ಆಹಾರ ಬೆಲೆ ಏರಿಕೆಗೆ ರಷ್ಯಾ ಧಾನ್ಯ ಡೀಲನ್ನು ಅಮಾನತುಗೊಳಿಸಿದ್ದು ಕಾರಣವೇ?

– ವಿಜಯ್ ಪ್ರಶಾದ್

(ಅನುವಾದ : ವಸಂತರಾಜ ಎನ್.ಕೆ)

 ರಷ್ಯಾ “ಕಪ್ಪು ಸಮುದ್ರ ಧಾನ್ಯ ಡೀಲ್‌ನ್ನುʼ ಅಮಾನತುಗೊಳಿಸಿದೆ. ರಷ್ಯಾ ಈ ಡೀಲ್ ಜತೆಗೆ ತನ್ನದೇ ಆದ ಕೃಷಿ ವ್ಯವಸ್ಥೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಗೆ ಮೂರು ಹಕ್ಕೊತ್ತಾಯಗಳನ್ನು ಮಂಡಿಸಿತ್ತು. ಇವು ಯಾವುವು ಜಾರಿಯಾಗಿಲ್ಲ. ಹಾಗಾಗಿ ತಾನು ಡೀಲನ್ನು ಅಮಾನತುಗೊಳಿಸುತ್ತೇನೆ ಎಂದಿದೆ. ಜಾಗತಿಕ ಆಹಾರ ಬೆಲೆಏರಿಕೆಗೆ ಧಾನ್ಯ ಡೀಲನ್ನು ಅಮಾನತುಗೊಳಿಸಿದ್ದು ಕಾರಣವಲ್ಲ. ಆಹಾರ ಧಾನ್ಯಗಳ ಅಂತರ್ರಾಷ್ಟ್ರೀಯ ವ್ಯಾಪಾರದಲ್ಲಿ ಜೂಜುಕೋರತನ ಶೇ.60ಕ್ಕಿಂತಲೂ ಹೆಚ್ಚಿದ್ದು ಕಾರಣ ಎನ್ನಲಾಗಿದೆ. ಜಾಗತಿಕ ಆಹಾರ ಬಿಕ್ಕಟ್ಟು ಪೂರೈಕೆಯ ಸಮಸ್ಯೆಯಲ್ಲ, ಬೆಲೆ ಏರಿಕೆಯ ಸಮಸ್ಯೆಯಿಂದ ಉಂಟಾಗಿದೆ ಎಂದು ಸ್ವತಂತ್ರ ಅಧ‍್ಯಯನಗಳು ಹೇಳಿವೆ

 ಜೂನ್ 17 ರಂದು, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಕ್ತಾರ “ಕಪ್ಪು ಸಮುದ್ರದ ಧಾನ್ಯದ ಉಪಕ್ರಮ” ವನ್ನು ಅಮಾನತುಗೊಳಿಸುವ ಘೋಷಣೆ ಮಾಡಿದ್ದಾರೆ. ಫೆಬ್ರವರಿ 2022 ರಲ್ಲಿ ರಷ್ಯಾದ ಪಡೆಗಳು ಉಕ್ರೇನ್‌ಗೆ ಪ್ರವೇಶಿಸಿದ ಕೆಲವೇ ಗಂಟೆಗಳಲ್ಲಿ ಗಂಭೀರ ಮಾತುಕತೆಗಳಿಂದ ಹೊರಹೊಮ್ಮಿದ  ಇದನ್ನು “ಕಪ್ಪು ಸಮುದ್ರ ಧಾನ್ಯ ಡೀಲ್’ ಎಂದು ಕರೆಯಲಾಗಿತ್ತು. ರಷ್ಯಾ ಮತ್ತು ಉಕ್ರೇನಿಯನ್ ಅಧಿಕಾರಿಗಳು ಇಸ್ತಾನ್‌ಬುಲ್‌ನಲ್ಲಿ ವಿಶ್ವಸಂಸ್ಥೆಯ ಕಾರ್ಯದರ್ಶಿ ಮತ್ತು ಅಧ್ಯಕ್ಷರ ಸಮ್ಮುಖದಲ್ಲಿ ಸಹಿ ಹಾಕಿದ ನಂತರ ಜುಲೈ 22, 2022 ರಂದು ಇದು ಜಾರಿಗೆ ಬಂದಿತು.

ಗುಟೆರೆಸ್ ಈ ಉಪಕ್ರಮವನ್ನು ಎರಡು ಕಾರಣಗಳಿಗಾಗಿ “ಭರವಸೆಯ ದಾರಿದೀಪ” ಎಂದು ಕರೆದರು. ಮೊದಲನೆಯದಾಗಿ, ತೀವ್ರ ಯುದ್ಧದಲ್ಲಿ ತೊಡಗಿರುವವರ ನಡುವೆ ಈ ರೀತಿಯ ಒಪ್ಪಂದವನ್ನು ಹೊಂದಿರುವುದು ಗಮನಾರ್ಹವಾಗಿದೆ. ಎರಡನೆಯದಾಗಿ, ರಷ್ಯಾ ಮತ್ತು ಉಕ್ರೇನ್  ಜಗತ್ತಿನಲ್ಲೇ ಗೋಧಿ, ಬಾರ್ಲಿ, ಮೆಕ್ಕೆಜೋಳ, ರೇಪ್ಸೀಡ್ ಮತ್ತು ರೇಪ್ಸೀಡ್ ಎಣ್ಣೆ, ಸೂರ್ಯಕಾಂತಿ ಬೀಜಗಳು ಮತ್ತು ಸೂರ್ಯಕಾಂತಿ ಎಣ್ಣೆ, ಹಾಗೆಯೇ ಸಾರಜನಕ, ಪೊಟ್ಯಾಸಿಕ್ ಮತ್ತು ಫಾಸ್ಫರಸ್ ರಸಗೊಬ್ಬರಗಳ ಪ್ರಮುಖ ಉತ್ಪಾದಕರು, ವ್ಯಾಪಾರದ ಕ್ಯಾಲೊರಿಗಳಲ್ಲಿ 12 ಪ್ರತಿಶತವನ್ನು ಹೊಂದಿದೆ. ರಶಿಯಾ ಮತ್ತು ಉಕ್ರೇನ್‌ನಿಂದ ಪೂರೈಕೆಯ ಅಡ್ಡಿಯು ವಿಶ್ವ ಆಹಾರ ಮಾರುಕಟ್ಟೆಗಳ ಮೇಲೆ ಮತ್ತು ಹಸಿವಿನ ಮೇಲೆ ದುರಂತ ಪರಿಣಾಮವನ್ನು ಬೀರುತ್ತದೆಯೆಂದು ನಿರೀಕ್ಷಿಸಲಾಗಿತ್ತು. ರಷ್ಯಾದ ವಿರುದ್ಧ ಯುಎಸ್, ಯುಕೆ ಮತ್ತು ಯುರೋಪಿಯನ್ – ನಿರ್ಬಂಧಗಳು ಹೆಚ್ಚಾದಂತೆ, ಒಪ್ಪಂದದ ಕಾರ್ಯಸಾಧ್ಯತೆಯು ಕಡಿಮೆಯಾಗಲು ಪ್ರಾರಂಭಿಸಿತು. ಕಳೆದ ವರ್ಷದಲ್ಲಿ ಹಲವು ಬಾರಿ ಡೀಲ್ ನ್ನು ಸ್ಥಗಿತಗೊಳಿಸಲಾಗಿತ್ತು.  ಮಾರ್ಚ್ 2023 ರಲ್ಲಿ, ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ರಷ್ಯಾದ ಕೃಷಿಯ ವಿರುದ್ಧದ ನಿರ್ಬಂಧಗಳಿಗೆ ಪ್ರತಿಕ್ರಿಯಿಸುತ್ತಾ, ಈ ಹಿನ್ನೆಲೆಯಲ್ಲಿ ಧಾನ್ಯ ಒಪ್ಪಂದ ಕಾರ್ಯಸಾಧ್ಯವಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದರು.

ಹಸಿವಿಗೆ ಮುಖ್ಯ ಕಾರಣ ಆಹಾರ ಧಾನ್ಯಗಳ ಹಣಕಾಸೀಕರಣ

ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ರಷ್ಯಾ “ಆಹಾರವನ್ನು ಸತತವಾಗಿ ಅಸ್ತ್ರಗಳಾಗಿ ಬಳಸುವ” ಬಗ್ಗೆ ತಮ್ಮ ದೇಶವು ವಿಷಾದಿಸುತ್ತದೆ ಎಂದು ಹೇಳಿದರು.  ಏಕೆಂದರೆ ಇದು “ವಿಶ್ವದಾದ್ಯಂತ ಲಕ್ಷಾಂತರ ದುರ್ಬಲ ಜನರಿಗೆ ಹಾನಿ ಮಾಡುತ್ತದೆ.” ವಾಸ್ತವವಾಗಿ, ಧಾನ್ಯ ಡೀಲ್ ನ ಅಮಾನತು ಅತ್ಯಂತ ಕೆಟ್ಟ ಸಮಯದಲ್ಲಿ ಬಂದಿದೆ. ವಿಶ್ವಸಂಸ್ಥೆಯ ವರದಿ, “ವಿಶ್ವದ ಆಹಾರ ಭದ್ರತೆ ಮತ್ತು ಪೋಷಣೆಯ ಸ್ಥಿತಿ 2023” (ಜುಲೈ 12, 2023), ವಿಶ್ವದ ಹತ್ತು ಜನರಲ್ಲಿ ಒಬ್ಬರು ಹಸಿವಿನಿಂದ ಬಳಲುತ್ತಿದ್ದಾರೆ ಮತ್ತು 3.1 ಶತಕೋಟಿ ಜನರು ಆರೋಗ್ಯಕರ ಆಹಾರವನ್ನು ಪಡೆಯಲು ಸಾಧ್ಯವಿಲ್ಲ ಎಂದು ತೋರಿಸುತ್ತದೆ. ಆದರೆ ವರದಿಯು ಸ್ವತಃ ಒಂದು ಕುತೂಹಲಕಾರಿ ಅಂಶವನ್ನು ನೀಡುತ್ತದೆ: ಉಕ್ರೇನ್‌ನಲ್ಲಿನ ಯುದ್ಧವು 2.3 ಕೋಟಿ ಜನರನ್ನು ಹಸಿವಿನತ್ತ ತಳ್ಳಿದೆ. ಇದು ಹಸಿವಿನ ಇತರ ಪ್ರಮುಖ ಕಾರಣಗಳಿಗೆ ಹೋಲಿಸಿದರೆ ಗಮನಾರ್ಹವಲ್ಲ. ಉದಾಹರಣೆಗೆ ವಾಣಿಜ್ಯೀಕೃತ ಆಹಾರ ಮಾರುಕಟ್ಟೆಗಳ ಪ್ರಭಾವ ಮತ್ತು COVID-19 ಸಾಂಕ್ರಾಮಿಕ. ‘ವಿಶ್ವ ಅಭಿವೃದ್ಧಿ ಚಳುವಳಿ’ಯ 2011 ರ ವರದಿಯು “ಮುರಿದು ಬಿದ್ದ ಮಾರುಕಟ್ಟೆಗಳು : ಇನ್ನೊಂದು ಜಾಗತಿಕ ಆಹಾರ ಬಿಕ್ಕಟ್ಟನ್ನು ಮಾರುಕಟ್ಟೆ ನಿರ್ಬಂಧಗಳು ಹೇಗೆ ತಡೆಯಬಹುದು” ಎಂಬ ವರದಿ ತೋರಿಸಿದೆ.  “ಹಣಕಾಸಿನ ಜೂಜುಕೋರರು ಈಗ ಆಹಾರ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದ್ದಾರೆ, 15 ವರ್ಷಗಳ ಹಿಂದೆ ಅವರ ಹಿಡಿತ 12 ಶೇಕಡಾಕ್ಕೆ ಹೋಲಿಸಿದರೆ ಕೆಲವು ಮಾರುಕಟ್ಟೆಗಳಲ್ಲಿ ಈಗ 60 ಶೇಕಡಾವನ್ನು ಹೊಂದಿದ್ದಾರೆ.”

2011ರ ನಂತರ 2023ರ ಹೊತ್ತಿಗೆ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಆಹಾರ ಮಾರುಕಟ್ಟೆಗಳಲ್ಲಿನ ಹಣಕಾಸಿನ ಜೂಜುಕೋರತನವನ್ನು ಅಧ್ಯಯನ ಮಾಡುವ ಡಾ ಸೋಫಿ ವ್ಯಾನ್ ಹುಯೆಲೆನ್, 2022 ರ ಕೊನೆಯಲ್ಲಿ ವಾಸ್ತವವಾಗಿ ಆಹಾರದ ಕೊರತೆಗಳಿದ್ದರೂ, “ಪ್ರಸ್ತುತ ಆಹಾರ ಬಿಕ್ಕಟ್ಟು ಪೂರೈಕೆ ಬಿಕ್ಕಟ್ಟಿನ ಬದಲಿಗೆ ಬೆಲೆ ಬಿಕ್ಕಟ್ಟು” ಎಂದು ಸೂಚಿಸಿದರು. ಕಪ್ಪು ಸಮುದ್ರದ ಧಾನ್ಯ ಡೀಲ್ ಅಂತ್ಯವು ನಿಜಕ್ಕೂ ವಿಷಾದನೀಯವಾಗಿದೆ, ಆದರೆ ಇದು ವಿಶ್ವದ ಹಸಿವಿನ ಪ್ರಮುಖ ಕಾರಣವಲ್ಲ. ಪ್ರಮುಖ ಕಾರಣ – ಯುರೋಪಿಯನ್ ಆರ್ಥಿಕ ಮತ್ತು ಸಾಮಾಜಿಕ ಸಮಿತಿಯು ಒಪ್ಪಿದಂತೆ – ಆಹಾರ ಮಾರುಕಟ್ಟೆಗಳಲ್ಲಿನ ಹಣಕಾಸಿನ ಜೂಜುಕೋರತನ.

ಇದನ್ನೂ ಓದಿ:ಉಕ್ರೇನ್‌-ರಷ್ಯಾ ಯುದ್ಧ, ದೆಹಲಿ ಹಿಂಸಾಚಾರ; ಖಾಸಗಿ ಟಿವಿ ಚಾನೆಲ್‌ಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

ರಷ್ಯಾ ಧಾನ್ಯ ಡೀಲನ್ನು ಏಕೆ ಅಮಾನತುಗೊಳಿಸಿದೆ?

ಕಪ್ಪು ಸಮುದ್ರದ ಧಾನ್ಯ ಡೀಲನ್ನು ಮೇಲ್ವಿಚಾರಣೆ ಮಾಡಲು, ವಿಶ್ವಸಂಸ್ಥೆಯು ಇಸ್ತಾನ್‌ಬುಲ್‌ನಲ್ಲಿ ಜಂಟಿ ಸಮನ್ವಯ ಕೇಂದ್ರವನ್ನು (JCC) ಸ್ಥಾಪಿಸಿತು. ಇದು ರಷ್ಯಾ, ಟರ್ಕಿ, ಉಕ್ರೇನ್ ಮತ್ತು ವಿಶ್ವಸಂಸ್ಥೆಯ ಪ್ರತಿನಿಧಿಗಳಿರುವ ಸಿಬ್ಬಂದಿಯನ್ನು ಹೊಂದಿದೆ. ಅಕ್ಟೋಬರ್‌ 2022 ರಲ್ಲಿ ಕ್ರೈಮಿಯಾದ ಸೆವಾಸ್ಟೊಪೋಲ್‌ ಬಳಿ ಕಪ್ಪು ಸಮುದ್ರದಲ್ಲಿ ಧಾನ್ಯವನ್ನು ಸಾಗಿಸುತ್ತಿದ್ದ ರಷ್ಯಾನ ಹಡಗುಗಳ ಮೇಲೆ ಉಕ್ರೇನ್ ಮಾಡಿದ ಹಲವಾರು ಸಂದರ್ಭಗಳಲ್ಲಿ, ರಶಿಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆಯನ್ನು JCC ಎದುರಿಸಬೇಕಾಯಿತು. ರಷ್ಯಾದ ಮೇಲೆ ಯುರೋಪಿಯನ್ ದಿಗ್ಬಂಧನದಿಂದಾಗಿ ತನ್ನ ಕೃಷಿ ಉತ್ಪನ್ನಗಳ ರಫ್ತು ದುಸ್ಸಾಧ್ಯವಾಗುತ್ತಿದ್ದಂತೆ  ಉದ್ವಿಗ್ನತೆ ಇನ್ನಷ್ಟು ಹೆಚ್ಚಿತು.

ರಷ್ಯಾ ಈ ಡೀಲ್ ಜತೆಗೆ ತನ್ನದೇ ಆದ ಕೃಷಿ ವ್ಯವಸ್ಥೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಗೆ ಮೂರು ಹಕ್ಕೊತ್ತಾಯಗಳನ್ನು ಮಂಡಿಸಿತ್ತು. ಇವು ಯಾವುವು ಜಾರಿಯಾಗಿಲ್ಲ. ಹಾಗಾಗಿ ತಾನು ಡೀಲನ್ನು ಅಮಾನತುಗೊಳಿಸುತ್ತೇನೆ ಎಂದಿದೆ. ಮೊದಲನೆಯದಾಗಿ, ರಷ್ಯಾದ ಕೃಷಿ ಬ್ಯಾಂಕ್ – ರಷ್ಯಾದ ಕೃಷಿಯ ಪ್ರಧಾನ ಕ್ರೆಡಿಟ್ ಮತ್ತು ವ್ಯಾಪಾರ ಬ್ಯಾಂಕ್ – SWIFT ವ್ಯವಸ್ಥೆಗೆ ಮರುಸಂಪರ್ಕಿಸಬೇಕು. ಜೂನ್ 2022 ರಲ್ಲಿ ಯುರೋಪಿಯನ್ ಒಕ್ಕೂಟದ ನಿರ್ಬಂಧಗಳ ಆರನೇ ಪ್ಯಾಕೇಜ್‌ನಿಂದ ಅದನ್ನು ಕಡಿತಗೊಳಿಸಲಾಗಿತ್ತು.

ಎರಡನೆಯದಾಗಿ, ಮಾಸ್ಕೋ ತನ್ನ ಅಮೋನಿಯಾ ರಸಗೊಬ್ಬರವನ್ನು ಮತ್ತು ಲಾಟ್ವಿಯಾ ಮತ್ತು ನೆದರ್ಲ್ಯಾಂಡ್ ನಲ್ಲಿದ್ದ ದಾಸ್ತಾನನ್ನು  ಒಡೆಸಾ ಬಂದರಿನ ಮೂಲಕ ಸರಬರಾಜು ಮಾಡುವ ಮೂಲಕ ರಫ್ತು ಮಾಡಲು ಅನುವು ಮಾಡಿಕೊಂಡಬೇಕೆಂದು ಒತ್ತಾಯಿಸಿತು. ಪ್ರಪಂಚದ ಅತಿ ಉದ್ದದ ಅಮೋನಿಯಾ ಪೈಪ್‌ಲೈನ್ ಟೊಗ್ಲಿಯಾಟ್ಟಿ-ಒಡೆಸಾ ಪೈಪ್‌ಲೈನ್ ಅನ್ನು ಪುನಃ ತೆರೆಯುವುದು ಅದರ ಕೇಂದ್ರ ಭಾಗವಾಗಿತ್ತು. ಜುಲೈ 2022 ರಲ್ಲಿ, ವಿಶ್ವಸಂಸ್ಥೆ ಮತ್ತು ರಷ್ಯಾ ವಿಶ್ವ ಮಾರುಕಟ್ಟೆಯಲ್ಲಿ ರಷ್ಯಾದ ಅಮೋನಿಯಾವನ್ನು ಮಾರಾಟ ಮಾಡಲು ಅನುಕೂಲವಾಗುವ ಒಪ್ಪಂದಕ್ಕೆ ಸಹಿ ಹಾಕಿದವು. ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಗುಟೆರೆಸ್ ಅವರು ಭದ್ರತಾ ಮಂಡಳಿಗೆ ಘೋಷಿಸಲು ಹೋದರು, “ನಾವು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇವೆ … ಪಶ್ಚಿಮ ಆಫ್ರಿಕಾ ಮತ್ತು ಇತರೆಡೆಗಳಲ್ಲಿ ಈಗಾಗಲೇ ಕೃಷಿಯ ಮೇಲೆ ಪರಿಣಾಮ ಬೀರುತ್ತಿರುವ ಗಂಭೀರ ರಸಗೊಬ್ಬರ ಪೂರೈಕೆಯನ್ನು ಸರಾಗಗೊಳಿಸದಿದ್ದರೆ. ರಸಗೊಬ್ಬರ ಮಾರುಕಟ್ಟೆಯನ್ನು ಸ್ಥಿರಗೊಳಿಸದಿದ್ದರೆ, ಮುಂದಿನ ವರ್ಷ ತೀವ್ರ ಆಹಾರ ಪೂರೈಕೆ ಬಿಕ್ಕಟ್ಟು ತರಬಹುದು.” ಜೂನ್ 8, 2023 ರಂದು, ಉಕ್ರೇನಿಯನ್ ಪಡೆಗಳು ಖಾರ್ಕಿವ್‌ನಲ್ಲಿ ಟೊಗ್ಲಿಯಾಟ್ಟಿ-ಒಡೆಸಾ ಪೈಪ್‌ಲೈನ್‌ನ ಒಂದು ಭಾಗವನ್ನು ಸ್ಫೋಟಿಸಿತು, ಈ ವಿವಾದದ ಮೇಲೆ ಉದ್ವಿಗ್ನತೆಯನ್ನು ಹೆಚ್ಚಿಸಿತು. ಕಪ್ಪು ಸಮುದ್ರದ ಬಂದರುಗಳನ್ನು ಹೊರತುಪಡಿಸಿ, ಅಮೋನಿಯಾ ಆಧಾರಿತ ರಸಗೊಬ್ಬರಗಳನ್ನು ರಫ್ತು ಮಾಡಲು ರಷ್ಯಾಕ್ಕೆ ಬೇರೆ ಯಾವುದೇ ಸುರಕ್ಷಿತ ಮಾರ್ಗವಿಲ್ಲ.

ಮೂರನೆಯದಾಗಿ, ರಷ್ಯಾದ ಕೃಷಿ ವಲಯವು ಯಂತ್ರೋಪಕರಣಗಳು ಮತ್ತು ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುವ ಸಾಮರ್ಥ್ಯದ ಕೊರತೆಯಿಂದ ಸವಾಲುಗಳನ್ನು ಎದುರಿಸುತ್ತಿದೆ ಮತ್ತು ರಷ್ಯಾದ ಹಡಗುಗಳು ವಿಮೆಯನ್ನು ಖರೀದಿಸಲು ಅಥವಾ ಅನೇಕ ವಿದೇಶಿ ಬಂದರುಗಳನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಪಾಶ್ಚಿಮಾತ್ಯ ನಿರ್ಬಂಧಗಳಲ್ಲಿ  ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ವಿನಾಯಿತಿಗಳ ಹೊರತಾಗಿಯೂ, ಸಂಸ್ಥೆಗಳು ಮತ್ತು ವ್ಯಕ್ತಿಗಳ ಮೇಲಿನ ನಿರ್ಬಂಧಗಳು ರಷ್ಯಾದ ಕೃಷಿ ವಲಯವನ್ನು ದುರ್ಬಲಗೊಳಿಸಿವೆ.

ಪಾಶ್ಚಿಮಾತ್ಯ ನಿರ್ಬಂಧಗಳನ್ನು ಎದುರಿಸಲು, ರಸಗೊಬ್ಬರ ಮತ್ತು ಕೃಷಿ ಉತ್ಪನ್ನಗಳ ರಫ್ತಿನ ಮೇಲೆ ರಷ್ಯಾ ನಿರ್ಬಂಧಗಳನ್ನು ವಿಧಿಸಿತು. ಈ ನಿರ್ಬಂಧಗಳು ಕೆಲವು ಸರಕುಗಳ ರಫ್ತಿನ ಮೇಲಿನ ನಿಷೇಧವನ್ನು ಒಳಗೊಂಡಿವೆ (ಉದಾಹರಣೆಗೆ ಯುರೇಷಿಯನ್ ಎಕನಾಮಿಕ್ ಯೂನಿಯನ್‌ಗೆ ಗೋಧಿ ರಫ್ತುಗಳ ತಾತ್ಕಾಲಿಕ ನಿಷೇಧಗಳು), ಪರವಾನಗಿ ಅಗತ್ಯತೆಗಳ ಹೆಚ್ಚಳ (ಸಂಯುಕ್ತ ರಸಗೊಬ್ಬರಗಳು, ಯುದ್ಧದ ಮೊದಲು ಸ್ಥಾಪಿಸಲಾದ ಅವಶ್ಯಕತೆಗಳು ಸೇರಿದಂತೆ) ಮತ್ತು ರಫ್ತು ತೆರಿಗೆಗಳ ಹೆಚ್ಚಳ. ಈ ರಷ್ಯಾದ ಕ್ರಮಗಳು ಮರು-ರಫ್ತು ಮಾಡುವ ಭಾರತದಂತಹ ಇತರ ದೇಶಗಳಿಗೆ ನೇರ ಮಾರಾಟದ ಕಾರ್ಯತಂತ್ರದ  ಜೊತೆಗೆ ಬಂದವು.

ಜುಲೈ ಅಂತ್ಯದಲ್ಲಿ, ಸೇಂಟ್ ಪೀಟರ್ಸ್ಬರ್ಗ್ ನಲ್ಲಿ ಎರಡನೇ ರಷ್ಯಾ-ಆಫ್ರಿಕಾ ಆರ್ಥಿಕ ಮತ್ತು ಮಾನವೀಯ ವೇದಿಕೆಯನ್ನು ಆಯೋಜಿಸಲಾಗುತ್ತಿದೆ, ಅಲ್ಲಿ ಈ ವಿಷಯಗಳು ಕೇಂದ್ರದಲ್ಲಿರುತ್ತವೆ. ಶೃಂಗಸಭೆಯ ಮೊದಲು, ಅಧ್ಯಕ್ಷ ಪುಟಿನ್ ಅವರು ದಕ್ಷಿಣ ಆಫ್ರಿಕಾದ ಸಿರಿಲ್ ರಾಮಾಫೋಸಾ ಅವರಿಗೆ ಫೋನ್ ಮಾಡಿ ಆಫ್ರಿಕನ್ ಖಂಡಕ್ಕೆ ತನ್ನ ಆಹಾರ ಮತ್ತು ರಸಗೊಬ್ಬರಗಳನ್ನು ರಫ್ತು ಮಾಡುವಲ್ಲಿ ರಷ್ಯಾ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿದರು. “ಒಪ್ಪಂದದ ಮುಖ್ಯ ಗುರಿ,” ಅವರು ಕಪ್ಪು ಸಮುದ್ರದ ಧಾನ್ಯದ ಡೀಲ್ ಮೂಲಕ, “ಆಫ್ರಿಕನ್ ಖಂಡದಲ್ಲಿ ಸೇರಿದಂತೆ ಅಗತ್ಯವಿರುವ ದೇಶಗಳಿಗೆ ಧಾನ್ಯವನ್ನು ಪೂರೈಸುವುದನ್ನು ಕಾರ್ಯಗತಗೊಳಿಸಲಾಗಿಲ್ಲ.” ಎಂದು ತಿಳಿಸಿದರು

ಕಪ್ಪು ಸಮುದ್ರದ ಧಾನ್ಯ ಡೀಲ್ ತಿಂಗಳೊಳಗೆ ಪುನರಾರಂಭವಾಗುವ ಸಾಧ್ಯತೆಯಿದೆ. ಹಿಂದಿನ ಅಮಾನತುಗಳು ಕೆಲವು ವಾರಗಳಿಗಿಂತ ಹೆಚ್ಚು ಕಾಲ ಉಳಿಯಲಿಲ್ಲ. ಆದರೆ ಈ ಬಾರಿ, ತನ್ನ ಕೃಷಿ ಉತ್ಪನ್ನಗಳನ್ನು ರಫ್ತು ಮಾಡುವ ಸಾಮರ್ಥ್ಯದ ಮೇಲೆ ರಷ್ಯಾಕ್ಕೆ ಇರುವ ತೊಡಕುಗಳಿಗೆ ಯು.ಎಸ್-ಯುರೋಪು ಪರಿಹಾರವನ್ನು ನೀಡುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ನಿಸ್ಸಂಶಯವಾಗಿ, ಅಮಾನತುಗೊಳಿಸುವಿಕೆಯು ಹಸಿವಿನಿಂದ ಹೋರಾಡುವ ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ಆಹಾರ ಮಾರುಕಟ್ಟೆಗಳಲ್ಲಿನ ಹಣಕಾಸಿನ ಜೂಜುಕೋರತನದ ಕಾರಣದಿಂದಾಗಿ ಹಸಿದಿರುವ ಶತಕೋಟಿಗಟ್ಟಲೆ ಇತರರು ಈ ಬೆಳವಣಿಗೆಗಳಿಂದ ನೇರವಾಗಿ ಪ್ರಭಾವಿತರಾಗುವುದಿಲ್ಲ.

Donate Janashakthi Media

Leave a Reply

Your email address will not be published. Required fields are marked *