“ಕಾರ್ಪೊರೇಟ್ ಶೋಷಣೆಯ ವಿರುದ್ಧ ಜನತೆಯ ಐಕ್ಯರಂಗದತ್ತ ಸಾಗೋಣ”
ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ ಬಂದ್ ಕರೆಯನ್ನು ಎಲ್ಲ ವಿಭಾಗಗಳಿಗೆ ಸೇರಿದ ಜನಗಳು ಒಂದು ಭವ್ಯ ಐತಿಹಾಸಿಕ ಯಶಸ್ವೀ ಕಾರ್ಯಾಚರಣೆಯಾಗಿ ಮಾಡಿದ್ದಾರೆ ಎಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಅಪಾರ ಹರ್ಷ ವ್ಯಕ್ತಪಡಿಸಿದೆ, ಹಾಗೂ ಈ ಎಲ್ಲ ಜನವಿಭಾಗಗಳನ್ನು ಅದು ಅಭಿನಂದಿಸಿದೆ, ಈಗ ಕಾರ್ಪೊರೇಟ್ ಶಕ್ತಿಗಳೇ ಕೃಷಿಯತ್ತ ಕೈಚಾಚಬೇಡಿ, ಮೋದಿ-ಷಾ ಅಧಿಕಾರದಿಂದ ಕೆಳಗಿಳಿಯಿರಿ ಎಂಬುದು ಈ ಕಾರ್ಯಾಚರಣೆಯ ಮುಖ್ಯ ಘೋಷಣೆಯಾಗಿತ್ತು ಎಂದು ಅದು ಹೇಳಿದೆ.
ಇದನ್ನು ಓದಿ: ಭಾರತ ಬಂದ್: ಹೆದ್ದಾರಿಗಳು, ರೈಲು ಹಳಿಗಳು, ಟೋಲ್‍ಗಳಲ್ಲಿ ರೈತರ ಪ್ರತಿಭಟನೆ
ದೇಶದ ವಿವಿಧೆಡೆಗಳಿಂದ ವರದಿಗಳನ್ನು ನೋಡಿದರೆ ರೈತರ ಹೋರಾಟ ದೇಶವ್ಯಾಪಿ ಚಾರಿತ್ರ್ಯವನ್ನು ಪಡೆಯುತ್ತಿದೆ ಎಂಬುದನ್ನು ಒತ್ತಿಹೇಳುತ್ತಿದೆ. ಮಹಿಳೆಯರು, ಹಿರಿಯರು, ಯುವಜನ ಮತ್ತು ಮಕ್ಕಳು ಕೂಡ ದೇಶಾದ್ಯಂತ ಪ್ರತಿಭಟನಾ ಕಾರ್ಯಾಚರಣೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಭಾಗವಹಿಸುತ್ತಿರುವುದು ಕಾಣ ಬಂದಿದೆ. ಬಿಜೆಪಿ ಆಳ್ವಿಕೆಯ ಉತ್ತರಪ್ರದೇಶ, ಗುಜರಾತ್ ಮತ್ತು ತ್ರಿಪುರಾದಲ್ಲಿ ಕೂಡ ಬಂದ್ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಉಂಟು ಮಾಡಿದೆ. ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಸಂಚಾರ ಸ್ತಬ್ಧಗೊಂಡವು.ಉತ್ತರಪ್ರದೇಶದಲ್ಲಿ ಪ್ರಧಾನ ಮಂತ್ರಿಗಳ ಚುನಾವಣಾ ಕ್ಷೇತ್ರದಲ್ಲಿ ವ್ಯಾಪಕ ಮತಪ್ರದರ್ಶನಗಳು ನಡೆದವು, ಸಾವಿರಾರು ಸಂಖ್ಯೆಯಲ್ಲಿ ಜನಗಳು, ಬಹುಪಾಲು ಮಹಿಳೆಯರು ಭಾಗವಹಿಸಿದ್ದಾರೆ. ಕೇಂದ್ರ ಕೃಷಿ ಮಂತ್ರಿ ನರೇಂದ್ರ ಸಿಂಗ್ ತೋಮರ್ ರವರ ಕ್ಷೇತ್ರ ಮಧ್ಯಪ್ರದೇಶದ ಮೊರೆನದಲ್ಲಿ ಸಂಪೂರ್ಣ ಬಂದ್ ನಡೆದಿದೆ.
ಭಾರತ ಬಂದ್ ನ ಬೃಹತ್ ಸ್ವರೂಪ ಮತ್ತು ಅಹಿಂಸಾತ್ಮಕ ಸ್ವಭಾವ ಗಮನಾರ್ಹ ಎಂದು ಎಐಕೆಎಸ್ ಹೇಳಿದೆ. ಪೋಲೀಸರು ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ ಘಟನೆಗಳು ಪಶ್ಚಿಮ ಬಂಗಾಲ ಮತ್ತು ತ್ರಿಪುರಾದಿಂದ ವರದಿಯಾಗಿವೆ. ಇದು ಚಳುವಳಿಯ ಸಾಮೂಹಿಕ ಸ್ವರೂಪವನ್ನು, ಮತ್ತು ಗುರಿ ಸಾಧಿಸುವ ವರೆಗೂ ಹೋರಾಟ ನಡೆಸುವ ಜನರ ದೃಢನಿರ್ಧಾರವನ್ನು ತೋರಿಸುತ್ತದೆ ಎಂದು ಎಐಕೆಎಸ್ ಹೇಳಿದೆ.
ಪಂಜಾಬ್, ಹರ್ಯಾಣ, ಕೇರಳ, ತ್ರಿಪುರಾ, ತಮಿಳುನಾಡು, ಬಿಹಾರ, ತೆಲಂಗಾಣ, ಆಂಧ್ರಪ್ರದೆಶ, ರಾಜಸ್ತಾನ, ಒಡಿಶ ಮತ್ತು ಪಶ್ಚಿಮ ಬಂಗಾಲದಲ್ಲಿ ಬಂದ್ ಕರೆಗೆ ದೊಡ್ಡ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗಿದೆ. ಮಹಾರಾಷ್ಟ್ರ, ಉತ್ತರಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಝಾರ್ಖಂಡ್, ಅಸ್ಸಾಂ, ಕರ್ನಾಟಕ, ಹಿಮಾಚಲ ಪ್ರದೇಶ, ಮಣಿಪುರ ಮತ್ತು ಗುಜರಾತಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬಂದ್ ಯಶಸ್ವಿಯಾಗಿ ನಡೆದಿದೆ. ಹಲವೆಡೆಗಳಲ್ಲಿ ದೊಡ್ಡ ಮತಪ್ರದರ್ಶನಗಳು, ರೈಲ್ ರೋಕೋ, ರಾಸ್ತಾ ರೋಕೋಗಳು ನಡೆದಿವೆ.
ಇದನ್ನು ಓದಿ: ಭಾರತ್ ಬಂದ್ ರಾಜ್ಯದ ಹಲವೆಡೆ ಪ್ರತಿಭಟನೆಯ ಬಿಸಿ: ಕೇಂದ್ರದ ವಿರುದ್ಧ ಮೊಳಗಿದ ರಣಕಹಳೆ
ಭಾರತ ಬಂದ್ ನ ಭವ್ಯ ಯಶಸ್ಸಿನಲ್ಲಿ ಕಾರ್ಮಿಕ ಸಂಘಗಳು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಎಐಕೆಎಸ್ ಹಲವು ಪ್ರತಿಪಕ್ಷಗಳೂ ಈ ಕಾರ್ಯಾಚರಣೆಯನ್ನು ಬೆಂಬಲಿಸಿವೆ ಎಂದು ಹೇಳಿದೆ. ಕೃಷಿ ಕೂಲಿಕಾರರು, ಮಹಿಳೆಯರು, ಯುವಜನರು, ವಿದ್ಯಾರ್ಥಿಗಳು , ವ್ಯಾಪಾರಸ್ಥರು ಮತ್ತು ಇತರೆಲ್ಲ ರಂಗಗಳ ಜನರು ಭಾರತ ಬಂದ್‍ನ ಯಶಸ್ಸಿನ ಅವಿಭಾಜ್ಯ ಅಂಗವಾಗಿದ್ದಾರೆ ಎಂದೂ ಅದು ಸಂತಸ ವ್ಯಕ್ತಪಡಿಸಿದೆ.
ಕಳೆದ ಕೆಲವು ವರ್ಷಗಳ ಹೋರಾಟಗಳಲ್ಲಿ ಕಾರ್ಮಿಕರು ಮತ್ತು ರೈತರ ಐಕ್ಯತೆಯ ಗಟ್ಟಿಯಾದ ವರ್ಗ ಸ್ವರೂಪ ಈಗ ಕಾರ್ಪೊರೇಟ್ ಶೋಷಣೆಯ ವಿರುದ್ಧ, ವಿಶೇಷವಾಗಿ ಕೃಷಿ, ಕೈಗಾರಿಕೆ ಮತ್ತು ಸೇವಾವಲಯಗಳಲ್ಲಿನ ಕಾರ್ಪೊರೇಟ್ ಶೋಷಣೆಯ ವಿರುದ್ಧ ಒಂದು ವ್ಯಾಫಕವಾದ ಜನತೆಯ ಐಕ್ಯರಂಗವನ್ನು ಕಟ್ಟುವತ್ತ ಹಾದಿ ಮಾಡಿಕೊಟ್ಟಿರುವುದು ಈ ಭಾರತ ಬಂದ್‍ನ ರಾಜಕೀಯ ದಿಕ್ಕನ್ನು ತೋರಿಸಿದೆ ಎಂದು ಎಐಕೆಎಸ್ ಅಭಿಪ್ರಾಯ ಪಟ್ಟಿದೆ. ಕಾರ್ಪೊರೇಟ್ ಹಿತಾಸಕ್ತಿಗಳ ರಕ್ಷಣೆಗೆ ನಿಲ್ಲುವ ರಾಜಕೀಯ ಪಕ್ಷಗಳು ಜನಗಳ
ಅಕ್ರೋಶವನ್ನು ಎದುರಿಸಬೇಕಾಗಿ ಬರುತ್ತದೆ, ಎದ್ದು ಬರುವ ಜನತೆಯ ಪ್ರತಿರೋಧದ ಈ ಆಂದೋಲನ ಅವರನ್ನು ಹಿಂದಕ್ಕೆ ನೂಕುತ್ತದೆ ಎಂದು ಎಐಕೆಎಸ್ ಎಚ್ಚರಿಸಿದೆ.