀರಿಗೆ ನಡೆವುದನ್ನ ಕಲಿಸಬೇಕಿದೆ. ನಡೆವ ನೀರಿಗೆ ನಿಲ್ಲುವುದನ್ನ ಹೇಳಿಕೊಡಬೇಕಿದೆ, ನಿಂತ ನೀರನ್ನು ಇಂಗುವುದನ್ನು ಕಲಿಸಬೇಕಿದೆ ಅದಕ್ಕೆ ನಮ್ಮೂರಿನಲ್ಲಿ ಒಂದು ಕೆರೆಯನ್ನು ಉಳಿಸಿ-ಶುಚಿಗಿಳಿಸಿ-ಬೆಳೆಸುವ ಮೂಲಕ ಆ ಕೂಗಿಗೆ ಕಿವಿಯಾಗಿಸಿ, ದೇಹಬದಲಿಸಿ ಜಲದಿನಕ್ಕೆ ಶುಭ ಕೋರೋಣವೆ.?

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *