ಪ್ಯಾಲೆಸ್ತೀನ್‌ನ ‘ದಿ ಫ್ರೀಡಂ ಥಿಯೇಟರ್’ ರಂಗ ತಂಡ ತಮ್ಮ ದೇಶದ ಉಳಿವಿಗಾಗಿ ಹೋರಾಟ ನಡೆಸುತ್ತಿದೆ
ಬೆಂಗಳೂರು: ಪ್ಯಾಲೆಸ್ತೀನ್‌ನ ಖ್ಯಾತ ರಂಗ ತಂಡ ‘ದಿ ಫ್ರೀಡಂ ಥಿಯೇಟರ್‘ ಮೇಲೆ ಮತ್ತು ತಂಡದ ಕುಟುಂಬದ ಸದಸ್ಯರ ಮೇಲೆ ಇಸ್ರೇಲಿ ಸೈನಿಕರು ನಡೆಸಿರುವ ದಾಳಿ ವಿರೋಧಿಸಿ ರಾಜ್ಯದ ರಂಗಕರ್ಮಿಗಳು ತೀವ್ರವಾಗಿ ಖಂಡಿಸಿದ್ದಾರೆ. ದಾಳಿಯನ್ನು ವಿರೋಧಿಸಿ ರಂಗಕರ್ಮಿಗಳು ಶನಿವಾರ ಸಂಜೆ 7 ಗಂಟೆಗೆ ಪ್ರತಿಭಟನಾ ಸಭೆ ಏರ್ಪಡಿಸಿದ್ದಾರೆ.
ಜೂಮ್ ಮೂಲಕ ನಡೆಯಲಿರುವ ಆನ್‌ಲೈನ್ ಪ್ರತಿಭಟನಾ ಸಭೆಯಲ್ಲಿ ಪ್ಯಾಲೆಸ್ತೀನ್‌ನ ಇಂದಿನ ಸ್ಥಿತಿಯ ಕುರಿತು ನವದೆಹಲಿಯ ಜನ ನಾಟ್ಯ ಮಂಚ್‌ನ ಸುಧನ್ವಾ ದೇಶಪಾಂಡೆ ಮಾತನಾಡಲಿದ್ದಾರೆ. ಜೂಮ್ ಮೂಲಕ ಆನ್‌ಲೈನ್ ಸಭೆಗೆ ಸೇರಬಹುದಾಗಿದ್ದು ಸಭೆಯ ಐಡಿ ಹಾಗೂ ಪಾಸ್‌ಕೋಡ್ ಕೆಳಗಿನಂತಿದೆ.
ID: 84129124800
Pass Code: 048123
zoom link
https://us06web.zoom.us/j/84129124800?pwd=MWdvcW52d09GUFVBK1NZOHg3d1RsUT09
‘ದಿ ಫ್ರೀಡಂ ಥಿಯೇಟರ್’ ಪ್ಯಾಲೆಸ್ತೀನಿನ ಆಕ್ರಮಿತ ವೆಸ್ಟ್ ಬ್ಯಾಂಕ್‌ನ ಜೆನಿನ್‌ನಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ ಕೆಲಸ ಮಾಡುವ ರಂಗಮಂದಿರವಾಗಿದೆ. ಇದು ತನ್ನ ರಂಗ ನಡೆಗಳಲ್ಲಿ ಸಾಂಸ್ಕೃತಿಕ ಪ್ರತಿರೋಧವನ್ನು ವ್ಯಕ್ತಪಡಿಸುತ್ತಾ ಬಂದಿರುವ ತಂಡವಾಗಿದೆ. ಇದು ಇಸ್ರೇಲ್ ದೇಶದ ಆಕ್ರಮಣದಿಂದ ತಮ್ಮ ದೇಶದ ಉಳಿವಿಗಾಗಿ ಹೋರಾಟ ನಡೆಸುತ್ತಿದೆ. ಎಂಟು ವರ್ಷಗಳ ಹಿಂದೆ ಈ ತಂಡ ಬೆಂಗಳೂರಿಗೆ ಕೂಡಾ ಬಂದಿತ್ತು. ಆ ಸಮಯದಲ್ಲಿ ಅವರ ನಾಟಕವನ್ನು ‘ಸಮುದಾಯ ಕರ್ನಾಟಕ’ ಪ್ರಾಯೋಜಿಸಿತ್ತು.
ಇದನ್ನೂ ಓದಿ: ಇಸ್ರೇಲ್ ಆಕ್ರಮಣ ಕೊನೆಗೊಳ್ಳಬೇಕು- ಪ್ಯಾಲೆಸ್ಟೀನ್ ವಿಮೋಚನೆಗೊಳ್ಳಬೇಕು
ಜುಲೈ 5ರ ಬೆಳ್ಳಿಗ್ಗೆ 2 ಗಂಟೆಗೆ ಇಸ್ರೇಲಿ ಸೇನೆಯು ದಿ ಫ್ರೀಡಂ ಥಿಯೇಟರ್‌ನ ಪ್ರವೇಶ ದ್ವಾರವನ್ನು ಸ್ಪೋಟಿಸಿದೆ. ಈ ಘಟನೆಗೂ ಎರಡು ವಾರಗಳ ಹಿಂದೆ ಇಸ್ರೇಲಿ ಸೇನೆಯು ರಂಗ ತಂಡದ ಕಲಾವಿದರೊಬ್ಬರ ಸೋದರ ಸೊಸೆ ಮತ್ತು ಥಿಯೇಟರ್‌ನಲ್ಲಿ ಭಾಗವಹಿಸುವ 14 ವರ್ಷದ ಸದೀಲ್ ನಘ್ನಿಯೆಹ್ ಎಂಬ ಬಾಲಕನನ್ನು ಗುಂಡು ಹಾರಿಸಿ ಕೊಲೆ ಹತ್ಯೆ ಮಾಡಿತ್ತು.
ಜುಲೈ 5ರಂದು ದಿ ಫ್ರೀಡಂ ಥಿಯೇಟರ್‌ನ ತಾಂತ್ರಿಕ ವ್ಯವಸ್ಥಾಪಕ ಅದ್ನಾನ್ ಸೇರಿದಂತೆ, ಸೇನೆಯಿಂದ ಕೊಲ್ಲಲ್ಪಟ್ಟ ಸದೀಲ್ ಅವರ ತಂದೆ ಮತ್ತು ಅವರ ಇಡೀ ಕುಟುಂಬವನ್ನು ರಂಗಭೂಮಿ ವೇದಿಕೆಗೆ ಕರೆ ತಂದಿದ್ದರು. ಈ ವೇಳೆ ಸೇನೆಯು ಕುಟುಂಬದ ಹಿರಿಯರು, ಮಕ್ಕಳು ಸೇರಿದಂತೆ ಇಡೀ ಕುಟುಂಬವನ್ನು ಥಿಯೇಟರ್ ಒಳಗೆ ಬೀಗ ಹಾಕಿ ಅಲ್ಲಿಯೇ ವಿಚಾರಣೆ ನಡೆಸಿದ್ದರು. ಕುಟುಂಬದ ಕೆಲ ಸದಸ್ಯರನ್ನು ಬೆಳಗಿನ ಜಾವದವರೆಗೂ ತಡೆ ಹಿಡಿಯಲಾಗಿತ್ತು.
ಅಷ್ಟೆ ಅಲ್ಲದೆ, ಫ್ರೀಡಂ ಥಿಯೇಟರ್‌ನ ಅದ್ನಾನ್ ಅವರನ್ನು ಸೇನೆಯು ಕರೆದುಕೊಂಡು ಹೋಗಿದ್ದು, ಅವರ ಬಗ್ಗೆ ಈ ವರೆಗೆ ಯಾವುದೆ ಮಾಹಿತಿ ಸಿಕ್ಕಿಲ್ಲ ಎಂದು ಫ್ರೀಂಡಂ ಥಿಯೇಟರ್ ಹೇಳಿದೆ. ಜೊತೆಗೆ ಫ್ರೀಂಡಂ ಥಿಯೇಟರ್ ಸಿಬ್ಬಂದಿ ಮತ್ತು ಅವರ ತಾಯಿಯನ್ನು ವಶಕ್ಕೆ ಪಡೆದಿರುವ ಸೈನಿಕರು ಅವರನ್ನು ಅಪಾರ್ಟ್ಮೆಂಟ್ ಒಳಗೆ ಬಂಧಿಸಿಟ್ಟಿದ್ದಾರೆ. “ಥಿಯೇಟರ್ ಹಾನಿಗೊಳಗಾಗಿರುವ ಬಗ್ಗೆ, ಅಲ್ಲಿನ ವಸ್ತುಗಳು ಕಳ್ಳತನವಾಗಿರುವ ಬಗ್ಗೆ ಕೂಡಾ ತಿಳಿದುಕೊಳ್ಳುವುದು ಅಸಾಧ್ಯವಾಗಿದೆ” ಎಂದು ಫ್ರೀಂಡಂ ಥಿಯೇಟರ್ ಹೇಳಿಕೊಂಡಿದೆ.
ಇದನ್ನೂ ಓದಿ: ಇಸ್ರೇಲ್ ನೊಂದಿಗೆ ಯು.ಎ.ಇ ಮತ್ತು ಬಹ್ರೇನ್ ಒಪ್ಪಂದ : ಪ್ಯಾಲೇಸ್ಟಿನಿಯನ್ ಪ್ರತಿಭಟನೆ
‘ದಿ ಫ್ರೀಡಂ ಥಿಯೇಟರ್’ ಮೇಲೆ ಇಸ್ರೇಲಿ ಸೇನೆಯ ಆಕ್ರಮಣವನ್ನು ಖಂಡಿಸಿರುವ ರಾಜ್ಯದ ರಂಗಕರ್ಮಿಗಳು, ”ಇಸ್ರೇಲ್ ಸೈನಿಕರ ದುರಾಕ್ರಮಣವನ್ನು ನಾವು ಖಂಡಿಸಬೇಕಿದೆ. ಇಸ್ರೇಲ್ ನಡೆಸುತ್ತಿರುವ ಈ ಭಯೋತ್ಪಾದನೆಯನ್ನೂ ಖಂಡಿಸಲೇಬೇಕು. ದ ಫ್ರೀಡಮ್ ಥಿಯೇಟರ್ ಮೇಲಾಗಿರುವ ದಾಳಿ ಲೋಕಸಂಸ್ಕೃತಿಯ ಮೇಲಿನ ದಾಳಿಯಾಗಿದ್ದು, ಶಾಂತಿಯುತ ಪ್ರತಿರೋಧದ ಮೇಲಾಗಿರುವ ದಾಳಿಯಾಗಿದೆ. ಅಹಿಂಸೆಯನ್ನು ಹೋರಾಟದ ಅಸ್ತ್ರವೆಂದು ನಂಬಿದ, ನಂಬಿ ಗೆದ್ದ ಭಾರತದ ಜನರು ಫ್ರೀಂಡಂ ಥಿಯೇಟರ್ ಮೇಲಿನ ದಾಳಿಯನ್ನು ವಿರೋಧಿಸುವುದರಲ್ಲಿ ಮೊದಲಿಗರಾಗಬೇಕು” ಎಂದು ಹೇಳಿದ್ದಾರೆ.
ಸಭೆಯಲ್ಲಿ, ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಪ್ರೊ. ರಾಜೇಂದ್ರ ಚೆನ್ನಿ, ಡಾ. ಬಂಜಗೆರೆ ಜಯಪ್ರಕಾಶ, ಲಕ್ಷ್ಮಿಪತಿ ಕೋಲಾರ, ಸುರೇಶ ಕಡೂರು ಸೇರಿದಂತೆ ಹೋರಾಟಗಾರರು, ಸಾಹಿತಿಗಳು, ರಂಗಕರ್ಮಿಗಳು, ಕಲಾವಿದರು ಭಾಗಹಿಸಲಿದ್ದಾರೆ.
ಇದನ್ನೂ ಓದಿ: ಹೋರಾಟ ನಿರತ ಪ್ಯಾಲೆಸ್ತೀನಿ ಜನತೆಗೆ ಸೌಹಾರ್ದತೆ ತೋರೋಣ