ಬೆಂಗಳೂರು,ಜ,25 : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿ ಇದೇ ಜನವರಿ 26 ರಂದು ಬೆಂಗಳೂರಿನಲ್ಲಿ ರೈತರ ಜನಗಣರಾಜ್ಯೋತ್ಸವ ಪೆರೇಡ್ ನಡೆಯಲಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದೆ.
ರೈತ ವಿರೋಧಿ ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಗಣರಾಜ್ಯೋತ್ಸವ ದಿನದಂದು ರೈತರು ದೆಹಲಿಯಲ್ಲಿ ಹಮ್ಮಿಕೊಂಡಿರುವ ರೈತ ಪೆರೇಡ್ ಬೆಂಬಲಿಸಿ ರಾಜಧಾನಿ ಬೆಂಗಳೂರಿನಲ್ಲಿ 10 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್, ಟ್ರಕ್ಗಳೊಂದಿಗೆ ಬೃಹತ್ ಪರೇಡ್ ನಡೆಸಲಿದೆ.
ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆನ್ನು ಕೂಗು ಆಳುವ ವರ್ಗಕ್ಕೆ ಮುಟ್ಟಿಸಲು ಅಸಂಖ್ಯಾತ ರೈತರು ರಾಜ್ಯದ ಮೂಲೆ ಮೂಲೆಗಳಿಂದ ರಾಜ್ಯಧಾನಿಗೆ ಆಗಮಿಸುತ್ತಿದ್ದಾರೆ. ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಕಳೆದ ಎರಡು ತಿಂಗಳಿಂದಲ್ಲೂ ಹೋರಾಟ ನಡೆಸುತ್ತಿದ್ದಾರೆ. ಆದರೆ ಆಡಳಿತ ವರ್ಗ ಮಾತ್ರ ರೈತರ ಹೋರಾಟಕ್ಕೆ ಮೌನ ಮುರಿಯುತ್ತಿದೆ. ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಲಿವೆ ಎಂದು ರೈತ ಸಂಘಟನೆಗಳು ತಿಳಿಸಿವೆ.
ಅನ್ನದಾತನ ಸಂಕಷ್ಟಗಳನ್ನು ಕೇಳದ ಸರ್ಕಾರಕ್ಕೆ ಟ್ರ್ಯಾಕ್ಟರ್, ಟ್ರಕ್ಗಳ ಮೂಲಕ ರೈತರು ಜ.26 ಗಣರಾಜ್ಯೋತ್ಸವ ದಿನದಂದು ರಾಜ್ಯಧಾನಿಗೆ ಆಗಮಿಸಲು ಕಮಿಷನರ್ ಕಮಲ್ ಪಂಥ ಅನುಮತಿ ಕೊಟ್ಟಿಲ್ಲ. ದೆಹಲಿಯಲ್ಲಿ ನಡೆಯುವ ರೈತ ಹೋರಾಟಕ್ಕೆ ಅನುಮತಿ ಸಿಕ್ಕಿದೆ ಆದರೆ ಕರ್ನಾಟಕದಲ್ಲಿ ಯಾಕೆ ಅನುಮತಿ ಇಲ್ಲ? ಎಂದು ರೈತ ಮುಖಂಡರು ಪ್ರಶ್ನಿಸಿದ್ದಾರೆ.
ಪ್ರಮುಖ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ನಾವು ಶಾಂತಯುತವಾಗಿ ರ್ಯಾಲಿ ನಡೆಸುತ್ತೇವೆ. ಸಾರ್ವಜನಿಕರಿಗಾಗಲಿ ಅಥವಾ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯಾಗದಂತೆ ನಮ್ಮ ರೈತರು ಪೇರೆಡ್ ನಡೆಸಲಿದ್ದಾರೆ. ಇದಕ್ಕೆ ಕಮಿಷನರ್ ಅನುಮತಿ ನೀಡಬೇಕು. ಅನುಮತಿ ನೀಡದಿದ್ದರೆ ಬೆಂಗಳೂರು ಪ್ರಮುಖ ಹೆದ್ದಾರಿಗಳು ಬಂದ್ ಆಗಲಿವೆ ಎಂದು ರೈತ ಮುಖಂಡರು ಎಚ್ಚರಿಸಿದ್ದಾರೆ.
ಈ ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಚಾಮರಸ್ ಮಾಲೀಪಾಟೀಲ್, ಪ್ರಾಂತ ರೈತಸಂಘದ ಯು. ಬಸವರಾಜ, ಆರ್.ಕೆ.ಎಸ್. ನ ಸುನೀತ್ ಕುಮಾರ್, ಜೆಸಿಟಿಯು ನ ಕೆ.ವಿ ಭಟ್, ದಲಿತ ಮುಖಂಡ ಮಾವಳ್ಳಿ ಶಂಕರ್, ಪ್ರಾಂತ ಕೂಲಿಕಾರ ಸಂಘಟನೆಯ ನಿತ್ಯಾನಂದ ಸ್ವಾಮಿ, ಕರ್ನಾಟಕ ಜನಶಕ್ತಿಯ ಕುಮಾರ ಸಮತಳ, SFI ನ ವಾಸುದೇವರೆಡ್ಡಿ, AIDSO ನ ಅಜಯ್ ಕಾಮತ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.