ಬೆಂಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನದ 25ಕ್ಕೂ ಹೆಚ್ಚು ಕಡೆ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ, ಬೆಂಗಳೂರಿನ ತಮ್ಮ ಅಧಿಕೃತ ನಿವಾಸದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಮಂಗಳೂರು ವಿಭಾಗದ ಅರಣ್ಯಾಧಿಕಾರಿ ಮರಿಯಪ್ಪ ಕರಿಕಳನ್ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿದ್ದಾರೆ.
ಕುದುರೆಮುಖ ಅರಣ್ಯದೊಳಗಿರುವ ಕೆಲವು ನಿವಾಸಿಗಳು ಸ್ವಯಂ ಪ್ರೇರಿತವಾಗಿ ಹೊರಬರಲು ಇಚ್ಛಿಸಿದ್ದು, ಈ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಿ, ಕಾಂಪಾ ನಿಧಿಯಿಂದ ಅರಣ್ಯ ವಾಸಿಗಳ ಸ್ಥಳಾಂತರ ಕುರಿತಂತೆ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಸೇರಿಸಿ ತಕ್ಷಣವೇ ಕಡತದಲ್ಲಿ ಸಲ್ಲಿಸುವಂತೆಯೂ ಸೂಚಿಸಿದರು.
ಇದನ್ನೂ ಓದಿ: ಮುಟ್ಟಿನ ರಜೆ ರಿಯಾಯ್ತಿಯಲ್ಲ, ಮಹಿಳಾ ಕಾರ್ಮಿಕರ ವಾಸ್ತವಿಕ ಸಮಾನತೆಗೆ ಅಗತ್ಯ ಕ್ರಮ-ಸಿಐಟಿಯು
ಯಾರಾದರೂ ಉದ್ದೇಶಪೂರ್ವಕವಾಗಿ ಕಾಡಿಗೆ ಬೆಂಕಿ ಹಚ್ಚಿದ್ದರೆ ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ ಈಶ್ವರ ಖಂಡ್ರೆ, ಅಧಿಕಾರಿ ಮತ್ತು ಸಿಬ್ಬಂದಿಯ ಲೋಪವಿದ್ದರೆ ಅವರ ವಿರುದ್ಧವೂ ಕ್ರಮಕ್ಕೆ ಶಿಫಾರಸು ಮಾಡುವಂತೆ ತಿಳಿಸಿದರು.
ಯುವ ವೈದ್ಯೆ ಸಾವಿಗೆ ಸಂತಾಪ:
ಶಿವಮೊಗ್ಗದ ಮೃಗಾಲಯದಲ್ಲಿ 27 ವರ್ಷದ ಯುವ ಪಶುವೈದ್ಯೆ ನೀರಾನೆ ದಾಳಿಯಿಂದ ಮೃತಪಟ್ಟಿರುವ ಕುರಿತಂತೆಯೂ ಸಭೆಯಲ್ಲಿ ಚರ್ಚಿಸಿದ ಸಚಿವರು, ಯಾವುದೇ ಸಿಬ್ಬಂದಿ ಅಥವಾ ಪಶುವೈದ್ಯರು ವನ್ಯಜೀವಿಗಳಿಗೆ ಚಿಕಿತ್ಸೆ ನೀಡುವಾಗ ಕಡ್ಡಾಯವಾಗಿ ಪ್ರಮಾಣಿತ ಮಾನದಂಡ(SOP) ಪಾಲಿಸುವಂತೆ ಸ್ಪಷ್ಟ ಸೂಚನೆ ನೀಡಲು ತಿಳಿಸಿದರು.
ಪ್ರಕರಣ ಕುರಿತಂತೆ ಸಿಸಿಎಫ್ ದರ್ಜೆಯ ಅಧಿಕಾರಿಯಿಂದ ತನಿಖೆ ಮಾಡಿಸಿ 7 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆಯೂ ಸಚಿವರು ನಿರ್ದೇಶನ ನೀಡಿದರು.
ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಕುಮಾರ್ ಪುಷ್ಕರ್, ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಪಾಲ್ಗೊಂಡಿದ್ದರು.
ಇದನ್ನೂ ನೋಡಿ: ಮುಟ್ಟಿನ ರಜೆಜೆ ಏಕಿಷ್ಟು ಸಿಟ್ಟು , ಅದು ನಮ್ಮ ಹುಟ್ಟಿನ ಗುಟ್ಟು – ಕೆ.ಎಸ್. ವಿಮಲಾ Janashakthi Media
