ಸರ್ಕಾರ ಭ್ರಷ್ಟ ಕೆಪಿಎಸ್ಸಿ ಜೊತೆ ಶಾಮೀಲಾಗಿದೆಯೇ? ಟಿ.ಎ.ನಾರಾಯಣ ಗೌಡ ಪ್ರಶ್ನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಕೆಟ್ಟ ಹೆಸರು ತೆಗೆದುಕೊಂಡವರಲ್ಲ. ಆದರೆ ಕೆಪಿಎಸ್ಸಿಯಿಂದ ಅನ್ಯಾಯಕ್ಕೊಳಗಾದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನ್ಯಾಯವಾದರೆ ಅವರ ರಾಜಕೀಯ ಜೀವನದಲ್ಲಿ ಅದೊಂದು ಕಪ್ಪು ಚುಕ್ಕೆಯಾಗಿ ಉಳಿಯಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಸಿದ್ದಾರೆ. ಸರ್ಕಾರ

ಕೆಎಎಸ್ ಪರೀಕ್ಷೆಯಲ್ಲಿ ಅನ್ಯಾಯಕ್ಕೆ ಒಳಗಾದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನಿನ್ನೆಯಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿಯ ಎರಡನೇ ದಿನವಾದ ಇಂದು ಸಾವಿರಾರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಮೌನ ಮುರಿದು ಕನ್ನಡದ ಮಕ್ಕಳ ಜೊತೆ ನಿಲ್ಲಬೇಕು. ಇಲ್ಲವಾದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ ಎಂದು ಎಚ್ಚರಿಸಿದರು.

ಕೆಪಿಎಸ್ಸಿ ಭ್ರಷ್ಟಾಚಾರದಲ್ಲಿ ಸರ್ಕಾರವೂ ಪಾಲುದಾರ ಆಗಿದೆಯಾ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ. ಮುಖ್ಯಮಂತ್ರಿಗಳ ಮೌನ ನೋಡಿದರೆ ಅದೇ ನಿಜ ಅನ್ನಿಸುತ್ತಿದೆ. ಕನ್ನಡದ ಮಕ್ಕಳಿಗೆ ಅನ್ಯಾಯ ಮಾಡಿದ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಇನ್ನೂ ಅದೇ ಸ್ಥಾನದಲ್ಲಿ ಮುಂದುವರೆದಿರುವುದನ್ನು ಗಮನಿಸಿದರೆ, ಈ ಅನ್ಯಾಯಕ್ಕೆ ಸರ್ಕಾರವೇ ಬೆಂಬಲವಾಗಿ ನಿಂತಿದೆ ಎಂಬ ಅನುಮಾನ ಬಲವಾಗುತ್ತಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಅಸಹಾಯಕರನ್ನು ರಕ್ಷಿಸಲು ಕಿರು ಸಾಲ ಮತ್ತು ಸಣ್ಣ ಸಾಲ ವಿಧೇಯಕಕ್ಕೆ ಅಂಗೀಕಾರ

ಈಗಾಗಲೇ ಮುಖ್ಯಮಂತ್ರಿಗಳನ್ನು ಮೂರು ಬಾರಿ ಭೇಟಿ ಮಾಡಿ ವಸ್ತುಸ್ಥಿತಿಯನ್ನು ವಿವರಿಸಲಾಗಿದೆ. ಪ್ರಶ್ನೆ ಪತ್ರಿಕೆಯಲ್ಲಿ ಆಗಿರುವ ತಪ್ಪುಗಳನ್ನು ಸಂಪೂರ್ಣವಾಗಿ ದಾಖಲೆ ಸಮೇತ ನೀಡಲಾಗಿದೆ. ಆದರೆ ಸಿದ್ಧರಾಮಯ್ಯ ಅವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಮುಖ್ಯಮಂತ್ರಿಗಳನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ನಾನು ಸುಮ್ಮನೆ ಹೇಳುತ್ತಿಲ್ಲ, ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ಸಂದರ್ಭದಲ್ಲಿ ಅತೀಕ್ ಅವರು ಕೆಪಿಎಸ್ಸಿಯಿಂದ ತಪ್ಪೇ ಆಗಿಲ್ಲ ಎಂದು ದಾರಿತಪ್ಪಿಸುವುದನ್ನು ನೋಡಿದೆ. ಇಂಥ ಅಧಿಕಾರಿಗಳು ಇದ್ದರೆ ಜನಸಾಮಾನ್ಯರಿಗೆ ನ್ಯಾಯ ದೊರೆಯಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಸಾಮ್ರಾಟ್ ಅಶೋಕ್ ಅಲ್ಲ, ಬರೀ ಅಶೋಕ್

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿಧಾನಸಭೆಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆದ ಅನ್ಯಾಯದ ಬಗ್ಗೆ ಒಮ್ಮೆ ಮಾತಾಡಿ ಆಮೇಲೆ ಮೌನಕ್ಕೆ ಶರಣರಾದರು. ವಿರೋಧ ಪಕ್ಷದ ನಾಯಕರ ಮಾತಿಗೆ ಸರ್ಕಾರ ನಡುಗಬೇಕು. ಅವರು ಇನ್ನೂ ಸಾಮ್ರಾಟ್ ಅಶೋಕ್ ಅಲ್ಲ, ಬರೀ ಅಶೋಕ್ ಎಂದು ವ್ಯಂಗ್ಯವಾಡಿದರು.

ವಿಧಾನಸಭೆಯಲ್ಲಿ ಕುಳಿತಿರುವವರಿಗೆ ಕನ್ನಡ, ಕರ್ನಾಟಕ, ಕನ್ನಡಿಗರ ಪರವಾದ ಕಾಳಜಿ ಇಲ್ಲ. ಅವರು ಯಾವತ್ತೂ ಕನ್ನಡಿಗರ ಪರವಾಗಿ ಬೀದಿಗೆ ಬಂದು ಹೋರಾಟ ನಡೆಸಿದವರಲ್ಲ, ಕನ್ನಡಕ್ಕಾಗಿ ಜೈಲುವಾಸ ಅನುಭವಿಸಿದವರಲ್ಲ. ಇಂಥವರಿಂದ ಕನ್ನಡದ ಮಕ್ಕಳಿಗೆ ನ್ಯಾಯ ದೊರೆಯುವುದು ಹೇಗೆ ಎಂದು ಪ್ರಶ್ನಿಸಿದರು.

ದೇಶ ಆಳುತ್ತಿರುವುದು ನರೇಂದ್ರ ಮೋದಿಯಲ್ಲ!

ಇವತ್ತು ದೇಶವನ್ನು ಆಳುತ್ತಿರುವುದು ನರೇಂದ್ರ ಮೋದಿಯಲ್ಲ, ಹತ್ತು ಮಂದಿ ಉದ್ಯಮಪತಿಗಳು. ನಾವು ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕಳಿಸುತ್ತೇವೆ, ಆದರೆ ನಮ್ಮನ್ನು ಆಳುವವರು ಅದಾನಿಗಳು, ಅಂಬಾನಿಗಳು. ಕರ್ನಾಟಕದಲ್ಲೂ ಉದ್ಯಮಪತಿಗಳದ್ದೇ ದರ್ಬಾರಾಗಿದೆ. ನಮ್ಮನ್ನು ಆಳುವವರು ರಾತ್ರಿ 12 ಗಂಟೆಯಾದರೂ ಶ್ರೀಮಂತರಿಗೆ ಮನೆ ಬಾಗಿಲು ತೆರೆದಿರುತ್ತಾರೆ ಎಂದು ಟೀಕಿಸಿದರು.

ದೇಶದ ಪ್ರತಿಭೆಗಳೆಲ್ಲ ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಅವರು ಹೋದ ದೇಶಗಳನ್ನು ಉದ್ಧಾರ ಮಾಡುತ್ತಾರೆ. ಇಲ್ಲಿ ಅವರನ್ನು ಉಳಿಸಿಕೊಳ್ಳುವ ಯೋಗ್ಯತೆ ನಮ್ಮ ರಾಜಕಾರಣಿಗಳಿಗಿಲ್ಲ ಎಂದು ಅವರು ಟೀಕಿಸಿದರು.

ಕರವೇ ಸುಮ್ಮನಿರೋದಿಲ್ಲ

2023ರ ಡಿಸೆಂಬರ್ 27ರಂದು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ನಾಮಫಲಕ ಕಡ್ಡಾಯಕ್ಕಾಗಿ ನಡೆಸಿದ ಚಳವಳಿಯನ್ನು ನೆನಪಿಸಿಕೊಳ್ಳಿ. ಅಂಥ ಹೋರಾಟವನ್ನು ನಾವು ಮತ್ತೆ ಮಾಡಬೇಕಾಗುತ್ತದೆ. ಕೆಪಿಎಸ್ಸಿ ಅನ್ಯಾಯದ ವಿರುದ್ಧದ ನಮ್ಮ ಚಳವಳಿ ಇದುವರೆಗೆ ಶಾಂತಿಯುತವಾಗಿ ನಡೆಯುತ್ತಿದೆ. ಆದರೆ ನಮ್ಮ ತಾಳ್ಮೆಗೂ ಒಂದು ಮಿತಿಯಿದೆ ಎಂದು ಅವರು ಎಚ್ಚರಿಸಿದರು.

384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ ಹೊಸದಾಗಿ ನೋಟಿಫಿಕೇಷನ್ ಹೊರಡಿಸಬೇಕು. ಈಗ ಅನ್ಯಾಯದ ಪೂರ್ವಭಾವಿ ಪರೀಕ್ಷೆಯ ನಂತರ ನಡೆಸಲು ಉದ್ದೇಶಿಸಿರುವ ಮುಖ್ಯಪರೀಕ್ಷೆಯ ಎಲ್ಲ ಪ್ರಕ್ರಿಯೆಗಳನ್ನು ರದ್ದುಗೊಳಿಸಬೇಕು, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.

ಇದನ್ನೂ ನೋಡಿ: English Tenses | ಇಂಗ್ಲೀಷ್‌ ಕಾಲಗಳು | ಕನ್ನಡ ವಿವರಣೆ | ಇಂಗ್ಲೀಷ್‌ ಕಲಿಯೋಣ – ಸಂಚಿಕೆ – 02 |Janashakthi Media

Donate Janashakthi Media

Leave a Reply

Your email address will not be published. Required fields are marked *