ಭಾರತದಲ್ಲಿ ಬ್ಯಾಂಕ್‌ಗಳ ವಿದೇಶಿ ಒಡೆತನಕ್ಕೆ ಬಾಗಿಲು ತೆರೆಯಲಾಗುತ್ತಿದೆಯೇ?

ಕೃಷಿ, ಸಣ್ಣ ಕೈಗಾರಿಕೆಗಳ ಮತ್ತು ಸಣ್ಣ ಪುಟ್ಟ ವ್ಯವಹಾರಗಳ ವಲಯದ ಅಂಚಿನಲ್ಲಿರುವ ಸಾಲಗಾರರಿಗೆ ಬ್ಯಾಂಕ್ ಸಾಲಗಳನ್ನು ನೇರವಾಗಿ ಲಭಿಸುವಂತೆ ಮಾಡುವುದು ಮತ್ತು ಸಾಲ ಸಂಬಂಧಿತ ಎಲ್ಲ ಮಧ್ಯವರ್ತಿಗಳನ್ನು ಹೊರಗಿಡುವುದು ಬ್ಯಾಂಕ್ ರಾಷ್ಟ್ರೀಕರಣದ ಮೂಲ ಉದ್ದೇಶವಾಗಿತ್ತು. ಅದನ್ನು ಮಣ್ಣುಪಾಲು ಮಾಡಲಾಗಿದೆ. ಮತ್ತೊಂದೆಡೆಯಲ್ಲಿ, ಸಾರ್ವಜನಿಕ ವಲಯದ ಬ್ಯಾಂಕ್‌ಗಳೂ ಸೇರಿದಂತೆ ಇಡೀ ಬ್ಯಾಂಕಿಂಗ್ ವ್ಯವಸ್ಥೆಯು ಈಗ ದೊಡ್ಡ ದೊಡ್ಡ ಉದ್ದಿಮೆಗಳ ಅಡಿಯಾಳಾಗಿದೆ. ಇದರೊಂದಿಗೆ ಭಾರತದ ಬ್ಯಾಂಕ್‌ಗಳ ವಿದೇಶಿ ಒಡೆತನದಿಂದಾಗಿ ಬ್ಯಾಂಕ್ ಸಾಲಗಳು ವಿದೇಶಿ ಸ್ವತ್ತುಗಳು ಮತ್ತು ಜೂಜುಕೋರ ಚಟುವಟಿಕೆಗಳತ್ತ ಹರಿಯುತ್ತವೆ. ಸಮಾಜದ ಅಂಚಿನಲ್ಲಿರುವ ವಿಭಾಗಗಳ ಸಾಲಗಾರರು ಬ್ಯಾಂಕ್ ಸಾಲಗಳಿಂದ ಮತ್ತಷ್ಟು ದೂರ ಉಳಿಯುತ್ತಾರೆ.

-ಪ್ರೊ. ಪ್ರಭಾತ್ ಪಟ್ನಾಯಕ್

-ಅನು : ಕೆ.ಎಂ.ನಾಗರಾಜ್

ಭಾರತದ ಬ್ಯಾಂಕ್‌ಗಳ ಒಡೆತನದಲ್ಲಿ ಅನಿವಾಸಿಗಳು ಶೇ. 15 ರಷ್ಟು ಮಾಲೀಕತ್ವದ ಗರಿಷ್ಟ ಪಾಲನ್ನು ಹೊಂದಬಹುದು ಎಂಬ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದೆ. ಇದು ಆಯಾ ಪ್ರಕರಣದ ಅನುಸಾರವಾಗಿ ಹೆಚ್ಚಿಸಬಹುದಾದ್ದು, ಆದರೂ ಈ ಮಿತಿ ಇಂದಿಗೂ ಕಾನೂನು ಪುಸ್ತಕಗಳಲ್ಲಿ ಉಳಿದಿದೆ. 1994 ರಲ್ಲಿ (ನವ-ಉದಾರವಾದಿ ಅವಧಿಯಲ್ಲಿಯೇ) ಥೈಲ್ಯಾಂಡ್ ಮೂಲದ ಎಸ್ ಎಸ್ ಚೌವಾಲಾ ಗುಂಪು ಕೇರಳದ ಕ್ಯಾಥೋಲಿಕ್ ಸಿರಿಯನ್ ಬ್ಯಾಂಕಿನ ಶೇ. 34 ರಷ್ಟು ಈಕ್ವಿಟಿಯನ್ನು ಹೊಂದಲು ಮಾಡಿದ ಪ್ರಯತ್ನವನ್ನು ತಿರಸ್ಕರಿಸಲಾಗಿತ್ತು, ಆ ಕ್ರಮವು ಸರಿಯಾಗಿತ್ತು ಕೂಡ. ಆದರೆ 2028ರಲ್ಲಿ ಇದೇ ಬ್ಯಾಂಕಿನ ಶೇ.51ರಷ್ಟು ಈಕ್ವಿಟಿಯನ್ನು (ಷೇರುಗಳನ್ನು) ಖರೀದಿಸಲು ಕೆನಡಾದ ಫೇರ್‌ಫ್ಯಾಕ್ಸ್ ಎಂಬ ಕಂಪೆನಿಯ ಮಾರಿಷಸ್‌ನಲ್ಲಿ ನೆಲೆಗೊಂಡಿರುವ ಹೋಲ್ಡಿಂಗ್ ಕಂಪನಿಯು ಖರೀದಿಸಲು ಅನುಮತಿ ನೀಡಲಾಯಿತು. ಶೇ. 15ರ ಮಿತಿಯನ್ನು 2018ರಲ್ಲಿ ಏಕೆ ಉಲ್ಲಂಘಿಸಲಾಯಿತು ಎಂಬುದರ ಬಗ್ಗೆ ಕೇಂದ್ರ ಸರ್ಕಾರವಾಗಲಿ ಅಥವಾ ರಿಸರ್ವ್ ಬ್ಯಾಂಕ್ ಆಗಲಿ ಯಾವ ವಿವರಣೆಯನ್ನೂ ಕೊಟ್ಟಿಲ್ಲ.

ಅದಕ್ಕಿಂತಲೂ ಮಿಗಿಲಾಗಿ, ಐಡಿಬಿಐ ಬ್ಯಾಂಕನ್ನು ವಿದೇಶಿ ಒಡೆತನದ ಖಾಸಗಿ ಸಂಸ್ಥೆಯೊಂದಕ್ಕೆ ಮಾರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಲಾಗಿದೆ. ಈ ಬ್ಯಾಂಕನ್ನು ಸಾರ್ವಜನಿಕ ವಲಯದ ಬ್ಯಾಂಕ್ ಎಂದು ವರ್ಗೀಕರಿಸಲಾಗಿಲ್ಲವಾದರೂ, ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮವು ಅದರ ಬಹುಪಾಲು ಷೇರುಗಳ ಮಾಲೀಕತ್ವವನ್ನು ಹೊಂದಿದೆ.

ಇದನ್ನೂ ಓದಿ: ಕಲಬುರಗಿ | ಬೆಳೆನಷ್ಟ ಪರಿಹಾರ : ರೈತರಿಗೆ 8,500 ರೂ ಸಿಎಂ ಸಿದ್ದರಾಮಯ್ಯ ಘೋಷಣೆ

ಈ ಕ್ರಮಗಳ ವಿರುದ್ಧ ಪ್ರತಿಭಟನೆಗಳು ನಡೆದಿವೆಯಾದರೂ, ವಿದೇಶಿ ಸಂಸ್ಥೆಗಳು ಭಾರತದ ಬ್ಯಾಂಕ್‌ಗಳ ಮೇಲೆ ಹಿಡಿತ ಸಾಧಿಸುವ ಅವಕಾಶವನ್ನು ನೀಡುವ ನಿಟ್ಟಿನಲ್ಲಿ ಸದ್ದಿಲ್ಲದೆ ಬದಲಾವಣೆಯಾಗುತ್ತಿದೆ. ಇದನ್ನು ಏಕೆ ಮಾಡಲಾಗುತ್ತಿದೆ ಎಂಬುದನ್ನು ಈ ವರೆಗೂ ವಿವರಿಸಿಲ್ಲ. ಮುಖ್ಯವಾದ ನೀತಿಗಳಲ್ಲಿ ಮಹತ್ವ ಹೊಂದಿರುವ ಬದಲಾವಣೆಗಳನ್ನು ಮಾಡುವ ಸಂದರ್ಭಗಳಲ್ಲಿ, ಇದು ವಿದೇಶಿ ಬಂಡವಾಳವನ್ನು ಆಕರ್ಷಿಸುವ ಮಾರ್ಗ ಎಂದು ಸಾಮಾನ್ಯವಾಗಿ ಮುಂದಿಡುವ ವಾದದ ಒಂದು ನೆಪವನ್ನೂ ಸಹ ಈ ಸಂದರ್ಭದಲ್ಲಿ ಮುಂದಿಡಲಿಲ್ಲ. ಇಂಥಹ ನೆಪಗಳನ್ನು ಪ್ರಸ್ತುತ ಪ್ರಕರಣದ ಸಂದರ್ಭದಲ್ಲಿ ಯಾರೂ ಮೂಸುವುದಿಲ್ಲ ಮತ್ತು ಇಂಥಹ ಒಂದು ವ್ಯವಹಾರದಿಂದಾಗಿ ಒಳಹರಿಯುವ ಹಣವೂ ಸಹ ಅಲ್ಪವೇ. 1,200 ಕೋಟಿ ರೂ.ಗಳ ಅಲ್ಪ ಮೊತ್ತದೊಂದಿಗೆ ಕ್ಯಾಥೋಲಿಕ್ ಸಿರಿಯನ್ ಬ್ಯಾಂಕಿನ ಒಡೆತನವನ್ನು ಫೇರ್‌ಫ್ಯಾಕ್ಸ್ ಪಡೆದುಕೊಂಡಿದೆ. ಅದರಲ್ಲಿ ಸುಮಾರು ಅರ್ಧದಷ್ಟನ್ನು ಅಂದರೆ 592 ಕೋಟಿ ರೂ. ಗಳನ್ನು ಅದು ಕೇವಲ ಶೇ. 9.72ರಷ್ಟು ಷೇರುಗಳನ್ನು ಮಾರಾಟ (ಜೂನ್ 2024 ರಲ್ಲಿ) ಮಾಡುವ ಮೂಲಕವೇ ತನ್ನ ಜೇಬಿಗೆ ಇಳಿಸಿಕೊಂಡಿದೆ.

ವಿದೇಶಿ ಒಡೆತನಕ್ಕೆ ಸದ್ದಿಲ್ಲದೆ ಅನುಮತಿಯೇಕೆ?

ಬ್ಯಾಂಕ್‌ಗಳ ವಿದೇಶಿ ಒಡೆತನವು ಬಂಡವಾಳದ ಒಳಹರಿವಿಗೆ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸುತ್ತದೆ ಎಂಬುದು ಜನರನ್ನು ಮಂಗ ಮಾಡುವ ಒಂದು ವಾದವೇ ಸರಿ. ಏಕೆಂದರೆ, ಆರ್‌ಬಿಐನ ಶೇ. 15ರ ಗರಿಷ್ಟ ಮಿತಿಯನ್ನು ಕಟ್ಟುನಿಟ್ಟಾಗಿ ಹಿಂದೆ ಅನುಸರಿಸಿದ ಸಮಯದಲ್ಲಿ ಅದು ಬಂಡವಾಳದ ಒಳಹರಿವಿಗೆ ಅಡ್ಡಿಯಾಗಿರಲಿಲ್ಲ. ಹಾಗಾಗಿ ಒಳಹರಿವುಗಳು ಈಗ ಹೊರಹರಿವುಗಳಾಗಿ ಬದಲಾಗುತ್ತಿದ್ದರೆ, ಅದಕ್ಕೆ ಕಾರಣಗಳು ಬೇರೆಡೆ ಇರುತ್ತವೆ (ಉದಾಹರಣೆಗೆ ಟ್ರಂಪ್‌ರ ಸುಂಕಗಳು), ಇದನ್ನು ಕೆಲವು ಬ್ಯಾಂಕ್‌ಗಳ ಮಾರಾಟದ ಮೂಲಕ ತಡೆಯಲಾಗದು. ಮತ್ತು, ಬ್ಯಾಂಕ್‌ಗಳ ಮಾರಾಟದ ಪರಿಣಾಮಗಳು ಅರ್ಥವ್ಯವಸ್ಥೆಗೆ ಭಾರೀ ಹಾನಿ ಉಂಟುಮಾಡುತ್ತವೆ ಎಂಬುದನ್ನು ಅನೇಕ ಮಂದಿ ಗುರುತಿಸಿರುವಾಗ (ಹಾನಿ ಉಂಟಾಗುವುದು ನಿಜವಿದ್ದರೆ ಶೇ. 15ರ ಮಿತಿಯನ್ನು ನಿಗದಿಪಡಿಸುತ್ತಲೇ ಇರಲಿಲ್ಲ), ಬ್ಯಾಂಕುಗಳ ವಿದೇಶಿ ಒಡೆತನವನ್ನು ಸದ್ದಿಲ್ಲದೆ ಏಕೆ ಅನುಮತಿಸಲಾಗುತ್ತಿದೆ?

ಬ್ಯಾಂಕ್‌ಗಳ ವಿದೇಶಿ ಒಡೆತನದಿಂದ ಉಂಟಾಗುವ ಹಾನಿಕಾರಕ ಪರಿಣಾಮಗಳನ್ನು ಅತಿಯಾಗಿ ಉತ್ಪ್ರೇಕ್ಷಿಸಲಾಗಿದೆ ಎಂದೇನೋ ವಾದಿಸಬಹುದು. ಭಾರತದ ಬ್ಯಾಂಕ್‌ಗಳು ವಿದೇಶಿ ಸ್ವತ್ತುಗಳನ್ನು ಹೊಂದುವ ಸಂಬಂಧವಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಯಮಗಳಿವೆ, ಇವು ಸಾಮಾನ್ಯವಾಗಿ ಈ ರೀತಿ ಸ್ವತ್ತು ಹೊಂದುವುದರ ಮೇಲೆ ಕೆಲವು ನಿರ್ಬಂಧಗಳನ್ನು ಹಾಕಿವೆ. ಈ ನಿಯಮಗಳನ್ನು ಪಾಲಿಸುವವರೆಗೂ ಬ್ಯಾಂಕ್ ಯಾರ ಒಡೆತನದಲ್ಲಿದೆ ಎಂಬುದು ಅಷ್ಟು ಮುಖ್ಯವಲ್ಲ ಎಂದು ಅವರು ಹೇಳಬಹುದು. ಈ ವಾದವನ್ನು ಒಂದು ವೇಳೆ ನಾವು ಒಪ್ಪಿಕೊಂಡರೂ ಸಹ, ಅದು ಭಾರತದ ಬ್ಯಾಂಕನ್ನು ವಿದೇಶಿ ನಿಯಂತ್ರಣಕ್ಕೆ ಏಕೆ ಒಪ್ಪಿಸಬೇಕು ಎಂಬ ಪ್ರಶ್ನೆಗೆ ಉತ್ತರವಾಗುವುದಿಲ್ಲ. ಇನ್ನು, ವಿದೇಶಿ ಒಡೆತನವು ಬ್ಯಾಂಕಿನ ನಿರ್ವಹಣೆಯನ್ನು ಸುಧಾರಿಸುತ್ತದೆ ಎಂಬ ವಾದವು ಸಂಪೂರ್ಣವಾಗಿ ಅಸಮರ್ಥನೀಯವೂ ಹೌದು. ಕ್ಯಾಥೋಲಿಕ್ ಸಿರಿಯನ್ ಬ್ಯಾಂಕಿನ ಉದಾಹರಣೆಯೇ ತೋರಿಸುವಂತೆ, ವಿದೇಶಿ ನಿಯಂತ್ರಣವು ಆದ್ಯತಾ ವಲಯದ ಸಾಲ ಯೋಜನೆಯ ಫಲಾನುಭವಿಗಳಾದ ಸಣ್ಣ ಸಣ್ಣ ಸಾಲಗಾರರಿಗೆ ನೀಡಬೇಕಾದ ಸಾಲಗಳನ್ನು ನೀಡುವುದಿಲ್ಲ. ಆದರೆ, ಆಡಳಿತದ ಉನ್ನತಾಧಿಕಾರಿಗಳ ವೇತನವನ್ನಂತೂ ಅತಿಯಾಗಿ ಹೆಚ್ಚಿಸುತ್ತದೆ.

ಜೊತೆಗೆ, ವಿದೇಶಿ ಆಸ್ತಿಗಳನ್ನು ಭಾರತದ ಬ್ಯಾಂಕ್‌ಗಳು ಹೊಂದುವ ಬಗ್ಗೆ ಜಾರಿಯಲ್ಲಿರುವ ನಿರ್ಬಂಧಗಳನ್ನು ತೆಗೆದುಹಾಕುವಂತೆ ಒತ್ತಡ ಹೇರಲು ಬ್ಯಾಂಕ್‌ಗಳ ವಿದೇಶಿ ಒಡೆತನವೇ ಒಂದು ನಿಖರ ಸಾಧನವಾಗುತ್ತದೆ. ವಿದೇಶಿ ಆಸ್ತಿಗಳನ್ನು ಹೊಂದುವ ಬಗ್ಗೆ ನಿಗದಿಪಡಿಸಿರುವ ಮಿತಿಯನ್ನು ಮತ್ತು ಕೆಲವು ನಿರ್ಬಂಧಗಳನ್ನು ತೆಗೆದುಹಾಕುವುದರಿಂದ, ವಿದೇಶಿ ಒಡೆತನದ ಬ್ಯಾಂಕ್‌ಗಳು ಜೂಜುಕೋರ ಚಟುವಟಿಕೆಗಳಿಗೆ ಹಣ ಒದಗಿಸಲು ಹೆಚ್ಚು ಹೆಚ್ಚಾಗಿ ತೊಡಗಿಕೊಳ್ಳುವುದು ಸಾಧ್ಯವಾಗುತ್ತದೆ.

ಅಪಾಯಕಾರೀ ಚಟುವಟಿಕೆಗಳು

ಅಂತಹ ಚಟುವಟಿಕೆಗಳು ಹೆಚ್ಚು ಅಪಾಯಕಾರಿಯಾಗುತ್ತವೆ ಮತ್ತು ಅದೇ ಕಾರಣದಿಂದಾಗಿ ಮತ್ತು ಗಳಿಕೆಯ ಮುನ್ಸೂಚನೆಯ ಅರ್ಥದಲ್ಲಿ ಹಾಗೂ ಹಿಂದಿನ ಸರಾಸರಿ ಗಳಿಕೆಯ ಲೆಕ್ಕದಲ್ಲಿ ಅವು ಹೆಚ್ಚು ಲಾಭದಾಯಕವಾಗಿ ಕಾಣುತ್ತವೆ. ಪರಿಸ್ಥಿತಿ ಚೆನ್ನಾಗಿದ್ದಾಗ ಮತ್ತು ಜೂಜುಗಾರಿಕೆಯ ಫಲಿತಾಂಶ ಉತ್ತಮವಾಗಿದ್ದಾಗ, ಅಂತಹ ಚಟುವಟಿಕೆಗಳಲ್ಲಿ ತೊಡಗಿದ ಬ್ಯಾಂಕ್‌ಗಳು ಹೆಚ್ಚು ಹೆಚ್ಚು ಲಾಭ ಗಳಿಸುತ್ತವೆಯಾದರೂ, ಈ ಲಾಭಗಳಿಂದ ಠೇವಣಿದಾರರಿಗೆ ಒಂದು ಪೈಸೆಯೂ ಸಿಗುವುದಿಲ್ಲ. ಆದರೆ, ಜೂಜುಗಾರಿಕೆಯಿಂದ ಬ್ಯಾಂಕ್‌ಗಳು ನಷ್ಟವನ್ನು ಅನುಭವಿಸಿ ದಿವಾಳಿತನ ಎದುರಾದಾಗ, ಠೇವಣಿದಾರರು ತಮ್ಮ ಸಂಚಿತ ಉಳಿತಾಯವನ್ನು ಕಳೆದುಕೊಳ್ಳುತ್ತಾರೆ.

ಆದ್ದರಿಂದ, ಠೇವಣಿದಾರ ಸಮೂಹದ ದೃಷ್ಟಿಕೋನದಿಂದ ಹೇಳುವುದಾದರೆ, ಜೂಜುಕೋರತನದಲ್ಲಿ ತೊಡಗಿರುವ ಅಥವಾ/ಮತ್ತು ಅಂಥಹ ಚಟುವಟಿಕೆಗಳಿಗೆ ಹಣ ಒದಗಿಸುವ ಒಂದು ಬ್ಯಾಂಕ್, ಅಂಥಹ ಯಾವುದೇ ಚಟುವಟಿಕೆಗಳಿಗೆ ಹಣ ಒದಗಿಸದ ಒಂದು ಬ್ಯಾಂಕ್‌ಗಿಂತ ಕೆಟ್ಟದಾಗಿರುತ್ತದೆ. ಮತ್ತು, ವಿದೇಶಿ ಆಸ್ತಿಗಳನ್ನು ಹೊಂದುವ ಬಗ್ಗೆ ನಿಗದಿಪಡಿಸಿದ ಮಿತಿಯನ್ನು ಮತ್ತು ನಿರ್ಬಂಧಗಳನ್ನು ತೆಗೆದುಹಾಕುವಂತೆ ರಿಸರ್ವ್ ಬ್ಯಾಂಕಿನ ಮೇಲೆ ಒತ್ತಡ ಹೇರುವ ಬ್ಯಾಂಕ್‌ಗಳ ವಿದೇಶಿ ಒಡೆತನವು ಭಾರತದ ಠೇವಣಿದಾರರನ್ನು ಜೂಜುಕೋರತನದಿಂದ ಅವರು ಏನನ್ನೂ ಗಳಿಸದೇ ಎಲ್ಲವನ್ನೂ ಕಳೆದುಕೊಳ್ಳುವ ಅಪಾಯಗಳಿಗೆ ಒಡ್ಡುತ್ತದೆ.

ಇದು ಕೇವಲ ನಿಷ್ಪ್ರಯೋಜಕ ಊಹೆಯಲ್ಲ. 2008ರಲ್ಲಿ ಅಮೆರಿಕದಲ್ಲಿ ವಸತಿ “ಗುಳ್ಳೆ” ಸಿಡಿದಾಗ, ಮುಖ್ಯ ಬಂಡವಾಳಶಾಹಿ ದೇಶಗಳ ಎಲ್ಲ ಪ್ರಮುಖ ಬ್ಯಾಂಕ್‌ಗಳೂ ಆ ಗುಳ್ಳೆಗೆ ಹಣಕಾಸು ಒದಗಿಸುವಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿದ್ದವು ಮತ್ತು ಅದರ ಪರಿಣಾಮವಾಗಿ ಬೃಹತ್ ಪ್ರಮಾಣದ “ವಿಷಕಾರಿ ಸ್ವತ್ತುಗಳು”, ಅಂದರೆ, ನಿಷ್ಪ್ರಯೋಜಕವಾಗಿಬಿಟ್ಟ ಸ್ವತ್ತುಗಳಿಂದ ತುಂಬಿ ಹೋಗಿದ್ದವು ಎಂಬುದಂತೂ ಬಹಿರಂಗವಾಯಿತು. ಈ ಬ್ಯಾಂಕ್‌ಗಳನ್ನು ಸಂಬಂಧಪಟ್ಟ ಸರ್ಕಾರಗಳು ಬೃಹತ್ ಪ್ರಮಾಣದ ಬೇಲ್-ಔಟ್‌ಗಳ (ಪಾರು ಯೋಜನೆಗಳ) ಮೂಲಕ ರಕ್ಷಿಸಿದವು.

ಈ ಬೇಲ್-ಔಟ್‌ಗಳನ್ನು ಒದಗಿಸಿದ ನಂತರವೂ ಠೇವಣಿದಾರರು ಗಣನೀಯ ಪ್ರಮಾಣದ ನಷ್ಟವನ್ನು ಅನುಭವಿಸಿದರು. ಅಮೆರಿಕದ ವಸತಿ ಗುಳ್ಳೆಯ ಸಿಡಿತದಿಂದ ಹಾನಿಗೊಳಗಾಗದೆ ಉಳಿದ ಹಣಕಾಸು ವ್ಯವಸ್ಥೆಯನ್ನು ಹೊಂದಿದ್ದ ಒಂದು ದೇಶವೆಂದರೆ, ಅದು ಭಾರತವೇ. ಭಾರತದ ಬ್ಯಾಂಕ್‌ಗಳ ಬ್ಯಾಲೆನ್ಸ್ ಶೀಟ್‌ಗಳಲ್ಲಿದ್ದ ವಿದೇಶಿ ಸ್ವತ್ತುಗಳ ಪ್ರಮಾಣವು ಬಹಳ ಸಣ್ಣದಿತ್ತು ಮತ್ತು ಅವು ಹೊಂದಿದ್ದ ವಿದೇಶಿ ಸ್ವತ್ತುಗಳಲ್ಲಿ ವಿಷಕಾರಿ ಸ್ವತ್ತುಗಳ ಪ್ರಮಾಣವು ಇನ್ನೂ ಚಿಕ್ಕದಿತ್ತು. ಐಸಿಐಸಿಐ ಬ್ಯಾಂಕ್ ಒಂದು ಮಾತ್ರವೇ ಕೆಲವು ವಿದೇಶಿ ಸ್ವತ್ತುಗಳನ್ನು ಮತ್ತು ವಿಷಕಾರಿ ಸ್ವತ್ತುಗಳನ್ನೂ ಹೊಂದಿತ್ತು. ಆದರೆ, ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಸಂಪೂರ್ಣವಾಗಿ ಸ್ವಚ್ಛವಾಗಿದ್ದವು. ಭವಿಷ್ಯದಲ್ಲಿ ಅಂತಹ ಒಂದು ಪರಿಸ್ಥಿತಿ ಮರುಕಳಿಸದೇ ಇರಬಹುದು. ಆದರೆ, ಭಾರತದ ಬ್ಯಾಂಕ್‌ಗಳ ಒಡೆತನವನ್ನು ವಿದೇಶೀಯರಿಗೆ ವಹಿಸಿದರೆ, ಗಟ್ಟಿಮುಟ್ಟಾಗಿದ್ದ ಭಾರತದ ಹಣಕಾಸು ವ್ಯವಸ್ಥೆಯ ಹುರುಪನ್ನು ಉಳಿಸಿಕೊಳ್ಳುವುದು ಸಾಧ್ಯವಾಗದು.

ಬ್ಯಾಂಕ್‌ಗಳ ವಿದೇಶಿ ಒಡೆತನವನ್ನು ಅನುಮತಿಸುವ ನವ ಉದಾರವಾದವು ಭಾರತವನ್ನು ಆ ದಿಕ್ಕಿನಲ್ಲಿ ತಳ್ಳುತ್ತದೆ. ಬ್ಯಾಂಕ್ ಷೇರುಗಳ ವಿದೇಶಿ ಒಡೆತನದ ಮೇಲಿನ ಶೇ. 15ರ ಮಿತಿಯಂತಹ ಸರ್ಕಾರದ (ವಿಶೇಷವಾಗಿ ಮೂರನೇ ಜಗತ್ತಿನ ಸರ್ಕಾರಗಳ) ಎಲ್ಲ ನಿರ್ಬಂಧಗಳನ್ನೂ ನವ-ಉದಾರವಾದವು ವಿರೋಧಿಸುತ್ತದೆ ಮಾತ್ರವಲ್ಲ, ಭಾರತದ ಬ್ಯಾಂಕ್‌ಗಳ ವಿದೇಶಿ ಒಡೆತನವು ಸಾಮ್ರಾಜ್ಯಶಾಹಿಗೆ ಭಾರತದ ಅರ್ಥವ್ಯವಸ್ಥೆಯ ಮೇಲೆ ಹತೋಟಿಯನ್ನೂ ನೀಡುತ್ತದೆ (ನವ-ಉದಾರವಾದವು ಸಾಮ್ರಾಜ್ಯಶಾಹಿಯ ಒಂದು ತಂತ್ರ ಎಂಬುದನ್ನು ನಾವು ನೆನಪಿನಲ್ಲಿಡಬೇಕು): ಬ್ಯಾಂಕ್‌ನ ವಿದೇಶಿ ಮಾಲೀಕರಿಗೆ ವಿದೇಶಿ ಪ್ರಭುತ್ವದ ಬೆಂಬಲವಿರುತ್ತದೆ ಮತ್ತು ಭಾರತದ ಬ್ಯಾಂಕ್ ಮಾಲೀಕರಿಗೆ ಅದಿರುವುದಿಲ್ಲ.

ಮತ್ತೆ ಲೇವಾದೇವಿ ಕಾಲದತ್ತ ಹಿನ್ನಡೆ

ಹಿಂದಿನ ನಿಯಂತ್ರಣ ನೀತಿಗಳ ಆಳ್ವಿಕೆಗೆ ಹೋಲಿಸಿದರೆ ನವ-ಉದಾರವಾದವು ಭಾರತದ ಹಣಕಾಸು ವಲಯವು ಮುಂದಿಟ್ಟ ಹೆಜ್ಜೆಗಳನ್ನು ಈಗಾಗಲೇ ಗಮನಾರ್ಹವಾಗಿ ಹಿಂದಕ್ಕೆ ತಿರುಗಿಸಿದೆ. ಉದಾಹರಣೆಗೆ, ಜಾರಿಯಲ್ಲಿರುವ ಆದ್ಯತಾ ವಲಯದ ಸಾಲ ಮಾನದಂಡಗಳನ್ನು ತೆಗೆದುಹಾಕಲಾಗಿಲ್ಲವಾದರೂ, ಆದ್ಯತೆಯ ವಲಯದ ವ್ಯಾಖ್ಯಾನವನ್ನು ಎಷ್ಟರಮಟ್ಟಿಗೆ ವಿಸ್ತರಿಸಲಾಗಿದೆ ಎಂದರೆ, ಈ ಮಾನದಂಡಗಳನ್ನು ಮೊಟ್ಟಮೊದಲು ಯಾರ ಹಿತರಕ್ಷಣೆಗಾಗಿ ನಿರೂಪಿಸಲಾಗಿತ್ತೋ (ಅಂದರೆ, ರೈತರು, ಕಿರು ಉತ್ಪಾದಕರು, ಸಣ್ಣ ಪುಟ್ಟ ವ್ಯವಹಾರ ನಡೆಸುವವರು ಮತ್ತು ಅಂಚಿನಲ್ಲಿರುವ ಇತರ ಜನ ವಿಭಾಗಗಳು), ಅವರೆಲ್ಲರನ್ನೂ ಹಣಕಾಸು ಸಂಸ್ಥೆಗಳು ಒದಗಿಸುವ ಸಾಲಗಳಿಂದ ಹೊರಗಿಡಲಾಗಿದೆ.

ಅಖಿಲ ಭಾರತ ಜನವಾದೀ ಮಹಿಳಾ ಸಂಘವು ನಡೆಸಿದ ಒಂದು ಅಧ್ಯಯನವು ತೋರಿಸುವಂತೆ, ಬ್ಯಾಂಕೇತರ ಹಣಕಾಸು ಕಂಪನಿಗಳು(ಎನ್‌ಬಿಎಫ್‌ಸಿs) ಮತ್ತು ಕಿರುಸಾಲ (ಮೈಕ್ರೋ ಫೈನಾನ್ಸ್) ಸಂಸ್ಥೆಗಳು (ಎಂಎಫ್‌ಐs) ಸಾಲಗಳನ್ನು ಬ್ಯಾಂಕ್‌ಗಳಿಂದ ಶೇ. 10ಕ್ಕಿಂತ ಕೆಳಗಿನ ಬಡ್ಡಿ ದರದಲ್ಲಿ ಪಡೆಯುತ್ತವೆ ಮತ್ತು ಅದನ್ನು ಬಡ ಮಹಿಳಾ ಸಾಲಗಾರರಿಗೆ ಶೇ. 26ರ ಬಡ್ಡಿಯ ಮೇಲೆ ಸಾಲವಾಗಿ ನೀಡುತ್ತವೆ. ಇದು ವಸಾಹತುಶಾಹಿ ಯುಗದ ಹಳೆಯ ಹಳ್ಳಿ ಲೇವಾದೇವಿಗಾರನನ್ನು ನೆನಪಿಸುತ್ತದೆ (ಅವರೂ ಸಹ ಬಡ್ಡಿ ಸಾಲಗಳನ್ನು ನೀಡುವುದಕ್ಕಾಗಿ ಬ್ಯಾಂಕ್‌ಗಳಿಂದ ಹಣವನ್ನು ಸಾಲ ಪಡೆಯುತ್ತಿದ್ದರು). ಅದಕ್ಕಿಂತಲೂ ಮಿಗಿಲಾಗಿ, ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ನೀಡುವ ಬ್ಯಾಂಕ್ ಸಾಲಗಳನ್ನು ಈಗ ಆದ್ಯತಾ ವಲಯದ ಸಾಲದ ಒಂದು ಭಾಗವೆಂದೇ ಪರಿಗಣಿಸಲಾಗುತ್ತದೆ. ಕೃಷಿ, ಸಣ್ಣ ಕೈಗಾರಿಕೆಗಳ ಮತ್ತು ಸಣ್ಣ ಪುಟ್ಟ ವ್ಯವಹಾರಗಳ ವಲಯದ ಅಂಚಿನಲ್ಲಿರುವ ಸಾಲಗಾರರಿಗೆ ಬ್ಯಾಂಕ್ ಸಾಲಗಳನ್ನು ನೇರವಾಗಿ ಲಭಿಸುವಂತೆ ಮಾಡುವುದು ಮತ್ತು ಸಾಲ ಸಂಬಂಧಿತ ಎಲ್ಲ ಮಧ್ಯವರ್ತಿಗಳನ್ನು ಹೊರಗಿಡುವುದು ಬ್ಯಾಂಕ್ ರಾಷ್ಟ್ರೀಕರಣದ ಮೂಲ ಉದ್ದೇಶವಾಗಿತ್ತು. ಅದನ್ನು ಮಣ್ಣುಪಾಲು ಮಾಡಲಾಗಿದೆ.

ಮತ್ತೊಂದೆಡೆಯಲ್ಲಿ, ಸಾರ್ವಜನಿಕ ವಲಯದ ಬ್ಯಾಂಕ್‌ಗಳೂ ಸೇರಿದಂತೆ ಇಡೀ ಬ್ಯಾಂಕಿಂಗ್ ವ್ಯವಸ್ಥೆಯು ಈಗ ದೊಡ್ಡ ದೊಡ್ಡ ಉದ್ದಿಮೆಗಳ ಅಡಿಯಾಳಾಗಿದೆ. ಈ ರೀತಿಯ ಸಂಬಂಧವನ್ನು ಮುರಿಯುವ ಮತ್ತು ಸಾಲ ವಿತರಣೆಯ ಮೇಲೆ ಸಾಮಾಜಿಕ ನಿಯಂತ್ರಣವನ್ನು ಹೇರುವ ಉದ್ದೇಶದೊಂದಿಗೆ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಲಾಗಿತ್ತು. ದೊಡ್ಡ ದೊಡ್ಡ ಉದ್ದಿಮೆಗಳು ಬ್ಯಾಂಕ್ ಸಾಲಗಳ ಬಹು ಪಾಲನ್ನು ತಾವೇ ಪಡೆಯುವುದು ಮಾತ್ರವಲ್ಲದೇ ಅದನ್ನು ಮರುಪಾವತಿಸುವಲ್ಲಿಯೂ ವಿಫಲವಾಗುತ್ತವೆ. ಮತ್ತೊಮ್ಮೆ ಇಲ್ಲಿ ವಿಷಯವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಬ್ಯಾಂಕ್‌ಗಳು ಸಾರ್ವಜನಿಕ ವಲಯದಲ್ಲಿರುವುದರ ಹೊರತಾಗಿಯೂ (ಇತ್ತೀಚಿನ ದಿನಗಳಲ್ಲಿ ಇವುಗಳ ಷೇರುಗಳಲ್ಲಿ ಸರ್ಕಾರದ ಪಾಲು ಕುಸಿಯುತ್ತಿರುವುದು ಕಾಣುತ್ತಿದೆ), ಏಕಸ್ವಾಮ್ಯ ಕುಟುಂಬಗಳು ಬ್ಯಾಂಕ್‌ಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದ ಹಿಂದಿನ ದಿನಗಳಂತೆಯೇ (ಪ್ರತಿ ಏಕಸ್ವಾಮ್ಯ ಕುಟುಂಬವೂ ಆಗ ತನ್ನದೇ ಆದ ಒಂದು ಬ್ಯಾಂಕನ್ನು ಹೊಂದಿತ್ತು), ಪರಿಸ್ಥಿತಿ ಮತ್ತೊಮ್ಮೆ ಬದಲಾಗುತ್ತಿದೆ. ಈಗಿನ ಚಲನೆ ಮತ್ತೊಮ್ಮೆ ಸಾಲ ವಿತರಣೆಯ ಮೇಲಿನ ಸಾಮಾಜಿಕ ನಿಯಂತ್ರಣದ ದೃಷ್ಟಿಕೋನದಿಂದ ದೂರ ಸರಿದಿದೆ.

ಈ ಚಲನೆಯು ಭಾರತದ ಬ್ಯಾಂಕ್‌ಗಳ ವಿದೇಶಿ ಒಡೆತನದಿಂದ ಮತ್ತಷ್ಟು ಉತ್ತೇಜನ ಪಡೆಯುತ್ತದೆ. ಅಂಚಿನಲ್ಲಿರುವ ಸಾಲಗಾರರು ಬ್ಯಾಂಕ್ ಸಾಲಗಳಿಂದ ಮತ್ತಷ್ಟು ದೂರ ಉಳಿಯುತ್ತಾರೆ. ದೊಡ್ಡ ದೊಡ್ಡ ವ್ಯವಹಾರೋದ್ದಿಮೆಗಳಿಗೆ ಬ್ಯಾಂಕ್ ಸಾಲಗಳಿಂದ ಮತ್ತಷ್ಟು ಪೋಷಣೆ ಸಿಗುತ್ತದೆ. ಇವೆಲ್ಲವುಗಳ ತಲೆಯ ಮೇಲೆ ಹೊಡೆದಂತೆ ಈಗ ಬ್ಯಾಂಕ್ ಸಾಲವು ವಿದೇಶಿ ಸ್ವತ್ತುಗಳು ಮತ್ತು ಜೂಜುಕೋರ ಚಟುವಟಿಕೆಗಳತ್ತ ಹರಿಯುತ್ತದೆ. ಪ್ರಸ್ತುತ ದೇಶವನ್ನು ಆಳುತ್ತಿರುವ ಫ್ಯಾಸಿಸ್ಟ್ ಶಕ್ತಿಗಳಿಂದ ಇದಕ್ಕಿಂತ ಉತ್ತಮವಾದುದನ್ನು ನಿರೀಕ್ಷಿಸಲಾಗದು. ಆದರೆ, ಇದನ್ನು ದೃಢವಾಗಿ ವಿರೋಧಿಸಬೇಕಾಗುತ್ತದೆ.

ಇದನ್ನೂ ನೋಡಿ: ಜಿಎಸ್ ಟಿ 1.O: ಲೂಟಿ ಉತ್ಸವ್, ಜಿಎಸ್ ಟಿ 2.O: ಜುಮ್ಲಾ‌ ಉತ್ಸವ್ Janashakthi Media

Donate Janashakthi Media

Leave a Reply

Your email address will not be published. Required fields are marked *