ನವದೆಹಲಿ: “ಇಸ್ಕಾನ್ ತನ್ನ ಎಲ್ಲಾ ಹಸುಗಳನ್ನು ಮಾಂಸ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತದೆ” ಎಂದು ಬಿಜೆಪಿ ಸಂಸದೆ ಮನೇಕಾ ಗಾಂಧಿ ಅವರು ಹೇಳಿದ್ದಾರೆ. ಪ್ರಾಣಿ ಹಕ್ಕುಗಳ ಹೋರಾಟಗಾರರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ದೇಶದ ಅತ್ಯಂತ ದೊಡ್ಡ ಮೋಸಗಾರ ಇಸ್ಕಾನ್ ಆಗಿದೆ ಎಂದು ಪ್ರತಿಪಾದಿಸಿದ್ದಾರೆ.
ಪ್ರಾಣಿ ಹಕ್ಕುಗಳ ಹೋರಾಟಗಾರ ಡಾ.ಹರ್ಷ ಆತ್ಮಕುರಿಗೆ ನೀಡಿದ ವಿಡಿಯೋ ಸಂದರ್ಶನದಲ್ಲಿ ಮಾತನಾಡಿದ ಮನೇಕಾ ಅವರು, ದೇಶದ ಇಂದಿನ ಹೈನುಗಾರಿಕೆಯ ಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದರು. 2025 ರ ವೇಳೆಗೆ ಹಾಲಿನ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಸರ್ಕಾರದ ಕಾರ್ಯಕ್ರಮಗಳನ್ನು ಟೀಕಿಸಿದ ಅವರು, “ಉದ್ಯಮವು ಪ್ರಾಣಿಗಳ ಬಗ್ಗೆ ಸಹಾನುಭೂತಿ ತೋರಿಸುವುದು ಅಸಾಧ್ಯ” ಎಂದು ಹೇಳಿದ್ದು, ಹೈನುಗಾರಿಕೆಯನ್ನು ಮುಚ್ಚಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಂಸತ್ತಿನಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಸಂಸದನಿಗೆ ಪ್ರಮುಖ ಚುನಾವಣಾ ಜವಾಬ್ದಾರಿ ನೀಡಿದ ಬಿಜೆಪಿ!
ತಮ್ಮ ಈ ವಾದವನ್ನು ವಿವರಿಸಲು ಅವರು ಇಸ್ಕಾನ್‌ನ ಡೈರಿ ಫಾರ್ಮ್‌ಗಳ ಉದಾಹರಣೆಯನ್ನು ತೆಗೆದುಕೊಂಡಿದ್ದಾರೆ. “ಇಂದಿನ ಭಾರತದ ಅತಿ ದೊಡ್ಡ ಮೋಸಗಾರ ಇಸ್ಕಾನ್ ಆಗಿದೆ. ಅವರು ಸರ್ಕಾರದಿಂದ ಅನಿಯಮಿತ ಪ್ರಯೋಜನಗಳನ್ನು ಪಡೆಯುವ ಗೋಶಾಲೆಗಳನ್ನು ಸ್ಥಾಪಿಸುತ್ತಾರೆ. ಭಾರಿ ಭೂಮಿ ಹಾಗೂ ಎಲ್ಲವೂ ಪಡೆಯುತ್ತಾರೆ!” ಎಂದು ಮನೇಕಾ ಹೇಳಿದ್ದಾರೆ.
“ನಾನು ಅವರ ಅನಂತಪುರದ ಗೋಶಾಲೆಗೆ ಈಗಷ್ಟೇ ಭೇಟಿ ನೀಡಿದ್ದೆ. ಅಲ್ಲಿ ಒಂದೇ ಒಂದು ಗೊಡ್ಡು ಹಸು, ಒಂದು ಕರು ಕೂಡಾ ಇಲ್ಲ. ಅಂದರೆ ಅವೆಲ್ಲವೂ ಮಾರಾಟವಾಗಿವೆ. ಇಸ್ಕಾನ್ ತನ್ನ ಎಲ್ಲಾ ಹಸುಗಳನ್ನು ಮಾಂಸದ ವ್ಯಾಪಾರಿಗಳಿಗೆ ಮಾರುತ್ತಿದೆ. ಪ್ರಾಯಶಃ ಅವರಷ್ಟು ಜಾನುವಾರುಗಳನ್ನು ಮಾಂಸದ ವ್ಯಾಪಾರಿಗಳಿಗೆ ಮಾರಿದವರು ಯಾರಿಲ್ಲ. ಅವರೇ ಅದನ್ನು ಮಾಡುತ್ತಾರೆಂದರೆ, ಬೇರೆಯವರ ಬಗ್ಗೆ ಏನು ಹೇಳುವುದು?” ಎಂದು ಅವರು ಕೇಳಿದ್ದಾರೆ.
Here's what BJP MP Maneka Gandhi has to say on #ISKCON and Cow Slaughter. pic.twitter.com/MIC277YByF
— Mohammed Zubair (@zoo_bear) September 26, 2023
ಮನೇಕಾ ಅವರ ವೈರಲ್ ವೀಡಿಯೊ ಕ್ಲಿಪ್‌ಗೆ ಇಸ್ಕಾನ್ ಪ್ರತಿಕ್ರಿಯಿಸಿದ್ದು, ಅವರ ಆರೋಪಗಳು “ಆಧಾರ ರಹಿತ ಮತ್ತು ಸುಳ್ಳು ಮಾಹಿತಿ” ಎಂದು ತಿಳಿಸಿದೆ. ಅವರ ಹೇಳಿಕೆಗಳಿಗೆ ಆಶ್ಚರ್ಯ ವ್ಯಕ್ತಪಡಿಸಿರುವ ಇಸ್ಕಾನ್, ಮನೇಕಾ ಅವರು ಪ್ರಸಿದ್ಧ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿಯಾಗಿದ್ದು, ಇಸ್ಕಾನ್‌ನ ಹಿತೈಷಿಯು ಆಗಿದ್ದಾರೆ ಎಂದು ಹೇಳಿದೆ.
ವಿಡಿಯೊ ನೋಡಿ: ಮಹಿಳಾ ಮೀಸಲಾತಿ ಲೆಕ್ಕಾಚಾರ ಏನು? ಎತ್ತ? ಕೆ.ಎಸ್. ವಿಮಲಾ ಜೊತೆ ಮಾತುಕತೆ #womensreservationbill