ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ಅಮೆರಿಕಾ ಮತ್ತು ಚೀನಾ ನಡುವಿನ ಪೈಪೋಟಿ ಮತ್ತು ತಿಕ್ಕಾಟ ಸಾಮ್ರಾಜ್ಯಶಾಹಿ ಮತ್ತು ಸಮಾಜವಾದದ ನಡುವಿನ ವೈರುಧ್ಯದ ಅಭಿವ್ಯಕ್ತಿಯೇ ಅಥವಾ ಪಾಶ್ಚಿಮಾತ್ಯ ಎಡಪಂಥೀಯರು ವಿಶ್ಕೇಷಿಸುವಂತೆ ಸಾಮ್ರಾಜ್ಯಶಾಹಿಗಳ ನಡುವಿನ ಪೈಪೋಟಿಯೇ? ಅಲ್ಲದಿದ್ದರೆ, ಇತ್ತೀಚಿನ ಅವಧಿಯಲ್ಲಿ ಚೀನಾದ ಎದ್ದುಕಾಣುವ ಪ್ರಗತಿಯನ್ನು ಹೇಗೆ ವಿವರಿಸಬಹುದು? ಚೀನಾವೂ ಮುಂದುವರೆದ ಪಾಶ್ಚ್ಯಾತ್ಯ ದೇಶಗಳಂತೆ ಸಾಮ್ರಾಜ್ಯಶಾಹಿ ಚಟುವಟಿಕೆಗಳಲ್ಲಿ ತೊಡಗಿದೆ, ಅಂದರೆ, ಅದೂ ಈಗ ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಯೇ ಎಂದು ಈ ಪಾಶ್ಚಿಮಾತ್ಯ ಎಡಪಂಥೀಯರು ಟೀಕಿಸುತ್ತಿರುವುದು ಹಾಸ್ಯಾಸ್ಪದವಾಗುತ್ತದೆ. ಇದು ವಿಶ್ಲೇಷಣಾತ್ಮಕವಾಗಿ ತಪ್ಪು ಮಾತ್ರವಲ್ಲ, ಪಾಶ್ಚ್ಯಾತ್ಯ ದೇಶಗಳ ಕಾರ್ಮಿಕ ವರ್ಗಗಳು ಮತ್ತು ಭಾರತಂತಹ ಜಾಗತಿಕ ದಕ್ಷಿಣದ ದುಡಿಯುವ ಜನರ ಹಿತಾಸಕ್ತಿಗಳಿಗೆ ವಿರುದ್ಧವಾದ ನಿಲುವುಗಳಿಗೂ ಕಾರಣವಾಗುತ್ತಿದೆ. ವಾಸ್ತವವಾಗಿ, ಇದು ಅಂತರ್-ಸಾಮ್ರಾಜ್ಯಶಾಹಿ ಪೈಪೋಟಿ ಅಲ್ಲ, ಬದಲಾಗಿ, ನವ-ಉದಾರೀಕರಣದ ಕಾಲದಲ್ಲಿ ಮೂರನೇ ಜಗತ್ತಿನ ದೇಶಗಳ ಸಂಪನ್ಮೂಲಗಳ ಮೇಲೆ ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಯು ಮತ್ತೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸುವುದಕ್ಕೆ ಚೀನಾದ ಮತ್ತು ಇತರ ದೇಶಗಳ ಪ್ರತಿರೋಧವನ್ನು ವ್ಯಕ್ತಮಾಡುತ್ತದೆ.
ಅಮೆರಿಕಾ ಮತ್ತು ಚೀನಾದ ನಡುವೆ ಬೆಳೆಯುತ್ತಿರುವ ವೈರುಧ್ಯವನ್ನು ಪಾಶ್ಚಾತ್ಯ ಕಮ್ಯುನಿಸ್ಟೇತರ ಎಡಪಂಥೀಯರಲ್ಲಿ ಅನೇಕರು ಒಂದು ಸಾಮ್ರಾಜ್ಯಶಾಹಿಗಳ ನಡುವೆಯೇ ಇರುವ ಪೈಪೋಟಿಯ ದೃಷ್ಟಿಕೋನದಿಂದ ನೋಡುತ್ತಾರೆ. ಅವರ ದೃಷ್ಟಿಯಲ್ಲಿ ಇದು ಮೂರು ವಿಭಿನ್ನ ಸೈದ್ಧಾಂತಿಕ ಕಾರ್ಯಗಳನ್ನು ನಿರ್ವಹಿಸುತ್ತದೆ: ಮೊದಲನೆಯದು, ಇದು ಅಮೆರಿಕಾ ಮತ್ತು ಚೀನಾದ ನಡುವೆ ಬೆಳೆಯುತ್ತಿರುವ ವೈರುಧ್ಯದ ಬಗ್ಗೆ ಒಂದು ವಿವರಣೆಯಾಗುತ್ತದೆ. ಎರಡನೆಯದು, ಇದಕ್ಕೆ ಸಾಮ್ರಾಜ್ಯಶಾಹಿಯ ಬಗ್ಗೆ ಲೆನಿನ್‌ರವರು ಪ್ರತಿಪಾದಿಸಿದ ಪರಿಕಲ್ಪನೆಯನ್ನು ತಾವು ಲೆನಿನ್‌ವಾದೀ ಚೌಕಟ್ಟಿನ ಪರಿಧಿಯೊಳಗೇ ಬಳಸುತ್ತಿದ್ದೇವೆ ಎಂಬ
ಭಾವನೆ, ಮತ್ತು ಮೂರನೆಯದು, ಚೀನಾವನ್ನು ಉದಯೋನ್ಮುಖ ಸಾಮ್ರಾಜ್ಯಶಾಹಿ ಶಕ್ತಿ ಅಂದರೆ, ಚೀನಾ ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಯೇ ಎಂದು ಟೀಕಿಸುವುದು. ಚೀನಾದ ಬಗ್ಗೆ ಅವರ ಈ ವ್ಯಾಖ್ಯಾನವು ಅತಿ-ಎಡಪಂಥದ ವಿಮರ್ಶೆಗೆ ಅನುಗುಣವಾಗಿದೆ.
ಈ ವಿವರಣೆಯಲ್ಲಿರುವ ಒಂದು ವಿಪರ್ಯಾಸವೆಂದರೆ, ಚೀನಾದ ವಿರುದ್ಧ ಅಮೆರಿಕನ್ ಸಾಮ್ರಾಜ್ಯಶಾಹಿಯ ಒಳಸಂಚುಗಳಲ್ಲಿ ಈ ಎಡಪಂಥೀಯರು ಸೂಚ್ಯವಾಗಿ ಅಥವಾ ನೇರವಾಗಿಯೇ ಭಾಗಿಯಾಗುವಂತೆ ಮಾಡುತ್ತದೆ ಎಂಬುದು. ಹೆಚ್ಚೆಂದರೆ, ಈ ವಿವರಣೆಯು ಈ ಎರಡೂ ದೇಶಗಳೂ ಸಾಮ್ರಾಜ್ಯಶಾಹಿ ದೇಶಗಳೇ ಎಂಬ ನಿಲುವಿನತ್ತ ಕೊಂಡೊಯ್ಯುತ್ತದೆ. ಹಾಗಾಗಿ, ಇವುಗಳಲ್ಲಿ ಒಂದನ್ನು ಇನ್ನೊಂದರ ವಿರುದ್ಧ ಬೆಂಬಲಿಸುವುದು ಅರ್ಥವಿಲ್ಲದ್ದು. ಒಂದು ಅತಿ ನಿಕೃಷ್ಟ ಮಟ್ಟದಲ್ಲಿ ಹೇಳುವುದಾದರೆ, ಇದು ಈ ಎರಡು ಸಾಮ್ರಾಜ್ಯಶಾಹಿ ಶಕ್ತಿಗಳ ನಡುವಿನ ಸಂಘರ್ಷದಲ್ಲಿ, “ಕಡಿಮೆ ದುಷ್ಟ”ಎಂದು ಅಮೆರಿಕಾವನ್ನು ಚೀನಾದ ವಿರುದ್ಧ ಬೆಂಬಲಿಸುವ ನಿಲುವಾಗುತ್ತದೆ. ಈ ಎರಡೂ ಸಂದರ್ಭಗಳಲ್ಲೂ, ಇದು ಚೀನಾದ ವಿರುದ್ಧ ಅಮೆರಿಕನ್ ಸಾಮ್ರಾಜ್ಯಶಾಹಿಯ ಆಕ್ರಮಣಕಾರಿ ನಿಲುವುಗಳಿಗೆ ವಿರೋಧದ ನಿಲುವನ್ನು ಅಳಿಸಿ ಬಿಡುತ್ತದೆ ತಪ್ಪಿಸುತ್ತದೆ. ಮತ್ತು, ಇದರಿಂದಾಗಿ, ಈ ಎರಡು ದೇಶಗಳು ಹೆಚ್ಚಿನ ಸಮಕಾಲೀನ ವಿಷಯಗಳಲ್ಲಿ ಹಣಾಹಣಿ ನಡೆಸುತ್ತಿರುವುದರಿಂದ, ಒಟ್ಟಾರೆಯಾಗಿ, ಅಮೆರಿಕನ್ ಸಾಮ್ರಾಜ್ಯಶಾಹಿಗೆ ವಿರೋಧವನ್ನು ತಗ್ಗಿಸಲು ಇದು ಕಾರಣವಾಗುತ್ತದೆ.
ಇತ್ತೀಚೆಗೆ ಬಹಳ ದಿನಗಳಿಂದಲೂ, ಅನೇಕ ಮಂದಿ ಪಾಶ್ಚ್ಯಾತ್ಯ ಎಡಪಂಥೀಯರು, ತಾವು ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಯನ್ನು ವಿರೋಧಿಸುವುದಾಗಿ ಹೇಳಿಕೊಳ್ಳುವವರೂ ಸಹ, ನಿರ್ದಿಷ್ಟ ಸಂದರ್ಭಗಳಲ್ಲಿ ಈ ಸಾಮ್ರಾಜ್ಯಶಾಹಿಯ ಕ್ರಮಗಳನ್ನು ಬೆಂಬಲಿಸುವ ನಿಲುವನ್ನೆ ತಳೆಯುವುದು ಕಂಡುಬಂದಿದೆ. ಸೆರ್ಬಿಯಾ ದೇಶವನ್ನು ಸ್ಲೊಬೊಡಾನ್ ಮಿಲೋಸೆವಿಚ್ ಆಳುತ್ತಿದ್ದಾಗ ಆ ದೇಶದ ಮೇಲೆ ನಡೆಸಿದ ಬಾಂಬ್ ದಾಳಿಯನ್ನು ಅವರು ಖಂಡಿಸಲಿಲ್ಲ. ಇನ್ನೂ ಮುಂದುವರೆಯುತ್ತಿರುವ ಉಕ್ರೇನ್ ಯುದ್ಧದಲ್ಲಿ ನ್ಯಾಟೋವನ್ನು ಬೆಂಬಲಿಸುವ ಅವರ ನಿಲುವಿನಲ್ಲೂ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಯ ಸಕ್ರಿಯ ಬೆಂಬಲದೊಂದಿಗೆ ಗಾಝಾದಲ್ಲಿನ ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲ್ ನಡೆಸುತ್ತಿರುವ ನರಮೇಧವನ್ನು ಬಲವಾಗಿ
ವಿರೋಧಿಸದೆ ಇರುವ ಅವರ ನಿಲುವಿನಲ್ಲೂ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಚೀನಾದ ಮೇಲೆ ಸಾಮ್ರಾಜ್ಯಶಾಹಿಗಳು ಹೊಂದಿರುವ ಆಕ್ರಮಣಕಾರಿ ನಿಲುವಿನ ಬಗ್ಗೆಯೂ ಸಹ ಅವರು, ಒಂದೋ ಮೌನ ವಹಿಸುತ್ತಾರೆ ಅಥವಾ ಅಮೆರಿಕಾವನ್ನು ಬೆಂಬಲಿಸುತ್ತಿರುವುದು ಇಂತಹುದೇ ನಿಲುವು ಎಂದು ಹೇಳಲಾಗದಿದ್ದರೂ, ಖಂಡಿತವಾಗಿಯೂ ಅವುಗಳಿಗೆ ಅನುಗುಣವಾಗಿಯೇ ಇದೆ.
ತಪ್ಪು ವಿಶ್ಲೇಷಣೆಯಷ್ಟೇ ಅಲ್ಲ…ಕಾರ್ಮಿಕ-ವಿರೋಧಿ ನಿರೂಪಣೆ ಕೂಡ
ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಯನ್ನು ನೇರವಾಗಿ ವಿರೋಧಿಸದಿರುವ ಇಂತಹ ನಿಲುವಿನ ಒಂದು ವಿಪರ್ಯಾಸವೆಂದರೆ, ಅದು ಮುಂದುವರೆದ ಬಂಡವಾಳಶಾಹೀ (ಮೆಟ್ರೊಪಾಲಿಟನ್) ದೇಶಗಳ ಕಾರ್ಮಿಕ ವರ್ಗದ ಹಿತಾಸಕ್ತಿಗಳಿಗೆ ಮತ್ತು ಭಾವನೆಗಳಿಗೆ ವ್ಯತಿರಿಕ್ತವಾಗಿದೆ. ಉದಾಹರಣೆಗೆ, ಯುರೋಪಿನ ಕಾರ್ಮಿಕ ವರ್ಗವು ಉಕ್ರೇನ್‌ನಲ್ಲಿ ನ್ಯಾಟೋದ ಪರೋಕ್ಷ ಯುದ್ಧವನ್ನು ಬಲವಾಗಿ ವಿರೋಧಿಸುತ್ತದೆ. ಉಕ್ರೇನ್‌ಗೆ ಯುರೋಪಿನ ಶಸ್ತ್ರಾಸ್ತ್ರಗಳ ಸಾಗಣೆಯಲ್ಲಿ ಅವನ್ನು ಲೋಡ್ ಮಾಡಲು ಕಾರ್ಮಿಕರು ನಿರಾಕರಿಸಿದ ಅನೇಕ ನಿದರ್ಶನಗಳಲ್ಲಿ ಅವರ ಯುದ್ಧ ವಿರೋಧಿ ನಿಲುವು ನಿಚ್ಚಳವಾಗಿ ಕಾಣುತ್ತದೆ. ಇದು ಆಶ್ಚರ್ಯದ ಸಂಗತಿಯೇನಲ್ಲ. ಏಕೆಂದರೆ, ಯುದ್ಧವು ಹಣದುಬ್ಬರವನ್ನು ಉಲ್ಬಣಗೊಳಿಸುವ ಮೂಲಕ ಕಾರ್ಮಿಕರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಆದರೆ, ಎಡಪಂಥೀಯರು ಈ ಯುದ್ಧವನ್ನು ನೇರವಾಗಿ ವಿರೋಧಿಸದಿರುವ ಸನ್ನಿವೇಶದಲ್ಲಿ, ಅನೇಕ ಕಾರ್ಮಿಕರು ಬಲಪಂಥೀಯ ಪಕ್ಷಗಳತ್ತ ತಿರುಗುವಂತಾಗಿದೆ. ಬಲಪಂಥೀಯರು ಅಧಿಕಾರಕ್ಕೆ ಬಂದ ನಂತರ, ಅವರ ನಿಲುವುಗಳು ಸಾಮ್ರಾಜ್ಯಶಾಹಿ ನಿಲುವುಗಳಿಗೆ ಅನುಗುಣವಾಗಿದ್ದರೂ, ವಿರೋಧ ಪಕ್ಷದಲ್ಲಿದ್ದ ಸಂದರ್ಭದಲ್ಲಿ ಕೊನೆಯ ಪಕ್ಷ ಅವರು ಸಾಮ್ರಾಜ್ಯಶಾಹಿ ನಿಲುವುಗಳನ್ನು ಟೀಕಿಸುತ್ತಾರೆ. ಇಟಲಿಯಲ್ಲಿ ಮೆಲೋನಿ ಅಧಿಕಾರ ಹಿಡಿದ ನಂತರ ಮಾಡಿದ್ದು ಇದನ್ನೇ. ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಯ ವಿರುದ್ಧ ಪಾಶ್ಚ್ಯಾತ್ಯ ಎಡಪಂಥೀಯರು ಸುಮ್ಮನಿರುವುದು ಈ ಮೆಟ್ರೊಪಾಲಿಟನ್ ದೇಶಗಳ ರಾಜಕೀಯವು ಬಲಪಂಥದತ್ತ ಹೊರಳಲು ಕಾರಣವಾಗುತ್ತಿದೆ. ಅಮೆರಿಕಾ-ಚೀನಾ ದೇಶಗಳ ನಡುವಿನ ವೈರುಧ್ಯವನ್ನು ಒಂದು ಅಂತರ್-ಸಾಮ್ರಾಜ್ಯಶಾಹಿ ಪೈಪೋಟಿಯಾಗಿ ನೋಡುವ ಕ್ರಮವೂ ಸಹ ಈ ನಿರೂಪಣೆಯ ಭಾಗವೇ.
ಇದನ್ನೂ ಓದಿ: ಸಾಕ್ಷ್ಯಾಧಾರಗಳು, ಅಂಕಿ-ಅಂಶಗಳೆಂದರೆ ಇವರಿಗೇಕೆ ಇಷ್ಟೊಂದು ಹಗೆತನ !
ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಯಾಗಿರುವ ಚೀನಾ, ಅಮೆರಿಕದೊಂದಿಗಿನ ಪೈಪೋಟಿಯಲ್ಲಿ ಪ್ರಪಂಚದಾದ್ಯಂತ ಸಾಮ್ರಾಜ್ಯಶಾಹಿ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಭಾವಿಸುವುದರ ಬಗ್ಗೆ ಹೇಳುವುದಾದರೆ, ಈ ದೃಷ್ಟಿಕೋನವನ್ನು ಹೊಂದಿರುವವರು, ಹೆಚ್ಚೆಂದರೆ,, ಅಂದರೆ “ಬಂಡವಾಳಶಾಹಿ” ಎಂದರೆ “ಕೆಟ್ಟದ್ದು”, “ಸಮಾಜವಾದ” ಎಂದರೆ “ಒಳ್ಳೆಯದು” ಎಂಬಂತಹ ಒಂದು ಉಪದೇಶಕಾರೀ ನಿಲುವನ್ನು ತೆಗೆದುಕೊಳ್ಳುತ್ತಾರೆ. ಅವರ ನಿಲುವನ್ನು ಹೀಗೆ ವಿವರಿಸಬಹುದು: “ಒಂದು ಸಮಾಜವಾದಿ ಸಮಾಜವು ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ನನಗೆ ನನ್ನದೇ ಆದ ಒಂದು ಕಲ್ಪನೆ ಇದೆ (ಅಂದರೆ, ಅದನ್ನು
ಆದರ್ಶೀಕರಿಸುವ ಕಲ್ಪನೆ). ಒಂದು ವೇಳೆ ಚೀನಾದ ನಡವಳಿಕೆಯು ಕೆಲವು ವಿಷಯಗಳಲ್ಲಿ ನಾನು ಹೊಂದಿರುವ ಕಲ್ಪನೆಗಿಂತ ಭಿನ್ನವಾಗಿದ್ದರೆ, ಚೀನಾ ಸಮಾಜವಾದಿಯಾಗಿರುವುದು ಸಾಧ್ಯವಿಲ್ಲ. ಆದ್ದರಿಂದ, ಅದು ಬಂಡವಾಳಶಾಹಿಯೇ.”
‘ಬಂಡವಾಳಶಾಹಿ’ ಮತ್ತು ‘ಸಮಾಜವಾದಿ’ ಪದಗಳು ಒಂದು ನಿರ್ದಿಷ್ಟ ಅರ್ಥವನ್ನು ಹೊಂದಿವೆ. ಅವು ಒಂದು ನಿರ್ದಿಷ್ಟ ರೀತಿಯ ಚಲನೆಯೊಂದಿಗೆ ಸಂಬಂಧ ಹೊಂದಿವೆ ಮತ್ತು ಈ ಪ್ರತಿಯೊಂದು ಚಲನೆಯ ಮೂಲವೂ ಕೆಲವು ಮೂಲಭೂತ ಆಸ್ತಿ ಸಂಬಂಧಗಳಲ್ಲಿ ನೆಲೆಸಿದೆ. ನಿಜ, ಚೀನಾವು ಒಂದು ಗಮನಾರ್ಹ ಪ್ರಮಾಣದ ಬಂಡವಾಳಶಾಹಿ ವಲಯವನ್ನು ಹೊಂದಿದೆ. ಅಂದರೆ, ಬಂಡವಾಳಶಾಹಿ ಆಸ್ತಿ ಸಂಬಂಧಗಳಿರುವ ವಲಯ. ಆದರೆ, ಚೀನಾದ ಅರ್ಥವ್ಯವಸ್ಥೆಯ ಬಹುಪಾಲು ಇನ್ನೂ ಸರ್ಕಾರಿ ಸ್ವಾಮ್ಯದಲ್ಲಿದೆ ಮತ್ತು ಕೇಂದ್ರೀಕೃತ ದಿಕ್ಕಿನ ಲಕ್ಷಣವನ್ನೇ ಹೊಂದಿದೆ. ಹಾಗಾಗಿ, ಬಂಡವಾಳಶಾಹಿಯ ಹೆಗ್ಗುರುತು ಎನಿಸಿದ ಸ್ವಯಂಪ್ರೇರಣೆ(ಅಥವ “ಸ್ವಯಂಸ್ಫೂರ್ತತೆ”)ಗೆ ತಡೆಯಿದೆ. ಚೀನಾದ ಅರ್ಥವ್ಯವಸ್ಥೆಯ ಬಗ್ಗೆ ಮತ್ತು ಚೀನೀ ಸಮಾಜದ ಅನೇಕ ಅಂಶಗಳ ಬಗ್ಗೆ ಟೀಕೆ ಟಿಪ್ಪಣಿ ಅಥವಾ ವಿಮರ್ಶೆ ಮಾಡುವುದೇನೊ ಸರಿ. ಆದರೆ, ಅದನ್ನು “ಬಂಡವಾಳಶಾಹಿ” ಎಂದು ಕರೆಯುವುದು ಮತ್ತು ಅದು ಪಾಶ್ಚ್ಯಾತ್ಯ ಮೆಟ್ರೊಪಾಲಿಟನ್ (ಅಂದರೆ ಮುಂದುವರೆದ ಬಂಡವಾಳಶಾಹಿ) ದೇಶಗಳ ಅರ್ಥವ್ಯವಸ್ಥೆಗಳ ರೀತಿಯಲ್ಲಿ ಸಾಮ್ರಾಜ್ಯಶಾಹಿ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಹೇಳುವುದು ಹಾಸ್ಯಾಸ್ಪದವಾಗುತ್ತದೆ. ಇದು ವಿಶ್ಲೇಷಣಾತ್ಮಕವಾಗಿ ತಪ್ಪು ಮಾತ್ರವಲ್ಲ, ಮೆಟ್ರೊಪಾಲಿಟನ್ ದೇಶಗಳ ಕಾರ್ಮಿಕ ವರ್ಗಗಳು ಮತ್ತು ಜಾಗತಿಕ ದಕ್ಷಿಣದ ದುಡಿಯುವ ಜನರ ಹಿತಾಸಕ್ತಿಗಳಿಗೆ ವಿರುದ್ಧವಾದ ನಡವಳಿಕೆಗಳಿಗೂ ಕಾರಣವಾಗುತ್ತದೆ.
ಚೀನಾದ ಎದ್ದು ಕಾಣುವ ಪ್ರಗತಿ-ಹೇಗೆ ವಿವರಿಸಬಹುದು?
ಆದರೆ ತಕ್ಷಣವೇ ಉದ್ಭವಿಸುವ ಒಂದು ಪ್ರಶ್ನೆಯೆಂದರೆ: ಅಮೆರಿಕಾ-ಚೀನಾ ನಡುವಿನ ವೈರುಧ್ಯವು ಒಂದು ಅಂತರ್- ಸಾಮ್ರಾಜ್ಯಶಾಹಿ ಪೈಪೋಟಿಯ ಅಭಿವ್ಯಕ್ತಿಯಲ್ಲದಿದ್ದರೆ, ಇತ್ತೀಚಿನ ಅವಧಿಯಲ್ಲಿ ಚೀನಾದ ಎದ್ದುಕಾಣುವ ಪ್ರಗತಿಯನ್ನು ನಾವು ಹೇಗೆ ವಿವರಿಸಬಹುದು? ಇದನ್ನು ಅರ್ಥಮಾಡಿಕೊಳ್ಳಲು ನಾವು ಎರಡನೇ ಮಹಾಯುದ್ಧದ ನಂತರದ ಅವಧಿಗೆ ಹಿಂತಿರುಗಬೇಕಾಗುತ್ತದೆ. ಯುದ್ಧದಿಂದ ಹೈರಾಣಾಗಿದ್ದ ಬಂಡವಾಳಶಾಹಿಯು ತನ್ನ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸಿತು:
ಮೆಟೊಪಾಲಿಟನ್ ದೇಶಗಳ ಕಾರ್ಮಿಕ ವರ್ಗವು ಸಾಮೂಹಿಕ ನಿರುದ್ಯೋಗ ಮತ್ತು ಬಡತನವನ್ನು ಉಂಟುಮಾಡಿದ್ದ ಯುದ್ಧಪೂರ್ವ ಬಂಡವಾಳಶಾಹಿ ರೀತಿ-ನೀತಿಗಳಿಗೆ ಹಿಂತಿರುಗಲು ಸಿದ್ಧವಿರಲಿಲ್ಲ. ಸಮಾಜವಾದವು ಪ್ರಪಂಚದಾದ್ಯಂತ ಮಹತ್ತರವಾದ ಪ್ರಗತಿಯನ್ನು ಸಾಧಿಸಿತ್ತು. ವಸಾಹತುಶಾಹಿ ಮತ್ತು ಅರೆ-ವಸಾಹತುಶಾಹಿ ದಬ್ಬಾಳಿಕೆಯ ವಿರುದ್ಧ ಜಾಗತಿಕ ದಕ್ಷಿಣದಲ್ಲಿ ವಿಮೋಚನಾ ಹೋರಾಟಗಳು ಉತ್ತುಂಗವನ್ನು ತಲುಪಿದ್ದವು. ಹಾಗಾಗಿ, ಬಂಡವಾಳಶಾಹಿಯು ತನ್ನ ಉಳಿವಿಗಾಗಿ ಹಲವಾರು ರೀತಿಯ ರಿಯಾಯಿತಿಗಳನ್ನು ಕೊಡಬೇಕಾಯಿತು: ಸಾರ್ವತ್ರಿಕ ವಯಸ್ಕ ಮತದಾನ, ಜನ ಕಲ್ಯಾಣ ಕ್ರಮಗಳು, ಅರ್ಥವ್ಯವಸ್ಥೆಯಲ್ಲಿ ಬೇಡಿಕೆ ನಿರ್ವಹಣೆಯಲ್ಲಿ ಸರ್ಕಾರದ ಹಸ್ತಕ್ಷೇಪ ಮತ್ತು ಎಲ್ಲಕ್ಕಿಂತ ಮಿಗಿಲಾಗಿ, ರಾಜಕೀಯ ಅವಸಾಹತೀಕರಣವನ್ನು ಔಪಚಾರಿಕವಾಗಿ ಒಪ್ಪಿಕೊಳ್ಳುವುದು.
ರಾಜಕೀಯ ಅವಸಾಹತೀಕರಣ ಎಂದರೆ ವಸಾಹತುಶಾಹೀ ಆಳ್ವಿಕೆಗೆ ಒಳಪಟ್ಟಿರುವ ದೇಶಗಳು ಆರ್ಥಿಕ ವಸಾಹತೀಕರಣದಿಂದ ಬಿಡುಗಡೆ ಹೊಂದುವುದು ಎಂದರ್ಥವಲ್ಲ. ಅಂದರೆ, ಅಲ್ಲಿಯವರೆಗೂ ಮೆಟ್ರೋಪಾಲಿಟನ್ ಬಂಡವಾಳವು ಹೊಸದಾಗಿ ಸ್ವತಂತ್ರವಾದ ಪಡೆದ ದೇಶಗಳಲ್ಲಿ ಮೂರನೇ ಜಗತ್ತಿನ ಸಂಪನ್ಮೂಲಗಳ ಮೇಲೆ ಚಲಾಯಿಸುತ್ತಿದ್ದ ನಿಯಂತ್ರಣವನ್ನು ವರ್ಗಾಯಿಸುವುದು ಎಂದಲ್ಲ. ವಾಸ್ತವವಾಗಿ ಅಂತಹ ವರ್ಗಾವಣೆಗಳ ವಿರುದ್ಧ ಸಾಮ್ರಾಜ್ಯಶಾಹಿಯು ಒಂದು ದೀರ್ಘಕಾಲದ ಹೋರಾಟವನ್ನೇ ನಡೆಸಿದೆ. ಗ್ವಾಟೆಮಾಲಾದ ಜಾಕೊಬ್ ಅರ್ಬೆಜ್, ಇರಾನಿನ ಮೊಹಮದ್ ಮೊಸದೆಘ್, ಚಿಲಿ ದೇಶದ ಸಾಲ್ವಡೋರ್ ಅಲೆಂಡೆ, ಗಯಾನಾದ ಚೆಡ್ಡಿ ಜಗನ್, ಕೀನ್ಯಾದ ಲುಮುಂಬಾ ಮುಂತಾದವರನ್ನು ಕೊಲೆಗೈದು ಅವರನ್ನು ಪದಚ್ಯತಗೊಳಿಸಿದೆ. ಆದಾಗ್ಯೂ, ವಸಾಹತುಶಾಹೀ ಆಳ್ವಿಕೆಯಿಂದ ಈ ದೇಶಗಳ ವಿಮೋಚನೆಯ ನಂತರ, ಮೂರನೇ ಜಗತ್ತಿನ ಸಂಪನ್ಮೂಲಗಳು ಸಾಮ್ರಾಜ್ಯಶಾಹಿ ನಿಯಂತ್ರಣದಿಂದ ಹೊರಹೋಗಿ ಈ ದೇಶಗಳು ಪ್ರಭುತ್ವ- ನಿಯಂತ್ರಣ ನೀತಿಗಳ ವ್ಯವಸ್ಥೆಗೆ ಒಳಪಡುವುದನ್ನು ತಡೆಯುವುದು ಮೆಟ್ರೋಪಾಲಿಟನ್ ಬಂಡವಾಳಶಾಹಿಗೆ ಸಾಧ್ಯವಾಗಲಿಲ್ಲ.
ಬಂಡವಾಳವು ಜಾಗತೀಕರಣಗೊಳ್ಳಲು ಕಾರಣವಾದ ಬಂಡವಾಳದ ಕೇಂದ್ರೀಕರಣವು ಒಂದು ಉನ್ನತ ಹಂತವನ್ನು ತಲುಪಿದ ನಂತರ, ಎಲ್ಲಕ್ಕಿಂತ ಮಿಗಿಲಾಗಿ ಜಾಗತೀಕರಣಗೊಂಡ ಹಣಕಾಸು ಬಂಡವಾಳದ ಉದಯವೂ ಸೇರಿದಂತೆ ಮತ್ತು ಹಣಕಾಸು ಬಂಡವಾಳದ ಜಾಗತೀಕರಣದೊಂದಿಗೆ ಸಂಬಂಧ ಹೊಂದಿದ ಸೋವಿಯತ್ ಒಕ್ಕೂಟದ ಕುಸಿತದೊಂದಿಗೆ ಸಾಮ್ರಾಜ್ಯಶಾಹಿಯ ಅದೃಷ್ಟ ಖುಲಾಯಿಸಿತು. ಸಾಮ್ರಾಜ್ಯಶಾಹಿಯು ದೇಶ ದೇಶಗಳನ್ನು ಜಾಗತೀಕರಣದ ಜಾಲದಲ್ಲಿ ಸಿಲುಕಿಸಿತು ಮತ್ತು ಅದರಿಂದಾಗಿ ಅವುಗಳನ್ನು ಜಾಗತಿಕ ಹಣಕಾಸು ಹರಿವಿನ ಮರ್ಜಿಗೆ ಒಳಪಡಿಸಿತು. ನವ-ಉದಾರವಾದಿ ನೀತಿಗಳನ್ನು
ಅನುಸರಿಸುವಂತೆ ಒತ್ತಾಯಿಸಲು ಅವುಗಳಿಗೆ ಹಣಕಾಸು ಬಂಡವಾಳವು ಹೊರಹರಿಯುವ ಬೆದರಿಕೆಯನ್ನು ಒಡ್ಡಿತು. ಇದರ ಅರ್ಥವೆಂದರೆ, ನಿಯಂತ್ರಣ ನೀತಿಗಳ ಆಳ್ವಿಕೆಯ ಅಂತ್ಯವೇ. ಮತ್ತು, ಮೂರನೇ ಜಗತ್ತಿನ ಭೂ-ಬಳಕೆಯೂ ಸೇರಿದಂತೆ ಮೂರನೇ ಜಗತ್ತಿನ ಸಂಪನ್ಮೂಲಗಳ ಮೇಲೆ ನಿಯಂತ್ರಣವನ್ನು ಮೆಟ್ರೋಪಾಲಿಟನ್ ಬಂಡವಾಳವು ಮತ್ತೊಮ್ಮೆ ಸ್ವಾಧೀನಪಡಿಸಿಕೊಂಡಿತು.
ಬಂಡವಾಳಶಾಹಿಯ ವೈರುಧ್ಯಗಳಲ್ಲೇ ಅಡಗಿದೆ
ಸಾಮ್ರಾಜ್ಯಶಾಹಿಯು ತನ್ನ ಪ್ರಾಬಲವನ್ನು ಮತ್ತೆ ಸ್ಥಾಪಿಸಿದ ಹಿನ್ನೆಲೆಯಲ್ಲಿಯೇ ಅಮೆರಿಕಾ-ಚೀನಾ ನಡುವಿನ ವೈರುಧ್ಯವನ್ನು ಮತ್ತು ಉಕ್ರೇನ್ ಯುದ್ಧದಂತಹ ಅನೇಕ ಸಮಕಾಲೀನ ಬೆಳವಣಿಗೆಗಳನ್ನೂ ಅರ್ಥಮಾಡಿಕೊಳ್ಳಬಹುದು. ಸಾಮ್ರಾಜ್ಯಶಾಹಿಯ ಪ್ರಾಬಲ್ಯದ ಈ ಮರು-ಸ್ಥಾಪನೆೆಯಲ್ಲಿರುವ ಎರಡು ವೈಶಿಷ್ಟ್ಯಗಳನ್ನು ಗಮನಿಸಬೇಕಾಗಿದೆ: ಮೊದಲನೆಯದು, ಚೀನಾದಂತಹ ದೇಶಗಳ ಸರಕುಗಳಿಗೆ ಮೆಟ್ರೋಪಾಲಿಟನ್ ಮಾರುಕಟ್ಟೆ ಪ್ರವೇಶದ ಅವಕಾಶ. ಜಾಗತಿಕ ಬೇಡಿಕೆಯನ್ನು ಪೂರೈಸಲು ಮತ್ತು ಅಂತಹ ದೇಶಗಳಲ್ಲಿ ಕಡಿಮೆ ವೇತನದ ಲಾಭವನ್ನು ಪಡೆಯಲು ತನ್ನ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಮೆಟ್ರೋಪಾಲಿಟನ್ ಬಂಡವಾಳದ ಬಯಕೆಯೊಂದಿಗೆ, ಜಾಗತಿಕ ದಕ್ಷಿಣದ ಈ ಅರ್ಥವ್ಯವಸ್ಥೆಗಳಲ್ಲಿ (ಮತ್ತು ಈ ಅರ್ಥವ್ಯವಸ್ಥೆಗಳಲ್ಲಿ ಮಾತ್ರ) ಬೆಳವಣಿಗೆಯ ದರ ವೇಗ ಪಡೆದುಕೊಂಡಿತು. ಪ್ರಮುಖ ಮೆಟ್ರೋಪಾಲಿಟನ್ ಶಕ್ತಿಯಾದ ಅಮೆರಿಕವು ಚೀನಾವನ್ನು ಒಂದು ಬೆದರಿಕೆ ಎಂದು ಪರಿಗಣಿಸುವ ಪೂರ್ವದಲ್ಲಿ, ಚೀನಾದಲ್ಲಿ ಮಾಡಿದ್ದು ಇದನ್ನೇ. ಎರಡನೆಯ ಲಕ್ಷಣವೆಂದರೆ, ಅಮೆರಿಕದ ವಸತಿ “ಗುಳ್ಳೆ” ಕುಸಿತದ ನಂತರ ಉಗ್ರ ರೀತಿಯಲ್ಲಿ ಹೊರಹೊಮ್ಮಿದ ನವ-ಉದಾರವಾದಿ
ಬಂಡವಾಳಶಾಹಿ ಬಿಕ್ಕಟ್ಟು.
ಇದನ್ನೂ ಓದಿ: ದುರಂತ ಇತಿಹಾಸವೂ ಭೀಕರ ವರ್ತಮಾನವೂ
ಈ ಎರಡೂ ಕಾರಣಗಳಿಗಾಗಿ ಅಮೆರಿಕ, ಈಗ ಚೀನಾದ ಮತ್ತು ಜಾಗತಿಕ ದಕ್ಷಿಣದ ಕೆಲವು ದೇಶಗಳ ಆಮದುಗಳಿಂದ ತನ್ನ ಅರ್ಥವ್ಯವಸ್ಥೆಯನ್ನು ರಕ್ಷಿಸಿಕೊಳ್ಳಲು ಬಯಸುತ್ತದೆ. ಈ ಆಮದುಗಳು ಭಾಗಶಃವಾದರೂ ಅಮೆರಿಕದ ಬಂಡವಾಳದ ಆಶ್ರಯದಲ್ಲಿ ಸಂಭವಿಸುತ್ತಿದ್ದರೂ, ಇದರಿಂದಾಗಿ ತಾನೇ “ಅಪ-ಕೈಗಾರಿಕೀಕರಣ “ದ ಅಪಾಯವನ್ನು ಎದುರಿಸಲಾರದು. ಚೀನಾವನ್ನು ಅದರ “ಆರ್ಥಿಕ ಸುಧಾರಣೆಗಳಿಗಾಗಿ” ಶ್ಲಾಘಿಸಿದ ಬೆನ್ನಲ್ಲೇ ಚೀನಾವನ್ನು ಅದರ “ಗಾತ್ರಕ್ಕೆ ಇಳಿಸಲು” ಅಮೆರಿಕಾ ಬಯಸುತ್ತಿದ್ದರೆ, ಅದಕ್ಕೆ ಕಾರಣ ನವ-ಉದಾರವಾದಿ ಬಂಡವಾಳಶಾಹಿಯ ವೈರುಧ್ಯಗಳಲ್ಲೇ ಅಡಗಿದೆ ಮತ್ತು ಸಾಮ್ರಾಜ್ಯಶಾಹಿ ಪ್ರಾಬಲ್ಯದ
ಮರು-ಸ್ಥಾಪನೆಯ ತರ್ಕದಲಿಯ್ಲೇ ಅಂತರ್ಗತವಾಗಿದೆ. ಇದು ಅಂತರ್-ಸಾಮ್ರಾಜ್ಯಶಾಹಿ ಪೈಪೋಟಿ ಅಲ್ಲ, ಬದಲಾಗಿ, ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಯು ಮತ್ತೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸುವುದಕ್ಕೆ ಚೀನಾದ ಮತ್ತು ಅದರ ಮುನ್ನಡೆಯನ್ನು ಅನುಸರಿಸುತ್ತಿರುವ ಇತರ ದೇಶಗಳ ಪ್ರತಿರೋಧ-ಇದೇ ಅಮೆರಿಕ-ಚೀನಾ ನಡುವೆ ಹೆಚ್ಚುತ್ತಿರುವ ವೈರುಧ್ಯಗಳು ಹೆಚ್ಚುತ್ತಿರುವುದು ಏಕೆ ಎನ್ನುವುದಕ್ಕೆ ವಿವರಣೆ.
ಬಂಡವಾಳಶಾಹಿ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದಂತೆಯೇ, ಮೂರನೇ ಜಗತ್ತಿನ ದೇಶಗಳ ಮೇಲಿನ ಸಾಮ್ರಾಜ್ಯಶಾಹಿ ದಬ್ಬಾಳಿಕೆಯು ಐಎಂಎಫ್‌ನಂತಹ ಸಾಮ್ರಾಜ್ಯಶಾಹಿ ಸಂಸ್ಥೆಗಳು ತಮ್ಮ ಬಾಹ್ಯ ಸಾಲವನ್ನು ತೀರಿಸಲು ಅಸಮರ್ಥರೆಂಬ ಕಾರಣದ ಮೇಲೆ “ಮಿತವ್ಯಯ” ನೀತಿಗಳನ್ನು ಹೇರುವ ಮೂಲಕ ಹೆಚ್ಚುತ್ತದೆ. ಪ್ರತಿಯಾಗಿ, ಮೂರನೇ ಜಗತ್ತಿನ ದೇಶಗಳ ಪ್ರತಿರೋಧವೂ ಹೆಚ್ಚುತ್ತದೆ ಮತ್ತು ಅದಕ್ಕಾಗಿ ಅವು ಚೀನಾದಿಂದ ಹೆಚ್ಚಿನ ಸಹಾಯವನ್ನು ಕೋರುತ್ತವೆ. ಅಮೆರಿಕ-ಚೀನಾ ನಡುವಿನ ವೈರುಧ್ಯಗಳು ತೀವ್ರಗೊಳ್ಳತ್ತವೆ ಮತ್ತು ಪಶ್ಚಿಮದ ದೇಶಗಳಲ್ಲಿ ಚೀನಾ ವಿರುದ್ಧದ ನಿಂದನೆಗಳು, ಬೈಗುಳಗಳು ಮತ್ತು ಚೀರಾಟಗಳು ಮತ್ತಷ್ಟು ಕರ್ಕಶಗೊಳ್ಳುತ್ತವೆ.
ವಿಡಿಯೋ ನೋಡಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನಲ್ಲಿ ಶಾಂತಿ ನೆಲೆಸಲಿ ಎಂದವರನ್ನು ಬಂಧಿಸಿದ ಸರ್ಕಾರ! Janashakthi Media