“ನನ್ನ ಸಾವು ಜಗತ್ತೇ ಕೇಳುವಂತಿರಬೇಕು” ಕೊನೆಯ ಆಸೆ ಹೇಳಿದ್ದ ಗಾಜಾ ಪತ್ರಕರ್ತೆ

ಗಾಜಾ: ಇಸ್ರೇಲ್ ದಾಳಿಯಲ್ಲಿ  ಸಾಯುವ ಮೊದಲು ಪತ್ರಿಕಾ ಛಾಯಾಗ್ರಾಹಕಿಯೊಬ್ಬರು ʼʼಜಗತ್ತೇ ಕೇಳುವಂತಿರಬೇಕು ನನ್ನ ಸಾವು. ಇದುವೇ ನನ್ನ ಕೊನೆಯ ಆಸೆʼʼ ಎಂದು ಹೇಳಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್  ಆಗಿದೆ. ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಪ್ಯಾಲೆಸ್ತೀನ್‌ ಛಾಯಾಗ್ರಾಹಕಿ 25 ವರ್ಷದ ಫಾತಿಮಾ ಹಸೌನಾ ಮತ್ತು ಅವರ ಗರ್ಭಿಣಿ ಸಹೋದರಿ ಸೇರಿದಂತೆ 10 ಕುಟುಂಬ ಸದಸ್ಯರೊಂದಿಗೆ ಸಾವನ್ನಪ್ಪಿದರು.

ಫಾತಿಮಾ ಅವರ ಮದುವೆಗೆ ಕೆಲವು ದಿನಗಳಷ್ಟೇ ಬಾಕಿ ಉಳಿದಿತ್ತು. ಅದಕ್ಕೂ ಮುನ್ನವೇ ಅವರು ಜೀವನ ಕೊನೆಯಾಗಿದೆ.

ಕಳೆದ ಒಂದೂವರೆ ವರ್ಷಗಳಿಂದ ಯುದ್ಧದ ದೌರ್ಜನ್ಯಗಳನ್ನು ದಾಖಲಿಸುತ್ತಿರುವ ಗಾಜಾದ ಫಾತಿಮಾ ಹಸೌನಾ ಅವರು ತಮ್ಮ ಮನೆಯ ಮೇಲಾದ ವೈಮಾನಿಕ ದಾಳಿ, ಇದರಿಂದ ಆದ ಧ್ವಂಸ ಮತ್ತು ಹತ್ತು ಸಂಬಂಧಿಕರ ವಿನಾಶಕಾರಿ ದೃಶ್ಯಗಳನ್ನೂ ಸೆರೆ ಹಿಡಿದಿದ್ದಾರೆ.

ನಿರಂತರ ಅಪಾಯದಲ್ಲೇ ಇದ್ದರೂ ಹಸೌನಾ ತಮ್ಮ ಕೆಮ್ಯಾರಾದ ಮೂಲಕ ಗಾಜಾದ ಕಥೆಯನ್ನು ಹೇಳುತ್ತಿದ್ದರು. ಸಾವು ಯಾವಾಗಲೂ ಹತ್ತಿರದಲ್ಲಿದೆ ಎಂದು ಅವರಿಗೆ ತಿಳಿದಿತ್ತು. ಆದರೆ ಅವರ ಕಥೆಯನ್ನು ಪ್ರಪಂಚದಾದ್ಯಂತ ಕೇಳಬೇಕೆಂದು ಅವರು ಬಯಸಿದ್ದರು.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದ ಅವರು, ʼʼನನಗೆ ಗಟ್ಟಿಯಾಗಿ ಎಲ್ಲರೂ ಕೇಳಬಹುದಾದ ಸಾವು ಬೇಕು. ನಾನು ಕೇವಲ ಬ್ರೇಕಿಂಗ್ ನ್ಯೂಸ್ ಅಥವಾ ಗುಂಪಿನಲ್ಲಿರುವ ಸಂಖ್ಯೆಯಾಗಲು ಬಯಸುವುದಿಲ್ಲ. ಜಗತ್ತು ಕೇಳುವ ಸಾವು ನನ್ನದಾಗಬೇಕು. ಸಮಯದ ಅಂತ್ಯದವರೆಗೂ ನಾನು ಉಳಿಯ ಬಯಸುತ್ತೇನೆ. ಅಂತಹ ಸಾವು ನನ್ನದಾಗಬೇಕುʼʼ ಎಂದು ಹೇಳಿದ್ದರು.

ಇದನ್ನೂ ಓದಿ : ಜೆಎನ್‌ಯುಎಸ್‌ಯು ಚುನಾವಣೆ| ಒಗ್ಗಟ್ಟಿನ ಬಲ ಯಾರಿಗೆ ? ಜೆಎನ್‌ಯು ಚುನಾವಣೆಗೆ ಯಾಕಿಷ್ಟು ಮಹತ್ವ?

ಅವರ ಮದುವೆಗೆ ಕೆಲವೇ ದಿನಗಳು ಉಳಿದಿತ್ತು. ಆದರೆ ಅದಕ್ಕೂ ಮುನ್ನವೇ ಇಸ್ರೇಲ್ ಬುಧವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಉತ್ತರ ಗಾಜಾದಲ್ಲಿರುವ ಅವರ ಮನೆ ಧ್ವಂಸವಾಗಿದೆ. ಇದರೊಂದಿಗೆ ಅವರ ಕೊನೆಯ ಆಸೆ ಈಡೇರಿದೆ. ಫಾತಿಮಾ ಮತ್ತು ಅವರ ಗರ್ಭಿಣಿ ಸಹೋದರಿ ಸೇರಿದಂತೆ ಅವರ ಹತ್ತು ಕುಟುಂಬ ಸದಸ್ಯರು ಈ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ.

ಗಾಜಾದ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಇಸ್ರೇಲ್ ಮತ್ತು ಹಮಾಸ್ ನಡುವೆ ಸಂಘರ್ಷ ಪ್ರಾರಂಭವಾದಾಗಿನಿಂದ 51,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಬಲಿಯಾದವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಕದನ ವಿರಾಮ ಮುರಿದ ಬಳಿಕ ಇಸ್ರೇಲ್ ವೈಮಾನಿಕ ದಾಳಿಯನ್ನು ತೀವ್ರಗೊಳಿಸಿತು. ಇದರಲ್ಲಿ ಶುಕ್ರವಾರ ಕನಿಷ್ಠ 30 ಮಂದಿ ಸಾವನ್ನಪ್ಪಿದ್ದಾರೆ.

ಇದನ್ನೂ ನೋಡಿ“ಜಾತಿ ಜನಗಣತಿ” ಜನತೆಯ ಹಿತಾಸಕ್ತಿ ಸೋಲದಿರಲಿ – ಡಾ. ಕೆ.ಪ್ರಕಾಶ್Janashakthi Media

 

Donate Janashakthi Media

Leave a Reply

Your email address will not be published. Required fields are marked *