ಕೊಡಗು : ಅತ್ಯಂತ ಕಿರಿಯ ವಯಸ್ಸಿನಲ್ಲಿ ಚುನಾವಣೆಗೆ ಸ್ಪರ್ಧಿಸಿರುವವರಿದ್ದಾರೆ. ತುಂಬಾ ವಯಸ್ಸಿನಲ್ಲೂ ಚುನಾವಣೆಗೆ ಸ್ಪರ್ಧಿಸುವವರನ್ನು ನೋಡಿರುತ್ತೇವೆ. ಇಲ್ಲೊಬ್ಬ ಅಭ್ಯರ್ಥಿ ಜೈಲಿನಲ್ಲಿದ್ದುಕೊಂಡು ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಹೌದು ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ. ಪಿ ಬೋಪಣ್ಣ ಅವರು ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ್ದಾರೆ.
ವ್ಯಕ್ತಿಯೊಬ್ಬರು ಚುನಾವಣೆಗೆ ಸ್ಪರ್ಧಿಸಲು ಜೈಲಿನಿಂದಲೇ ನಾಮಪತ್ರ ಸಲ್ಲಿಸಿರುವುದು ಕೊಡಗಿನ ರಾಜಕೀಯ ಇತಿಹಾಸದಲ್ಲೇ ಮೊದಲ ಘಟನೆಯಾಗಿದೆ. ಎರಡು ಅವಧಿಗೆ ಅಂದರೆ ಹತ್ತು ವರ್ಷಗಳ ಕಾಲ ಪಾಲಿಬೆಟ್ಟ ಗ್ರಾಮ ಪಂಚಾಯತಿ ಅದ್ಯಕ್ಷರಾಗಿ ಬೋಪಣ್ಣ ಅವರು ಸೇವೆ ಸಲ್ಲಿಸಿದ್ರು. ಅದರೆ ಈ ಬಾರಿ ಚುನಾವಣೆಗೆ ನಿಲುವ ಎಲ್ಲಾ ತಯಾರಿ ನಡೆಸುತ್ತಿರುವಾಗಲೇ ಜಾತಿ ನಿಂದನೆ ಮತ್ತು ದೌರ್ಜನ್ಯ ಪ್ರಕರಣದಡಿಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ರು. ಆದರೂ ಪಂಚಾಯತಿ ಚುನಾವಣೆಗೆ ನಿಲ್ಲಬೇಕ್ಕೆಂದು ಪ್ರಯತ್ನಿಸಿ, ಇದೀಗ ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ್ದಾರೆ. ಪಾಲಿಬೆಟ್ಟ ಗ್ರಾ.ಪಂ ಕ್ಷೇತ್ರದಲ್ಲಿ ಡಿಜಿಟಲ್ ಗ್ರಂಥಾಲಯ, ಸಂಪೂರ್ಣ ಸ್ವಚ್ಚತೆ ಮೂಲಕ ಇವರ ಆಡಳಿತ ಅವಧಿಯಲ್ಲಿ ಗ್ರಾಮಗಳು ಅಭಿವೃದ್ದಿ ಕಂಡಿದ್ದವು, ಇನ್ನಷ್ಟು ಅಭಿವೃದ್ದಿ ಮಾಡುವ ಗುರಿಯೊಂದಿಗೆ ಈ ಚುನಾವಣೆಗೆ ಅವರು ಸ್ಪರ್ಧಿಸುತ್ತಿದ್ದಾರೆ ಎಂದು ಅವರ ಸೂಚಕರೊಬ್ಬರು ತಿಳಿಸಿದ್ದಾರೆ.
ಜೈಲಿನಲ್ಲಿ ಇದ್ದ ಕಾರಣ ನಾಮಪತ್ರ ಸಲ್ಲಿಸುವುದು ಕಷ್ಟವಾಗಿತ್ತು. ಅದಕ್ಕಾಗಿ ಜಾಮೀನು ಪಡೆಯಲು ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕವನ್ ಅವರ ಮೂಲಕ ಜಾಮೀನು ಪಡೆಯಲು ಅಂತಿಮ ಕ್ಷಣದವರೆಗೂ ಪ್ರಯತ್ನ ನಡೆಸಿದರು. ಅದು ಸಾಧ್ಯವಾಗದಿದ್ದಾಗ ನ್ಯಾಯಾಲಯದ ಒಪ್ಪಿಗೆ ಪಡೆದು ಜೈಲಿನಿಂದಲ್ಲೆ ಬೋಪಣ್ಣ ಅವರು ಸೂಚಕರ ಸಹಾಯದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಜಿಲ್ಲಾ ಪಂಚಾಯತಿ ಸದಸ್ಯ ಧರ್ಮಜ ಉತ್ತಪ್ಪ ನಾಮ ಪತ್ರ ಸಲ್ಲಿಕೆ ಅಗತ್ಯವಾದ ಎಲ್ಲಾ ವ್ಯವಸ್ಥೆ ಮಾಡಿದ್ರು. ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ಗ್ರಾಮ ಪಂಚಾಯತಿ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿರುವ ಬೋಪಣ್ಣ ಅವರು, ರಾಷ್ಟ್ರ ಮಟ್ಟದಲ್ಲಿ ಪಂಚಾಯತಿಗೆ ಪ್ರಶಸ್ತಿ ಬರಲು ಶ್ರಮಿಸಿದ್ದರು. ಅವರು ಮಾಡಿರುವ ಕೆಲಸದಿಂದ ಈ ಬಾರಿಯೂ ಅವರು ಜಯ ಶೀಲರಾಗುತ್ತಾರೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ.