ನವದೆಹಲಿ: ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಅವರಿಗೆ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ವಿಧಿಸಲಾಗಿದ್ದ 5 ತಿಂಗಳ ಸಾದಾ ಜೈಲು ಶಿಕ್ಷೆಯನ್ನು ನ್ಯಾಯಾಲಯ ಸೋಮವಾರ ಅಮಾನತುಗೊಳಿಸಿದೆ. ಮಾನನಷ್ಟ
ಪಾಟ್ಕರ್ ಅವರು ಸಲ್ಲಿಸಿದ ಮೇಲ್ಮನವಿಯನ್ನುವಿಚಾರಣೆ ನಡೆಸಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಾಘವ್ ಶರ್ಮಾ ಶಿಕ್ಷೆಯನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಅಲ್ಲದೇ ಎದುರಾಳಿಗೆ (ವಿ.ಕೆ.ಸಕ್ಸೇನಾ) ನೋಟಿಸ್ ನೀಡಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯ ದಿನಾಂಕದ ಮೊದಲು (ಸೆಪ್ಟೆಂಬರ್ 4) ನೋಟಿಸ್‌ಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ ಎಂದು ಸಕ್ಸೇನಾ ಪರ ವಕೀಲ ಗಜಿಂದರ್ ಕುಮಾರ್ ಹೇಳಿದ್ದಾರೆ.
₹25 ಸಾವಿರ ಶ್ಯೂರಿಟಿ ಬಾಂಡ್ ಇಡಲು ಸೂಚಿಸಿ, ಮೇಧಾ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಇದನ್ನು ಓದಿ : ಬಿಜೆಪಿಗರು ಸುಳ್ಳನ್ನ 100 ಸಾರಿ ಹೇಳಿ ಸತ್ಯ ಮಾಡಬೇಕು ಎಂಬ ‘ಹಿಟ್ಲರ್’ ವಂಶಸ್ಥರು: ಸಿದ್ದರಾಮಯ್ಯ ವಾಗ್ದಾಳಿ
ದೆಹಲಿಯ ಈಗಿನ ಲೆಫ್ಟಿನೆಂಟ್ ಗವರ್ನರ್ ವಿ. ಕೆ. ಸಕ್ಸೇನಾ ಅವರು 23 ವರ್ಷಗಳ ಹಿಂದೆ ಮೇಧಾ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 1 ರಂದು ದೆಹಲಿ ನ್ಯಾಯಾಲಯ ಮೇಧಾ ಅವರಿಗೆ 5 ತಿಂಗಳು ಜೈಲು ಶಿಕ್ಷೆ ವಿಧಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ರಾಘವ್ ಶರ್ಮಾ ಸಕ್ಸೇನಾ ಅವರ ಘನತೆಗೆ ಧಕ್ಕೆ ತಂದಿರುವ ಕಾರಣ ₹10 ಲಕ್ಷ ದಂಡವನ್ನೂ ವಿಧಿಸಿದ್ದರು. ಇದೇ ವೇಳೆ ಆದೇಶವನ್ನು 30 ದಿನಗಳ ಕಾಲ ಅಮಾನತಿನಲ್ಲಿರಿಸಿ, ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ಮೇಧಾ ಅವರ ವಯಸ್ಸು ಹಾಗೂ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಒಂದು ಅಥವಾ 2 ವರ್ಷಗಳ ದೀರ್ಘ ಅವಧಿಯ ಶಿಕ್ಷೆಯನ್ನು ನೀಡಲಾಗುತ್ತಿಲ್ಲ ಎಂದು ನ್ಯಾಯಾಲಯ ಹೇಳಿತ್ತು.
ಮೇಧಾ ಅವರು ತಮ್ಮ ವಿರುದ್ಧ ಹೊರಡಿಸಿದ ಪತ್ರಿಕಾ ಪ್ರಕಟಣೆಯೊಂದು ಮಾನಹಾನಿಕರವಾಗಿದೆ ಎಂದು ದೂರಿ ಸಕ್ಸೇನಾ ಅವರು 2001ರಲ್ಲಿ ದೂರು ದಾಖಲಿಸಿದ್ದರು. ಆಗ ಸಕ್ಸೇನಾ ಅವರು ನ್ಯಾಷನಲ್ ಕೌನ್ಸಿಲ್ ಆಫ್ ಸಿವಿಲ್ ಲಿಬರ್ಟೀಸ್‌ನ ಅಧ್ಯಕ್ಷರಾಗಿದ್ದರು.
ಮೇಧಾ ಅವರು ಸಕ್ಸೇನಾ ಅವರನ್ನು ‘ಹೇಡಿ, ದೇಶಭಕ್ತ ಅಲ್ಲ’ ಎಂದು ಕರೆದಿದ್ದು ಹಾಗೂ ಅವರು ಹವಾಲಾ ವಹಿವಾಟಿನಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದು ಮಾನಹಾನಿಕರವಾಗಿತ್ತು ಎಂದು ಕೋರ್ಟ್ ಮೇ 24ರಂದು ಹೇಳಿತ್ತು.
ಇದನ್ನು ನೋಡಿ : ಚೇಳೂರು : ಹಾಸ್ಟೆಲ್ ಸಂಖ್ಯೆ ಹೆಚ್ಚಿಸಿ – ವಿದ್ಯಾರ್ಥಿಗಳಿಂದ ಪತ್ರ ಚಳುವಳಿJanashakthi Media