ಜಗದೀಶ್ ಸೂರ‍್ಯ, ಮೈಸೂರು
ಈಗ ವಿಶ್ವದೆಲ್ಲೆಡೆ ಫುಟ್ಬಾಲ್ ಗುಂಗು ಆವರಿಸಿದೆ. ಅದು ಪುಟ್ಟ ರಾಷ್ಟ್ರದಿಂದ ಹಿಡಿದು ದೊಡ್ಡ ದೊಡ್ಡ ರಾಷ್ಟ್ರದವರೆಗೂ ವ್ಯಾಪಿಸಿದೆ. ಅಂತರ್ ರಾಷ್ಟ್ರೀಯ ಫುಟ್ಬಾಲ್ ಫೆಡರೇಷನ್(ಫಿಫಾ) ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಸಂಘಟಿಸುವ ಜಾಗತಿಕ ಫುಟ್ಬಾಲ್ ಹಬ್ಬ. ಈ ವರ್ಷ ಮಧ್ಯ ಪ್ರಾಚ್ಯದ ಕೊಲ್ಲಿ ರಾಷ್ಟ ಕತಾರ್‌ನಲ್ಲಿ ಇದೇ ನವಂಬರ್ 21ರಿಂದ 22ನೇ ವಿಶ್ವಕಪ್ ಪಂದ್ಯಾವಳಿಗಳು ಆರಂಭವಾಗಿದೆ. 1930ರಲ್ಲಿ ಮೊಟ್ಟ ಮೊದಲ ಬಾರಿಗೆ ಈ ವಿಶ್ವಕಪ್ ಪಂದ್ಯಾವಳಿ ಆಯೋಜನೆಯಾಗಿತ್ತು. ನಂತರ 1940 ಮತ್ತು 1944ರಲ್ಲಿ ಮಹಾಯುದ್ಧದ ಕಾರಣಕ್ಕೆ ಈ ಪಂದ್ಯಾವಳಿ ನಡೆದಿರಲಿಲ್ಲ. ಕ್ರಿಕೆಟಿಗಿಂತಲೂ ಫುಟ್ಬಾಲ್ ಜಗತ್ತಿನಾದ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆಟ. ನೇರವಾಗಿ, ದೂರದರ್ಶನದ ಮೂಲಕ ಈ ವಿಶ್ವಕಪ್ ಅನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ.
ವಿಶ್ವದ 32 ಬಲಿಷ್ಟ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ಆರಂಭಿಸಿವೆ. ಸ್ಟಾರ್ ಆಟಗಾರರಾದ ಅರ್ಜೆಂಟಿನಾದ ಲಿಯೋನಲ್ ಮೆಸ್ಸಿ, ಬ್ರೆಜಿಲ್‌ನ ನೈಮರ್ ಜುನಿಯರ್, ವಿನಿಸಿಯಸ್ ಜೂನಿಯರ್, ಪೊರ್ಚುಗಲ್‌ನ ಕ್ರಿಸ್ಟಿಯಾನೋ ರೋನಾಲ್ಡೊ, ಫ್ರಾನ್ಸ್ ನ ಕೈಲಿಯನ್ ಎಂಬಾಪೆ, ಇಂಗ್ಲೆಂಡಿನ ಹ್ಯಾರಿ ಕೇನ್, ಸಾಕಾ, ಕ್ರೊವೇಶಿಯಾದ ಲ್ಯೂಕ್ ಮೊಡ್ರಕ್ ಇವರ ಆಟವನ್ನು ನೋಡಲು ಜನ ಗಡಿಗಳನ್ನು ಮೀರಿ ಹಾತೊರೆಯುತ್ತಿದ್ದಾರೆ. ಫಿಫಾದ ಇತಿಹಾಸದಲ್ಲೆ ಅತ್ಯಂತ ದುಬಾರಿ ವಿಶ್ವಕಪ್ ಪಂದ್ಯಾವಳಿ ಇದಾಗಿದೆ. ಈ ಪಂದ್ಯಾವಳಿಯನ್ನು ಆಯೋಜಿಸಲು ಕರ್ನಾಟಕದ ಅರ್ಧದಷ್ಟಿರುವ ಶ್ರೀಮಂತ ದೇಶ ಕತಾರ್ ಸುಮಾರು 20 ಲಕ್ಷ ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಿ ಅದ್ದೂರಿಯಾಗಿ ನಡೆಸುತ್ತಿದೆ. ಈ ಹಿಂದೆ ರಷ್ಯಾ ಸುಮಾರು 1.4 ಲಕ್ಷ ಕೋಟಿ ಹಣವನ್ನು ಖರ್ಚು ಮಾಡಿತ್ತು. ಈ ಪಂದ್ಯಾವಳಿಗಾಗಿಯೇ ಕತಾರ್ 8 ಹೊಸ ಮೈದಾನಗಳನ್ನು ಸಿದ್ಧಪಡಿಸಿದೆ. ಪಂದ್ಯಾವಳಿಯ ನಂತರ ಈ ಮೈದಾನಗಳನ್ನು ಮಾಲ್, ಗ್ರಂಥಾಲಯ, ವಸ್ತು ಸಂಗ್ರಹಾಲಯ ಮಾಡಲಾಗುವುದೆಂದು ಹಾಗೂ ಮೈದಾನದಲ್ಲಿರುವ ಛೇರು, ಕಂಟೇನರ್ ಮುಂತಾದ ವಸ್ತುಗಳನ್ನು ಆಫ್ರಿಕಾದ ಬಡ ರಾಷ್ಟ್ರಗಳಿಗೆ ನೀಡುವುದಾಗಿ ಕತಾರ್ ಹೇಳಿಕೊಂಡಿದೆ.
32 ರಾಷ್ಟ್ರಗಳನ್ನು ತಲಾ 4 ತಂಡಗಳ 8 ಗುಂಪುಗಳಾಗಿ ವಿಂಗಡಿಸಿ ಆಡಿಸಲಾಗುತ್ತಿದೆ. ಈಗಾಗಲೇ ಮೊದಲ ಸುತ್ತಿನ ಪಂದ್ಯಗಳು ಹಾಗೂ 16ರ ಘಟ್ಟದ ಆಟಗಳು ಮುಗಿದಿವೆ. ನಿರೀಕ್ಷೆಯಂತೆ ಈ ಬಾರಿಯೂ ಕೂಡ ಸಾಕಷ್ಟು ಅಚ್ಚರಿಯ ಫಲಿತಾಂಶಗಳು ಬಂದಿವೆ. 3ನೇ ಶ್ರೇಯಾಂಕದ ಅರ್ಜೆಂಟಿನಾ ತಂಡ 52ನೇ ಶ್ರೇಯಾಂಕದ ಸೌದಿ ಅರೇಬಿಯಾ ತಂಡದ ಎದುರು ಸೋತಿದೆ. ಆಸ್ಟ್ರೇಲಿಯಾ ವಿರುದ್ಧ ಡೆನ್ಮಾರ್ಕ್, ಟ್ಯುನೇಶಿಯಾ ವಿರುದ್ಧ ಫ್ರಾನ್ಸ್, ಸ್ಪೇನ್, ಜರ್ಮನಿ ವಿರುದ್ಧ ಜಪಾನ್, ಬೆಲ್ಜಿಯಂ ವಿರುದ್ಧ ಮೊರಾಕ್ಕೊ, ಪೋರ್ಚುಗಲ್ ವಿರುದ್ಧ ದಕ್ಷಿಣ ಕೋರಿಯಾ ತಂಡಗಳು ಸೋತಿವೆ. ಸೆನೆಗಲ್, ಮೊರಾಕ್ಕೊ, ಘಾನ ತಂಡಗಳು ಬಲಿಷ್ಠ ತಂಡಗಳ ಜಯದ ಓಟಕ್ಕೆ ಬ್ರೇಕ್ ಹಾಕಿವೆ. ಇದರಿಂದಾಗಿ ಅಗ್ರ ಶ್ರೇಯಾಂಕಿತ ಹಿಂದಿನ ಚಾಂಪಿಯನ್ ತಂಡಗಳು ಈ ಬಾರಿ ಗ್ರೂಪ್ ಹಂತದಲ್ಲೇ ಮುಗ್ಗರಿಸಿ ಪಂದ್ಯಾವಳಿಯಿಂದಲೇ ಹೊರಬಿದ್ದಿವೆ. ಅಲ್ಲದೆ ಅತ್ಯಂತ ಬಡ ಹಾಗೂ ಕಡಿಮೆ ಜನಸಂಖ್ಯೆಯಿರುವ ರಾಷ್ಟ್ರಗಳು ಬಲಿಷ್ಠ ತಂಡಗಳನ್ನು ಸೋಲಿಸಿ ಹುಬ್ಬೇರುವಂತೆ ಮಾಡಿವೆ.
ಯೂರೋಪ್, ಆಫ್ರಿಕಾ, ದಕ್ಷಿಣ ಅಮೇರಿಕಾಗಳಲ್ಲಿ ಫುಟ್ಬಾಲ್ ಮೇಲಿನ ಪ್ರೀತಿ ಅಂತಿಂತದ್ದಲ್ಲ. ತಮ್ಮ ತಂಡ ಗೆದ್ದರೆ ಸಂಭ್ರಮಿಸಿ ಆಟಗಾರರನ್ನು ಆರಾಧಿಸುತ್ತಾರೆ, ಸೋತರೆ ಹಿಂಸೆಗೂ ಇಳಿದ ಎಷ್ಟೋ ಘಟನೆಗಳು ನಡೆದು ಹೋಗಿದೆ. 1994ರಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ಯುಎಸ್‌ಎ ವಿರುದ್ದದ ಪಂದ್ಯದಲ್ಲಿ ಕೊಲಂಬಿಯಾದ ಖ್ಯಾತ ಆಟಗಾರ ಡಿಫೆಂಡರ್ ಆ್ಯಂಡ್ರೂ ಎಸ್ಕೋಬಾರ್ ಯುಎಸ್‌ಎ ಆಟಗಾರ ಒದ್ದ ಚೆಂಡನ್ನು ತಡೆಯಲು ಹೋಗಿ ತಮ್ಮ ಗೋಲ್ ಪೆಟ್ಟಿಗೆ ಗೋಲನ್ನು ಹೊಡೆದ ಕಾರಣಕ್ಕೆ ಎಸ್ಕೋಬಾರ್ ತನ್ನ ತಾಯ್ನಾಡಿಗೆ ಮರಳುವಾಗ ವಿಮಾನ ನಿಲ್ದಾಣದಲ್ಲೇ ಗುಂಡು ಹೊಡೆದು ಕೊಲ್ಲಲಾಯಿತು. ಸೌದಿ ಅರೇಬಿಯಾ ತಂಡ ಬಲಿಷ್ಟ ಅರ್ಜೆಂಟಿನಾ ತಂಡವನ್ನು ಸೋಲಿಸಿದ್ದಕ್ಕೆ ಅಂದು ರಾಷ್ಟ್ರಾದ್ಯಂತ ರಜೆ ಘೋಷಣೆ ಮಾಡಿ ಇಡೀ ರಾಷ್ಟ್ರವೇ ಸಂಭ್ರಮದಲ್ಲಿ ಮುಳುಗಿತ್ತು. ಟ್ಯುನೇಶಿಯಾ ತಂಡ ಪೋರ್ಚುಗಲ್ ತಂಡವನ್ನು ಸೋಲಿಸಿದ್ದಕ್ಕೆ ಜನ ರಾತ್ರಿ ಇಡೀ ಟ್ಯುನೇಶಿಯಾದ್ಯಂತ ಸಂಭ್ರಮಾಚರಣೆ ನಡೆಸಿದ್ದಾರೆ.
ತಮ್ಮ ಕೊನೆಯ ವಿಶ್ವಕಪ್ ಪಂದ್ಯಾವಳಿಯನ್ನು ಆಡುತ್ತಿರುವ ಲಿಯೋನಲ್ ಮೆಸ್ಸಿ, ಕ್ರಿಸ್ಟಿಯಾನೋ ರೋನಾಲ್ಡೊ ಅವರ ಹೊಸ ಹೊಸ ದಾಖಲೆಗಳು ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯನ್ನು ಶ್ರೀಮಂತಗೊಳಿಸಿದೆ. ಬಹಳ ಬೇಡಿಕೆಯ ಆಟಗಾರ ಲಿಯೋನಲ್ ಮೆಸ್ಸಿ ಈ ಪಂದ್ಯಾವಳಿಗಾಗಿ ತನ್ನ ಎಡಗಾಲಿನ ತೊಡೆಗೆ 7 ಸಾವಿರ ಕೋಟಿ ವಿಮೆ ಮಾಡಿಸಿದ್ದು ಭಾರೀ ಸುದ್ದಿಯಾಗಿದೆ. ನವೆಂಬರ್ 27ರಂದು ನಡೆದ ಅರ್ಜೆಂಟಿನಾ ಮೆಕ್ಸಿಕೊ ನಡುವಿನ ಪಂದ್ಯವನ್ನು ದಾಖಲೆಯ 86 ಸಾವಿರ ಜನ ನೇರವಾಗಿ ಕ್ರೀಡಾಂಗಣದಲ್ಲಿ ವೀಕ್ಷಿಸಿದ್ದಾರೆ. ಬಲಿಷ್ಟ ತಂಡಗಳು ಈಗಾಗಲೇ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿದೆ. ಡಿಸೆಂಬರ್ 9 ರಿಂದ ಕ್ವಾರ್ಟರ್ ಪಂದ್ಯಗಳು ಆರಂಭವಾಗಿದ್ದು ಪಂದ್ಯಗಳು ರೋಚಕವಾಗಿರುವುದರಲ್ಲಿ ಅನುಮಾನವಿಲ್ಲ.
ಈವರೆಗೆ ವಿಶ್ವಕಪ್ ಗೆದ್ದ ತಂಡಗಳು
ಈವರೆಗೆ 21 ವಿಶ್ವಕಪ್ ಪಂದ್ಯಾವಳಿಗಳು ನಡೆದಿದ್ದು ಬ್ರೇಜಿಲ್ 5 ಬಾರಿ, ಇಟಲಿ 4 ಬಾರಿ, ಅರ್ಜೇಂಟಿನಾ 2 ಬಾರಿ, ಜರ್ಮನಿ 4 ಬಾರಿ, ಫ್ರಾನ್ಸ್ 2 ಬಾರಿ, ಸ್ಪೇನ್ 1 ಬಾರಿ, ಉರುಗ್ವೆ 2 ಬಾರಿ, ಇಂಗ್ಲೆಂಡ್ 1 ಬಾರಿ ವಿಶ್ವಕಪ್ ಅನ್ನು ಗೆದ್ದಿವೆ.
ಬಹುಮಾನದ ಮೊತ್ತ
ಈ ವಿಶ್ವಕಪ್ ಪಂದ್ಯಾವಳಿಯಲ್ಲಿ ಕಪ್ ಗೆದ್ದ ತಂಡಕ್ಕೆ ಚಿನ್ನ ಲೇಪಿತ ಟ್ರೋಫಿಯೊಂದಿಗೆ 42 ಮಿಲಿಯನ್ (ನಾಲ್ಕು ಕೋಟಿ ಇಪ್ಪತ್ತು ಲಕ್ಷ) ಡಾಲರ್ ಬಹುಮಾನ, 2ನೇ ಸ್ಥಾನ ಪಡೆದ ತಂಡಕ್ಕೆ 30 ಮಿಲಿಯನ್ ಡಾಲರ್ ಬಹುಮಾನ, 3ನೇ ಸ್ಥಾನ ಪಡೆದ ತಂಡಕ್ಕೆ 27 ಮಿಲಿಯನ್ ಡಾಲರ್, 4ನೇ ಸ್ಥಾನ ಪಡೆದ ತಂಡಕ್ಕೆ 25 ಮಿಲಿಯನ್ ಡಾಲರ್, ಕ್ವಾರ್ಟರ್ ಫೈನಲ್‌ನಲ್ಲಿ ಸೋತ ತಂಡಕ್ಕೆ ತಲಾ 17 ಮಿಲಿಯನ್ ಡಾಲರ್, ಗ್ರೂಪ್ 16ರಲ್ಲಿ ಆಡಿ ಸೋತ ತಂಡಕ್ಕೆ ತಲಾ 13 ಮಿಲಿಯನ್ ಡಾಲರ್, ಗ್ರೂಪ್ ಹಂತದಿಂದ ನಿರ್ಗಮಿಸಿದ ತಂಡಕ್ಕೆ 9 ಮಿಲಿಯನ್ ಡಾಲರ್, ಹಾಗೂ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡಿದ ಪ್ರತಿ ತಂಡಕ್ಕೆ 1.5 ಮಿಲಿಯನ್ ಡಾಲರ್ ಸೇರಿ ಒಟ್ಟು 440 ಮಿಲಿಯನ್ ಡಾಲರ್ ಮೊತ್ತದ ಹಣವನ್ನು ಬಹುಮಾನವಾಗಿ ನೀಡಲಾಗುತ್ತದೆ ಹಾಗೂ ಇದರ ಜೊತೆಗೆ ಅತಿ ಹೆಚ್ಚು ಗೋಲು ಹೊಡೆದ ಆಟಗಾರನಿಗೆ ಚಿನ್ನದ ಬೂಟು, ಅತ್ಯುತ್ತಮ ಹಾಗೂ ಅತಿ ಹೆಚ್ಚು ಗೋಲುಗಳನ್ನು ತಡೆದ ಗೋಲ್ ಕೀಪರ್‌ಗೆ ಚಿನ್ನದ ಗ್ಲೌಸ್ ನೀಡಲಾಗುತ್ತದೆ. ಈಗಾಗಲೇ ಪಂದ್ಯಾವಳಿ ಟಿಕೆಟ್‌ಗಳು ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಟಿಕೆಟ್‌ನ ಆರಂಭಿಕ ದರ ಭಾರತದ ರೂಪಾಯಿ ದರದಲ್ಲಿ 6 ಸಾವಿರ ರೂಪಾಯಿ ಇದೆ ಇದು ಪಂದ್ಯದಿಂದ ಪಂದ್ಯಕ್ಕೆ ಹೆಚ್ಚುತ್ತಾ ಹೋಗಲಿದೆ.
ಇನ್ನು ನಮ್ಮ ದೇಶದ ಫುಟ್ಬಾಲ್ ತಂಡ ಈ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡುತ್ತಿಲ್ಲವಾದರೂ ಫುಟ್ಬಾಲ್ ಕ್ರೇಜ್ ಏನು ಕಮ್ಮಿ ಇಲ್ಲ. ಕ್ರಿಕೆಟ್ ಅನ್ನೇ ಉಸಿರಾಡುತ್ತಿರುವ ಭಾರತದಲ್ಲಿ ಫುಟ್ಬಾಲ್ ಜ್ವರ ಜೋರಾಗಿಯೇ ಇದೆ. ಕೇರಳ, ಪಶ್ಚಿಮ ಬಂಗಾಳದ ಬೀದಿ-ಬೀದಿಗಳಲ್ಲಿ ತನ್ನ ನೆಚ್ಚಿನ ಆಟಗಾರರ, ತಂಡಗಳ ಫ್ಲೆಕ್ಸ್, ಕಟೌಟ್‌ಗಳು ರಾರಾಜಿಸುತ್ತಿವೆ. ನೆಚ್ಚಿನ ತಂಡಗಳ ಪಂದ್ಯಗಳಿದ್ದಾಗ ಆಯಾ ದೇಶಗಳ ಟೀ ಶರ್ಟ್ ಧರಿಸಿ, ಬಾವುಟ ಹಿಡಿದು ಬೀದಿಗಳಲ್ಲಿ ಮೆರವಣಿಗೆ ನಡೆಯುತ್ತಿದೆ. ಹಾಗೆಯೇ ಬೆಟ್ಟಿಂಗ್ ಭರಾಟೆಯೂ ಸಹ ಜೋರಾಗಿಯೇ ಇದೆ. ಇನ್ನು ಕೇರಳದಲ್ಲಂತೂ ಅಭಿಮಾನಿಗಳು ಲಿಯೋನಲ್ ಮೆಸ್ಸಿ, ಕ್ರಿಸ್ಟಿಯಾನೋ ರೋನಾಲ್ಟೊ, ನೈಮರ್ ಜೂನಿಯರ್ ಇವರುಗಳ ಭಾರೀ ಕಟೌಟ್‌ಗಳನ್ನು ಸ್ಥಳೀಯ ನದಿಯಲ್ಲಿ ನಿಲ್ಲಿಸುವ ಮೂಲಕ ಕ್ರೀಡಾ ಜಗತ್ತನ್ನು ತಮ್ಮತ್ತ ಸೆಳೆದಿದ್ದರು. ಇದನ್ನು ಫಿಫಾ ಕೂಡಾ ತನ್ನ ಫೇಸ್ಬುಕ್, ಟ್ವಿಟ್ಟರ್ ಖಾತೆಗಳಲ್ಲಿ ಪ್ರಶಂಸಿಸಿ ಹಂಚಿಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಫಿಫಾದ ಪೋಸ್ಟ್ ಗೆ ಮರು ಟ್ವಿಟ್ ಮಾಡಿ ಧನ್ಯವಾದಗಳನ್ನು ತಿಳಿಸಿದ್ದರು. ಈ ಪಂದ್ಯಾವಳಿಗಳ ಎಲ್ಲಾ ಪಂದ್ಯಗಳನ್ನು ದೂರದರ್ಶನದ ಮೂಲಕ ದಾಖಲೆಯ ಪ್ರಮಾಣದಲ್ಲಿ ವೀಕ್ಷಿಸಲಾಗಿದೆ.
ಫುಟ್ಭಾಲ್‌ನಲ್ಲಿ ಭಾರತ
ಭಾರತ ಫುಟ್ಬಾಲ್ ತಂಡ ಈವರೆಗೂ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡಿಲ್ಲ. 1948ರಲ್ಲಿ ಲಂಡನ್‌ನಲ್ಲಿ ನಡೆದ ಒಲಂಪಿಕ್ಸ್ ನಲ್ಲಿ ಆಡಿದ ಆಟವೇ ಕೊನೆಯ ಪಂದ್ಯವಾಗಿದೆ. ಪ್ರತಿ ವಿಶ್ವಕಪ್ ಆರಂಭದ 2 ವರ್ಷಕ್ಕೂ ಮುನ್ನಾ ಫುಟ್ಬಾಲ್ ಆಡುವ ಹಾಗೂ ಫಿಫಾ ಜೊತೆ ನೋಂದಾಯಿಸಿಕೊಂಡಿರುವ ತಂಡಗಳಿಗೆ ಅರ್ಹತಾ ಪಂದ್ಯಗಳನ್ನು ನಡೆಸಲಾಗುತ್ತದೆ. ಅವುಗಳಲ್ಲಿ ಗೆದ್ದು ಹೆಚ್ಚಿನ ಅಂಕ ಪಡೆದ 32 ತಂಡಗಳಿಗೆ ಮಾತ್ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡಲು ಅವಕಾಶ ನೀಡಲಾಗುತ್ತದೆ. ಈ ಬಾರಿಯ ವಿಶ್ವಕಪ್‌ಗೆ ನಡೆದ ಅರ್ಹತಾ ಸುತ್ತಿನ ಪಂದ್ಯಗಳ ಗುಂಪಿನಲ್ಲಿ ಭಾರತ ತಂಡ ಕತಾರ್, ಒಮನ್, ಅಫ್ಘಾನಿಸ್ತಾನ, ಬಾಂಗ್ಲಾದೇಶದ ತಂಡಗಳೊಂದಿಗೆ ಆಡಿ 8 ಪಂದ್ಯದಲ್ಲಿ ಒಂದರಲ್ಲಿ ಗೆದ್ದು 3 ರಲ್ಲಿ ಸೋತು, 4 ರಲ್ಲಿ ಡ್ರಾ ಸಾಧಿಸಿ 7 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 8 ಪಂದ್ಯದಲ್ಲಿ 7 ರಲ್ಲಿ ಗೆದ್ದು ಅಗ್ರ ಸ್ಥಾನ ಪಡೆದ ಕತಾರ್ ವಿಶ್ವಕಪ್ ಪಂದಾವಳಿಯಲ್ಲಿ ಆಡಲು ಅರ್ಹತೆ ಪಡೆದುಕೊಂಡಿತು. ಸದ್ಯ ಭಾರತ ತಂಡ ಫಿಫಾ ರ‍್ಯಾಂಕಿಂಗ್‌ನಲ್ಲಿ 106 ನೇ ಸ್ಥಾನದಲ್ಲಿದೆ.
ಭಾರತದಲ್ಲಿ ಕೇರಳ, ಪಶ್ಚಿಮ ಬಂಗಾಳ, ಗೋವಾ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚು ಪುಟ್ಬಾಲ್ ಆಟ ಆಡಲಾಗುತ್ತಿದೆ. ನಮ್ಮಲ್ಲೂ ಸಾಕಷ್ಟು ಪ್ರತಿಭೆಗಳಿದ್ದರೂ ಸಾಕಷ್ಟು ಅವಕಾಶ, ಮೂಲ ಸೌಕರ್ಯದ ಕೊರತೆ, ಪುಟ್ಬಾಲ್‌ಗೆ ಮನ್ನಣೆ ನೀಡದಿರುವುದು ಭಾರತ ಹಿಂದುಳಿಯಲು ಪ್ರಮುಖ ಕಾರಣ. 1982ರಲ್ಲಿ ಕ್ರಿಕೆಟ್ ವಿಶ್ವಕಪ್ ಅನ್ನು ಭಾರತ ಗೆದ್ದ ಮೇಲಂತೂ ಪುಟ್ಬಾಲ್ ಸೇರಿದಂತೆ ಎಲ್ಲಾ ಆಟಗಳು ಮೂಲೆ ಗುಂಪಾದವು. ಕ್ರಿಕೆಟ್‌ಗೆ ಹೆಚ್ಚಿನ ಹೂಡಿಕೆ, ಪ್ರಾಶಸ್ತ್ಯ ನೀಡಿದ್ದು ಹಾಗೂ ಕ್ರಿಕೆಟ್‌ಗೆ ಪ್ರತ್ಯೇಕ ಮಂಡಳಿ ರಚನೆಗೆ ಅವಕಾಶ ನೀಡಿದ್ದು ಕ್ರಿಕೆಟ್ ಬೆಳವಣಿಗೆಗೆ ಪೂರಕವಾದವು ಹಾಗೆಯೇ ಇಂದು ಕ್ರಿಕೆಟ್, ಫುಟ್ಬಾಲ್, ಕಬಡ್ಡಿ ಆಟಗಳನ್ನು ಕೇವಲ ಲಾಭದ ದೃಷ್ಟಿಯಿಂದಷ್ಟೇ ನೋಡಲಾಗುತ್ತಿದೆ. ಅದಕ್ಕಾಗಿ ಇಂಡಿಯನ್ ಪ್ರೀಮಿಯರ್ ಲೀಗ್, ಇಂಡಿಯನ್ ಸೂಪರ್ ಲೀಗ್, ಪ್ರೋ ಕಬಡ್ಡಿಯಂತಹ ಹಣದ ಹೊಳೆ ಹರಿಸುವ ಶ್ರೀಮಂತ ಪಂದ್ಯಾವಳಿಗಳನ್ನು ನಡೆಸಲಾಗುತ್ತಿದೆ. ಹಾಗೆಯೇ ಇತ್ತೀಚೆಗೆ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ನಲ್ಲಿ ಹೆಚ್ಚಿದ ಮೂರನೇ ವ್ಯಕ್ತಿಗಳ (ಸರ್ಕಾರದ ತೀವ್ರ ತರಹದ) ಹಸ್ತಕ್ಷೇಪದಿಂದಾಗಿ ಫಿಫಾದಿಂದ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ನಿಷೇಧಕ್ಕೊಳಗಾಗಿದ್ದು ಭಾರತದಲ್ಲಿ ಫುಟ್ಬಾಲ್ ಸ್ಥಿತಿಯನ್ನು ಸಾರಿ ಹೇಳಿದೆ.
ಫುಟ್ಬಾಲ್ ಇತಿಹಾಸ
ಕಾಲಿನಿಂದ ಚೆಂಡನ್ನು ಒದೆಯುವ ಮೂಲಕ ಗುರಿ ಪೆಟ್ಟಿಗೆಗೆ ಸೇರಿಸುವ ಈ ಆಟಕ್ಕೆ ಬಹಳ ಹಿಂದಿನ ಇತಿಹಾಸವಿದೆ. ಅದರಲ್ಲೂ ಯೂರೋಪ್, ದಕ್ಷಿಣ ಅಮೇರಿಕಾದ ದೇಶಗಳಲ್ಲಿ ಈ ಆಟ ಹಾಸುಹೊಕ್ಕಾಗಿದೆ. ಅಲ್ಲಿನ ಜನ ಈ ಆಟವನ್ನು ತಮ್ಮ ಸಂಪ್ರದಾಯವನ್ನಾಗಿಸಿಕೊಂಡಿದ್ದಾರೆ. ಪ್ರಾಚೀನ ಕಾಲದಿಂದಲೂ ಅಲ್ಲಿನ ಹಳ್ಳಿಗಾಡಿನ ರೈತಾಪಿ ಜನರು, ಬುಡಕಟ್ಟು ಜನ ಕುಟುಂಬ ಸಮೇತರಾಗಿ ಈ ಆಟದಲ್ಲಿ ಪಾಲ್ಗೊಳ್ಳುತ್ತಿದ್ದರು. ಅಲ್ಲದೇ ಈ ಆಟದ ಮೇಲೆ ಕತೆಗಳು, ಹಾಡುಗಳೂ ಸಹ ಚಾಲ್ತಿಯಲ್ಲಿವೆ. ನಂತರ ಬ್ರಿಟೀಷರು ಈ ಆಟವನ್ನು ಹೊಸ ಮಾರ್ಪಾಟಿನೊಂದಿಗೆ ಜಗತ್ತಿಗೆ ಪರಿಚಯಿಸಿದರು. ನಂತರ ಈ ಆಟ ವಿಶ್ವವ್ಯಾಪಿಯಾಯಿತು. 1920ರಲ್ಲಿ ಬೆಲ್ಜಿಯಂನಲ್ಲಿ ನಡೆದ ಒಲಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಫುಟ್ಬಾಲ್ ಅನ್ನು ಸೇರಿಸುವ ಮೂಲಕ ಮೊಟ್ಟ ಮೊದಲ ಅಂತರ್ ರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿಗೆ ನಾಂದಿ ಹಾಡಿತು ಹಾಗೂ 1930ರಲ್ಲಿ ಮೊದಲ ವಿಶ್ವಕಪ್ ಪಂದ್ಯಾಟ ದಕ್ಷಿಣ ಅಮೇರಿಕಾದ ಉರುಗ್ವೆಯಲ್ಲಿ ಸಂಘಟಿಸಲಾಗಿತ್ತು.
ಕತಾರ್ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ಸುತ್ತಿಕೊಂಡ ವಿವಾದ
2010ರಲ್ಲಿ 2022ರ ವಿಶ್ವಕಪ್ ಪಂದ್ಯಾವಳಿ ಕತಾರ್‌ನಲ್ಲಿ ನಡೆಯಲಿದೆ ಎಂದು ಘೋಷಣೆಯಾಗುತ್ತಿದ್ದಂತೆ ವಿರೋಧ ವ್ಯಕ್ತವಾಯಿತು. ಏಕೆಂದರೆ ಕೇವಲ 30 ಲಕ್ಷ ಜನ ಸಂಖ್ಯೆ ಇರುವ ದೇಶ ಹೇಗೆ ಈ ಬೃಹತ್ ಪಂದ್ಯಾವಳಿಯನ್ನು ಆಯೋಜಿಸಬಲ್ಲದು ಎಂದು. ಆಗ ಕೇವಲ 1 ಮೈದಾನವನ್ನಷ್ಟೇ ಕತಾರ್ ಹೊಂದಿತ್ತು. ವಿಪರೀತ ಸೆಕೆ, ಮಾನವ ಸಂಪನ್ಮೂಲದ ಕೊರತೆ, ಭ್ರದತೆ ಇವೆಲ್ಲವನ್ನು ಈ ಸಣ್ಣ ದೇಶ ಹೇಗೆ ನಿರ್ವಹಿಸುತ್ತದೆ? ಇಷ್ಟೆಲ್ಲಾ ಕೊರತೆಗಳಿದ್ದಾಗ್ಯೂ ಕತಾರ್ ಹೇಗೆ ಈ ಅವಕಾಶ ಸಿಕ್ಕಿತು ಎಂಬೆಲ್ಲಾ ಪ್ರಶ್ನೆಗಳು ಎದ್ದವು. ಕತಾರ್ ತನ್ನ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಲಂಚ ನೀಡಿ ಈ ಅವಕಾಶ ಗಿಟ್ಟಿಸಿಕೊಂಡಿದೆ ಎಂದೂ ಆರೋಪಗಳು ಕೇಳಿಬಂದಿದ್ದವು ಹಾಗೂ ಕತಾರ್‌ನಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಬಾಯ್ಕಟ್ ಕತಾರ್ ಎಂದು ಪ್ರತಿಭಟನೆಗಳು ನಡೆದಿವೆ. ಅಲ್ಲದೆ 2016ರವರೆಗೆ ಈ ಪಂದ್ಯಾವಳಿ ತಯಾರಿಯಲ್ಲಿ ಸುಮಾರು 6000 ಜನರು ಪ್ರಾಣ ತೆತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಭಾರತ, ಪಾಕಿಸ್ತಾನ, ನೇಪಾಳದ ವಲಸೆ ಕಾರ್ಮಿಕರನ್ನು ಕಾಫಿಲ್ ಎಂಬ ಆಧುನಿಕ ಜೀತ ಪದ್ದತಿ ಮೂಲಕ ಈ ಕೆಲಸಕ್ಕೆ ದುಡಿಸಿಕೊಳ್ಳಲಾಗಿದೆ, ಇಲ್ಲಿ ಕೆಲಸ ಕೊಡುವ ಮಾಲಿಕ ಕೆಲಸಗಾರರ ಪಾಸ್ ಪೋರ್ಟ್, ವಿಸಾವನ್ನು ತನ್ನ ವಶಕ್ಕೆ ಪಡೆದು 40 ಡಿಗ್ರಿ ಸೆಲ್ಸಿಯಸ್ ಉರಿ ಬಿಸಿಲಿನಲ್ಲಿ ಚಾವಣಿ ಮೇಲ್ಭಾಗ ಕೆಲಸ ಮಾಡಿಸಲಾಗಿದೆ. ಅಲ್ಲದೇ ಕಾರ್ಮಿಕರಿಗೆ ತಂಗಲು ಕಿರಿದಾದ ಜಾಗ ನೀಡಲಾಗಿ ಸಾಕಷ್ಟು ಜನ ಉಸಿರಾಟ, ಚರ್ಮದ ಕಾಯಿಲೆಯಿಂದ ಮೃತಪಟ್ಟಿದ್ದಾರೆ, ಆವರಿಗೆ ತಿಂಗಳುಗಟ್ಟಲೆ ಸಂಬಳವನ್ನು ನೀಡಿಲ್ಲವೆಂದು ಮಾನವ ಹಕ್ಕುಗಳ ಹೋರಾಟಗಾರರು ದೂರಿದ್ದಾರೆ. ಇದಕ್ಕೆ ಕತಾರ್ 2016ರಲ್ಲೇ ಕಾಫಿಲ್ ಪದ್ದತಿಯನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದೆ. ಅಲ್ಲದೆ ಪಂದ್ಯಾವಳಿ ವೀಕ್ಷಣೆ ಮಾಡಲು ಬರುವ ಪ್ರವಾಸಿಗರಿಗೆ ವಸ್ತ್ರ ಸಂಹಿತೆ ಪ್ರಕಟಿಸಿ ಭಾರೀ ವಿರೋಧ ವ್ಯಕ್ತವಾದ ನಂತರ ಹಿಂಪಡೆದಿದೆ.
ಹೋರಾಟಗಳಿಗೆ ಆಟಗಾರರ ಬೆಂಬಲ
ಈ ಬಾರಿಯ ಪಂದ್ಯಾವಳಿಯಲ್ಲಿ ಹಲವು ವಿಶೇಷತೆಗಳು ಕಂಡುಬರುತ್ತಿವೆ. ಜರ್ಮನಿ ತಂಡ ಹ್ಯೂಮನ್ ರೈಟ್ಸ್ ಹಾಗೂ ಒನ್ ಲವ್ ಎಂದು ತಮ್ಮ ಜರ್ಸಿ (ಆಡುವಾಗ ತೊಡುವ ಟೀಶರ್ಟ್) ಮೇಲೆ ಬರೆದುಕೊಂಡು ಕತಾರ್‌ನಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಮತ್ತು ಸಲಿಂಗ ಪ್ರೇಮಕ್ಕೆ ಬೆಂಬಲ ನೀಡಿತು. ಇರಾನ್ ದೇಶದ ಆಟಗಾರರು ಪಂದ್ಯ ಆರಂಭವಾಗುವ ಮುನ್ನ ಹಾಡಲಾಗುವ ರಾಷ್ಟ್ರ ಗೀತೆಯನ್ನು ಹಾಡದೆ ತಮ್ಮ ದೇಶದಲ್ಲಿ ಹಿಜಾಬ್ ಧರಿಸುವಿಕೆ ಸಂಬಂಧ ನಡೆಯುತ್ತಿರುವ ನೈತಿಕ ಪೋಲಿಸ್ ಗಿರಿ ವಿರುದ್ಧ ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತಪಡಿಸಿದರು. ಲಿಯೋನೆಲ್ ಮೆಸ್ಸಿ ಎಜುಕೇಷನ್ ಫಾರ್ ಆಲ್ ಹಾಗೂ ಸೇವ್ ಪ್ಲಾನೆಟ್ ಎಂಬ ಪಟ್ಟಿಯನ್ನು ತೋಳಿಗೆ ಧರಿಸಿಕೊಂಡು ಶಿಕ್ಷಣದ ಸಾರ್ವತ್ರೀಕರಣಕ್ಕೆ ಬೆಂಬಲ ಸೂಚಿಸಿದರು. ಹೀಗೆ ಹಲವು ವಿಶೇಷತೆ ಫುಟ್ಬಾಲ್ ಪಂದ್ಯಾವಳಿಯ ಹಿರಿಮೆಯನ್ನು ಹೆಚ್ಚಿಸಿದೆ.
ಒಂದು ಕಡೆ ಫುಟ್ಬಾಲ್ ವಿಶ್ವಕಪ್ ಇಡೀ ಜಗತ್ತನ್ನು ತನ್ನತ್ತ ಸೆಳೆಯುತ್ತಿದೆ. ನಮ್ಮ ದೇಶದಲ್ಲೂ ಕೋಟ್ಯಾಂತರ ಜನ ವಿಶ್ವಕಪ್ ಅನ್ನು ವೀಕ್ಷಿಸುತ್ತಾ, ತಮ್ಮ ನೆಚ್ಚಿನ ವಿದೇಶಿ ತಂಡಗಳನ್ನು, ವಿದೇಶಿ ಆಟಗಾರರ ಕಾಲ್ಚಳಕಗಳನ್ನು ನಿದ್ದೆಗೆಟ್ಟು ನೋಡುತ್ತಿದ್ದರೆ, ಮತ್ತೊಂದೆಡೆ ಜನಸಂಖ್ಯೆಯಲ್ಲಿ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿರುವ ನಮ್ಮ ದೇಶದಲ್ಲಿ ಒಂದೂವರೆ ಗಂಟೆ ಆಟವಾಡುವ 11 ಆಟಗಾರರು ಯಾಕಿಲ್ಲ? ಎಂಬ ಬೇಸರದ ಸಂಗತಿಯೂ ಹಾಗೂ ಗಂಭೀರ ಪ್ರಶ್ನೆಯೂ ನಮ್ಮನ್ನು ಕಾಡದಿರಲಾರದು.
ಒಟ್ಟಾರೆ ಮುಂದೆ ನಡೆಯಲಿರುವ ರೋಚಕ ಪಂದ್ಯಗಳನ್ನು ಕಣ್ತುಂಬಿಕೊಳ್ಳುತ್ತಾ, 2026ರಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಪ್ರತಿನಿಧಿಸುವಂತಾಗಲಿ ಎಂದು ನಿರೀಕ್ಷಿಸೋಣ.