ದಿನೇಶ್ ಅಮೀನ್ ಮಟ್ಟು
ನಿಜವಾದ ಜನನಾಯಕ ಜನರನ್ನು ನಂಬಿ ರಾಜಕಾರಣ ಮಾಡುತ್ತಾರೆಯೇ ಹೊರತು ತಮ್ಮ ಜಾತಿಯ ಸ್ವಾಮೀಜಿಗಳನ್ನಲ್ಲ. ಕರ್ನಾಟಕದಲ್ಲಿ ಈಗ ಉಳಿದಿರುವ ಮೂವರು ಜನನಾಯಕರೆಂದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.
ಇವರಲ್ಲಿ ಮೊದಲ ಇಬ್ಬರು ನಾಯಕರು ತಮ್ಮ ರಾಜಕೀಯ ಶಕ್ತಿ ಜನರೇ ಹೊರತು ಸ್ವಾಮೀಜಿಗಳಲ್ಲ ಎನ್ನುವುದನ್ನು ಅಗತ್ಯ ಸಂದರ್ಭದಲ್ಲಿ ತೋರಿಸಿಕೊಟ್ಟಿದ್ದಾರೆ. ಅದೇ ದಾರಿಯಲ್ಲಿ ಪಯಣ ಪ್ರಾರಂಭಿಸಿದ್ದ ಯಡಿಯೂರಪ್ಪನವರು ನಡುಹಾದಿಯಲ್ಲಿ ದಾರಿ ತಪ್ಪಿ ಈಗ ತಮ್ಮ ಜಾತಿಯ ಸ್ವಾಮೀಜಿಗಳ ಪದತಲದಲ್ಲಿ ಬಿದ್ದಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ತಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಒತ್ತಾಯಿಸಿ ಕುರುಬರ ಸ್ವಾಮಿಗಳ ನೇತೃತ್ವದಲ್ಲಿ ಸಮಾವೇಶ, ಪಾದಯಾತ್ರೆಗಳು ನಡೆಯಿತು. ಅದೇ ಸಮುದಾಯಕ್ಕೆ ಸೇರಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವುಗಳಲ್ಲಿ ಭಾಗವಹಿಸದೆ ಇರುವುದು ದೊಡ್ಡ ಸುದ್ದಿಯಾಯಿತು.
ಆ ಸಮಾವೇಶಗಳಲ್ಲಿ ಸೇರಿದ್ದ ಜನಸಮೂಹ ಹಾಗೂ ಸ್ವಾಮೀಜಿಗಳು ಮತ್ತು ಸಮುದಾಯದ ಕೆಲವು ರಾಜಕೀಯ ನಾಯಕರು ಹಾಕುತ್ತಿದ್ದ ಸವಾಲುಗಳನ್ನು ನೋಡಿ ಅವರ ಹಿತೈಷಿಗಳೇ ಕೆಲವರು ಸಿದ್ದರಾಮಯ್ಯನವರು ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಉಪದೇಶ ನೀಡಿದ್ದೂ ಇದೆ. ಸಿದ್ದರಾಮಯ್ಯನವರು ಮಾತ್ರ ಸಮಾವೇಶದಲ್ಲಿ ಭಾಗವಹಿಸುವುದಿಲ್ಲ ಎಂಬ ತಮ್ಮ ನಿಲುವಿಗೆ ಬದ್ದರಾಗಿ ಉಳಿಯುವ ರಾಜಕೀಯ ರಿಸ್ಕ್ ತೆಗೆದುಕೊಂಡರು.
ಕೆಲವು ವರ್ಷಗಳ ಹಿಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮದೇ ಜಾತಿಯ ಸ್ವಾಮೀಜಿಗಳಾದ ಆದಿ ಚುಂಚನಗಿರಿಯ ಬಾಲಗಂಗಾಧರ ಸ್ವಾಮೀಜಿಗಳ ಜೊತೆ ಸಂಘರ್ಷಕ್ಕಿಳಿದಿದ್ದರು. ಪರ್ಯಾಯವಾಗಿ ಮಠವನ್ನೇ ಕಟ್ಟಲು ಹೊರಟು ಚಂದ್ರಶೇಖರ ಸ್ವಾಮೀಜಿಗಳ ನೇತೃತ್ವದಲ್ಲಿ ಸಮಾವೇಶವನ್ನೇ ನಡೆಸಿ ಸವಾಲು ಹಾಕಿದ್ದರು. ಗೌಡರು ಈಗಿನ ಸ್ವಾಮೀಜಿಗಳನ್ನೂ ಭೇಟಿಯಾಗುವುದೂ ಅಪರೂಪ.
ಇಂತಹ ದಿಟ್ಟತನಕ್ಕಾಗಿಯೇ ಈ ಇಬ್ಬರನ್ನು ಜನನಾಯಕರೆಂದು ಹೇಳುತ್ತಾರೆ. ಇವರ ರೀತಿಯಲ್ಲಿಯೇ ಜನನಾಯಕರೆಂದು ಕರೆಸಿಕೊಳ್ಳುತ್ತಿದ್ದವರು ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು. ಒಬ್ಬ ಸಾಮಾನ್ಯ ಕಾರ್ಯಕರ್ತನ ಮಟ್ಟದಿಂದ ಮುಖ್ಯಮಂತ್ರಿ ಸ್ಥಾನದವರೆಗೆ ಇವರು ಬಂದಿರುವುದು ತಮ್ಮ ಜಾತಿಯ ಮಠಗಳ ಸ್ವಾಮೀಜಿಗಳ ಬೆಂಬಲದಿಂದ ಅಲ್ಲ.
ಆದರೆ ಮೊದಲ ಬಾರಿ ಮುಖ್ಯಮಂತ್ರಿಯಾದ ಕೂಡಲೇ ಇವರ ತಲೆ ಯಾರು ಹಾಳು ಮಾಡಿದರೋ ಗೊತ್ತಿಲ್ಲ. ಕಂಡಕಂಡ ಮಠಗಳ ಸ್ವಾಮೀಜಿಗಳನ್ನು ಓಲೈಸತೊಡಗಿದರು. ತೆರಿಗೆ ಹಣವನ್ನು ಧಾರಾಳವಾಗಿ ಮಠಗಳಿಗೆ ಧಾರೆಯೆರೆದರು. ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಜನರನ್ನು ನೆಚ್ಚಿಕೊಳ್ಳಬೇಕಾಗಿದ್ದ ಯಡಿಯೂರಪ್ಪನವರು ತಮ್ಮ ಜಾತಿಯ ಮಠಗಳ ಸ್ವಾಮೀಜಿಗಳ ಕಾಲಿಗೆ ಬೀಳುತ್ತಿದ್ದಾರೆ.
ತನ್ನ ಹಿರಿತನ, ಸ್ವಾಭಿಮಾನ, ಆತ್ಮಸಾಕ್ಷಿಗಳನ್ನೆಲ್ಲವನ್ನೂ ಸ್ವಾಮೀಜಿಗಳ ಪಾದಗಳಿಗೆ ಅರ್ಪಿಸಿದ ನಂತರವೂ ಯಡಿಯೂರಪ್ಪನವರಿಗೆ ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಾಧ್ಯವಾಗಬಹುದೇ? ಒಂದೊಮ್ಮೆ ಕುರ್ಚಿ ಉಳಿಸಿಕೊಂಡರೂ ಅದು ಸ್ವಾಮೀಜಿಗಳು ನೀಡಿದ ಭಿಕ್ಷೆಯಾಗುತ್ತದೆಯೇ ಹೊರತು, ತಾನು ಜನರ ಮೇಲೆ ಇಟ್ಟ ನಂಬಿಕೆಗೆ ಜನತೆ ಕೊಟ್ಟ ಉಡುಗೊರೆ ಖಂಡಿತ ಆಗಲಾರದು.