ಇದು ಬಡತನದ ಅಳತೆಯೋ ಅಥವ ನವ-ಉದಾರವಾದವನ್ನು ‘ಚಂದಗೊಳಿಸುವ’ ಕೆಲಸವೋ?

-ಪ್ರೊ.ಪ್ರಭಾತ್ ಪಟ್ನಾಯಕ್
-ಅನು: ಕೆ.ಎಂ.ನಾಗರಾಜ್

ಬಡತನವನ್ನು ಅಳೆಯಲು ವಿಶ್ವ ಬ್ಯಾಂಕ್ ಅನುಸರಿಸುತ್ತಿರುವ ವಿಧಾನದಲ್ಲಿ ಮೂರು ಮೂಲಭೂತ ಸಮಸ್ಯೆಗಳಿವೆ: ಮೊದಲನೆಯದು, ಈ ಲೆಕ್ಕಾಚಾರವು ಒಬ್ಬ ವ್ಯಕ್ತಿಯು ಹೊಂದಿರುವ ಆಸ್ತಿ-ಪಾಸ್ತಿಗಳ ಬಗ್ಗೆ ಮಾತನಾಡುವುದಿಲ್ಲ; ವ್ಯಕ್ತಿಯ ಆದಾಯದ ಬಗ್ಗೆ ಮಾತ್ರ ಗಮನ ಹರಿಸುತ್ತದೆ. ಎರಡನೆಯದು, ಈನ ಆದಾಯವನ್ನು ವ್ಯಕ್ತಿಯ ವೆಚ್ಚಗಳ ಮೂಲಕ ಲೆಕ್ಕಹಾಕಲಾಗುತ್ತದೆ. ಮೂರನೆಯದು, ವ್ಯಕ್ತಿಯ ನಿಜ ವೆಚ್ಚಗಳನ್ನು ಬೆಲೆ-ಸೂಚ್ಯಂಕದ ಮೂಲಕಮ ಲೆಕ್ಕಹಾಕುವ ಕ್ರಮವು ಜೀವನ ನಿರ್ವಹಣೆಯ ನಿಜ ವೆಚ್ಚಗಳನ್ನು ಗಮನಾರ್ಹವಾಗಿ ತಗ್ಗಿಸುವುದರಿಂದ ಈ ಮೂಲಕ ಪಡೆಯುವ ಅಂಕಿಅಂಶಗಳು ಸಂಪೂರ್ಣವಾಗಿ ತಪ್ಪಾಗಿರುತ್ತವೆ. ಹೀಗಿರುವಾಗ, ಲಕ್ಷಾಂತರ ಮಂದಿಯನ್ನು ಬಡತನದಿಂದ ಮೇಲೆತ್ತಲಾಗಿದೆ ಎಂಬ ಎಲ್ಲ ಮಾತುಗಳೂ ಒಂದು ಕ್ರೂರ ತಮಾಷೆಯೆಂದೇ ಹೇಳಬೇಕಾಗುತ್ತದೆ. ದುರದೃಷ್ಟವಶಾತ್, ಅಂತಹ ಮಾತುಗಳು, ಮುಂಬರುವ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ಕೇಳ ಬರಬಹುದು.

ಬಡತನವನ್ನು ಅಳೆಯುವ ವ್ಯವಹಾರದಲ್ಲಿ ಈಗ ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳು ತೊಡಗಿಕೊಂಡಿವೆ. ಈ ಕೆಲಸವನ್ನು ಕಳೆದ ಹಲವು ವರ್ಷಗಳಿಂದಲೂ ವಿಶ್ವ ಬ್ಯಾಂಕ್ ಮಾಡುತ್ತಾ ಬಂದಿದೆ. ಆದರೆ, ‘ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ’ (ಯುಎನ್‌ಡಿಪಿ) ಮತ್ತು”ಆಕ್ಸ್ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮ; (ಒಪಿಹೆಚ್‌ಐ) ಸಂಸ್ಥೆಗಳು ಬಹು ಆಯಾಮದ ಬಡತನ ಎಂಬ ಒಂದು ಹೊಸ ಅಳತೆಯ ಪರಿಕಲ್ಪನೆಯನ್ನು ಬಳಕೆಗೆ ತಂದಿವೆ. ಇವೆರಡೂ ನಿಜಕ್ಕೂ ಮಾಡುವದು ಬಡತನದ ಅಳತೆಯಲ್ಲ. ಅವರು ಕೊನೆಗೂ ನವ-ಉದಾರವಾದಿ ಬಂಡವಾಳಶಾಹಿಯನ್ನು ಚಂದಗೊಳಿಸುವ” ಕೆಲಸ ಮಾಡುತ್ತಿದ್ದಾರಷ್ಟೇ.

ವಿಶ್ವಬ್ಯಾಂಕ್‌ನ ಒಂದು ಅಂದಾಜಿನ ಪ್ರಕಾರ, 1990ರ ದಶಕದ ಉತ್ತರಾರ್ಧದಲ್ಲಿ ತೀವ್ರ ಬಡತನದಲ್ಲಿ (ಅಂದರೆ, 2011ರ ಕೊಳ್ಳುವ ಶಕ್ತಿಯ ಅನುರೂಪ ವಿನಿಮಯ ದರ- purchasing power parity exchange rate-ದಲ್ಲಿ ದೈನಿಕ ತಲಾ $1.90ಕ್ಕಿಂತಲೂ ಕಡಿಮೆ ವೆಚ್ಚ ಮಾಡುವವರು) ಬದುಕುತ್ತಿದ್ದ ವಿಶ್ವದ ಜನರ ಸಂಖ್ಯೆಯು ಶೇ. 30ರಿಂದ 2022ರ ವೇಳೆಗೆ ಶೇ. 10ಕ್ಕಿಂತಲೂ ಕೆಳಗಿತ್ತು. ಈ ಹೇಳಿಕೆಯು ನವ-ಉದಾರವಾದಿ ಬಂಡವಾಳಶಾಹಿಯ ಅಡಿಯಲ್ಲಿ ಲಕ್ಷಾಂತರ ಮಂದಿಯನ್ನು ಬಡತನದಿಂದ ಮೇಲೆತ್ತಲಾಗಿದೆ ಎಂಬುದನ್ನು ಸೂಚಿಸುತ್ತದೆ. ಬಹಳವಾಗಿ ಉಲ್ಲೇಖಿಸಲಾಗುವ ವಿಶ್ವಬ್ಯಾಂಕ್‌ನ ಈ ಅಳತೆಯ ಪರಿಕಲ್ಪನೆಯೇ ಏಕೆ ದೋಷಪೂರಿತವಾಗಿದೆ ಎಂಬುದನ್ನು ನೋಡೋಣ.

ಇದನ್ನೂ ಓದಿ: ವಕ್ಸ್ ಬೋರ್ಡ್ ಒಟ್ಟು ಎಷ್ಟು ಆಸ್ತಿ ಹೊಂದಿದೆ ಎಂಬ ವಿಚಾರ ಬಹಿರಂಗ

ಬಡತನವನ್ನು ಅಳೆಯಲು ವಿಶ್ವ ಬ್ಯಾಂಕ್ ಅನುಸರಿಸುತ್ತಿರುವ ವಿಧಾನದಲ್ಲಿ ಮೂರು ಮೂಲಭೂತ ಸಮಸ್ಯೆಗಳಿವೆ: ಮೊದಲನೆಯದು, ಈ ಲೆಕ್ಕಾಚಾರವು
ಒಬ್ಬ ವ್ಯಕ್ತಿಯು ಹೊಂದಿರುವ ಆಸ್ತಿ-ಪಾಸ್ತಿಗಳ ಬಗ್ಗೆ ಮಾತನಾಡುವುದಿಲ್ಲ; ವ್ಯಕ್ತಿಯ ಆದಾಯದ ಬಗ್ಗೆ ಮಾತ್ರ ಗಮನ ಹರಿಸುತ್ತದೆ. ಎರಡನೆಯದು, ಈ
ಆದಾಯವನ್ನು ವ್ಯಕ್ತಿಯ ವೆಚ್ಚಗಳ ಮೂಲಕ ಲೆಕ್ಕಹಾಕಲಾಗುತ್ತದೆ ಎಂಬುದು. ಮೂರನೆಯದು, ವ್ಯಕ್ತಿಯ ನಿಜ ವೆಚ್ಚಗಳನ್ನು ಬೆಲೆ-ಸೂಚ್ಯಂಕದ ಮೂಲಕ ಲೆಕ್ಕಹಾಕುವ ಕ್ರಮವು ಜೀವನ ನಿರ್ವಹಣೆಯ ನಿಜ ವೆಚ್ಚಗಳನ್ನು ಗಮನಾರ್ಹವಾಗಿ ತಗ್ಗಿಸುವುದರಿಂದ ಈ ಮೂಲಕ ಪಡೆಯುವ ಅಂಕಿಅಂಶಗಳು ಸಂಪೂರ್ಣವಾಗಿ ತಪ್ಪಾಗಿರುತ್ತವೆ. ಈ ಪ್ರತಿಯೊಂದು ಅಂಶವನ್ನೂ ವಿವರವಾಗಿ ಪರಿಶೀಲಿಸೋಣ.

ದೋಷಭರಿತ ವಿಧಾನ

ಬಡತನವನ್ನು ಅರ್ಥಪೂರ್ಣವಾಗಿ ಅಳೆಯುವ ಯಾವುದೇ ವಿಧಾನವು ವ್ಯಕ್ತಿಯ ಆದಾಯದ ಹರಿವಿನ ಆಯಾಮವನ್ನು ಮತ್ತು ವ್ಯಕ್ತಿಯು ಹೊಂದಿರುವ ಆಸ್ತಿಯ ದಾಸ್ತಾನು ಆಯಾಮವನ್ನು ಒಳಗೊಂಡಿರಬೇಕು. ಈ ಎರಡೂ ಆಯಾಮಗಳೂ ಮುಖ್ಯವಾಗುತ್ತವೆ. ಉದಾಹರಣೆಗೆ, ವ್ಯಕ್ತಿಯೊಬ್ಬರು ಎರಡು ದಿನಾಂಕಗಳ ಕಾಲಾವಧಿಯಲ್ಲಿ ಅದೇ ನಿಜ ಆದಾಯವನ್ನು ಹೊಂದಿದ್ದರೂ ಎರಡನೆಯ ದಿನಾಂಕದ ಅವಧಿಯೊಳಗೆ ತಮ್ಮ ಎಲ್ಲ ಆಸ್ತಿಗಳನ್ನೂ ಕಳೆದುಕೊಂಡಿದ್ದರೆ, ಅವರು ಬಡವರಾಗಿದ್ದಾರೆ ಎಂದು ಪರಿಗಣಿಸದಿರುವುದು ಪರಿಸ್ಥಿತಿಯ ಅಣಕವಾಗುತ್ತದೆ.

ಬಂಡವಾಳದ ಆದಿಮ ಕ್ರೋಢೀಕರಣದ ಪ್ರಕ್ರಿಯೆಯು, ಅಂದರೆ, ತಮ್ಮ ಆಸ್ತಿಗಳಿಂದ ವ್ಯಕ್ತಿಗಳನ್ನು ಹೊರಹಾಕುವ ಪ್ರಕ್ರಿಯೆಯು ವಿಪರೀತವಾಗಿರುವ ನವ-ಉದಾರವಾದಿ ಬಂಡವಾಳಶಾಹಿಯ ಅಡಿಯಲ್ಲಿ ವ್ಯಕ್ತಿಗಳ ಆಸ್ತಿಯ ಪರಿಸ್ಥಿತಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ವಿಶ್ವಬ್ಯಾಂಕ್‌ನ ಕ್ರಮವು ಎದ್ದುಕಾಣುವ ಒಂದು ಲೋಪವಾಗಿದೆ. ಆಸ್ತಿಗಳನ್ನು ವ್ಯಕ್ತಿಗಳ ಸ್ವಾಧೀನದಿಂದ ಹೊರಹಾಕುವುದು ಅತಿಯಾಗಿ ಸಂಭವಿಸುತ್ತಿರುವ ಸನ್ನಿವೇಶದಲ್ಲಿ ಲಕ್ಷಾಂತರ ಮಂದಿಯನ್ನು ಬಡತನದಿಂದ ಮೇಲೆತ್ತಲಾಗಿದೆ ಎಂದು ಹೇಳುವುದು ವಾಸ್ತವದ ಒಂದು ಪರಮ ವಿಡಂಬನೆಯಾಗುತ್ತದೆ.

ಎರಡನೆಯದು, ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿ ಆದಾಯದ ಮಾಹಿತಿಯು ಲಭ್ಯವಿಲ್ಲದ ಕಾರಣ, ನಿಜ ಆದಾಯವೂ ಸಹ ಈ ಅಳತೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಜೊತೆಗೆ, ಆದಾಯ ಎಂಬುದರ ಪರಿಕಲ್ಪನೆ ಒಂದು ಸಂಕೀರ್ಣ ವಿಷಯವೇ ಸರಿ. ಆದ್ದರಿಂದ, ವೆಚ್ಚದ ದತ್ತಾಂಶವು ಸಾಮಾನ್ಯವಾಗಿ ಸುಲಭವಾಗಿ ಲಭ್ಯವಾಗುವುದರಿಂದ ಮತ್ತು ಅದರ ಪರಿಕಲ್ಪನೆ ಸರಳವಾಗಿರುವುದರಿಂದ ಅದನ್ನು ಆದಾಯಕ್ಕೆ ಒಂದು ಬದಲಿಯಾಗಿ ತೆಗೆದುಕೊಳ್ಳಲಾಗುತ್ತದೆ.

ಆದರೆ, ಮಾಹಿತಿ ಲಭ್ಯವಿಲ್ಲದ್ದರಿಂದ ಆದಾಯಕ್ಕೆ ಒಂದು ಬದಲಿಯಾಗಿ ವೆಚ್ಚವನ್ನು ತೆಗೆದುಕೊಳ್ಳುವ ಈ ಕ್ರಮವು ವ್ಯಕ್ತಿಯ ನಿವ್ವಳ ಆಸ್ತಿಯ ಪರಿಸ್ಥಿತಿಯನ್ನು ನಿರ್ಲಕ್ಷಿಸುವ ಕ್ರಮವನ್ನು ಇನ್ನಷ್ಟು ಅಕ್ಷಮ್ಯಗೊಳಿಸುತ್ತದೆ. ವ್ಯಕ್ತಿಗಳ ಆದಾಯವು ಇಳಿಕೆಯಾದ ಪರಿಸ್ಥಿತಿಯಲ್ಲೂ ಅವರು ತಮ್ಮ ಆಸ್ತಿಗಳನ್ನು ಮಾರಾಟ ಮಾಡುವುದರಿಂದಾಗಿಯೋ ಅಥವಾ ಸಾಲ ಪಡೆಯುವುದರಿಂದಾಗಿಯೋ ಅವರ ಖರ್ಚು-ವೆಚ್ಚಗಳು ಹಿಂದಿನ ಮಟ್ಟದಲ್ಲೇ ಇರುತ್ತವೆ.  ಅವರ ಖರ್ಚುಗಳು ಬದಲಾಗದೆ ಉಳಿದಿರುವುದರಿಂದ ಆ ವ್ಯಕ್ತಿಗಳು ಬಡವರಾಗಿಲ್ಲ ಎಂದು ತೀರ್ಮಾನಿಸುವುದು ಒಂದು ಅಸಂಬದ್ಧವೇ ಸರಿ: ಹರಿವಿನ ಪರಿಭಾಷೆಯಲ್ಲಿ, ಅಂದರೆ ಆದಾಯದ ರೀತ್ಯಾ ಮತ್ತು ದಾಸ್ತಾನು ಪರಿಭಾಷೆಯಲ್ಲಿ, ಅಂದರೆ ನಿವ್ವಳ ಆಸ್ತಿಗಳ ರೀತ್ಯಾ, ಈ ವ್ಯಕ್ತಿಗಳು ನಿಸ್ಸಂದಿಗ್ಧವಾಗಿ ಬಡವರೇ ಹೌದು. ಆದರೆ, ವೆಚ್ಚ ಆಧರಿತ ಅಳತೆಯು ವ್ಯಕ್ತಿಗಳು ಅವರು ಮೊದಲಿದ್ದ ಆರ್ಥಿಕ ಪರಿಸ್ಥಿತಿಯಲ್ಲೇ ಇದ್ದಾರೆ ಎನ್ನುವ ರೀತಿಯಲ್ಲೇ ತೋರಿಸುತ್ತದೆ.

ಮೂರನೆಯದಾಗಿ, ನಿಯತಕಾಲಿಕವಾಗಿ ನಡೆಸುವ ಜಾಗರೂಕ ಮಾದರಿ ಸಮೀಕ್ಷೆಗಳ ಮೂಲಕ ಕುಟುಂಬಗಳ ಹಣ ವೆಚ್ಚದ ಅಂಕಿಅಂಶಗಳನ್ನು ಹೊಂದಿರುವ
ಭಾರತದಂತಹ ದೇಶಗಳ ನಿಜ ವೆಚ್ಚದ ಅಳತೆಯೂ ಸಹ ಸಂಪೂರ್ಣವಾಗಿ ತಪ್ಪಾಗಿರುತ್ತದೆ. ಏಕೆಂದರೆ, ಈ ವೆಚ್ಚಗಳನ್ನು ಲೆಕ್ಕಹಾಕಲು ಬಳಸುವ ಹೆಸರಿಗೆ
ಮಾತ್ರದ ಬೆಲೆ-ಸೂಚ್ಯಂಕವು ಜೀವನ ನಿರ್ವಹಣೆ ವೆಚ್ಚಗಳಲ್ಲಿ ಉಂಟಾದ ನೈಜ ಏರಿಕೆಯನ್ನು ತಗ್ಗಿಸಿ ತೋರಿಸುತ್ತದೆ. ಮತ್ತು, ಈ ಬೆಲೆ-ಸೂಚ್ಯಂಕವು ಮೂಲ ವರ್ಷದಲ್ಲಿ ಜೀವನ ನಿರ್ವಹಣೆಗಾಗಿ ಬಳಸಲಾದ ಒಟ್ಟು ಸರಕುಗಳ ವೈಯಕ್ತಿಕ ಬೆಲೆಗಳ ಪ್ರಮಾಣಾನುಸಾರ ಸರಾಸರಿಯಾಗಿರುತ್ತದೆ. ಮೂಲ ವರ್ಷದಲ್ಲಿ ಬಳಸಿದ ಸರಕುಗಳ ಅಲಭ್ಯತೆಯ ಕಾರಣದಿಂದಾಗಿ ಕಾಲಕ್ರಮದಲ್ಲಿ ಬಳಕೆಯ ಬುಟ್ಟಿಯಲಿನ ವಸ್ತುಗಳಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಅಂತಹ ಬದಲಾವಣೆಗಳನ್ನು ಬೆಲೆ ಸೂಚ್ಯಂಕವು ಗುರುತಿಸುವುದಿಲ್ಲ.

‘ಜೀವನಮಟ್ಟ ಸುಧಾರಣೆ’ಯೆಂಬ ಉತ್ಪೆಕ್ಷೆ

ಉದಾಹರಣೆಗೆ, ನವ-ಉದಾರವಾದದ ಅಡಿಯಲ್ಲಿ ಸಾರ್ವಜನಿಕ ಸಂಸ್ಥೆಗಳು ಈ ಹಿಂದೆ ಒದಗಿಸುತ್ತಿದ್ದ ಶಿಕ್ಷಣ ಮತ್ತು ಆರೋಗ್ಯದಂತಹ ಒಂದಿಡೀ ಶ್ರೇಣಿಯ ಸೇವೆಗಳ ಖಾಸಗೀಕರಣವು ಒಂದು ಸಾಮಾನ್ಯ ವಿದ್ಯಮಾನವಾಗಿದೆ. ಈ ಖಾಸಗೀಕರಣದಿಂದಾಗಿ ಜನರು ಈ ಸೇವೆಗಳಿಗಾಗಿ ಮಾಡುವ ವೆಚ್ಚಗಳು ಹೆಚ್ಚುತ್ತವೆ. ಆದರೆ ಈ ಹೆಚ್ಚಳವನ್ನು ಬೆಲೆ-ಸೂಚ್ಯಂಕವು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಉದಾಹರಣೆಗೆ, ಒಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂಲ ವರ್ಷದಲ್ಲಿ ರೂ 1,000 ವೆಚ್ಚ ತಗುಲುತ್ತಿದ್ದ ಶಸ್ತ್ರಚಿಕಿತ್ಸೆಗೆ ಈಗ ರೂ 2,000 ವೆಚ್ಚ ತಗುಲಿದರೆ, ಬೆಲೆ-ಸೂಚ್ಯಂಕವು ಆರೋಗ್ಯದ ವೆಚ್ಚವನ್ನು ಎರಡು ಪಟ್ಟು ಏರಿಕೆಯಾಗಿದೆ ಎಂದು ತೆಗೆದುಕೊಳ್ಳುತ್ತದೆ. ಆದರೆ, ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಶಸ್ತ್ರಚಿಕಿತ್ಸೆಗಳ ಸೌಲಭ್ಯವು ಅಷ್ಟೇ ಇರುತ್ತದೆ ಅಥವಾ ಇಳಿಮುಖವಾಗಿರುತ್ತದೆ.

ಹಾಗಾಗಿ ಜನರು ಈಗ ಖಾಸಗಿ ಆಸ್ಪತ್ರೆಗಳಿಗೆ ಹೋಗಲೇಬೇಕಾದ ಅನಿವಾರ್ಯತೆ ಇದೆ. ಈಗ ಅದೇ ಶಸ್ತ್ರಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ 10,000 ರೂ. ತೆರಬೇಕಾಗುತ್ತದೆ. ಈ ಹೆಚ್ಚಳವನ್ನು ಬೆಲೆ-ಸೂಚ್ಯಂಕವು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಹಾಗಾಗಿ, ಬೆಲೆ-ಸೂಚ್ಯಂಕವು ತೋರಿಸುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜೀವನ ನಿರ್ವಹಣೆಯ ವೆಚ್ಚವು ಹೆಚ್ಚಾಗಿರುತ್ತದೆ ಮಾತ್ರವಲ್ಲ, ಅಧಿಕೃತ ಬೆಲೆ-ಸೂಚ್ಯಂಕವು ಜೀವನಮಟ್ಟದ ಸುಧಾರಣೆಯನ್ನು ಉತ್ಪ್ರೇಕ್ಷೆಗೊಳಿಸುತ್ತದೆ ಮತ್ತು ಆ ಮೂಲಕ ಬಡತನವನ್ನು ಬಹಳವಾಗಿ ಕೀಳಂದಾಜು ಮಾಡುತ್ತದೆ. ಜೀವನ ನಿರ್ವಹಣೆಯ ವೆಚ್ಚಗಳ ಏರಿಕೆಯಿಂದ ಹಿಂಡಿ ಹಿಪ್ಪೆಯಾದ ಜನರಿಗೆ ತಮ್ಮ ನಿತ್ಯ ಜೀವನದ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಕಷ್ಟವಾಗುತ್ತದೆ.

ಈ ಕಷ್ಟಗಳಿಂದ ಹೊರಬರಲು ಅವರು ಕನಿಷ್ಟ ಎರಡು ವಿಭಿನ್ನ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ: ಮೊದಲನೆಯದು, ತಮ್ಮ ಆಸ್ತಿಯನ್ನು ಅಥವಾ ತಮ್ಮ ಸ್ವತ್ತುಗಳನ್ನು ಮಾರಾಟ ಮಾಡುವ ಮೂಲಕ ಅಥವಾ ಸಾಲಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ. ಎರಡನೆಯದು, ತಮ್ಮ ಬಳಕೆಯ ವಸ್ತುಗಳ ಸಂಯೋಜನೆಯನ್ನು ಬದಲಾಯಿಸಿಕೊಳ್ಳುತ್ತಾರೆ. ಹೆಚ್ಚು ಅಗತ್ಯ ಇರುವ ವಸ್ತುಗಳಿಗೆ ಆದ್ಯತೆ ನೀಡುತ್ತಾರೆ; ಅಗತ್ಯ ಕಡಿಮೆ ಇರುವ ವಸ್ತುಗಳ ಬಳಕೆಯನ್ನು ಬಿಟ್ಟುಬಿಡುತ್ತಾರೆ. ಆರೋಗ್ಯ ರಕ್ಷಣೆಯ ಅಥವಾ ಮಕ್ಕಳ ಶಿಕ್ಷಣದ ವೆಚ್ಚಗಳ ಏರಿಕೆಯಿಂದಾಗಿ ಭಾರತದಲ್ಲಿ ಈ ಎರಡೂ ರೀತಿಯ ಹೊಂದಾಣಿಕೆಗಳನ್ನು ಜನರು ಮಾಡಿಕೊಂಡಿದ್ದಾರೆ: ಭಾರತೀಯ ಕುಟುಂಬಗಳು-ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ-ಹೊಂದಿದ್ದ ನಿವ್ವಳ ಆಸ್ತಿಗಳು ಇಳಿಕೆಯಾಗಿವೆ; ಮತ್ತು ಪೌಷ್ಠಿಕಾಂಶದ ಸೇವನೆಯು ಮುಖ್ಯವಲ್ಲ ಎಂಬ (ತಪ್ಪಾದ) ನಂಬಿಕೆಯಲ್ಲಿ ಕುಟುಂಬಗಳು ಪೌಷ್ಟಿಕಾಂಶದ ಸೇವನೆಯನ್ನು ಇಳಿಕೆ ಮಾಡಿಕೊಂಡಿವೆ.

ಇದನ್ನೂ ನೋಡಿ: ಸುಸ್ಥಿರ ಸಮಾಜಕ್ಕಾಗಿ ಸ್ವಚ್ಛ‌ ಪರಿಸರ ನಿರ್ಮಿಸೋಣ- ನಾಗೇಶ್ ಹೆಗಡೆ Janashakthi Media

2019ರ ಅಖಿಲ ಭಾರತ ಸಾಲ ಮತ್ತು ಹೂಡಿಕೆ ಸಮೀಕ್ಷೆಯ (ಇದು ಜೂನ್ 2018ರ ಅಂತ್ಯದ ವರೆಗಿನ ಮಾಹಿತಿಯನ್ನು ನೀಡುತ್ತದೆ) ಅಂಕಿಅಂಶಗಳನ್ನು 2013ರ ಸಮೀಕ್ಷೆಯೊಂದಿಗೆ (ಇದು ಜೂನ್ 2012ರ ಅಂತ್ಯದ ವರೆಗಿನ ಮಾಹಿತಿಯನ್ನು ನೀಡುತ್ತದೆ) ಹೋಲಿಸಿದಾಗ (ಈ ಹೋಲಿಕೆಗಳು ಸಗಟು ಬೆಲೆ ಸೂಚ್ಯಂಕದೊಂದಿಗೆ ಸಂಬಂಧಿಸಿ ಸರಿಹೊಂದಿಸಿದ ನಿಜ ಅಂಕಿಅಂಶಗಳು), ಕಂಡುಬಂದ ಅಂಶಗಳು ಹೀಗಿವೆ: ಮೊದಲನೆಯದು, 2019ರಲ್ಲಿ ಶೇ. 11ರಷ್ಟು ಅಧಿಕ ಗ್ರಾಮೀಣ ಕುಟುಂಬಗಳು ಸಾಲದ ಸುಳಿಗೆ ಸಿಲುಕೊಕೊಂಡಿದ್ದವು. ಎರಡನೆಯದು, ಋಣಭಾರದಲ್ಲಿರುವ ಗ್ರಾಮೀಣ ಕುಟುಂಬದ ಪ್ರತಿ ಸಾಲದ ಸರಾಸರಿ ಮೊತ್ತವು 2019ರ ವೇಳೆಗೆ ಶೇ. 43ರಷ್ಟು ಹೆಚ್ಚಾಗಿತ್ತು. ಮೂರನೆಯದು, 2013 ಮತ್ತು 2019ರ ನಡುವೆ ಪ್ರತಿ ಸಾಗುವಳಿದಾರ ಕುಟುಂಬದ ಆಸ್ತಿಗಳ ಸರಾಸರಿ ಮೌಲ್ಯವು ಶೇ. 33ರಷ್ಟು ಕಡಿಮೆಯಾಗಿತ್ತು, ಮತ್ತು, ಕೃಷಿಕರಲ್ಲದ ಕುಟುಂಬಗಳ ಆಸ್ತಿಗಳ ಸರಾಸರಿ ಮೌಲ್ಯವು ಶೇ. 1ರಷ್ಟು ಕಡಿಮೆಯಾಗಿತ್ತು.

ಈ ಚಿತ್ರವು ನಗರ ಭಾರತದೊಂದಿಗೆ ಒಂದು ಸ್ಥೂಲ ಸಾಮ್ಯತೆ ಹೊಂದಿದೆ. ಪ್ರತಿ ಕುಟುಂಬದ ಆಸ್ತಿಯ ಸರಾಸರಿ ಮೌಲ್ಯದಲ್ಲಿ ಇಳಿಕೆ ಕಂಡುಬಂದಿದೆ (ಸ್ವಯಂ ಉದ್ಯೋಗಿ ಕುಟುಂಬಗಳಿಗೆ ಶೇ. 29 ಮತ್ತು ಇತರರಿಗೆ ಶೇ. 3). ಋಣಭಾರದ ಕುಟುಂಬಗಳ ಶೇಕಡಾವಾರು ಪ್ರಮಾಣವು ಹೆಚ್ಚು ಕಡಿಮೆ ಮೊದಲಿನಂತೆಯೇ ಇದೆ. ಋಣಭಾರದಲ್ಲಿರುವ ಪ್ರತಿ ಕುಟುಂಬದ ಸಾಲದ ಸರಾಸರಿ ಮೊತ್ತವು 2013 ಮತ್ತು 2019ರ ನಡುವೆ ಶೇ. 24ರಷ್ಟು ವೃದ್ಧಿಸಿದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಭಾರತದ ಬಹುತೇಕ ಕುಟುಂಬಗಳ ನಿವ್ವಳ ಆಸ್ತಿಯ ಮೌಲ್ಯವು ಗಣನೀಯವಾಗಿ ಕುಸಿದಿದೆ ಎಂಬುದು ಒಂದು ನಿರ್ವಿವಾದ ಸತ್ಯ.

ಕ್ರೂರ ತಮಾಷೆ

ಪೌಷ್ಟಿಕಾಂಶದ ಸೇವನೆಯಲ್ಲೂ ಕೂಡ ಹೊಂದಾಣಿಕೆ ಸಂಭವಿಸುತ್ತಿದೆ. 1993-94 ಮತ್ತು 2011-12ರ ನಡುವಿನ ಅವಧಿಯಲ್ಲಿ ತಲಾ ದೈನಿಕ 2200 ಕ್ಯಾಲೋರಿ ಪ್ರಮಾಣದ ಆಹಾರವನ್ನು ಸೇವಿಸಲಾಗದ ಗ್ರಾಮೀಣ ಭಾರತದ ಜನಸಂಖ್ಯೆಯ ಪ್ರಮಾಣವು ಶೇ. 58ರಿಂದ ಶೇ. 68ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ನಗರ ಭಾರತದಲ್ಲಿ 2100 ಕ್ಯಾಲೋರಿ (ಹಿಂದಿನ ಯೋಜನಾ ಆಯೋಗವು ಬಳಸುತ್ತಿದ್ದ ಮಾನದಂಡದ ಅನುಗುಣವಾಗಿ) ಪ್ರಮಾಣದ ಆಹಾರವನ್ನು ಸೇವಿಸಲಾಗದ ಜನಸಂಖ್ಯೆಯ ಪ್ರಮಾಣವು ಶೇ. 57ರಿಂದ ಶೇ. 65ಕ್ಕೆ ಏರಿಕೆಯಾಗಿದೆ. ತರುವಾಯ ನಡೆದ 2017-18ರ ರಾಷ್ಟ್ರೀಯ ಮಾದರಿ ಸಮೀಕ್ಷೆಯ ಫಲಿತಾಂಶಗಳು ತುಂಬಾ ನಿರಾಶಾದಾಯಕವಾಗಿದ್ದವು. ಎಲ್ಲ ಸರಕುಗಳು ಮತ್ತು ಸೇವೆಗಳ ಮೇಲಿನ ನಿಜ ಖರ್ಚುಗಳು ಕುಸಿದಿದ್ದವು ಎಂಬುದನ್ನು ಈ ಸಮೀಕ್ಷೆಯು ಬಯಲು ಮಾಡಿತು. ಮೋದಿ ಸರ್ಕಾರವು ಈ ಸಮೀಕ್ಷೆಯ ವರದಿಯನ್ನು ಸಾರ್ವಜನಿಕರ ದೃಷ್ಟಿಗೆ ಬೀಳದಂತೆ ತ್ವರಿತವಾಗಿ ಹಿಂತೆಗೆದುಕೊಂಡಿತು.

ವರದಿಯನ್ನು ಹಿಂತೆಗೆದುಕೊಳ್ಳುವ ಮೊದಲು ಲಭ್ಯವಿದ್ದ ಅಂಕಿಅಂಶಗಳಿಂದ (ಪ್ರತಿ ಯೂನಿಟ್ ಪೋಷಕಾಂಶ ಆಹಾರದ ನೈಜ ವೆಚ್ಚವು ಬದಲಾಗದೆ ಉಳಿದಿದೆ ಎಂದು ಊಹಿಸಿಕೊಳ್ಳಲಾಗಿದೆ) ತಿಳಿದುಬರುವುದು ಏನೆಂದರೆ, ನಗರ ಭಾರತದಲ್ಲಿ 2100 ಕ್ಯಾಲೋರಿ ಪ್ರಮಾಣದ ಆಹಾರವನ್ನು ಸೇವಿಸಲಾಗದ ಜನಸಂಖ್ಯೆಯ ಶೇಕಡಾವಾರು ಪ್ರಮಾಣವು ಹೆಚ್ಚು ಕಡಿಮೆ ಅದೇ ಮಟ್ಟದಲ್ಲಿತ್ತು ಮತ್ತು ಗ್ರಾಮೀಣದ ಶೇಕಡಾವಾರು ಪ್ರಮಾಣವು ಶೇ. 80ಕ್ಕಿಂತಲೂ ಮೇಲಿನ ಮಟ್ಟದಲ್ಲಿತ್ತು. (ಈ ಅಂಕಿಅಂಶಗಳನ್ನು ಬಡತನ ಕುರಿತು ಉತ್ಸಾ ಪಟ್ನಾಯಕ್ ಅವರ ಮುಂಬರುವ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ).

ಈ ಕಠೋರ ವಾಸ್ತವಕ್ಕೆ ವ್ಯತಿರಿಕ್ತವಾಗಿ, ಭಾರತದಲ್ಲಿ ಬಡತನ ಕುಸಿದಿದೆ ಎಂದು ವಿಶ್ವ ಬ್ಯಾಂಕ್ ಹೇಳುತ್ತದೆ. 2011-12ರಲ್ಲಿ ಸುಮಾರು ಶೇ. 12ರಷ್ಟಿದ್ದ (ಇದೊಂದು ಕೀಳಂದಾಜು ಎಂಬುದರಲ್ಲಿ ಅನುಮಾನವಿಲ್ಲ) ಬಡತನದ ಪ್ರಮಾಣವು 2022-23ರ ವೇಳೆಗೆ ಕೇವಲ ಶೇ. 2ರ ಮಟ್ಟಕ್ಕೆಮ ಇಳಿದಿದೆ ಎಂದು ವಿಶ್ವ ಬ್ಯಾಂಕ್ ಹೇಳುತ್ತದೆ. ಈಗಾಗಲೇ ಹೇಳಿರುವಂತೆ, 2011ರ ಕೊಳ್ಳುವ ಶಕ್ತಿ ಯ ಅನುರೂಪ ವಿನಿಮಯ ದರದಲ್ಲಿ ದೈನಿಕ ತಲಾ $1.90ಕ್ಕಿಂತಲೂ ಕಡಿಮೆ ವೆಚ್ಚವನ್ನು “ತೀವ್ರ ಬಡತನ” ಎಂದು ವಿಶ್ವಬ್ಯಾಂಕ್ ವ್ಯಾಖ್ಯಾನಿಸಿದೆ. ಈ $1.90 ಮಾನದಂಡದ ಪ್ರಕಾರ, ಎಲ್ಲ ಖರ್ಚುಗಳೂ ಸೇರಿದಂತೆ ರೂಪಾಯಿ ಲೆಕ್ಕದಲ್ಲಿ ದಿನಕ್ಕೆ ಸುಮಾರು 53 ರೂಪಾಯಿಗಳ ಖರ್ಚಿನ ಮಟ್ಟವು ಬಡತನ ರೇಖೆಯ ಮಟ್ಟವನ್ನು ಸೂಚಿಸುತ್ತದೆ.

ಇದು ಸ್ವತಂತ್ರವಾಗಿ ಲೆಕ್ಕಾಚಾರ ಮಾಡಿದ ಒಂದು ಪ್ರತ್ಯೇಕ ಮಾನದಂಡವಲ್ಲ. ಸ್ವತಃ ಹಲವಾರು ಬಡ ದೇಶಗಳ ಸರ್ಕಾರಗಳು ಬಳಸುವ ಬಡತನ ರೇಖೆಯ
ಅಂದಾಜಿನ (ಅನಿವಾರ್ಯವಾಗಿ ವಿಶ್ವ ಬ್ಯಾಂಕ್ ಮಾರ್ಗದರ್ಶನದಲ್ಲಿ) ಸರಾಸರಿಯ ಮೂಲಕ ವಿಶ್ವ ಬ್ಯಾಂಕ್‌ನ ಈ ಮಾನದಂಡವನ್ನು ರೂಪಿಸಲಾಗಿದೆ. ಜೀವನ ನಿರ್ವಹಣೆಯ ವೆಚ್ಚದ ಹೆಚ್ಚಳವನ್ನು ಕೀಳಂದಾಜು ಮಾಡುವಂತಹ ಬೆಲೆ-ಸೂಚ್ಯಂಕವನ್ನು ಆಧರಿಸಿದ ಎಲ್ಲ ದೇಶಗಳ ಅಧಿಕೃತ ಬಡತನದ ಅಂದಾಜುಗಳು ಯಾವ ದೋಷಗಳಿಂದ ಬಳಲುತ್ತಿವೆಯೋ ಅದೇ ದೋಷಗಳಿಂದ ವಿಶ್ವ ಬ್ಯಾಂಕ್‌ನ ಮಾನದಂಡವೂ ಬಳಲುತ್ತಿದೆ. ಹಾಗಾಗಿ, ಇದರ ಪರಿಣಾಮವಾಗಿ, ಬಡತನವನ್ನು ಹೇಗೆ ಕಡಿಮೆ ಮಾಡಲಾಗಿದೆ ಅಥವಾ ತೊಡೆದುಹಾಕಲಾಗಿದೆ ಎಂಬುದರ ಕುರಿತು ಹಲವಾರು ಮೂರನೆಯ ಜಗತ್ತಿನ ಸರ್ಕಾರಗಳ ಅಪ್ರಾಮಾಣಿಕ ಪ್ರಚಾರಗಳಿಗೆ ವಿಶ್ವ ಬ್ಯಾಂಕ್ ತನ್ನ ಮೌನ ಮುದ್ರೆಯನ್ನು ಒತ್ತುತ್ತದೆ.

ಲಕ್ಷಾಂತರ ಮಂದಿಯನ್ನು ಬಡತನದಿಂದ ಮೇಲೆತ್ತಲಾಗಿದೆ ಎಂಬ ಎಲ್ಲ ಮಾತುಗಳೂ ಒಂದು ಕ್ರೂರ ತಮಾಷೆಯೆಂದೇ ಹೇಳಬೇಕಾಗುತ್ತದೆ. ದುರದೃಷ್ಟವಶಾತ್, ಅಂತಹ ಮಾತುಗಳು, ವಿಶ್ವಸಂಸ್ಥೆಯು ನಿಗದಿಪಡಿಸಿದ’ ಸುಸ್ಥಿರ ಅಭಿವೃದ್ಧಿ ಗುರಿ’ಗಳನ್ನು (ಎಸ್‌ಡಿಜಿ) ಹೇಗೆ ತಲುಪಲಾಗುತ್ತಿದೆ ಎಂಬುದನ್ನು ಪ್ರದರ್ಶಿಸಲು ದೇಶ-ದೇಶಗಳು ಪರಸ್ಪರ ಪೈಪೋಟಿಯಲ್ಲಿ ತೊಡಗಿರುವುದರಿಂದ, ಮುಂಬರುವ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ಕೇಳ ಬರಬಹುದು.

ಇದನ್ನೂ ಓದಿ: ಮರಕುಂಬಿ ಪ್ರಕರಣ : ಪವರ್ ಸಿನಿಮಾ ನೆಪವಷ್ಟೆ, ಹಕ್ಕಿಗಾಗಿ ಹೋರಾಡಿದ್ದಕ್ಕೆ ಬೆಂಕಿ ಹಚ್ಚಿದರು

Donate Janashakthi Media

Leave a Reply

Your email address will not be published. Required fields are marked *