ಕನ್ನಡದಲ್ಲಿ ವಿಮರ್ಶೆ ಸತ್ತೇ ಹೋಗಿದೆಯೇ?

‘ಇಂದು ವಿಮರ್ಶೆ ಗೈರುಹಾಜರಿಯಾಗಿದೆ’-ಬಹುವಚನ ಪತ್ರಿಕೆ
‘ಇಂದು ವಿಮರ್ಶೆ ಬತ್ತಿ ಹೋಗಿದೆ’-ಸಮಾಜಮುಖಿ ಸಾಹಿತ್ಯ ಸಮಾವೇಶದ ಚರ್ಚೆಯ ವಸ್ತು
‘ಇನ್ನು ಮುಂದೆ ವಿಮರ್ಶೆ ಇರುವುದಿಲ್ಲ; ಲೇಖಕರು ಮತ್ತು ಓದುಗರು ಮಾತ್ರ ಇರುತ್ತಾರೆ’-ವಸುಧೇಂದ್ರ
‘ಗಂಭೀರ ವಿಮರ್ಶೆ ಈಗಿನ ಅಗತ್ಯವಲ್ಲ’-ಪ್ರಕಾಶ ಕಂಬತ್ತಳ್ಳಿ, ಪ್ರಕಾಶಕರು ಕನ್ನಡ

ಇಂತಹ ಮಾತುಗಳನ್ನು ಆಡುವ ಮೂಲಕ ಕನ್ನಡ ವಿಮರ್ಶೆಗೆ ‘ಚರಮಗೀತೆ’ ಹಾಡುವ ಕೆಲಸವನ್ನು ಮಾಡಲಾಗುತ್ತಿದೆಯೇ? ಎಂಬ ಪ್ರಶ್ನೆ ಕಾಡಿಸುತ್ತಿದೆ. ಇತ್ತೀಚೆಗೆ ಇಂತಹ ಮಾತುಗಳನ್ನು ಆಡುವವರ ಸಂಖ್ಯೆ ಹೆಚ್ಚಿದೆ. ವಿಮರ್ಶೆಯ ‘ಸಾವನ್ನು’ ಹೀಗೆ ಘೋಶಿಸುವವರು ಕಳೆದ ಮೂವತ್ತು ವರ್ಶಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಪ್ರಕಟವಾಗಿರುವ ವಿಮರ್ಶೆಯ ಲೇಖನಗಳ ಇಲ್ಲವೇ ವಿಮರ್ಶೆಯ ಕೃತಿಗಳ ಒಂದು ಸಮಗ್ರ ಪಟ್ಟಿ ತಯಾರಿಸಿ ಅವುಗಳ ಸಮೀಕ್ಶೆ ನಡೆಸಿ ಗುಣಮಟ್ಟವನ್ನು ಪರಿಶೀಲಿಸಿದ್ದಾರೆಯೇ? ಆ ಪಟ್ಟಿಯಲ್ಲಿರುವ ಜೊಳ್ಳು ವಿಮರ್ಶೆಯ ಕೃತಿಗಳು, ಲೇಖನಗಳನ್ನೆಲ್ಲ ಗಾಳಿಗೆ ತೂರಿದಾಗ ಏನೂ ಉಳಿಯದಿರುವುದನ್ನು ಕಂಡಿದ್ದಾರೆಯೇ? ಒಂದು ವೇಳೆ ಗಾಳಿಗೆ ತೂರುವ ಕೆಲಸ ಮಾಡುವಾಗ ಕೊನೆಯಲ್ಲಿ ಏನೂ ಉಳಿಯದೇ ಹೋಗಿದ್ದರೆ ಆಗ ಮೇಲಿನ ತೀರ್ಮಾನಕ್ಕೆ ಬರಬಹುದು. ಕನ್ನಡ

– ರಂಗನಾಥ ಕಂಟನಕುಂಟೆ

ಆದರೆ ಅಂತಹ ಯಾವ ಪ್ರಯೋಗವನ್ನು ನಡೆಸದೆ ‘ವಿಮರ್ಶೆ ಸತ್ತಿದೆ’ ಎಂದು ಲೇಖಕರು, ವಿಮರ್ಶಕರು, ಪ್ರಕಾಶಕರು ಡಂಗೂರ ಬಾರಿಸುವುದನ್ನು ಏನೆಂದು ಭಾವಿಸಬೇಕು? ಇಂತಹ ಒಂದು ಅಭಿಪ್ರಾಯ ‘ಬಹುವಚನ ಸಾಹಿತ್ಯ ವಿಮರ್ಶೆ’ ಪತ್ರಿಕೆಯ ವಿಶೇಶ ಸಂಚಿಕೆಯನ್ನು ಇಡಿಯಾಗಿ ಓದಿದಾಗ ಮೂಡಿತು. ಅಲ್ಲದೆ ಇದು ಹಲವು ಪ್ರಶ್ನೆಗಳು ಹುಟ್ಟುವಂತೆ ಮಾಡಿದೆ. ವಿಶೇಶ ಸಂಚಿಕೆಗೆ ಬರೆದಿರುವ, ಮಾತನಾಡಿರುವ ಬಹುತೇಕರು ‘ವಿಮರ್ಶೆ ಸತ್ತಿದೆ ಇಲ್ಲವೇ ನಿಸ್ತೇಜವಾಗಿದೆ’ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಇದು ಕನ್ನಡದಲ್ಲಿ ಮಾತ್ರವಲ್ಲದೆ ಇತರೆ ಭಾರತೀಯ ಭಾಶೆಗಳಲ್ಲಿಯೂ ‘ವಿಮರ್ಶೆ ಸತ್ತು ಹೋಗಿದೆ’ ಎಂಬ ತೀರ್ಮಾನಕ್ಕೆ ಬಂದು ಘೋಶಿಸಿದ್ದಾರೆ. ಕನ್ನಡ

ಇಂತಹ ಒಂದು ಸಾಮಾನ್ಯೀಕರಣದ ನಿಲುವಿಗೆ ಕಾರಣವಾಗಿರುವುದು ಒಂದು ಕಲ್ಪಿತ ಆತಂಕ ಮತ್ತು ನಕಾರಾತ್ಮಕ ಆಲೋಚನೆ. ಆ ಕಲ್ಪಿತ ಆತಂಕ ಮತ್ತು ಆಲೋಚನೆಗಳನ್ನು ಎಲ್ಲರಲ್ಲಿಯೂ ಬಿತ್ತುವ ಕೆಲಸವನ್ನು ಮಾಡಲಾಗುತ್ತಿದೆಯೆಂದು ಅನ್ನಿಸುತ್ತಿದೆ. ಅಲ್ಲದೆ ಆ ಮೂಲಕ ಎಲ್ಲರನ್ನೂ ನಂಬಿಸಲಾಗುತ್ತಿದೆ. ಹಾಗಾಗಿಯೇ ‘ವಿಮರ್ಶೆ ಸತ್ತು ಹೋಗಿದೆ’, ‘ಗೈರುಹಾಜರಿಯಾಗಿದೆ’ ಎಂಬ ವಿಶಯವನ್ನು ಕೇಂದ್ರವಾಗಿಸಿಕೊಂಡು ಅದರ ಸುತ್ತ ಚರ್ಚಿಸಲಾಗುತ್ತಿದೆ! ಅಂತಹ ಆತಂಕದಿಂದ ಪ್ರಶ್ನೆಗಳನ್ನು ರೂಪಿಸಿ ಬರೆಹಗಾರರ ಮುಂದಿಟ್ಟ ಕಾರಣ; ಆ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಪರೀಕ್ಶೆಯಲ್ಲಿ ಉತ್ತರಿಸಿದಂತೆ ತಮ್ಮ ಅಭಿಪ್ರಾಯಗಳನ್ನು ಲೇಖಕರು ಮಂಡಿಸಿದ್ದಾರೆ. ಕೇಳುವ ಪ್ರಶ್ನೆಗಳು ಉತ್ತರಿಸುವವರನ್ನು ಹೇಗೆ ಬಲೆಗೆ ಬೀಳಿಸಿಕೊಳ್ಳುತ್ತವೆ ಎಂಬುದಕ್ಕೆ ವಿಶೇಶ ಸಂಚಿಕೆ ಒಳ್ಳೆಯ ಉದಾಹರಣೆಯೂ ಆಗಿದೆ. ಕನ್ನಡ

ಒಂದು ವೇಳೆ ಕಳೆದ ಮೂರು ದಶಕಗಳಲ್ಲಿ ಬಂದ ಅತ್ಯುತ್ತಮ ವಿಮರ್ಶೆಯ ಪುಸ್ತಕಗಳು, ಲೇಖನಗಳು, ವಿಮರ್ಶೆಯ ಮಾದರಿಗಳು ಮತ್ತು ವಿಮರ್ಶಕರನ್ನು ಕುರಿತು ಬರೆಯಿರಿ ಎಂಬ ಪಾಸಿಟಿವ್ ಪ್ರಶ್ನೆಗಳನ್ನು ಕೇಳಿದ್ದರೆ ಆಗ ಈ ಸಂಚಿಕೆಗೆ ಬರೆದವರ ಅಭಿಪ್ರಾಯಗಳು ಬೇರೆಯೇ ಆಗಿರುತ್ತಿದ್ದವು. ಅಲ್ಲದೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವುದು ನಿಜಕ್ಕೂ ಕಶ್ಟವಾಗುತ್ತಿತ್ತು. ಅಳೆದು ಸುರಿದು ತೂಗಿ ಯಾವುದು ನಿಜವಾದ ವಿಮರ್ಶೆಯ ಕೃತಿ ಮತ್ತು ವಿಮರ್ಶೆಯ ಮಾದರಿ ಎಂದು ಆಲೋಚಿಸಲಾಗುತ್ತಿತ್ತು. ಆಗ ನಿಜವಾಗಲೂ ವಿಮರ್ಶೆಯ ಕಾರ್ಯ ನಡೆಯುತ್ತಿತ್ತು. ಕೆಲವು ಕೃತಿಗಳ ಲೇಖಕರ ಮೌಲ್ಯಮಾಪನವಾದರೂ ಆಗುತ್ತಿತ್ತು. ಅದರಿಂದ ಒಂದಿಶ್ಟು ಭರವಸೆಯ ಮಾತುಗಳೂ ಹೊರಬೀಳುತ್ತಿದ್ದವು. ಆದರೆ ಅಂತಹ ಪ್ರಯತ್ನ ಮಾಡದೆ ಆತಂಕಿತ ಪ್ರಶ್ನೆಗಳನ್ನು ಮುಂದಿಟ್ಟ ಕಾರಣ ವಿಮರ್ಶೆ ಕುರಿತು ಬರೆದವರು ತಮ್ಮ ಮನೋನಿಶ್ಟ ಅಭಿಪ್ರಾಯಗಳನ್ನೇ ಆತ್ಯಂತಿಕ ಸತ್ಯವೆಂಬಂತೆ ಮಂಡಿಸಿದ್ದಾರೆ. ಈ ಮೂರು ದಶಕಗಳಲ್ಲಿ ಬಂದ ವಿಮರ್ಶೆಯ ಬರೆಹಗಳನ್ನು ಇಡಿಯಾಗಿ ಯಾರೂ ನಿಕಶಕ್ಕೆ ಒಡ್ಡಿದವರಿಲ್ಲ. ತಮ್ಮ ಸ್ನೇಹ ವಲಯದಲ್ಲಿರುವ ವಿಮರ್ಶಕರನ್ನು ಮಾತ್ರ ಗಮನಿಸಿರಬಹುದು. ಎಲ್ಲೋ ಕೆಲವರು ಸ್ನೇಹ ವಲಯವನ್ನು ಕೊಂಚ ದಾಟಿರಬಹುದು. ಎಲ್ಲ ಬರೆಹಗಳನ್ನು ಓದಿರುವವರು ಬಹುತೇಕ ಇಲ್ಲ. ಹೀಗಿರುವಾಗ ‘ವಿಮರ್ಶೆ ಸತ್ತಿದೆ’ ಎಂಬ ನಿಲುವಿಗೆ ಹೇಗೆ ಬಂದರು?

ಇದನ್ನೂ ಓದಿ: ಉಬರ್‌ ಕಂಪನಿಯಿಂದ ಕನ್ನಡ ಚಾಲಕರಿಗೆ ಅನ್ಯಾಯ: ಕ್ಯಾಬ್ ಚಾಲಕರು ಪ್ರತಿಭಟನೆ

ಈ ಸಂಚಿಕೆಗೆ ನಡೆಸಿದ ಮಾತುಕತೆಯಲ್ಲಿ ಸುರೇಶ್ ನಾಗಲಮಡಿಕೆ ಅವರು ‘ವಿಮರ್ಶೆ ಸತ್ತಿದೆ ಎಂದು ಪದೇ ಪದೇ ಹೇಳುವುದರಿಂದ ಅದು ನಿಜವಾಗಲೂ ಸತ್ತು ಹೋಗುತ್ತದೆ. ವಿಮರ್ಶೆ ಬದುಕಿದೆ, ಅದು ಯಾವ ರೀತಿಯಲ್ಲಿ ರೂಪುಗೊಳ್ಳಬೇಕು ಎಂಬ ಬಗ್ಗೆ ಚರ್ಚೆ ಮಾಡಬೇಕು’ ಎಂದಿದ್ದಾರೆ. ಇಂತಹ ಪಾಸಿಟಿವ್ ನೆಲೆಯಲ್ಲಿ ಇಡೀ ಸಂಚಿಕೆಯನ್ನು ರೂಪಿಸಿದ್ದರೆ ಅದು ಹೆಚ್ಚು ಉಪಯುಕ್ತವಾಗುತ್ತಿತ್ತು. ಅಲ್ಲೊಂದು ವಿಮರ್ಶೆಯ ಪ್ರಕ್ರಿಯೆ ನಡೆಯುತ್ತಿತ್ತು. ಆಗ ಒಂದು ಪುಟ್ಟ ಹಣತೆಯಾದರೂ ಉರಿಯುತ್ತಿದೆ ಎಂಬ ಭರವಸೆ ಮೂಡಿಸುತ್ತಿತ್ತು. ನಕಾರಾತ್ಮಕ ಪ್ರಶ್ನೆಗಳಿಂದ ನಕಾರಾತ್ಮಕ ಬೀಸುಹೇಳಿಕೆಗಳು ಹೊರಬಿದ್ದಿರುವುದು ಇಲ್ಲಿ ನಿಚ್ಚಳವಾಗಿ ಕಂಡು ಬರುತ್ತದೆ. ಕೆಲವರ ಆತಂಕಗಳು ವಿಮರ್ಶೆಯ ಬಗೆಗೆ ಉತ್ಪಾದಿಸಿದ ‘ವಿಶೇಶ ಆತಂಕಿತ ಸಂಚಿಕೆ’ಯಾಗಿ ಕಾಣಿಸುತ್ತಿದೆ. ಕನ್ನಡ

ಹಾಗಾಗಿ ಇಂತಹ ಆತಂಕಿತ ಧೋರಣೆಯಿಂದ ಹೊರಬಂದು ಕನ್ನಡ ವಿಮರ್ಶೆಯನ್ನು ಬೆಳೆಸುವ ದೃಶ್ಟಿಯಿಂದ ಧನಾತ್ಮಕವಾಗಿ ಕೆಲಸ ಮಾಡಬೇಕಿದೆ. ಹಾಗೆ ನೋಡಿದರೆ ಕಳೆದ ಎರಡು ವರ್ಶಗಳಿಂದ ‘ಬಹುವಚನ’ದ ಸಂಪಾದಕ ಬಳಗ ಧನಾತ್ಮಕವಾಗಿ ಕೆಲಸ ಮಾಡುತ್ತಿದೆ. ಸುಮಾರು ನೂರಕ್ಕೂ ಹೆಚ್ಚು ಕೃತಿಗಳ ಬಗೆಗೆ ವಿಮರ್ಶೆ ಬರೆಸಿ ವಿಮರ್ಶಾ ಸಾಹಿತ್ಯ ಸೃಶ್ಟಿಯ ಕ್ರಿಯೆಯನ್ನು ಜೀವಂತವಾಗಿರಿಸಿದೆ. ಆದರೆ ಅದು ತನ್ನ ಆತಂಕಿತ ಮನೋಭಾವದಿಂದ ಹೊರಬಂದಂತೆ ಕಾಣುತ್ತಿಲ್ಲ. ತನ್ನ ಆ ಆತಂಕವನ್ನು ಹಿರಿಕಿರಿಯ ಲೇಖಕರ ಮುಂದಿಟ್ಟ ಕಾರಣ ಅವರೂ ‘ಆತಂಕವಾದ’ದ ಖೆಡ್ಡಾದೊಳಗೆ ಬಿದ್ದುಬಿಟ್ಟಿದ್ದಾರೆ. ಅಲ್ಲದೆ ತಾವೂ ವಿಮರ್ಶಕರಾಗಿದ್ದು ‘ವಿಮರ್ಶೆ ಸತ್ತಿದೆ’ಯೆಂದರೆ ಅವರು ಯಾರನ್ನು ದೂರುತ್ತಿದ್ದಾರೆ? ಅವರ ಆರೋಪಗಳಿಗೆ ಅವರೂ ಹೊಣೆಗಾರರೇ ಅಲ್ಲವೇ? ಕನ್ನಡ

ಹೀಗೆ ಆರೋಪಿಸುವವರಿಗೆ ಮತ್ತೊಂದು ಪ್ರಶ್ನೆ. ‘ಕನ್ನಡ ವಿಮರ್ಶೆ ಸತ್ತಿದೆ’ ಎನ್ನುವುದಾದರೆ ಯಾವ ವಿಮರ್ಶಕರ ಬರೆಹಗಳನ್ನು ಆದರಿಸಿ ಈ ಹೇಳಿಕೆ ನೀಡಲಾಗುತ್ತಿದೆ? ‘ವಿಮರ್ಶೆ ಉಸಿರಾಡುತ್ತಿದೆ’ ಎನ್ನುವುದಾದರೆ ‘ಯಾರಿಂದ ಉಸಿರಾಡುತ್ತಿದೆ’ ಎನ್ನುವುದನ್ನು ಆಧಾರಸಹಿತವಾಗಿ ಹೇಳಬೇಕಲ್ಲವೇ? ಅದ್ಯಾವುದನ್ನೂ ಮಾಡದೆ ಬೀಸುಹೇಳಿಕೆಗಳನ್ನು ನೀಡಿದರೆ ಆಗ ನಿಜಕ್ಕೂ ವಿಮರ್ಶೆ ಸಾಯುತ್ತದೆ. ಹಾಗಾಗಿ ಬೀಸುಹೇಳಿಕೆಗಳನ್ನು ನೀಡುವುದು ಬಿಟ್ಟು ನಿರ್ದಿಶ್ಟವಾದ ಕೃತಿಗಳು, ಅಲ್ಲಿನ ವಿಮರ್ಶೆ ಪರಿಕರಗಳು ಮತ್ತು ಅವುಗಳನ್ನು ಅನುಸರಿಸಿರುವ ವಿಧಾನಗಳ ಮಿತಿಗಳನ್ನು ಎತ್ತಿ ತೋರಿಸಿದರೆ ಅದರಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಅನುಕೂಲವಾಗುತ್ತದೆ. ವಿಮರ್ಶೆಯ ಭವಿಶ್ಯದ ಬಗ್ಗೆ ಕಾಳಜಿ ಇರುವವರು ಅಂತಹ ಒಂದು ಪ್ರಯತ್ನವನ್ನು ಸಾಮೂಹಿಕವಾಗಿ ನಡೆಸಿದರೆ ಕನ್ನಡ ಸಾಹಿತ್ಯ ವಿಮರ್ಶೆಯ ಸಾಧ್ಯತೆಗಳು ಮತ್ತು ಸಮಸ್ಯೆಗಳು ಗೋಚರಿಸುತ್ತವೆ. ಮುಂದಿನ ತಲೆಮಾರು ವಿಮರ್ಶೆಯ ಕ್ಶೇತ್ರದಲ್ಲಿ ಬೇಸಾಯ ಮಾಡಲು ಅನುಕೂಲವಾಗುತ್ತದೆ. ‘ಪೊಳ್ಳು’ ವಿಮರ್ಶಕರ ಕಿವಿ ಹಿಂಡಿದಂತೆಯೂ ಆಗುತ್ತದೆ.

ಸದ್ಯ ಕನ್ನಡದಲ್ಲಿ ಮೂರು ತಲೆಮಾರುಗಳ ವಿಮರ್ಶಕರು ಬರೆಹ ಮಾಡುತ್ತಿದ್ದಾರೆ. ತೊಂಬತ್ತು ವರ್ಶ ದಾಟಿದ ಕೆ. ಜಿ. ನಾಗರಾಜಪ್ಪ ಅವರಿಂದ ಹಿಡಿದು ಮೂವತ್ತು ವರ್ಶದ ಆಸುಪಾಸಿನ ರವಿ ಸಿದ್ಲೀಪುರ ಅವರವರೆಗೂ ವಿಮರ್ಶೆ ಬರೆಯುತ್ತಿದ್ದಾರೆ. ಕಳೆದ ಮೂರು ದಶಕಗಳನ್ನು ಒಂದು ಕಾಲದ ಮಿತಿಯಾಗಿಸಿಕೊಂಡರೆ ಈ ಕಾಲದಲ್ಲಿ ಯು. ಆರ್. ಅನಂತಮೂರ್ತಿ, ಲಂಕೇಶ್, ತೇಜಸ್ವಿ, ಜಿ ಎಚ್ ನಾಯಕ, ಎಚ್ ಎಂ. ಚನ್ನಯ್ಯ, ಕಿ.ರಂ. ನಾಗರಾಜ, ಕೆ.ವಿ. ತಿರುಮಲೇಶ್, ಡಿ. ಆರ್. ನಾಗರಾಜ, ಗಿರಡ್ಡಿ ಗೋವಿಂದರಾಜ, ಜಿ.ಎಸ್. ಆಮೂರ, ಜಿ.ರಾಜಶೇಖರ ಇದ್ದರು. ಇದೇ ಮೂರು ದಶಕಗಳಲ್ಲಿ ಸಿ.ಎನ್. ರಾಮಚಂದ್ರನ್, ಜಿ. ರಾಮಕೃಶ್ಣ, ಕೆ.ವಿ. ನಾರಾಯಣ, ಬರಗೂರು ರಾಮಚಂದ್ರಪ್ಪ, ಎಚ್.ಎಸ್. ರಾಘವೇಂದ್ರರಾವ್, ಓ.ಎಲ್. ನಾಗಭೂಶಣ ಸ್ವಾಮಿ, ಎಚ್.ಎಸ್. ಶ್ರೀಮತಿ, ಪುರುಶೋತ್ತಮ್ ಬಿಳಿಮಲೆ, ಬಸವರಾಜ ಕಲ್ಗುಡಿ, ರಾಜೇಂದ್ರ ಚೆನ್ನಿ, ನರಹಳ್ಳಿ ಬಾಲಸುಬ್ರಹ್ಮಣ್ಯ, ಕೆ. ಕೇಶವ ಶರ್ಮ, ಟಿ.ಪಿ. ಅಶೋಕ, ರಹಮತ್ ತರೀಕೆರೆ, ನಟರಾಜ ಬೂದಾಳ್, ಚಂದ್ರಶೇಖರ ನಂಗಲಿ, ಮೊಗಳ್ಳಿ ಗಣೇಶ್, ಬಂಜಗೆರೆ ಜಯಪ್ರಕಾಶ್, ಡೊಮಿನಿಕ್ ಡಿ., ಲಕ್ಷ್ಮೀಪತಿ ಕೋಲಾರ, ಶಿವಾನಂದ ಎಸ್, ನಟರಾಜ ಹುಳಿಯಾರ್, ಕೆ. ಫಣಿರಾಜ್, ಬಿ.ಎಂ.ಪುಟ್ಟಯ್ಯ, ದಂಡಪ್ಪ, ಎಸ್. ಆರ್. ವಿಜಯಶಂಕರ್, ಕೆ. ಸತ್ಯನಾರಾಯಣ,

ಎಂ.ಎಸ್. ಆಶಾದೇವಿ, ಮೀನಾಕ್ಶಿ ಬಾಳಿ, ಸಬಿಹಾ ಭೂಮಿಗೌಡ, ಸಬಿತಾ ಬನ್ನಾಡಿ, ರಘನಾಥ ಚ.ಹ., ಎ.ಎಸ್. ಪ್ರಭಾಕರ, ಎಂ. ಡಿ. ಒಕ್ಕುಂದ, ಆರ್. ಚಲಪತಿ, ರಾಮಲಿಂಗಪ್ಪ ಟಿ ಬೇಗೂರು, ವಿನಯಾ ಒಕ್ಕುಂದ, ಜ.ನಾ. ತೇಜಶ್ರೀ, ಶಶಿಕಲಾ ಎಚ್, ಕವಿತಾ ರೈ, ತಾರಿಣಿ ಶುಭದಾಯಿನಿ, ಗೀತಾ ವಸಂತ, ಜಯಪ್ರಕಾಶ್ ಶೆಟ್ಟಿ, ಮೇಟಿ ಮಲ್ಲಿಕಾರ್ಜುನ, ವೆಂಕಟೇಶ್ ನೆಲ್ಲುಕುಂಟೆ, ರಘುನಾಥ ಚ. ಹ. ಗಂಗರಾಜು ಜಿ, ರವಿಕುಮಾರ್ ನೀಹಾ, ಸುರೇಶ್ ನಾಗಲಮಡಿಕೆ, ವಿಕ್ರಮ್ ವಿಸಾಜಿ, ಅರುಣ್ ಜೋಳದಕೂಡ್ಲಿಗಿ, ಭಾರತಿದೇವಿ ಪಿ, ಮಂಜುಳಾ ಗೋನಾಳ್, ಸುಭಾಶ್ ರಾಜಮಾನೆ, ರಾಜೇಂದ್ರ ಬಡಿಗೇರ, ಜಿ.ಎನ್. ಧನಂಜಯಮೂರ್ತಿ ಡಿ.ಆರ್. ದೇವರಾಜ್, ವಿ.ಎಲ್. ನರಸಿಂಹಮೂರ್ತಿ, ಪ್ರಕಾಶ್ ಮಂಟೇದ, ಮಹಾಂತೇಶ್ ಪಾಟೀಲ್ ಅವರನ್ನು ಒಳಗೊಂಡಂತೆ ವಿವಿಧ ತಲೆಮಾರುಗಳ ನೂರಾರು ಲೇಖಕರು ವಿಮರ್ಶೆಯ ಬರೆಹಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ಯಾವ ತಲೆಮಾರಿನವರು ಇಲ್ಲವೇ ವಯೋಮಾನದವರು ವಿಮರ್ಶೆಯನ್ನು ಬರೆಯುವಾಗ ವಿಮರ್ಶೆ ಸತ್ತು ಹೋಯಿತು?

ಕನ್ನಡ ವಿಮರ್ಶೆ ಅತ್ಯುನ್ನತ ಸ್ಥಿತಿಗೇರಿತ್ತು ಎಂದು ನಂಬಿಕೊಂಡಿರುವ ಕಾಲದ ವಿಮರ್ಶಕರಲ್ಲಿ ದೊಡ್ಡ ಹೆಸರು ಮಾಡಿದ್ದವರು ಕೀರ್ತಿನಾಥ ಕುರ್ತಕೋಟಿ, ಜಿ.ಎಸ್. ಆಮೂರ, ಗಿರಡ್ಡಿ ಗೋವಿಂದರಾಜ, ಜಿಎಸ್ ಶಿವರುದ್ರಪ್ಪ, ಶಂಕರ ಮೊಕಾಶಿ ಪುಣೇಕರ್. ಎಂ.ಜಿ. ಕೃಶ್ಣಮೂರ್ತಿ ಇನ್ನೂ ಅನೇಕರು ಬರೆದ ವಿಮರ್ಶೆಯ ಬರೆಹಗಳನ್ನು ಇಂದು ಎಶ್ಟು ಜನ ಓದುತ್ತಿದ್ದಾರೆ? ಅವರ ವಿಮರ್ಶೆಯ ವಿಧಾನಗಳನ್ನು ಮಾದರಿಯಾಗಿ ಇಂದು ಯಾರು ಅನುಸರಿಸುತ್ತಿದ್ದಾರೆ? ಅವರನ್ನು ಇಂದು ಮಾದರಿಯಾಗಿ ಸ್ವೀಕರಿಸಿ ಅವರ ವಿಮರ್ಶೆಯ ವಿಧಾನಗಳನ್ನು ಇಂದು ಅನುಸರಿಸಲು ಸಾಧ್ಯವೇ? ಕಳೆದ ಒಂದು ಶತಮಾನದಲ್ಲಿ ಬೆಳೆದು ಬಂದ ವಿಮರ್ಶೆಯಲ್ಲಿ ಯಾವುದು ಅನುಸರಣೀಯ ಮಾದರಿ?

ಈ ಹಿಂದೆ ಶ್ರೇಶ್ಟ ವಿಮರ್ಶಕರೆಂದು ಹೆಸರಾದವರು ಇಂದಿಗೂ ಶ್ರೇಶ್ಟರಾಗಿ ಉಳಿದಿದ್ದಾರೆಯೇ? ‘ನವೋದಯ’ ಮತ್ತು ‘ನವ್ಯ’ದ ಯಾವ ವಿಮರ್ಶಕರನ್ನು, ವಿಮರ್ಶೆಯ ವಿಧಾನಗಳನ್ನು ಇಂದು ಮಾದರಿಯಾಗಿ ಸ್ವೀಕರಿಸಬಹುದು? ಈ ಹಿಂದೇ ಇದೇ ದಿಗ್ಗಜ ವಿಮರ್ಶಕರು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಕಾದಂಬರಿಯೇ ಅಲ್ಲ. ಅದಕ್ಕೆ ಒಂದು ಕೇಂದ್ರವಿಲ್ಲ ಎಂದಿದ್ದರು. ಇಂದಿನ ಸಾಂಸ್ಕøತಿಕ ವಿಮರ್ಶೆಯ ಕಾಲದಲ್ಲಿ ‘ ಮಲೆಗಳಲ್ಲಿ ಮದುಮಗಳು’ ಅತ್ಯಂತ ಶ್ರೇಶ್ಟ ಕಾದಂಬರಿಯಾಗಿ ಹೊರಹೊಮ್ಮಿದೆ. ಅಲ್ಲದೆ ಕುವೆಂಪು ಅವರನ್ನು ಕವಿಯೇ ಅಲ್ಲ ಎಂದಿದ್ದರು. ಕುವೆಂಪು ಜೀವಿತದ ಕಾಲಕ್ಕಿಂತಲೂ ಹೆಚ್ಚು ಜನರು ಇಂದು ಕುವೆಂಪು ಅವರನ್ನು ಓದುತ್ತಿದ್ದಾರೆ. ಕುವೆಂಪು ಸಾಂಸ್ಕøತಿಕ ನಾಯಕರಾಗಿ ವಿಕಾಸವಾಗಿದ್ದಾರೆ. ಇದನ್ನು ಹೇಗೆ ವಿವರಿಸಿಕೊಳ್ಳಬೇಕು?

ಯಾಕೆಂದರೆ, ಪ್ರತಿ ತಲೆಮಾರು ಕೂಡ ತನ್ನ ಕಾಲಕ್ಕೆ ತಕ್ಕಂತೆ ತನ್ನ ವಿಮರ್ಶೆಯ ನೋಟಕ್ರಮ ಗಳನ್ನು ರೂಪಿಸಿಕೊಳ್ಳುತ್ತದೆ. ಓದಿನ ವಿಧಾನಗಳು ಬದಲಾಗುತ್ತವೆ. ‘ಓದು’ ಮತ್ತು ಬರೆಹಗಳು ಬೌದ್ಧಿಕ ರಾಜಕಾರಣದ ಭಾಗವೇ ಆಗಿರುವುದರಿಂದ ಬದಲಾದ ಕಾಲದ ಆಶಯಗಳಿಗೆ ತಕ್ಕಂತೆ ವಿಮರ್ಶೆಯ ವಿಧಾನಗಳೂ ಬದಲಾಗುತ್ತವೆ. ಇಂದಿನ ವಿಮರ್ಶೆ ಅಂತಹ ಹೊರಳು ದಾರಿಯಲ್ಲಿದೆ. ಹಾಗಾಗಿ ಇಂದು ಈ ಹಿಂದೆ ಪ್ರಸಿದ್ಧವಾಗಿದ್ದ ‘ಸಿದ್ಧಮಾದರಿ’ಯನ್ನು ಅನುಸರಿಸಲು ಸಾಧ್ಯವಿಲ್ಲ. ನವ್ಯ ಸಾಹಿತ್ಯದ ಕಾಲದಲ್ಲಿ ಕೃತಿಯನ್ನು ಪ್ರಾಯೋಗಿಕ ವಿಮರ್ಶೆಗೆ ಒಳಪಡಿಸಿದಂತೆ ಈಗ ಆ ವಿಧಾನವನ್ನು ಬಳಸಿ ಕೃತಿಯನ್ನು ವಿಮರ್ಶಿಸಲು ಸಾಧ್ಯವಿಲ್ಲ. ಕೃತಿನಿಶ್ಟ, ರೂಪನಿಶ್ಟ ಮತ್ತು ರಸನಿಶ್ಟ ಓದುಗಳನ್ನು ಮಾಡಲು ಸಾಧ್ಯವಿಲ್ಲ. ಅವುಗಳನ್ನು ಅನುಸರಿಸಿ ವಿಮರ್ಶೆಗೆ ದಣಿವು ಬಂದ ಕಾರಣಕ್ಕಾಗಿಯೇ ‘ಸಾಂಸ್ಕøತಿಕ ವಿಮರ್ಶೆ’ಯ ಹಾದಿಯ ಕಡೆಗೆ ಹೊರಳಿಕೊಳ್ಳಲಾಯಿತು. ಈಗ ಸಾಂಸ್ಕøತಿಕ ವಿಮರ್ಶೆ ಮುಂಚೂಣಿಯಲ್ಲಿರುವಾಗ ಮತ್ತೆ ಆ ವಿಧಾನ ಸರಿಯಿಲ್ಲ; ಆ ವಿಧಾನದಿಂದಾಗಿ ಸಾಹಿತ್ಯದ ಆಪ್ತ ಓದನ್ನು ಅಮಾನತ್ತು ಮಾಡಲಾಗಿದೆ; ಸಾಹಿತ್ಯ ವಿಶ್ಲೇಶಣೆಯ ವಿಧಾನವು ಸೊರಗಿದೆ. ಸಾಹಿತ್ಯ ಪಠ್ಯಗಳನ್ನು ಕಡೆಗಣಿಸಲಾಗಿದೆ ಎಂದು ವಾದಿಸಿದರೆ ಏನು ಮಾಡುವುದು? ‘ಸಾಹಿತ್ಯ ವಿಮರ್ಶೆ ಸತ್ತಿದೆ’ ಎನ್ನುವವರು ಸಾಹಿತ್ಯವನ್ನು ಓದಲು ಇರುವ ನಿಜವಾದ ‘ಮಾದರಿ’ ಯಾವುದು ಎಂಬುದನ್ನು ತೋರಿಸಿಕೊಡಬೇಕಲ್ಲವೇ?

ಅದಿಲ್ಲದೆ ಇಂದಿನ ವಿಮರ್ಶೆ ‘ಸರಿಯಿಲ್ಲ’ ಎಂದು ಆಪಾದಿಸಿದರೆ ಸರಿಯಾದ ಹಾದಿಯನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಸರಿದಾರಿ ತೋರುವ ಕೆಲಸವನ್ನು ಅನುಭವಿಗಳು, ಬಲ್ಲವರು ಮಾಡಬೇಕಲ್ಲವೇ? ಬದಲಾದ ಕಾಲದಲ್ಲಿ ಈ ಹಿಂದೆ ‘ವಿಮರ್ಶೆಯ ಸುವರ್ಣಯುಗವಿತ್ತು’ ಭ್ರಮೆಯಿಂದ ಹೊರಬರಬೇಕಲ್ಲವೇ? ಅಲ್ಲದೆ ಇಂದು ಇವತ್ತು ವಿಮರ್ಶೆ ಪ್ರಕಟಗೊಳ್ಳುವ ಮಾಧ್ಯಮಗಳು ಬದಲಾಗಿವೆ. ಈ ಹಿಂದಿನಂತೆ ನಿಯಂತ್ರಿತ ಮುದ್ರಣ ಮಾಧ್ಯಮಗಳನ್ನು ದಾಟಿ ಸಾಮಾಜಿಕ ಮಾಧ್ಯಮಗಳಿಗೆ ಅದು ಜಿಗಿತವಾಗಿದೆ. ಹಾಗಾಗಿ ವಿಮರ್ಶೆಯ ಸ್ವರೂಪದ ಮೇಲೂ ಪ್ರಭಾವ ಬೀರಿದೆ. ವಿಮರ್ಶೆಯನ್ನು ಕ್ರಮಬದ್ಧವಾಗಿ ಅಭ್ಯಾಸ ಮಾಡುವವರ ಜೊತೆಗೆ ಓದುಗರೂ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ದಾಖಲಿಸುತ್ತಿದ್ದಾರೆ. ಇದರ ಪ್ರಮಾಣ ಹೆಚ್ಚಿದೆ. ಇದು ಅನಿಯಂತ್ರಿತವಾಗಿರುವುದರಿಂದ ಮತ್ತು ತತ್‍ಕ್ಶಣದ ಅಭಿಪ್ರಾಯಗಳಿಗೆ ಅವಕಾಶ ಕಲ್ಪಿಸಿರುವುದರಿಂದ ವಿಮರ್ಶೆ ದುರ್ಬಲವಾದಂತೆ ಕಾಣಿಸುತ್ತಿದೆ. ಇಂತಹ ಸನ್ನಿವೇಶದಲ್ಲಿಯೂ ಕನ್ನಡದಲ್ಲಿ ನೈಜವಾದ ವಿಮರ್ಶೆಯ ಬರೆಹಗಳೂ ಪ್ರಕಟವಾಗುತ್ತಲೇ ಇವೆ.

ಇಂದು ಸಾಹಿತ್ಯವನ್ನು ಒಂದು ಪ್ರತ್ಯೇಕವಾದ ಅನನ್ಯ ಸಂಸ್ಥೆಯಾಗಿ ಗ್ರಹಿಸಲು ಸಾಧ್ಯವಿಲ್ಲ. ಅದು ಈ ಸಾಮಾಜಿಕ ವ್ಯವಸ್ಥೆಯ ಭಾಗವೇ ಆಗಿರುವುದರಿಂದ ಅದರ ಒಟ್ಟು ವಿನ್ಯಾಸದ ಒಳಗಡೆ ಮತ್ತು ಈ ಎಲ್ಲ ಬದಲಾವಣೆಗಳ ವ್ಯಾಪ್ತಿಯಲ್ಲಿಯೇ ಅದನ್ನು ಗ್ರಹಿಸಿಕೊಳ್ಳಬೇಕಿದೆ. ಇಂದು ನಮ್ಮ ಸಮಾಜದಲ್ಲಿ ಪ್ರಧಾನವಾಗಿ ಮುಂಚೂಣಿಯಲ್ಲಿರುವುದು ಜಾತಿ ಪ್ರಶ್ನೆ, ಲಿಂಗ ಅಸಮಾನತೆಯ ಪ್ರಶ್ನೆ ಮತ್ತು ವರ್ಗ ಅಸಮಾನತೆಯ ಪ್ರಶ್ನೆಗಳು. ಈ ಸಮಸ್ಯೆಗಳಿಂದ ಬಳಲುತ್ತಿರುವವರು ತಮ್ಮ ಅಸ್ಮಿತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಸ್ಮಿತೆಯ ಸಾಮಾಜಿಕ ಸಾಹಿತ್ಯಿಕ ಚಳವಳಿಗಳು ಸುಪ್ತವಾಗಿ ನಡೆದಿವೆ. ಸ್ತ್ರೀವಾದಿ ಚಿಂತನೆಗಳು, ಅಂಬೇಡ್ಕರ್ ವಿಚಾರಧಾರೆ, ಅವೈದಿಕ ದರ್ಶನಗಳು ಮುಂಚೂಣಿಗೆ ಬಂದಿವೆ. ಇವು ಅರ್ಧ ಶತಮಾನದ ಹಿಂದೆಯೇ ಕಾಣಿಸಿಕೊಂಡವು. ಅವು ಈಗ ಮತ್ತಶ್ಟು ಮುನ್ನೆಲೆಗೆ ಬಂದಿವೆ. ಇವೇ ಇಂದಿನ ಮತ್ತು ಮುಂದಿನ ವಾಸ್ತವ. ವೈದಿಕ ತಾತ್ವಿಕತೆಗಳ ಯಜಮಾನಿಕೆಯನ್ನು ಬದಿಗೆ ಸರಿಸುವ ಪ್ರಯತ್ನಗಳು ನಡಿದಿವೆ.

ಹಾಗಾಗಿಯೇ ಇಂದು ಸಾಹಿತ್ಯವನ್ನು ಓದುವ ಸಂದರ್ಭದಲ್ಲಿ ಸಾಂಸ್ಕøತಿಕ ಪ್ರಶ್ನೆಗಳು, ಜಾತಿ ಮತ್ತು ವರ್ಗದ ಪ್ರಶ್ನೆಗಳು, ಲಿಂಗ ಅಸಮಾನತೆಂiÀÀು* ಪ್ರಶ್ನೆಗಳು ಮತ್ತು ಭಾಶಿಕ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಪ್ರಶ್ನೆಗಳು ಮುಂಚೂಣಿಗೆ ಬಂದಿವೆ. ಅಂತಹ ಪ್ರಶ್ನೆಗಳ ಮೂಲಕವೇ ಸಾಹಿತ್ಯವನ್ನು ಓದಲಾಗುತ್ತಿದೆ. ವಿಮರ್ಶೆ ಮಾಡಲಾಗುತ್ತಿದೆ. ಈ ಕಾಲಕ್ಕೆ ಬೇಕಾದ ತಿಳುವಳಿಕೆಯನ್ನು ರೂಪಸಿಕೊಳ್ಳಲಾಗುತ್ತಿದೆ. ಈ ಕಾಲದ ಅಗತ್ಯವಾಗಿ ಅಂತಹ ಪ್ರಶ್ನೆಗಳನ್ನು ಮುಂದುಮಾಡಿಕೊಂಡೇ ಸಾಹಿತ್ಯವನ್ನು ವಿಮರ್ಶೆ ಮಾಡಲಾಗುತ್ತಿದೆ. ಕವಿತೆ, ಕತೆ, ಕಾದಂಬರಿ, ನಾಟಕಗಳನ್ನು ರಚಿಸಲಾಗುತ್ತಿದೆ. ಅಂತಹ ಪ್ರಶ್ನೆಗಳನ್ನು ಕೇಳಿಕೊಳ್ಳದೆ ಇಂದು ಯಾವ ಸಾಹಿತ್ಯವೂ ಹುಟ್ಟುತ್ತಿಲ್ಲ. ಆದ್ದರಿಂದಲೇ ಸಾಹಿತ್ಯ ವಿಮರ್ಶೆಯಂತೆ ಸಾಹಿತ್ಯದ ಇತರೆ ಪ್ರಕಾರಗಳ ವಿನ್ಯಾಸದಲ್ಲಿಯೂ ಸಾಕಶ್ಟು ಪಲ್ಲಟಗಳಾಗಿವೆ.

ಇದರಲ್ಲಿ ಶ್ರೇಶ್ಟವಾದ ಸಾಹಿತ್ಯ ಯಾವುದು ಎಂದು ಮೌಲ್ಯಮಾಪನ ಮಾಡುವುದು ಮತ್ತೊಂದು ಹೊಣೆಗಾರಿಕೆಯೇ ಆಗಿದೆ. ಇದನ್ನೂ ಯಾರಾದರೂ ಮಾಡಬೇಕಲ್ಲವೇ? ಇಂದು ಕನ್ನಡ ಮಾತ್ರವಲ್ಲದೆ ಬೇರೆ ಭಾಶೆಗಳಲ್ಲಿಯೂ ಸಾಂಸ್ಕøತಿಕ ವಿಮರ್ಶೆಯ ಮಾದರಿಯನ್ನೇ ಹೆಚ್ಚು ಬಳಸಲಾಗುತ್ತಿದೆ. ಆದ್ದರಿಂದಲೇ ಸಾಹಿತ್ಯ ವಿಮರ್ಶೆ ಸಾಮಾಜಿಕ ವಿಮರ್ಶೆಯಾಗಿಯೂ ಕಾಣುತ್ತದೆ. ಅದು ಸಾಂವಿಧಾನಿಕ ಹಕ್ಕುಗಳ ಬಗೆಗೆ ಓದುಗರನ್ನು ಸಂವೇದನಾಶೀಲರನ್ನಾಗಿಸುವ ಮಾರ್ಗವಾಗಿಯೂ ಬಳಕೆಯಾಗುತ್ತಿದೆ. ಕರ್ನಾಟಕದ ಸಂದರ್ಭದಲ್ಲಿ ಸಮಾಜ ವಿಜ್ಞಾನ ಶಾಖೆಗಳು ಮೌನವಾಗಿರುವಾಗ ಅನೇಕ ವಿಚಾರಗಳಿಗೆ ಸಂಬಂಧಿಸಿದ ಚರ್ಚೆಗಳನ್ನು ಜೀವಂತವಾಗಿಟ್ಟಿರುವುದು ಸಾಹಿತ್ಯ ವಿಮರ್ಶೆಯೇ ಆಗಿದೆ. ಇಂತಹ ಸಂದರ್ಭದಲ್ಲಿ ಸಾಹಿತ್ಯವು ಒಂದು ಆಕರವಾಗಿ ಬಳಕೆಯಾಗುತ್ತಿದೆ.

ಹೀಗೆ ಬಳಸುವಾಗ ಸಾಹಿತ್ಯ ಕೃತಿಗಳ ಆಪ್ತ ಓದು ಹಿಂದೆ ಸರಿದಿರುವುದು ಸುಳ್ಳಲ್ಲ. ಇಂತಹ ಹೊತ್ತಿನಲ್ಲಿ ‘ಸಾಹಿತ್ಯ ವಿಮರ್ಶೆ ಸತ್ತಿದೆ’ ಎಂದರೆ ಇಂದು ಸಾಮಾಜಿಕ ಸಾಂಸ್ಕøತಿಕ ಪ್ರಶ್ನೆಗಳನ್ನು ಸಾಹಿತ್ಯದ ಸಂದರ್ಭದಲ್ಲಿ ಕೇಳುವುದೇ ಅಪರಾಧ ಎಂಬಂತಾಗುವುದಿಲ್ಲವೇ? ಇಂತಹ ಸಾಂಸ್ಕøತಿಕ ಸಾಮಾಜಿಕ ಪ್ರಶ್ನೆಗಳನ್ನು ಕೇಳಿಕೊಳ್ಳದೆ, ಈ ಮೊದಲಿನ ಕೃತಿನಿಶ್ಟ ಇಲ್ಲವೇ ಪ್ರಾಯೋಗಿಕ ವಿಮರ್ಶೆಯ ವಿಧಾನಗಳಿಗೆ ಮರಳಿದರೆ ಇಲ್ಲವೇ ಸಂಸ್ಕøತ ಕಾವ್ಯ ಮೀಮಾಂಸೆಯ ಧ್ವನಿ, ರಸ, ರೀತಿ, ವಕ್ರೋಕ್ತಿ ತತ್ವಗಳನ್ನು ಅನುಸರಿಸಿದರೆ ಇಂದು ವಿಮರ್ಶೆ ಬದುಕಿಬಿಡುತ್ತದೆಯೇ? ಅಲ್ಲದೆ ಇಂದಿನ ವಿಮರ್ಶೆಯ ವಿಧಾನಗಳಿಂದ ಸಾಹಿತ್ಯದ ‘ಅನನ್ಯತೆ’ಗೆ ಎಲ್ಲಿ ಪೆಟ್ಟು ಬಿದ್ದಿದೆ ಎಂಬುದನ್ನು ನಿರ್ದಿಶ್ಟವಾಗಿ ಚರ್ಚಿಸದೇ ಹೋದರೆ ‘ವಿಮರ್ಶೆ ಸತ್ತಿದೆ’ ಎನ್ನುವುದು ಕೇವಲ ಆರೋಪ ಮಾತ್ರ.

ಹಾಗಾಗಿ ನಿರ್ದಿಶ್ಟ ಅಧ್ಯಯನಗಳೇ ಇಲ್ಲದೆ ಬೀಸುಹೇಳಿಕೆಗಳನ್ನು ನೀಡುವ ಮೂಲಕ ಇನ್ನೂ ಉಸಿರಾಡುತ್ತಿರುವ ವಿಮರ್ಶೆಯನ್ನು ಜೀವಂತ ಸಮಾಧಿ ಮಾಡುವ ಕೆಲಸ ಯಾವ ಬಗೆಯ ಸಾಹಿತ್ಯದ ಕಾಳಜಿ ಮತ್ತು ಸಂವೇದನಾಶೀಲತೆ? ನಿರಂತರವಾಗಿ ‘ವಿಮರ್ಶೆ ಸತ್ತಿದೆ’ ಎಂದು ಹೇಳುತ್ತಾ ಹೋದರೆ ವಿಮರ್ಶೆಯ ಕಡೆಗೆ ಹೊಸಬರನ್ನು ಆಕರ್ಶಿಸಬಹುದೇ? ಒಂದು ಕಡೆ ವಿಮರ್ಶೆ ಸತ್ತಿದೆ ಎನ್ನುವುದು ಮತ್ತೊಂದು ಕಡೆ ವಿಮರ್ಶಕರನ್ನು ದೊಡ್ಡ ಭಯೋತ್ಪಾದಕರಂತೆ ಕಾಣವುದು ಎರಡೂ ನಡೆದಿದೆ. ಇದರಿಂದ ಸಾಹಿತ್ಯದ ಒಂದು ಮುಖ್ಯ ಪ್ರಕಾರವಾದ ವಿಮರ್ಶೆಯ ಬಗೆಗೆ ಸೃಜನಶೀಲ ಲೋಕವೇ ಅಪಪ್ರಚಾರಕ್ಕೆ ಇಳಿದಂತೆ ಕಾಣುತ್ತದೆ. ಹೀಗೆ ಅಪಪ್ರಚಾರ ಮಾಡುವುದರಿಂದ ವಿಮರ್ಶೆಯ ಕಡೆಗೆ ಹೊಸತಲೆಮಾರು ಆಕರ್ಶಣೆಗೊಳ್ಳಲು ಸಾಧ್ಯವಿಲ್ಲ. ಇದಾವುದನ್ನೂ ಯೋಚಿಸದೆ ಒಕ್ಕಣ್ಣ ದೃಶ್ಟಿಕೋನದಿಂದ ವಿಮರ್ಶೆ ಮೇಲೆ ಆರೋಪ ಮಾಡುವುದು ಸೂಕ್ತವಲ್ಲ.

ಇಲ್ಲಿ ಇನ್ನೊಂದು ಸಂಗತಿಯನ್ನು ಗಮನಿಸಬೇಕಿದೆ. ಇಂದು ಸೃಶ್ಟಿಯಾಗಿ ಹೊರಬರುತ್ತಿರುವ ಎಲ್ಲ ಕವಿತೆಗಳು, ಕತೆಗಳು, ಕಾದಂಬರಿಗಳು, ನಾಟಕಗಳು ಶ್ರೇಶ್ಟ ರಚನೆಗಳಾಗಿವೆಯೇ? ಕವಿಗಳು ಕತೆಗಾರರು ಕಾವ್ಯ ಕತೆ ಪ್ರಕಾರಗಳು ಸತ್ತಿವೆ ಎಂದು ಶೋಕಾಚರಣೆ ಮಾಡುತ್ತಿದ್ದಾರೆಯೇ? ಇಲ್ಲವಾದರೆ ಈ ಸಮಸ್ಯೆ ವಿಮರ್ಶೆಗೆ ಮಾತ್ರ ಯಾಕೆ ಅಂಟಿಕೊಂಡಿದೆ? ನಿಜಕ್ಕೂ ವಿಮರ್ಶೆ ಸತ್ತು ಹೋಗಿದ್ದರೆ ಅದರ ಬಗೆಗೆ ಮಾತಾಡುವ ಚರ್ಚಿಸುವ ವಿಶೇಶ ಸಂಚಿಕಗಳನ್ನು ತರುವ ಅಗತ್ಯವಾದರೂ ಏನಿದೆ? ವಿಮರ್ಶೆ ಸತ್ತಿದೆಯೆಂದೇ? ಬದುಕಬೇಕೆಂದೇ?

ಕಳೆದ ಹದಿನೈದು ವರ್ಶಗಳಲ್ಲಿ ‘ಕತ್ತಿಯಂಚಿನ ದಾರಿ’, ‘ಆಖ್ಯಾನ-ವ್ಯಾಖ್ಯಾನ’, ‘ಉತ್ತರಾರ್ಧ’, ‘ಅನುಶ್ರೇಣಿ-ಯಜಮಾನಿಕೆ’, ‘ಕಥನ ಭಾರತಿ’, ‘ಗಾಂಧಿ ಕಥನ’, ‘ನುಡಿಗಳ ಅಳಿವು: ಬೇರೆ ದಿಕ್ಕಿನ ನೋಟ’, ‘ಬಹುತ್ವ ಭಾರತ ಮತ್ತು ಬೌದ್ಧ ತಾತ್ವಿಕತೆ’, ‘ಮಹಾಭಾರತದ ಅನುಸಂಧಾನ: ಭಾರತ ಯಾತ್ರೆ’ಗಳನ್ನು ಒಳಗೊಂಡಂತೆ ಒಟ್ಟು 9 ವಿಮರ್ಶೆಯ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರೆತಿವೆ. ಇವುಗಳಲ್ಲಿ ಕೆಲವು ನೇರ ಸಾಹಿತ್ಯ ವಿಮರ್ಶೆಗಳಲ್ಲ. ಆದರೆ ಅವು ಸಾಂಸ್ಕøತಿಕ ವಿಮರ್ಶೆಯ ವ್ಯಾಪ್ತಿಯಲ್ಲಿವೆ. ಹೀಗೆ ಮನ್ನಣೆ ಪಡೆದ ಕೃತಿಗಳೂ ಕಳಪೆಯೇ? ಒಂದು ವೇಳೆ ಕಳಪೆಯಾಗಿದ್ದರೆ ಇವುಗಳ ಬಗೆಗೆ ನಿಶ್ಟುರವಾಗಿ ದನಿಯೆತ್ತಲಾಗಿದೆಯೇ? ಇದರಂತೆಯೇ ಪ್ರತಿವರ್ಶ ಕರ್ನಾಟಕ ಸಾಹಿತ್ಯ ಅಕಾಡೆಮಿಯೂ ವಿಮರ್ಶೆಯ ಕೃತಿಯೊಂದಕ್ಕೆ ಬಹುಮಾನ ನೀಡುತ್ತದೆ. ಅವುಗಳೂ ಕಳಪೆಯೇ? ಹಾಗಿದ್ದರೆ ಕಳಪೆ ಕೃತಿಗಳಿಗೆ ಬಹುಮಾನ ಬಂದಾಗ ಮೌನವಾಗಿ ಸಹಿಸಿಕೊಳ್ಳುವುದೇಕೆ? ಇಂತಹ ನಾನಾ ನಮೂನೆಯ ತರ್ಕದ ಮತ್ತು ಕುತರ್ಕದ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗುತ್ತದೆ.

ಇಲ್ಲಿನ ಇನ್ನೊಂದು ಪ್ರಶ್ನೆಯೆಂದರೆ ‘ವಿಮರ್ಶೆ ಸತ್ತಿದೆ’ಯಾದರೆ, ಹೀಗೆ ಸಾಯಲು ಕಾರಣವಾದ ಸಾಮಾಜಿಕ, ರಾಜಕೀಯ ಮತ್ತು ಶೈಕ್ಶಣಿಕ ಕಾರಣಗಳ ಬಗೆಗೆ ಎಂದಾದರೂ ಮುಕ್ತವಾಗಿ ಚರ್ಚಿಸಲಾಗಿದೆಯೇ? ಗಿಡಕ್ಕೆ ಮಣ್ಣು ನೀರು ಗೊಬ್ಬರಗಳನ್ನೇ ನೀಡದೆ ಮರ ಸತ್ತಿದೆಯೆಂದರೆ ಏನು ಹೇಳುವುದು? ಸಾಮಾಜಿಕ ಮತ್ತು ಸಾರ್ವಜನಿಕ ಹೊಣೆಗಾರಿಕೆಯನ್ನು ಮರೆತ ಸಮಾಜ ವಿಮರ್ಶೆ ಕೊರತೆಯಿಂದ ಬಾಧಿತವಾಗುವುದು ಸಹಜ. ಸಾರ್ವಜನಿಕ ಮೌನ ಮತ್ತು ಉಪೇಕ್ಶೆಗಳ ಆಯುಧಗಳನ್ನು ಬಳಸಿ ಬದುಕುವ ಈ ಕಾಲದಲ್ಲಿ ಕ್ರಿಯಾಶೀಲತೆ ಒಂದು ಉಟೋಪಿಯನ್ ಕಲ್ಪನೆಯಾಗುತ್ತದೆ. ಜಾಗತೀಕರಣದ ಈ ಕಾಲದಲ್ಲಿ ಸಾಹಿತ್ಯವು ಸಾರ್ವಜನಿಕ ಪ್ರದರ್ಶನದ ಮತ್ತು ಮಾರುಕಟ್ಟೆಯ ಸರಕಾದಾಗ ಅಲ್ಲಿ ವಿಮರ್ಶೆಗೇನು ಕೆಲಸ? ಮಾರುಕಟ್ಟೆಗೆ ‘ಪ್ರಚಾರ, ಮಾರಾಟ ಹಾಗೂ ಲಾಭ’ ಮಾತ್ರ ಮುಖ್ಯವಾಗಿರುತ್ತದೆ.

ಅದು ನಿಶ್ಟುರ ವಿಮರ್ಶೆಯನ್ನು ಬಯಸುವುದಿಲ್ಲ. ಅದಕ್ಕೂ ಮಾರಾಟದ ಸರಕಾಗುವ ಸಾಧ್ಯತೆಗಳಿದ್ದರೆ ಅದನ್ನು ಮಾಡುತ್ತದೆ. ಇಂಗ್ಲಿಶ್ ಸಾಹಿತ್ಯ ವಲಯದಲ್ಲಿ ಇದನ್ನು ನೋಡಬಹುದು. ಸದ್ಯ ಕನ್ನಡದಲ್ಲಿ ಅಂತಹ ಸಾಧ್ಯತೆಯಿಲ್ಲ. ಹಾಗಾಗಿ ಮೊದಲು ವಿಮರ್ಶೆಯ ಸಾಧ್ಯತೆಗಳೇನು? ಅದರ ಅಗತ್ಯ ಮತ್ತು ಮಹತ್ವಗಳೇನು? ಲೇಖಕರು ಅರಿಯಬೇಕಿದೆ. ವಿಮರ್ಶೆಯ ಅಗತ್ಯವಿದ್ದರೆ ಎಲ್ಲರು ಅದನ್ನು ಅಭ್ಯಾಸ ಮಾಡಲಿ; ಅಗತ್ಯವಿಲ್ಲ ಎನ್ನಿಸಿದರೆ ಅದರ ಬಗ್ಗೆ ಚರ್ಚಿಸದೆ ಸುಮ್ಮನಿರುವುದು ಸೂಕ್ತ. 1980ರ ಸುಮಾರಿನಲ್ಲಿ ‘ವಿಮರ್ಶೆಯ ಬಿಕ್ಕಟ್ಟುಗಳು’ ಎಂಬ ಪ್ರಬಂಧವನ್ನು ಜಿ.ಎಸ್. ಆಮೂರ ಅವರೇ ಬರೆದಿದ್ದರು. ಅಂದರೆ ಈ ಹಿಂದೆಯೂ ವಿಮರ್ಶೆ ಬಿಕ್ಕಟ್ಟುಗಳನ್ನು ಎದುರಿಸುತ್ತಿತ್ತು. ಹಾಗಂತ ಇಂದು ವಿಮರ್ಶೆ ಗೈರು ಹಾಜರಿಯಾಗಿದೆ; ಬತ್ತಿಹೋಗಿದೆ; ಸತ್ತು ಹೋಗಿದೆ; ಅದರ ಅಗತ್ಯವಿಲ್ಲ; ವಿಮರ್ಶೆಯೇ ಇಲ್ಲ ಎಂಬುದೆಲ್ಲ ಹಾಗೆ ಹೇಳಿದವರ ಅರಿವಿನ ಕೊರತೆ ಇಲ್ಲವೇ ಇತ್ತೀಚಿನ ವಿಮರ್ಶೆಯ ಬಗೆಗೆ ತಾಳಿರುವ ಜಾಣ ಮೌನವಶ್ಟೇ.

ಇದನ್ನೂ ನೋಡಿ: ದಣಿವರಿಯದೆ ದುಡಿಯುವ ಮಹಿಳೆಗೆ ಕನಿಷ್ಠ ಕೂಲಿ ಯಾಕಿಲ್ಲ? Janashakthi Media

Donate Janashakthi Media

Leave a Reply

Your email address will not be published. Required fields are marked *