– ರಾಜಾರಾಂ ತಲ್ಲೂರು, ಹಿರಿಯ ಪತ್ರಕರ್ತರು
ನನ್ನ ತೆರಿಗೆ ಹಣ ಇಂತಹದಕ್ಕೇ ಹೋಗಬೇಕು ಎಂದು ಹೇಳಿ ಅದನ್ನೊಂದು ಕ್ಯಾಂಪೇನ್ ಮಾಡುವ ಮೂಲಕ “ಜನರನ್ನು ಒಡೆಯುವ” ಮತ್ತು ದ್ವೇಷದ ಅಂಗಡಿ ತೆರೆಯುವ ಪ್ರಯತ್ನಗಳಿಗೆ ಅವರವರ ಜಾಗ ತೋರಿಸುವುದು ಬಹಳ ಮುಖ್ಯ.
ದೇಶದ 90% ಮಂದಿಗೆ ಈಗ “ಉಚಿತ ಸವಲತ್ತು” ಕೊಡುವುದನ್ನು ವಿರೋಧಿಸುತ್ತಿರುವ ಈ 10% ವರ್ಗಕ್ಕೆ ಸೇರಿದ ಐಟಿ ಪಂಟರು, ಚರಿತ್ರೆ ಮರೆತವರು. ಅವರಿಗೆ ಅವರದೇ ಚರಿತ್ರೆಯನ್ನು ಸ್ವಲ್ಪ ನೆನಪಿಸಿಕೊಡಬೇಕಾಗಿದೆ. ಡಾ| ಮನಮೋಹನ್ ಸಿಂಗ್ ಅವರ ಕಾಲದಲ್ಲಿ ದೇಶ ಉದಾರೀಕರಣಕ್ಕೆ ತೆರೆದುಕೊಂಡಾಗ, ಸರ್ಕಾರ ನೀಡಿದ ಉಚಿತ ಸವಲತ್ತುಗಳ ಗರಿಷ್ಠ ಫಲಾನುಭವಿಗಳು ಯಾರಾದರೂ ಇದ್ದರೆ ಅದು ಈ ಐಟಿ ಪಂಟರು. ಈ “ಉಚಿತ ಸವಲತ್ತು”ಗಳನ್ನು ಭರಪೂರ ಪಡೆದು, ಅದರಿಂದ ಸೇರುಗಾರಿಕೆ ಮಾಡಿ, ದೇಶದ ಯುವಜನರ ಬೆವರು-ರಕ್ತ ಬಸಿದು ತಮ್ಮ ಹೊನ್ನಿನ ಚೀಲ ತುಂಬಿಸಿಕೊಂಡ ಇವರ “ಹೊಟ್ಟೆ ತುಂಬಿದವರ ಆಟ” ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿ ಅನಗತ್ಯ ಒಡಕು ತರುತ್ತಿದೆ.
ಕಳೆದ 40 ವರ್ಷಗಳಲ್ಲಿ, ಈ ಐಟಿ ಕಂಪನಿಗಳು “ತೆರಿಗೆ ರಜೆ” ಸವಲತ್ತಿನ ಮೂಲಕ ಪಡೆದ ಉಚಿತ ಆರ್ಥಿಕ ಸವಲತ್ತಿನ ಗಾತ್ರ ಎಷ್ಟು? >>ಆಮದು ಸುಂಕ ಮತ್ತು ಎಕ್ಸೈಸ್ ಸುಂಕಗಳನ್ನು ತೆಗೆದುಹಾಕಿದ್ದರಿಂದ ಈ ಐಟಿ ಕಂಪನಿಗಳಿಗೆ ಸಿಕ್ಕಿದ ಲಾಭದ ಪ್ರಮಾಣ ಎಷ್ಟು? >> ಸಾಫ್ಟ್ವೇರ್ ರಫ್ತಿಗೆ ಕಾರ್ಪೋರೇಟ್ ತೆರಿಗೆ ವಿನಾಯಿತಿ ದಕ್ಕಿಸಿಕೊಂಡ ಕಾರಣದಿಂದಾಗಿ ಈ ಐಟಿ ಕಂಪನಿಗಳಿಗೆ ಉಳಿದ ದುಡ್ಡು ಎಷ್ಟು? >> ದೇಶದಾದ್ಯಂತ ಈ ಐಟಿ ಕಂಪನಿಗಳು ಮೂರೂಮುಕ್ಕಾಲು ಕಾಸಿಗೆ ಸರ್ಕಾರದಿಂದ ಪಡೆದುಕೊಂಡ ಭೂಮಿಯ ಪ್ರಮಾಣ ಎಷ್ಟು? ಈಗಿನ ಅದರ ಮಾರುಕಟ್ಟೆ ಮೌಲ್ಯ ಎಷ್ಟು ಮತ್ತು ಅವರು ಆ ಭೂಮಿಗೆ ಕೊಟ್ಟ ರಿಯಾಯಿತಿ ದರ ಎಷ್ಟು? ಉಚಿತವಾಗಿ ಪಡೆದ ಭೂಮಿ ಎಷ್ಟು? >>ಇವರು ಪಡೆದ ಸಬ್ಸಿಡಿಗಳು, ಬ್ಯೂರೊಕ್ರಾಟಿಕ್ ರೋಡ್ಬ್ಲಾಕ್ ತೆರವಿನ ರಿಯಾಯಿತಿಗಳು ಮತ್ತು ಅವು ತಂದುಕೊಟ್ಟ ಲಾಭಗಳು ಎಷ್ಟು? >>ಸರ್ಕಾರ ಇವರಿಗಾಗಿ ಆರಂಭಿಸಿದ STPಗಳು, SEZಗಳು, ಹೈಸ್ಪೀಡ್ ಸ್ಯಾಟಲೈಟ್ ಲಿಂಕ್ ಸಂಪರ್ಕ ಜಾಲ, ವಿದ್ಯುತ್, ಸಂವಹನ ಸೌಲಭ್ಯಗಳು ಮತ್ತಿತರ ಮೂಲ ಸೌಕರ್ಯಗಳು, ಅದಕ್ಕೆಂದು ಸರ್ಕಾರಿ ಬೊಕ್ಕಸದಿಂದ ಮಾಡಿದ ಖರ್ಚು ಎಷ್ಟು?
ಇನ್ನು ಇಂತಹ “ಉಚಿತ”ಗಳಲ್ಲದೇ ಸಾರ್ವಜನಿಕರ ಗಮನಕ್ಕೆ ಬರದ ಹತ್ತಾರು ನೀತ್ಯಾತ್ಮಕ ಲಾಭಗಳು ಅವರಿಗೆ ದೊರಕಿವೆ. ಈ “ಉಚಿತ ಲಾಭ”ಗಳನ್ನೆಲ್ಲ ಪಡೆದ
ಬಳಿಕ ಇವರು ಉಂಡ ತಟ್ಟೆಗೇ ಹೇತದ್ದನ್ನೂ ಇಲ್ಲೇ ದಾಖಲಿಸಿಬಿಡೋಣ.
1990-2000 ದ “ಐಟಿ ಭೂಂ” ಅವಧಿಯಲ್ಲಿ, ಇಷ್ಟೆಲ್ಲ ಸರ್ಕಾರಿ ಉಚಿತ ಸವಲತ್ತು ಪಡೆದ ಐಟಿಯವರು ಮಾಡುತ್ತಿದ್ದುದು ನೂರಕ್ಕೆ ತೊಂಬತ್ತು ಪಾಲು ಬಾಡಿ ಶಾಪಿಂಗ್! ಅರ್ಥಾತ್ ಸೇರುಗಾರಿಕೆ!! ಅಂದರೆ, ನಮ್ಮ ಎಳೆಯರನ್ನು ದೇಶದಿಂದ ಹೊರಗೆ ಬೇರೆ ಕಂಪನಿಗಳಲ್ಲಿ ಕೆಲಸಕ್ಕೆ ಕೂರಿಸಿ, ಅಲ್ಲಿ ಅವರಿಗೆ ಸಿಗುವ ಸಂಬಳದ (ತಿಂಗಳಿಗೆ ಸುಮಾರು 7000-15000ಡಾಲರ್) ಕೀಲುಭಾಗವನ್ನು ಮಾತ್ರ (ತಿಂಗಳಿಗೆ ಸುಮಾರು 2000-3000 ಡಾಲರ್) ದುಡಿದವರಿಗೆ ಕೊಟ್ಟು, ಉಳಿದದ್ದನ್ನೆಲ್ಲ ತಾವೇ ಕಿಸೆಗೆ ಇಳಿಸಿಕೊಳ್ಳುವ ಕಳ್ಳಾಟ! ಇದನ್ನೇ ದೇಶಕ್ಕೆ ತಾವು ತಂದ ವಿದೇಶಿ ವಿನಿಮಯ, ತಮ್ಮ ಲಾಭ ಎಂದು ತೋರಿಸಿ ಇತ್ತ ಸರ್ಕಾರದ “ಉಚಿತ”ಗಳನ್ನೂ ದೋಚಿದವರು ಇವರು. ದೇಶಕ್ಕೆ ವಾಪಸ್ ಕೊಟ್ಟದ್ದು ಇವರು ತಿಂದ ಕಡ್ಲೆಯ ಸಿಪ್ಪೆ ಚೂರು ಮಾತ್ರ!
ಇತ್ತೀಚೆಗೆ ಏನೋ ಚೂರುಪಾರು ಐಟಿ ಕೆಲಸಗಳು ದೇಶದ ಒಳಗೂ ನಡೆಯುತ್ತಿರುವುದಕ್ಕೆ ಕಾರಣ ಈ ಬಕಾಸುರರಲ್ಲ! ಬದಲಾಗಿ, ಇವರ ಜೀತದಾಳು ಕೆಲಸ ಸಾಕಾಗಿ, ಇವರ ಆಟ ಅರ್ಥವಾಗಿ, ಹೊರಬಂದು, ತಾವೇ ಕಂಪನಿ ತೆರೆದು ಇವರಿಗೆ ಸ್ಪರ್ಧೆ ನೀಡಿದ ಹೊಸ ಪೀಳಿಗೆಯ ಯುವಕರು. ಇದಲ್ಲ ಎಂದಾದರೆ, ಜಾಗತಿಕ ಮಟ್ಟದ ಯಾವ ಬ್ರ್ಯಾಂಡ್ ಭಾರತದಲ್ಲಿ ಇವರು ಹುಟ್ಟಿಸಿದ್ದಾರೆ ಹೇಳಲಿ.
ಇದು ಮಾತ್ರವಲ್ಲ, 2012-13ರ ಹೊತ್ತಿಗೆ, ಮನಮೋಹನ್ ಸಿಂಗ್ ಸರ್ಕಾರದ ವಿರುದ್ಧ ಸುಪಾರಿ ಹೋರಾಟಗಾರರಿಗೆ ಕುಮ್ಮಕ್ಕು ಕೊಟ್ಟದ್ದು, ಸಾಮಾಜಿಕ ಮಾಧ್ಯಮಗಳಂತಹ ಹೊಸ ಟೂಲ್ಗಳ ಮೂಲಕ ಸುಳ್ಳು ಸುದ್ದಿಗಳನ್ನು ಹಬ್ಬಿಸಲು, ಜನರಲ್ಲಿ ಒಡಕು ಮೂಡಿಸಲು ಪ್ರಯತ್ನ ಪಟ್ಟವರು ಯಾರು ಎಂಬುದನ್ನೂ ಒಮ್ಮೆ ಎದೆಮುಟ್ಟಿ ನೋಡಿಕೊಂಡು ನೆನಪು ಮಾಡಿಕೊಳ್ಳಲಿ.
ತಾವು ಮಾತ್ರ ತೆರಿಗೆ ಕಟ್ಟುವವರೆಂಬ ಈ ಅಹಂಕಾರದ ಹಿಂದಿರುವುದು ವಿಭಾಜಕ ದುಷ್ಟತನ. ಇವರು ಕಟ್ಟಿದ ತೆರಿಗೆಯ ಅನುಪಾತದಲ್ಲೇ ದೇಶದ ಪ್ರತಿಯೊಬ್ಬ ಪ್ರಜೆ ಪರೋಕ್ಷ ತೆರಿಗೆಗಳನ್ನು ಕಟ್ಟುತ್ತಿದ್ದಾನೆ ಎಂಬುದನ್ನು ಈ “ನವವಸಾಹತುಶಾಹಿಗಳಿಗೆ” ನೆನಪಿಸಬೇಕಿದೆ. ದೇಶದ ಗುತ್ತಿಗೆ ನಿಮ್ಮದಲ್ಲ; ಈ ದೇಶ ಪ್ರತಿಯೊಬ್ಬರಿಗೂ ಸೇರಿದ್ದು. ನಿಮ್ಮ ಬಾಯಿ ಯಾವಾಗ ತೆರೆಯುತ್ತದೆ ಮತ್ತು ಯಾವಾಗ ಅವಲಕ್ಕಿ ತುಂಬಿ, ಮುಚ್ಚಿಕೊಂಡಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳದಷ್ಟು ಮೂರ್ಖರಲ್ಲ ಈ ದೇಶದ ಜನ!