- ಬೆಂಗಳೂರು ಸೇರಿದಂತೆ ಇತರೆಡೆ ಐಟಿ ದಾಳಿ
- ಯಡಿಯೂರಪ್ಪ ಆಪ್ತರ ಮನೆ ಮೇಲೆ ಐಟಿ ದಾಳಿ
- ದಾಳಿ ವೇಳೆ ಮಹತ್ವದ ದಾಖಲೆಗಳನ್ನು ಪಡೆದ ಐಟಿ ತಂಡ
ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಪ್ತ ಉಮೇಶ್ ಮನೆ ಮೇಲೆ ನಿನ್ನೆ (ಅಕ್ಟೋಬರ್ 7) ಐಟಿ ದಾಳಿ ನಡೆಸಲಾಗಿತ್ತು. ಬೆಂಗಳೂರಿನ ರಾಜಾಜಿ ನಗರದಲ್ಲಿರುವ ಭಾಷ್ಯಂ ಸರ್ಕಲ್‌ನಲ್ಲಿರುವ ಅವರ ಮನೆಯಲ್ಲಿ ತಡರಾತ್ರಿಯವರೆಗೂ ಪರಿಶೀಲನೆ ನಡೆದಿತ್ತು. ನೀರಾವರಿ ಕುರಿತ ಟೆಂಡರ್, ಇತರ ಕಡತಗಳನ್ನು ವಶಕ್ಕೆ ಪಡೆಯಲಾಗಿದ್ದು, ದಾಖಲೆಗಳ ಜೊತೆಗೆ ಮೂವರು ಐಟಿ ಅಧಿಕಾರಿಗಳು ಮರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ಬೆಳ್ಳಂ ಬೆಳಗ್ಗೆ ಐಟಿ ಅಧಿಕಾರಿಗಳು ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿರುವ ಉದ್ಯಮಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ. ನಗರದ 50ಕ್ಕೂ ಹೆಚ್ಚು ಕಡೆ 300ಕ್ಕೂ ಹೆಚ್ಚು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ. ಉದ್ಯಮಿಗಳ ಕಂಪನಿ, ಚಾರ್ಟರ್ಡ್ ಅಕೌಂಟೆಂಟ್ ಕಚೇರಿ ಹಾಗೂ ಮನೆಗಳಲ್ಲಿ ಪರಿಶೀಲನೆಯನ್ನು ಮಾಡುತ್ತಿದ್ದಾರೆ. ಬೆಂಗಳೂರು ಮತ್ತು ಗೋವಾ ವಲಯ ಐಟಿ ಅಧಿಕಾರಿಗಳು ದಾಳಿಯ ನೇತೃತ್ವವನ್ನು ಬಹಿಸಿದ್ದರು.
ರಾಹುಲ್ ಎಂಟರ್‌ಪ್ರೈಸಸ್ ಮೇಲಿನ ದಾಳಿ ಅಂತ್ಯ: ರಾಹುಲ್ ಎಂಟರ್‌ಪ್ರೈಸಸ್ ಮೇಲಿನ ಐಟಿ ದಾಳಿ ಅಂತ್ಯವಾಗಿದ್ದು, ರಾತ್ರಿ 11 ಗಂಟೆ ವೇಳೆಗೆ ತಂಡ ಮರಳಿದೆ. ದಾಳಿಯ ವೇಳೆ, ನೀರಾವರಿ ಇಲಾಖೆಗೆ ಸಂಬಂಧಿಸಿದ ದಾಖಲೆಗಳು, ಹಾರ್ಡ್ ಡಿಸ್ಕ್, ಬ್ಯಾಂಕ್ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 10 ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಸಲಾಗಿತ್ತು.
ಕೊಡಿಗೇಹಳ್ಳಿ ಸಹಕಾರ ನಗರದಲ್ಲಿರುವ ರಾಹುಲ್ ಎಂಟರ್ ಪ್ರೈಸಸ್ ಮೇಲೆ ನಿನ್ನೆ (ಅಕ್ಟೋಬರ್ 7) ಐಟಿ ದಾಳಿ ನಡೆದಿತ್ತು. ರಾಹುಲ್ ಎಂಟರ್‌ಪ್ರೈಸಸ್ ಸಿಮೆಂಟ್, ಸ್ಟೀಲ್ ಡೀಲರ್ ಕಚೇರಿಯಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ಪ್ರಾರಂಭಿಸಿದ್ದರು. ಮೂರು ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದರು. ಇದೀಗ ದಾಳಿ ಅಂತ್ಯವಾಗಿದ್ದು, ಅಧಿಕಾರಿಗಳು ಮರಳಿದ್ದಾರೆ.
ಡಿ.ವೈ.ಉಪ್ಪಾರ್ ಕಚೇರಿ ಮೇಲಿನ ದಾಳಿ ಅಂತ್ಯ: ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಆರ್.ಉಪ್ಪಾರ್ ಕಚೇರಿ ಮೇಲಿನ ದಾಳಿ ಕೂಡ ಅಂತ್ಯವಾಗಿದೆ. ಜೊತೆಗೆ ಐಟಿ ಅಧಿಕಾರಿಗಳು ಬಾಗಲಕೋಟೆ ನಗರಕ್ಕೆ ತೆರಳಿ ಅಲ್ಲಿ ಡಿ.ಆರ್.ಉಪ್ಪಾರ್ ಮನೆ ಮೇಲೆ ದಾಳಿ ನಡೆಸಿದ್ದರು. ಕೆಟಗರಿ ಒನ್ ಕಂಟ್ರಾಕ್ಟರ್ ಆಗಿರುವ ಉಪ್ಪಾರ್, ವಿಜಯಪುರ ಮೂಲದ ಗುತ್ತಿಗೆದಾರರಾಗಿದ್ದಾರೆ. ಇದೀಗ ಅವರ ಮನೆಯಲ್ಲೂ ಪರಿಶೀಲನೆ ಮುಗಿದಿದ್ದು, ಅಧಿಕಾರಿಗಳ ತಂಡ ಮರಳಿದೆ.
ಕೊಪ್ಪಳ ಜಿಲ್ಲೆಯಲ್ಲಿ ಗುತ್ತಿಗೆದಾರ ಶ್ರೀನಿವಾಸ ಮನೆ ಮೇಲೆ IT ದಾಳಿ: ಕೊಪ್ಪಳ ಜಿಲ್ಲೆಯಲ್ಲಿ ಗುತ್ತಿಗೆದಾರ ಶ್ರೀನಿವಾಸ ಮನೆ ಮೇಲೆ ಐಟಿ ದಾಳಿ ಮುಂದುವರೆದಿದೆ. ಬೆಂಗಳೂರಿನಲ್ಲಿ ವಾಸವಿರುವ ಗುತ್ತಿಗೆದಾರ ಎಂ.ಶ್ರೀನಿವಾಸ ಅವರಿಗೆ ಗಂಗಾವತಿ ತಾಲೂಕಿನ ಕೋಟಯ್ಯ ಕ್ಯಾಂಪ್ನಲ್ಲಿರುವ ಮನೆ ಇದೆ. ಅಲ್ಲಿ ಹುಬ್ಬಳ್ಳಿಯಿಂದ ಬಂದಿದ್ದ 6 ಜನ ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿ ವೇಳೆ ಹಲವು ದಾಖಲೆ ಪತ್ರವನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ : ಬಿಜೆಪಿ ವರಿಷ್ಠ ಯಡಿಯೂರಪ್ಪ ಪಿಎ ಉಮೇಶ್ ಮನೆ ಮೇಲೆ ಐಟಿ ದಾಳಿ
ಈ ಉಮೇಶ್ ಯಾರು? ಯಡಿಯೂರಪ್ಪಗೆ ಆಪ್ತ ಆಗಿದ್ದು ಹೇಗೆ? : ಶಿವಮೊಗ್ಗ ಜಿಲ್ಲೆ ಆಯನೂರಿನ ನಿವಾಸಿ ಉಮೇಶ್ 2007ರಲ್ಲಿ ಬಿಎಂಟಿಸಿಯ ಚಾಲಕ ಕಂ ನಿರ್ವಾಹಕ ಹುದ್ದೆಗೆ ಆಯ್ಕೆಯಾದರು. ಆದರೆ, ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡಿದ್ದು ಒಂದೇ ವರ್ಷ. 2008ರಲ್ಲಿ ಆಗಿನ ಶಿವಮೊಗ್ಗ ಸಂಸದ ಆಯನೂರು ಮಂಜುನಾಥ ಅವರ ಆಪ್ತ ಸಹಾಯಕನಾಗಿ ನಿಯೋಜನೆ ಮೇರೆಗೆ ತೆರಳಿದ್ದರು. ಮತ್ತೆ ಮರಳಿ ಮಾತೃ ಇಲಾಖೆಗೆ ಹೋಗಲೇ ಇಲ್ಲ. ಬಸ್ ಓಡಿಸುವುದನ್ನು ಬಿಟ್ಟು ವಿಧಾನಸೌಧದಲ್ಲಿ “ಶಕ್ತಿ ಪ್ರದರ್ಶನ” ಬಳಸಿ ಪ್ರಭಾವಿ ವ್ಯಕ್ತಿಯಾಗಿ ಬೆಳೆದವರು.
ಅನ್ಯ ಕಾರ್ಯನಿಮಿತ್ತ ನಿಯೋಜನೆಯಲ್ಲೇ (ಒಒಡಿ) ಮುಂದುವರಿದ ಉಮೇಶ್, ನಂತರ ಶಿವಮೊಗ್ಗ ಸಂಸದರಾದ ಬಿ.ವೈ. ರಾಘವೇಂದ್ರ ಅವರ ಆಪ್ತ ಸಹಾಯಕರಾದರು. ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಿಂದಲೂ ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿಯಂತೆಯೇ ಕೆಲಸ ಮಾಡುತ್ತಿದ್ದಾರೆ.
2019ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಮುಖ್ಯಮಂತ್ರಿ ಸಚಿವಾಲಯದ ಸಿಬ್ಬಂದಿಯಾಗಿ ಒಒಡಿ ಮೇಲೆ ನೇಮಕಗೊಂಡರು. ಯಡಿಯೂರಪ್ಪ ರಾಜೀನಾಮೆ ಬಳಿಕವೂ ಉಮೇಶ್ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಮುಖ್ಯಮಂತ್ರಿ ಸಚಿವಾಲಯದಲ್ಲಿದ್ದರೂ ಯಡಿಯೂರಪ್ಪ ಅವರ ಮಗ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಣತಿಯಂತೆ ಕೆಲಸ ಮಾಡುತ್ತಿರುವ ಆರೋಪ ಹಲವು ಬಾರಿ ಕೇಳಿಬಂದಿತ್ತು.
ಉಮೇಶ್ ಅವರು ಮಾಜಿ ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಮೂವರಿಗೂ ಪಿಎ ರೀತಿ ಕೆಲಸ ಮಾಡುತ್ತಿದ್ದರು. ರಾಘವೇಂದ್ರ ಬೆಂಗಳೂರಿಗೆ ಬಂದಾಗ ಅವರ ಕೆಲಸಗಳ ನಿರ್ವಹಣೆ ಮಾಡುತ್ತಿದ್ದರು. ಯಡಿಯೂರಪ್ಪ ವಿಪಕ್ಷ ನಾಯಕರಾಗಿದ್ದಾಗ ಮತ್ತು ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ಉಮೇಶ್ ಪಿಎ ಆಗಿದ್ದರು.
ಬಿಎಂಟಿಸಿಯಿಂದ ಮಾಸಿಕ ₹ 32,000 ನಿವ್ವಳ ವೇತನ ಪಡೆಯುವ ಉಮೇಶ್, ಬೆಂಗಳೂರಿನ ನಾಗಸಂದ್ರ ಬಳಿ ಬೃಹತ್ ಮನೆಯೊಂದನ್ನು ನಿರ್ಮಿಸಿರುವುದನ್ನು ಆದಾಯ ತೆರಿಗೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಯಡಿಯೂರಪ್ಪ ಅವರ ಮನೆಯ ಹೆಸರು ‘ಧವಳಗಿರಿ’. ಅವರ ಕುಟುಂಬದವರು ಹೊಂದಿರುವ ಕಂನಿಯ ಹೆಸರೂ ‘ಧವಳಗಿರಿ ಡೆವಲಪರ್ಸ್’. ಅದೇ ರೀತಿ ಉಮೇಶ್ ತನ್ನ ಮನೆಗೆ ‘ಧವಳಗಿರಿ’ ಎಂದು ಹೆಸರಿಟ್ಟಿದ್ದಾರೆ.
‘ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಪಡೆಯುವ ಗುತ್ತಿಗೆದಾರರ ಮೇಲೆ ದಾಳಿ ಮಾಡಿ, ಶೋಧ ನಡೆಸುವುದು ಸಾಮಾನ್ಯ. ಆದರೆ, ಅವರ ಜತೆಗೆ ಉಮೇಶ್ ಮೇಲೂ ದಾಳಿ ನಡೆದಿರುವುದು ಈ ಬಾರಿಯ ಕಾರ್ಯಾಚರಣೆಯ ವಿಶೇಷ. ಗುತ್ತಿಗೆದಾರರು ಮತ್ತು ಅಧಿಕಾರಸ್ಥರ ನಡುವೆ ಉಮೇಶ್ ಕೊಂಡಿಯಂತೆ ಕೆಲಸ ಮಾಡಿರುವ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ಮೂಲಗಳು ತಿಳಿಸಿವೆ.
ಎರಡೇ ವರ್ಷದಲ್ಲಿ ಉಮೇಶ್ ಆದಾಯ ಶೇ. 300ರಷ್ಟು ಏರಿಕೆ? ಉಮೇಶ್ ಆದಾಯದಲ್ಲಿ ದಿಢೀರ್ ಏರಿಕೆ ಕಂಡು ಐಟಿ ಅಧಿಕಾರಿಗಳೇ ಶಾಕ್ಗೆ ಒಳಗಾಗಿದ್ದಾರೆ. ಕೇವಲ 2 ವರ್ಷದಲ್ಲಿ ಉಮೇಶ್ ಆದಾಯ ಶೇಕಡಾ 300ರಷ್ಟು ಏರಿಕೆಯಾಗಿದೆ ಅಂತಾ ಹೇಳಲಾಗ್ತಿದೆ. ಕಾವೇರಿ ನೀರಾವರಿ ನಿಗಮ ಟೆಂಡರ್ನಲ್ಲಿ ಗೋಲ್ಮಾಲ್ ಆರೋಪ ಉಮೇಶ್ ಮೇಲಿದೆ. ಕೃಷ್ಣ ಭಾಗ್ಯ ಜಲ ನಿಗಮ ಟೆಂಡರ್ನಲ್ಲೂ ಭ್ರಷ್ಟಾಚಾರ ನಡೆಸಿರೋ ಆರೋಪವಿದೆ. ಯಾಕಂದ್ರೆ ಬಿಡುಗಡೆ ಮಾಡಿರುವ ಹಣಕ್ಕೂ ವರ್ಕ್ ಅರ್ಡರ್ಗೂ ವ್ಯತ್ಯಾಸವಿದೆ. ಎರಡೂ ಯೋಜನೆ ಪೂರ್ಣವಾದ ಬಳಿಕ ದಾಖಲೆಗಳಲ್ಲಿ ವ್ಯತ್ಯಾಸವಿದೆ. ಹೀಗಾಗಿ ಉಮೇಶ್ ಮನೆ ಮೇಲೆ ಐಟಿ ದಾಳಿ ನಡೆಸಿರೋದಾಗಿ ಮಾಹಿತಿ ಸಿಕ್ಕಿದೆ.