ಪ್ಯಾಲೆಸ್ತೇನ್ ಮೇಲೆ ಇಸ್ರೇಲ್ ರಾಕೇಟ್ ದಾಳಿ

ಗಾಜಾ ಸಿಟಿ: ಗಾಜಾ ಪಟ್ಟಿಯಲ್ಲಿ ಇಸ್ರೇಲ್‌ ಮತ್ತು ಪ್ಯಾಲೆಸ್ತೇನ್‌ನ ಹಮಾಸ್‌ ಬಂಡುಕೋರರ ನಡುವೆ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಗಾಜಾ ನಗರದ ಮೇಲೆ ಮಂಗಳವಾರ ಮುಂಜಾನೆ ಇಸ್ರೇಲ್‌ ನಡೆಸಿದ ರಾಕೆಟ್‌ ದಾಳಿಯಲ್ಲಿ 35 ಮಂದಿ ಬಲಿಯಾಗಿದ್ದಾರೆ. 100 ಕ್ಕೂ ಹೆಚ್ಚುಮಂದಿಗೆ ಗಂಭೀರಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇತ್ತ, ಹಮಾಸ್‌ ಬಂಡುಕೋರರೂ ಇಸ್ರೇಲ್‌ ಸೇನಾಪಡೆ ಮೇಲೆ ಸರಣಿ ರಾಕೆಟ್‌ ದಾಳಿ ನಡೆಸಿದ್ದು, ಇಬ್ಬರು ಇಸ್ರೇಲಿ ಅಧಿಕಾರಿಗಳು ಮೃತಪಟ್ಟಿದ್ದಾರೆ. ಇದರೊಂದಿಗೆ ಗಾಜಾ ಪಟ್ಟಿಯಲ್ಲಿ ಉದ್ವಿಗ್ನತೆ ತೀವ್ರಗೊಂಡಿದೆ. ಮತ್ತೊಂದೆಡೆ, ಇಸ್ರೇಲ್‌ 5,000 ಮೀಸಲು ಪಡೆ ಯೋಧರನ್ನು ನಿಯೋಜಿಸುವ ಮೂಲಕ ಗಡಿಯಲ್ಲಿ ಸೇನಾಪಡೆಯನ್ನು ಹೆಚ್ಚಳ ಮಾಡಿದೆ.

ಇಸ್ರೇಲ್‌ ನಡೆಸಿದ ರಾಕೆಟ್‌ ದಾಳಿಯ ವೇಳೆ ಹಮಾಸ್‌ ಬಂಡುಕೋರರ ಫೀಲ್ಡ್‌ ಕಮಾಂಡರ್‌ ಮನೆ ಹಾಗೂ ಹಮಾಸ್‌ ಬಂಡುಕೋರರು ತೋಡಿದ್ದ ಎರಡು ಗಡಿ ಸುರಂಗಗಳನ್ನು ಟಾರ್ಗೆಟ್‌ ಮಾಡಲಾಗಿದೆ.

ಇದನ್ನೂ ಓದಿ : ಭಾರತೀಯರು ಕೊರೊನಾದಿಂದಷ್ಟೆ ಸಾಯುತ್ತಿಲ್ಲ – WHO ವಿಜ್ಞಾನಿ ಸೌಮ್ಯ ಸ್ವಾಮಿನಾಥನ್

ಮಂಗಳವಾರ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಗಾಜಾದಲ್ಲಿ 10 ಮಕ್ಕಳು ಸೇರಿದಂತೆ 35 ಪ್ಯಾಲೆಸ್ತೇನಿಗಳು ಮೃತಪಟ್ಟಿದ್ದಾರೆ ಎಂದು ಗಾಜಾದ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಯಹೂದಿಗಳು ಮತ್ತು ಮುಸ್ಲಿಮರು ಎರಡೂ ಸಮುದಾಯದ ಪವಿತ್ರ ಸ್ಥಳವಾದ ಜೆರೂಸೆಲೆಂನ ಅಲ್‌-ಅಕ್ಸಾ ಮಸೀದಿ ಕಾಂಪೌಂಡ್‌ ಬಳಿ ಇಸ್ರೇಲ್‌ ಮತ್ತು ಪ್ಯಾಲೆಸ್ತೇನ್‌ ಪಡೆಗಳ ನಡುವೆ ಒಂದು ವಾರದಿಂದ ನಡೆಯುತ್ತಿರುವ ಸಂಘರ್ಷ ಈಗ ಯುದ್ಧದ ಸ್ವರೂಪ ಪಡೆದುಕೊಳ್ಳುವ ಆತಂಕ ಎದುರಾಗಿದೆ.

ಪ್ಯಾಲೆಸ್ತೀನಿಯನ್ನರ ಮೇಲೆ ಇಸ್ರೇಲಿ ದಾಳಿ- ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡನೆ : ಇಸ್ರೇಲ್ ಗಾಝಾ ಪಟ್ಟಿಯ ಮೇಲೆ ನಡೆಸಿರುವ ವಿಮಾನ ದಾಳಿಗಳಿಂದ ಹಲವಾರು ಪ್ಯಾಲೆಸ್ತೀನಿ ನಾಗರಿಕರು ಸಾವನ್ನಪ್ಪಿದ್ದಾರೆ. ಇದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ.

ಇಸ್ರೇಲ್ ಪೂರ್ವ ಜೆರುಸಲೇಂನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳವತ್ತ ಸಾಗುತ್ತಿದೆ, ಯೆಹೂದಿಗಳನ್ನು ನೆಲೆಗೊಳಿಸಲಿಕ್ಕೆ ಅವಕಾಶ ಮಾಡಿಕೊಡಲು ಶೇಖ್ ಜರ‍್ರಾಹದ ಸುತ್ತಮುತ್ತಲ ನಿವಾಸಿಗಳನ್ನು ಬಲವಂತದಿಂದ ಓಡಿಸುವ ಪ್ರಯತ್ನಗಳನ್ನು ಪ್ರತಿಭಟಿಸುತ್ತಿದ್ದ ಪ್ಯಾಲೆಸ್ತೇನಿಯನ್ನರ ಮೇಲೆ ಅದು ದಾಳಿ ಮಾಡಿದೆ. ಇಸ್ರೇಲಿ ಪಡೆಗಳು ಮುಸ್ಲಿಮರ ಮೂರನೇ ಪವಿತ್ರ ಸ್ಥಳವೆನಿಸಿರುವ ಅಲ್ ಅಕ್ಸಾ ಮಸೀದಿಯ ಆವರಣದೊಳಕ್ಕೆ ನುಗ್ಗಿ ರಂಝಾನ್ ತಿಂಗಳ ಪ್ರಾರ್ಥನೆಯಲ್ಲಿ ತೊಡಗಿದ್ದವರನ್ನು ಗಾಯಗೊಳಿಸಿವೆ.

ಇಸ್ರೇಲಿ ಚುನಾವಣೆಗಳಲ್ಲಿ ಬಹುಮತ ಗಳಿಸಲು ಮತ್ತೆ-ಮತ್ತೆ ವಿಫಲವಾಗಿರುವ ನೆತನ್ಯಾಹು, ಕ್ಷುಲ್ಲಕ ರಾಜಕೀಯ ಪ್ರಯೋಜನಕ್ಕಾಗಿ ಮತ್ತು ಕೊವಿಡ್ ಮಹಾಸೋಂಕಿನ ಉಬ್ಬರದಿಂದ ಜನಗಳನ್ನು ರಕ್ಷಿಸಲು ಸರಕಾರ ವಿಫಲವಾಗಿರುವುದನ್ನು ಮುಚ್ಚಿಕೊಳ್ಳಲು ಈ ದಾಳಿಗಳನ್ನು ಹರಿಯಬಿಟ್ಟಿದ್ದಾರೆ. ಇಸ್ರೇಲಿನಲ್ಲಿರುವ ಪ್ಯಾಲೆಸ್ತೇನಿಯನ್ನರ ವಿರುದ್ಧ ಲಸಿಕೆ ಹಾಕುವಲ್ಲಿಯೂ ತಾರತಮ್ಯ ತೋರಲಾಗುತ್ತಿದೆ, ಇದು ಇಸ್ರೇಲ್ ಅನುಸರಿಸುತ್ತಿರುವ ಜನಾಂಗದ್ವೇಷದ ಧೋರಣೆಯನ್ನು ಬಿಂಬಿಸುತ್ತದೆ.

ಇಸ್ರೇಲಿನ ಈ ಕೃತ್ಯಗಳು ಮಾನವ ಹಕ್ಕುಗಳ ಮತ್ತು ವಿಶ್ವಸಂಸ್ಥೆ ಅಂಗೀಕರಿಸಿರುವ ಹಲವು ನಿರ್ಣಯಗಳ ಉಲ್ಲಂಘನೆಯಾಗಿವೆ ಎಂದಿರುವ ಸಿಪಿಐ(ಎಂ) ಇವನ್ನು ಖಂಡಿಸಿದೆ ಮತ್ತು ಭಾರತ ಸರಕಾರ ಹಾಗೂ ಭಾರತೀಯ ಜನತೆ ಪ್ಯಾಲೆಸ್ತೀನಿನ ಜನತೆಗೆ ತಮ್ಮ ಬೆಂಬಲದ ದನಿಯೆತ್ತಬೇಕು ಎಂದು ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *