‘ವಿಶ್ವಜಾನಪದ ದಿನಾಚರಣೆ’ ಬ್ರಿಟೀಷ್ ವಸಾಹತುಶಾಹಿಯ‌ ಅನುಕರಣೆಯೇ?

ವಿಶೇಷವಾಗಿ ದಕ್ಷಿಣ ಭಾರತದಲ್ಲಿ ʻವಿಶ್ವ ಜಾನಪದ’ ದಿನವನ್ನು 2014 ರಿಂದಲೂ ಆಗಸ್ಟ್ 22 ರಂದು ಆಚರಿಸುತ್ತಿದ್ದಾರೆ. ಕರ್ನಾಟಕದಲ್ಲಿಯೂ ಈ ಪರಂಪರೆ ಮುಂದುವರಿದಿದೆ. ಪರಿಶೀಲಿಸಿದರೆ ಉತ್ತರ ಭಾರತದಲ್ಲಿಯೂ ಈ ಆಚರಣೆ ಇಲ್ಲ. ಜಾಗತಿಕವಾಗಿ ಒಂದೆರಡು ದೇಶಗಳಲ್ಲಿ ಮಾತ್ರ `ವಿಶ್ವ ಜಾನಪದ’ ದಿನ ಆಚರಿಸುತ್ತಾರೆ. ಉಳಿದಂತೆ ಜಾನಪದವನ್ನು ಆಧರಿಸಿದ ಕೆಲವು ಎನ್.ಜಿ.ಓಗಳು ಆಚರಿಸುತ್ತಿವೆ. ಆದರೆ ಹೆಸರು ಮಾತ್ರ `ವಿಶ್ವಜಾನಪದ’ ದಿನಾಚರಣೆ. ಇಡೀ ವಿಶ್ವದಲ್ಲಿ ಯಾಕೆ ʻವಿಶ್ವ ಜಾನಪದ ದಿನ’ ವನ್ನು ಆಚರಿಸುವುದಿಲ್ಲ? ವಿಶ್ವಸಂಸ್ಥೆ ಯಾಕೆ ಈ ತನಕ ಅಧಿಕೃತವಾಗಿ ‘ವಿಶ್ವಜಾನಪದ ದಿನ’ ವನ್ನು ಘೋಷಿಸಿಲ್ಲ? ಜಾನಪದವನ್ನು ಒಳಗೊಂಡಂತೆ ಸಾಂಸ್ಕೃತಿಕ ಸಂಗತಿಗಳ ಮೇಲೆಯೆ ಕೆಲಸ ಮಾಡುವ ಯುನೆಸ್ಕೋ ಏಕೆ ತನ್ನ ಅಧಿಕೃತ ವಿಶ್ವದಿನಗಳ ಪಟ್ಟಿಯಲ್ಲಿ `ವಿಶ್ವಜಾನಪದ’ ದಿನವನ್ನು ಸೇರಿಸಿಲ್ಲ? ಮುಂತಾದ ಪ್ರಶ್ನೆಗಳು ಕಾಡುತ್ತವೆ. ಅಸಲಿಗೆ ವಿಶ್ವಜಾನಪದ ದಿನಾಚರಣೆ ಯಾಕೆ ಆಚರಿಸುತ್ತಾರೆ, ಇದರ ಹಿನ್ನೆಲೆ ಏನು ಎನ್ನುವುದನ್ನು ಪರಿಶೀಲಿಸಿದರೆ ಇದರ ಕರಾಮತ್ತು ತಿಳಿಯುತ್ತದೆ. ವಿಶ್ವಜಾನಪದ

-ಅರುಣ್ ಜೋಳದಕೂಡ್ಲಿಗಿ

ವಿಲಿಯಂ ಜಾನ್ ಥಾಮ್ಸ್ ಎಂಬ ಬ್ರಿಟಿಷ್ ಪ್ರಾಚೀನ ಅನ್ವೇಷಕ ಅಂಬೋಸ್ ಮೆರ್ತಾನ್ ಎನ್ನುವ ಗುಪ್ತನಾಮದಲ್ಲಿ 1846ರ ಆಗಸ್ಟ್ 12ರಂದು `ದಿ ಅಥೇನಿಯಂ’ ಎನ್ನುವ ಪತ್ರಿಕೆಗೆ ಒಂದು ಪತ್ರ ಬರೆಯುತ್ತಾನೆ. ಈ ಪತ್ರ ಅದೇ ತಿಂಗಳ 22ರಂದು ಪ್ರಕಟವಾಗುತ್ತದೆ. ಪತ್ರದಲ್ಲಿ `ದಾಸ್ ವೋಕ್’ ಮತ್ತು ‘ಜನಪ್ರಿಯ ಪಳೆಯುಳಿಕೆ’ ಎಂದು ಕರೆಯುತ್ತಿದ್ದ ಜನರ ಪರಂಪರೆಯ ಸಂಗತಿಗಳ ಅಧ್ಯಯನಕ್ಕೆ `ಫೋಕ್‌ಲೋರ್’ ಎಂದು ಕರೆಯಬಹುದೆಂದು ಸೂಚಿಸಿದ. `ಫೋಕ್’ ಎಂದರೆ ಜನ, `ಲೋರ್’ ಎಂದರೆ ಆ ಜನರ ಜ್ಞಾನ ಅಥವಾ ತಿಳಿವಳಿಕೆ ಎಂದು ವಿವರಿಸುತ್ತಾನೆ. ಆಗ ಮೊದಲ ಬಾರಿಗೆ ‘Folklore’ ಎನ್ನುವ ಪದವು ಮುದ್ರಿತ ರೂಪದಲ್ಲಿ ಅಕಡೆಮಿಕ್ ವಲಯದ ಬಳಕೆಗೆ ಬರುತ್ತದೆ. ಈ ಚಾರಿತ್ರಿಕ ಸಂದರ್ಭದ ನೆನಪಿಗಾಗಿ ಆ ದಿನವನ್ನು ವಿಶ್ವ ಜಾನಪದ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ಇಂದಿಗೆ ‘ಫೋಕ್‌ಲೋರ್’ ಪದವು ಬಳಕೆಗೆ ಬಂದು 179 ವರ್ಷಗಳಾದವು.

ದಕ್ಷಿಣ ಅಮೇರಿಕಾದ ಬ್ರೆಜಿಲ್ ಸರ್ಕಾರವು ಆಗಸ್ಟ್ 22 ಅನ್ನು `ಫೋಕ್‌ಲೋರ್ ಡೇ’ ಎಂದು 1965ರ ಆಗಸ್ಟ್ 17ರಂದು ಅಧಿಕೃತವಾಗಿ ಘೋಷಿಸಿತು. ಅಲ್ಲಿ ಪ್ರತಿವರ್ಷ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಬ್ರೆಜಿಲ್ ತನ್ನ ಸಂವಿಧಾನದಲ್ಲಿಯೂ ಜಾನಪದದ ಬಗ್ಗೆ ವಿಶೇಷ ಆಧ್ಯತೆ ನೀಡಲಾಗಿದೆ. ಜಾನಪದ ಅಧ್ಯಯನಕ್ಕೆ ಹೊಸ ಆಯಾಮ ನೀಡಿದ ಉತ್ತರ ಅಮೆರಿಕಾ, ಫಿನ್ಲೆಂಡ್,ರಷ್ಯ ಮೊದಲಾದ ಬಹುಸಂಖ್ಯಾತ ದೇಶಗಳು ಈ ಆಚರಣೆ ಮಾಡುವುದಿಲ್ಲ. ಕಾರಣ ಈ ಪದದ ಜನಕ ಬ್ರಿಟನ್ನಿನ ವಿದ್ವಾಂಸ ಆಗಿರುವ ಕಾರಣವಿರಬಹುದು. ಜಾಗತಿಕವಾಗಿ ಯೂರೋಪ್ ಕೇಂದ್ರಿತ ಜಾನಪದ ಆಲೋಚನ ವಿಧಾನಗಳನ್ನು ನಿರಾಕರಿಸುವ ಅಮೇರಿಕಾ ಕೇಂದ್ರಿತ ಆಲೋಚನ ಕ್ರಮವೂ ಇದರ ಹಿಂದಿದೆ.

ಇದನ್ನೂ ಓದಿ: ಧರ್ಮಸ್ಥಳ | ಕೊಲೆ, ಅತ್ಯಾಚಾರ, ಅಸಹಜ ಸಾವುಗಳ ಸಮಗ್ರ ತನಿಖೆಗೆ ಎಡ ಪಕ್ಷಗಳ ಆಗ್ರಹ

ಭಾರತದ ಸಂದರ್ಭದಲ್ಲಿ ಇದನ್ನು ಬೇರೆಯಾಗಿ ನೋಡಬೇಕಿದೆ. ಭಾರತದಲ್ಲಿ ಕ್ರಿಸ್ತಪೂರ್ವ 2-3 ನೇ ಶತಮಾನದ ಬುದ್ಧನ ಕಾಲದಲ್ಲಿಯೇ ಬುಡಕಟ್ಟುಗಳ ಜನವಸತಿಗಳನ್ನು `ಜನಪದ’ ಗಳೆಂದು ಕರೆಯುತ್ತಿದ್ದರು. ಅವು ಕ್ರಿ.ಪೂ 5-6 ನೇ ಶತಮಾನದ ಹೊತ್ತಿಗೆ ದೊಡ್ಡ ರಾಜ್ಯಗಳ ಸ್ವರೂಪ ಪಡೆದು ಹದಿನಾರು ಮಹಾ ಜನಪದಗಳಾಗಿ (ಗಣರಾಜ್ಯಗಳು) ಬೆಳೆದಿದ್ದವು. ಭಾರತ ಸಂವಿಧಾನದ ಪ್ರಸ್ತಾವನೆಯಲ್ಲಿರುವ ‘ಗಣರಾಜ್ಯ’ ದ ಉಲ್ಲೇಖವು ಮೂಲತಃ ಈ ‘ಜನಪದ’ ಗಳ ಆಡಳಿತದಿಂದಲೇ ಬಂದದ್ದು. ಪ್ರಾಚೀನ ಕನ್ನಡ ಸಾಹಿತ್ಯದ ಕ್ರಿ.ಶ.850 ರಲ್ಲಿ ರಚನೆ ಆಗಿರಬಹುದಾದ ಕವಿರಾಜಮಾರ್ಗದಲ್ಲಿಯೇ `ಕನ್ನಡದೊಳ್ ಭಾವಿಸಿದ ಜನಪದಂ’ ಎಂಬ ಪದ ಬಳಕೆಯಲ್ಲಿದ್ದಿತು.

ಹೀಗೆ ಭಾರತ ಮತ್ತು ಕರ್ನಾಟಕದಲ್ಲಿ `ಜನಪದ’ ಕ್ಕೆ ಇಷ್ಟು ಪ್ರಾಚೀನ ಇತಿಹಾಸ ಇದ್ದರೂ ಕೇವಲ 179 ವರ್ಷಗಳ ಹಿಂದೆ ಬ್ರಿಟೀಷ್ ಪ್ರಾಚೀನ ಅನ್ವೇಷಕ ‘ಫೋಕ್ ಲೋರ್’ ಪದ ಬಳಸಿದ ಎನ್ನುವ ಕಾರಣಕ್ಕೆ ಕುರುಡಾಗಿ ಬ್ರಿಟೀಷ್ ವಸಾಹತುಶಾಹಿಯ ಪಳೆಯುಳಿಕೆಯಂತೆ `ವಿಶ್ವಜಾನಪದ ದಿನ’ ವನ್ನು ಆಚರಿಸುವುದು ಸರಿಯೇ? ಹಾಗೆ ನಿಜಕ್ಕೂ ‘ಜನಪದ ದಿನ’ ವನ್ನು ಆಚರಿಸುವುದಾದರೆ ಕವಿರಾಜ ಮಾರ್ಗದಲ್ಲಿ ಬಳಕೆಯಾದ ‘ಜನಪದ’ ಪದದ ಬಳಕೆಯ ಸಂದರ್ಭವನ್ನೆ ಒಂದು ದಿನ ಗೊತ್ತುಮಾಡಿಕೊಂಡು ನಾವು ಆಚರಿಸಬಹುದು. ನಮ್ಮನ್ನು ಆಳಿದ ವಸಾಹತುಶಾಹಿಯ ಗುಲಾಮಿತನದ ಸಂಕೇತವಾಗಿ ಬ್ರಿಟೀಷ್ ವಿದ್ವಾಂಸರನ್ನು ನೆನೆಯುವ ದಿನವಾಗಿ ‘ವಿಶ್ವ ಜಾನಪದ ದಿನ’ ವನ್ನು ಆಚರಣೆಯ ಅಗತ್ಯವಿಲ್ಲ.

ಹಾಗಾದರೆ ಜಾನಪದಕ್ಕೊಂದು ದಿನ ಬೇಕೇ ಎನ್ನುವ ಪ್ರಶ್ನೆ ಮೂಡುತ್ತದೆ. ಜಾನಪದ ಎಂದರೆ ಎಲ್ಲೋ ಹೊರಗಿರುವ ಜನಪದ ಕತೆ, ಗೀತೆ, ಕಲಾ ಪ್ರಕಾರಗಳು ಮಾತ್ರವಲ್ಲ, ಕ್ಷಣ ಕ್ಷಣವೂ ಲೋಕವನ್ನು ನೋಡುವ ನೋಟಕ್ರಮವನ್ನು ನಿರ್ದೇಶಿಸುತ್ತಲೇ ಬಹುಸಂಖ್ಯಾತ ಜನರಲ್ಲಿ ಅಡಗಿ ಕೂತ ಪರಂಪರೆಯ ಬೇರುಗಳ ಮೊತ್ತ ಎಂದು ಕರೆಯಬಹುದು. ಹಾಗಾಗಿ ಸಾಂಕೇತಿಕವಾಗಿ ಜಾನಪದಕ್ಕೆ ಒಂದು ದಿನ ಇರಬಹುದು. ಆದರೆ ಜಾನಪದದ ಬೇರುಗಳು ಕ್ಷಣಕ್ಷಣವೂ ಜನರಲ್ಲಿ ಒಂದು ಸಂವೇದನೆಯಾಗಿ ಕೆಲಸ ಮಾಡುತ್ತಿರುತ್ತವೆ. ಹಾಗಿದ್ದೂ ವಿಶ್ವ ಜಾನಪದ ಎಂದು ನೋಡುವಾಗ, ಅಧಿಕಾರರಹಿತ ಸಾಮಾನ್ಯ ತಳವರ್ಗದ ಬಹುಸಂಖ್ಯಾತ ಜನರ ಅಭಿವ್ಯಕ್ತಿ ಮಾಧ್ಯಮ ಎಂದು ಗುರುತಿಸಬಹುದು.

ಕಣ್ಣಿಗೆ ಕಾಣುವ, ಸ್ಪರ್ಶಕ್ಕೆ ಸಿಗುವ ಕೇಳಿಸಿಕೊಳ್ಳಲು ಸಾಧ್ಯವಾಗುವ, ದಿನದ ಬದುಕಿಗೆ ನೆರವಾಗುವ ವಿದ್ಯಮಾನಗಳನ್ನು ಆಧಿಮ ಜನರು ಕೃತಜ್ಞತೆಯಿಂದ ಆರಾಧಿಸತೊಡಗಿದರು. ಅಂತೆಯೇ ಯಾವುದು ತಿಳಿವಿಗೆ ನಿಲುಕುವುದಿಲ್ಲವೋ ಯಾವುದು ನಿಗೂಢವೋ ಅಂಥವುಗಳ ಬಗೆಗೆ ಭಯಮಿಶ್ರಿತ ಅತಿಮಾನುಷ ಕಥನಗಳನ್ನು ಕಟ್ಟಿಕೊಂಡರು. ನಿಸರ್ಗಾರಾಧನೆ ರೂಪುಗೊಂಡದ್ದು ಹೀಗೆ. ಈ ಎಲ್ಲದರ ಒಳಗೂ ಇರುವ ಸಾಮಾನ್ಯ ಎಳೆ ಎಂದರೆ ನಿಸರ್ಗಸತ್ಯವನ್ನು ಕತೆ, ಗೀತೆ, ಗಾದೆ, ಒಗಟು, ಕಲೆ ಮುಂತಾಗಿ ಕಟ್ಟಿಕೊಂಡದ್ದು.

ಇದೇ ಜನರ ಮಾಧ್ಯಮವಾದ ಜನಪದದಲ್ಲಿ ಆಳುವ ವರ್ಗಗಳು, ಪ್ರಬಲ ಜಾತಿಗಳು, ಪ್ರಭಾವಿ ಶಕ್ತಿಗಳು ತಮಗೆ ಬೇಕಾದ ಒಪ್ಪಿಗೆಯನ್ನು ಪಡೆಯಲು ಸುಳ್ಳುಕಥನ, ಪುರಾಣ, ವಿಧಿನಿಷೇಧಗಳನ್ನು ಬೆರೆಸಲಾಯಿತು. ಹಾಗಾಗಿ ನಮಗೆ ಲಭ್ಯವಿರುವ ಜಾನಪದ ಆಕರಗಳು ಜನರ ನಿಸರ್ಗಸತ್ಯ ಮತ್ತು ಆಳುವ ವರ್ಗಗಳು ಈ ಜನಪದ ಮಾಧ್ಯಮದಲ್ಲಿ ತುರುಕಿದ ಸುಳ್ಳುಗಳ ಮಿಶ್ರಣವಾಗಿದ್ದು ಒಂದರೊಳಗೊಂದು ಬೆರೆತಿವೆ. ಹಾಗಾಗಿಯೇ ಜನಪದವೆಂದರೆ, ಬಹುಪಾಲು ಯಥಾಸ್ಥಿತಿಯನ್ನು ಮುಂದುವರಿಸುವ ಪ್ರಭಾವಿ ವಾಹಕವಾಗಿದೆ. ಇಂತಹ ಸೂಕ್ಷ್ಮವಿಚಾರಗಳನ್ನು ಜನರಿಗೆ ಮನವರಿಕೆ ಮಾಡುವ ಕಾರಣಕ್ಕೆ ಜನಪದ ದಿನವನ್ನು ಆಚರಿಸಬಹುದು. ಆದರೆ ಅದಕ್ಕೆ ಕನ್ನಡ ನೆಲದ್ದೇ ಒಂದು ದಿನವನ್ನು ಆಯ್ಕೆ ಮಾಡಿಕೊಳ್ಳಬೇಕು.

ಇದನ್ನೂ ನೋಡಿ: ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ 1% ಒಳಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ | 2ನೇ ದಿನಕ್ಕೆ

Donate Janashakthi Media

Leave a Reply

Your email address will not be published. Required fields are marked *