ಅರಣ್ಯ ಭೂಮಿ ಸಾಗುವಳಿದಾರರ ಭೂಮಿ ಹಕ್ಕಿಗೆ ಮಾರಕವಾಗಿರುವ ಅರಣ್ಯ ಸಚಿವರ ಟಿಪ್ಪಣಿ ರದ್ದುಪಡಿಸಲು ಕೆಪಿಆರ್‌ಎಸ್‌ ಆಗ್ರಹ

ಬೆಂಗಳೂರು: ಬಡ, ದಲಿತ, ಆದಿವಾಸಿ, ಹಿಂದುಳಿದ ವರ್ಗಗಳ ಬಗರ್ ಹುಕುಂ ಸಾಗುವಳಿದಾರರ ಮತ್ತು ಅರಣ್ಯ ಭೂಮಿ ಸಾಗುವಳಿದಾರರ ಭೂಮಿ ಹಕ್ಕಿಗೆ ಮಾರಕವಾಗಿರುವ ಅರಣ್ಯ ಸಚಿವರ ಟಿಪ್ಪಣಿ ರದ್ದುಪಡಿಸಲು ಆಗ್ರಹಿಸಿ, ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಿಗೆ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ರಾಜ್ಯ ಸಮಿತಿಯ ಬಹಿರಂಗ ಪತ್ರ ಬರೆದಿದೆ.ಸಾಗುವಳಿದಾರರ

ಇದನ್ನೂ ಓದಿ:ಹೋರಾಟದ ಮೂಲಕ ಅರಣ್ಯ ಇಲಾಖೆಯಿಂದ ಬಗರ್‌ಹುಕ್ಕುಂ ಭೂಮಿ ಮರಳಿಪಡೆದ ರೈತರು; ಕೆಪಿಆರ್‌ಎಸ್‌ ಅಭಿನಂದನೆ

ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ತಮ್ಮ ಸಂಪುಟದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವರಾದ ಮಾನ್ಯ ಶ್ರೀ ಈಶ್ವರ ಬಿ. ಖಂಡ್ರೆ ರವರು ಟಿಪ್ಪಣಿ ಸಂಖ್ಯೆ ಅಜೀಪಸ/1996/2023 ದಿನಾಂಕ:22-09-23 ರಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಅರಣ್ಯ ಪ್ರದೇಶದ ಎಲ್ಲಾ ರೀತಿಯ ಒತ್ತುವರಿ ಪ್ರಕರಣಗಳನ್ನು ತೆರವುಗೊಳಿಸಲು ಕಂದಾಯ, ಗೃಹ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ & ಪಂಚಾಯತ್ ಹಾಗೂ ಇತರ ಸಂಬಂಧಿತ ಇಲಾಖೆಯ ಅಧಿಕಾರಿಗಳು/ನುರಿತ ವಿಷಯ ತಜ್ಞರನ್ನು ಒಳಗೊಂಡ ಉನ್ನತ ಮಟ್ಟದ ಅಧಿಕಾರಿಗಳ ರಾಜ್ಯ ಮಟ್ಟದ ಕಾರ್ಯಪಡೆಯನ್ನು ಹಾಗೂ ಬೆಂಗಳೂರು ನಗರ ಜಿಲ್ಲೆಗೆ ಒಂದು ಪ್ರತ್ಯೇಕ ಕಾರ್ಯಪಡೆಯನ್ನು ರಚಿಸಬೇಕು ಎಂಬ ಟಿಪ್ಪಣಿಯನ್ನು ಕಳುಹಿಸಿರುವುದು ಅತ್ಯಂತ ಅಘಾತಕಾರಿಯಾದುದ್ದು ಹಾಗೂ ಹತ್ತಾರು ದಶಕಗಳಿಂದ ಅರಣ್ಯ ಹಾಗೂ ಕಂದಾಯ ಭೂಮಿಗಳಲ್ಲಿ ಬಗರ್ ಹುಕುಂ ಸಾಗುವಳಿಯಲ್ಲಿ ತೊಡಗಿರುವ ಲಕ್ಷಾಂತರ ದಲಿತ, ಆದಿವಾಸಿ, ಹಿಂದುಳಿದ ಕುಟುಂಬಗಳನ್ನು ನಿರ್ದಯವಾಗಿ ಬೇಸಾಯದಿಂದ ಒಕ್ಕಲೆಬ್ಬಿಸುವ ಹೀನ ಪ್ರಯತ್ನವಾಗಿದೆ ಎಂದು ಕೆಪಿಆರ್‌ಎಸ್‌ ರಾಜ್ಯ ಅಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಹೇಳಿದರು.

ದಲಿತ ಮತ್ತು ಹಿಂದುಳಿದ ವರ್ಗಗಳ ಹಿತ ರಕ್ಷಕ, ಕರ್ನಾಟಕದ ಪ್ರಗತಿಪರ ಭೂ ಸುಧಾರಣೆಯ ಹರಿಕಾರ ಸನ್ಮಾನ್ಯಶ್ರೀ ದೇವರಾಜು ಅರಸು ರವರ ಸಾಮಾಜಿಕ ನ್ಯಾಯ ಸಿದ್ದಾಂತದ ಪ್ರತಿಪಾದಕ ಎಂದು ಕರೆಸಿಕೊಳ್ಳುವ ತಮ್ಮ ನೇತೃತ್ವದ ಸರ್ಕಾರಕ್ಕೆ ತಮ್ಮ ಸಂಪುಟದ ಸಚಿವರು ನೀಡಿರುವ ಟಿಪ್ಪಣಿ ಖಂಡಿತವಾಗಿ ಶೋಭೆ ತರುವುದಿಲ್ಲ.

ಇದನ್ನೂ ಓದಿ:ಮನೆಗಳ ಹಕ್ಕುಪತ್ರಕ್ಕಾಗಿ ಅಹೋರಾತ್ರಿ ಧರಣಿ; ಮುಂದುವರೆದ ಅಧಿಕಾರಿಗಳ ನಿರ್ಲಕ್ಷ್ಯ

ಕರ್ನಾಟಕದಾದ್ಯಂತ ಬಹುತೇಕ ಬಡ ದಲಿತ ಹಿಂದುಳಿದ ವರ್ಗಗಳಿಗೆ ಸೇರಿರುವ ಸುಮಾರು ಹತ್ತು ಲಕ್ಷದಷ್ಟು ಕುಟುಂಬಗಳು ಪಾರಂ ನಂ 50, 52 ಹಾಗೂ 57 ರಲ್ಲಿ ತಮ್ಮ ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿ ಭೂಮಿ ಹಕ್ಕಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈ ರೀತಿ ಬಡವರು ಸ್ವಾಧೀನದಲ್ಲಿರುವ ಸರ್ಕಾರಿ ಕಂದಾಯ ಭೂಮಿಯನ್ನು ಈ ಹಿಂದಿನ ಸರ್ಕಾರಗಳು, ಸಲ್ಲಿಕೆಯಾಗಿರುವ ಸಾಗುವಳಿ ಸಕ್ರಮ ಕೋರಿ ಅರ್ಜಿಗಳನ್ನು ಹಾಗೂ ಬಡವರ ಸ್ವಾಧೀನವನ್ನು ಸರಿಯಾಗಿ ಪರಿಶೀಲಿಸದೇ ಲಕ್ಷಾಂತರ ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿ ಭಾರೀ ಅನ್ಯಾಯವನ್ನು ಎಸಗಿವೆ.

ಈಗ ಇಂತಹ ಭೂಮಿಗಳ ಬಡವರನ್ನು ಒಕ್ಕಲೆಬ್ಬಿಸಲು ತಮ್ಮ ಸಂಪುಟದ ಸಚಿವರು ವಿಶೇಷ ಆಸಕ್ತಿಯನ್ನು ತೋರುತ್ತಿರುವುದು ವಾಸ್ತವದಲ್ಲಿ ಕಂದಾಯ ಭೂಮಿ ಯಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಎಂದು ಪಹಣಿ ದಾಖಲೆಗಳಲ್ಲಿ ನಮೂದಾಗಿರುವ ಅಂಶವನ್ನು ಮುಂದಿಟ್ಟುಕೊಂಡು, ಒಕ್ಕಲೆಬ್ಬಿಸುವ ದುರುದ್ದೇಶವನ್ನು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಯುಪಿಎ ಸರ್ಕಾರ ತಂದಿರುವ ಅರಣ್ಯ ಹಕ್ಕು ಕಾಯ್ದೆ 2005, ಅರಣ್ಯದಲ್ಲಿ ವಾಸವಿರುವ ಪಾರಂಪರಿಕ ಸಮುದಾಯಗಳ ಭೂಮಿ ಹಕ್ಕನ್ನು ಹಾಗೂ ಅರಣ್ಯ ಭೂಮಿ ಸಾಗುವಳಿ ಹಕ್ಕನ್ನು ಎತ್ತಿ ಹಿಡಿದಿದೆ. ಅರಣ್ಯ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ಅರಣ್ಯ ಹಕ್ಕು ಕಾಯ್ದೆ ಅನ್ವಯ ಸಲ್ಲಿಕೆಯಾಗಿರುವ ಲಕ್ಷಾಂತರ ಅರ್ಜಿಗಳು ಇತ್ಯರ್ಥ ವಾಗದೇ ಉಳಿದಿವೆ. ಭೂಮಿ ಹಕ್ಕು ನೀಡಬೇಕೆಂದು ಸಾವಿರಾರು ಸಂಖ್ಯೆಯ ಬಗರ್ ಹುಕುಂ ಸಾಗುವಳಿದಾರರು ನಡೆಸಿದ ಹೋರಾಟಕ್ಕೆ ಮನ್ನಣೆ ನೀಡಿ ಈ ಹಿಂದೆ ಕಂದಾಯ ಮಂತ್ರಿಗಳಾಗಿದ್ದ ಸನ್ಮಾನ್ಯಶ್ರೀ ಕಾಗೋಡು ತಿಮ್ಮಪ್ಪ ರವರು ವಿಶೇಷ ಆಸಕ್ತಿ ಯಿಂದಾಗಿ ಮತ್ತೇ ಸಕ್ರಮ ಕೋರಿ ಅರ್ಜಿ ಸಲ್ಲಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಸೆಕ್ಷನ್ 94 (ಬಿ) ಗೆ ತಿದ್ದುಪಡಿ ತಂದು ಅವಕಾಶ ಕಲ್ಪಿಸಲಾಗಿತ್ತು.

ಇದನ್ನೂ ಓದಿ:ಸರ್ಕಾರಗಳು ಜಾರಿಗೊಳಿಸುತ್ತಿರುವ ಜನ ವಿರೋಧಿ ಕಾಯ್ದೆಗಳ ವಾಪಸ್ಸಿಗೆ ಆಗ್ರಹಿಸಿ ಎಡ-ಪ್ರಜಾಸತ್ತಾತ್ಮಕ ಪಕ್ಷಗಳ ಪ್ರತಿಭಟನೆ

ಅರ್ಜಿ ಸಲ್ಲಿಕೆಯ ಅವಧಿಗಿಂತ ಮೊದಲೇ ಅರ್ಜಿ ಸ್ವೀಕಾರ ನಿಲ್ಲಿಸಿದ್ದರಿಂದ ಮತ್ತೊಮ್ಮೆ 2022-23 ರಲ್ಲಿ ಕೂಡ ಅವಕಾಶ ಕಲ್ಪಿಸಲಾಗಿತ್ತು. ಹೀಗೆ ಸಕ್ರಮ ಕೋರಿ ಅರ್ಜಿ ಸಲ್ಲಿಸಿರುವ ಬಗರ್ ಹುಕುಂ ಸಾಗುವಳಿ ರೈತರಿಗೆ ಜಮೀನು ಮಂಜೂರು ಮಾಡಲು ಸಕ್ರಮಾತಿ ಸಮಿತಿಗಳ ರಚನೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಆಗದಿರುವಾಗ, ಅರಣ್ಯ ಮಂತ್ರಿಗಳ ಈ ಟಿಪ್ಪಣಿ ಯಾವ ರೀತಿಯ ಸಂದೇಶವನ್ನು ನೀಡುತ್ತದೆ ಎಂಬುದನ್ನು ಮಾನ್ಯ ಮುಖ್ಯಮಂತ್ರಿಗಳು ಮನಗಾಣಬೇಕು. ಸ್ವಾತಂತ್ರ‍್ಯ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮುಂತಾದ ಸAವಿಧಾನಾತ್ಮಕ ಮೌಲ್ಯಗಳಿಗೆ ಗಂಭೀರವಾದ ಧಕ್ಕೆ ಬಂದಿರುವ ಇಂದಿನ ರಾಷ್ಟ್ರೀಯ ಸನ್ನಿವೇಶದಲ್ಲಿ ಜಾತ್ಯಾತೀತ (ಧರ್ಮನಿರಪೇಕ್ಷ) ಶಕ್ತಿಗಳ ಬಲವರ್ಧನೆಗೆ ರೈತ, ಕಾರ್ಮಿಕ, ದಲಿತ ಮುಂತಾದ ಜನ ಸಂಘಟನೆಗಳು ಶ್ರಮಿಸುತ್ತಿರುವಾಗ ಇಂತಹ ಹಕ್ಕುಗಳಿಗೆ ರಕ್ಷಣೆ ಒದಗಿಸುವ ಹರಿಕಾರ ಎಂದು ಬಿಂಬಿಸಿಕೊಳ್ಳುವ ತಮ್ಮ ಸರ್ಕಾರಕ್ಕೆ ಇದು ಖಂಡಿತವಾಗಿ ಗೌರವವನ್ನು ಹಾಗೂ ಜನ ಪ್ರೀತಿಯನ್ನು ಉಂಟು ಮಾಡುವುದಿಲ್ಲ ಎಂದರು.

ಐದು ಎಕರೆ ಒಳಗಿನ ಯಾವುದೇ ಬಡ ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಕರ್ನಾಟಕ ಉಚ್ಛ ನ್ಯಾಯಾಲಯವು ಹಲವಾರು ಬಾರಿ ತನ್ನ ತೀರ್ಪುಗಳಲ್ಲಿ, ಬಗರ್ ಹುಕುಂ ಹಾಗೂ ಅರಣ್ಯ ಸಾಗುವಳಿದಾರರಿಗೆ ರಕ್ಷಣೆ ಒದಗಿಸಿದೆ. ಆದರೂ ರಾಜ್ಯಾದ್ಯಂತ ಬಗರ್ ಹುಕುಂ ಸಾಗುವಳಿ ಹಾಗೂ ಅರಣ್ಯ ಭೂಮಿ ಸಾಗುವಳಿ ಸಕ್ರಮ ಕೋರಿ ಸಲ್ಲಿಸಿರುವ ಲಕ್ಷಾಂತರ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇರುವ ರೈತ ಕುಟುಂಬಗಳನ್ನು ಹಾಗೂ ಸಕ್ರಮಗೊಳಿಸಿ ಮಂಜೂರಾತಿ ಆದೇಶ, ಪಹಣಿ ದಾಖಲೆ, ಎಂ.ಆರ್. ದಾಖಲೆಗಳನ್ನು ಪಡೆದಿರುವ ರೈತರನ್ನು ಕೂಡ ಬಲವಂತವಾಗಿ ಒಕ್ಕಲೆಬ್ಬಿಸಿ ಅರಣ್ಯ ಇಲಾಖೆ ರಾತ್ರೋ ರಾತ್ರಿ ಬೃಹತ್ ಜೆಸಿಬಿ ಯಂತ್ರಗಳನ್ನು ತಂದು ಹತ್ತಾರು ವರ್ಷ ಶ್ರಮದ ಬೆಳೆ ನಾಶ ಮಾಡಿ, ಟ್ರಂಚ್ ತೆಗೆಯುವುದನ್ನು ಮುಂದುವರೆಸುತ್ತಿದೆ. ಇತ್ತೀಚೆಗೆ ಕೋಲಾರ ಜಿಲ್ಲೆ, ಶ್ರೀನಿವಾಸಪುರ ತಾಲ್ಲೂಕು ಹಾಗೂ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿ ಸೇರಿದಂತೆ ಹತ್ತಾರು ಕಡೆಗಳಲ್ಲಿ ಇಂತಹ ಪ್ರಯತ್ನಗಳನ್ನು ನಡೆಸಿ ಲಕ್ಷಾಂತರ ರೂ ಮೌಲ್ಯದ ಬೆಳೆಗಳನ್ನು ನಾಶ ಮಾಡಿರುವ ನೂರಾರು ಉದಾಹರಣೆಗಳಿರುವುದನ್ನು ಗಮನಿಸಬಹುದಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಕೃಷಿ ಕಾಯಿದೆಗಳ ವಿರುದ್ಧ ರಾಜಧಾನಿಯಲ್ಲಿ ಮೊಳಗಿದ ರೈತ ಕಹಳೆ

ರಾಜ್ಯದಾದ್ಯಂತ ಅಲ್ಲಲ್ಲಿ, ಬಡವರು ಸ್ವಾಧೀನದಲ್ಲಿರುವ ಭೂಮಿಯನ್ನು ಕೆಲವು ಭೂ ಗಳ್ಳರ ಜೊತೆ ಶಾಮೀಲಾಗಿ, ಭ್ರಷ್ಟ ಕಂದಾಯ ಅಧಿಕಾರಿಗಳು, ಸ್ಥಳೀಯವಾಗಿ ವಾಸ ಇಲ್ಲದ, ರೈತರೂ ಅಲ್ಲದ ಭೂ ಗಳ್ಳರಿಗೆ ಮಂಜೂರು ಮಾಡಿ, ಅಗತ್ಯ ಕಂದಾಯ ದಾಖಲಾತಿಗಳನ್ನು ಸೃಷ್ಟಿ ಮಾಡಿರುವ ಪ್ರಕರಣಗಳು ಕೂಡ ಇವೆ. ಇಂತಹ ಎಲ್ಲಾ ಪ್ರಕರಣಗಳಲ್ಲಿ ಸೂಕ್ತ ತನಿಖೆ ನಡೆಸಿ ಬಡವರ  ಸ್ವಾಧೀನದ ಹಕ್ಕನ್ನು ರಕ್ಷಿಸಬೇಕು. ಬಗರ್ ಹುಕುಂ ಸಾಗುವಳಿದಾರರು ಸ್ವಾಧೀನದಲ್ಲಿರುವ ಸರ್ಕಾರಿ ಕಂದಾಯ ಭೂಮಿಯನ್ನು ಡೀಮ್ಡ್ ಅರಣ್ಯಕ್ಕೆ ವರ್ಗಾಯಿಸಿರುವುದನ್ನು ಕೂಡಲೇ ರದ್ದುಪಡಿಸಬೇಕು.

ಬಗರ್ ಹುಕುಂ ಸಾಗುವಳಿದಾರರ ಹೋರಾಟದ ಒತ್ತಡಕ್ಕೆ ಮಣಿದು ಈ ಹಿಂದೆ ಡೀಮ್ಡ್ ಅರಣ್ಯವನ್ನು, ಕಂದಾಯ ಇಲಾಖೆಗೆ ಮರು ವರ್ಗಾವಣೆ ಮಾಡಿರುವ ಭೂಮಿಯ ಪಹಣಿಗಳಲ್ಲಿ ಅರಣ್ಯ ಪದದ ನಮೂದನ್ನು ತೆಗೆಯಬೇಕು. ಮಹಾನಗರಪಾಲಿಕೆ, ನಗರ ಸಭೆ, ಪುರ ಸಭೆ, ಪಟ್ಟಣ ಪಂಚಾಯತಿ ವ್ಯಾಪ್ತಿಯ ಇಂತಿಷ್ಟು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮ ನಿಷೇದಿಸಿರುವ ಕಾನೂನಿಗೆ ಅಗತ್ಯ ತಿದ್ದುಪಡಿ ತಂದು, ಎಲ್ಲಾ ಬಗರ್ ಹುಕುಂ ಸಾಗುವಳಿದಾರರಿಗೆ ಮಂಜೂರು ಮಾಡಬೇಕು. ಈ ಕೂಡಲೇ ರೈತರ ವಿರುದ್ದವಾಗಿ ನಡೆದುಕೊಳ್ಳುತ್ತಿರುವ, ಅರಣ್ಯ ಮಂತ್ರಿಗಳು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಟಿಪ್ಪಣಿಯನ್ನು ರದ್ದುಗೊಳಿಸಬೇಕು. ಅರಣ್ಯ ಹಕ್ಕು ಕಾಯ್ದೆ 2005 ರ ಅಡಿ ಸ್ವಾಧೀನದಲ್ಲಿರುವ ಇತರೆ ಸಾಮಾಜಿಕ ಸಮುದಾಯಗಳ ಜನರಿಗೂ ಭೂಮಿ ಹಕ್ಕು ಸಿಗುವಂತೆ ಅಗತ್ಯ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದರು.

ಇದನ್ನೂ ಓದಿ:ದಲಿತರಿಗೆ ಭೂಮಿ ಹಕ್ಕಿಗಾಗಿ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ

ಕಾರ್ಪೊರೇಟ್ ಕಂಪನಿಗಳಿಗೆ ಮೀಸಲು ಅಭಯಾರಣ್ಯ ಸೇರಿದಂತೆ ಸಾವಿರಾರು ಎಕರೆ ಅರಣ್ಯ ಭೂಮಿ ಮಂಜೂರು ಮಾಡಲು ಅವಕಾಶ ಕಲ್ಪಿಸಿರುವ ಅರಣ್ಯ ಸಂರಕ್ಷಣಾ ತಿದ್ದುಪಡಿ ಕಾಯ್ದೆ ೨೦೨೩ ಅನ್ನು ರದ್ದುಪಡಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಬೇಕು. ಜೊತೆಗೆ ಕರ್ನಾಟಕ ರಾಜ್ಯದ ಗ್ರಾಮಾಂತರ ಪ್ರದೇಶಗಳನ್ನು
ಭೂ ಕಬಳಿಕೆ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗಿಡುವ ತಿದ್ದುಪಡಿ ಕಾನೂನನ್ನು ಕರ್ನಾಟಕ ವಿಧಾನ ಸಭೆ ಅಂಗೀಕರಿಸಿರುವಾಗಲೂ, ರಾಜ್ಯದಾದ್ಯಂತ ಭೂ ಕಬಳಿಕೆ ಕಾಯ್ದೆ ಅಡಿಯಲ್ಲಿ ಅರಣ್ಯ ಇಲಾಖೆಯವರು ಪ್ರಕರಣಗಳನ್ನು ರೈತರ ಮೇಲೆ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇಂತಹ ಎಲ್ಲಾ ಪ್ರಕರಣಗಳನ್ನು ರದ್ದುಪಡಿಸಿ ಕಾನೂನು ಬಾಹಿರ ಕೇಸು ದಾಖಲಿಸಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ಕರ್ನಾಟಕ ರಾಜ್ಯ ಸಮಿತಿ ಈ ಬಹಿರಂಗ ಪತ್ರವನ್ನು ಬರೆದಿದೆ. ಘನ ರಾಜ್ಯ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳು
ಕೂಡಲೇ, ಮಧ್ಯಪ್ರವೇಶಿಸಿ ಕ್ರಮ ವಹಿಸುವರೆಂದು ನಂಬಿದ್ದೇವೆ ಎಂದು ಕೆಪಿಆರ್‌ಎಸ್‌ ರಾಜ್ಯ ಅಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ತಿಳಿಸಿದ್ದಾರೆ.ಸಾಗುವಳಿದಾರರ 

ವಿಡಿಯೋ ನೋಡಿ:ಅಕ್ರಮವಾಗಿ ರೈತರ ಕೃಷಿ ಭೂಮಿ ವಶಪಡಿಸಿಕೊಳ್ಳುತ್ತಿರುವ ನೈಸ್‌ ಕಂಪನಿವಿರುದ್ಧ ಗುಡುಗಿದ ರೈತರು Janashakthi Media

Donate Janashakthi Media

Leave a Reply

Your email address will not be published. Required fields are marked *