ಬರ್ಮಿಂಗ್ಹ್ಯಾಮ್: ಭಾರತದ ಪ್ಯಾರಾ ಪವರ್ ಲಿಫ್ಟರ್ ಸುಧೀರ್, 212 ಕೆಜಿ ಭಾರ ಎತ್ತುವ ಮೂಲಕ ಕಾಮನ್ವೆಲ್ತ್ ಕ್ರೀಡಾಕೂಟ ದಾಖಲೆ ನಿರ್ಮಿಸುವ ಮೂಲಕ ಇತಿಹಾಸ ಸೃಷ್ಠಿಸಿದ್ದಾರೆ. ಆಟದಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಲಾಂಗ್ಜಂಪ್ನಲ್ಲಿ 44 ವರ್ಷಗಳ ಬಳಿಕ ಬೆಳ್ಳಿ ಪದಕವನ್ನು ಜಯಿಸಲಾಗಿದ್ದು, ಈ ಸಾಧನೆಯನ್ನು ಮುರಳಿ ಶ್ರೀಶಂಕರ್ ಅವರು ಮಾಡಿದ್ದಾರೆ.
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ 7ನೇ ದಿನವೂ ಉತ್ತಮ ಪ್ರದರ್ಶನ ನೀಡಿದ್ದು, ಒಂದು ಚಿನ್ನ ಮತ್ತೊಂದು ಬೆಳ್ಳಿ ಪದಕವನ್ನು ಪಡೆದುಕೊಂಡಿದೆ.
ಪುರುಷರ ಪ್ಯಾರಾ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಸುಧೀರ್ ತಮ್ಮ ಮೊದಲ ಪ್ರಯತ್ನದಲ್ಲಿ 208 ಕೆ.ಜಿ ಭಾರವನ್ನು ಎತ್ತಿದರು. ಇದರಿಂದ 134.5 ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನ ಗಳಿಸಿದರು. ಪ್ಯಾರಾ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಸುಧೀರ್ ಅವರದಾಗಿದೆ.
ಇದೇ ಸ್ಪರ್ಧೆಯಲ್ಲಿ ಪ್ರತಿಸ್ಪರ್ಧಿಗಳಾಗಿದ್ದ ನೈಜೀರಿಯಾದ ಇಕೆಚುಕ್ವು ಕ್ರಿಶ್ಚಿಯನ್ ಉಬಿಚುಕ್ವು ಬೆಳ್ಳಿ ಮತ್ತು ಸ್ಕಾಟ್ಲೆಂಡ್ನ ಮಿಕ್ಕಿ ಯೂಲ್ ಕಂಚಿನ ಪದಕ ಗೆದಿದ್ದಾರೆ. ಕ್ರಿಸ್ಟಿಯನ್ 197 ಕೆಜಿ ಎತ್ತಿದರೆ ಯೂಲ್ 192 ಕೆಜಿ ಎತ್ತಿದರು.
ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಗುರುವಾರ ತಡರಾತ್ರಿ ನಡೆದ ಪ್ಯಾರಾ ಭಾರ ಎತ್ತುವ ಸ್ಪರ್ಧೆಯಲ್ಲಿ ಹರ್ಯಾಣದ ಸೋನೆಪತ್ ಮೂಲದವರಾದ ಸುಧೀರ್, ಭಾರತಕ್ಕೆ ಆರನೇ ಚಿನ್ನದ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಸುಧೀರ್ 2013ರಿಂದ ಭಾರ ಎತ್ತುವ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಅವರು ಈಗಾಗಲೇ ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯಾ ಒಕೆಶನ್ ಓಪನ್ ಚಾಂಪಿಯನ್ ಶಿಪ್ನಲ್ಲಿ 88 ಕೆಜಿ ವಿಭಾಗದ ಪುರುಷರ ವಿಭಾಗದಲ್ಲಿ 214 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಗೆದ್ದಿದ್ದರು. 2022ರ ಏಷ್ಯಾ ಪ್ಯಾರಾ ಗೇಮ್ಸ್ಗೂ ಅವರು ಅರ್ಹತೆ ಪಡೆದಿದ್ದಾರೆ. ಈ ನಡುವೆ ಕಾಮನ್ವೆಲ್ತ್ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ದೂರ ಜಿಗಿತದಲ್ಲಿ 44 ವರ್ಷಗಳ ಬಳಿಕ ಬೆಳ್ಳಿ
ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ನಡೆದ ಪುರುಷರ ವಿಭಾಗದ ದೂರ ಜಿಗಿತದಲ್ಲಿ ಮುರಳಿ ಶ್ರೀಶಂಕರ್ ಬೆಳ್ಳಿ ಗೆದ್ದು ಸಾಧನೆ ಮಾಡಿದ್ದಾರೆ. ವಿಶೇಷ ಎಂದರೆ ಕಾಮನ್ವೆಲ್ತ್ ಕ್ರೀಡಾ ಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಪುರುಷ ಎಂಬ ಖ್ಯಾತಿಯೂ ಇವರದ್ದಾಗಿದೆ.
ಭಾರತದ ದೂರ ಜಿಗಿತ ಪಟು ಕೇರಳದ ಪಾಲಕ್ಕಾಡ್ ಮೂಲದ 23 ವರ್ಷದ ಮುರಳಿ ಶ್ರೀಶಂಕರ್, ಕಾಮನ್ವೆಲ್ತ್ ಕ್ರೀಡಾ ಕೂಟದ ದೂರ ಜಿಗಿತ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ಪುರುಷ ಅಥ್ಲೀಟ್ ಎನ್ನುವ ಕೀರ್ತಿಗೂ ಪಾತ್ರರಾಗಿದ್ದಾರೆ.
ಈ ಸ್ಪರ್ಧೆಯಲ್ಲಿ ಬಹಮಾಸ್ ದೇಶದ ಲಖೌನ್ ನೈರನ್ ಎರಡನೇ ಪ್ರಯತ್ನದಲ್ಲೇ 8.08 ಮೀಟರ್ ದೂರ ಜಿಗಿಯುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಮುರುಳಿ ಶ್ರೀಶಂಕರ್ ತಮ್ಮ ಐದನೇ ಪ್ರಯತ್ನದಲ್ಲೇ 8.08 ಮೀಟರ್ ದೂರ ಜಿಗಿದಿದ್ದರು. 12 ಕ್ರೀಡಾ ಪಟುಗಳು ಪಾಲ್ಗೊಂಡಿದ್ದ ಸ್ಪರ್ಧೆಯಲ್ಲಿ ಮುರುಳಿ ಶ್ರೀಶಂಕರ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಇನ್ನು ಭಾರತದವರೇ ಆದ ಮತ್ತೋರ್ವ ಪಟು ಮೊಹಮ್ಮದ್ ಅನೀಸ್ 7.97 ಮೀಟರ್ ದೂರ ಜಿಗಿಯುವ ಮೂಲಕ ಕಾಮನ್ವೆಲ್ತ್ ಕ್ರೀಡಾ ಕೂಟದ ಫೈನಲ್ ಸ್ಪರ್ಧೆಯಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಈ ಹಿಂದೆ ಹಿರಿಯ ಕ್ರೀಡಾಪಟು ಸುರೇಶ್ಬಾಬು 1978ರ ಕಾಮನ್ವೆಲ್ತ್ ಕ್ರೀಡಾ ಕೂಟದಲ್ಲಿ ಕಂಚು ಗೆದ್ದಿದ್ದರು. ಇದೀಗ ಮುರುಳಿ ಶ್ರೀಶಂಕರ್, ಸುರೇಶ್ ಬಾಬು ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. 1978ರಲ್ಲಿ ಕೆನಡಾದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸುರೇಶ್ ಬಾಬು ದೂರ ಜಿಗಿಯುವ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು.
ಜುಲೈ 29ರಿಂದ ಆರಂಭವಾದ ಕಾಮನ್ವೆಲ್ತ್ ಕ್ರೀಡಾಕೂಟದ 7ನೇ ದಿನದ ಅಂತ್ಯದ ಸ್ಪರ್ಧೆಯಲ್ಲಿ ಆರು ಜಿನ್ನ, ಏಳು ಬೆಳ್ಳಿ, ಏಳು ಕಂಚಿನ ಪದಕ ಜಯಿಸಿದ್ದು, ಇದುವರೆಗೆ ಒಟ್ಟು 20 ಪದಕವನ್ನು ಗೆಲ್ಲುವಲ್ಲಿ ಅಥ್ಲೇಟ್ಗಳು ಸಾಧನೆ ಮಾಡಿದ್ದಾರೆ. ಆಗಸ್ಟ್ 08ರಂದು ಸ್ಪರ್ಧೆ ಕೊನೆಗೊಳ್ಳಲಿದೆ.