ಬೆಂಗಳೂರು : ಮಹಿಳಾ ದಿನಾಚರಣೆಯಂದೇ ಸಾರ್ವಜನಿಕ ಸ್ಥಳದಲ್ಲಿ ಬಿಜೆಪಿ ಸಂಸದ ಅವಮಾನಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ ರಸ್ತೆ ಬದಿಯಲ್ಲಿ ಅಂಗಡಿ ಇಟ್ಟುಕೊಂಡಿದ್ದ ಮಹಿಳೆಯೊಬ್ಬರಿಗೆ ಏನಮ್ಮ ನಿನ್ನ ಹೆಸರು, ಹಣೆಗೆ ಯಾಕೆ ಕುಂಕುಮ ಹಾಕಿಲ್ಲ? ಗಂಡ ಬದುಕಿದ್ದಾನೆ ತಾನೇ? ವೈಷ್ಣವಿ ಎಂದು ಅಂಗಡಿ ಹೆಸರನ್ನು ಯಾಕೆ ಇಟ್ಟುಕೊಂಡಿದ್ದೀಯಾ? ಇವಳಿಗೆ ಹಣೆಗೆ ಇಟ್ಟುಕೊಳ್ಳಲು ಬಿಂದಿ ಕೊಡಿ ಎಂದು ಮಹಿಳೆಯ ಕುರಿತಾಗಿ ಸಾರ್ವಜನಿಕ ಸ್ಥಳದಲ್ಲಿ ನಿಂದಿಸಿ ಅವಮಾನಿಸಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದಲ್ಲದೆ, ನಿಂದನೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಇದನ್ನೂ ಓದಿ : ಸಂಸದ ಮುನಿಸ್ವಾಮಿ ಬೇಜವಬ್ದಾರಿ ಹೇಳಿಕೆಗೆ ಎಸ್.ಎಫ್.ಐ ಆಕ್ರೋಶ
ಮಹಿಳೆಗೆ ಅವಮಾನ ಬಿಜೆಪಿಯ ಮಹಿಳಾ ವಿರೋಧಿ ನೀತಿಗೆ ಸಾಕ್ಷಿ: ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ ಮಹಿಳೆಗೆ ಅವಮಾನ ಮಾಡಿರುವ ಕುರಿತು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ತನ್ನ ಆಕ್ರೋಶವನ್ನು ಹೊರಹಾಕಿದ್ದು, “ಹಣೆಗೆ ಕುಂಕುಮ ಯಾಕಿಟ್ಟಿಲ್ಲ, ಗಂಡ ಬದುಕಿದಾನೆ ತಾನೇ” ಎಂದು ಬಿಜೆಪಿ ಸಂಸದ ಮುನಿಸ್ವಾಮಿ ಮಹಿಳೆಗೆ ಅವಮಾನಿಸಿದ್ದು ಬಿಜೆಪಿಯ ಮಹಿಳಾ ವಿರೋಧಿ ನೀತಿಗೆ ಸಾಕ್ಷಿ. ಮಹಿಳೆಯರ ಸ್ವತಂತ್ರ ಕಸಿಯಲು, ಅವರ ಉಡುಗೆ ತೊಡುಗೆ ನಿರ್ಧರಿಸಲು ಬಿಜೆಪಿಗೆ ಯಾವ ಹಕ್ಕಿದೆ? ಮಹಿಳಾ ದಿನದಂದೇ ಮಹಿಳೆಗೆ ಅವಮಾನಿಸಿ ವಿಕೃತಿ ಮೆರೆದಿದೆ. ಬಿಜೆಪಿ ಸಂಸದರು ಮಹಿಳೆಯರಿಗೆ ಕುಂಕುಮ ಯಾಕಿಟ್ಟಿಲ್ಲ ಎಂದು ಪ್ರಶ್ನಿಸುವ ಮೊದಲು ಜನರಿಗೆ ನೆರೆ ಪರಿಹಾರಕ್ಕೆ ಕೇಂದ್ರವನ್ನು ಏಕೆ ಒತ್ತಾಯಿಸಿಲ್ಲ? GST ಬಾಕಿಯನ್ನು ಏಕೆ ಕೇಳಲಿಲ್ಲ? ಕರ್ನಾಟಕಕ್ಕೆ, ಕನ್ನಡಕ್ಕೆ ಅನ್ಯಾಯವಾದಾಗ ಏಕೆ ದನಿ ಎತ್ತಲಿಲ್ಲ? ಮೊದಲು ಇವುಗಳಿಗೆ ಉತ್ತರಿಸಿ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದೆ.
ಕೆಲವು ದಿನಗಳ ಹಿಂದೆಯಷ್ಟೇ ದಲಿತ ಸಮುದಾಯದ ಹೋರಾಟಗಾರ ವ್ಯಕ್ತಿಯೂಬ್ಬರು ಸಹ ಸಂಸದ ಮುನಿಸ್ವಾಮಿ ವಿರುದ್ಧ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಸಾವಿಗೆ ಯತ್ನಿಸಿದ್ದರು.
ಜನರ ಒಳಿತನ್ನು ಕಾಯುವ ಮೂಲಕ ಮಹಿಳೆಯರಿಗೆ ಗೌರವವನ್ನು ತೋರಬೇಕಾದ ಜನನಾಯಕರೇ ಇಂತಹ ನಿಂದನೆ, ಕಿರುಕುಳ ನೀಡಿದಂತಾದರೆ ಸಾಮಾನ್ಯ ಜನರ ಪರಿಸ್ಥಿತಿ ಹೇಗೆ ? ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ. ಸದ್ಯ ಸಂಸದ ಮುನಿಸ್ವಾಮಿ ವಿರುದ್ಧ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.