ಕೃಷಿ ಕಾನೂನುಗಳು ರದ್ದಾಗದಿದ್ದರೆ ಹೋರಾಟ ತೀವ್ರಗೊಳ್ಳುತ್ತದೆ- ಸಂಯುಕ್ತ ಕಿಸಾನ್ ಮೋರ್ಚಾ
ಜನವರಿ 4ರ ಮಾತುಕತೆಗಳಲ್ಲಿ ಸರಕಾರ ತನ್ನ ಹಠಮಾರಿ ನಿಲುವನ್ನು ಮುಂದುವರೆಸಿದರೆ ಹೋರಾಟವನ್ನು ತೀವ್ರಗೊಳಿಸಲು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಿದೆ. ಇದನ್ನು ಜನವರಿ 2ರಂದು ದಿಲ್ಲಿಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೋರ್ಚಾದ ರಾಷ್ಟ್ರೀಯ ಸಂಯೋಜನಾ ಸಮಿತಿ ಪ್ರಕಟಿಸಿದೆ.
- ಜನವರಿ 6: ಕುಂಡ್ಲಿ-ಮಾನೇಸರ್-ಪಲ್ವಲ್ (ಕೆಎಂಪಿ) ರಸ್ತೆಯಲ್ಲಿ ಟ್ರಾಕ್ಟರ್ ಮೆರವಣಿಗೆ
- ಜನವರಿ 7 ರಿಂದ 20: ದೇಶಾದ್ಯಂತ ‘ಜಾಗೃತಿ ಅಭಿಯಾನ’ ಪಕ್ಷಾಚರಣೆ-ಜಿಲ್ಲಾವಾರು ರ್ಯಾಲಿಗಳು, ಪತ್ರಿಕಾಗೋಷ್ಠಿಗಳು ಇತ್ಯಾದಿಗಳ ಮೂಲಕ ರೈತರ ನ್ಯಾಯೋಚಿತ ಬೇಡಿಕೆಗಳನ್ನು ಜನಜನಿತಗೊಳಿಸುವುದು
- ಜನವರಿ 18: ಮಹಿಳಾ ರೈತರ ದಿನಾಚರಣೆ
- ಜನವರಿ 23 -ನೇತಾಜಿ ಜನ್ಮದಿನದಂದು ಆಝಾದ್ ಹಿಂದ್ ರೈತ ದಿನಾಚರಣೆ
- ಜನವರಿ 26: ದಿಲ್ಲಿಯಲ್ಲಿ ಗಣತಂತ್ರ ಪರೇಡ್ ನಂತರ ‘ರೈತ ಗಣತಂತ್ರ ಪರೇಡ್’. ದೇಶದ ಎಲ್ಲ ರಾಜ್ಯಗಳಲ್ಲೂ ಇಂತಹುದೇ ರೈತ ಪರೇಡ್‍ಗಳು
ಇದಲ್ಲದೆ ಆಳುವ ಪಕ್ಷ ಬಿಜೆಪಿಯ ಎನ್.ಡಿ.ಎ. ಮಿತ್ರರು ಅದನ್ನು ತ್ಯಜಿಸುವಂತೆ ಒತ್ತಾಯಿಸುವ ಮತಪ್ರದರ್ಶನಗಳು ಮುಂದುವರೆಯುತ್ತವೆ, ಈಗಾಗಲೇ ನಿರ್ಧರಿಸಿರುವ ಅದಾನಿ/ಅಂಬಾನಿ ಉತ್ಪನ್ನಗಳು ಮತ್ತು ಸೇವೆಗಳ ಬಹಿಷ್ಕಾರ ಮತ್ತು ಟೋಲ್‍ಮುಕ್ತ ಸಂಚಾರದ ಕಾರ್ಯಕ್ರಮಗಳೂ ಮುಂದುವರೆಯುತ್ತವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರು ಹೇಳಿದ್ದಾರೆ.
ಶಹಜಾನ್ ಪುರ ಗಡಿ ಬ್ಲಾಕೇಡ್ ದಿಲ್ಲಿಗೆ ಹೋಗುತ್ತದೆ ಎಂದೂ ಅವರು ಹೇಳಿದರು. ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ಸಂಯೋಜನಾ ಸಮಿತಿಯಲ್ಲಿ ಎಐಕೆಎಸ್‍ನ ಅಧ್ಯಕ್ಷ ಅಶೋಕ ಧವಳೆ, ಸ್ವರಾಜ್ಯ ಅಭಿಯಾನದ ಯೋಗೇಂದ್ರ ಯಾದವ್ ಸೇರಿದಂತೆ ಏಳು ರೈತ ಮುಖಂಡರಿದ್ದು ಎಲ್ಲರೂ ಈ ಪತ್ರಿಕಾಗೋ಼ಷ್ಠಿಯಲ್ಲಿ ಭಾಗವಹಿಸಿದರು. ರೈತರ ಈ ಚಾರಿತ್ರಿಕ ಹೋರಾಟ ಖಂಡಿತಾ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಇದಕ್ಕೆ ಮೊದಲು ಜನವರಿ 1ರಂದು ದಿಲ್ಲಿಯ ಗಡಿಗಳಲ್ಲಿ ಇರುವ ರೈತರೊಡನೆ, ಮತ್ತು ದೇಶಾದ್ಯಂತ “ರೈತರನ್ನು ಉಳಿಸಿ-ದೇಶ ಉಳಿಸಿ” ಪ್ರತಿಜ್ಞಾ ದಿನಾಚರಣೆ ವ್ಯಾಪಕವಾಗಿ ನಡೆದಿವೆ, ಕಾರ್ಮಿಕ ಸಂಘಟನೆಗಳು ಮತ್ತು ಇತರ ಜನವಿಭಾಗಗಳವರೂ ಇದರಲ್ಲಿ ಭಾಗವಹಿಸಿದರು ಎಂಬ ವರದಿಗಳು ಬಂದಿವೆ.
ರಾಜಧಾನಿಯಲ್ಲಿ ಇಂದು ಕೊರೆಯುವ ಚಳಿಯೊಂದಿಗೆ ಮಳೆಯೂ ಸೇರಿಕೊಂಡು ಅತ್ಯಂತ ಪ್ರತಿಕೂಲ ವಾತಾವರಣದಲ್ಲೂ ಜಗ್ಗದೆ ತಮ್ಮ ಹೋರಾಟವನ್ನು ರೈತರು ಮುಂದುವರೆಸಿದ್ದಾರೆ.