ಬೆಂಗಳೂರು: ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ಗೆ ಬೆಳ್ಳಂ ಬೆಳಗ್ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಂಬೂ ಬಜಾರ್ ರಸ್ತೆಯಲ್ಲಿರುವ ಜಮೀರ್ ಅಹ್ಮದ್ ಮನೆ ಮೇಲೆ ಇಂದು ಬೆಳಗ್ಗೆ ಐಟಿ ದಾಳಿ ನಡೆದಿದೆ.
ಎರಡು ಇನೋವಾ ಕಾರ್‌ನಲ್ಲಿ ಬಂದಿರುವ ಆರು ಮಂದಿ ಅಧಿಕಾರಿಗಳು ಜಮೀರ್ ಮನೆಯಲ್ಲಿ ಶೋಧ ನಡೆಸುತ್ತಿದ್ದಾರೆ. ಐಟಿ ಅಧಿಕಾರಿಗಳು ಬೆಳಗ್ಗೆ 5. 45ಕ್ಕೆ ಜಮೀರ್ ಮನೆಗೆ ಲಗ್ಗೆ ಇಟ್ಟಿದ್ದಾರೆ. ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಜಮೀರ್ ಅಹ್ಮದ್ ಮನೆ ಹಾಗೂ ಫ್ಲಾಟ್ ಮೇಲೆ ದಾಳಿ ನಡೆಸಿ, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿ ವೇಳೆ ಜಮೀರ್ ಅಹ್ಮದ್‌ಖಾನ್ ಅವರು ಮನೆಯಲ್ಲೇ ಇದ್ದರು ಎಂದು ತಿಳಿದು ಬಂದಿದೆ. ಬೆಂಗಳೂರಿನಲ್ಲಿರುವ ಜಮೀರ್ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಇದರ ಜೊತೆಗೆ ಯುಬಿ ಸಿ.ಟಿಯಲ್ಲಿರುವ ಜಮೀರ್ ಅವರ ಫ್ಲ್ಯಾಟ್ ಮೇಲೂ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಸದ್ಯ ಜಮೀರ್ ಅವರ ಮೊಬೈಲ್ ಫೋನ್ ಸಂಪರ್ಕ ಕಡಿತಗೊಂಡಿದೆ.
ಶಾಸಕ ಜಮೀರ್ ಅಹ್ಮದ್ ಖಾನ್ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ಅನಾಮಧೇಯ ಮೂಲಗಳಿಂದ ಮಾಹಿತಿ ಸಂಗ್ರಹ ಮಾಡಿತ್ತು. ಜಮೀರ್ ಕಳೆದ ಹಣಕಾಸು ವರ್ಷದಲ್ಲಿ ಘೋಷಿಸಿಕೊಂಡ ಆಸ್ತಿಗಿಂತ ದುಪ್ಪಟ್ಟು ಆಸ್ತಿ ಹೊಂದಿರುವ ಬಗ್ಗೆ ಐಟಿ ಮಾಹಿತಿಯನ್ನು ಕಲೆ ಹಾಕಿತ್ತು. ಇತ್ತೀಚೆಗಷ್ಟೇ ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ನಡೆಸಿದ್ದ ಜಮೀರ್, ಬೆಂಗಳೂರಿನಲ್ಲಿ ಭವ್ಯವಾದ ಮನೆಯನ್ನೂ ಕಟ್ಟಿಸಿದ್ದರು. ಶ್ರೀಲಂಕಾದಲ್ಲೂ ಜಮೀರ್ ಅವರ ವ್ಯವಹಾರಗಳಿದ್ದು, ಇನ್ನೊಂದೆಡೆ ಕಾರ್ಯಕ್ರಮಗಳಲ್ಲಿ ಸಹಾಯ ಕೇಳಿ ಬಂದವರಿಗೆ ಸ್ಥಳದಲ್ಲೇ ಹಣವನ್ನೂ ಜಮೀರ್ ಆಗಾಗ ಹಂಚುತ್ತಿದ್ದರು. ಬಡವರಿಗೆ ಹಣ ಹಂಚೋದು ಮೇಲ್ನೋಟಕ್ಕೆ ಜಮೀರ್ ಅವರ ಒಳ್ಳೆಯತನದಂತೆ ಕಂಡರೂ, ಇವರ ಕಾರ್ಯವೈಖರಿ ಐಟಿ ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿತ್ತು. ಹೀಗಾಗಿ ಜಮೀರ್ ಅವರ ಚಲನವಲನಗಳ ಮೇಲೆ ಕಣ್ಣಿಟ್ಟಿರುವ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.