ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ನಾನು ಸೇರುವುದಿಲ್ಲ ಎಂದು ಮಾಜಿ ಸಚಿವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ನಾನು ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷದ ಹಿರಿಯ ನಾಯಕನಾಗಿದ್ದೇನೆ. ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಪಕ್ಷದ ವರಿಷ್ಠರು ಜವಾಬ್ದಾರಿ ನೀಡಿದರೆ ನಿರ್ವಹಿಸುತ್ತೇನೆ ಎಂಬ ಅಚ್ಚರಿಯ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶೆಟ್ಟರ್, ನಾನು ಸಿಎಂ ಆಗಿದ್ದವನು, ಹಾಗಾಗಿ ನೂತನ ಸಿಎಂ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಸಚಿವ ನಾಗಿ ಕೆಲಸ ಮಾಡೋದು ಬೇಡ ಎಂಬುದಾಗಿ ನಿರ್ಧಾರ ಮಾಡಿದ್ದೀನಿ ಎಂದು ಸಚಿವ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ನಾನೊಬ್ಬ ಹಿರಿಯ ನಾಯಕನಾದ ಕಾರಣ ಬೊಮ್ಮಾಯಿ ಅವರ ಸಂಪುಟ ಸೇರ್ಪಡೆಯಾಗದಿರಲು ತೀರ್ಮಾನಿಸಿದ್ದೇನೆ. ಬೇರೆ ಯಾವ ಹುದ್ದೆಯ ಮೇಲೂ ನಾನು ಕಣ್ಣಿಟ್ಟಿಲ್ಲ. ಒಂದು ವೇಳೆ ಪಕ್ಷದ ಹೈಕಮಾಂಡ್ ಇಂತಹ ಕೆಲಸ ಮಾಡಿ ಎಂದು ಸೂಚಿಸಿದರೆ ಆ ಕೆಲಸ ಮಾಡಲು ನಾನು ಸಿದ್ದ.
ಹೊಸ ಸಿಎಂ ಬೊಮ್ಮಾಯಿ ಅವರ ಸಂಪುಟ ರಚನೆ ಪ್ರಕ್ರಿಯೆ ಆರಂಭಗೊಂಡಿದೆ. ಆದು ಯಾವಾಗಾ ಪೂರ್ಣಗೊಳ್ಳುತ್ತೋ ಗೊತ್ತಿಲ್ಲ. ನೂತನ ಸರ್ಕಾರದ ಸಚಿವ ಸಂಪುಟದಲ್ಲಿ ನಾನು ಸಚಿವನಾಗಿ ಕೆಲಸ ಮಾಡಲು ಮನಸ್ಸು ಒಪ್ಪುತ್ತಿಲ್ಲ ಎಂದು ಪುನಃರುಚ್ಚರಿಸಿದ್ದಾರೆ.
ಇದನ್ನೂ ಓದಿ : ಲಿಂಗಾಯತರ ವಿರೋಧ ಕಟ್ಟಿಕೊಳ್ಳದೆ ತಂತ್ರ ಹೆಣೆದ ಬಿಜೆಪಿ, ಹಿಂದುತ್ವದ ಅಜೆಂಡ ಸಿಎಂ ಆಯ್ಕೆಗೆ ಮುಖ್ಯವಾಯಿತೆ?!
ನಿಜವಾಯ್ತಾ ಕಟೀಲ್ ಆಡಿಯೋ : ಇತ್ತೀಚೆಗಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದೆನ್ನಲಾದ ಆಡಿಯೋ ಬಾಂಬ್ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ಜಗದೀಶ್ ಶೆಟ್ಟರ್, ಮತ್ತು ಈಶ್ವರಪ್ಪ ಟೀಂ ಹೊರಗೆ ಹೋಗುತ್ತದೆ ಎಂದು ಹೇಳಲಾಗಿದ್ದ ಆಡಿಯೋ ರಾಜಕೀಯದಲ್ಲಿ ಭಾರಿ ಬದಲಾವಣೆಯ ಸುಳಿವು ನೀಡಿತ್ತು.
ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಸೇರದಿರಲು ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಿರ್ಧರಿಸಿರುವುದರಿಂದ ಕಟೀಲ್ ಆಡಿಯೊ ನಿಜ ಎಂದು ಸಾಬೀತಾಗಿದೆ.
ಹೊಸ ಸಿಎಂ ಆಯ್ಕೆ ಬೆನ್ನಲ್ಲೆ ಮಾಜಿ ಸಿಎಂ ಈ ನಿರ್ಧಾರಕ್ಕೆ ಬಂದಿರುವುದು ಬಿಜೆಪಿಯಲ್ಲಿನ ಅಸಮಾಧಾನವನ್ನು ತೋರಿಸುತ್ತಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.