ಕಲಬುರ್ಗಿ: ಸುಟ್ಟು ಕರಕಲಾಗಿದ್ದು ನಿಮ್ಮ ಬುದ್ಧಿಯೇ ಹೊರತು ಕಲ್ಯಾಣ ಕರ್ನಾಟಕದ ಜನರಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಶಾಸಕ ಆರಗ ಜ್ಞಾನೇಂದ್ರ ಅವರಿಗೆ ತಿರುಗೇಟು ನೀಡಿದ್ದಾರೆ. ಆರಗ ಜ್ಞಾನೇಂದ್ರ ಅವರು ಎಐಸಿಸಿ ಅಧ್ಯಕ್ಷ, ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣದ ಕುರಿತು ನೀಡಿರುವ ಹೇಳಿಕೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ.
ಆರಗ ಜ್ಞಾನೇಂದ್ರ ಅವರೇ ನೀವು ಆಡಿರುವ ಮಾತು ಬರೀ ನಿಮ್ಮ ಮಾತುಗಳಲ್ಲ, ಕೇಶವ ಕೃಪಾದ ಪ್ರಭಾವದ ಮಾತು, ಬಿಜೆಪಿಯ ಆಂತರ್ಯದೊಳಗೆ ಅಡಗಿದ್ದ ಶೋಷಿತರ ಬಗೆಗಿನ ಅಸಹನೆಯ ಮಾತು ಎಂದು ಹೇಳಿದ್ದಾರೆ. ಶತಶತಮಾನಗಳಿಂದ ವರ್ಣಾಶ್ರಮದ ಹೆಸರಲ್ಲಿ ಶೋಷಣೆ ನಡೆಸಿ ಶ್ರಮಜೀವಿಗಳ ಬೆವರಿನಲ್ಲಿ ಬಿಟ್ಟಿ ತಿಂದವರ ಚರ್ಮ ಬೆಳ್ಳಗಿರಬಹುದು, ಸ್ವಾಭಿಮಾನದಿಂದ ದುಡಿದು ತಿನ್ನುವವರ ಮೈ ಬಿಸಿಲಲ್ಲಿ ಸುಟ್ಟಿರುತ್ತದೆ. ಆರಗ ಜ್ಞಾನೇಂದ್ರ ಅವರು ಒಂದೇ ಒಂದು ದಿನ ಮಣ್ಣು ಹೊತ್ತರೆ ಅವರ ಮೈಬಣ್ಣವೂ ಕಪ್ಪಗಾಗುತ್ತದೆ ಎಂದಿದ್ದಾರೆ. ಮನುಸ್ಮೃತಿಯ ವರ್ಣಾಶ್ರಮವನ್ನು ಅಪ್ಪಿ ಒಪ್ಪಿ ಮುದ್ದಾಡುವ ಬಿಜೆಪಿಗೆ ದಲಿತರ ರಾಜಕೀಯ ಏಳಿಗೆಯ ಬಗ್ಗೆ ತೀವ್ರ ಅಸಹನೆ ಇರುವುದು ಇಂತಹ ಮಾತುಗಳಿಂದ ಹೊರಬರುತ್ತವೆ.
ಬಿಜೆಪಿಯ ಈ ಅಸಹನೆ ಬಿಜೆಪಿಯನ್ನೇ ಸುಟ್ಟು ಕರಕಲು ಮಾಡುತ್ತದೆ, ಏಕೆಂದರೆ ಇದು ಮನುಸ್ಮೃತಿಯ ಕಾಲವಲ್ಲ, ಬಾಬಾ ಸಾಹೇಬರ ಸಂವಿಧಾನದ ಕಾಲ ಹೇಳಿದ್ದಾರೆ.