ಬಸವಣ್ಣನವರ ತತ್ವ, ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಇಂದಿನ ತುರ್ತು

ಬೆಂಗಳೂರು: ಬಸವಣ್ಣನವರ ತತ್ವ, ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಇಂದಿನ ತುರ್ತು. ಬಸವಣ್ಣನವರ ವಿಚಾರಗಳ ಕಡೆಗೆ ಜಗತ್ತು ತಿರುಗಿ ನೋಡುತ್ತಿದೆ. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ನಮ್ಮ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿ ಗೌರವ ಸಲ್ಲಿಸಿದೆ‌ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬಸವ ಸಮಿತಿ ಬೆಂಗಳೂರಿನ ಬಸವ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ‌ ಪಾಲ್ಗೊಂಡು ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್,ನಮ್ಮ ಸರ್ಕಾರ ಬಸವಣ್ಣನವರ ಹಾದಿಯಲ್ಲೇ ನಡೆದುಕೊಂಡು ಬರುತ್ತಿದೆ. ಬಸವಣ್ಣ ಇದ್ದ ಕಡೆ ಭಯವಿಲ್ಲ, ಬಸವಣ್ಣ ಎಂದರೆ ಹಸಿವಿಲ್ಲ. ಬಸವ ಎಂದರೆ ಬೆಳಕು, ಬಸವ ಎಂದರೆ ಬದುಕು ಎಂದರು.

ನಮ್ಮ ಸರ್ಕಾರದ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಬಸವಣ್ಣನವರ ತತ್ವವನ್ನು ಅಳವಡಿಸಿದ್ದೇವೆ. ಸರ್ವರಿಗೂ ಸಮಬಾಳು, ಸಮಪಾಲು ತತ್ವದಲ್ಲಿ ನಡೆಯುತ್ತಿದ್ದೇವೆ. ಅನ್ನಭಾಗ್ಯ ಸೇರಿದಂತೆ ಗ್ಯಾರಂಟಿ ಯೋಜನೆಗಳನ್ನು ಇದೇ ಆಧಾರದಲ್ಲಿ ಜಾರಿಗೆ ತಂದಿದ್ದೇವೆ.

ಇದನ್ನೂ ಓದಿ: ಬಸವಣ್ಣನವರ ವಚನದ ಮೂಲಕ ಕುಮಾರಸ್ವಾಮಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

ಮೊದಲ ಬಾರಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರವನ್ನು ಬಸವ ಜಯಂತಿಯದ್ದೇ ತೆಗೆದುಕೊಳ್ಳಬೇಕು ಎಂದು ಆ ದಿನವನ್ನು ಆಯ್ಕೆ ಮಾಡಿದರು ಎಂದು ಡಿಕೆಶಿ ಸ್ಮರಿಸಿದರು.

ಬಸವಣ್ಣನವರು ಯಾವ ಅಧಿಕಾರದಲ್ಲಿ ಇದ್ದರು ಎನ್ನುವುದಕ್ಕಿಂತ ಸಮಾಜಕ್ಕೆ ನೀಡಿರುವ, ತತ್ವ ಸಂದೇಶಗಳು, ವಚನಗಳು ನಮಗೆ ಮುಖ್ಯವಾಗಬೇಕು. ಮನುಷ್ಯನ ಹುಟ್ಟು ಸಾವಿನ ನಡುವೆ ಏನು ಸಾಧನೆ ಮಾಡುತ್ತೇವೆ ಎನ್ನುವುದು ಮುಖ್ಯ. ಅದೇ ರೀತಿ ಸ್ನೇಹಿತ ಪ್ರಭಾಕರ್ ಕೋರೆಯವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಹೋಗಬೇಕು ಎಂದು ಕೆಲಸ ಮಾಡುತ್ತಿದ್ದಾರೆ. ವಿದ್ಯಾಸಂಸ್ಥೆಗಳನ್ನು ಕಟ್ಟಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದಾರೆ. ವಿದ್ಯಾಸಂಸ್ಥೆ ನಡೆಸುವುದು ಸುಲಭವಲ್ಲ, ಸರ್ಕಾರ, ಅಧಿಕಾರಿಗಳು, ಸಂಸ್ಥೆ ಒಳಗಿನ ಹಗ್ಗಜಗ್ಗಾಟ ಎಲ್ಲವನ್ನು ನಿಭಾಯಿಸಿಕೊಂಡು ನಡೆಯಬೇಕು.

ಯಶಸ್ಸು ಕಾಣಬೇಕು ಎಂದರೆ ಧರ್ಮರಾಯನ ಧರ್ಮತ್ವ, ಕರ್ಣನ ದಾನತ್ವ, ಅರ್ಜುನನ ವೀರತ್ವ, ಭೀಮನ ಬಲ, ವಿಧುರನ ನೀತಿ, ಕೃಷ್ಣನ ನೀತಿ ಇರಬೇಕು ಅದರಂತೆ ಪ್ರಭಾಕರ್ ಕೋರೆ ಅವರು ನಡೆದಿದ್ದಾರೆ. ಅವರಿಗೆ ‘ಕಾಯಕ ರತ್ನ’ ಪ್ರಶಸ್ತಿ ನೀಡುತ್ತಿರುವುದು ಸಮಯೋಚಿತ ಆಯ್ಕೆ‌ ಎಂದು ಡಿಕೆಶಿ ಮಾರ್ಮಿಕವಾಗಿ ಹೇಳಿದರು.

ವಿಧಾನಸೌಧದ ಬಳಿ ಮಾಧ್ಯಮದವರು ಬಸವ ಜಯಂತಿ ಬಗ್ಗೆ ಕೇಳುವುದು ಬಿಟ್ಟು ಬೇರೆ ರಾಜಕೀಯ ವಿಚಾರಗಳನ್ನು ಕೇಳಿದರು ಅದಕ್ಕೆ ಲೋಕದ ಡೊಂಕ ನೀವೇಕೆ ತಿದ್ದುವಿರಿ ಎನ್ನುವ ವಚನದ ಮೂಲಕ ಉತ್ತರ ನೀಡಿದೆ. ಮೊದಲು ನಿಮ್ಮನ್ನು ನೀವು ಸೆಟ್ಲ್ ಮೆಂಟ್ ಮಾಡಿಕೊಳ್ಳಿ, ಆನಂತರ ಬೇರೆಯವರ ವಿಚಾರಕ್ಕೆ ಬನ್ನಿ ಎಂದು ಮಾಧ್ಯಮದವರಿಗೆ ಹೇಳಿಬಂದೆ. ಮೊದಲು ನಮ್ಮೊಳಗೆ ಶುದ್ಧೀಕರಣ ಮಾಡಿಕೊಳ್ಳಬೇಕು. ನಾವೇನು ಮಾಡಬೇಕು ಎಂದು ಎಲ್ಲೆಂದರಲ್ಲಿ ಹುಡುಕಿಕೊಂಡು ಹೋಗಬೇಕಿಲ್ಲ. ನಮ್ಮೊಳಗೆ ಎಲ್ಲವೂ ಇದೆ ಎಂದು ಸ್ಪಷ್ಟನೆಯೊಂದನ್ನು ಡಿಕೆಶಿ ನೀಡಿದರು.

ಧರ್ಮ ಯಾವುದಾದರೂ ತತ್ವ ಒಂದೇ, ದೇವರು ನೂರಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ ದೇವನೊಬ್ಬ ನಾಮ ಹಲವು ಎನ್ನುವ ಮಾತನ್ನು ನಾನು ಪದೇ, ಪದೇ ಹೇಳುತ್ತಾ ಇರುತ್ತೇನೆ. ನಿಮ್ಮ, ನಮ್ಮೊಳಗೆ ಧರ್ಮ, ಕರ್ಮ, ಶ್ರಮ, ಭಕ್ತಿ, ಪೂಜೆ, ಕಾಯಕವೇ ಕೈಲಾಸ ಅಡಗಿದೆ ಎಂದು ಬಸವಣ್ಣ ಹೇಳಿಕೊಟ್ಟಿದ್ದಾನೆ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇರುತ್ತಾನೆ. ಬಸವ ಜಯಂತಿಗಿಂತ ಅವರ ಆಚಾರ ವಿಚಾರಗಳನ್ನು ಹರಡೋಣ.

ಯಾರು ಮುನಿದು ನಮ್ಮನು ಏನು ಮಾಡುವರು, ಊರು ಮುನಿದು ನಮ್ಮನೇನು ಮಾಡುವರು ಆನೆಯ ಮೇಲೆ ಹೋಗುವವನ ನಾಯಿ ಕಚ್ಚಬಲ್ಲುದೇ? ನಮ್ಮ ಕೆಲಸವನ್ನು ನಮ್ಮ ಪಾಡಿಗೆ ಮಾಡಿಕೊಂಡು ಹೋಗಬೇಕು.

ಅರವಿಂದ ಜತ್ತಿ ಬಸವ ಸಮಿತಿಯ ಅಧ್ಯಕ್ಷರಾಗಿ ಉತ್ತಮವಾದ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ಬಿ.ಡಿ.ಜತ್ತಿ ಅವರು ಪಂಚಾಯಿತಿ ಮಟ್ಟದಿಂದ ಉಪರಾಷ್ಟ್ರಪತಿ ಹುದ್ದೆಗೆ ಬೆಳೆದಿದ್ದರು. ಬಸವ ತತ್ವದ ಪ್ರಮುಖ ಪ್ರತಿಪಾದಕರು.

ನಾನು ರೇಣುಕಾಚಾರ್ಯ ಕಾಲೇಜಿನಲ್ಲಿ ಓದಿದ್ದರೂ ಅಲ್ಲಿನ ಯಾರೂ ಸಹ ಬಸವಣ್ಣನವರ ಬಗ್ಗೆ ತಿಳಿಸಿರಲಿಲ್ಲ. ಮಹಾರಾಷ್ಟ್ರದ ಮುಖ್ಯಮಂತ್ರಿಗಳಾಗಿದ್ದ ವಿಲಾಸ್ ರಾವ್ ದೇಶ್ ಮುಖ್ ಅವರು ಬಸವ ಜಯಂತಿಗೆ ರಜೆ ಘೋಷಣೆ ಮಾಡಿದರು. ನಾನು ಇದರ ಬಗ್ಗೆ ಆಸಕ್ತಿ ಬಂದು ಕೇಳಿದೆ. ಅವರ ಜೊತೆ ಪ್ರಮಾಣ ಮಾಡುತ್ತಾ ಬಸವ ತತ್ವದ ಬಗ್ಗೆ ಅಲ್ಪಸ್ವಲ್ಪ ತಿಳಿದುಕೊಂಡೆ.

ಬಸವ ಕಲ್ಯಾಣ, ಬಸವನ ಬಾಗೇವಾಡಿ ಅಭಿವೃದ್ಧಿಗೆ ಪ್ರಾಧಿಕಾರ ಪ್ರಾರಂಭ ಮಾಡಿದ್ದೇವೆ. ಕೂಡಲಸಂಗಮದ ಅಭಿವೃದ್ಧಿಗೆ ಜೆ.ಎಚ್.ಪಟೇಲ್ ಅವರು ಅಡಿಪಾಯ ಹಾಕಿಕೊಟ್ಟರು ಎಂದರು.

ಇದನ್ನೂ ಓದಿ: ಪೆನ್ ಡ್ರೈವ್ ಹಂಚಿಕೆ ಪ್ರಕರಣ- ರಾಜಕೀಯ ಮೇಲಾಟ- ಹೆಣ್ಣಿನ ಘನತೆಯ ಜೊತೆ ಆಟ

Donate Janashakthi Media

Leave a Reply

Your email address will not be published. Required fields are marked *