ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರ ವರೆಗೆ ಜನಶಕ್ತಿ ವೆಬ್ ಪತ್ರಿಕೆ ಲೋಕಾರ್ಪಣೆಯ ಭಾಗವಾಗಿ ಕರ್ನಾಟಕ 2020 ಕೊರೊನಾ ಕಾಲದಲ್ಲಿ ಮತ್ತು ನಂತರ ಕುರಿತ ಬರಹ ಮತ್ತು ವೆಬಿನಾರುಗಳ ಸರಣಿಯ ಮೂಲಕ ಆಯೋಜಿಸಲಾಗಿದ್ದ ‘ಕೊರೊನಾ ಕಾಲದಲ್ಲಿ ಕಾಡಿದ ಕವನ, ಮೂಡಿದ ಕತೆ : ಯುವಜನರಿಗೆ ಕತೆ ಮತ್ತು ಕವನ ಸ್ಪರ್ಧೆ’ಯಲ್ಲಿ ಮೂರನೇ ಬಹುಮಾನ ಪಡೆದ ಕವಿತೆ.
ಪೇಟೆಯಲ್ಲೀಗ ಯಾರೂ ಯಾರ ಜಾತಿಯನ್ನೂ
ಕೇಳುವುದಿಲ್ಲ ಬಾಬಾಸಾಹೇಬ್
ಆದರೆ ಪ್ರಶ್ನೆಗಳು ಬೇರೆಯಾಗಿವೆ
ಮುಟ್ಟಿಸಿಕೊಳ್ಳುತ್ತಾರೆ
ಆದರೆ ಕೆಲವು ಷರತ್ತುಗಳು ಅನ್ವಯಿಸುತ್ತವೆ
ಧರ್ಮಸ್ಥಾವರಗಳು ತಮ್ಮ ಹೆಬ್ಬಾಗಿಲಿಗೆ
ಸುಸ್ವಾಗತದ ಬೋರ್ಡು ಜಡಿದುಕೊಂಡಿವೆ
ಆದರೆ ಲಿಂಗಭೇದವ ಪ್ರಶ್ನಿಸುವ ಹಾಗಿಲ್ಲ
ನಳದ ನೀರು ಈಗ ಭೇದವೆಣಿಸುತ್ತಿಲ್ಲ
ಆದರೆ ಗಂಗವ್ವ ಬಾಟಲಿಗಳಲ್ಲಿ ದುಬಾರಿ ಬೆಲೆಗೆ ಮಾರಾಟಕ್ಕಿದ್ದಾಳೆ
ಪ್ರತಿಭೆಗೆ ಮಾತ್ರ ಮಣೆ ಎನ್ನುತ್ತಾರೆ ಬಾಬಾಸಾಹೇಬ್
ಅವಕಾಶದ ಬಾಗಿಲುಗಳು ಎಲ್ಲರಿಗೂ ತೆರೆಯುವುದಿಲ್ಲ
ಉಡುಪಿ ಹೋಟೆಲ್ ಬ್ರಾಹ್ಮಣ ಕೆಫೆ
ಅಯ್ಯಂಗಾರ್ ಬೇಕರಿಗೆ ಭರ್ಜರಿ ಬೇಡಿಕೆಯಿದೆ
ಶಹರ ಪೂರ್ತಿ ಸುತ್ತಿದರೂ ದಲಿತರ ಹೆಸರಿನ ಹೋಟೆಲ್
ಕಾಣಸಿಗುವುದಿಲ್ಲ
ಉದರ ನಿಮಿತ್ತ ವ್ಯಾಪಾರಕ್ಕೆ ಜಾತಿ ಮುಖ್ಯವಂತೆ!!!
ಏಣಿಯ ತುದಿಯಲ್ಲಿರುವ ದಲಿತರು ತಮ್ಮ ಅಸ್ಮಿತೆಯನ್ನು
ಕಣ್ಣಾಮುಚ್ಚಾಲೆಯಲ್ಲಿ ಬಚ್ಚಿಟ್ಟುಬಿಟ್ಟಿದ್ದಾರೆ
ಪಂಚಭೂತಗಳಿಗೆ ದೇಶದೊಳಗೆಲ್ಲ ಹೊಸ ಹೊಸ ಗಡಿಗಳೆದ್ದಿವೆ
ಹಳ್ಳಿಗಳಲ್ಲಿ ಪರಿಸ್ಥಿತಿ ಹದಗೆಟ್ಟು ಹೋಗಿದೆಯಂತೆ
ಕಣ್ಣಾರೆ ಕಂಡವರು ಬಾಯ್ತುಂಬ ಹೇಳಿದ್ದನ್ನು
ಕಿವಿಯಾರೆ ಕೇಳಿಸಿಕೊಂಡು ಹೇಳುತ್ತಿರುವೆ ಬಾಬಾಸಾಹೇಬ್
ಇಲ್ಲ
ಸುದ್ದಿಮಾಧ್ಯಮಗಳು ಸತ್ಯ ಹೇಳುವುದು ಬಿಟ್ಟು ಕಾಲವಾಗಿದೆ
ರಾಜಕಾರಣಿಗಳಂತೆ ಎಲ್ಲರೂ ಪ್ರಮಾಣ ಮಾಡುತ್ತಾರೆ
ಮಹಾತ್ಮ ಹೇಳಿದ್ದ ಅಂತರಂಗ ಶುದ್ಧಿ ಮರೆತುಹೋಗಿದೆ
ಮಹಾತ್ಮ ನೋಟಿನಲ್ಲಿ ದುಃಖದಿಂದ ನಗುತ್ತಾರೆ
ಅವರ ಚಾಳೀಸು ಸ್ವಚ್ಛತೆಯ ರಾಯಭಾರಿಯಾಗಿಬಿಟ್ಟಿದೆ
ವಿಜಯನಗರದ ಮುತ್ತುರತ್ನಗಳಂತೆ
ನನ್ನ ವಿಶ್ವಗುರು ನಗರಿಯಲ್ಲಿ
ಸಂಕೇತಗಳು ಪುಕ್ಕಟೆಗೆ ಮಾರಾಟಕ್ಕಿವೆ
ಪುತ್ಥಳಿ, ದೀಪ, ಗಂಟೆ, ಜಾಗಟೆ, ಗೋಮೂತ್ರ
ಬಿಡಿ ಬಿಡಿ ಬಣ್ಣದ ಬಾವುಟಗಳು ಒಂದೇ ಎರಡೆ
ನೀವು ಹೇಳಿದ ಸಾಮಾಜಿಕ ನ್ಯಾಯ
ಕಾಗದದಲ್ಲಿ ಭದ್ರವಾಗಿದೆ ಬಾಬಾಸಾಹೇಬ್
ಮೊನ್ನೆ ಯಾವನೋ ತಲೆತಿರುಕ ಸಂವಿಧಾನ
ಬದಲಾಯಿಸುತ್ತೇವೆ ಎಂದು ಹೇಳಿಕೆ ಕೊಟ್ಟ
ಇಲ್ಲಿ ಎಲ್ಲರಿಗೂ ನಂಜು ತಾಕಿಬಿಟ್ಟಿದೆ
ಆದರೂ
ಇಲ್ಲಿ ಎಲ್ಲಾ ಸರಿಯಿದೆ ಎಂದು ನಡುವೆ ನಿಂತವರು
ಬೊಂಬಡಾ ಹೊಡೆಯುತ್ತಾರೆ ಬಾಬಾಸಾಹೇಬ್
ಕೆಲವರು ಕವಿತೆಯನ್ನು ನೇರವಾಗಿ ಹೇಳಬಾರದು ಕಣ್ರೀ
ವಾಚ್ಯ ವಾಚ್ಯ ಪ್ರಾರಬ್ಧವೆಂದು ತಿರಸ್ಕರಿಸುತ್ತಾರೆ
ಕವಿತೆಗೆ ಕಹಿ ತಾಕಬಾರದೆಂದು ವಾದಿಸುತ್ತಾರೆ
ರಮ್ಯವಾದ ರೂಪಕಗಳು ಸತ್ಯವನ್ನು ಸೊರಗಿಸಿಬಿಡುತ್ತವೆ
ಇವನ್ನೆಲ್ಲ ಇನ್ಯಾರಿಗೆ ಹೇಳಲಿ ಬಾಬಾಸಾಹೇಬ್
ಹಗುರಾಗಲು ಕವಿತೆ ಬರೆಯಹೊರಟು
ಮತ್ತೆ ಹೃದಯ ಭಾರವಾಗಿದೆ
ಕಿತ್ತು ತಿನ್ನುವ ಹಸಿವಿನ ಹೊಟ್ಟೆಗೆ
ಓದು ಹೋರಾಟ ಕವಿತೆ ಸಮತೆ ಘನತೆಗಳ ಬಿಡಿಬಿಡಿ
ಶಬ್ದಗಳನ್ನು ಕಿಚ್ಚಿನಿಂದ ತುಂಬಿಕೊಳ್ಳುತ್ತಿರುವೆ
ಕಣ್ಣಿನಲ್ಲಿ ಸಮತೆಯ ಕನಸನ್ನು ಕಾಪಿಟ್ಟಿರುವೆ
ಎಂದೂ ಮುಗಿಯದ ಕಥನಗಳ ಕಾಲದಲ್ಲಿ
‘ಇತಿ ಭಾರತದ ದಲಿತ’ ಎಂದು ಹೆಮ್ಮೆಯಿಂದ
ಕವಿತೆಯನ್ನಾದರೂ ಮುಗಿಸುತ್ತಿರುವೆ ಬಾಬಾಸಾಹೇಬ್
ಈ ಕವಿತೆ ಓದಲು ಲಿಂಕ್ ಕ್ಲಿಕ್ ಮಾಡಿ :ತಲೆಕೆಟ್ಟ ಕವಿಯೊಬ್ಬನ ಲಾಕ್ ಡೌನ್ ಕವಿತೆ