ಚೀನೀ ತಂತ್ರಜ್ಞರಿಗೆ ‘ಟೈಟ್’ ವೀಸಾ ನೀತಿ’ ಭಾರತದ ಆತ್ಮನಿರ್ಭರತೆ ತಂದೀತೆ?

-ಅಶೋಕ ಮೋದಿ

-ಅನುವಾದ : ಜಿ.ಎಸ್.ಮಣಿ

(ಮೂಲ ಮತ್ತು ಕೃಪೆ : 30-07-24 ರ‘ದಿ ಹಿಂದೂ’)

ಚೀನಿ ತಂತ್ರಜ್ಞರು 2019 ರಲ್ಲಿ 2 ಲಕ್ಷ ವೀಸಾ ಗಳನ್ನು ಪಡೆದರು. ಭಾರತ ಮತ್ತು ಚೀನಾದ ಪಡೆಗಳ 2020 ರ ಘರ್ಷಣೆಯ ನಂತರ ಈ ಸಂಖ್ಯೆ ಕಳೆದ ಸಾಲಿನಲ್ಲಿ 2 ಸಾವಿರಕ್ಕೆ ಇಳಿದಿತ್ತು. ಇಲ್ಲಿ ರಕ್ಷಣಾ-ಚಾಲಿತ ಮನೋಭಾವ ಆಕ್ರಮಿಸಿಕೊಂಡಿದೆ.ರಾಷ್ಟ್ರೀಯ ಸುರಕ್ಷತೆ ಮತ್ತು ಸ್ವಾವಲಂಬನೆಯ ಮಂತ್ರಗಳು ಪುಟ್ಟ ಪುಟ್ಟ ಹೆಜ್ಜೆಗಳಾದ ಅವಶ್ಯ ವಿದೇಶಿ ತಂತ್ರಜ್ಞರ ವೀಸಾ ನೀಡಿಕೆಗೆ ಅಡ್ಡಬರುವುದಾದರೆ,ಜಾಗತಿಕ ಉತ್ಪಾದನೆಯಲ್ಲಿ ಮುನ್ನಡೆ ಸಾಧಿಸುವತ್ತ ಭಾರತ ಹೊಸ ಪ್ರಾರಂಭ ಮಾಡಲು ಇರುವ ಇನ್ನೊಂದು ಅವಕಾಶವನ್ನೂ ಕಳೆದುಕೊಳ್ಳುತ್ತದೆ.

ಭಾರತದ ವಿವಿಧ ವ್ಯವಹಾರೋದ್ದಿಮೆಗಳಿಗೆ ಚೀನೀಯ ತಂತ್ರಜ್ಞರ ಅವಶ್ಯಕತೆ ತುರ್ತಾಗಿ ಬೇಕಿರುವುದರಿಂದ ಭಾರತದ ಅಧಿಕಾರಿಗಳು ಅಂತಹ ತಂತ್ರಜ್ಞರಿಗೆ ಹೆಚ್ಚಿನ ವೀಸಾಗಳನ್ನು ನೀಡಲಾಗುವುದೆಂಬ ಭರವಸೆ ನೀಡಿದ್ದಾರೆ. ಉದ್ದಿಮೆ ಮತ್ತು ಆಂತರಿಕ ವ್ಯವಹಾರಗಳ ಬಡತಿ ಇಲಾಖೆಯ ಕಾರ್ಯದರ್ಶಿಗಳಾದ ರಾಜೇಶ್ ಕುಮಾರ್ ಸಿಂಗ್ ಅವರು ಭಾರತ ಮತ್ತು ಚೀನೀಯ ಕಾರ್ಖಾನೆ ಕೆಲಸಗಾರರು ಮತ್ತು ಮೇಲುಸ್ತುವಾರಿಗಳ ನಡುವೆ ಬಹಳ ಅಂತರ ಇದೆ ಎಂಬುದನ್ನುಇತ್ತೀಚೆಗೆ ಒಪ್ಪಿಕೊಂಡಿದ್ದಾರೆ. ವೆಲ್ಲೂರಿನ ಶೂ ಉತ್ಪಾದಕರೊಬ್ಬರು ವಿವರಿಸಿದಂತೆ ಚೀನಿಯ ವೃತ್ತಿನಿರತರು “ಅತಿ ಹೆಚ್ಚು ಉತ್ಪಾದಕ ಸಾಮರ್ಥ್ಯ ಉಳ್ಳವರು”. ಅವರು ಅಷ್ಟೇ ಸಂಪನ್ಮೂಲಗಳನ್ನು ಬಳಸಿ ನಾವು 100 ಉತ್ಪನ್ನಗಳನ್ನು ತಯಾರಿಸಿದರೆ ಅವರು 150 ಉತ್ಪನ್ನಗಳನ್ನು ತಯಾರಿಸಬಲ್ಲರು” ಎಂದು ವಿವರಿಸಿದ್ದಾರೆ. ಭಾರತದ ಇಂಜಿನೀರಿಂಗ್ ರಫ್ತು ಹೆಚ್ಚಳ ಮಂಡಳಿಯ (Engineering Export Promotion Council of India) ಅದ್ಯಕ್ಷರು ಚೀನಾದ ತಾಂತ್ರಿಕರಿಗೆ ಹೆಚ್ಚಿನ ವೀಸಾ ನೀಡಬೇಕೆಂಬ ಕೂಗಿಗೆ ದನಿ ಕೂಡಿಸಿದ್ದಾರೆ.

ಪಾದರಕ್ಷೆಯಿಂದ ಜವಳಿ ಉತ್ಪನ್ನಗಳು, ಇಂಜಿನೀಯರಿಂಗ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳವರೆಗೆ ಭಾರತದ ಉದ್ಯಮಿಗಳು ಚೀನಾದ ಯಂತ್ರಗಳನ್ನು ಖರೀದಿಸಿದ್ದಾರೆ. ಆದರೆ ಚೀನಾದ  ತಂತ್ರಜ್ಞರ ನೆರವಿಲ್ಲದೆ ಈ ಯಂತ್ರಗಳನ್ನು ಸರಿಯಾಗಿ ಬಳಸಲಾರರು. ಭಾರತದ ಉದ್ದಿಮೆ ಸಂಘಗಳ ನಾಯಕರು ಯಂತ್ರಗಳು ಖಾಲಿ ಇವೆ ಮತ್ತು ತಮ್ಮ ರಫ್ತು ಗುರಿಗಳು ಅಪರಿಪೂರ್ಣವಾಗಿವೆ ಎಂದು ಅಧಿಕಾರಿಗಳಿಗೆ ಜ್ಞಾಪನ ಪತ್ರ ಬರೆಯುತ್ತಲೇ ಇದ್ದಾರೆ. ಗೌತಮ್ ಅಡಾಣಿಯವರ ಸೌರ ಉತ್ಪಾದನಾ ಯಂತ್ರ ಕೂಡ ಚೀನಾದ ಕೆಲಸಗಾರರಿಗೆ ವೀಸಾ ನೀಡುವ ಸಲುವಾಗಿ ಕಾಯುತ್ತಿವೆ.

ಇದನ್ನೂ ಓದಿ: ಬಾಂಗ್ಲಾದೇಶ-ಭಾರತ ನಡುವಿನ ಎಲ್ಲಾ ರೈಲು ಸಂಚಾರ ರದ್ದು!

ಭಾರತದ ಕೌಶಲ್ಯದಲ್ಲಿ ಬಹುದೊಡ್ಡ ಕೊರತೆಯಿದೆಯೆಂಬುದನ್ನು ಅಧಿಕೃತವಾಗಿ ಒಪ್ಪಿಕೊಂಡಿರುವುದು ಬಹಳ ಮಹತ್ವದ್ದು ಮತ್ತು ಅಷ್ಟೇ ಮೆಚ್ಚಬೇಕಾದ್ದು. ಕಡಿಮೆ ತಂತ್ರಜ್ಞಾನದ ಗಾಢ ಶ್ರಮದ ಉತ್ಪಾದನೆಗೂ ನೈಪುಣ್ಯದ ಗಣಿಯೇ ಬೇಕಾಗುತ್ತದೆ ಎಂಬ ಅಧಿಕೃತ ಸ್ಪಷ್ಟತೆ ಅಪರೂಪ. ಚೀನಾ ಕಳೆದ 40 ವರ್ಷಗಳ ಕಾಲ ಇಂತಹ ನೈಪುಣ್ಯತೆಯನ್ನು ಬಹಳ ಶ್ರಮಪಟ್ಟು ಬೆಳೆಸಿ ಉತ್ಪಾದಕತೆಯ ಕೇಂದ್ರವಾಗಿದೆ. ಅದರ ಪರಿಣಿತರು ಬೇರೆ ಎಲ್ಲಿಗಿಂತಲೂ ಅಗ್ಗವಾಗಿ  ದೊರೆಯಬಲ್ಲರು. ಸಾಮಾನ್ಯವಾಗಿ ಪರಿಣಿತರ ವಿಷಯದಲ್ಲಿ ವೀಸಾಕ್ಕೆ ನಿರ್ಬಂಧಗಳು ತೀರಾ ಕಡಿಮೆಯಿದ್ದರೂ, ಭಾರತದ ಸರ್ಕಾರ ಚೀನೀಯ ಪರಿಣಿತರ ವೀಸಾದ ವಿಷಯದಲ್ಲಿ ರಾಷ್ಟ್ರೀಯ ಸುರಕ್ಷೆಯ ಹೆಸರಿನಲ್ಲಿ ತಡೆ ಒಡ್ಡುತ್ತದೆ. ಇದೊಂದು ದೊಡ್ಡ ಸಮಸ್ಯೆ. ಭಾರತವು ಕೌಶಲ್ಯದ ಏಣಿಗಳ ಮೊದಲ ಮೆಟ್ಟಲುಗಳನ್ನು ಹತ್ತಲು ಚೀನೀ ಪರಿಣತರು ನೆರವಾಗಬಲ್ಲರು. ಈ  ಮೆಟ್ಟಲುಗಳು ನಿಲುಕದಷ್ಟು ಎತ್ತರವಾಗತೊಡಗಿವೆ. ಭಾರತ ಈ ಮೆಟ್ಟಲುಗಳಿಗೆ ಹಾರಬೇಕು ಎಂಬುದು ಇಂದಿನ ಅವಶ್ಯ.

ಭಾರತ ಸರ್ಕಾರ ಹೆಚ್ಚು ವೀಸಾ ನೀಡುವ ವಿಷಯದಲ್ಲಿ ನಿಧಾನವಾಗಿರುವುದರಿಂದ ಈ ವಿಷಯದಲ್ಲಿ ಇರುವ ನಿಜವಾದ ಅಪರಾಧಿಯ ಮೇಲೆ ಕ್ರಮ ಜರುಗಿಸಬೇಕು. ಆ ಅಪರಾಧಿ ಭಾರತದ ಕಳಪೆ ಶಿಕ್ಷಣ. ಎಲ್ಲ ಹೆಗ್ಗಳಿಕೆಯ ಹೊರತಾಗಿಯೂ ಜಗತ್ತು ಭಾರತಕ್ಕಾಗಿ ಕಾಯುವುದಿಲ್ಲ. ವಿದೇಶಿ ತಾಂತ್ರಿಕ ನೆರವು ಇಲ್ಲದೆ ಮತ್ತು ಅಪಾರವಾಗಿ ಸುಧಾರಿತ ಶಿಕ್ಷಣ (ಚೀನಾದಲ್ಲೂ ಇಂತಹದ್ದೇ ಸ್ಥಿತಿ ಇತ್ತು) ಇಲ್ಲದೆ ಶ್ರೀಮಂತ ಕೆಲಸ-ಭರಿತ ಸಮೃದ್ದಿ ಕ್ರೂರ ಮರೀಚಿಕೆ ಆಗುತ್ತದೆ.

ಎದೆಗುಂದಿಸುವ ವೀಸಾ ಪರಿಸ್ಥಿತಿಗಳು

ಚೀನಿ ರಾಷ್ಟ್ರೀಯರು 2019 ರಲ್ಲಿ 2 ಲಕ್ಷ ವೀಸಾ ಗಳನ್ನು ಪಡೆದರು. ಭಾರತ ಮತ್ತು ಚೀನಾದ ಪಡೆಗಳ 2020 ರ ಘರ್ಷಣೆಯ ನಂತರ ಈ ಸಂಖ್ಯೆ ತೀವ್ರ ಇಳಿಕೆ ಕಂಡಿತು. ಚೀನೀಯರು ವೀಸಾ ನಿಯಮಗಳನ್ನು ಮುರಿಯುತ್ತಿದ್ದಾರೆ, ಹಣಕಾಸಿನ ಅವ್ಯವಹಾರ ಮತ್ತು ತೆರಿಗೆ ತಪ್ಪಿಸುವ ಕೆಲಸ ಮಾಡುತ್ತಾರೆ ಎಂದು ಭಾರತದ ಅಧಿಕಾರಿಗಳು ಆಪಾದಿಸಿದರು. ಕಳೆದ ಸಾಲಿನಲ್ಲಿ ಭಾರತೀಯ ವೀಸಾ ಪಡೆದ ಚೀನೀಯರ ಸಂಖ್ಯೆ 2 ಸಾವಿರಕ್ಕೆ ಇಳಿದಿತ್ತು. ಇಲ್ಲಿ ರಕ್ಷಣಾ-ಚಾಲಿತ ಮನೋಭಾವ ಆಕ್ರಮಿಸಿಕೊಂಡಿದೆ. ಈ ವರ್ಷ ಚೀನಾದ 1000 ಇಲೆಕ್ಟ್ರೋನಿಕ್ ವೃತ್ತಿನಿರತರ ವೀಸಾಗಳೂ “ಗಾಢ ಪರಿಶೋಧನೆ”ಯ ಹೆಸರಿನಲ್ಲಿಪೈಪ್ ಲೈನಿನಲ್ಲಿ ಸಿಕ್ಕಿ ಕೊಳೆಯುತ್ತಿವೆ.

ವಾಣಿಜ್ಯ ಮತ್ತು ಉದ್ದಿಮೆ ಮಂತ್ರಾಲಯದ ಅಧಿಕಾರಿಗಳ ಸಕಾರಾತ್ಮಕ ಬೊಬ್ಬೆಗಳ ನಡುವೆಯೂ ಅನಾಮಿಕನಾಗಿ ಇರಬಯಸುವ ಒಬ್ಬ ಕ್ಯಾಬಿನೆಟ್ ಮಂತ್ರಿ ಈ ನಿರೀಕ್ಷೆಗಳಿಗೆ ತಣ್ಣೀರು ಎರಚಿದರು. ಅವರು ಹೇಳಿದ್ದು: “ಚೀನೀಯ ತಂತ್ರಜ್ಞರು ಮತ್ತು ವ್ಯಾಪಾರಿಗಳಿಗೆ ವಿಸಾಗಳನ್ನು ನೀಡುವ ಮೊದಲು ಅವರು ಪ್ರಯಾಣ ಷರತ್ತುಗಳನ್ನು ಮುರಿಯುವುದಿಲ್ಲವೆಂಬ ಭರವಸೆ ನೀಡಿದ ಮೇಲೆ ಗಾಢ ಪರಿಶೋಧನೆಯ ನಂತರವೇ ನೀಡಲಾಗುವುದು” ಎಂದರು. ಇಂತಹ “ಗಾಢ ಪರಿಶೋಧನೆ”ಗಳು ಈ ಪ್ರಯತ್ನಗಳನ್ನು ‘ಸಾವಿರ ಕಡಿತ’ಗಳ ಮೂಲಕ ಕೊಲ್ಲಬಹುದು.

ರಾಷ್ಟ್ರೀಯ ಸುರಕ್ಷೆಯ ಈ ಪ್ರಬಲ  ವಾದ,  ಸ್ವಾವಲಂಬಿ ಭಾರತೀಯ ಉತ್ಪಾದನಾ ಸುವರ್ಣ ಯುಗದ “ಆತ್ಮ ನಿರ್ಭರ ಭಾರತ” ಮತ್ತು ಆಕರ್ಷಕ ಮೇಲುಡುಗೆ ತೊಟ್ಟು ಮೆರೆಯುತ್ತದೆ. ಈ ಸ್ವಾವಲಂಬನೆಯ  ತೀವ್ರ ವ್ಯಂಗ್ಯ ಏನೆಂದರೆ ‘ಭಾರತ ವಿದೇಶಿ ಪರಿಣಿತಿ ಅದರಲ್ಲೂ ಚೀನಾದ ಪರಿಣಿತಿಯ ಮೇಲೆ ಅವಲಂಬಿಸುವ ಅನಿವಾರ್ಯತೆ ಈ ಸಂದರ್ಭದಲ್ಲಿ ಇದೆ’ ಎಂಬುದು ಭಾರತೀಯ ಅಧಿಕಾರಿಗಳ ಅವಗಾಹನೆಯಿಂದ ತಪ್ಪಿಹೋಗಿರುವುದು.!

ಚೀನೀ ತಂತ್ರಜ್ಞರಿಗೆ ‘ಟೈಟ್’ ವೀಸಾ ನೀತಿ’ ಭಾರತದ ಆತ್ಮನಿರ್ಭರತೆ ತಂದೀತೆ?

ವಿದೇಶೀ ಜ್ಞಾನವನ್ನು ಏಕೀಕರಿಸಿಕೊಳ್ಳುವುದು

ಪೂರ್ವ ಎಷಿಯಾದ ಆರ್ಥಿಕ ಇತಿಹಾಸ ನಮಗೆ ಕಲಿಸುವುದು ‘ವಿದೇಶೀ ಜ್ಞಾನ’ ಮುಖ್ಯ, ಆದರೆ ಅದು ಸುಶಿಕ್ಷಿತ ದೇಶೀ ಕೆಲಸಗಾರರು ಅದನ್ನು ಆರ್ಜಿಸಿಕೊಂಡು ದುಡಿದಾಗ ಮಾತ್ರ ಅಭಿವೃದ್ದಿಯನ್ನು ಸ್ಪುರಿಸಬಲ್ಲುದು. ದುರ್ಬಲ ಭಾರತೀಯ ಶಿಕ್ಷಣ, ವಿದೇಶೀ ಪರಿಣಿತಿಯನ್ನು ನಮಗೆ ಅನಿವಾರ್ಯಗೊಳಿಸುತ್ತದೆ. ಎಂಬತ್ತರ ದಶಕದಲ್ಲಿ ಕೊರಿಯಾದ ವಹಿವಾಟುಗಳು ವಿದೇಶೀ ಯಂತ್ರಗಳನ್ನು ಕೊಂಡು ಅವುಗಳನ್ನು ಬಿಚ್ಚಿ ಅದರ ಪರಿಣತಿ-ತಂತ್ರಜ್ಞಾನಗಳನ್ನು ಕಲಿಯಲು(ರಿವರ್ಸ ಇಂಜಿನೀಯರಿಂಗ್)ಬಳಸಿದರು. ಅಷ್ಟರಲ್ಲಾಗಲೇ ಕೊರಿಯಾ ಮೂರು ದಶಕಗಳ ಘನ ಶೈಕ್ಷಣಿಕ ಅಡಿಪಾಯ ಹಾಕಿಕೊಂಡಿದ್ದರಿಂದ ಅದಕ್ಕೆ ಕನಿಷ್ಠ ಮಾನವ ನೆರವಿನ ಅವಶ್ಯಕತೆ ಕಂಡು ಬಂತು. ಅವರು ಯಂತ್ರಗಳಲ್ಲಿ ಅಡಕವಾದ ವಿದೇಶೀ ಜ್ಞಾನವನ್ನುಪಡೆದುಕೊಂಡರು.

ಚೀನಾ ಎಂಬತ್ತರ ದಶಕದಲ್ಲಿ ತನ್ನ ನಾಗಾಲೋಟದ ಬೆಳವಣಿಗೆಯನ್ನು ಕೊರಿಯಾ ದೇಶಕ್ಕಿಂತ ದುರ್ಬಲ ಶೈಕ್ಷಣಿಕ ತಳಹದಿಯ ಮೇಲೆ ಪ್ರಾರಂಬಿಸಿತು. ಆದರೆ “ಕಮ್ಯೂನಿಷ್ಟ್ ಕಾಲದಲ್ಲಿ ಸಾಧಿಸಿದ” ಚೀನಾದ ಪ್ರಾಥಮಿಕ ಶಿಕ್ಷಣದ ಅಗಲ ಮತ್ತು ಗುಣಮಟ್ಟವುಕ್ಷಿಪ್ರ ಬೆಳವಣಿಗೆ ಸಾಧಿಸುವಲ್ಲಿ ನೆರವಾಯಿತು. ಇದನ್ನು 1981 ರ ವಿಶ್ವ ಬ್ಯಾಂಕ್ ನ ವರದಿ ಭವಿಷ್ಯ ನುಡಿದಿತ್ತು. ಇಂತಹ ಆಂತರಿಕ ಸಾಮರ್ಥ್ಯಗಳನ್ನು ಹೆಚ್ಚಿಸಲು ಡೆಂಗ್ ಕ್ಸಿಯಾ ಪಿಂಗ್ ಅವರು ತನ್ನ ಹಿರಿಯ ನೀತಿ ನಿರೂಪಕರನ್ನು ಅಂತರ್ರಾಷ್ಟ್ರೀಯ ಶಿಕ್ಷಣ ಪ್ರವಾಸದ ಮೇಲೆ ಕಳುಹಿಸಿ ಮತ್ತು ಜಾಗತಿಕ ಜ್ಞಾನವನ್ನು ಚೀನಾಕ್ಕೆ ತರಬಲ್ಲ ವಿದೇಶೀ ಹೂಡಿಕೆದಾರರನ್ನು ಆಹ್ವಾನಿಸುವ ಮೂಲಕ ಸಾಧಿಸಿದರು. ಮತ್ತೊಮ್ಮೆ ಆಂತರಿಕ ಜ್ಞಾನ ಮತ್ತು ವಿದೇಶೀ ಜ್ಞಾನಗಳ ಪಾರಸ್ಪರಿಕ ಕ್ರಿಯೆಗಳು ಶಕ್ತವಾಗಿ ಚೀನಾ ಜಗತ್ತಿನ ಉತ್ಪಾದಕ ಕೇಂದ್ರವಾಗಿ ಹೊರಹೊಮ್ಮಲು ಕೊಡುಗೆ ನೀಡಿದವು.

ಭಾರತ ಇದೇ ಸಮಯದಲ್ಲಿ ಹೆಚ್ಚಿನ ಶಾಲಾ ಕಟ್ಟಡಗಳನ್ನು ಕಟ್ಟಿ ಹೆಚ್ಚು ಮಕ್ಕಳನ್ನು ಶಾಲೆಗಳಿಗೆ ನೋಂದಾಯಿಸಿತು. ಕಲಿಕೆಯ ಪರಿಣಾಮಗಳ ಸಮೀಕ್ಷೆಗಳು ಎತ್ತಿ ತೋರಿಸಿದಂತೆ ಈ ಶಾಲೆಗಳು ಮಕ್ಕಳಿಗೆ ಶಿಕ್ಷಣವನ್ನು ಕ್ವಚಿತ್ತಾಗಿ ನೀಡಿದವು.  ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದ ಎರಿಕ್ ಹನುಷೇಕ್ –ಈತ ಗುಣಾತ್ಮಕ ಶಿಕ್ಷಣ ಮತ್ತು ಬೆಳವಣಿಗೆಗಳ ನಡುವಿನ ನಿಕಟ ಸಂಭಂಧವನ್ನು ನಿರೂಪಿಸಿದ ಮಹಾನ್ ವಿದ್ವಾಂಸ- ಹೇಳುವಂತೆ ಕೇವಲ ಶೇ 15 ರಷ್ಟು ಭಾರತೀಯ ಶಾಲಾ ವಿದ್ಯಾರ್ಥಿಗಳು ಅಂತರ್ರಾಷ್ಟ್ರೀಯ ಆರ್ಥಿಕತೆ ಬಯಸುವ ಪ್ರಾಥಮಿಕ ಓದು ಮತ್ತು ಗಣಿತದ ಕೌಶಲ್ಯಗಳನ್ನು ಹೊಂದಿದ್ದಾರೆ; ಅದೇ ಚೀನಾದಲ್ಲಿ ಶೇ 85 ರಷ್ಟು ಮಕ್ಕಳು ಇಂತಹ ಕೌಶಲ್ಯಗಳನ್ನು ಹೊಂದಿದ್ದಾರೆ.

ಹೀಗಿದ್ದರೂ ಚೀನಾ ನಿಂತ ನೀರಾಗಿಲ್ಲ. ಚೀನಾದ ಶಾಲಾ ವಿದ್ಯಾರ್ಥಿಗಳು ಆರ್ಥಿಕ ಸಹಕಾರ ಮತ್ತು ಬೆಳವಣಿಗೆಯ ಸಂಸ್ಥೆ (OECD) ನಡೆಸುವ  ಜಗತ್ತಿನ ವಿದ್ಯಾರ್ಥಿಗಳ ಮಾಪನ ಕಾರ್ಯಕ್ರಮದಲ್ಲಿ (PISA- ಅಂತರ್ರಾಷ್ಟ್ರೀಯ ವಿದ್ಯಾರ್ಥಿ ಮಾಪನ ಕಾರ್ಯಕ್ರಮ) ತಮ್ಮ ಸಾಧನೆಗಳನ್ನು ಉತ್ತಮಪಡಿಸಿಕೊಳ್ಳುತ್ತ ಬಂದಿದ್ದಾರೆ. ನಿರಂತರ PISA ಮಾಪನಗಳು ಮತ್ತು ಚೀನಾದ ಆಂತರಿಕ ಮಾಪನಗಳಲ್ಲಿ ಚೀನಾದ ಅತಿ ಹೆಚ್ಚಿನ ಸಂಖ್ಯೆಯ ಮಕ್ಕಳು ಜಾಗತಿಕ ಮಟ್ಟದ ಕಲಿಕಾ ಸಾಮರ್ಥ್ಯವನ್ನು ತೋರಿದ್ದಾರೆ. ಭಾರತ 2009 ರಲ್ಲಿ PISA ಮಾಪನದಲ್ಲಿ ಭಾಗವಹಿಸಿ ದೈನ್ಯ ಸಾಧನೆ ಕಂಡು ಮಾಪನದಿಂದ ಹೊರಬಂತು.

ಕೆಂಪು ರಾಣಿ ಪಂದ್ಯ 

ಚೀನಾ ತನ್ನ ಎಲ್ಲ ದೋಷ ಮತ್ತು ಸಮಸ್ಯೆಗಳ ನಡುವೆಯೂ ಪ್ರಾಥಮಿಕವಾದ ಲುವಿಸ್ ಕೆರೋಲ್ ಅವರ “ದೃಷ್ಟಿ ದರ್ಪಣ”(Through the Looking Glass) ದ ಮೂಲಕ “ಕೆಂಪು ರಾಣಿ” ಕಲಿಸಿದ ಪಾಠವನ್ನು ಕಲಿತಿದೆ. (ಸ್ಪರ್ದೆಯ ಜಗತ್ತಿನಲ್ಲಿ) ಅದೇ ಸ್ಥಾನದಲ್ಲಿ ಇರಲು ಎರಡು ಪಟ್ಟು ಹೆಚ್ಚು ವೇಗದಲ್ಲಿ ಓಡಬೇಕು ಎಂಬುದೇ ಆ ಪಾಠ. ಮುಂದೆ ಹೋಗಲು ಅದಕ್ಕಿಂತ ವೇಗದಲ್ಲಿ ಓಡಬೇಕು. ಚೀನಾದ ವಿಶ್ವವಿದ್ಯಾಲಯಗಳು ಜಗತ್ತಿನ ಅತ್ಯುತ್ತಮವಾದವು: ಮುಖ್ಯವಾಗಿ ಕಂಪ್ಯೂಟರ್ ವಿಜ್ಞಾನ ಮತ್ತು ಗಣಿತದ ವಿಷಯಗಳಲ್ಲಿ. ಉದ್ದಿಮೆಗಳ ಪ್ರಗತಿಗೆ ಸಂಬಂದಿಸಿದ ಅನ್ವಯಿಕ ವಿಜ್ಞಾನಗಳಲ್ಲಿ  ಚೀನಾದ ವಿಜ್ಞಾನಿಗಳು ತೀವ್ರ ಪ್ರಗತಿ ಸಾಧಿಸುತ್ತಿದ್ದಾರೆ. ವಿದ್ಯುತ್ ವಾಹನಗಳು ಮತ್ತು ಸೌರ ತಂತ್ರಜ್ಞಾನದಲ್ಲಿ ಜಾಗತಿಕ ಮುಂದಾಳತ್ವ ಹೊಂದಿರುವ ಚೀನಾ ಕೃತಕ ಬುದ್ದಿಮತ್ತೆಯ ಗರ್ಭಗುಡಿಯನ್ನೇ ಪ್ರವೇಶಿಸಿದೆ.

ಸರಳವಾಗಿ ಹೇಳುವುದಾದರೆ, ಚೀನಾ ಜಾಗತಿಕ ತಂತ್ರಜ್ಞಾನಗಳ ಗಡಿಗಳನ್ನು ಮೀರಿ ಪಾಶ್ಚಿಮಾತ್ಯ ನಾಯಕರುಗಳ ಗಮನವನ್ನು ಸೆಳೆದಿದೆ. ಈ ಪಾಶ್ಚಿಮಾತ್ಯರು ತಮ್ಮ ಕುಬ್ಜ ಶೈಕ್ಷಣಿಕ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳುವ ಬದಲು ಅಸಮ ಸ್ಪರ್ಧೆಯ ಕೂಗು ಹಾಕಿ ಚೀನಾದ ಆಮದುಗಳನ್ನು ತಡೆಯುವ ಹುನ್ನಾರ ಮಾಡುತ್ತಿದ್ದಾರೆ. ಇಂತಹ ರಕ್ಷಣಾತ್ಮಕತೆಗೆ “ಉದ್ದಿಮೆ ನೀತಿ”ಯಘನತೆ ಕೊಟ್ಟರೂ, ಅದು ಅವರ ಶೈಕ್ಷಣಿಕ ವ್ಯವಸ್ಥೆಗಳ ಪ್ರಾಥಮಿಕ ದೋಷಗಳನ್ನು ಸರಿಪಡಿಸುವುದಿಲ್ಲ.

ಭಾರತೀಯ ಮತ್ತು ಅಂತರ್ರಾಷ್ಟ್ರೀಯ ಕುಲೀನರು ಚೀನಾದ ಉದಾಹರಣೆಯಿಂದ ಪಾಠ ಕಲಿಯಲು ಸಮರ್ಥರಿರುವಂತೆ ಕಾಣುವುದಿಲ್ಲ. ಅರ್ಥ ಶಾಸ್ತ್ರಜ್ಞರಾದ ರೋಹಿತ್ ಲಾಂಬ ಮತ್ತು ರಘುರಾಮ್ ರಾಜನ್ ಅವರು ಜಾಗತಿಕ ಮಾರುಕಟ್ಟೆಯಲ್ಲಿನ ತೀವ್ರ ಶ್ರಮದ ಉತ್ಪನ್ನಗಳನ್ನು ಭಾರತೀಯ ಕೆಲಸಗಳ ಮೂಲಕ ಸೃಷ್ಟಿಸುವ ಆಸೆಯನ್ನೇ ತೊರೆದಿರುವಂತೆ ಇದೆ. ಬದಲಿಗೆ ಅವರು ಭಾರತ ತಂತ್ರಜ್ಞಾನ-ಆಧಾರಿತ ಸೇವೆಗಳ ಕೆಲಸಗಳನ್ನು ಹೆಚ್ಚಿಸಿ ರಫ್ತು ಮಾಡಬೇಕು ಎನ್ನುತ್ತಾರೆ. ಈ ಪ್ರಸ್ತಾಪ ಉತ್ತಮ ಗುಣಮಟ್ಟದ ಭಾರತೀಯ ವಿಶ್ವವಿದ್ಯಾಲಯ ಶಿಕ್ಷಣದ ಅಲ್ಪ ಆಧಾರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತದೆ. ಇತಿಹಾಸಕಾರ ಮುಕುಲ್ ಕೇಶವನ್ ಅವರು ದೆಹಲಿ ವಿಶ್ವವಿದ್ಯಾಲಯದ ಕೊಳೆಯುವಿಕೆಯ ವಿವರಣೆಯನ್ನು ನಮಗೆ ನೆನಪಿಸುವಂತೆ ಭಾರತದ ನಾಯಕತ್ವ ನಮ್ಮ ಅತ್ಯುತ್ತಮ ಸಂಸ್ಥೆಗಳನ್ನು ನಿಸ್ಸಾರಗೊಳಿಸುವ ಕಾಯಕದಲ್ಲಿ ತೊಡಗಿದೆ.

ಭಾರತದಲ್ಲಿನ ವಾಸ್ತವ

ಕೋವಿಡ್ ಮಹಾಸೋಂಕಿನಸಂದರ್ಭದಲ್ಲಿ ತಂತ್ರಜ್ಞಾನ ಸಂಬಂಧಿತ ಸೇವೆಗಳ ರಫ್ತಿನಲ್ಲಿ ಕಂಡು ಬಂದ ಚಿಮ್ಮುವಿಕೆ ಈಗ ನಿಂತುಹೋಗಿದೆ. ಐಐಟಿ ಪದವಿ ಪಡೆದವರೂ ಕೆಲಸಕ್ಕಾಗಿ ಪರದಾಡುವಂತಹ ಸ್ಥಿತಿ ಇದೆ. ಹಿಂದೆ ಬೆಂಗಳೂರಿನ ಐಟಿ ಆರ್ಥಿಕದಲ್ಲಿ ತಳಮಟ್ಟದಲ್ಲಿ ಬೆಂಬಲ, ನಿರ್ವಹಣೆ, ಮತ್ತು ಮೂಲ ಕೊಡಿಂಗ್ ಕೆಲಸ ಮಾಡುತ್ತಿದ್ದವರು ಇಂದು ಗಿಗ್  ಆರ್ಥಿಕತೆಯಲ್ಲಿ ಅವಕಾಶ ಹುಡುಕುತ್ತಿದ್ದಾರೆ. ಮಾಹಿತಿ ತಂತ್ರಜ್ಞಾನ ಕೆಲಸಗಳು ಈ ಹಿಂದೆ 2023 ರಲ್ಲಿ ಶಿಖರ ರೂಪದಲ್ಲಿ ಇದ್ದ 50 ಲಕ್ಷಗಳಿಗಿಂತ ಸ್ವಲ್ಪ ಮೇಲೆ ಇದ್ದದ್ದು ಕೆಳಗಿಳಿದಿದೆ. ಕೆಲಸ ಮಾಡುವ ವಯಸ್ಸಿನ ಜನಸಂಖ್ಯೆಯೇ ನೂರು ಕೋಟಿ ಇರುವಲ್ಲಿ ಮತ್ತು ಕೆಲಸ ಮಾಡುವ ಪಡೆ 60 ಕೋಟಿ ಇರುವಲ್ಲಿ ಇದು ಅತಿ ಕಡಿಮೆ ಸಂಖ್ಯೆ.

ಇಂತಹ ಗಟ್ಟಿ ಪುರಾವೆ ಇರುವಲ್ಲಿ ಫೈನಾನ್ಷಿಯಲ್ ಟೈಮ್ಸ್ ನ ಮಾರ್ಟಿನ್ ವೋಲ್ಫ್ ಭಾರತ –ತನ್ನ ಕೋಟಿ ಕೋಟಿ ಮಕ್ಕಳಿಗೆ ಸರಿಯಾದ ಶಿಕ್ಷಣ ಮತ್ತು ಘನತೆಯ ಉದ್ಯೋಗ ನೀಡಲಾರದ ದೇಶವಾಗಿದ್ದರೂ- ಜಾಗತಿಕವಾಗಿ ಆರ್ಥಿಕ ಮಹಾಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಅಳುಕಿಲ್ಲದೆ ಭವಿಷ್ಯ ನುಡಿಯುತ್ತಾನೆ. ಭಾರತ “ಚೀನಾ+1 ಅವಕಾಶ”ವನ್ನು (ಜಾಗತಿಕ ಉತ್ಪಾದನೆಯ ಕೇಂದ್ರವಾಗಿ ಚೀನಾದ ಜತೆ ಇನ್ನೊಂದು ದೇಶದ ಬದಲಿ ಇಟ್ಟುಕೊಳ್ಳಬೇಕು ಎಂಬ ಅಭಿವೃದ್ಧ ದೇಶಗಳ ದೈತ್ಯ ಕಂಫನಿಗಳ ನೀತಿ) ಕಳೆದುಕೊಂಡಿದೆ. ಮೆಕ್ಸಿಕೊ (ತನ್ನ ಆಯಕಟ್ಟಿನ ನೆಲೆಯಿಂದ) ಮತ್ತು ವಿಯಟ್ನಾಮ್ (ಆಯಕ್ಕಟ್ಟಿನ ಸ್ಥಾನ ಮತ್ತು ತನ್ನ ಅಸಾಮಾನ್ಯ ಮಾನವ ಬಂಡವಾಳದಿಂದಾಗಿ) ಚೀನಾದ ಉತ್ಪನ್ನಗಳ ಮೇಲೆ ನಿರ್ಬಂಧಗಳು ಬಂದಾಗ ಅವಕಾಶಗಳನ್ನು ಸೆರೆ ಹಿಡಿದವು. ನಿಜವೇನೆಂದರೆ ವಿದೇಶಿ ಹೂಡಿಕೆದಾರರು ಭಾರತದಿಂದ ದೂರ ಹೋಗಲು ನೋಡುತ್ತಿದ್ದಾರೆ. ಭಾರತದ ತೀವ್ರ ಶ್ರಮದ ಉತ್ಪನ್ನಗಳ ರಫ್ತು (ಸರಕು ರಫ್ತಿನಲ್ಲಿ ಪೆಟ್ರೊ ರಸಾಯನಿಕಗಳು ಮತ್ತು ರಸಾಯನಿಕಗಳನ್ನು ಕಳೆದರೆ) ಜಾಗತಿಕ ಮಾರುಕಟ್ಟೆಯ ಶೇ 1.3 ರಷ್ಟರಲ್ಲೇ ಸಿಲುಕಿಕೊಂಡಿದೆ. ಇದು ವಿಯಟ್ನಾಮಿನ ಪಾಲಿಗಿಂತಲೂ ಕಡಿಮೆ.

ರಾಷ್ಟ್ರೀಯ ಸುರಕ್ಷತೆ ಮತ್ತು ಸ್ವಾವಲಂಬನೆಯ ಮಂತ್ರಗಳು ಪುಟ್ಟ ಪುಟ್ಟ ಹೆಜ್ಜೆಗಳಾದ ಅವಶ್ಯ ವಿದೇಶಿ ತಂತ್ರಜ್ಞರ ವೀಸಾ ನೀಡಿಕೆಗೆ ಅಡ್ಡಬರುವುದಾದರೆ, ಭಾರತ ಹೊಸ ಪ್ರಾರಂಭ ಮಾಡಲು ಇರುವ ಇನ್ನೊಂದು ಅವಕಾಶವನ್ನೂ ಕಳೆದುಕೊಳ್ಳುತ್ತದೆ ಎಂಬುದನ್ನು ನಾವು ತಿಳಿಯಬೇಕು. ವಿಫಲ ಶಾಲಾ ಶಿಕ್ಷಣ ಮತ್ತು ವಿಶ್ವವಿದ್ಯಾಲಯ ಶಿಕ್ಷಣ, ಅತಿರಂಜಿತ ರೂಪಾಯಿ ಬೆಲೆ ಇರುವಲ್ಲಿ ತೀವ್ರ ಶ್ರಮದ ಉತ್ಪನ್ನಗಳ ರಫ್ತು ಮತ್ತೊಮ್ಮೆ ಸಾಯುತ್ತದೆ. ಭಾರತ ತನ್ನ ನ್ಯೂನ ಮಾನವ ಸಂಪನ್ಮೂಲಗಳನ್ನು ಸರಿಪಡಿಸಿಕೊಳ್ಳಬೇಕೆ ಹೊರತು ಜಗತ್ತಿನಲ್ಲಿ ತನ್ನ ಸ್ಥಾನಮಾನಗಳ ಬಗ್ಗೆ ಕಲ್ಪನೆಗಳ ಕನಸು ಹೆಣೆಯುವುದಲ್ಲ. ಜಾಗತಿಕ “ಕೆಂಪು ರಾಣಿ” ಪಂದ್ಯ ತೀವ್ರವಾಗುತ್ತಿದೆ. ಘನತೆಯ ಕೆಲಸಗಳಿಗಾಗಿ ಲಕ್ಷ ಲಕ್ಷ ಜನ ಅಸಹಾಯಕರಾಗಿ ನೋಡುತ್ತಿರುವಂತೆ ಅವಕಾಶಗಳ ಬಾಗಿಲುಗಳು ಒಂದರ ಹಿಂದೆ ಒಂದರಂತೆ ಮುಚ್ಚಿಕೊಳ್ಳುತ್ತವೆ.

ಅಶೋಕ ಮೋದಿ ಯವರು ಇತ್ತೀಚೆಗೆ ಪ್ರಿನ್ಸ್ ಟನ್ ವಿಶ್ವವಿದ್ಯಾಲಯದಿಂದ ನಿವೃತ್ತರಾದರು. ಅವರು ಇದಕ್ಕೂ ಮೊದಲು ವಿಶ್ವ ಬ್ಯಾಂಕ್ ಮತ್ತು ಅಂತರ್ರಾಷ್ಟ್ರೀಯ ಹಣಕಾಸು ನಿಧಿ (ಐ ಎಂ ಎಫ್) ಗಳಲ್ಲಿ ಕೆಲಸ ಮಾಡಿದವರು.

ಇದನ್ನೂ ನೋಡಿ: ಕೇಂದ್ರ ಬಜೆಟ್‌ 2024 | ಸುಳ್ಳು ಅಂಕಿ ಅಂಶಗಳಿರುವ ದೇಶ ವಿರೋಧಿ ಬಜೆಟ್‌ – ಡಾ. ಕೆ.ಪ್ರಕಾಶ್ Janashakthi Media

Donate Janashakthi Media

Leave a Reply

Your email address will not be published. Required fields are marked *