ಬೆಂಗಳೂರು : ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು, ಸದಸ್ಯರು, ಕಾಂಗ್ರೆಸ್ ಕಚೇರಿಗೆ ಹೋಗಿ ಸಭೆಯಲ್ಲಿ ಭಾಗವಹಿಸಿರುವುದು ಸ್ವಾಯತ್ತತೆಗೆ ಭಂಗ ತಂದಿದೆ ಎಂದು ಜಾಗೃತ ನಾಗರಿಕರು ಕರ್ನಾಟಕ ಕಳವಳ ವ್ಯಕ್ತಪಡಿಸಿದೆ.
ಇತ್ತೀಚೆಗೆ ರಾಜ್ಯದಲ್ಲಿ ನೂತನವಾಗಿ ನೇಮಕಗೊಂಡ ನಿಗಮ ಮಂಡಳಿಗಳ ಅಧ್ಯಕ್ಷರುಗಳ ಸಭೆಯನ್ನು ಕಾಂಗ್ರೆಸ್ ಅಧ್ಯಕ್ಷರು ಭಾರತ್ ಜೋಡೋ ಭವನದಲ್ಲಿ ಕರೆದಿದ್ದರು ಮತ್ತು ಅಲ್ಲಿ ನೂತನ ಅಕಾಡೆಮಿಗಳ ಕೆಲವು ಅಧ್ಯಕ್ಷರೂ ಪಾಲ್ಗೊಂಡಿದ್ದರು ಎನ್ನುವ ಸಂಗತಿ ತೀವ್ರ ಚರ್ಚೆಗೆ ಒಳಗಾಗಿದೆ. ಅಕಾಡೆಮಿ, ಪ್ರಾಧಿಕಾರಗಳಿಗೆ ನೇಮಕವನ್ನು ಮಾಡುವುದು ಸರಕಾರವೇ ಆಗಿದ್ದರೂ ಅವುಗಳ ಸರಕಾರದ ಸಹಕಾರದೊಂದಿಗೆ ಸ್ವಾಯತ್ತವಾಗಿ ಕಾರ್ಯ ನಿರ್ವಹಣೆ ಮಾಡುವುದು ಅವರ ಅಧಿಕಾರ ಮತ್ತು ಸಾಂಸ್ಕೃತಿಕ ಅಗತ್ಯ ಕೂಡಾ ಆಗಿದೆ. ಇದುವರೆಗೂ ಹಾಗೆಯೇ ನಡೆದುಕೊಂಡು ಬಂದಿದೆ ಎಂದು ಸಾಹಿತಿಗಳು, ಕಲಾವಿದರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಕೃಪಾಕಟಾಕ್ಷದಲ್ಲಿ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು, ಸದಸ್ಯರು?
ಅದರ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿರುವಾಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಮತ್ತು ರಾಜ್ಯದ ಉಪ ಮುಖ್ಯಮಂತ್ರಿಗಳೂ ಆದ ಡಿ.ಕೆ.ಶಿವಕುಮಾರ್ ರವರು ʼಸಾಹಿತಿಗಳನ್ನು ಕರೆಸಿದ್ದೇ ನಾನು:ತಪ್ಪೇನುʼ ಎಂಬುದಾಗಿ ಸಮರ್ಥನೆ ಮಾಡಿಕೊಂಡಿದ್ದಲ್ಲದೇ ಅದೇ ಭರದಲ್ಲಿ ʼಅಕಾಡೆಮಿಗಳು ಸ್ವಾಯತ್ತ ಸಂಸ್ಥೆಗಳಲ್ಲʼ ಎಂದೂ ಸಾರಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಬಾಯಲ್ಲಿ ಈ ಮಾತು ಬಂದಿದೆ ಎಂದರೆ ಅದು ಅವರ ಪಕ್ಷದ ನಿಲುವೂ ಕೂಡಾ ಎಂದು ಭಾವಿಸಬೇಕಾಗುತ್ತದೆ. ಈ ನಿಲುವು ಸರಕಾರದ್ದಿರಲಿ, ಕಾಂಗ್ರೆಸ್ ಪಕ್ಷದ್ದಿರಲಿ, ಸಾಂಸ್ಕೃತಿಕ ಕ್ಷೇತ್ರದ ಸ್ವಾಯತ್ತ ಸ್ವಾತಂತ್ರಕ್ಕೆ ಭಂಗ ತರುವ ನಿಲುವಾಗಿರುವುದರಿಂದ ಪ್ರಜಾಪ್ರಭುತ್ವದ ಮೌಲ್ಯಗಳನ್ನು, ಸಾಂಸ್ಕೃತಿಕ ಸ್ವಾಯತ್ತ ಸ್ವರೂಪವನ್ನು ಗೌರವಿಸುವ ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ.ಸಾಂಸ್ಕೃತಿಕ ಕ್ಷೇತ್ರ ತನ್ನ ಅಬಾಧಿತ ಗುಣದಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಪ್ರಜಾಪ್ರಭುತ್ವದ ಮೌಲ್ಯಗಳು ಸಂರಕ್ಷಿತವಾಗುತ್ತವೆ ಎಂದಿದ್ದಾರೆ.
ಈ ನೆಲೆಯಲ್ಲಿಯೇ ʼಕವಿಗಳು ಅನಧಿಕೃತ ಶಾಸಕರುʼ ಎಂಬ ಲೋಕೋಕ್ತಿ ಜಗತ್ಪ್ರಸಿದ್ಧವಾಗಿದೆ. ಇಂಥಲ್ಲಿ ಸಾಹಿತಿ, ಕಲಾವಿದರು,ಸಂಸ್ಕೃತಿ ಚಿಂತಕರನ್ನು ಯಾವುದೇ ಪಕ್ಷದ ಅಡಿಯಾಳುಗಳಂತೆ ಕಾಣುವುದು ಯಾವುದೇ ಕಾರಣಕ್ಕೂ ಸರಿಯಾದ ನಡವಳಿಕೆಯಲ್ಲ. ಇಂಥಹ ಸಾಂಸ್ಕೃತಿಕ ಜೀತಗಾರಿಕೆಗೆ ಸಾಂಸ್ಕೃತಿಕ ಕ್ಷೇತ್ರದ ಸ್ವಾಯತ್ತತೆಯ ಘನತೆ ಗೌರವಗಳ ಬಗ್ಗೆ ಅರಿವಿರುವ ಯಾವ ವ್ಯಕ್ತಿಯೂ ಕೆಲಸ ಮಾಡಲು ಒಪ್ಪುವುದಿಲ್ಲ. ಇದು ವ್ಯಕ್ತಿಯ ಸ್ವಾಭಿಮಾನದ ಪ್ರಶ್ನೆಯಷ್ಟೇ ಮುಖ್ಯವಾಗಿ, ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದ ಘನತೆ ಗೌರವಗಳನ್ನು ಒಳಗೊಂಡಿದೆ. ಅಕಾಡೆಮಿ, ಪ್ರಾಧಿಕಾರ, ಸಾಹಿತ್ಯ ಪರಿಷತ್ತುಗಳ ಸ್ವಾಯತ್ತತೆಯನ್ನು ನಿರಾಕರಿಸುವ ಹಕ್ಕು ಸರಕಾರಕ್ಕಿಲ್ಲ, ಅವುಗಳ ಕಾರ್ಯನಿರ್ವಹಣೆಗೆ ಅಗತ್ಯವಾದ ಧನ ಸಹಾಯ ಮಾಡುವುದು ಸರಕಾರದ ಕರ್ತವ್ಯ. ಇದಕ್ಕಾಗಿ ಅವರ ಹಂಗಿಗೆ ಒಳಗಾಗಬೇಕಿಲ್ಲ. ಆದ್ದರಿಂದ ಮುಖ್ಯಮಂತ್ರಿಗಳು ಪಕ್ಷದ ಆಡಳಿತಕ್ಕೆ ಒಳಪಡದ,ನೇರವಾಗಿ ಕರ್ನಾಟಕ ಸರಕಾರದ ಆಡಳಿತಕ್ಕೆ ಸಂಬಂಧಿಸಿದ ಈ ಸಾಂಸ್ಕೃತಿಕ ಕ್ಷೇತ್ರಗಳ ವಿವಾದದವನ್ನು ಕೊನೆಗೊಳಿಸಲು ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಸ್ವಾಯತ್ತ ಸಂಸ್ಥೆಗಳ ಘನತೆ ಗೌರವಕ್ಕೆ ಕುಂದುಂಟಾಗದಂತೆ ನಿಯುಕ್ತಗೊಂಡ ಸದಸ್ಯರು ಕಾರ್ಯನಿರ್ವಹಿಸುವುದು ತಮ್ಮ ಆದ್ಯ ಕರ್ತವ್ಯ ಎಂದು ನಿಯುಕ್ತರಾದ ಎಲ್ಲರೂ ಎಚ್ಚರವಹಿಸಬೇಕು ಎಂದು ಹಿರಿಯ ಸಾಹಿತಿ, ಪ್ರೊ.ಕೆ.ಮರುಳಸಿದ್ದಪ್ಪ,ಡಾ.ಜಿ.ರಾಮಕೃಷ್ಣ,ಪ್ರೊ.ಎಸ್. ಜಿ.ಸಿದ್ದರಾಮಯ್ಯ, ಡಾ.ವಿಜಯಾ,ವಿಮಲಾ.ಕೆ.ಎಸ್, ಬಿ.ಶ್ರೀಪಾದ ಭಟ್, ಟಿ.ಸುರೇಂದ್ರ ರಾವ್, ಡಾ.ಬಂಜಗೆರೆ ಜಯಪ್ರಕಾಶ್, ಡಾ.ಮೀನಾಕ್ಷಿ ಬಾಳಿ, ಡಾ.ಎನ್.ಗಾಯತ್ರಿ, ಎನ್.ಕೆ.ವಸಂತ ರಾಜ್, ಬಿ.ಎನ್.ಯೋಗಾನಂದ, ವಿ.ಪಿ.ನಿರಂಜನಾರಾಧ್ಯ ಜಂಟಿ ಹೇಳಿಕೆ ನೀಡಿದ್ದಾರೆ.