- ಸತತವಾಗಿ ವಿವಾದಾತ್ಮಕ ಹೇಳಿಕೆ ನೀಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಶಿಸ್ತುಕ್ರಮ
ಭೋಪಾಲ್: ಮಧ್ಯಪ್ರದೇಶ ಉಪ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ಗೆ ಹಿನ್ನಡೆಯುಂಟಾಗಿದೆ. ಮಹಿಳಾ ಅಭ್ಯರ್ಥಿ ಬಗ್ಗೆ ಕೀಳುಮಟ್ಟದ ಪದ ಬಳಕೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರ ‘ಸ್ಟಾರ್ ಕ್ಯಾಂಪೇನರ್’ ಮಾನ್ಯತೆಯನ್ನು ಚುನಾವಣಾ ಆಯೋಗ ರದ್ದುಗೊಳಿಸಿದೆ.
ಸತತವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಅವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಚುನಾವಣಾ ಆಯೋಗ ಈ ತೀರ್ಮಾನ ತೆಗೆದುಕೊಂಡಿದೆ. ಬಿಜೆಪಿ ಮಹಿಳಾ ಅಭ್ಯರ್ಥಿಯನ್ನು ‘ಐಟಂ’ ಎಂದು ಲೇವಡಿ ಮಾಡಿದ ಹೇಳಿಕೆಯ ಕುರಿತು ತಮ್ಮ ನಿಲುವನ್ನು 48 ಗಂಟೆಗಳ ಒಳಗೆ ಸ್ಪಷ್ಟಪಡಿಸುವಂತೆ ಆಯೋಗವು ಕಮಲ್ ನಾಥ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಚುನಾವಣಾ ಆಯೋಗವು ನೀಡಿದ್ದ ಎಚ್ಚರಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಕ್ಕಾಗಿ ಮತ್ತು ಪದೇ ಪದೇ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಕಮಲ್ ನಾಥ್ ಅವರ ತಾರಾ ಪ್ರಚಾರಕ ಮಾನ್ಯತೆಯನ್ನು ತೆಗೆದುಹಾಕಲಾಗಿದೆ.
ಹೀಗಾಗಿ ಮಧ್ಯಪ್ರದೇಶ ಉಪ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸುವ ಕಮಲ್ ನಾಥ್ ಅವರ ಪ್ರಯಾಣ, ವಸತಿ ಸೇರಿದಂತೆ ಎಲ್ಲ ಸಂಪೂರ್ಣ ವೆಚ್ಚಗಳನ್ನು ಆ ವಿಧಾನಸಭೆ ಕ್ಷೇತ್ರದಲ್ಲಿನ ಪಕ್ಷದ ಅಭ್ಯರ್ಥಿಯೇ ಭರಿಸಬೇಕಾಗಲಿದೆ.
ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಕಮಲ್ ನಾಥ್, ಕಾಂಗ್ರೆಸ್ ಅಭ್ಯರ್ಥಿಯು ಅತ್ಯಂತ ಸರಳ ವ್ಯಕ್ತಿಯಾಗಿದ್ದು, ಎದುರಾಳಿ ‘ಐಟಂ’ ಇಮಾರ್ತಿ ದೇವಿ ಅವರಂತೆ ಅಲ್ಲ ಎಂದು ಹೇಳಿದ್ದು ಭಾರಿ ವಿವಾದ ಸೃಷ್ಟಿಸಿತ್ತು. ಐಟಂ ಎನ್ನುವುದು ಅವಹೇಳನಾಕಾರಿ ಪದ ಅಲ್ಲ. ಅದನ್ನು ಬೇರೆ ರೀತಿ ಅರ್ಥೈಸುವುದು ಬೇಡ. ನಾನು ಯಾರನ್ನೂ ನೋಯಿಸಲು ಹೀಗೆ ಹೇಳಿಲ್ಲ. ಯಾರಿಗಾದರೂ ನೋವಾದರೆ ವಿಷಾದಿಸುತ್ತೇನೆ, ಆದರೆ ಅದು ಉದ್ದೇಶಪೂರ್ವಕವಲ್ಲ ಎಂದು ಕಮಲ್ ನಾಥ್ ಹೇಳಿದ್ದರು. ಕಮಲ್ ನಾಥ್ ಹೇಳಿಕೆಗೆ ರಾಹುಲ್ ಗಾಂಧಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು.