ಬೆಂಗಳೂರು: ಕೇಂದ್ರ ಸರ್ಕಾರವು ಬೆಂಗಳೂರಿನಲ್ಲಿರುವ ಇಸ್ರೋ ಕಛೇರಿಯನ್ನು ಗುಜಾರಾತ್ ರಾಜ್ಯಕ್ಕೆ ವರ್ಗಾಹಿಸಲು ಮುಂದಾಗಿರುವುದನ್ನು ಖಂಡಿಸಿ ಎನ್ಎಸ್ಯುಐ ವಿದ್ಯಾರ್ಥಿ ಕಾಂಗ್ರೆಸ್ ವತಿಯಿಂದ ಸಂಜಯನಗರದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥ(ಇಸ್ರೋ) ಕೇಂದ್ರ ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ʻʻನಮ್ಮ ಹಿರಿಯರು ಕಟ್ಟಿ ಬೆಳಸಿದ ಹಲವಾರು ಸಂಸ್ಥೆಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಖಾಸಗೀಕರಣ ಮಾಡಿದೆ. ಬೆಂಗಳೂರಿನ ಹವಮಾನ, ಉತ್ತಮ ಪರಿಸರದ ಕಾರಣದಿಂದ ಇಸ್ರೋ ಸಂಸ್ಥೆ ಸ್ಥಾಪಿಸಲಾಯಿತು. ಅದರೆ ಇಂದು ಗುಜರಾತ್ ರಾಜ್ಯಕ್ಕೆ ಇಸ್ರೋ ಸಂಸ್ಥೆ ವರ್ಗಾಯಿಸುವ ಹುನ್ನಾರ ನಡೆಯುತ್ತಿದೆ. ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಮೌನಕ್ಕೆ ಶರಣಾಗಿದ್ದಾರೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ಕರ್ನಾಟಕದಿಂದ ಪ್ರಮುಖ ಸಂಸ್ಥೆಗಳು ಮತ್ತು ಯೋಜನೆಗಳನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತಿದೆ. ಇದು ಕನ್ನಡಿಗರಿಗೆ ಮಾಡುತ್ತಿರುವ ದ್ರೋಹವಾಗಿದೆ. ಮಾನವಸಹಿತ ಗಗನಯಾನ ಯೋಜನೆಯ ಸಂಸ್ಥೆಯಾದ ಇಸ್ರೋವನ್ನು ಬೆಂಗಳೂರಿನಿಂದ ಗುಜರಾತ್ ರಾಜ್ಯಕ್ಕೆ ಸ್ಥಳಾಂತರ ಮಾಡುವ ಪ್ರಸ್ತಾವ ವಿರೋಧಿಸಿ ರಾಜ್ಯದ 25 ಬಿಜೆಪಿ ಲೋಕಸಭಾ ಸದಸ್ಯರು ಹಾಗೂ 12 ರಾಜ್ಯಸಭಾ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಬಳಿಗೆ ನಿಯೋಗ ತೆಗೆದುಕೊಂಡು ಹೋಗಬೇಕು ಹಾಗೂ ಇಸ್ರೋ ಸಂಸ್ಥೆ ಇಲ್ಲಿಯೇ ಉಳಿಯುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಧಾನಿಯೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚಿಸಿ ಇಸ್ರೋ ಸಂಸ್ಥೆ ಇಲ್ಲಿ ಉಳಿಯುವಂತೆ ಮನವಿ ಮಾಡಬೇಕು. ಇಲ್ಲವಾದಲ್ಲಿ ವರ್ಗಾವಣೆಯಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಶಾಸಕ ಕೃಷ್ಣ ಭೈರೇಗೌಡ, ಎನ್ಎಸ್ಯುಐ ರಾಜ್ಯಾಧ್ಯಕ್ಷರಾದ ಕೀರ್ತಿ ಗಣೇಶ್ ಹಾಗೂ ಬೆಂಗಳೂರು ನಗರ ಉತ್ತರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಯಸಿಂಹ ಮತ್ತು ವಿದ್ಯಾರ್ಥಿ ಕಾಂಗ್ರೆಸ್ಸಿನ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.