ಜೈಲು ಸೇರಿದ್ದ ಕಾಂತಾರದ ರಿಯಲ್ ಹೀರೋಗಳು ನಿನ್ನೆ ದೋಷಮುಕ್ತರಾದರು

ನವೀನ್ ಸೂರಿಂಜೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕುದುರೇಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಆದಿವಾಸಿಗಳು ತಲೆತಲಾಂತರಗಳಿಂದ ನೆಲೆಸಿದ್ದಾರೆ. ಕಾಡಿನ ಕಾಂತಾರದೊಳಗೆ ಆದಿವಾಸಿಗಳು ವಾಸಿಸುತ್ತಿದ್ದರೆ, ಕಾಡಂಚಿನಲ್ಲಿ ಜಮೀನ್ದಾರಿ ಭಟ್ಟರ ಮನೆಯಿದೆ. ಆದಿವಾಸಿಗಳ ಜಮೀನಿಗೆ ಭಟ್ಟರೇನು ಮಾಲೀಕರಲ್ಲ. ಹಾಗೆ ನೋಡಿದರೆ ಭಟ್ಟರಷ್ಟೇ ಜಮೀನು ಕಾಡೊಳಗಿನ ಆದಿವಾಸಿಗಳಿಗೂ ಇದೆ. ಆದರೆ ಅವರು ಭಟ್ಟರು ಎಂಬ ಕಾರಣಕ್ಕೆ ಆದಿವಾಸಿಗಳಿಂದ ಗೌರವಕ್ಕೆ ಪಾತ್ರರಾಗಿದ್ದರು. ಭಟ್ಟರೂ ಕೂಡಾ ಆಗೊಮ್ಮೆ ಈಗೊಮ್ಮೆ ಆದಿವಾಸಿಗಳಿಗೆ ಸಹಾಯ ಮಾಡುವ ನಾಟಕ ಮಾಡಿ “ದೇವರ” ಸ್ಥಾನ ಗಿಟ್ಟಿಸಿಕೊಂಡಿದ್ದರು.

ಎಲ್ಲವೂ ಚೆನ್ನಾಗಿದ್ದಾಗ ಆದಿವಾಸಿಗಳು ವಾಸವಿದ್ದ ಕಾಡನ್ನು ರಾಷ್ಟ್ರೀಯ ಉದ್ಯಾನವನ ಎಂದು ಸರ್ಕಾರ ಘೋಷಿಸಿತು. ಆದಿವಾಸಿಗಳನ್ನು ಒಕ್ಕಲೆಬ್ಬಸಲು ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿತು. ಕಾಡೊಳಗಿನ ಆದಿವಾಸಿಗಳಿಗೆ ಕಾಡಿನಿಂದ ಹೊರ ಬರಲು ಮನಸ್ಸಿಲ್ಲ. ಅದಕ್ಕಾಗಿ ಆದಿವಾಸಿಗಳು ಹೋರಾಟವನ್ನು ರೂಪಿಸಿಕೊಂಡರು. ಕಾಡೊಳಗಿನ ಎಕರೆಗಟ್ಟಲೆ ತೋಟ, ಗದ್ದೆ, ಮನೆಯನ್ನು ಬಿಟ್ಟು ಪೇಟೆಯಲ್ಲಿ ಸರ್ಕಾರ ನೀಡುವ ಸೈಟಿನಲ್ಲಿ ಆದಿವಾಸಿಗಳು ಬದುವುದಾದರೂ ಹೇಗೆ? ಆದಿವಾಸಿಗಳು ಯಾವುದೇ ಕಾರಣಕ್ಕೂ ಕಾಡಿನಿಂದ ಹೊರ ಬರಲ್ಲ ಎಂದು ಘೋಷಿಸಿದರು.

ಕಾಡಿನ ಅಂಚಿನಲ್ಲಿರುವ ಜಮೀನ್ದಾರಿ ಭಟ್ಟರ ಜಮೀನು ರಾಷ್ಟ್ರೀಯ ಉದ್ಯಾನವನದಿಂದ ಹೊರಗಿದೆ. ಈಗ ಭಟ್ಟರು ಆಲೋಚನೆ ಕಾಡಿನತ್ತಾ ಹೋಯಿತು. ಆದಿವಾಸಿಗಳು ಕಾಡಿನಿಂದ ಹೊರ ಹೋದರೆ ಊರಿಗೂರೆ ಅನಧಿಕೃತವಾಗಿ ನನ್ನ ಪಾಲಾಗುತ್ತದೆ. ವರ್ಷದ ದಿನವಿಡೀ ಅರಣ್ಯ ಇಲಾಖೆಯವರೇನೂ ಕಾಡಿನಲ್ಲಿ ಇರುವುದಿಲ್ಲವಲ್ಲ ಎಂದು ಯೋಚಿಸಿದ ಭಟ್ಟರು, ಆದಿವಾಸಿಗಳ ಹೋರಾಟದ ವಿರುದ್ದ ನಿಂತುಬಿಟ್ಟರು. ತನ್ನ ಆಜ್ಞಾನುವರ್ತಿಗಳಾದ ಕೆಲ ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ಭಟ್ಟರು ಮನವೊಲಿಕೆ ಮಾಡಿದರು.

ಮತ್ತೊಂದೆಡೆ ಆದಿವಾಸಿಗಳಿಗೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆಯಿಂದ ಕಿರುಕುಳಗಳು ಜಾಸ್ತಿಯಾದವು. ಆದಿವಾಸಿಗಳ ಹೋರಾಟದ ಹಿಂದೆ ನಕ್ಸಲರಿದ್ದಾರೆ ಎಂದು ಆರೋಪಿಸಿ ಆದಿವಾಸಿಗಳನ್ನು ನಿತ್ಯ ಹಿಂಸೆಗೆ ಒಳಪಡಿಸಲಾಯಿತು. ಭಟ್ಟ ನೀಡಿದ ಮಾಹಿತಿಯಂತೆ ಹಲವು ಆದಿವಾಸಿಗಳನ್ನು ಅಕ್ರಮವಾಗಿ ಬಂಧಿಸಿದ ಪೊಲೀಸರು ಕಾಲಿನ ಮೇಲೆ ರೋಲರ್ ಹರಿಸಿದರು. ರಾತ್ರೋ ರಾತ್ರಿ ಮನೆಗೆ ಬಾಗಿಲು ಮುರಿದು ನುಗ್ಗಿ ಹಲ್ಲೆ ನಡೆಸಿದರು. ಆದಿವಾದಿಗಳು ಕಾಡಿನಲ್ಲಿ ಪುರ್ಸ ಪೂಜೆ ಎಂಬ ಬುಡಕಟ್ಟು ಆರಾಧನೆಯನ್ನು ಮಾಡುತ್ತಾರೆ. ಈ ಬುಡಕಟ್ಟು ಆರಾಧನೆಗೂ ಪೊಲೀಸ್ ಕಿರುಕುಳ ಶುರುವಾಗುತ್ತದೆ. ಅರಣ್ಯ ಉತ್ಪನ್ನಗಳನ್ನು ಪೂಜೆಗಾಗಿ ಬಳಸಬಾರದು ಎಂದು ಕಟ್ಟಪ್ಪಣೆ ವಿಧಿಸಿದ್ದರು.

ಈ ಮಧ್ಯೆ ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ಭಟ್ಟರು, ಸಲಾಂ ಎಂಬ ಮುಸ್ಲಿಂ ವ್ಯಾಪಾರಿಯನ್ನು ಬಳಸಲು ಅರಣ್ಯ ಇಲಾಖೆ ನಿರ್ಧರಿಸಿತು. ಪರಿಹಾರ ಪಡೆದುಕೊಂಡು ಆದಿವಾಸಿಗಳು ಮನೆ ಖಾಲಿ ಮಾಡಿ ಹೊರ ಬಂದರೆ ಭಟ್ಟರಿಗೆ ಮತ್ತು ಸಲಾಂಗೆ ಕಮೀಷನ್ ಫಿಕ್ಸ್ ಮಾಡಲಾಯಿತು. ಈಗ ಭಟ್ಟರು ಮತ್ತು ಸಲಾಂ ನೇರ ಕಾರ್ಯಾಚರಣೆಗೆ ಇಳಿದರು. ಭಟ್ಟರ ನೇತೃತ್ವದಲ್ಲೇ ಆದಿವಾಸಿಗಳ ಮೇಲೆ ದಾಳಿಗಳು ಶುರುವಾದವು. ಕೆಲ ಆದಿವಾಸಿಗಳು ಹೆದರಿ ಕಾಡಿನಿಂದ ಹೊರ ಬಂದರು. ಒಂದು ಕಡೆಯಿಂದ ಕಾಡುತ್ಪತ್ತಿಗೆ ಭಟ್ಟರೇ ಅನಧಿಕೃತ ಮಾಲೀಕನಾದರೆ ಮತ್ತೊಂದೆಡೆ ಆದಿವಾಸಿಗಳ ಪರಿಹಾರದ ಹಣದಲ್ಲಿ ಕಮಿಷನ್ ! ಹಣ ಓಡಾಡುತ್ತಿದ್ದಂತೆ ಭಟ್ಟರು ಮತ್ತು ಸಲಾಂ ಮತ್ತೆ ವೈಮನಸ್ಸು ಪ್ರಾರಂಭವಾಗಿತ್ತು.

2013 ನವೆಂಬರ್ 9 ರ ರಾತ್ರಿ 2 ಗಂಟೆಗೆ ಕಾಡಿನಲ್ಲಿ ದಡ್ಡ ಹೊಗೆ, ಬೆಂಕಿ ಕಾಣಿಸಿಕೊಂಡಿತ್ತು. ಕಾಡಿಗೆ ಬೆಂಕಿ ಬಿದ್ದಿದ್ದಲ್ಲ. ಭಟ್ಟರ ಮನೆ ಎದುರು ನಿಲ್ಲಿಸಲಾಗಿದ್ದ ಬೈಕ್ ಮತ್ತು ಕಾರಿಗೆ ಬೆಂಕಿ ಬಿದ್ದಿತ್ತು. ಇದು ಅನಕ್ಷರಸ್ಥ ಆದಿವಾಸಿಗಳಿಂದ ಪಡೆದ ಕಮಿಷನ್ ಹಣ ಹಂಚಿಕೆಯಲ್ಲಿ ನಡೆದ ಗಲಾಟೆಯ ಪ್ರತಿಫಲ ಎಂದು ಜನ ಮಾತಾಡಲಾರಂಭಿಸಿದರು. ಆದರೆ ಭಟ್ಟರು ಪೊಲೀಸ್ ದೂರಿನಲ್ಲಿ “ನಾನು ಕುದುರೇಮುಖ ರಾಷ್ಟ್ರೀಯ ಉದ್ಯಾನವನದಿಂದ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಸರ್ಕಾರದ ಯೋಜನೆಯ ಪರ ಕೆಲಸ ಮಾಡುತ್ತಿದ್ದು, ಆ ಕೋಪದಿಂದ ನಕ್ಸಲರು ನನ್ನ ಮನೆಯ ಬೈಕ್ ಮತ್ತು ಕಾರುಗಳನ್ನು ಸುಟ್ಟು ಹಾಕಿದ್ದಾರೆ” ಎಂದು ಕೆಲ ನಕ್ಸಲರ ಹೆಸರುಗಳನ್ನು ನೀಡಿ ದೂರು ನೀಡಿದರು. ಪೊಲೀಸರು ಮಹಜರು ನಡೆಸಿದಾಗ “ಕಮಿಷನ್ ಆಸೆಗಾಗಿ ಜನರನ್ನು ಮೋಸದಿಂದ ಒಕ್ಕಲೆಬ್ಬಿಸುವ ರಾಮಚಂದ್ರ ಭಟ್ಟನ ಆಸ್ತಿಪಾಸ್ತಿ ದ್ವಂಸ ಮಾಡೋಣಾ” ಎಂದು ಬರೆದಿದ್ದ ನಕ್ಸಲರ ಕರಪತ್ರ ಸಿಕ್ಕಿತ್ತು. ಭಟ್ಟನ ಅಂಗಡಿಯ ಗೋಡೆಯಲ್ಲಿ “ವಿದೇಶಿ ಸಾಮ್ರಾಜ್ಯಶಾಹಿ ದೇಶಿ ದೊಡ್ಡ ಬಂಡವಾಳಶಾಹಿಗಳ ಲೂಟಿಬಕೋರರ ಹಿತ ಕಾಯುವ ಕುದರೇಮುಖ ರಾಷ್ಟ್ರೀಯ ಉದ್ಯಾನವನ ಯೋಜನೆ ಹಿಮ್ಮೆಟ್ಟಿಸೋಣಾ! ಮೋಸದಿಂದ ಜನರನ್ನು ಒಕ್ಕಲೆಬ್ಬಿಸಿ ಕಮಿಷನ್ ಪಡೆಯುತ್ತಿರುವ ಸ್ಥಳೀಯ ದಲ್ಲಾಳಿಗಳನ್ನು ಮಟ್ಟಹಾಕೋಣಾ – ಸಿಪಿಐ ಮಾವೋವಾದಿ ಎಂದು ಬಿಳಿ ಬಟ್ಟೆಯ ಬ್ಯಾನರ್ ಹಾಕಲಾಗಿತ್ತು.

ಪೊಲೀಸರು ಮತ್ತೆ ಆದಿವಾಸಿಗಳ ಮೇಲೆ ದಾಳಿ ಮಾಡಿ ವಿಚಾರಣೆಯ ನೆಪದಲ್ಲಿ ಆದಿವಾಸಿಗಳಿಗೆ ಹಿಂಸೆ ನೀಡಲಾಯಿತು.‌ ಪೊಲೀಸರು ಬಹಳ ದಿನಗಳ ಬಳಿಕ ಬೆಂಗಳೂರಿನ ರಮೇಶ ಎಂಬಾತನನ್ನು ನಕ್ಸಲ್ ಎಂದು ಬಂಧಿಸಿದರು.

ಈ ಕೇಸನ್ನು ವಹಿಸಿಕೊಳ್ಳುವಂತೆ ಜನಪರ ಹೋರಾಟಗಾರ ದಿನೇಶ್ ಹೆಗ್ಡೆ ಉಳೆಪಾಡಿಯವರನ್ನು ನಾನು ಕೇಳಿಕೊಂಡಿದ್ದೆ. “ನಕ್ಸಲ್ ಅಂತ ದೇಶದ್ರೋಹದ ಕೇಸ್ ಹಾಕಿದ್ದಾರೆ. ಕೇಸ್ ಮುಗಿಯೋವರೆಗಿನ ಸಂಪೂರ್ಣ ಫೀಸ್ ಹತ್ತು ಲಕ್ಷ ಆಗುತ್ತೆ” ಎಂದರು. ಅದು ಅವರ ಮಾಮೂಲಿ ಹಾಸ್ಯದ ಧಾಟಿ. ನಕ್ಸಲ್ ಆರೋಪದ ಮೇಲೆ ರಮೇಶ್ ಜೈಲಿನಲ್ಲಿದ್ದಾರೆ. ಕೋರ್ಟ್ ಖರ್ಚುಗಳನ್ನೆಲ್ಲಾ ತಾವೇ ಕೈಯಿಂದ ಹಾಕಿದ ದಿನೇಶ್ ಹೆಗ್ಡೆ ಉಳೆಪಾಡಿಯವರು ಕೇಸ್ ನಡೆಸಿದರು.

ಬರೋಬ್ಬರಿ 9 ವರ್ಷಗಳ ಕಾಲ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿಯವರು ಉಚಿತವಾಗಿ ಕೇಸ್ ನಡೆಸಿದರು. ಪೊಲೀಸರು ಹಾಕಿದ್ದ ಸಿ ರಿಪೋರ್ಟ್, ಜಾರ್ಚ್ ಶೀಟ್ ನಲ್ಲಿರುವ ತಪ್ಪುಗಳು, ಅಮಾಯಕರ ಬಂಧನ, ಒಕ್ಕಲೆಬ್ಬಿಸುವಿಕೆ, ಕಮಿಷನ್ ಗಾಗಿ ಆದಿವಾಸಿಗಳ ವಿರುದ್ಧ ಕಮಿಷನ್ ಧಂಧೆ… ಇದೆಲ್ಲವನ್ನು ಮುಂದಿಟ್ಟುಕೊಂಡು ವಾದ, ಪ್ರತಿವಾದ ನಡೆಯಿತು.

ಎಲ್ಲರೂ ಕಾಡಂಚಿನ ದಲಿತರ ಬಗೆಗಿನ ಸಿನೇಮಾ ಎಂಬ ಪೊಳ್ಳು ಭ್ರಮೆಯಲ್ಲಿ ಕಾಂತಾರ ಸಿನೇಮಾ ನಟರನ್ನು ಅಭಿನಂದಿಸುತ್ತಿರುವಾಗ, ಅಂದರೆ ದಿನಾಂಕ 10.10.2022 ರಂದು ಬೆಳ್ತಂಗಡಿಯ “ಕಾಂತಾರ”ದಲ್ಲಿ ಅನುಮಾನ, ಅವಮಾನ, ದೌರ್ಜನ್ಯಕ್ಕೆ ಒಳಗಾಗಿದ್ದ ಆದಿವಾಸಿಗಳ ಪರ ನ್ಯಾಯಾಲಯ ತೀರ್ಪು ನೀಡಿತ್ತು. ಭಟ್ಟರ ಮನೆಯ ಮುಂದಿನ ಕಾರು, ಬೈಕ್ ಗಳಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾದ ಆರೋಪಿಯನ್ನು ನಿನ್ನೆ ನ್ಯಾಯಾಲಯ ದೋಷಮುಕ್ತಗೊಳಿಸಿದೆ.

Donate Janashakthi Media

Leave a Reply

Your email address will not be published. Required fields are marked *